ನವದೆಹಲಿ:ಯುವಕರನ್ನು ಸೇನೆಗೆ ನೇಮಿಸಿಕೊಳ್ಳುವ ‘ಅಗ್ನಿಪಥ’ ಯೋಜನೆ ವಿರೋಧಿಸಿ ನಡೆಯುತ್ತಿರುವ ಚಳವಳಿ ಕರ್ನಾಟಕ ಸಹಿತ ಇನ್ನಷ್ಟು ರಾಜ್ಯಗಳಿಗೆ ಹಬ್ಬಿದ್ದು ಯುವಜನರ ಕೋಪವನ್ನು ತಣಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲವು ರಿಯಾಯಿತಿಗಳನ್ನು ಘೋಷಿಸಿದೆ. ಅರೆ-ಸೇನಾ ಪಡೆಗಳ ನೇಮಕದಲ್ಲಿ ‘ಅಗ್ನಿವೀರ’ರಿಗೆ ಆದ್ಯತೆ ನೀಡುವುದಾಗಿ ಪ್ರಕಟಿಸಿದೆ. ಈ ನಡುವೆ, ರಕ್ಷಣಾ ಸಚಿವ ರಾಜನಾಥ ಸಿಂಗ್ ಭೂ ಸೇನೆ, ವಾಯು ಪಡೆ ಮತ್ತು ನೌಕಾ ಪಡೆಗಳ ಮುಖ್ಯಸ್ಥರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಯೋಜನೆಯನ್ನು ಮರುಪರಿಶೀಲಿಸಲು ನಿರ್ದೇಶನ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿಯೂ ಸಲ್ಲಿಕೆಯಾಗಿದೆ.
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮತ್ತು ಅಸ್ಸಾಂ ರೈಫಲ್ಸ್​ನಲ್ಲಿ ಅಗ್ನಿವೀರರಿಗೆ ಶೇಕಡ 10 ಮೀಸಲಾತಿ ಒದಗಿಸುವುದಾಗಿ ಕೇಂದ್ರ ಗೃಹ ಸಚಿವಾಲಯ ಶನಿವಾರ ಪ್ರಕಟಿಸಿದೆ. ಈ ಎರಡೂ ಅರೆ-ಸೇನಾ ಪಡೆಗಳ ನೇಮಕದಲ್ಲಿ ಅಗ್ನಿವೀರರಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಹೆಚ್ಚಿಸಲಾಗುವುದೆಂದೂ ಗೃಹ ಸಚಿವಾಲಯ ತಿಳಿಸಿದೆ. ಅಗ್ನಿವೀರರ ಮೊದಲ ಬ್ಯಾಚ್​ಗೆ ಈ ಸೌಲಭ್ಯ ಅನ್ವಯವಾಗಲಿದೆ. ಸಿಎಪಿಎಫ್​ಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುವುದೆಂದು ಗೃಹ ಸಚಿವ ಅಮಿತ್ ಷಾ ಎರಡು ದಿನದ ಹಿಂದೆ ಪ್ರಕಟಿಸಿದ್ದರು. ಅಗ್ನಿಪಥ ಯೋಜನೆಯಡಿ ನೇಮಕದ ಗರಿಷ್ಠ ವಯೋಮಿತಿಯನ್ನು ಒಂದು ಬಾರಿ 21ರಿಂದ 23 ವರ್ಷಕ್ಕೆ ಏರಿಸಲಾಗುವುದೆಂದು ಕೇಂದ್ರ ಸರ್ಕಾರ ಈಗಾಗಲೇ ಪ್ರಕಟಿಸಿದೆ.
73,000 ಹುದ್ದೆ ಖಾಲಿ:ಅರೆ-ಸೇನಾಪಡೆಗಳ ಐದು ವಿಭಾಗಗಳಲ್ಲಿ ಪ್ರಸ್ತುತ 73,000ಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ. ಗಡಿ ಭದ್ರತಾ ಪಡೆ (ಬಿಎಸ್​ಎಫ್), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್), ಭಾರತ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ), ಸಶಸ್ತ್ರ ಸೀಮಾ ಬಲ್ (ಎಸ್​ಎಸ್​ಬಿ) ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್) ಇವುಗಳು ಅರೆ-ಸೇನಾ ಪಡೆಯ ಭಾಗವಾಗಿವೆ. ಗೃಹ ಸಚಿವಾಲಯದ ಅಂಕಿ-ಅಂಶದ ಪ್ರಕಾರ ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್​ನಲ್ಲಿ 73,219 ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಗಳಲ್ಲಿ 18,124 ಹುದ್ದೆಗಳು ಖಾಲಿಯಿವೆ. 10 ಲಕ್ಷದಷ್ಟು ಸಿಬ್ಬಂದಿ ಬಲ ಹೊಂದಿರುವ ಸಿಎಪಿಎಫ್, ಗೃಹ ಸಚಿವಾಲಯದಡಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಲ್ಲಿ ಒಂದಾಗಿದೆ.
ಸಚಿವ ರಾಜನಾಥ ಸಿಂಗ್ ಸಭೆ:ಅಲ್ಪಾವಧಿಯ ಸೇನಾ ನೇಮಕದ ಪ್ರಸ್ತಾಪನೆ ವಿರುದ್ಧ ದೇಶದಾದ್ಯಂತ ಹಿಂಸಾತ್ಮ ಪ್ರತಿಭಟನೆ ಭುಗಿಲೆದ್ದಿರುವುದರ ನಡುವೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ಭೂ ಸೇನೆ, ಭಾರತೀಯ ವಾಯು ಪಡೆ (ಐಎಎಫ್) ಹಾಗೂ ನೌಕಾ ಪಡೆ (ನೇವಿ) ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ, ನೇವಿ ಮುಖ್ಯಸ್ಥ ಅಡ್ಮಿರಲ್ ಆರ್. ಹರಿ ಕುಮಾರ್ ಮತ್ತು ಹಿರಿಯ ಅಧಿಕಾರಿ ಬಿ.ಎಸ್. ರಾಜು ಇದ್ದರು.
ಬಿಹಾರದಲ್ಲಿ ಭಾರಿ ಹಿಂಸೆ:ಬಿಹಾರದ ಅನೇಕ ಭಾಗಗಳಲ್ಲಿ ಸತತ ನಾಲ್ಕನೇ ದಿನವಾದ ಶನಿವಾರ ಬಂದ್ ಇದ್ದರೂ ಹಿಂಸಾ ತ್ಮಕ ಪ್ರತಿಭಟನೆ ಮುಂದುವರಿದಿದ್ದು 200 ಕೋಟಿ ರೂ.ನಷ್ಟು ಆಸ್ತಿ ನಷ್ಟ ಸಂಭವಿಸಿದೆ. ಇದುವರೆಗೆ 50 ಬೋಗಿಗಳನ್ನು ನಾಶ ಮಾಡಲಾಗಿದೆ. ಜೆಹನಾಬಾದ್ ಜಿಲ್ಲೆಯಲ್ಲಿ ಒಂದು ಪೊಲೀಸ್ ಹೊರ ಠಾಣೆ ಮೇಲೆ ಉದ್ರಿಕ್ತರು ದಾಳಿ ಮಾಡಿ ವಾಹನಗಳಿಗೆ ಅಗ್ನಿ ಸ್ಪರ್ಶ ಮಾಡಿದ್ದಾರೆ.
