ನವದೆಹಲಿ:ರಾಜ್ಯದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಆಕ್ಷೇಪಾರ್ಹ ಪೋಸ್ಟ್ ಗಳನ್ನು ಶುಕ್ರವಾರದೊಳಗೆ ಅಳಿಸಿ ಹಾಕಬೇಕು ಎಂದು ಸುಪ್ರೀಂಕೋರ್ಟ್ ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ಸೂಚನೆ ನೀಡಿದೆ.
ಎಲ್ಲ ಪೋಸ್ಟ್​ಗಳನ್ನು ಅಳಿಸುವುದು ಸಾಧ್ಯವಾಗದಿದ್ದರೆ ರೋಹಿಣಿ ಸಿಂಧೂರಿ ವಿರುದ್ಧದ ಪೋಸ್ಟ್-ಕಾಮೆಂಟ್​ಗಳನ್ನು ಹಿಂಪಡೆಯುತ್ತಿದ್ದೇನೆ ಎಂಬ ಹೇಳಿಕೆಯೊಂದನ್ನು ಹಾಕಬೇಕು ಎಂದೂ ನ್ಯಾಯಾಲಯ ಹೇಳಿದೆ. ಸಿಂಧೂರಿ ತಮ್ಮ ವಿರುದ್ಧ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ದೂರನ್ನು ರದ್ದುಗೊಳಿಸುವಂತೆ ಕೋರಿ ರೂಪಾ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾ. ಅಭಯ್ ಎಸ್. ಓಕಾ ಮತ್ತು ಪಂಕಜ್ ಮಿಥಾಲ್ ವಿಭಾಗೀಯ ಪೀಠ ಈ ಮೌಖಿಕ ನಿರ್ದೇಶನ ನೀಡಿದೆ.
ಈ ವರ್ಷದ ಆರಂಭದಲ್ಲಿ ರೂಪಾ ಅವರು ಸಿಂಧೂರಿ ಕುರಿತ ಕೆಲ ವೈಯಕ್ತಿಕ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, ಭ್ರಷ್ಟಾಚಾರ ಆರೋಪಗಳನ್ನು ಕೂಡ ಮಾಡಿದ್ದರು. ನಂತರ ಇಬ್ಬರೂ ಅಧಿಕಾರಿಗಳ ನಡುವಿನ ಜಗಳ ಬೀದಿಗೆ ಬಂದಿತ್ತು. ರೂಪಾ ವಿರುದ್ಧ ಮಾನನಷ್ಟದ ಸಿವಿಲ್ ಮತ್ತು ಕ್ರಿಮಿನಲ್ ಕೇಸ್​ಗಳನ್ನು ಸಿಂಧೂರಿ ದಾಖಲಿಸಿದರು.
ಇಬ್ಬರೂ ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳುವಂತೆ ಬುಧವಾರ ಸಲಹೆ ನೀಡಿತ್ತು. ಆದರೆ ಮಧ್ಯಸ್ಥಿಕೆ ವಿಫಲವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಮೇಲಾಗಿ, ಗುರುವಾರ ಇಬ್ಬರೂ ಅಧಿಕಾರಿಗಳು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ತಮ್ಮ ಸಮಸ್ಯೆಗಳನ್ನು ಇಬ್ಬರು ಮಹಿಳಾ ಅಧಿಕಾರಿಗಳಿಗೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಐಎಎಸ್- ಐಪಿಎಸ್ ಅಧಿಕಾರಿಗಳು ಹೀಗೆ ಜಗಳವಾಡಿದರೆ ಆಡಳಿತ ನಡೆಸುವುದು ಹೇಗೆ ಎಂದು ನ್ಯಾ. ಓಕಾ ಪ್ರಶ್ನಿಸಿದರು.
ಸೋಷಿಯಲ್ ಮೀಡಿಯಾ ಪೋಸ್ಟ್​ಗಳ ಮೂಲಕ ರೂಪಾ ತನ್ನ ಮಾನಹಾನಿ ಮಾಡಿದ್ದಾರೆಂದು ಸಿಂಧೂರಿ ದೂರಿದರು. ‘ನನ್ನ ಕುಟುಂಬವನ್ನೇಕೆ ಎಳೆದು ತರಬೇಕು? ಹೀಗಿದ್ದಾಗ ನಾನು ರಾಜ್ಯದಲ್ಲಿ ಹೇಗೆ ತಾನೇ ಕೆಲಸ ಮಾಡಬೇಕು?’ ಎಂದು ಕೇಳಿದರು.
