ನವದೆಹಲಿ:ಕಳೆದ ಕೆಲ ದಿನಗಳಿಂದ ಗಲಭೆ, 42 ಜನರ ಹತ್ಯೆಗೆ ಸಾಕ್ಷಿಯಾಗಿದ್ದ ಈಶಾನ್ಯ ದೆಹಲಿಯಲ್ಲಿ ಈಗ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಕೆಲವೆಡೆ ಎಂದಿನಂತೆ ಅಂಗಡಿಗಳು ಬಾಗಿಲು ತೆರೆದಿದ್ದು, ಜನರು ಹಣ್ಣು, ತರಕಾರಿ ಖರೀದಿಸಲು ರಸ್ತೆಗಿಳಿಯುತ್ತಿದ್ದಾರೆ. ಖಾಸಗಿ ಹಾಗೂ ಸರ್ಕಾರಿ ವಾಹನಗಳ ಸಂಚಾರ ಯಥಾಸ್ಥಿತಿಗೆ ಮರಳಿದ್ದು, ಜನರು ಎಂದಿನಂತೆ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ.
ಹಿಂಸಾಚಾರದಿಂದಾಗಿ ರಸ್ತೆ ತುಂಬ ಬಿದ್ದಿರುವ ಕಲ್ಲು, ಇಟ್ಟಿಗೆ ಚೂರುಗಳು ಹಾಗೂ ಅಲ್ಲಲ್ಲಿ ಬೆಂಕಿ ಹಾಕಿ ಸುಡಲಾಗಿರುವ ಟಯರ್​ಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ.ಸುಟ್ಟು ಕರಕಲಾಗಿರುವ ಕಾರು, ಆಟೋ ಮುಂತಾದ ವಾಹನ ಗಳನ್ನು ಜೆಸಿಬಿಗಳ ಮೂಲಕ ತೆರವು ಗೊಳಿಸಲಾಗುತ್ತಿದೆ. ಶಿವವಿಹಾರ ಪ್ರದೇಶದಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಲಭೆ ಸಂಬಂಧ ಈವರೆಗೆ 885ಕ್ಕೂ ಹೆಚ್ಚು ಜನರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ಹಾಗೂ ಅರೆಸೈನಿಕ ಪಡೆಗಳು ನಗರದ ತುಂಬ ಗಸ್ತು ತಿರುಗುತ್ತಿದ್ದಾರೆ. ಪರಿಸ್ಥಿತಿ ಶಾಂತ ಸ್ಥಿತಿಗೆ ಮರಳಿರುವ ಬೆನ್ನಲ್ಲೇ ಮತ್ತೆ ಯಾರಾದರೂ ಕಿಡಿಗೇಡಿಗಳು ಕೋಮು ದ್ವೇಷ ಹೆಚ್ಚಿಸುವ ಸಂದೇಶಗಳನ್ನು ರವಾನಿಸಿದರೆ ತಕ್ಷಣ ವರದಿ ಮಾಡುವಂತೆ ಪೊಲೀಸರು ತಿಳಿಸಿದ್ದಾರೆ. ವಾಟ್ಸ್​ಆಪ್, ಫೇಸ್​ಬುಕ್ ಮೂಲಕ ಪ್ರಚೋದನಾಕಾರಿ ಹೇಳಿಕೆಗಳು, ವಿಡಿಯೋಗಳನ್ನು ಹಂಚುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಜನರ ನಡುವೆ ಸಾಮರಸ್ಯ ಮೂಡಿಸುವ ಸಲುವಾಗಿ ಪೊಲೀಸರು ಹಲವೆಡೆ ಶಾಂತಿ ಸಭೆಗಳನ್ನು ನಡೆಸುತ್ತಿದ್ದು, ಈವರೆಗೆ 350ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ. ಹಿಂಸಾಚಾರದಲ್ಲಿ ಮನೆ ಹಾನಿಗೀಡಾಗಿರುವವರಿಗೆ ತಕ್ಷಣ ಪರಿಹಾರವಾಗಿ 25 ಸಾವಿರ ರೂಪಾಯಿ ನೀಡುವ ಕೆಲಸ ಪ್ರಾರಂಭಿಸಲಾಗಿದೆ. ಸಂತ್ರಸ್ತರಿಗಾಗಿ ಸರ್ಕಾರದ ವತಿಯಿಂದ 9 ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದ್ದು, ಮನೆ ಕಳೆದುಕೊಂಡವರಿಗೆ ಅಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಹಿಂಸಾಚಾರ ವೇಳೆ ಕಾಣೆಯಾಗಿರುವ ಇನ್ನೂ ಹಲವರಿಗಾಗಿ ಕುಟುಂಬಸ್ಥರು ಹಾಗೂ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಸಹಾಯ, ರಕ್ಷಣೆ ಕೋರಿ 13,200 ಕರೆ!
