ರಾಘವ ಶರ್ಮ ನಿಡ್ಲೆ,ನವದೆಹಲಿ
ಗಾಂಧಿ ವಂಶಸ್ಥರಲ್ಲದವರನ್ನು ಕಾಂಗ್ರೆಸ್​ನ ಉನ್ನತ ಹುದ್ದೆಯಲ್ಲಿ ಕೂರಿಸುವುದನ್ನು ಅನೇಕರಿಗೆ ಗ್ರಹಿಸಲಾಗುತ್ತಿಲ್ಲ, ಅರಗಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸೋನಿಯಾ ಗಾಂಧಿ ಮನವೊಲಿಸುವ ಪ್ರಕ್ರಿಯೆ ಮುಂದುವರಿಯಲಿದೆ. ಆದರೆ ಪೂರ್ಣಾವಧಿ ಅಧ್ಯಕ್ಷರ ಬೇಡಿಕೆ ಇರುವುದರಿಂದ ಅನಾರೋಗ್ಯಪೀಡಿತರಾಗಿರುವ ಸೋನಿಯಾ, ಮತ್ತೊಮ್ಮೆ ಅಧ್ಯಕ್ಷ ಸ್ಥಾನ ಅಲಂಕರಿಸುವ ಸಾಧ್ಯತೆ ಬಹುತೇಕ ಕಡಿಮೆ. ಹಾಗಾದರೆ, ಸೋನಿಯಾ ಪುತ್ರ ರಾಹುಲ್ ಅಥವಾ ಪುತ್ರಿ ಪ್ರಿಯಾಂಕಾಗೆ ಪಟ್ಟ ಕಟ್ಟಲಾಗುತ್ತದೆಯೇ? ಸದ್ಯದ ಮಟ್ಟಿಗೆ ಇದಕ್ಕೆ ಉತ್ತರವಿಲ್ಲ.
ರಾಹುಲ್ ನಾಯಕತ್ವದ ಪರ ಅನೇಕರು ಒಲವು ವ್ಯಕ್ತಪಡಿಸಿದ್ದಾರೆ. ಅವರ ವಿರುದ್ಧವೂ ಅಷ್ಟೇ ದೊಡ್ಡ ಕೂಗೆದ್ದಿದೆ. ಮೇಲಾಗಿ, ಗಾಂಧಿ ಮನೆತನದ ವ್ಯಕ್ತಿಗೇ ಅಧಿಕಾರ ನೀಡಿದಲ್ಲಿ, ಬಿಜೆಪಿ ಅದನ್ನೇ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಲಿದೆ. ಕಾಂಗ್ರೆಸ್ ಹಿರಿಯ ಮುಖಂಡ ಪಿ.ಸಿ. ಚಾಕೋ ಅವರೂ ಮಾಧ್ಯಮ ಜತೆ ಮಾತನಾಡುತ್ತ ಇದೇ ಆತಂಕ ಹೊರಹಾಕಿದ್ದಾರೆ.
ಆಮೂಲಾಗ್ರ ಬದಲಾವಣೆ ಬಯಸಿ 23 ಮಂದಿಯ ‘ಪತ್ರ ಚಳವಳಿ’ಯಿಂದ ‘ಹೊಸ ನಾಯಕತ್ವ’ವೇನೋ ಬರಬಹುದು. ಆದರೆ, ಸೋಮವಾರ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿಯವರು ಹಿರಿಯ ಕಾಂಗ್ರೆಸ್ಸಿಗರ ವಿರುದ್ಧ ಬಹಿರಂಗ ಬಂಡಾಯ ಪ್ರದರ್ಶಿಸುವ ಮೂಲಕ ನಾಯಕತ್ವ ವಿಷಯದಾಚೆಗಿರುವ ‘ಪಕ್ಷದ ಆಂತರಿಕ ಸಂಘರ್ಷ’ವೂ ಬಹಿರಂಗಗೊಂಡಂತಾಗಿದೆ.
ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟಿನ ಸವಾಲನ್ನು ಎದುರಿಸುತ್ತಿರುವಾಗ ಮತ್ತು ತಾಯಿ ಸೋನಿಯಾ ಗಾಂಧಿ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿದ್ದಾಗ ಪತ್ರ ಬರೆದಿರುವುದು ಹೇಗೆ ಸೂಕ್ತವೆನಿಸುತ್ತದೆ ಎಂದು ಪ್ರಶ್ನಿಸಿರುವ ರಾಹುಲ್, ಪತ್ರವನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿ ಮತ್ತಷ್ಟು ಮುಜುಗರಕ್ಕೀಡು ಮಾಡಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಉದ್ದೇಶಪೂರ್ವಕವಾಗಿ ತಮ್ಮನ್ನು ಗುರಿ ಮಾಡಿಯೇ ಈ ಪತ್ರ ಬರೆದಿದ್ದಾರೆ ಎನ್ನುವುದು ರಾಹುಲ್ ಮತ್ತವರ ಬೆಂಬಲಿಗರ ಅಭಿಪ್ರಾಯವಾಗಿದ್ದರಿಂದ, ಸಮಿತಿ ಸಭೆಯಲ್ಲಿ ಪತ್ರದ ಉದ್ದೇಶವನ್ನು ಕಟುವಾಕ್ಯಗಳಲ್ಲಿ ಟೀಕಿಸಿದ್ದಾರೆನ್ನಲಾಗಿದೆ.
ಆ.10ರ ಪತ್ರಕ್ಕೆ ಸಹಿ ಹಾಕಿರುವ ಅನೇಕರಿಗೆ ಸೋನಿಯಾ ಮುಂದಾಳತ್ವದ ಬಗ್ಗೆ ಸಮಸ್ಯೆಯಿಲ್ಲ. ಆದರೆ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ತೀವ್ರ ಅಸಮಾಧಾನ ಅವರಲ್ಲಿರುವುದು ಸುಳ್ಳಲ್ಲ. ಸೋನಿಯಾ ಹೆಸರಿಗಷ್ಟೇ ಅಧ್ಯಕ್ಷರು, ಪಕ್ಷಕ್ಕೆ ಸಂಬಂಧಿಸಿದ ನೇಮಕಾತಿ ಸೇರಿ ಅನೇಕ ವಿಷಯಗಳಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಮಧ್ಯಪ್ರವೇಶಿಸಿ, ಹಿರಿಯರ ಶಿಫಾರಸುಗಳನ್ನು ಬದಿಗೆ ಸರಿಸುತ್ತಿದ್ದಾರೆ ಎಂಬ ಚರ್ಚೆಗಳು ಕೇಳಿಬಂದಿವೆ. ಆಂತರಿಕ ಸಂಘರ್ಷಕ್ಕೆ ಇದೇ ಮೂಲ ಕಾರಣವಾಗಿರಬಹುದೇ? ಗುಲಾಂ ನಬೀ ಆಜಾದ್, ಆನಂದ್ ಶರ್ಮ, ಕಪಿಲ್ ಸಿಬಲ್, ಹರ್ಯಾಣ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಸೇರಿದಂತೆ ಅನೇಕರ ಕಣ್ಣು ಕೆಂಪಾಗಿದ್ದಕ್ಕೆ ಇದೇ ಕಾರಣ ಎನ್ನಲಾಗಿದೆ. ಹೀಗಾಗಿಯೇ, ತಮ್ಮ ಪತ್ರದಲ್ಲಿ ಸೋನಿಯಾ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೂ, ನಾಯಕರಾಗಿ ‘ರಾಹುಲ್ ಅಥವಾ ಪ್ರಿಯಾಂಕಾ’ ಇರಬೇಕು ಎಂದು ಈ ನಾಯಕರು ಎಲ್ಲೂ ಹೇಳಿಲ್ಲ. ಒಂದೋ ಸೋನಿಯಾ ಇಲ್ಲವೇ ಗಾಂಧಿ ವಂಶಸ್ಥರಲ್ಲದ ಬೇರೊಬ್ಬ ನಾಯಕನನ್ನು ಉನ್ನತ ಸ್ಥಾನದಲ್ಲಿ ಕೂರಿಸಬೇಕು ಎಂಬ ಇರಾದೆಯೂ ಈ ನಾಯಕರಲ್ಲಿದ್ದಂತಿದೆ.
ಹೀಗಾಗಿಯೇ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪತ್ರಕ್ಕೆ ತೀವ್ರ ಆಕ್ಷೇಪ ತೆಗೆದು, ಪತ್ರ ಬರೆದ ಸಮಯವನ್ನೂ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಹೀಗೆಲ್ಲಾ ಪತ್ರ ಬರೆದು ಬಿಜೆಪಿಗೆ ಸಹಾಯ ಮಾಡುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.
