ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆಯ ಏಕನಾಥ ಶಿಂಧೆ ಬಣ ಸೇರಿ ಸರ್ಕಾರ ರಚನೆ ಮಾಡಿದ್ದರೂ, ಶಿವಸೇನೆ ಪಕ್ಷ ಮತ್ತು ಚಿಹ್ನೆ ಯಾರ ಪಾಲಾಗುತ್ತದೆ ಎನ್ನುವುದು ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆ. ಬಹುಶಃ ಈ ಪ್ರಶ್ನೆಗೆ ಉತ್ತರ ಸಿಗುವುದು ಕೇಂದ್ರ ಚುನಾವಣಾ ಆಯೋಗದಲ್ಲೇ. ಚುನಾವಣೆ ಚಿಹ್ನೆಗಳು (ಮೀಸಲು ಮತ್ತು ಹಂಚಿಕೆ) ಆದೇಶ 1968ರ ಪ್ರಕಾರ, ಕೇಂದ್ರ ಚುನಾವಣಾ ಆಯೋಗವು ಶಿವಸೇನೆ ಪಕ್ಷದ ಚಿಹ್ನೆಯನ್ನು ಯಾರು ಉಳಿಸಿಕೊಳ್ಳಬೇಕು ಮತ್ತು ಯಾವ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.
ಬಿಜೆಪಿಯ ರಾಹುಲ್ ನಾರ್ವೆಕರ್ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಇವರ ಮೂಲಕ ಬಂಡಾಯ ಶಾಸಕರ ಪರ ಅನರ್ಹತೆ ಅರ್ಜಿಗಳ ಮೇಲೆ ತೀರ್ಪು ನೀಡುವಂತೆ ಶಿಂಧೆ ಸರ್ಕಾರ ನೋಡಿಕೊಳ್ಳಬಹುದು. ಮೇಲಾಗಿ, ವಿಧಾನಸಭೆಯಲ್ಲಿ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಉದ್ಧವ್ ಬಣದ 16 ಶಾಸಕರಿಗೆ ವ್ಹಿಪ್ ಜಾರಿ ಮಾಡಿ, ನಂತರ ವ್ಹಿಪ್ ಉಲ್ಲಂಘಿಸಿದ ಕಾರಣಕ್ಕಾಗಿ 16 ಶಾಸಕರನ್ನು ಅನರ್ಹಗೊಳಿಸುವ ಮಟ್ಟಕ್ಕೂ ಹೋಗಬಹುದು. ಆದರೆ, ಬಂಡಾಯ ಶಾಸಕರನ್ನು ಅನರ್ಹಗೊಳಿಸುವ ವಿಚಾರ ಇನ್ನೂ ಸುಪ್ರೀಂ ಕೋರ್ಟ್​ನಲ್ಲಿರುವುದು ಗಮನಾರ್ಹ.
ಬಹುಪಾಲು ಸೇನಾ ಶಾಸಕರ ಬೆಂಬಲವಿದ್ದರೂ, ಅದೊಂದೇ ಕಾರಣಕ್ಕೆ ಶಿಂಧೆ ಬಣವನ್ನು ‘ನಿಜವಾದ ಶಿವಸೇನೆ’ ಎಂದು ಪರಿಗಣಿಸಲಾಗದು ಎನ್ನುವುದು ಹಲವರ ಅಭಿಮತ. ಏಕೆಂದರೆ, ಪಕ್ಷದ ನಿರ್ಧಾರ ತೆಗೆದುಕೊಳ್ಳುವ ವಿವಿಧ ಸಂಸ್ಥೆಗಳು, ಟ್ರೇಡ್ ಯೂನಿಯನ್, ಮಹಿಳಾ ವಿಭಾಗ, ಯುವ ಘಟಕಗಳಂತಹ ಇತರ ಚುನಾಯಿತ ಶಾಖೆಗಳು, ಪಕ್ಷದ ಸದಸ್ಯರ ಸಂಖ್ಯೆ, ಸಕ್ರಿಯ ಸದಸ್ಯರು ಸೇರಿ ಎಲ್ಲರ ಅಭಿಪ್ರಾಯವೂ ಇಲ್ಲಿ ಮಹತ್ವದ್ದಾಗಲಿದೆ. ಚುನಾವಣಾ ಆಯೋಗದ ನಿರ್ಧಾರ ನಿರ್ದಿಷ್ಟ ಬಣಕ್ಕೆ ತೃಪ್ತಿ ತರದಿದ್ದರೆ ನ್ಯಾಯಾಲಯದ ಕದತಟ್ಟುವ ಅವಕಾಶವಿದೆ.