ಸಿಂಧೂರಿ ವಿರುದ್ಧ ನೀವು ಯಾವುದಾದರೂ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ಮಾಡುತ್ತಿದ್ದೀರಾ? ಎಂದು ರೂಪಾ ಬಳಿ ನ್ಯಾಯಪೀಠ ಕೇಳಿತು. ರೂಪಾ ಅವರಿಂದ ಇಲ್ಲ ಎಂಬ ಉತ್ತರ ಬಂದಾಗ, ಯಾರೋ ಮಾಡಿದ ಆರೋಪಗಳ ಬಗ್ಗೆ ಬೇರೊಬ್ಬರು ತನಿಖೆ ಮಾಡುತ್ತಿರುವಾಗ ನಿಮಗೇಕೆ ಅದರ ಬಗ್ಗೆ ಚಿಂತೆ? ಅದು ತನಿಖೆಯ ವಿಷಯವಾಗಿರುವಾಗ ನಿಮಗೆ ಆರೋಪಗಳನ್ನು ಮಾಡುವ ಉಸಾಬರಿ ಏಕೆ? ಎಂದು ಕಟು ಪ್ರಶ್ನೆಗಳನ್ನು ಕೇಳಿದರು. 24 ಗಂಟೆಗಳ ಒಳಗೆ ನೀವು ಆಕ್ಷೇಪಾರ್ಹ ಪೋಸ್ಟ್​ಗಳನ್ನು ಅಳಿಸಿಹಾಕಬೇಕು ಎಂದು ರೂಪಾಗೆ ಸೂಚಿಸಲಾಯಿತು.
ಇಡೀ ವಿವಾದವನ್ನು ಅಂತ್ಯಗೊಳಿಸಲು ಬಯಸುತ್ತೇವೆ. ಅದಕ್ಕಾಗಿ ಮಾತ್ರ ಈ ಕೇಸ್ ವಿಚಾರಣೆ ಮಾಡುತ್ತಿದ್ದೇವೆ. ಹಾಗಂತ ನಿಮ್ಮ ಅರ್ಜಿಗಳನ್ನು ಅರ್ಹತೆಯ ಮೇರೆಗೆ ವಿಚಾರಣೆ ಮಾಡುತ್ತಿದ್ದೇವೆ ಎಂದು ನೀವಿಬ್ಬರು ಭಾವಿಸುವುದೇ ಬೇಡ. ರಾಜ್ಯದ ಆಡಳಿತದ ಹಿತಾಸಕ್ತಿಯಿಂದಷ್ಟೇ ನಾವು ಕೈಗೆತ್ತಿಕೊಂಡಿದ್ದೇವೆ ಎಂದು ನ್ಯಾ. ಓಖಾ ಸೂಚ್ಯವಾಗಿ ತಿಳಿಸಿದರು. ಕೋರ್ಟಿನಲ್ಲಿ ಭಾವನೆಗಳಿಗೆ ಜಾಗವಿಲ್ಲ ಎನ್ನುವುದು ಇಬ್ಬರಿಗೂ ಅರ್ಥವಾಗಬೇಕು. ಇಂದು ನೀವಿಬ್ಬರು ಪರಸ್ಪರ ವಿರೋಧಿಸುತ್ತಿರಬಹುದು .ಆದರೆ ಹತ್ತು-ಹದಿನೈದು ವರ್ಷಗಳ ನಂತರವೂ ಹೀಗೆಯೇ ಮುಂದುವರಿದರೆ, ನಾವು ಸಾಕಷ್ಟು ಸಮಯ ಹಾಳು ಮಾಡಿದೆವಲ್ಲ ಎಂಬುದು ನಿಮ್ಮ ಅರಿವಿಗೆ ಬರಬಹುದು ಎಂದು ನ್ಯಾಯಪೀಠ ಕಿವಿಮಾತು ಹೇಳಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 2 =
Remember me
