ಕನಿಷ್ಠ 11 ಸಂಕೀರ್ಣ ಜೆಟ್ ಇಂಜಿನ್ ತಂತ್ರಜ್ಞಾನಗಳ ವರ್ಗಾವಣೆಗೆ ಅನುಕೂಲವಾಗುವಂತಹ ಮಹತ್ವದ ಒಪ್ಪಂದವೊಂದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೆರಿಕಕ್ಕೆ ಕೈಗೊಂಡಿರುವ ಅಧಿಕೃತ ಭೇಟಿಯ ಸಂದರ್ಭದಲ್ಲಿ ಘೊಷಿಸಲಾಗಿದೆ. ಸ್ವದೇಶಿ ಲಘು ಯುದ್ಧ ವಿಮಾನ (ಎಲ್​ಸಿಎ) ತೇಜಸ್ ಎಂಕೆ2ಗಾಗಿ ಅಮೆರಿಕದ ಬಹುರಾಷ್ಟ್ರೀಯ ಕಂಪನಿ ಜನರಲ್ ಎಲೆಕ್ಟ್ರಿಕ್​ನ (ಜಿಇ) ಎಫ್ 414 ಇಂಜಿನ್​ಗಳನ್ನು ಭಾರತದಲ್ಲಿ ಪರವಾನಗಿ ಅಡಿಯಲ್ಲಿ ತಯಾರಿಸುವುದಕ್ಕಾಗಿ ಜಿಇ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ನಡುವೆ ಈ ಒಪ್ಪಂದ ಏರ್ಪಟ್ಟಿದೆ.
ಈ ತಿಂಗಳ ಆರಂಭದಲ್ಲಿ ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರ ನಡುವಿನ ಮಾತುಕತೆಯಲ್ಲಿ ತಂತ್ರಜ್ಞಾನದ ವರ್ಗಾವಣೆಯ ಸಾಧ್ಯತೆಯ ಒಪ್ಪಂದವನ್ನು ರ್ಚಚಿಸಲಾಗಿತ್ತು. ಅಲ್ಲದೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅಮೆರಿಕದ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರನ್ನು ಫೆಬ್ರವರಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಸಂಕೀರ್ಣ ಮತ್ತು ಆಧುನಿಕ ತಂತ್ರಜ್ಞಾನ ಕುರಿತು ಆರಂಭಿಕ ಕ್ರಮಗಳಿಗೆ ಅಮೆರಿಕ-ಭಾರತ ಚಾಲನೆ ನೀಡಿದ್ದವು. ಆಗಲೂ ಈ ವಿಷಯ ಕುರಿತು ಚರ್ಚೆ ನಡೆದಿತ್ತು.
ಅಮೆರಿಕ, ರಷ್ಯಾ, ಬ್ರಿಟನ್ ಮತ್ತು ಫ್ರಾನ್ಸ್​ನಂತಹ ಕೆಲವೇ ದೇಶಗಳು ಯುದ್ಧ ವಿಮಾನಗಳಿಗೆ ಶಕ್ತಿ ತುಂಬುವ ಇಂಜಿನ್ ತಯಾರಿಸಲು ಬೇಕಾದ ತಂತ್ರಜ್ಞಾನ ಮತ್ತು ಲೋಹಶಾಸ್ತ್ರವನ್ನು ಕರಗತ ಮಾಡಿಕೊಂಡಿವೆ. ಭಾರತವು ಈ ಪಟ್ಟಿಯಲ್ಲಿಲ್ಲ. ಆದರೂ ಕ್ರಯೋಜೆನಿಕ್ ರಾಕೆಟ್ ಇಂಜಿನ್​ಗಳು ಸೇರಿದಂತೆ ಹಲವಾರು ನಿರ್ಣಾಯಕ ತಂತ್ರಜ್ಞಾನಗಳ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸುವ ಭಾರತದ ಪ್ರಯತ್ನ ನಿರಂತರವಾಗಿ ಮುಂದುವರಿದಿದೆ. ಡಿಆರ್​ಡಿಒದ ಗ್ಯಾಸ್ ಟರ್ಬೆನ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್ (ಜಿಟಿಆರ್​ಇ) ಮೊದಲು ಹಗುರ ಯುದ್ಧ ವಿಮಾನಕ್ಕಾಗಿ (ಎಲ್​ಸಿಎ) ಜಿಟಿಎಕ್ಸ್-37 