ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಪರ ಹಾಗೂ ವಿರೋಧಿ ಪ್ರತಿಭಟನೆ ವೇಳೆ ಸ್ಪೋಟಗೊಂಡ ಗಲಭೆಯಿಂದಾಗಿ ಪ್ರಕ್ಷುಬ್ಧವಾಗಿದ್ದ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರೂ ಬೂದಿಮುಚ್ಚಿದ ಕೆಂಡದಂತಿದೆ. ಪೊಲೀಸರು ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರೂ ಅಲ್ಲಲ್ಲಿ ಸಣ್ಣಮಟ್ಟದ ಕಲ್ಲು ತೂರಾಟ ಮುಂದುವರಿದಿದೆ. ಈ ನಡುವೆ ಬುಧವಾರ ದೊಡ್ಡ ಮಟ್ಟದಲ್ಲಿ ಘರ್ಷಣೆ ನಡೆದಿಲ್ಲವಾದರೂ ಗಾಯಗೊಂಡು ಆಸ್ಪತ್ರೆಯಲ್ಲಿದ್ದವರ ಪೈಕಿ ಹಲವರು ಮೃತಪಟ್ಟಿದ್ದರಿಂದಾಗಿ ಸಾವಿನ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಪರಿಸ್ಥಿತಿ ತಿಳಿಗೊಳ್ಳುತ್ತಿದ್ದಂತೆಯೇ ಪುಂಡರು ನಡೆಸಿದ ಅಮಾನವೀಯ ಕ್ರೌರ್ಯ ಕೃತ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಐಬಿ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಿ ಚರಂಡಿಗೆಸೆದಿದ್ದರೆ, ಯುವಕನೋರ್ವನ ತಲೆಗೆ ಡ್ರಿಲ್ಲಿಂಗ್ ಮಿಷಿನ್ ಬಳಸಿ ಅಮಾನವೀಯ ಹಿಂಸೆ ನೀಡಿರುವ ಹೃದಯ ವಿದ್ರಾವಕ ಪ್ರಕರಣಗಳು ರಾಜಧಾನಿಯನ್ನು ಬೆಚ್ಚಿಬೀಳಿಸಿವೆ.
ಗಲಭೆಯಲ್ಲಿ ಗಾಯಗೊಂಡ 200ಕ್ಕೂ ಹೆಚ್ಚು ಜನರ ಪೈಕಿ ಹಲವರು ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು ಡ್ರೋನ್ ಕ್ಯಾಮರಾಗಳ ಮೂಲಕ ನಿಗಾ ಇಡಲಾಗಿದೆ. ಭದ್ರತೆ ಕುರಿತ ಸಂಪುಟ ಉಪಸಮಿತಿ ಸಭೆ ಕೂಡ ನಡೆದಿದ್ದು ಪರಿಸ್ಥಿತಿ ನಿಯಂತ್ರಿಸಲು ಎಲ್ಲ ಕ್ರಮಕೈಗೊಳ್ಳುವ ನಿರ್ಧಾರ ಹೊರ ಬಿದ್ದಿದೆ. ನ್ಯಾಯಾಂಗವೂ ಆಡಳಿತಕ್ಕೆ ತೀಕ್ಷ್ಣ ಸೂಚನೆಗಳನ್ನು ನೀಡಿದೆ.
ಗಲಭೆಗ್ರಸ್ತ ಈಶಾನ್ಯ ದೆಹಲಿಯ ಕೆಲವು ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರಿದಿದೆ. ಕಂಡಲ್ಲಿ ಗುಂಡು ಆದೇಶ ಮತ್ತು ಒಂದು ತಿಂಗಳು ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ ಬುಧವಾರ ಕೆಲ ಪ್ರದೇಶಗಳಲ್ಲಿ ಪರಿಸ್ಥಿತಿ ಹತೋಟಿಯಲ್ಲಿದ್ದರೆ, ಮತ್ತೆ ಕೆಲವೆಡೆ ಲೂಟಿ, ಕಲ್ಲುತೂರಾಟ ನಡೆದಿವೆ. ಭಜನ್​ಪುರದಲ್ಲಿ ಬ್ಯಾಟರಿ ಅಂಗಡಿಗೆ ಬೆಂಕಿ ಹಾಕಲಾಗಿದೆ. ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಕೆಲವರು ಮೃತಪಟ್ಟಿದ್ದಾರೆ.
