ನವದೆಹಲಿ:ಕರೊನಾ ಮಹಾಮಾರಿಯ ನಿರ್ವಹಣೆಯಲ್ಲಿ ಭಾರತ ಶ್ಲಾಘನೀಯ ಕೆಲಸ ಮಾಡಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಕರೊನಾ ವೈರಸ್ ಸಾಂಕ್ರಾಮಿಕತೆಗೆ ಬೇರಾವುದೇ ದೇಶ ಸ್ಪಂದಿಸದಷ್ಟು ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ ಎಂದು ಕೇಂದ್ರ ಸರ್ಕಾರವನ್ನು ಹೊಗಳಿದೆ. ಕರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ 50,000 ರೂ. ಪರಿಹಾರ ನೀಡುವ ಕುರಿತು ಆದೇಶವನ್ನು ಕಾಯ್ದಿಟ್ಟ ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಮತ್ತು ಎ.ಎಸ್. ಬೋಪಣ್ಣ ಇದ್ದ ಪೀಠ, ಸರ್ಕಾರ ವನ್ನು ಮುಕ್ತಕಂಠದಿಂದ ಶ್ಲಾಘಿಸಿತು.
‘ಇಂದು ನಮಗೆ ಸಂತಸ ವಾಗಿದೆ. ಸಂತ್ರಸ್ತ ಜನರಿಗೆ ಸ್ವಲ್ಪ ವಾದರೂ ಪರಿಹಾರ ಸಿಗುತ್ತಿದೆ. ಸರ್ಕಾರ ಎಲ್ಲವನ್ನೂ ಮಾಡುತ್ತಿದೆ. ಸಂತ್ರಸ್ತರ ಕಣ್ಣೀರು ಒರೆಸಲು ಸರ್ಕಾರ ಮಾಡುತ್ತಿರುವ ಕೆಲಸದಿಂದ ನಮಗೆ ಸಂತೋಷ ವಾಗಿದೆ’ ಎಂದು ಷಾ ಹೇಳಿದರು. ಕೋವಿಡ್-19ರ ಎರಡನೇ ಅಲೆಗೆ ಸಿದ್ಧವಾಗದೇ ಇದ್ದುದರ ಫಲವಾಗಿ ಸಂಭವಿಸಿದ ಸಾವಿರಾರು ಸಾವುಗಳ ಪರಿಶೀಲನೆ ಮತ್ತು ವೈದ್ಯಕೀಯ ಆಮ್ಲಜನಕ ಮುಂತಾದ ಅಗತ್ಯ ವಸ್ತುಗಳ ಕೊರತೆ ನಿಭಾಯಿಸಿದ ರೀತಿ ಉತ್ತಮವಾಗಿತ್ತು ಎಂದು ಉಭಯ ನ್ಯಾಯಮೂರ್ತಿಗಳು ಮೆಚ್ಚುಗೆ ಸೂಚಿಸಿದರು. ‘ನಮ್ಮ ದೇಶದ ಜನಸಂಖ್ಯೆ, ಲಸಿಕೆ ವೆಚ್ಚ, ಆರ್ಥಿಕ ಪರಿಸ್ಥಿತಿ ಹಾಗೂ ಎದುರಿಸಿದ ಸನ್ನಿವೇಶಗಳನ್ನು ಪರಿಗಣಿಸಿದರೆ ನಾವು ಅನುಕರಣೀಯ ಕ್ರಮಗಳನ್ನು ಕೈಗೊಂಡಿದ್ದೇವೆ. ಭಾರತದಂತೆ ಮಾಡಲು ಬೇರಾವುದೇ ದೇಶಕ್ಕೆ ಸಾಧ್ಯವಾಗಲಿಲ್ಲ’ ಎಂದವರು ಹೇಳಿದರು.
