ಇಂದಿನ ಜಾಗತಿಕ ರಾಜಕೀಯ ಪರಿಸ್ಥಿತಿ ಹಿಂದೆಂದೂ ಇಲ್ಲದಂತಹ ಭಾರಿ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇದು ಯಾರೂ ಅಲ್ಲಗಳೆಯಲಾಗದಂತಹ ಒಂದು ವಾಸ್ತವವಾಗಿದೆ. ಏಕೆಂದರೆ, ಒಂದೆರಡು ದೇಶಗಳನ್ನು ಬಿಟ್ಟರೆ ಬಹುತೇಕ ಯೂರೋಪು ಆರ್ಥಿಕವಾಗಿ ಜಝುರಿತವಾಗಿದೆ. ತೀರಾ ಇತ್ತೀಚಿನವರೆಗೂ ಜಗತ್ತನ್ನೇ ನಿಯಂತ್ರಿಸುತ್ತಿದ್ದ ಅಮೆರಿಕದ ಪರಿಸ್ಥಿತಿಯೂ ಅಲ್ಲೋಲಕಲ್ಲೋಲವಾಗಿದೆ; ಭಾರತವನ್ನು ಮೂರು ಶತಮಾನಗಳ ಕಾಲ ಆಳಿದ ಬ್ರಿಟನ್ ದಿಕ್ಕೆಟ್ಟು ಹೋಗಿದೆ; ಪಶ್ಚಿಮದ ಉಳಿದ ದೇಶಗಳ ಆರ್ಥಿಕ ಬೆಳವಣಿಗೆ ಕೂಡ ಹಿಮ್ಮುಖವಾಗಿದೆ; ಪ್ರಜಾಸತ್ತೆಯ ಲವಲೇಶವೂ ಇಲ್ಲದ ಕಮ್ಯುನಿಸ್ಟ್ ಚೀನಾದ ಒಳಗೆ ನಿಜಕ್ಕೂ ಯಾವ ಪರಿಸ್ಥಿತಿ ಇದೆ ಎನ್ನುವುದು ಹೊರಜಗತ್ತಿಗೆ ಗೊತ್ತಾಗುತ್ತಿಲ್ಲ. ಕೋವಿಡ್ ನಂತರದ ಕಾಲಘಟ್ಟದಲ್ಲಂತೂ ಜಗತ್ತಿನ ವಿತ್ತೀಯ ಪ್ರಗತಿ ಸ್ತಬ್ಧವಾಗಿದ್ದು ಸುಳ್ಳಲ್ಲ. ಇವೆಲ್ಲದರ ಮಧ್ಯೆಯೂ 130 ಕೋಟಿ ಜನಸಂಖ್ಯೆಯುಳ್ಳ ಭಾರತ ಮಾತ್ರ ಜಗತ್ತಿನ ಐದನೆಯ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿ ಹೊರಹೊಮ್ಮಿದ್ದು, ಶೇ. 6.8ರಷ್ಟು ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ.
