‘ಸಮುದಾಯಗಳು ಮುನ್ನಡೆಸಲಿ’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ. ಗರ್ಭಿಣಿಯರಲ್ಲಿ ಎಚ್​ಐವಿ/ಏಡ್ಸ್ ಸೋಂಕು ಪ್ರಮಾಣ ಶೇ. 0.03ಕ್ಕೆ ಇಳಿಕೆಯಾಗಿದ್ದರೆ, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಪ್ರಮಾಣ ಶೇ. 0.36ಕ್ಕೆ ಇಳಿದಿದೆ.
ಪಂಕಜ ಕೆ.ಎಂ. ಬೆಂಗಳೂರುರಾಜ್ಯದಲ್ಲಿ ಎಚ್​ಐವಿ ಹರಡುವಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಪ್ರಮುಖವಾಗಿ ಗರ್ಭಿಣಿಯರಲ್ಲಿ ಸೋಂಕಿನ ಪ್ರಮಾಣ ಇಳಿದಿರುವುದು ಗಮನಾರ್ಹ.
ರಾಜ್ಯಾದ್ಯಂತ ಇರುವ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ (ಐಸಿಟಿಸಿ) ಪ್ರಸಕ್ತ ಸಾಲಿನ ಅಂಕಿ ಆಂಶಗಳಿಂದ ಇದು ರುಜುವಾತಾಗಿದೆ. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ (ಕೆಸಾಪ್ಸ್) 2023 -24ರ ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ ರಾಜ್ಯದ ಎಲ್ಲ ಐಸಿಟಿಸಿ ಕೇಂದ್ರಗಳಿಂದ 12 ಲಕ್ಷ ಗರ್ಭಿಣಿರನ್ನು ಪರೀಕ್ಷೆಗೆ ಒಳಪಡಿಸುವ ಗುರಿ ಹಾಕಿಕೊಂಡಿತ್ತು. ಆರು ತಿಂಗಳಲ್ಲಿ 8.55 ಲಕ್ಷ ಜನರ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 338 ಗರ್ಭಿಣಿಯರಲ್ಲಿ ಎಚ್​ಐವಿ ಸೋಂಕು ಕಂಡು ಬಂದಿದ್ದು, ಸೋಂಕಿತರ ಪ್ರಮಾಣ ಶೇ. 0.03ಕ್ಕೆ ಇಳಿದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಶೇ. 61 ಪ್ರಗತಿ:ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ಕೆಸಾಪ್ಸ್ 2023-24ನೇ ಸಾಲಿನಲ್ಲಿ ರಾಜ್ಯದಲ್ಲಿನ ಎಲ್ಲ 475 ಐಸಿಟಿಸಿ ಕೇಂದ್ರಗಳಿಂದ 35,94,055 ಮಂದಿಯನ್ನು ಪರೀಕ್ಷೆಗೆ ಒಳಪಡಿಸುವ ಗುರಿ ಹೊಂದಿತ್ತು. ಅದರಂತೆ 6 ತಿಂಗಳಲ್ಲಿ 21,81,824 ಮಂದಿಯನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಶೇ. 61ರಷ್ಟು ಪ್ರಗತಿ ಸಾಧಿಸಿದೆ. ಪರೀಕ್ಷೆಗೆ ಒಳಗಾದ 7,930 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿನ ಪ್ರಮಾಣ ಶೇ. 0.36ಕ್ಕೆ ಇಳಿದಿದೆ. ಕಳೆದ ವರ್ಷ ಈ ಅವಧಿಯಲ್ಲಿ ಸೋಂಕು ಪ್ರಮಾಣ 0.39 ಇತ್ತು.
ಸೌಲಭ್ಯ ವಿತರಣೆ:ಎಚ್​ಐವಿ/ಏಡ್ಸ್ ಸೋಂಕಿತರಿಗೆ ಆರೋಗ್ಯ ಇಲಾಖೆಯಿಂದ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಆಹಾರ ಇಲಾಖೆಯು ಅಂತ್ಯೋದಯ ಯೋಜನೆಯಡಿ 30 ಕೆ.ಜಿ. ಆಹಾರ ಧಾನ್ಯ ವಿತರಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಧನಶ್ರೀ ಯೋಜನೆಯಡಿ 25 ಸಾವಿರ ರೂ. ಹಾಗೂ ಬಾಧಿತ ಮಕ್ಕಳಿಗೆ ಮಾಸಿಕ 1000 ರೂ. ನೆರವು ನೀಡಲಾಗುತ್ತಿದೆ. ಮಕ್ಕಳಿಗೆ ಆರ್​ಟಿಇ ಅಡಿ ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಸೌಲಭ್ಯಗಳೂ ಇವೆ. ಸೋಂಕಿತರಿಗೆ ಕಾನೂನು ಸೇವೆ ಸೇರಿದಂತೆ ಸರ್ಕಾರದಿಂದ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಕೆಸಾಪ್ಸ್ ತಿಳಿಸಿದೆ.
