ಮುಂಬೈ:ಅಧಿಕ ವಿದೇಶಿ ಬಂಡವಾಳ ಹರಿದು ಬರುವಿಕೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ದೃಢವಾದ ಪ್ರವೃತ್ತಿಗೆ ಅನುಗುಣವಾಗಿ ಭಾರತದ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ ಮುಂದುವರಿದಿದ್ದು, ಎರಡೂ ಪ್ರಮುಖ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ದಾಖಲೆ ಮಟ್ಟ ಮುಟ್ಟಿವೆ. ಈ ಮೂಲಕ ಲಿಸ್ಟೆಡ್ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳ 296.48 ಲಕ್ಷ ಕೋಟಿ ರೂ. ದಾಟಿರುವುದು ಕೂಡ ದಾಖಲೆ ಆಗಿದೆ.
30 ಪ್ರಮುಖ ಷೇರುಗಳ ಬಿಎಸ್​ಇ ಸೂಚ್ಯಂಕ 803.14 ಅಂಶ (ಶೇ. 1.26) ಜಿಗಿತ ಕಂಡು 64,718.56 ಪಾಯಿಂಟ್​ನೊಂದಿಗೆ ದಿನದ ವ್ಯವಹಾರ ಮುಗಿಸಿತು. ದಿನದ ಮಧ್ಯದಲ್ಲಿ ಅದು 853.16 ಪಾಯಿಂಟ್ ಅಥವಾ ಶೇ. 1.33 ಏರಿಕೆ ಕಂಡು 64,768.58 ಅಂಶ ದಾಖಲಿಸಿತ್ತು. ಎನ್​ಎಸ್​ಇ ನಿಫ್ಟಿ 216.95 ಅಂಶದಷ್ಟು (ಶೇ. 1.14) ಏರಿಕೆಯಾಗಿ ದಾಖಲೆಯ 19,189.05ರಲ್ಲಿ ಕೊನೆಗೊಂಡಿತು. ದಿನದ ಮಧ್ಯದಲ್ಲಿ ಅದು 229.6 ಪಾಯಿಂಟ್ ಅಥವಾ ಶೇ. 1.21 ಏರಿಕೆ ಕಂಡು ದಿನದ ಮಧ್ಯದ ಸಾರ್ವಕಾಲಿಕ ಏರಿಕೆಯಾದ 19,201.70 ಅಂಶ ದಾಖಲಿಸಿತ್ತು.
ಸೆನ್ಸೆಕ್ಸ್ ವಿಭಾಗದಲ್ಲಿ ಶೇ. 4ಕ್ಕೂ ಅಧಿಕ ಏರಿಕೆಯೊಂದಿಗೆ ಮಹೀಂದ್ರಾ ಆಂಡ್ ಮಹೀಂದ್ರಾ ಅತ್ಯುತ್ತಮ ನಿರ್ವಹಣೆ ತೋರಿತು. ಇಂಡಸ್​ಇಂಡ್ ಬ್ಯಾಂಕ್, ಇನ್ಪೋಸಿಸ್, ಟಾಟಾ ಕನ್ಸಲ್ಟನ್ಸಿ ಸರ್ವೀಸಸ್, ಮಾರುತಿ, ಲಾರ್ಸನ್ ಆಂಡ್ ಟೂಬ್ರೋ, ಟೆಕ್ ಮಹೀಂದ್ರಾ, ವಿಪ್ರೊ, ಪವರ್ ಗ್ರಿಡ್, ಎಚ್​ಡಿಎಫ್​ಸಿ ಬ್ಯಾಂಕ್, ಬಾಲಾಜಿ ಫೈನಾನ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧಿಕ ಲಾಭ ಗಳಿಸಿದವು.. ಐಸಿಐಸಿಐ ಬ್ಯಾಂಕ್ ಮತ್ತು ಎನ್​ಟಿಪಿಸಿ ಹಿಂದೆ ಬಿದ್ದವು.
ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ಬೆಲೆ 80 ರೂ. ಹೆಚ್ಚಳವಾಗಿದ್ದು, 10 ಗ್ರಾಂ ದರ 59,030 ರೂ.ಗೆ ಏರಿದೆ. ಬೆಳ್ಳಿ ಬೆಲೆ 550 ರೂ. ತಗ್ಗಿದ್ದು, ಕೆ.ಜಿ. ಧಾರಣೆ 70,700 ರೂ.ಗೆ ಇಳಿದಿದೆ.
ಕೇಂದ್ರೀಯ ಬ್ಯಾಂಕ್​ನ ಮುಂದಿನ ತಲೆಮಾರಿನ ಡೇಟಾ ಸಂಗ್ರಹ ವ್ಯವಸ್ಥೆಯಾದ ಕೇಂದ್ರೀಕೃತ ಮಾಹಿತಿ ನಿರ್ವಹಣೆ ವ್ಯವಸ್ಥೆ (ಸಿಐಎಂಎಸ್) ಬಗ್ಗೆ ವರದಿ ಮಾಡಲು ಮೊದಲಿಗೆ ವಾಣಿಜ್ಯ ಬ್ಯಾಂಕ್​ಗಳು ಕ್ರಮಕೈಗೊಳ್ಳಲಿವೆ. ಆನಂತರ ನಗರ ಸಹಕಾರಿ ಬ್ಯಾಂಕ್​ಗಳು (ಯುಸಿಬಿ) ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್​ಬಿಎಫ್​ಸಿ) ಅದನ್ನು ಅನುಸರಿಸಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಹೇಳಿದ್ದಾರೆ. ಆರ್​ಬಿಐ ಕೇಂದ್ರ ಕಾರ್ಯಾಲಯದಲ್ಲಿ 17ನೇ ಅಂಕಿಸಂಖ್ಯೆ ದಿನ ಸಮ್ಮೇಳನದಲ್ಲಿ ಹೊಸ ವ್ಯವಸ್ಥೆಯನ್ನು ಬಿಡುಗಡೆ ಮಾಡಿ ದಾಸ್ ಮಾತನಾಡಿದರು. ಹೊಸ ವ್ಯವಸ್ಥೆಯು ಸಾರ್ವಜನಿಕರ ಬಳಕೆಗಾಗಿ ಹೆಚ್ಚು ದತ್ತಾಂಶಗಳನ್ನು ಒದಗಿಸಲಿದೆ. ಬಾಹ್ಯ ಬಳಕೆದಾರರಿಗೆ ಆನ್​ಲೈನ್ ಅಂಕಿಅಂಶ ವಿಶ್ಲೇಷಣೆಗೂ ನೆರವು ನೀಡಲಿದೆ ಎಂದು ಗವರ್ನರ್ ಹೇಳಿದರು. ಹಿಂದಿನ ಡೇಟಾಗಳನ್ನು ಪಡೆದು ಅವುಗಳ ಮೌಲ್ಯಮಾಪನಕ್ಕೂ ಹೊಸ ವ್ಯವಸ್ಥೆಯಲ್ಲಿ ಅನುಕೂಲ ಕಲ್ಪಿಸಲಾಗಿದೆ.