ವಾಯುಪಡೆ ಮುಖ್ಯಸ್ಥರ ಎಚ್ಚರಿಕೆ:ಅಗ್ನಿಪಥ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಪೊಲೀಸ ರಿಂದ ಉತ್ತಮ ಗುಣ ನಡತೆ ಸರ್ಟಿಫಿಕೆಟ್ (ನೋ ಕ್ಲಿಯರೆನ್ಸ್) ದೊರೆಯದಿರುವ ಸಾಧ್ಯತೆಯಿದೆ ಎಂದು ವಾಯು ಪಡೆ ಮುಖ್ಯಸ್ಥ ವಿ.ಆರ್. ಚೌಧರಿ ಎಚ್ಚರಿಸಿದ್ದಾರೆ. ಹಿಂಸಾಚಾರವನ್ನು ಖಂಡಿಸಿದ ಅವರು, ಅದು ಸಮಸ್ಯೆಗೆ ಪರಿಹಾರವಲ್ಲ ಎಂದಿದ್ದಾರೆ.
ಇಂದು ಕಾಂಗ್ರೆಸ್ ಸತ್ಯಾಗ್ರಹ:ಅಗ್ನಿಪಥ ಯೋಜನೆ ವಿರುದ್ಧ ಚಳವಳಿ ನಡೆಸುತ್ತಿರುವ ಯುವಜನರನ್ನು ಬೆಂಬಲಿಸಿ ಭಾನುವಾರ ದೆಹಲಿಯ ಜಂತರ್ ಮಂತರ್​ನಲ್ಲಿ ಕಾಂಗ್ರೆಸ್ ನಾಯಕರು ಸತ್ಯಾಗ್ರಹ ನಡೆಸಲಿದ್ದಾರೆ.
ಪ್ರತಿಭಟನೆ ನಡೆಸುತ್ತಿರುವ ಯುವಕರ ಜತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಬೇಕು. ಯೋಜನೆಯಡಿ ನೇಮಕಾತಿಯನ್ನು ಕೈಬಿಡಬೇಕು.
|ಸಿದ್ದರಾಮಯ್ಯವಿಧಾನಸಭೆ ಪ್ರತಿಪಕ್ಷ ನಾಯಕ
ರಕ್ಷಣಾ ಇಲಾಖೆಯಲ್ಲಿ ಅಗ್ನಿಪಥ ಯೋಜನೆ ಮೂಲಕ ನಾಲ್ಕು ವರ್ಷದ ಮಟ್ಟಿಗೆ ಸೈನಿಕರನ್ನು ನೇಮಕ ಮಾಡಿಕೊಳ್ಳುವುದು ಸರಿಯಲ್ಲ. ಬದಲಿಗೆ ಕಾಯಂ ಆಗಿ ನೇಮಕ ಮಾಡಿಕೊಳ್ಳಬೇಕು. ಈ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ದೆಹಲಿಯ ಜಂತರ್ ಮಂತರ್​ನಲ್ಲಿ ಸೋಮವಾರ ಸತ್ಯಾಗ್ರಹ ನಡೆಸಲಿದೆ.
|ಮಲ್ಲಿಕಾರ್ಜುನ ಖರ್ಗೆರಾಜ್ಯಸಭೆ ಪ್ರತಿಪಕ್ಷ ನಾಯಕ
ನೂರಾರು ಜನರ ಬಂಧನ:ಅಗ್ನಿಪಥ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಚಳವಳಿ ಸಂಬಂಧ ಉತ್ತರ ಪ್ರದೇಶದಲ್ಲಿ 260 ಹಾಗೂ ಬಿಹಾರದಲ್ಲಿ 46 ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉದ್ರಿಕ್ತ ಪ್ರತಿಭಟನೆಕಾರರು ಬಿಹಾರ, ಉತ್ತರ ಪ್ರದೇಶ, ತೆಲಂಗಾಣ ಸಹಿತ ದೇಶದ ಹಲವು ಭಾಗಗಳಲ್ಲಿ ರೈಲುಗಳಿಗೆ ಕಲ್ಲು ತೂರಾಟ, ಬೆಂಕಿ ಹಚ್ಚಿ ಭಾರಿ ಹಿಂಸಾಚಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳು ಮತ್ತು ಇತರ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಭದ್ರತಾ ಪಡೆಗಳನ್ನು ನಿಯೋಜಿಸಿ ಬಂದೋಬಸ್ತ್ ಬಿಗಿಗೊಳಿಸಲಾಗಿದೆ.