ಆಜಾದ್​ಗೆ ಸಿಟ್ಟೇಕೆ:ಜಮ್ಮು -ಕಾಶ್ಮೀರ ರಾಜಕಾರಣ ದಲ್ಲಿ ಪ್ರಸ್ತುತತೆ ಕಳೆದು ಕೊಂಡಿದ್ದರೂ, ಗಾಂಧಿ ಕುಟುಂಬಕ್ಕೆ ನಿಷ್ಠನಾಗಿ ಕೆಲಸ ಮಾಡಿರುವ ಗುಲಾಂ ನಬೀ ಆಜಾದ್​ಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆ ಸದಸ್ಯತ್ವ ನೀಡಿದ್ದಕ್ಕೆ ಅಸಮಾಧಾನಗಳಿವೆ ಎಂಬ ಮಾತುಗಳಿವೆ. ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಆಜಾದ್, ಮುಂದಿನ ಫೆಬ್ರವರಿಗೆ ಅವಧಿ ಪೂರ್ಣಗೊಳಿಸಲಿದ್ದಾರೆ. ಲೋಕಸಭೆಯಲ್ಲಿ ಗಮನಸೆಳೆಯುವ ಸಾಧನೆ ಮಾಡಿರುವ ಖರ್ಗೆಗೆ ಸಹಜವಾಗಿಯೇ ಈ ಹುದ್ದೆ ಒಲಿಯಬಹುದು. ಹಾಗಾದಲ್ಲಿ, ಆಜಾದ್ ಪಕ್ಷದಲ್ಲಿ ಪ್ರಾಧಾನ್ಯತೆ ಕಳೆದುಕೊಳ್ಳಬಹುದು. ಹೀಗಾಗಿಯೇ, ರಾಹುಲ್ ವಿರುದ್ಧ ಬಂಡಾಯ ಸಾರಲು ಅವರು ಮುಂದಾದರು ಎಂದು ವಿಮಶಿಸಲಾಗಿದೆ.
ಹಿಮಾಚಲ ಪ್ರದೇಶ ಮೂಲದ ಆನಂದ್ ಶರ್ಮ ಈವರೆಗೆ ಚುನಾವಣಾ ರಾಜಕೀಯದಲ್ಲಿ ಯಶಸ್ಸು ಕಂಡಿಲ್ಲ. ಮಾತೃ ರಾಜ್ಯದಲ್ಲಿ ದೊಡ್ಡ ಮಟ್ಟಿನ ಬೆಂಬಲಿಗ ಕಾರ್ಯಪಡೆ ಹೊಂದಿಲ್ಲ. ಹಾಗಿದ್ದರೂ, ಪಕ್ಷದಲ್ಲಿ ಉನ್ನತ ಹುದ್ದೆಗಳನ್ನು ಅನುಭವಿಸಿದ್ದಾರೆ, ಯುಪಿಎ ಸರ್ಕಾರದಲ್ಲೂ ಮಂತ್ರಿಯಾಗಿದ್ದರು. ರಾಜ್ಯಸಭೆಯಲ್ಲಿ ವಿಪಕ್ಷಗಳ ಉಪನಾಯಕನಾಗಿರುವ ಶರ್ಮಗೂ ಖರ್ಗೆ ರಾಜ್ಯಸಭೆ ಪ್ರವೇಶದಿಂದಾಗಿ ತಮಗೆ ಅವಕಾಶ ತಪ್ಪಲಿದೆ ಎಂಬ ಬೇಸರವಿದೆ.
ಜನನಾಯಕರಾಗಿ ಗುರುತಿಸಿಕೊಳ್ಳದ ಕೆಲ ಹಿರಿಯರನ್ನು ಬದಿಗೆ ಸರಿಸಿ, ಯುವ ರಾಜಕಾರಣಿಗಳಿಗೆ ರಾಹುಲ್ ಆದ್ಯತೆ ನೀಡುತ್ತಿರುವುದು ಸಹಜವಾಗಿಯೇ ಈ ಹಿರಿಯರ ನಿದ್ದೆಗೆಡಿಸಿದೆ. ಹಿಂದೆ ರಾಜೀವ್ ಗಾಂಧಿ ನಂತರ ಸೋನಿಯಾರೊಂದಿಗೆ ವರ್ಷಗಳ ಕಾಲ ಒಡನಾಟದಿಂದ ಕಾರ್ಯನಿರ್ವಹಿಸಿದ ಮೇಲೂ ಈ ಪರಿಯಲ್ಲಿ ನಿರ್ಲಕ್ಷಿಸುವುದು ಎಷ್ಟು ಸರಿ ಎನ್ನುವುದು ಅವರೆಲ್ಲರ ಪ್ರಶ್ನೆ. ದಶಕಗಳ ಕಾಲ ಅಧಿಕಾರ ಅನುಭವಿಸಿದರೂ, ಈಗಲೂ ಅಧಿಕಾರ ಬೇಕೆನ್ನುವ ಕೆಲ ಹಿರಿಯರ ಲಾಲಸೆಯಿಂದಾಗಿ ಜ್ಯೋತಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್​ರಂತಹ ಆಪ್ತರನ್ನು ಕಳೆದುಕೊಳ್ಳಬೇಕಾಗಿ ಬಂದಿರುವುದು ರಾಹುಲ್, ಪ್ರಿಯಾಂಕಾ ರನ್ನು ಕೆರಳಿಸಿದೆ. ಆದರೆ, ‘ರಾಹುಲ್ ಗಾಂಧಿ ಕೂಡ ಸಮರ್ಥ ನಾಯಕತ್ವ ಪ್ರದರ್ಶಿಸುವಲ್ಲಿ ವಿಫಲವಾಗಿದ್ದಾರೆ. ಪಕ್ಷ ಸಂಘಟನೆ ಬಲಗೊಂಡಿಲ್ಲ. ಚುನಾವಣೆಗಳ ಮೇಲೆ ಚುನಾವಣೆ ಸೋತರೂ, ಕಾಂಗ್ರೆಸ್ಸಿಗರು ಬೇರೆ ಪಕ್ಷಗಳನ್ನು ಸೇರುತ್ತಿದ್ದಾರೆ. ಸೋಲಿನ ಬಗ್ಗೆ ಹಿರಿಯ ನಾಯಕರನ್ನು ಕರೆಸಿ ಆತ್ಮಾವಲೋಕನ ಸಭೆ, ಚರ್ಚೆಗಳನ್ನು ನಡೆಸಲಾಗಿಲ್ಲ. ಕಾರ್ಯನೀತಿಗಳಲ್ಲಿ ಪರಿವರ್ತನೆ ತರುವ ಬಗ್ಗೆ ಕ್ರಮವಿಲ್ಲ. ಮೋದಿ ನಾಯಕತ್ವ, ಬಿಜೆಪಿಯನ್ನು ಎದುರಿಸಲು ರಾಹುಲ್ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿಲ್ಲ. ಓರ್ವ ನಾಯಕನಿಗಿರಬೇಕಾದ ಪರಿಪಕ್ವತೆ ಇಲ್ಲ. ರಾಹುಲ್ ಗಾಂಧಿ ನಾಯಕತ್ವವನ್ನು ಪ್ರಯೋಗಿಸಿಯಾಗಿದೆ ಮತ್ತು ಜನರು ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿರುವಾಗ ಪದೇಪದೇ ಅವರಿಗೇ ಆದ್ಯತೆ ನೀಡುವುದೇಕೆ’ ಎಂದು ಇದೇ ನಾಯಕರು ಅನೇಕ ಬಾರಿ ಪರಸ್ಪರ ರ್ಚಚಿಸಿದ್ದಾರೆ. ಆದರೆ, ಬಹಿರಂಗವಾಗಿ ಹೇಳಿಕೊಂಡಿಲ್ಲ. ಈಗ ಪರಿಸ್ಥಿತಿ ಬಿಗಡಾಯಿಸುತ್ತಿರುವುದು ಬಿಕ್ಕಟ್ಟಿನ ತೀವ್ರತೆ ಹೆಚ್ಚಿಸಿದೆ ಮತ್ತು ಪತ್ರ ಬರೆಯುವಂತೆ ಅವರನ್ನು ಪ್ರೇರೇಪಿಸಿದೆ.