ಇಂಜಿನ್ ಅಭಿವೃದ್ಧಿಪಡಿಸಲು ಮುಂದಾಯಿತು. ತರುವಾಯ, ಮಹತ್ವಾಕಾಂಕ್ಷೆಯ ಕಾವೇರಿ ಇಂಜಿನ್ ಯೋಜನೆಯನ್ನು 1989ರ ಕೊನೆಯಲ್ಲಿ ಮಂಜೂರು ಮಾಡಲಾಯಿತು. ಈ ಯೋಜನೆಯಡಿ ಒಂಬತ್ತು ಮೂಲ ಮಾದರಿ ಇಂಜಿನ್​ಗಳು ಮತ್ತು ನಾಲ್ಕು ಪ್ರಧಾನ ಇಂಜಿನ್​ಗಳನ್ನು ಅಭಿವೃದ್ಧಿಪಡಿಸಲಾಗಿದೆ. 3,217 ಗಂಟೆಗಳ ಇಂಜಿನ್ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. ಎತ್ತರದಲ್ಲಿ ಹಾರಾಟ ಪರೀಕ್ಷೆಗಳು ಮತ್ತು ಫ್ಲೈಯಿಂಗ್ ಟೆಸ್ಟ್ ಬೆಡ್ (ಎಫ್​ಟಿಬಿ) ಪ್ರಯೋಗಗಳು ಪೂರ್ಣಗೊಂಡಿವೆ. ಆದರೆ, ಯುದ್ಧ ವಿಮಾನಗಳಿಗೆ ಈ ಇಂಜಿನ್​ಗಳು ಸೂಕ್ತವೆಂದು ಕಂಡುಬಂದಿಲ್ಲ. ಇಂಜಿನ್​ನ ಆರ್ದ್ರ ಒತ್ತಡದಲ್ಲಿ ಒಂದು ಪ್ರಮುಖ ಕೊರತೆಯಿದೆ. ಇದು 81 ಕಿಲೋ ನ್ಯೂಟನ್ ಬದಲಾಗಿ ಕೇವಲ 70.4 ಕಿಲೋ ನ್ಯೂಟನ್ ಶಕ್ತಿಯನ್ನು ಉತ್ಪಾದಿಸುತ್ತದೆ.
2011ರಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಅವರು ಹೆಚ್ಚಿನ ವೆಚ್ಚದ ಹೊರತಾಗಿಯೂ ಎಲ್​ಸಿಎಗಾಗಿ ಇಂಜಿನ್ ಉತ್ಪಾದಿಸಲು ಅಸಮರ್ಥವಾಗಿದ್ದಕ್ಕೆ ಜಿಟಿಆರ್​ಇಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಸಿಎ ತೇಜಸ್ ಅನ್ನು ಜಿಇ- 404 ಇಂಜಿನ್​ನೊಂದಿಗೆ ಸಂಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು 2021ರಲ್ಲಿ ಸಂಸತ್ತಿಗೆ ನೀಡಿದ ಹೇಳಿಕೆಯಲ್ಲಿ, ಕಾವೇರಿ ಇಂಜಿನ್ ಯೋಜನೆಯ ಮೂಲಕ ನಿರ್ವಿುಸಲಾದ ತಾಂತ್ರಿಕ ಸಾಮರ್ಥ್ಯಗಳನ್ನು ಡ್ರೋನ್​ಗಳಲ್ಲಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದೆ.
ಯುದ್ಧ ವಿಮಾನಗಳಿಗೆ ಸುಧಾರಿತ ಇಂಜಿನ್​ಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಹೊಂದಿರುವ ದೇಶಗಳು ಸಾಮಾನ್ಯವಾಗಿ ಅವುಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಜಿಇ ಕಂಪನಿಯ ಎಫ್ 414 ಇಂಜಿನ್​ಗಳನ್ನು ತಯಾರಿಸಲು ಅವಕಾಶ ಕಲ್ಪಿಸುವ ಈ ಒಪ್ಪಂದವು ಮಹತ್ವದ ದಾಪುಗಾಲಾಗಿದೆ. ಈ ಒಪ್ಪಂದವು ಸುಧಾರಿತ ಯುದ್ಧ ಜೆಟ್ ಇಂಜಿನ್ ತಂತ್ರಜ್ಞಾನದ ಭಾರತದ ದೀರ್ಘಾವಧಿಯ ಅನ್ವೇಷಣೆಯನ್ನು ಕೊನೆಗೊಳಿಸುತ್ತದೆ.