ಎರಡೂ ಬಣಗಳು ಒಂದೇ ಚಿಹ್ನೆಯ ಮೇಲೆ ಹಕ್ಕು ಸಾಧಿಸಿದಾಗ ಚುನಾವಣಾ ಆಯೋಗ ಮೊದಲು ಪಕ್ಷದ ಸಂಘಟನೆ ಮತ್ತು ಅದರ ಶಾಸಕಾಂಗ ವಿಭಾಗದಲ್ಲಿ ಪ್ರತಿ ಬಣ ಹೊಂದಿರುವ ಬೆಂಬಲವನ್ನು ಪರಿಶೀಲಿಸುತ್ತದೆ. ನಂತರ ಅದು ರಾಜಕೀಯ ಪಕ್ಷದಲ್ಲಿರುವ ಉನ್ನತ ಪದಾಧಿಕಾರಿಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳನ್ನು ಗುರುತಿಸಿ, ಅದರ ಎಷ್ಟು ಸದಸ್ಯರು ಅಥವಾ ಪದಾಧಿಕಾರಿಗಳು ಯಾವ ಬಣದೊಂದಿಗಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುತ್ತದೆ. ನಂತರ ಎರಡೂ ಬಣದ ಶಾಸಕರು ಮತ್ತು ನೀತಿ ನಿರೂಪಕರ ಸಂಖ್ಯೆಯನ್ನು ಎಣಿಸುತ್ತದೆ. ಇವೆಲ್ಲವನ್ನು ಪರಿಗಣನೆಗೆ ತೆಗೆದುಕೊಂಡು ಆಯೋಗ ಎರಡೂ ಬಣಗಳ ಪರ ಅಥವಾ ಒಬ್ಬರ ಪರ ತೀರ್ಪು ನೀಡಬಹುದು. ಎರಡೂ ಬಣಗಳ ಪರ ತೀರ್ಪು ಬಂದಲ್ಲಿ ಆಯೋಗವು ಪಕ್ಷದ ಚಿಹ್ನೆ ರದ್ದುಗೊಳಿಸಿ, ಹೊಸ ಹೆಸರು ಮತ್ತು ಚಿಹ್ನೆಗಳೊಂದಿಗೆ ನೋಂದಾಯಿಸಲು ಸೂಚಿಸಬಹುದು. ಒಂದು ವೇಳೆ ಪಕ್ಷದ ಆಂತರಿಕ ಚುನಾವಣೆಗಳು ಸಮೀಪದಲ್ಲಿದ್ದರೆ, ತಾತ್ಕಾಲಿಕ ಚಿಹ್ನೆಯನ್ನು ಆಯ್ಕೆ ಮಾಡಲು ಎರಡೂ ಬಣಗಳನ್ನು ಕೇಳಬಹುದು. ಭವಿಷ್ಯದಲ್ಲಿ ಎರಡೂ ಬಣಗಳು ಒಂದಾಗಲು ಬಯಸಿ, ಮೂಲ ಚಿಹ್ನೆಯನ್ನು ಮರಳಿ ಪಡೆಯಲು ನಿರ್ಧರಿಸಿದರೆ, ಹಳೇ ಚಿಹ್ನೆಯನ್ನು ಮರುಸ್ಥಾಪಿಸಲು ನಿರ್ಧರಿಸಬಹುದು.