ಕೋವಿಡ್ ಕಾಲಘಟ್ಟವು ಒಂದು ದೇಶವಾಗಿ ನಮಗೆ ಕೆಲವು ಅನಿವಾರ್ಯತೆಗಳನ್ನು ಮನದಟ್ಟು ಮಾಡಿಕೊಟ್ಟಿತು. ಆ ಕಾಲದಲ್ಲಿ ಢಾಳಾಗಿ ಕಂಡುಬಂದ ನಮ್ಮ ವ್ಯವಸ್ಥೆಯ ಕೆಲವು ಇತಿಮಿತಿಗಳನ್ನು ಕುರಿತು ಆಳವಾಗಿ ಅವಲೋಕನ ಮಾಡಿಕೊಂಡ ಫಲವಾಗಿ ಹೊರಹೊಮ್ಮಿದ ತತ್ತ್ವವೇ ಆತ್ಮನಿರ್ಭರ ಭಾರತವನ್ನು ಕಟ್ಟುವ ಹೊಂಗನಸು! ಇದಕ್ಕೂ ಮೊದಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2025ರೊಳಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಕಟ್ಟುವ ಗುರಿಯನ್ನು ದೇಶವಾಸಿಗಳೊಂದಿಗೆ ಹಂಚಿಕೊಂಡಿದ್ದರು. ಇದಕ್ಕಾಗಿ, ಹಲವು ಕ್ಷೇತ್ರಗಳಿಗೆ ಅನಗತ್ಯವಾಗಿ ಹಾಕಿದ್ದ ಬೇಲಿಯನ್ನು ಅವರು ಕಿತ್ತೆಸೆದರಲ್ಲದೆ, ಬಂಡವಾಳ ಹೂಡಿಕೆಯ ಪರಿಧಿಯನ್ನು ಪರಿಣಾಮಕಾರಿಯಾಗಿ ಹಿಗ್ಗಿಸಿದರು. ಇದಕ್ಕಾಗಿ ಭಾರಿ ಆರ್ಥಿಕ ಸುಧಾರಣೆಗಳನ್ನು ಅವರು ಜಾರಿಗೆ ತಂದರು. ಉದಾಹರಣೆಗೆ ಹೇಳುವುದಾದರೆ, ಕೋವಿಡ್​ದಂತಹ ಸವಾಲು ಎದುರಿಗಿದ್ದಾಗ ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಲಭ್ಯ ಮತ್ತು ವೈದ್ಯಕೀಯ ಸೇವೆಗಳನ್ನು ಜನಸಾಮಾನ್ಯರಿಗೆ ಲಭ್ಯವಾಗುವಂತೆ ವಿಸ್ತರಿಸಿದ್ದನ್ನು ನೋಡಬಹುದು. ಹಾಗೆಯೇ, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ಚಾಲನೆ ನೀಡಿದ್ದು ಅಥವಾ ವಿಮಾ ಕ್ಷೇತ್ರದ ಸಾಧ್ಯತೆಗಳನ್ನು ಹಿಗ್ಗಿಸಿದ್ದನ್ನು ಉದಾಹರಿಸಬಹುದು.
ಇವೆಲ್ಲವೂ ಸಾಧ್ಯವಾಗಿದ್ದು ಹೇಗೆನ್ನುವ ಪ್ರಶ್ನೆ ಇಲ್ಲಿ ಬಂದೇಬರುತ್ತದೆ. ದೇಶದ ಸಮಸ್ತರನ್ನೂ ಒಳಗೊಂಡು ನಾವು ಅಭಿವೃದ್ಧಿ ಸಾಧಿಸಬೇಕೆನ್ನುವ ಆಶಯವು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ತತ್ತ್ವದಡಿ ಈಡೇರುತ್ತಿರುವ ಚಿತ್ರಣ ನಮ್ಮ ಕಣ್ಣೆದುರಿಗೇ ಇದೆ. ಅಂದರೆ, ಬಿಜೆಪಿಯದು ಮೊದಲಿನಿಂದಲೂ ‘ಇನ್​ಕ್ಲ್ಲೂಸಿವ್’ ರಾಜಕಾರಣವೇ ಆಗಿದೆ. ಈ ಉದಾತ್ತ ಮತ್ತು ಸಮಗ್ರ ದೃಷ್ಟಿಕೋನವಿದ್ದಾಗ ಮಾತ್ರ ಅಭಿವೃದ್ಧಿಕೇಂದ್ರಿತ ರಾಜಕಾರಣವನ್ನು ಮಾಡಬಹುದು ಎನ್ನುವುದಕ್ಕೆ ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿನ ಬಿಜೆಪಿ ಆಡಳಿತವು ಸಾಕ್ಷಿಯಾಗಿದೆ. ಬಿಜೆಪಿ ಕೆಲವೇ ಉದ್ಯಮಿಗಳ ಹಿತ ಕಾಯುತ್ತಿದೆ ಎಂದು ಆರೋಪಿಸುವವರು ದೇಶ ಮತ್ತು ರಾಜ್ಯಗಳಲ್ಲಿ ನಮ್ಮ ಪಕ್ಷವು ಹಿಂದುಳಿದ ವರ್ಗಗಳನ್ನು ಪುರಸ್ಕರಿಸಿ, ಅವರೊಂದಿಗೆ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದು.
