ನವದೆಹಲಿ/ಮುಂಬೈ: ಅನುತ್ಪಾದಕ ಆಸ್ತಿ ಮತ್ತು ವಸೂಲಾಗದ ಸಾಲದ ಸುಳಿಯಲ್ಲಿ ಸಿಲುಕಿ ಸೂಪರ್​ಸೀಡ್ ಆಗಿರುವ ಯೆಸ್ ಬ್ಯಾಂಕ್​ನ ಪುನಶ್ಚೇತನಕ್ಕೆ ಆರ್​ಬಿಐ ಮುಂದಿಟ್ಟಿರುವ ಯೋಜನೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ಒಪ್ಪಿಕೊಂಡಿದ್ದು, ಯೆಸ್ ಬ್ಯಾಂಕ್​ನ ಶೇ. 49 ಷೇರುಗಳನ್ನು ಖರೀದಿ ಮಾಡುವುದಾಗಿ ಘೋಷಿಸಿದೆ. ಇದಕ್ಕಾಗಿ ಸುಮಾರು 2450 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ. ಈ ಯೋಜನೆ ಬಗ್ಗೆ ಅದು ಆರ್​ಬಿಐಗೆ ಸೋಮವಾರ ಅಧಿಕೃತವಾಗಿ ಪ್ರಸ್ತಾವನೆ ತಿಳಿಸಲಿದೆ. ಈ ನಡುವೆ, ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್​ರನ್ನು ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇ.ಡಿ.) ಶನಿವಾರ ಮುಂಬೈ ಕಚೇರಿಗೆ ಕರೆದೊಯ್ದಿದೆ.
ಪುನಶ್ಚೇತನ ಯೋಜನೆಯಲ್ಲಿ ಬಂಡವಾಳ ತೊಡಗಿಸಲು ಬಹಳಷ್ಟು ಜನರು ಉತ್ಸುಕರಾಗಿದ್ದಾರೆ. ಕರಡು ಯೋಜನೆಯನ್ನು ನೋಡಿ ಅವರು ನಮ್ಮನ್ನು ಸಂರ್ಪಸಿದ್ದಾರೆ ಎಂದು ಎಸ್​ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಶನಿವಾರ ತಿಳಿಸಿದ್ದಾರೆ. ಆದರೆ ಯೆಸ್ ಬ್ಯಾಂಕನ್ನು ಸರ್ಕಾರಿ ಸ್ವಾಮ್ಯದ ಎಸ್​ಬಿಐನಲ್ಲಿ ವಿಲೀನ ಮಾಡುವ ಸಾಧ್ಯತೆಯ ಪ್ರಶ್ನೆಯೇ ಇಲ್ಲ ಎಂದು ಎಸ್​ಬಿಐ ಸ್ಪಷ್ಟಪಡಿಸಿದೆ.
ಬೇರೆಯವರೂ ಹೂಡಿಕೆ ಮಾಡುವ ಸಾಧ್ಯತೆಯಿದೆ. ಕರಡು ಯೋಜನೆಯನ್ನು ಕಾನೂನು ನೆಲೆಯಲ್ಲೂ ಅಧ್ಯಯನ ಮಾಡಬೇಕಾಗಿದೆ. ಹೂಡಿಕೆ ತಂಡ ಅತ್ಯಂತ ಕಡಿಮೆ ಅವಧಿಯಲ್ಲಿ ಅದನ್ನು ಮಾಡಿ ಮುಗಿಸಲಿದೆ. ಅದರ ಅಭಿಪ್ರಾಯವನ್ನು ಎಸ್​ಬಿಐ ಮಂಡಳಿಯ ಮುಂದೆ ಮಂಡಿಸಲಾಗುತ್ತದೆ ಎಂದು ಕುಮಾರ್ ಹೇಳಿದರು. ಠೇವಣಿದಾರರು ಗಾಬರಿಪಡುವ ಅಗತ್ಯವಿಲ್ಲ. ಕೆಲವು ದಿನ ಅನಾನುಕೂಲ ಆಗಬಹುದಷ್ಟೆ ಎಂದು ಕುಮಾರ್ ಸ್ಪಷ್ಟಪಡಿಸಿದರು. ಯೆಸ್ ಬ್ಯಾಂಕ್, ಕಳೆದ ಆರು
ತಿಂಗಳಲ್ಲಿ ಆರ್​ಬಿಐ ನಿಯಂತ್ರಣಕ್ಕೆ ಪಡೆದಿರುವ ಮೂರನೇ ದೊಡ್ಡ ಹಣಕಾಸು ಸಂಸ್ಥೆಯಾಗಿದೆ. ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೆರೇಷನ್ (ಡಿಎಚ್​ಎಫ್​ಎಲ್) ಮತ್ತು ಪಂಜಾಬ್-ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕ್ ಇತರ ಎರಡು ಸಂಸ್ಥೆಗಳು.