1 ಲಕ್ಷ ಮಂದಿ ಬಲಿ:ರಾಜ್ಯದಲ್ಲಿ 3.86 ಲಕ್ಷ ಸೋಂಕಿತರು ಎಆರ್​ಟಿ ಕೇಂದ್ರಗಳಲ್ಲಿ ನೋಂದಾಯಿಸಿ ಕೊಂಡಿದ್ದಾರೆ. 3.19 ಲಕ್ಷ ಮಂದಿಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಇವರಲ್ಲಿ ಮಕ್ಕಳು, ವಯಸ್ಕರು ಸೇರಿ ಎಲ್ಲ ವಯೋ ಮಾನದವರೂ ಇದ್ದಾರೆ. ಇದುವರೆಗೂ ಚಿಕಿತ್ಸೆ ಫಲಿಸದೆ 3,036 ಮಕ್ಕಳು ಸೇರಿ ಸುಮಾರು 1 ಲಕ್ಷ ಮಂದಿ ಮೃತಪಟ್ಟಿದ್ದಾರೆ.
2030ರೊಳಗೆ ಏಡ್ಸ್ ಕೊನೆ:ಏಡ್ಸ್ ರೋಗವನ್ನು 2030ರ ವೇಳೆಗೆ ಕೊನೆಗೊಳಿಸುವಲ್ಲಿ ಸಮುದಾಯಗಳನ್ನು ಸನ್ನದ್ಧಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ. ಜಾಗತಿಕವಾಗಿ 39 ದಶಲಕ್ಷ ಜನರಿಗೆ ಎಚ್​ಐವಿ ಇದೆ. 2022ರಲ್ಲಿ 13 ಲಕ್ಷ ಜನ ಎಚ್​ಐವಿಗೆ ಒಳಗಾಗಿದ್ದು, 6.3 ಲಕ್ಷ ಜನ ಮೃತಪಟ್ಟಿದ್ದಾರೆ. ಎಚ್​ಐವಿ ತಡೆಗಟ್ಟುವಿಕೆಯಲ್ಲಿ ಯುವಜನರು ನಾಯಕತ್ವ ವಹಿಸಿಕೊಳ್ಳಬೇಕು ಎಂದು ಆಗ್ನೇಯ ಏಷ್ಯಾದ ಡಬ್ಲ್ಯುಎಚ್​ಒ ಪ್ರಾದೇಶಿಕ ನಿರ್ದೇಶಕ ಡಾ.ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.
9ನೇ ಸ್ಥಾನದಲ್ಲಿ ಕರ್ನಾಟಕ:ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ (ಎನ್​ಎಸಿಪಿ – 5) ಪ್ರಕಾರ ಭಾರತದಲ್ಲಿ ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರ, ಮಣಿಪುರ ಮತ್ತು ಮೇಘಾಲಯ ರಾಜ್ಯಗಳು ಹೆಚ್ಚು ಎಚ್​ಐವಿ/ಏಡ್ಸ್ ಇರುವ ರಾಜ್ಯಗಳಾಗಿವೆ. ಕರ್ನಾಟಕ 9ನೇ ಸ್ಥಾನದಲ್ಲಿದೆ.
ಜನರಲ್ಲಿ ಜಾಗೃತಿ ಮೂಡಿಸಲು ಮುಂದಿನ ದಿನಗಳಲ್ಲಿ ಎಚ್​ಐವಿ ಮುಕ್ತ ಗ್ರಾಮಪಂಚಾಯಿತಿ ಕಾರ್ಯಕ್ರಮದ ಅಡಿಯಲ್ಲಿ ಮನೆ ಮನೆಗೆ ಮಾಹಿತಿ ನೀಡುವ ಅಂದೋಲನ ಕೈಗೊಳ್ಳಲಾಗುವುದು.
| ಟಿ. ಗೋವಿಂದರಾಜು ಉಪನಿರ್ದೇಶಕ, ಐಇಸಿ, ರಾಜ್ಯ ಏಡ್ಸ್ ನಿಯಂತ್ರಣಾ ಸಂಸ್ಥೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 5 =
Remember me