ಏಕನಾಥ ಶಿಂಧೆ ಬಣದ 39 ಶಾಸಕರ ಪಕ್ಷದ ಸ್ಥಿತಿ ಏನೆಂಬುದು ರೋಚಕ ಸಂಗತಿ. ಶಿವಸೇನೆ ಶಾಸಕಾಂಗ ಪಕ್ಷದ ಮೂರನೇ ಎರಡಕ್ಕಿಂತ ಮಿಗಿಲಾದ ಶಾಸಕರು ಶಿಂಧೆ ಬಣದಲ್ಲಿ ಸೇರಿದ್ದಾರೆ. ಈ 39 ಶಾಸಕರು ಶಿವಸೇನೆಯ ಬಂಡಾಯ ಶಾಸಕರೇ ಹೊರತು ಅಸಲು ಶಿವಸೇನಾ ತಮ್ಮದೇ ಎಂಬುದು ಠಾಕ್ರೆ ಬಣದ ವಾದ. ಇಂತಹ ಬಂಡಾಯ ಶಾಸಕರು ಶಿವಸೇನೆ ಪಕ್ಷವನ್ನು ವಿಭಜಿಸಲು ಹೊರಟಿದ್ದಾರೆ, ಹಾಗಾಗಿ ಇವರು ಸಂವಿಧಾನದ 10ನೇ ಶೆಡ್ಯೂಲ್ ಅನ್ವಯ ಅನರ್ಹಗೊಂಡಿರುತ್ತಾರೆ ಎಂಬುದು ಅವರ ವಾದ. ಏಕನಾಥ ಶಿಂಧೆ ಉವಾಚವೇನೆಂದರೆ, ತಾವು ಶಿವಸೇನೆ ಪಕ್ಷವನ್ನು ವಿಭಜಿಸಲು ಹೊರಟಿರುವ ಬಂಡಾಯ ಶಾಸಕರಲ್ಲ, ತಮ್ಮದೇ ಅಸಲಿ ಶಿವಸೇನೆ ಪಕ್ಷ ಎಂಬುದು.
ಇಂತಹ ವಾದಗಳ ಹಿನ್ನೆಲೆಯಲ್ಲಿ ಸಂವಿಧಾನದ 10ನೇ ಶೆಡ್ಯೂಲ್​ನ ಅಂಶಗಳನ್ನು ಅವಲೋಕಿಸುವುದು ಸೂಕ್ತ. ಹತ್ತನೇ ಶೆಡ್ಯೂಲ್​ನ ಮೂರನೇ ಪರಿಚ್ಛೇದದ ಪ್ರಕಾರ ಯಾವುದೇ ಶಾಸಕಾಂಗ ಪಕ್ಷದ ಮೂರನೇ ಒಂದಕ್ಕೆ ಕಡಿಮೆ ಇಲ್ಲದ ಶಾಸಕರು ಹೊರಬಂದರೆ ಅಂತಹ ಶಾಸಕರು ಪಕ್ಷವನ್ನು ವಿಭಜನೆಗೊಳಿಸಿದ್ದಾರೆಂದರ್ಥ. ಆದ್ದರಿಂದ ಅವರು ಪಕ್ಷಾಂತರ ತಡೆ ಕಾಯ್ದೆಯಡಿ ಅನರ್ಹಗೊಳ್ಳುವುದಿಲ್ಲ. ಆದರೆ, ಈ ಮೂರನೇ ಪರಿಚ್ಛೇದ 2003ರಲ್ಲಿ ಸಂಸತ್ತಿನಲ್ಲಿ ರದ್ದುಗೊಂಡು, ಸಂವಿಧಾನದಲ್ಲಿ ಉಳಿದಿಲ್ಲ. ಆದರೆ, ಹತ್ತನೇ ಶೆಡ್ಯೂಲ್​ನ ನಾಲ್ಕನೇ ಪರಿಚ್ಛೇದ ಪ್ರಸ್ತುತ ಪ್ರಕರಣಕ್ಕೆ ಸೂಕ್ತವಾಗಿ ಅನ್ವಯಿಸುತ್ತದೆ. ಈ ಪರಿಚ್ಛೇದದ ಪ್ರಕಾರ ಯಾವುದೇ ಶಾಸಕಾಂಗ ಪಕ್ಷದ ಶಾಸಕರು ಮತ್ತೊಂದು ಪಕ್ಷದೊಡನೆ ವಿಲೀನವಾದರೆ ಪಕ್ಷಾಂತರ ತಡೆ ಕಾಯಿದೆಯ ಅನ್ವಯ ಅನರ್ಹರಾಗುವುದಿಲ್ಲ. ನಾಲ್ಕನೇ ಪರಿಚ್ಛೇದದ ಎರಡನೇ ಭಾಗ ಅತಿ ಮುಖ್ಯವಾಗಿ ಗಮನಿಸಬೇಕಾದ ಅಂಶ. ಶಾಸಕಾಂಗ ಪಕ್ಷದ ಮೂರನೇ ಎರಡಂಶಕ್ಕೆ ಕಡಿಮೆ ಇಲ್ಲದಂತೆ ಶಾಸಕರು ಬೇರೆ ಪಕ್ಷದೊಡನೆ ವಿಲೀನವಾಗಲು ಒಪ್ಪಿಗೆ ಕೊಟ್ಟಿದ್ದಲ್ಲಿ ಕಾನೂನಿನ ಪ್ರಕಾರ ಅಂತಹ ರಾಜಕೀಯ ಪಕ್ಷ ಮತ್ತೊಂದು ಪಕ್ಷದೊಡನೆ ವಿಲೀನವಾಗಿದೆ ಎಂದು ಭಾವಿಸಲಾಗುತ್ತದೆ. ಶಿವಸೇನಾ ಪಕ್ಷ ಸಾರಾಸಗಟಾಗಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯೊಡನೆ ವಿಲೀನವಾಗದ ಹೊರತು ಏಕನಾಥ ಶಿಂಧೆ ಬಣದ ಶಾಸಕರು ಅನರ್ಹಗೊಂಡಿರುತ್ತಾರೆ ಎನ್ನುವ ವಾದದಲ್ಲಿ ಎಳ್ಳಷ್ಟೂ ಹುರುಳಿಲ್ಲ.