ರಾಹುಲ್ ಗಾಂಧಿ ವಾಗ್ದಾಳಿ:ಕೇಂದ್ರದ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಮಾಫಿವೀರ’ ಎಂದು ವ್ಯಂಗ್ಯವಾಡಿದ್ದಾರೆ. ಮೂರು ರೈತ-ವಿರೋಧಿ ಕರಾಳ ಕೃಷಿ ಕಾನೂನುಗಳನ್ನು ವಾಪಸ್ ಪಡೆದ ರೀತಿಯಲ್ಲೇ ಅಗ್ನಿಪಥ ಯೋಜನೆಯನ್ನೂ ಕೇಂದ್ರ ಸರ್ಕಾರ ವಾಪಸ್ ಪಡೆದುಕೊಳ್ಳುವ ಒತ್ತಡಕ್ಕೆ ಒಳಗಾಗಲಿದೆ ಎಂದು ಹೇಳಿದ್ದಾರೆ. ಮೋದಿ ಸರ್ಕಾರ ಸತತ ಎಂಟು ವರ್ಷಗಳಿಂದ ‘ಜೈ ಜವಾನ್ ಜೈ ಕಿಸಾನ್’ ಮೌಲ್ಯಗಳಿಗೆ ಅವಮಾನ ಮಾಡುತ್ತಾ ಬಂದಿದೆ ಎಂದು ಅವರು ತರಾಟೆಗೆ ತೆಗೆದು ಕೊಂಡಿದ್ದಾರೆ. ‘ಕರಾಳ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕಾಗ ಬಹುದೆಂದು ನಾನು ಹಿಂದೆ ಹೇಳಿದ್ದೆ. ಅದೇ ರೀತಿ, ‘ಅಗ್ನಿಪಥ’ಅನ್ನು ವಾಪಸ್ ಪಡೆಯಬೇಕಾಗುತ್ತದೆ’ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್​ಗೆ ಅರ್ಜಿ:ಹಿಂಸಾಚಾರದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ವಕೀಲ ವಿಶಾಲ್ ತಿವಾರಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ. ರೈಲುಗಳ ಸಹಿತ ಸಾರ್ವಜನಿಕ ಆಸ್ತಿಪಾಸ್ತಿಗೆ ಆಗಿರುವ ಹಾನಿ ಬಗ್ಗೆ ತನಿಖೆ ನಡೆಸು ವಂತೆಯೂ ಕೋರಿದ್ದಾರೆ. ಅಗ್ನಿಪಥ ಯೋಜನೆ, ಅದು ರಾಷ್ಟ್ರೀಯ ಭದ್ರತೆ ಮತ್ತು ಸೇನೆಯ ಮೇಲೆ ಬೀರುವ ಪರಿಣಾಮದ ಬಗ್ಗೆ ಪರಿಶೀಲಿಸಲು ಸುಪ್ರೀಂ ಕೋರ್ಟ್​ನ ಮಾಜಿ ನ್ಯಾಯಮೂರ್ತಿಯೊಬ್ಬರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯೊಂದನ್ನು ನೇಮಿಸಬೇಕೆಂದೂ ಅರ್ಜಿದಾರರು ಕೋರಿದ್ದಾರೆ.