31,923 ಹೊಸ ಕೇಸ್
ದೇಶದಲ್ಲಿ ಗುರುವಾರ ಕೋವಿಡ್ ಸೋಂಕಿನ 31,923 ಹೊಸ ಕೇಸ್ಗಳು ದೃಢಪಟ್ಟಿವೆ. 282 ಜನರು ಬಲಿಯಾಗಿದ್ದಾರೆ. ಆ ಪೈಕಿ ಕೇರಳವೊಂದರಲ್ಲೇ 19,675 ಕೇಸ್ ಹಾಗೂ 142 ಸಾವು ದಾಖಲಾಗಿವೆ. ಸಾವಿನ ಒಟ್ಟು ಸಂಖ್ಯೆ 4,46,050ಕ್ಕೆ ಏರಿದೆ. ದೇಶದಲ್ಲಿ ಇದುವರೆಗೆ 83.39 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಜಗತ್ತಿನೆಲ್ಲೆಡೆ ನಕಲಿ ಸರ್ಟಿಫಿಕೆಟ್ ಜಾಲ
ಕರೊನಾ ಲಸಿಕೆ ಹಾಕಿಸಿಕೊಂಡ ಕುರಿತು ನಕಲಿ ಸರ್ಟಿಫಿಕೆಟ್ ನೀಡುವ ಕಾಳಸಂತೆ ಜಾಲಕ್ಕೆ ಜಗತ್ತಿನಾದ್ಯಂತ ಬೇಡಿಕೆ ತ್ವರಿತವಾಗಿ ಹೆಚ್ಚುತ್ತಿದೆ ಎಂದು ಅಧ್ಯಯನವೊಂದು ಬಹಿರಂಗ ಪಡಿಸಿದೆ. ಚುಚ್ಚುಮದ್ದು ಪಡೆಯುವ ಇಚ್ಛೆಯಿಲ್ಲದಿದ್ದರೂ ಲಸಿಕೆ ಹಾಕಿಸಿಕೊಳ್ಳುವುದರಿಂದ ದೊರೆ ಯುವ ಪ್ರಯೋಜನಗಳನ್ನು ಪಡೆಯುವ ಸಲುವಾಗಿ ಅನೇಕ ಜನರು ನಕಲಿ ಸರ್ಟಿಫಿಕೆಟ್ ಪಡೆಯಲು ಹಣ ಚೆಲ್ಲುತ್ತಿದ್ದಾರೆ. ವಿವಿಧ ದೇಶಗಳ ಸರ್ಕಾರಗಳು ಸೋಂಕಿನ ವಿಪತ್ತಿನಿಂದ ಪಾರು ಮಾಡಲು ಲಸಿಕೆ ಹಾಕುತ್ತಿವೆ. ಆದರೆ ಲಸಿಕೆ ಪಡೆಯದೇ ಸರ್ಟಿಫಿಕೆಟ್​ಗಿಟ್ಟಿಸಿಕೊಳ್ಳುವ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಹಾಳು ಮಾಡುವ ಪ್ರವೃತ್ತಿ ಕಳವಳ ಮೂಡಿಸಿದೆ. ವಿದೇಶಗಳಿಂದ ಬರುವವರು ನೆಗೆಟಿವ್ ಟೆಸ್ಟ್ ವರದಿ, ಲಸಿಕೆ ಪಡೆದಿರುವುದನ್ನು ಅನೇಕ ದೇಶಗಳು ಕಡ್ಡಾಯಗೊಳಿಸಿವೆ. ಇದ ರಿಂದ ನುಣುಚಿಕೊಳ್ಳಲು ಜನರು ಅಡ್ಡ ಮಾರ್ಗಕ್ಕೆ ಮೊರೆ ಹೋಗುತ್ತಿದ್ದಾರೆ.
100 ಕೋಟಿ ಡೋಸ್ ಲಸಿಕೆ
2022ರ ಅಂತ್ಯದೊಳಗೆ ಕೋವಿಡ್ ಲಸಿಕೆಯ ಜಾಗತಿಕ ಸರಬರಾಜನ್ನು ಹೆಚ್ಚಿಸುವ ಉದ್ದೇಶದಿಂದ ಭಾರತದಲ್ಲಿ ಕನಿಷ್ಠ 100 ಕೋಟಿ ಡೋಸ್ ಲಸಿಕೆ ಉತ್ಪಾದಿಸಲು ಕ್ವಾಡ್ ಸದಸ್ಯ ದೇಶಗಳಾದ ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ಪರಸ್ಪರ ಸಹಕರಿಸಲಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಬುಧವಾರ ಜಾಗತಿಕ ಕೋವಿಡ್-19 ವರ್ಚುವಲ್ ಶೃಂಗ ಸಭೆಯಲ್ಲಿ ಮಾತನಾಡಿದ ಬೈಡೆನ್, ಜಗತ್ತಿನಾದ್ಯಂತ ಮಹಾಮಾರಿಯ ವಿರುದ್ಧ ಹೋರಾಡಲು ಅಗತ್ಯವಾದ ಕ್ರಮಗಳನ್ನು ವಿವರಿಸಿದರು. ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತ ವ್ಯಾಕ್ಸಿನ್ ಲಸಿಕೆ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲು ಪಾಲುದಾರ ದೇಶಗಳು, ಔಷಧ ಕಂಪನಿಗಳು ಮತ್ತು ಇತರ ಉತ್ಪಾದನಾ ಕಂಪೆನಿಗಳೊಂದಿಗೆ ಸೇರಿ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಆತ್ಮಹತ್ಯೆಗೂ ಪರಿಹಾರ
ಯಾವುದೇ ವ್ಯಕ್ತಿ ಕೋವಿಡ್ ಸೋಂಕು ದೃಢಪಟ್ಟ 30 ದಿನದೊಳಗೆ ಆತ್ಮಹತ್ಯೆ ಮಾಡಿಕೊಂಡಲ್ಲಿ ಅಂಥವರ ಸಮೀಪ ಸಂಬಂಧಿಗಳಿಗೆ ಕೂಡ 50,000 ರೂಪಾಯಿ ಪರಿಹಾರ ಹಣ ನೀಡಲಾಗುವುದೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆಸ್ಪತ್ರೆಯ ಹೊರಗಡೆ ಅಥವಾ ಒಳಗಡೆ ಕರೊನಾ ಸಾವು ಸಂಭವಿಸಿದರೂ ಪರಿಹಾರಕ್ಕೆ ಪರಿಗಣಿಸಲಾಗುತ್ತದೆ ಎಂದಿದೆ. 50,000 ರೂಪಾಯಿ ಪರಿಹಾರದ ಬಗ್ಗೆ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ತಿಳಿಸಿತ್ತು.