|ರಾಘವೇಂದ್ರ ಶ್ರೀವತ್ಸಸುಪ್ರೀಂಕೋರ್ಟ್ ವಕೀಲರು
ಸದ್ಯ ಶಿವಸೇನೆಯಲ್ಲಿನ ಒಡಕು ಶಾಸಕಾಂಗ ಪಕ್ಷದ ಮಟ್ಟದಲ್ಲಿದ್ದು, ಈ ಒಡಕು ಸಾಂಸ್ಥಿಕ ಮಟ್ಟದಲ್ಲಿದೆಯೋ ಎಂಬ ಬಗ್ಗೆ ಖಚಿತತೆ ಇಲ್ಲ. ಏಕನಾಥ ಶಿಂಧೆ ಗುಂಪು ಶಿವಸೇನೆ ಶಾಸಕಾಂಗ ಪಕ್ಷದ 2/3 ಶಾಸಕರ ಬೆಂಬಲ ಹೊಂದಿದ್ದರೆ, ಅವರನ್ನು ಪ್ರತ್ಯೇಕ ಗುಂಪಾಗಿ ಗುರುತಿಸಲಾಗುತ್ತದೆ ಮತ್ತು ಸಂವಿಧಾನದ ಹತ್ತನೇ ಶೆಡ್ಯೂಲ್​ನ ಪ್ಯಾರಾ 4(2) ಅಡಿಯಲ್ಲಿ ಅನರ್ಹತೆಯಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ, ಶಿಂಧೆ ನೇತೃತ್ವದ 2/3ರ ಈ ಗುಂಪು ಸಂಘಟನಾ ಮಟ್ಟದಲ್ಲಿ ಶಿವಸೇನೆಯ ಮೇಲೆ ಹಿಡಿತ ಸಾಧಿಸುವುದಿಲ್ಲ. ಶಿವಸೇನೆಯ ಆಸ್ತಿ ಮತ್ತು ಪಕ್ಷದ ಚಿಹ್ನೆ ಉದ್ಧವ್ ಠಾಕ್ರೆ ಬಳಿಯೇ ಇರುತ್ತದೆ. ಶಿಂಧೆ ಗುಂಪು ಸಂಘಟನಾ ಮಟ್ಟದಲ್ಲಿ ಶಿವಸೇನೆಯ ಮೇಲೆ ಹಿಡಿತ ಸಾಧಿಸಲು ಬಯಸಿದರೆ, ಪಕ್ಷದ ಉಪನಿಯಮದ ಪ್ರಕಾರ ಸಾಮಾನ್ಯ ಸಭೆಯನ್ನು ಕರೆಯಬೇಕು. ಈ ವಿಷಯದಲ್ಲಿ ಯಾವುದೇ ವಿವಾದವಿದ್ದರೂ ಅದನ್ನು ಸಿವಿಲ್ ನ್ಯಾಯಾಲಯ ನಿರ್ಧರಿಸುತ್ತದೆ.
|ಮೋಹನ್ ಕಾತರಕಿಸುಪ್ರೀಂ ಕೋರ್ಟ್ ವಕೀಲರು
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − three =
Remember me