ವಾಪಸ್ ಪ್ರಶ್ನೆಯೇ ಇಲ್ಲ:ಸೇನೆಯ ಮಾಜಿ ಅಧಿಕಾರಿಗಳೊಂದಿಗೆ ರ್ಚಚಿಸಿ, ಚೆನ್ನಾಗಿ ಯೋಚಿಸಿಯೇ ಅಗ್ನಿಪಥ ಯೋಜನೆ ರೂಪಿಸಲಾಗಿದೆ. ಅದನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗುರು ಪ್ರಕಾಶ್ ಪಾಸ್ವಾನ್ ಶನಿವಾರ ಹೇಳಿದ್ದಾರೆ. ಯೋಜನೆ ಬಗ್ಗೆ ತಪು್ಪ ಮಾಹಿತಿ ಹರಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸೋನಿಯಾ ಬೆಂಬಲ:ಅಗ್ನಿಪಥ ವಿರುದ್ಧ ಚಳವಳಿ ನಡೆಸುತ್ತಿರುವ ಯುವಕರಿಗೆ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಹೇಳಿದ್ದಾರೆ. ಇದೊಂದು ದಿಕ್ಕುದೆಸೆಯಿಲ್ಲದ, ವಿವಾದಾತ್ಮಕ ಹಾಗೂ ಹಲವು ಅಪಾಯಗಳನ್ನು ಒಳಗೊಂಡಿ ರುವ ಯೋಜನೆಯಾಗಿದೆ ಎಂದು ಟೀಕಿಸಿದ್ದಾರೆ.
ಬೆಂಗಳೂರು:ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆಗೆ ರಾಜ್ಯದಲ್ಲೂ ವಿರೋಧ ವ್ಯಕ್ತವಾಗಿದ್ದು, ಧಾರವಾಡ ಹಾಗೂ ಬೆಳಗಾವಿಯಲ್ಲಿ ಶನಿವಾರ ಪ್ರತಿಭಟನೆ ನಡೆದಿದೆ. ಅಗ್ನಿಪಥ ಯೋಜನೆ ಕೈಬಿಟ್ಟು ಮೊದಲಿನಂತೆ ಸುದೀರ್ಘ ಅವಧಿಗೆ ಸೇನೆಯಲ್ಲಿ ನೇಮಕಾತಿ ನಡೆಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲು ಯುವಕರು ಧಾರವಾಡದಲ್ಲಿ ಜಮಾವಣೆಗೊಳ್ಳಲು ನಿರ್ಧರಿಸಿದ್ದರು. ಆದರೆ, ನರೇಗಲ್ ಪೆಟ್ರೋಲ್ ಬಂಕ್ ವೃತ್ತದಲ್ಲಿ ಪೊಲೀಸರು ಯುವಕರನ್ನು ತಡೆದರು. ಗುಂಪುಗೂಡುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ತಡೆದಾಗ ವಾಕ್ಸಮರ ನಡೆಯಿತು. ಅದು ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಲಾಠಿ ಬೀಸಿದರು. ಲಾಠಿಗೆ ಹೆದರಿದ ಯುವಕರು ಸ್ಥಳದಿಂದ ಕಾಲ್ಕಿತ್ತು ಚೆಲ್ಲಾಪಿಲ್ಲಿಯಾಗಿ ಓಡಿದರು. ಕೈಗೆ ಸಿಕ್ಕ ಸುಮಾರು 30ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ಇನ್ನು ಸೇನಾ ಆಕಾಂಕ್ಷಿಗಳು ಬೆಳಗಾವಿಯ ಗೋಕಾಕ, ನಿಪ್ಪಾಣಿ, ಖಾನಾಪುರ ಸೇರಿ ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ. ಜೂ.20ರಂದು ಖಾನಾಪುರ ಬಂದ್​ಗೆ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಕರೆ ಕೊಟ್ಟರೆ, ಅದೇ ದಿನ ಬೆಳಗಾವಿ ಬಂದ್​ಗೂ ಕರೆ ಕೊಡಲಾಗಿದೆ ಎಂದು ಆಕಾಂಕ್ಷಿಗಳು ವಾಟ್ಸ್​ಆಪ್ ಸ್ಟೇಟಸ್ ಹಾಕುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + one =
Remember me