ಹಬ್ಬದ ಸಂದರ್ಭದಲ್ಲಿ ಕೇಂದ್ರ ಮಾರ್ಗಸೂಚಿ
ಅಕ್ಟೋಬರ್​ನಿಂದ ನವೆಂಬರ್ ವರೆಗೆ ದೇಶದಾದ್ಯಂತ ಆಚರಿಸಲಾಗುವ ವಿವಿಧ ಹಬ್ಬಗಳ ವೇಳೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು (ಯುಟಿ) ಅನುಸರಿಸಬೇಕಾದ ವಿವರವಾದ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೊರಡಿಸಿದೆ. ಶೇಕಡ 5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಪ್ರದೇಶಗಳಲ್ಲಿ ಜನರು ಗುಂಪುಗೂಡುವುದನ್ನು ನಿಷೇಧಿ ಸಿದೆ. ಭಾರತದಲ್ಲಿ ಸೋಂಕಿನ ಎರಡನೇ ಅಲೆ ಇನ್ನೂ ಮುಗಿದಿಲ್ಲ. ಕೆಲವು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ನಿಯಂತ್ರಣ ನಿಯಮಗಳನ್ನು ಸಡಿಲಿಸುವಾಗ ಎಚ್ಚರವಿರಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸುದ್ದಿಗೋಷ್ಠಿ ಯಲ್ಲಿ ಹೇಳಿದರು. ಸಾಪ್ತಾಹಿಕ ಕೇಸ್ ಪಾಸಿಟಿವಿಟಿ ದರದ ಆಧಾರದಲ್ಲಿ ನಿರ್ಬಂಧಗಳ ಸಡಿಲಿಕೆ ಹಾಗೂ ಹೇರಿಕೆ ನಿರ್ಧಾರ ಕೈಗೊಳ್ಳಲಾಗುತ್ತದೆ.
ಅಂಗವಿಕಲರ ಮನೆ ಬಾಗಿಲಲ್ಲೇ ಲಸಿಕೆ
ಅಂಗವಿಕಲರು ಮತ್ತು ನಡೆದಾಡಲು ಸಾಧ್ಯವಾಗದ ಸೀಮಿತ ಅಂಗವೈಕಲ್ಯ ಹೊಂದಿರುವವರ ಮನೆ ಬಾಗಿಲಿಗೇ ತೆರಳಿ ಕೋವಿಡ್ಲಸಿಕೆ ಹಾಕಲು ಅನುಮತಿ ನೀಡಲಾಗುವದು. ಈ ಬಗ್ಗೆ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ತಿಳಿಸಿದ್ದಾರೆ. ಲಸಿಕೆ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದವರಿಗೆ ಚುಚ್ಚುಮದ್ದು ಹಾಕುವ ಕಾರ್ಯಕ್ರಮ ಆರಂಭಿಸಲಿದ್ದೇವೆ ಎಂದವರು ಹೇಳಿದ್ದಾರೆ.
ಲಸಿಕೆ ಸರ್ಟಿಫಿಕೆಟ್​ಗೆ ಬ್ರಿಟನ್ ನಿಯಮ
ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡಿರುವ ಬ್ರಿಟನ್, ಲಸಿಕೆ ಸರ್ಟಿಫಿಕೆಟ್ ವಿಚಾರದಲ್ಲಿ ತನ್ನ ಮೊಂಡುತನವನ್ನು ಇನ್ನೂ ಮುಂದುವರಿಸಿದೆ. ಎಲ್ಲ ದೇಶಗಳ ಕರೊನಾ ಲಸಿಕೆ ಸರ್ಟಿಫಿಕೆಟ್​ಗಳು ಕನಿಷ್ಠ ಮಾನದಂಡ ಪೂರೈಸಿರಬೇಕು ಎಂದಿರುವ ಬ್ರಿಟನ್, ಅಂತಾರಾಷ್ಟ್ರೀಯ ಪ್ರವಾಸ ನಿಯಮ ವಿಚಾರದಲ್ಲಿ ಭಾರತದೊಂದಿಗೆ ಚರ್ಚೆ ಮುಂದುವರಿಸಿರುವುದಾಗಿ ಹೇಳಿದೆ. ಭಾರತದ ವ್ಯಾಕ್ಸಿನ್ ಸರ್ಟಿಫಿಕೆಟ್ 18 ಅನುಮೋದಿತ ದೇಶಗಳ ಪಟ್ಟಿಯಲ್ಲಿ ಇಲ್ಲದಿರುವುದರಿಂದ ಬ್ರಿಟನ್​ಗೆ ತೆರಳುವ ಭಾರತದ ಪ್ರಯಾಣಿಕರನ್ನು ಲಸಿಕೆ ಪಡೆಯದವರೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ದೇಶಕ್ಕೆ ಆಗಮಿಸಿದ ನಂತರ 10 ದಿನ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತದೆ. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