ಶಾಂತಿ-ಸೌಹಾರ್ದತೆಗೆ ಬದ್ಧರಾಗಿ: ದೆಹಲಿಯ ಹಿಂಸಾಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಮೊದಲನೇ ಪುಟದಿಂದ…
‘ಶಾಂತಿ ಮತ್ತು ಸಹಜತೆ ಮರಳಿಸುವುದಕ್ಕಾಗಿ ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳು ಶ್ರಮಿಸುತ್ತಿವೆ. ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ದೆಹಲಿಯ ಸೋದರ, ಸೋದರಿಯರಿಗೆ ನಾನು ಮನವಿ ಮಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಷಾ ರಾಜೀನಾಮೆಗೆ ಆಗ್ರಹ: ದೆಹಲಿಯ ಗಲಭೆ, ಹಿಂಸಾಚಾರದ ಹೊಣೆಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ. ‘ಗೃಹ ಸಚಿವರು ಏನು ಮಾಡುತ್ತಿದ್ದಾರೆ. ಅವರೆಲ್ಲಿದ್ದಾರೆ? ಪರಿಸ್ಥಿತಿ ಹದಗೆಡುತ್ತಿರುವುದನ್ನು ಗೃಹ ಸಚಿವಾಲಯ ಗಮನಿಸಿದ್ದರೂ ಆರಂಭದಲ್ಲೇ ಅರೆಸೇನಾ ಪಡೆಗಳನ್ನು ಯಾಕೆ ನಿಯೋಜಿಸಲಿಲ್ಲ?’ ಎಂದು ಸೋನಿಯಾ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಸೇನೆ ಕರೆಸಿ ಎಂದ ಕೇಜ್ರಿ: ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರ ನಿಯಂತ್ರಿಸಲು ದೆಹಲಿ ಪೊಲೀಸರು ಅಸಮರ್ಥರಾಗಿದ್ದು ಸೇನೆಯನ್ನು ನಿಯೋಜಿಸಬೇಕು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಗಲಭೆ ವೇಳೆ ಸಾವನ್ನಪ್ಪಿದ ಹೆಡ್ ಕಾನ್​ಸ್ಟೆಬಲ್ ರತನ್ ಲಾಲ್ ಕುಟುಂಬಕ್ಕೆ -ಠಿ; 1 ಕೋಟಿ ಪರಿಹಾರವನ್ನು ಘೋಷಿಸಿದ್ದಾರೆ. ಈ ಮಧ್ಯೆ, ದೆಹಲಿ ವಿಧಾನಸಭೆಯಲ್ಲಿ ಹೇಳಿಕೆ ನೀಡಿರುವ ಅವರು, ಗಲಭೆಗೆ ಹೊರಗಿನಿಂದ ಬಂದವರು ಕಾರಣ ಎಂದು ಹೇಳಿದ್ದಾರೆ.
ಆಪದ್ಬಾಂಧವ ದೋವಲ್ ರಣತಂತ್ರ
ಮೋದಿ ಸರ್ಕಾರದ ಆಪದ್ಬಾಂಧವರೆಂದೇ ಖ್ಯಾತಿ ಪಡೆದಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೇಂದ್ರದ ಸೂಚನೆ ಹಿನ್ನೆಲೆಯಲ್ಲಿ ದೆಹಲಿ ರಣಾಂಗಣಕ್ಕೆ ಧಾವಿಸಿದ್ದಾರೆ. ಮಂಗಳವಾರ ತಡರಾತ್ರಿ ಹಾಗೂ ಬುಧವಾರ ಸಂಜೆ ಉದ್ವಿಗ್ನ ಸ್ಥಳಗಳಿಗೆ ಭೇಟಿ ನೀಡಿದ ಅವರು ಸ್ಥಳೀಯರಿಗೆ ಪರಿಸ್ಥಿತಿ ತಿಳಿಗೊಳ್ಳುವ ಭರವಸೆ ನೀಡಿದರು. ಬಳಿಕ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ವಿವರಣೆ ನೀಡಿದರು. ದೋವಲ್ ಆಗಮನದ ಬಳಿಕ ಬುಧವಾರ ಸಂಜೆ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಎಲ್ಲೆಮೀರಿದ ಕ್ರೌರ್ಯ
ಗಲಭೆಕೋರರ ತಂಡವೊಂದು ವಿವೇಕ್ ಚೌಧುರಿ ಎಂಬ ಯುವಕನ ಮೇಲೆ ದಾಳಿ ನಡೆಸಿ ಡ್ರಿಲ್ಲಿಂಗ್ ಮಷಿನ್​ನಿಂದ ತಲೆ ಕೊರೆದು ಪರಾರಿಯಾಗಿದೆ. ಗಾಯಾಳು ಯುವಕ ಗುರು ತೇಗ್ ಬಹದ್ದೂರ್ ಆಸ್ಪತ್ರೆಯಲ್ಲಿ ಸಾವು, ಬದುಕಿನ ನಡುವೆ ಹೋರಾಡುತ್ತಿದ್ದಾನೆ. ದೆಹಲಿಯ ಕರಾವಲ್ ನಗರದಲ್ಲಿ ದುಷ್ಕರ್ವಿುಗಳು ನಡೆಸಿದ ಆಸಿಡ್ ದಾಳಿಗೆ ಇಬ್ಬರು ಸಿಆರ್​ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು. ಇವರ ಸ್ಥಿತಿ ಕೂಡ ಗಂಭೀರವಾಗಿದೆ. ಫೆ.24ರಂದು ಯುವಕನೋರ್ವ ಪೊಲೀಸರನ್ನು ಗುರಿಯಾಗಿಸಿಕೊಂಡು ಬಂದೂಕು ತೋರಿಸಿದ್ದ. ಈ ಸಂದರ್ಭದಲ್ಲಿ ಪೊಲೀಸರನ್ನು ಹೆದರಿಸಲು ಗುಂಡು ಕೂಡ ಹಾರಿಸಿದ್ದ. ಇನ್ನೂ ಹಲವೆಡೆ ಪುಂಡರು ಮಾರಕಾಸ್ತ್ರಗಳಿಂದ ದಾಳಿ ನಡೆಸುತ್ತಿದ್ದಾರೆ. ಇಂತಹವರನ್ನು ಎದುರಿಸುವುದೇ ಪೊಲೀಸರಿಗೆ ಸವಾಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 15 =
Remember me