ಶಿಸ್ತು ಕ್ರಮಕ್ಕೆ ಆಗ್ರಹ:ಪತ್ರ ಬರೆದ 23 ಮಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ ಒತ್ತಾಯಿಸಿದ್ದಾರೆ. ಗುಲಾಂ ನಬೀ ಆಜಾದ್, ಆನಂದ್ ಶರ್ಮ, ಮುಕುಲ್ ವಾಸ್ನಿಕ್ ಶಿಸ್ತಿನ ಕ್ರಮ ಎದುರಿಸಲು ತಾವು ಸಿದ್ಧ ಎಂದೂ ತಿಳಿಸಿದ್ದರೆನ್ನ ಲಾಗಿದೆ. ಇದೇ ವೇಳೆ, ಇಂದಿರಾ ಗಾಂಧಿ, ಸಂಜಯ್ ಗಾಂಧಿ ಜತೆಗೆ ತಾವು ಕೆಲಸ ಮಾಡಿದ್ದ ದಿನಗಳನ್ನು ನೆನೆಸಿಕೊಳ್ಳುತ್ತಾ ಆಜಾದ್ ಭಾವುಕರಾದರು ಎಂದೂ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಹಿರಿತಲೆಗಳಿಗೆ ರಮ್ಯಾ ಟೀಕೆ:ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ ವಿಚಾರದಲ್ಲಿ 23 ಹಿರಿಯ ನಾಯಕರು ಬರೆದ ಪತ್ರವು ಮಾಧ್ಯಮಗಳಿಗೆ ಸೋರಿಕೆಯಾಗಿದ್ದಕ್ಕೆ ಪಕ್ಷದ ಹಿರಿತಲೆಗಳನ್ನು ಮಾಜಿ ಸಂಸದೆ, ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಟೀಕಿಸಿದ್ದಾರೆ. ಪತ್ರವೊಂದೇ ಅಲ್ಲ, ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರ್ಚಚಿತ ಅಂಶಗಳು, ಪ್ರತಿಯೊಂದು ಬೆಳವಣಿಗೆಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿ, ಚರ್ಚೆಗೆ ಗ್ರಾಸ ಒದಗಿಸಿರುವುದು ಅದ್ಭುತ! ಎಂದು ಛೇಡಿಸಿದ್ದಾರೆ. ‘ರಾಹುಲ್​ಜಿ ತಪ್ಪು ಮಾಡಿದ್ದಾರೆ ಎಂದು ನನಗನಿಸುತ್ತದೆ. ಬಿಜೆಪಿ ಜತೆಗಷ್ಟೇ ಅಲ್ಲ, ಮಾಧ್ಯಮದವರ ಜತೆಗೂ ಕೈಜೋಡಿಸಿದ್ದಾರೆ ಎಂದು ಹೇಳಬೇಕಾಗಿತ್ತು’ ಎನ್ನುವ ಮೂಲಕ ಹಿರಿಯರ ಕಾಲೆಳೆದಿದ್ದಾರೆ. ರಾಹುಲ್ ಗಾಂಧಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಕಾರ್ಯಕಾರಿ ಸಮಿತಿ ಸಭೆ ಹೈಲೈಟ್ಸ್
ಕಾಂಗ್ರೆಸ್​ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಬಿಜೆಪಿ ರೀತಿಯಲ್ಲಿ ಬೇರೆ ಯಾರೋ ನಿಯಂತ್ರಿಸುವುದಿಲ್ಲ. ಗಾಂಧಿ ಕುಟುಂಬ ದೇಶಕ್ಕಾಗಿ ತ್ಯಾಗಮಾಡಿದೆ. ರಾಹುಲ್ ಅಧ್ಯಕ್ಷರಾಗಲಿ.
| ದಿನೇಶ್ ಗುಂಡೂರಾವ್ಕೆಪಿಸಿಸಿ ಅಧ್ಯಕ್ಷ
ಇಂದಿರಾ ಮತ್ತು ರಾಜೀವ್ ದೇಶಕ್ಕಾಗಿ ಪ್ರಾಣ ಕಳೆದುಕೊಂಡರು. ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಗಾಂಧಿ ಕುಟುಂಬದ ಪರ ಇದೆ.
| ಯು.ಟಿ.ಖಾದರ್ಮಾಜಿ ಸಚಿವ
ಗಾಂಧಿ ಕುಟುಂಬದ ಹಿರಿಯರು ಅಪಾರವಾದ ತ್ಯಾಗ, ಬಲಿದಾನ ಮಾಡಿದ್ದಾರೆ. ಸರ್ವಸ್ವವನ್ನೂ ದೇಶಕ್ಕಾಗಿ ಅರ್ಪಣೆ ಮಾಡಿದ್ದಾರೆ, ಅವರೇ ಅಧ್ಯಕ್ಷರಾಗಲಿ.
| ಎಸ್.ಆರ್.ಪಾಟೀಲ್ವಿಧಾನಪರಿಷತ್ ಪ್ರತಿಪಕ್ಷ ನಾಯಕ
ಇಂದಿನ ಕ್ಲಿಷ್ಟ ಸಮಯದಲ್ಲಿ ಕಾಂಗ್ರೆಸ್​ಗೆ ನಾಯಕತ್ವ ನೀಡಲು ಗಾಂಧಿ ಕುಟುಂಬವೇ ಸೂಕ್ತ.
| ಬಿ.ಜನಾರ್ದನ ಪೂಜಾರಿಕಾಂಗ್ರೆಸ್ ಹಿರಿಯ ಮುಖಂಡ
https://www.vijayavani.net/metro-likely-to-resume-schools-to-remain-closed/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + thirteen =
Remember me