ಜಿಇ ಪ್ರಕಾರ ಎಂಟು ರಾಷ್ಟ್ರಗಳು ಎಫ್ 414 ಇಂಜಿನ್ ಚಾಲಿತ ವಿಮಾನಗಳನ್ನು ಬಳಸುತ್ತವೆ. ಎಫ್ 414-ಜಿಇ-400 ಇಂಜಿನ್​ಗಳು ಅಮೆರಿಕ ನೌಕಾಪಡೆಯ ಬೋಯಿಂಗ್ ಎಫ್/ಎ- 18ಇ/ಎಫ್ ಸೂಪರ್ ಹಾರ್ನೆಟ್ ಮತ್ತು ಇಎ18ಜಿ ಗ್ರೋಲರ್ ಎಲೆಕ್ಟ್ರಾನಿಕ್ ದಾಳಿ ವಿಮಾನಗಳಿಗೆ ಶಕ್ತಿ ನೀಡುತ್ತವೆ. ಸಾಬ್ ಕಂಪನಿಯ ಗ್ರಿಪೆನ್ ಇ/ಎಫ್ ಯುದ್ಧ ವಿಮಾನಗಳಿಗೆ ಎಫ್ 414ಜಿ ಇಂಜಿನ್​ಗಳನ್ನು ಬಳಸಲಾಗುತ್ತದೆ. ಎಫ್ 414 ಇಂಜಿನ್​ಗಳನ್ನು ಕೊರಿಯಾದ ಕೆಎಫ್-ಎಕ್ಸ್ ವಿಮಾನಗಳಲ್ಲಿಯೂ ಬಳಸಲಾಗುತ್ತದೆ.
ಭಾರತದ ಎಸಿಎ ತೇಜಸ್ ಎಂಕೆ2 ಯುದ್ಧ ವಿಮಾನಗಳಲ್ಲಿ ಎಫ್414-ಐಎನ್​ಎಸ್6 ಇಂಜಿನ್​ಗಳನ್ನು ಬಳಸಲಾಗುತ್ತದೆ. ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿಆರ್​ಡಿಒ) ಏರೋನಾಟಿಕಲ್ ಡೆವಲಪ್​ವೆುಂಟ್ ಏಜೆನ್ಸಿ (ಎಡಿಎ) ಈ ಇಂಜಿನ್​ಗಳನ್ನು ಆಯ್ಕೆ ಮಾಡಿದೆ. ಎಲ್​ಸಿಎ ತೇಜಸ್ ಯುದ್ಧವಿಮಾನಗಳಿಗೆ ಜಿಇ 404-ಐಎನ್ 20 ಇಂಜಿನ್​ಗಳನ್ನು ಬಳಸಲಾಗಿದೆ. ಜಿಇ 404 ಇಂಜಿನ್​ನ ಮೂಲ ವಿನ್ಯಾಸವನ್ನು ಎಫ್414ನಲ್ಲಿ ನಕಲು ಮಾಡಲಾಗಿದ್ದು, ಇದನ್ನು 1970ರ ದಶಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಭಾರತದ ಭವಿಷ್ಯದ ಹಾಗೂ ಐದನೇ ತಲೆಮಾರಿನ ಯುದ್ಧ ವಿಮಾನಗಳಾದ ಅಡ್ವಾನ್ಸ್​ಡ್ ಮೀಡಿಯಂ ಕಾಂಬ್ಯಾಟ್ ಏರ್​ಕ್ರಾಫ್ಟ್ (ಎಎಂಸಿಎ)ಗಳಿಗೆ ಕೂಡ ಎಫ್414 ಇಂಜಿನ್​ಗಳ ಮೂಲಮಾದರಿಗಳನ್ನು ಬಳಸಿಕೊಳ್ಳಬಹುದಾಗಿದೆ.
ವಾಷಿಂಗ್ಟನ್: ನರೇಂದ್ರ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಕ್ರಮಕ್ಕೆ ಭಾರಿ ಉತ್ತೇಜನ ನೀಡುವಂತಹ ಬೆಳವಣಿಗೆಯೊಂದು ಗುರುವಾರ ನಡೆದಿದೆ. ಭಾರತೀಯ ವಾಯುಪಡೆಗೆ ಭಾರತದಲ್ಲಿಯೇ ಫೈಟರ್ ಜೆಟ್ ಇಂಜಿನ್​ಗಳನ್ನು ತಯಾರಿಸಲು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಜತೆ ಕೈಜೋಡಿಸಿರುವುದಾಗಿ ಜನರಲ್ ಎಲೆಕ್ಟ್ರಿಕ್ (ಜಿಇ) ಪ್ರಕಟಿಸಿದೆ.
ವಾಷಿಂಗ್ಟನ್​ನಲ್ಲಿ ಜನರಲ್ ಎಲೆಕ್ಟ್ರಿಕ್ ಅಧ್ಯಕ್ಷ ಎಚ್. ಲಾರೆನ್ಸ್ ಕಲ್ಪ್ ಜೂನಿಯರ್ ಅವರನ್ನು ಪ್ರಧಾನಿ ಮೋದಿ ಭೇಟಿಯಾದ ಕೆಲವೇ ಗಂಟೆಗಳ ನಂತರ ಈ ಘೊಷಣೆ ಹೊರಬಿದ್ದಿದೆ. ಸಭೆಯ ನಂತರ, ಪ್ರಧಾನ ಮಂತ್ರಿ ಕಚೇರಿಯು ಜಿಇ ಮುಖ್ಯಸ್ಥರೊಂದಿಗೆ ಪ್ರಧಾನಿಯವರ ಫೋಟೋಗಳನ್ನು ಟ್ವೀಟ್ ಮಾಡಿದೆ.
ಭಾರತದಲ್ಲಿ ಉತ್ಪಾದನೆಯನ್ನು ಉತ್ತೇಜಿಸಲು ಜಿಇಯ ಉನ್ನತ ತಂತ್ರಜ್ಞಾನದ ಸಹಯೋಗದ ಕುರಿತು ಇಬ್ಬರೂ ರ್ಚಚಿಸಿದರು ಎಂದು ಟ್ವೀಟ್ ಮಾಡಲಾಗಿದೆ.
ಪ್ರಧಾನಿ ಮೋದಿಯವರ ಅಮೆರಿಕ ಪ್ರವಾಸದ ನಡುವೆ ಏರ್ಪಟ್ಟಿರುವ ಈ ತಿಳಿವಳಿಕೆ ಒಪ್ಪಂದವು ಒಂದು ಪ್ರಮುಖ ಮೈಲಿಗಲ್ಲು ಮತ್ತು ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವಲ್ಲಿ ಪ್ರಮುಖ ಅಂಶವಾಗಿದೆ ಎಂದು ಜಿಇ ಏರೋಸ್ಪೇಸ್ ಹೇಳಿಕೆಯಲ್ಲಿ ತಿಳಿಸಿದೆ. ಲಘು ಯುದ್ಧ ವಿಮಾನ ಎಂಕೆ 2 ಕಾರ್ಯಕ್ರಮದ ಭಾಗವಾಗಿ ಭಾರತೀಯ ವಾಯುಪಡೆಗೆ 99 ಇಂಜಿನ್​ಗಳನ್ನು ನಿರ್ವಿುಸುವ ತನ್ನ ಹಿಂದಿನ ಬದ್ಧತೆಯನ್ನು ಮುಂದಿಡುತ್ತದೆ ಎಂದು ಹೇಳಿದೆ. ಭಾರತ ಮತ್ತು ಎಚ್​ಎಎಲ್​ನೊಂದಿಗಿನ ನಮ್ಮ ದೀರ್ಘಕಾಲದ ಪಾಲುದಾರಿಕೆಯಿಂದ ಇದು ಐತಿಹಾಸಿಕ ಒಪ್ಪಂದವಾಗಿದೆ ಎಂದು ಕಲ್ಪ್ ಜೂನಿಯರ್ ಹೇಳಿದ್ದಾರೆ.