ಮೋದಿಯವರು ಕೆಲ ವರ್ಷಗಳ ಹಿಂದೆ ಜನ್​ಧನ್ ಯೋಜನೆಯನ್ನು ತಂದಿದ್ದು ನಿಮಗೆ ಗೊತ್ತೇ ಇದೆ. ಇದರಡಿಯಲ್ಲಿ ಏನಿಲ್ಲವೆಂದರೂ 45 ಕೋಟಿ ಜನರು ಬ್ಯಾಂಕ್ ಖಾತೆಗಳನ್ನು ಹೊಂದುವುದು ಸಾಧ್ಯವಾಯಿತು. ಇದರಲ್ಲಿ ಸಿಂಹಪಾಲು ಫಲಾನುಭವಿಗಳು ಹಿಂದುಳಿದ ಸಮುದಾಯಗಳಿಗೆ ಸೇರಿದವರು. ಹಾಗೆಯೇ, ಸ್ವಚ್ಛ ಭಾರತ ಯೋಜನೆಯಡಿ ಮನೆಗೊಂದು ಶೌಚಗೃಹವನ್ನು ನಿರ್ವಿುಸಲಾಯಿತು. ಈ ಯೋಜನೆಯ ಫಲಾನುಭವಿಗಳಾಗಿರುವವರಲ್ಲೂ ಹಿಂದುಳಿದ ವರ್ಗಗಳ ಜನರೇ ಹೆಚ್ಚಾಗಿದ್ದಾರೆ. ಕಿಸಾನ್ ಸಮ್ಮಾನ್, ಉಜ್ವಲಾ, ಸೌಭಾಗ್ಯ, ಮಾತೃ ವಂದನಾ, ಶ್ರಮಯೋಗಿ ಮಾನ್​ಧನ್, ಆಯುಷ್ಮಾನ್ ಭಾರತ್ ಹೀಗೆ ಪ್ರತಿಯೊಂದು ಮಹತಾ್ವಕಾಂಕ್ಷಿ ಯೋಜನೆಯಲ್ಲೂ ಹಿಂದುಳಿದ ವರ್ಗಗಳ ಸಬಲೀಕರಣವಾಗಿರುವುದನ್ನು ನಾವು ನೋಡಬಹುದು.
ಕೇಂದ್ರದ ಬಿಜೆಪಿ ಸರ್ಕಾರವೊಂದೇ ಅಲ್ಲ, ಮೋದಿಯವರ ದೂರದೃಷ್ಟಿಯ ಸಕಾರಾತ್ಮಕ ನೀತಿಗಳಿಂದ ರಾಜ್ಯ ಬಿಜೆಪಿ ಸರ್ಕಾರ ಕೂಡ ಪ್ರೇರಣೆ ಪಡೆದುಕೊಳ್ಳುತ್ತಿದ್ದು, ಇಂತಹ ಜನಪರ ಯೋಜನೆಗಳಿಗೆ ಬೆಂಬಲದ ಕೈ ಚಾಚುತ್ತಿದೆ. ಹೀಗಾಗಿ, ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಮತ್ತಷ್ಟು ಬಲ ಬಂದಿದೆ. ಇದಕ್ಕೆ ಉದಾಹರಣೆಯಾಗಿ, ಕಿಸಾನ್ ಸಮ್ಮಾನ್ ನಿಧಿ, ಆಯುಷ್ಮಾನ್ ಭಾರತ ತರಹದ ಯೋಜನೆಗಳನ್ನು ಕರ್ನಾಟಕದ ಬಿಜೆಪಿ ಸರ್ಕಾರವು ವಿಸ್ತರಿಸಿರುವುದನ್ನು ನೋಡಬಹುದು. ಹಾಗೆಯೇ, ಕರ್ನಾಟಕ ನೇಕಾರ ಸಮ್ಮಾನ ಯೋಜನೆಯ ಮೂಲಕ ರಾಜ್ಯದ 54 ಸಾವಿರಕ್ಕೂ ಹೆಚ್ಚು ನೇಕಾರರಿಗೆ ಆರ್ಥಿಕ ನೆರವು ನೀಡುತ್ತಿರುವುದನ್ನು ಇಲ್ಲಿ ಉದಾಹರಿಸಬಹುದು. ರಾಜ್ಯ ಬಿಜೆಪಿ ಸರ್ಕಾರವು