ಜುಲೈ-ಸೆಪ್ಟೆಂಬರ್ ಅವಧಿಯ ಎರಡನೇ ತ್ರೖೆಮಾಸಿಕಕ್ಕೆ ಅನ್ವಯವಾಗುವಂತೆ ಆಯ್ದ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರವನ್ನು ಕೇಂದ್ರ ಸರ್ಕಾರ ಶೇ. 0.3ರವರಗೆ ಹೆಚ್ಚಿಸಿದೆ. ಐದು ವರ್ಷ ಅವಧಯ ಆರ್​ಡಿಗೆ ಶೇ. 0.3ರಷ್ಟು ಬಡ್ಡಿ ಏರಿಕೆ ಆಗಿದ್ದು, ಶೇ. 6.5ಕ್ಕೆ ಹೆಚ್ಚಳ ಆಗಲಿದೆ. ಒಂದು ವರ್ಷದ ನಿಶ್ಚಿತ ಠೇವಣಿಗೆ ಶೇ. 0.1 ಬಡ್ಡಿ ಏರಿಕೆಯಾಗಿ ಶೇ. 7ಕ್ಕೆ ಪರಿಷ್ಕೃತವಾಗಿದೆ. ಮೂರು ವರ್ಷ ಮೇಲ್ಪಟ್ಟು ಮತ್ತು ಐದು ವರ್ಷದೊಳಗಿನ ಠೇವಣಿ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಯೋಜನೆ (ಎನ್​ಎಸ್​ಸಿ), ಸುಕನ್ಯಾ ಸಮೃದ್ಧಿ ಯೋಜನೆ, ಕಿಸಾನ್ ವಿಕಾಸ ಪತ್ರ (ಕೆವಿಪಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ. ಮಾಸಿಕ ಆದಾಯ ಯೋಜನೆಗಳ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಹೌಸಿಂಗ್ ಡೆವಲಪ್​ವೆುಂಟ್ ಫೈನಾನ್ಸ್ ಕಾರ್ಪೆರೇಷನ್ (ಎಚ್​ಡಿಎಫ್​ಸಿ) ಶನಿವಾರ ವಿಲೀನದ ನಂತರ ಅದು ಷೇರು ಮಾರುಕಟ್ಟೆ ಬಂಡವಾಳದಲ್ಲಿ ನಾಲ್ಕನೇ ಅತಿ ದೊಡ್ಡ ಸಾಲದಾತ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಅಲ್ಲದೆ ಜಗತ್ತಿನ ಅತ್ಯಂತ ಮೌಲ್ಯಯುತ ಬ್ಯಾಂಕ್​ಗಳಲ್ಲಿ ಒಂದೆಂಬ ಸ್ಥಾನವನ್ನು ಪಡೆಯಲಿದೆ. ಭಾರತದಲ್ಲೇ ಬೆಳೆದ ಕಂಪನಿಯೊಂದು ಜಾಗತಿಕ ಮಟ್ಟದಲ್ಲಿ ಇಂಥ ಸ್ಥಾನ ಪಡೆಯುತ್ತಿರುವುದು ಇದೇ ಮೊದಲ ಸಲವಾಗಿದೆ. ಜೆಪಿ ಮಾರ್ಗನ್ ಚೇಸ್ ಆಂಡ್ ಕಂಪನಿ, ಇಂಡಸ್ಟ್ರಿಯಲ್ ಆಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ, ಮತ್ತು ಬ್ಯಾಂಕ್ ಆಫ್ ಅಮೆರಿಕ ಕಾರ್ಪೆರೇಷನ್ ಹಾಲಿ ಮೂರು ಮೌಲ್ಯಯುತ ಜಾಗತಿಕ ಬ್ಯಾಂಕ್​ಗಳಾಗಿವೆೆ. ಅವುಗಳ ಮೌಲ್ಯ 172 ಶತಕೋಟಿ ಡಾಲರ್. ಎಚ್​ಡಿಎಫ್​ಸಿ ಬ್ಯಾಂಕ್ 120 ದಶಲಕ್ಷ ಗ್ರಾಹಕರನ್ನು ಹೊಂದಲಿದೆ. ಅದು ಜರ್ಮನಿಯ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ. ಶಾಖೆಗಳ ಸಂಖ್ಯೆ 8,300ಕ್ಕೆ ಏರಲಿದೆ ಮತ್ತು ಉದ್ಯೋಗಿಗಳ ಒಟ್ಟು ಸಂಖ್ಯೆ 1,77,000ಕ್ಕಿಂತ ಅಧಿಕವಾಗಲಿದೆ. ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜಗಳಾದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ಮತ್ತು ಐಸಿಐಸಿಐ ಬ್ಯಾಂಕ್​ಗಳನ್ನು ಕೂಡ ಎಚ್​ಡಿಎಫ್​ಸಿ ಹಿಂದಿಕ್ಕಲಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 10 =
Remember me