ಗುರುವಾರ ಯೆಸ್ ಬ್ಯಾಂಕನ್ನು ಸೂಪರ್​ಸೀಡ್ ಮಾಡಿದ್ದ ಆರ್​ಬಿಐ, ಏಪ್ರಿಲ್ 3ರವರೆಗೆ ಹಣ ವಿತ್​ಡ್ರಾವಲ್ ಮೇಲೆ 50,000 ರೂಪಾಯಿಗಳ ಮಿತಿ ಹೇರಿತ್ತು. ಯೆಸ್ ಬ್ಯಾಂಕನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಆರ್​ಬಿಐ ಶುಕ್ರವಾರ ಯೋಜನೆ ಪ್ರಕಟಿಸಿತ್ತು. ಈ ಯೋಜನೆಯನ್ವಯ ಬ್ಯಾಂಕ್​ಗೆ ಶೇ. 49 ಬಂಡವಾಳ ಒದಗಿಸಲು ಎಸ್​ಬಿಐ ಆಸಕ್ಯ ತೋರಿದೆ.
ಯೆಸ್ ಬ್ಯಾಂಕ್ ದೇಶದ ಐದನೇ ಅತಿ ದೊಡ್ಡ ಖಾಸಗಿ ಬ್ಯಾಂಕ್. 30 ದಿನಗಳ ಮಟ್ಟಿಗೆ ಅದರ ನಿಯಂತ್ರಣವನ್ನು ಆರ್​ಬಿಐ ತನ್ನ ಕೈಗೆ ತೆಗೆದುಕೊಂಡಿದೆ. 30 ದಿನದವರೆಗೆ ಯಾವುದೇ ಹೊಸ ಸಾಲ ನೀಡುವಂತಿಲ್ಲ ಮತ್ತು ಯಾವುದೇ ಪಾವತಿಯನ್ನು ಕೂಡ ಮಾಡುವಂತಿಲ್ಲ.
ಕರಡು ಯೋಜನೆ ಪ್ರಕಾರ, ಹೂಡಿಕೆ ಮಾಡಿದ ದಿನಾಂಕದಿಂದ ಎಸ್​ಬಿಐ ಮೂರು ವರ್ಷಗಳ ವರೆಗೆ ಕನಿಷ್ಠ ಶೇ. 26 ಬಂಡವಾಳವನ್ನು ಯೆಸ್ ಬ್ಯಾಂಕ್​ನಲ್ಲಿ ಹೊಂದಿರಬೇಕು ಹಾಗೂ ಯೆಸ್ ಬ್ಯಾಂಕ್​ನ ಎಲ್ಲ ಹಾಲಿ ಉದ್ಯೋಗಿಗಳನ್ನು ಮುಂದುವರಿಸಬೇಕು.
ಒಂದು ವೇಳೆ ಶೇ. 49 ಬಂಡವಾಳ ಹೂಡುವುದೇ ಆದಲ್ಲಿ ತಕ್ಷಣಕ್ಕೆ 2,450 ಕೋಟಿ ರೂಪಾಯಿ ಬೇಕಾಗುತ್ತದೆ.
ಸಾಲ ನೀಡಿಕೆಯಲ್ಲಿ ಅಕ್ರಮ?
ಡಿಎಚ್​ಎಫ್​ಎಲ್​ಗೆ ಯೆಸ್ ಬ್ಯಾಂಕ್ ಸಾಲ ಮಂಜೂರು ಮಾಡಿತ್ತು. ಅದೇ ಅವಧಿಯಲ್ಲಿ ರಾಣಾ ಕಪೂರ್ ಪತ್ನಿ ಸಹಿತ ಇತರ ಹಲವು ಸಂಬಂಧಿಕರ ಖಾತೆಗಳಿಗೆ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿತ್ತು ಎನ್ನುವುದು ಇ.ಡಿ. ಆರೋಪವಾಗಿದೆ. ಕಪೂರ್ ದೇಶ ಬಿಟ್ಟು ಹೋಗುವುದನ್ನು ತಡೆಯಲು ಅವರ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.