ಜಿಇ ಏರೋಸ್ಪೇಸ್ ವೆಬ್​ಸೈಟ್ ಪ್ರಕಾರ, ಟಬೋಫ್ಯಾನ್ ಎಂಜಿನ್, ಜಿಇಯ ಮಿಲಿಟರಿ ವಿಮಾನ ಇಂಜಿನ್​ಗಳ ಭಾಗವಾಗಿದೆ. ಅಮೆರಿಕ ನೌಕಾಪಡೆಯು 30 ವರ್ಷಗಳಿಗೂ ಹೆಚ್ಚು ಕಾಲ ಇದನ್ನು ಬಳಸುತ್ತಿದೆ. 1,600ಕ್ಕಿಂತ ಹೆಚ್ಚು ಎಫ್ 414 ಇಂಜಿನ್​ಗಳನ್ನು ವಿತರಿಸಲಾಗಿದೆ. ಇದು ವಿವಿಧ ಕಾರ್ಯಾಚರಣೆಗಳಲ್ಲಿ 50 ಲಕ್ಷಕ್ಕೂ ಅಧಿಕ ಇಂಜಿನ್ ಹಾರಾಟದ ಸಮಯವನ್ನು ನಡೆಸಿದೆ. ಈ ಇಂಜಿನ್​ಗಳು ಫುಲ್ ಅಥಾರಿಟಿ ಡಿಜಿಟಲ್ ಎಲೆಕ್ಟ್ರಾನಿಕ್ ಕಂಟ್ರೋಲ್ (ಎಫ್​ಎಡಿಇಸಿ) ರೀತಿಯ ಸುಧಾರಿತ ತಂತ್ರಜ್ಞಾನವನ್ನು ಹೊಂದಿವೆ. ಈ ಇಂಜಿನ್ ಅನ್ನು ಡಿಜಿಟಲ್ ವ್ಯವಸ್ಥೆ ಮೂಲಕ ನಿಯಂತ್ರಿಸಬಹುದಾಗಿದೆ. ಸುಧಾರಿತ ವಸ್ತುಗಳು ಮತ್ತು ಕೂಲಿಂಗ್ ತಂತ್ರಜ್ಞಾನಗಳ ಬಳಕೆಯಿಂದ ಇಂಜಿನ್ ಕಾರ್ಯಕ್ಷಮತೆ ಸುಧಾರಿಸಿದೆ. ಅಲ್ಲದೆ, ಬಾಳಿಕೆ ಕೂಡ ಹೆಚ್ಚಾಗಿದೆ ಎಂದು ಸಂಸ್ಥೆಯ ವೆಬ್​ಸೈಟ್ ಹೇಳುತ್ತದೆ.
ಅಡ್ವಾನ್ಸ್​ಡ್ ಮೀಡಿಯಂ ಕಾಂಬ್ಯಾಟ್ ಏರ್​ಕ್ರಾಫ್ಟ್ (ಎಎಂಸಿಎ)ಗಳಿಗೆ ಎಫ್414 ಇಂಜಿನ್​ಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಜಿಇ ವೆಬ್​ಸೈಟ್​ನಲ್ಲಿ ಹೇಳಲಾಗಿದೆ. ಆದರೂ ಇದಕ್ಕೆ ಇತರ ಜೆಟ್ ಇಂಜಿನ್ ತಯಾರಕರಾದ ಫ್ರಾನ್ಸ್​ನ ಸಫ್ರಾನ್ ಎಸ್​ಎ ಮತ್ತು ಬ್ರಿಟನ್​ನ ರೋಲ್ಸ್ ರಾಯ್್ಸಂದ ಸ್ಪರ್ಧೆ ಎದುರಾಗಬಹುದಾಗಿದೆ ಎಂದೂ ಅದು ಹೇಳಿದೆ. ದೇಶೀಯ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್​ಎಚ್) ಧ್ರುವ್ ಮತ್ತು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್​ಸಿಎಚ್) ಪ್ರಚಂಡಗಾಗಿ ಸಫ್ರಾನ್ ಮತ್ತು ಎಚ್​ಎಎಲ್​ಗಳು ಈಗಾಗಲೇ ಶಕ್ತಿ ಇಂಜಿನ್ ಅನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − thirteen =
Remember me