ಗಲಭೆಯ ವೇಳೆ ಈಶಾನ್ಯ ದೆಹಲಿಯ ವಿವಿಧೆಡೆಯಿಂದ ಸಹಾಯಕ್ಕಾಗಿ ಮನವಿ ಮಾಡಿ ಪೊಲೀಸರಿಗೆ 13,200 ಕರೆಗಳು ಬಂದಿವೆ ಎಂದು ತಿಳಿದುಬಂದಿದೆ. ಫೆ. 23ರಂದು 700 ಕರೆ ದಾಖಲಾಗಿದ್ದು, ಇದಾದ ಬಳಿಕ ಕರೆಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಫೆ.24ರಂದು 3,500 ಹಾಗೂ 25ರಂದು 7,500 ಜನರು ಸಹಾಯಕ್ಕಾಗಿ ಕರೆ ಮಾಡಿದ್ದಾರೆ. ಪರಿಸ್ಥಿತಿ ಹತೋಟಿಗೆ ಬಂದ ಬಳಿಕ 26ರಂದು 1,500 ಕರೆಗಳು ದಾಖಲಾಗಿವೆ. ಕರೆ ಮಾಡಿದ್ದವರು ನೀಡಿರುವ ಮಾಹಿತಿ ಆಧಾರದ ಮೇಲೆ ದೂರುಗಳ ಪಟ್ಟಿ ತಯಾರಿಸಲಾಗಿದ್ದು, ಬಹುಪಾಲು ಜನರು ಗುಂಡಿನ ದಾಳಿ, ಅಂಗಡಿ-ಮನೆಗಳ ಧ್ವಂಸ ನಡೆಯುತ್ತಿರುವ ಬಗ್ಗೆ ದೂರಿದ್ದಾರೆ.
ಯೋಧನ ಮನೆಗೆ ಬಿಎಸ್​ಎಫ್ ತಂಡ ಭೇಟಿ
ಖಾಸ್ ಖಾಜೂರಿ ಗಲ್ಲಿಯಲ್ಲಿದ್ದ ಬಿಎಸ್​ಎಫ್ ಯೋಧ ಮೊಹದ್ ಅನೀಸ್​ರ ಮನೆ ಮೇಲೆ ಫೆ. 25ರಂದು ದಾಳಿ ನಡೆದಿದ್ದ ಹಿನ್ನೆಲೆಯಲ್ಲಿ ಬಿಎಸ್​ಎಫ್​ನ ತಂಡವೊಂದು ಶನಿವಾರ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗಲಭೆ ವೇಳೆ ಕೆಲ ದುಷ್ಕರ್ವಿುಗಳು ಅನೀಸ್​ರ ಮನೆಯನ್ನು ಸುಟ್ಟು ಧ್ವಂಸ ಮಾಡಿದ್ದು, ಮನೆ ಮುಂದಿದ್ದ ಕಾರಿಗೂ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಉಂಟಾಗಿರುವ ನಷ್ಟದ ಬಗ್ಗೆ ಬಿಎಸ್​ಎಫ್ ತಂಡ ಪರಿಶೀಲನೆ ನಡೆಸಿದ್ದು, ಯೋಧ ಅನೀಸ್ ಕುಟುಂಬಕ್ಕೆ ಪರಿಹಾರ ನೀಡಲಾಗುತ್ತದೆ.
885 ಜನರ ಬಂಧನ
ಹಿಂಸಾಚಾರ ಸಂಬಂಧ ಈವರೆಗೆ ಒಟ್ಟು 167 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅಕ್ರಮವಾಗಿ ಬಂದೂಕುಗಳನ್ನು ಹೊಂದಿರುವವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ 25 ಎಫ್​ಐಆರ್​ಗಳನ್ನು ದಾಖಲಿಸಿಕೊಳ್ಳಲಾಗಿದೆ. ಘಟನೆ ಸಂಬಂಧ 885 ಜನರನ್ನು ಬಂಧಿಸಲಾಗಿದ್ದು, ಎರಡು ಎಸ್​ಐಟಿ ತಂಡಗಳು ತನಿಖೆ ಪ್ರಾರಂಭಿಸಿವೆ. ಮೃತಪಟ್ಟಿರುವ 42 ಜನರಲ್ಲಿ ಈವರೆಗೆ 35 ಜನರ ಗುರುತು ಪತ್ತೆಯಾಗಿದೆ. 22 ಜನರು ಕಲ್ಲು ತೂರಾಟ ಹಾಗೂ ದೈಹಿಕ ಹಲ್ಲೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದ್ದು, 13 ಜನರಿಗೆ ಗುಂಡಿನ ದಾಳಿಯಿಂದಾಗಿ ಗಾಯಗಳಾಗಿವೆ.
ದಂಗೆಕೋರರ ಪತ್ತೆಗೆ ಕಾರ್ಯಾಚರಣೆ
ಹಿಂಸಾಚಾರದಲ್ಲಿ ಭಾಗಿಯಾಗಿದ್ದ ದುಷ್ಕರ್ವಿುಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಹಿಂಸಾಚಾರದ ವಿಡಿಯೋಗಳು ಹಾಗೂ ಫೋಟೋಗಳನ್ನು ಬಳಸಿ ಮುಖ ಚಹರೆ ಗುರುತು ಪತ್ತೆ ಸೌಲಭ್ಯದ ಮೂಲಕ ದುಷ್ಕರ್ವಿುಗಳನ್ನು ಗುರುತಿಸಲಾಗುತ್ತಿದೆ. ಈ ಪಟ್ಟಿ ಅಂತಿಮಗೊಂಡ ಬಳಿಕ ತಲೆಮರೆಸಿಕೊಂಡಿರುವ ಎಲ್ಲರನ್ನೂ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