ರಾಣಾ ವಿಚಾರಣೆ
ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್​ರನ್ನು ವಿಚಾರಣೆಗಾಗಿ ಇ.ಡಿ. ಶನಿವಾರ ಬೆಳಗ್ಗೆ ಮುಂಬೈ ಕಚೇರಿಗೆ ಕರೆದೊಯ್ದಿತು. ಇದಕ್ಕೂ ಮುನ್ನ ಶುಕ್ರವಾರ ಸಂಜೆ ಮತ್ತು ಶನಿವಾರ ಇ.ಡಿ. ಅಧಿಕಾರಿಗಳು ಕಪೂರ್​ರ ಮುಂಬೈ ನಿವಾಸದ ಶೋಧ ನಡೆಸಿದರು. ಬ್ಯಾಂಕ್​ನ ಆರ್ಥಿಕ ಸ್ಥಿತಿ ಹದಗೆಡಲು ‘ಅತ್ಯುನ್ನತ ಅಧಿಕಾರಿಗಳು’ ಮಾಡಿರಬಹುದಾದ ‘ಅಕ್ರಮಗಳ’ ಬಗ್ಗೆ ಅಧಿಕಾರಿಗಳು ವಿಚಾರಿಸಿದರು. ಇ.ಡಿ. ಅಧಿಕಾರಿಗಳು ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾನೂನಿನ (ಪಿಎಂಎಲ್​ಎ) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಡಿಎಚ್​ಎಫ್​ಎಲ್ ತನಿಖೆಯಲ್ಲಿ ಸಿಕ್ಕ ವಿವರಗಳ ಆಧಾರದಲ್ಲಿ ಯೆಸ್ ಬ್ಯಾಂಕ್ ವಿರುದ್ಧ ಕ್ರಮ ಆರಂಭಿಸಲಾಗಿದೆ.
ವಿಪಕ್ಷಗಳೇ ಹೊಣೆ ಎಂದ ನಿರ್ಮಲಾ
ಯೆಸ್ ಬ್ಯಾಂಕ್ ಬಿಕ್ಕಟ್ಟಿಗೆ ಪ್ರತಿಪಕ್ಷಗಳು ಹೊಣೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಆರೋಪಿಸಿದ್ದಾರೆ. ‘ನಿಯಂತ್ರಣ ವ್ಯವಸ್ಥೆಯ ಸಂಪೂರ್ಣ ವೈಫಲ್ಯ’ ಈಗಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಟೀಕಿಸಿದ್ದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಈ ವಿಚಾರದಲ್ಲಿ ಸರ್ಕಾರದ ಮೌನವನ್ನು ಲೇವಡಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಿರ್ಮಲಾ ಕಾಂಗ್ರೆಸ್​ನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾರತ್ತಲೂ ಬೆರಳು ತೋರಿಸುವುದು ತಮ್ಮ ಉದ್ದೇಶವಲ್ಲ. ಆದರೆ ಹಾಗೆ ಮಾಡಲೇಬೇಕಾಗಿದೆ ಎಂದು ವಿತ್ತ ಸಚಿವರು ಹೇಳಿದರು. ಯೆಸ್ ಬ್ಯಾಂಕ್ ರೀತಿಯಲ್ಲೇ ಕಳೆದ ವರ್ಷ ಬೆಳಕಿಗೆ ಬಂದ ಪಿಎಂಸಿ ಬ್ಯಾಂಕ್ ಬಿಕ್ಕಟ್ಟಿಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಕಾರಣ ಎಂದು ಸಚಿವೆ ನಿರ್ಮಲಾ ದೂಷಿಸಿದ್ದಾರೆ.
ಠೇವಣಿದಾರರು ಗಾಬರಿಪಡಬೇಕಾಗಿಲ್ಲ. ಆರ್​ಬಿಐ ವಿಧಿಸಿರುವ 30 ದಿನಗಳ ಗಡುವಿನೊಳಗೆ ಬಿಕ್ಕಟ್ಟು ಬಗೆಹರಿಸಲು ಒಂದು ಸೂತ್ರ ರೂಪಿಸಲಾಗುತ್ತಿದೆ.
| ಪ್ರಶಾಂತ್ ಕುಮಾರ್, ಎಸ್​ಬಿಐ ಮಾಜಿ ಮುಖ್ಯ ಹಣಕಾಸು ಅಧಿಕಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