ಆತ್ಮನಿರ್ಭರ ಭಾರತಕ್ಕೆ ಸರಿಸಮಾನವಾಗಿ ನವಕರ್ನಾಟಕವನ್ನು ನಿರ್ವಿುಸುವ ಸಂಕಲ್ಪ ಮಾಡಿದೆ. ಇದು, ಇಲ್ಲಿಯವರೆಗೂ ಅವಜ್ಞೆಗೆ ಒಳಗಾಗಿದ್ದ ನೂರಾರು ಹಿಂದುಳಿದ ಸಮುದಾಯಗಳನ್ನು ಸೂಕ್ತ ಪ್ರಾತಿನಿಧ್ಯ ಮತ್ತು ಪೋ›ತ್ಸಾಹದೊಂದಿಗೆ ಮೇಲೆತ್ತುವ ಅಭಿಲಾಷೆಯನ್ನು ಆಧರಿಸಿದೆ. ಮೊದಲು ಕೃಷಿಕರ ಮಕ್ಕಳಿಗೆ ಮಾತ್ರ ಇದ್ದ ವಿದ್ಯಾನಿಧಿ ಯೋಜನೆಯನ್ನು ಈಗ ನೇಕಾರರು, ಮೀನುಗಾರರು ಮತ್ತು ಆಟೋ ಚಾಲಕರ ಮಕ್ಕಳಿಗೂ ವಿಸ್ತರಿಸಲಾಗಿದೆ. ಇದರಿಂದಾಗಿ, ಹಿಂದುಳಿದ ಜಾತಿಗಳಲ್ಲಿನ ಯುವಜನರ ವಿದ್ಯಾಭ್ಯಾಸಕ್ಕೆ ಸೂಕ್ತ ನೆರವು ದೊರೆಯುತ್ತಿದೆ. ಈ ಮೂಲಕ ಸಾಮಾಜಿಕ ನ್ಯಾಯ ಮತ್ತು ಅರ್ಹತೆ ಎರಡನ್ನೂ ಪೋಷಿಸುವ ಕೆಲಸವನ್ನು ರಾಜ್ಯ ಬಿಜೆಪಿ ಸರ್ಕಾರ ನಿಸ್ಪೃವಾಗಿ ಮಾಡುತ್ತಿದೆ.
ಹಿಂದುಳಿದ ವರ್ಗಗಳಿಗೆ ಸ್ವತಂತ್ರ ಭಾರತದಲ್ಲಿ ಬಹುಕಾಲ ಸಾಮಾಜಿಕ ಪ್ರಾಮುಖ್ಯವೇ ಇರಲಿಲ್ಲ ಎನ್ನುವುದು ಒಂದು ಅಪ್ರಿಯ ವಾಸ್ತವ. ಪರಿಸ್ಥಿತಿ ಯಾಕೆ ಇಷ್ಟೊಂದು ನಿರಾಶಾದಾಯಕವಾಗಿತ್ತು ಎನ್ನುವುದಕ್ಕೆ ದೇಶದಲ್ಲೂ ರಾಜ್ಯದಲ್ಲೂ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಆಳ್ವಿಕೆ ನಡೆಸಿದವರು ಉತ್ತರಿಸಬೇಕಷ್ಟೆ. ಆದರೆ, ಜನರ ಪಾಲಿಗೆ ಭರವಸೆಯ ಆಶಾಕಿರಣವಾಗಿ ಹೊರಹೊಮ್ಮಿದ ಬಿಜೆಪಿ, ಈ ಸಮುದಾಯಗಳಿಗೆ ಘನತೆಯುಕ್ತ ಅಸ್ಮಿತೆಯನ್ನು ತಂದುಕೊಡುವುದರಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ ಎನ್ನುವುದು ನೈಜ ಸಂಗತಿ. ಇದಕ್ಕೆ ಉದಾಹರಣೆಯಾಗಿ ಓಬಿಸಿ ವರ್ಗಗಳಲ್ಲಿ ಬರುವ ಲಿಂಗಾಯಿತ, ಒಕ್ಕಲಿಗ ಸಮುದಾಯಗಳೂ ಸೇರಿದಂತೆ ಕಾಡುಗೊಲ್ಲರಂತಹ ಪುಟ್ಟ ಸಮುದಾಯಗಳಿಗೂ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿರುವುದನ್ನು ನೋಡಬಹುದು. ಇದೇ ರೀತಿಯಲ್ಲಿ ಕುರುಬರು, ಈಡಿಗರು, ಗೊಲ್ಲರು, ತಿಗಳರು, ಮಾಲರು, ದೇವಾಡಿಗರು, ದೇವಾಂಗರು, ಪಿಂಜಾರರು, ನದಾಫರು ಮುಂತಾದ ಲೆಕ್ಕವಿಲ್ಲದಷ್ಟು ಸಮುದಾಯಗಳ ಸಬಲೀಕರಣಕ್ಕಾಗಿ ರಾಜ್ಯ ಬಿಜೆಪಿ ಸರ್ಕಾರವು ಶಿಷ್ಯವೇತನ, ವಿದ್ಯಾರ್ಥಿ ನಿಲಯಗಳ ನಿರ್ವಣ, ಸಮುದಾಯ ಹಾಸ್ಟೆಲ್​ಗಳು, ಕೌಶಲ ತರಬೇತಿ ಇತ್ಯಾದಿ ಅರ್ಥಪೂರ್ಣ ಕ್ರಮಗಳ ಮೂಲಕ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ.
ಯಾವ ಸಮುದಾಯವನ್ನೂ ಓಲೈಸಲು ಹೋಗದೆ, ದೊಡ್ಡದು ಅಥವಾ ಸಣ್ಣದು ಎನ್ನುವ ತಾರತಮ್ಯ ಮಾಡದೆ, ರಾಜಕೀಯ ಲಾಭ-ನಷ್ಟಗಳ ತಾತ್ಕಾಲಿಕ ಲೆಕ್ಕಾಚಾರ ಹಾಕದೆ, ಪ್ರತಿಯೊಂದು ಸಮುದಾಯವನ್ನೂ ವಿಕಸನದ ಪರ್ವದಲ್ಲಿ ಸಕ್ರಿಯವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಅವುಗಳಿಗಿರುವ ಪ್ರಸ್ತುತತೆಯನ್ನು ಗೌರವಿಸುವುದು ಬಿಜೆಪಿ ಮೈಗೂಡಿಸಿಕೊಂಡಿರುವ ಆರೋಗ್ಯಕರ ಸಂಸ್ಕೃತಿಯಾಗಿದೆ. ಇದರ ಸತ್ಪಲಗಳು ಇತರೆ ಹಿಂದುಳಿದ ವರ್ಗಗಳು ಇತ್ತೀಚಿನ ವರ್ಷಗಳಲ್ಲಿ ದಕ್ಕಿಸಿಕೊಂಡಿರುವ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಸಾಮಾಜಿಕ ಮಹತ್ವಗಳಲ್ಲಿ ಗೋಚರಿಸುತ್ತಿದೆ. ಇದರ ಹಿಂದೆ ಬಿಜೆಪಿಯ ಕಳಕಳಿ ಇದೆ ಎನ್ನುವುದನ್ನು ರಾಜ್ಯದ ಓಬಿಸಿ ವರ್ಗ ಅರ್ಥ ಮಾಡಿಕೊಂಡಿದೆ ಎಂದು ಧಾರಾಳವಾಗಿ ಹೇಳಬಹುದು.
(ಲೇಖಕರು ವಿಧಾನ ಪರಿಷತ್ ಸದಸ್ಯರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
