ನವದೆಹಲಿ/ರಾಂಚಿ:ಭೂ ಹಗರಣಕ್ಕೆ ಸಂಬಂಧಿಸಿದ ಹಣಕಾಸು ದುರ್ಬಳಕೆ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್​ರ ದೆಹಲಿ ನಿವಾಸದ ಮೇಲೆ ದಾಳಿ ಮಾಡಿ ಶೋಧಿಸಿದ ಅನುಷ್ಠಾನ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಅಲ್ಲಿಂದ 36 ಲಕ್ಷ ರೂ. ನಗದು ಮತ್ತು ಒಂದು ಬಿಎಂಡಬ್ಲ್ಯು ಎಸ್​ಯುುವಿ ಕಾರು, ಕೆಲವು ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಇ.ಡಿ. ಅಧಿಕಾರಿಗಳು ಬುಧವಾರ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಸೊರೇನ್​ರ ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಇನ್ನೊಬ್ಬ ಕಾಂಗ್ರೆಸೇತರ ಮುಖ್ಯಮಂತ್ರಿಗೆ ಸುತ್ತಿಕೊಂಡ ಕಾನೂನು ಉರುಳು ಬಿಗಿಯಾಗುತ್ತಿದೆ.
ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಸೊರೇನ್​ರ ದೆಹಲಿ ನಿವಾಸಕ್ಕೆ ಸೋಮವಾರ ದಾಳಿ ಮಾಡಿದ್ದ ಇ.ಡಿ. ತಂಡ, ಸೊರೇನ್ ‘ನಾಪತ್ತೆಯಾಗಿದ್ದಾರೆ’ ಎಂದು ಹೇಳಿತ್ತು. ಮಂಗಳವಾರ ಸೊರೇನ್ ರಾಂಚಿಯಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಬಂದು, ಮಿತ್ರಪಕ್ಷಗಳ ಶಾಸಕರ ಸಭೆ ನಡೆಸಿ ಅಚ್ಚರಿ ಮೂಡಿಸಿದರು. ಈ ಮೂಲಕ ತಮ್ಮ ‘ನಾಪತ್ತೆ’ ಬಗ್ಗೆ 24 ಗಂಟೆಗಳಿಂದ ಉಂಟಾಗಿದ್ದ ಊಹಾಪೋಹಗಳಿಗೆ ಸೊರೇನ್ ತೆರೆ ಎಳೆದರು.
ಇ.ಡಿ. ಕ್ರಮಕ್ಕೆ ಹೆದರಿ ಸಿಎಂ ‘ತಲೆ ತಪ್ಪಿಸಿಕೊಂಡಿದ್ದಾರೆ’ ಎಂದು ಪ್ರತಿಪಕ್ಷ ಬಿಜೆಪಿ ಹೇಳಿತ್ತು. ರಾಂಚಿಯ ಏರ್​ಪೋರ್ಟ್ ರಸ್ತೆಯಲ್ಲಿರುವ ತನ್ನ ವಲಯ ಕಚೇರಿಯಿಂದ ಸೊರೇನ್​ರ ಗೃಹಕಚೇರಿಗೆ ಬುಧವಾರ ಮಧ್ಯಾಹ್ನ 1 ಗಂಟೆಗೂ ಮುಂಚೆ ತಲುಪುವುದಾಗಿ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಕೇಂದ್ರೀಯ ಭದ್ರತಾ ಪಡೆಗಳಿಗೆ ಇ.ಡಿ. ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಚಾರಣೆ ಪ್ರಕ್ರಿಯೆ ಜನವರಿ 20ರಂದು ಕೊನೆಗೊಂಡಲ್ಲಿಂದ ಆರಂಭವಾಗಲಿದೆ. ಆ ದಿನ ಸೊರೇನ್​ಗೆ 16-17 ಪ್ರಶ್ನೆಗಳನ್ನು ಕೇಳಿ ಹೇಳಿಕೆಯನ್ನು ಲಿಖಿತ ಹಾಗೂ ದೃಶ್ಯ-ಶ್ರಾವ್ಯ ಸ್ವರೂಪದಲ್ಲಿ ದಾಖಲಿಸಿಕೊಳ್ಳಲಾಗಿತ್ತು. ಹಣಕಾಸು ದುರುಪಯೋಗ ತಡೆ ಕಾನೂನು (ಪಿಎಂಎಲ್​ಎ) ಅನ್ವಯ 7 ಗಂಟೆ ವಿಚಾರಣೆ ನಡೆಸಲಾಗಿತ್ತು.
ಇ.ಡಿ. ಭೇಟಿಗೆ ಆಕ್ಷೇಪ:ಇ.ಡಿ. ಅಧಿಕಾರಿಗಳು ಸೋಮವಾರ ಸೊರೇನ್​ರ ದೆಹಲಿ ನಿವಾಸಕ್ಕೆ ಬಂದಿದ್ದನ್ನು ಜೆಎಂಎಂ ಪ್ರಶ್ನಿಸಿದೆ. ಬುಧವಾರ (ಜ. 31) ಹೇಳಿಕೆ ದಾಖಲಿಸುವುದಾಗಿ ಇ.ಡಿ.ಗೆ ಸಿಎಂ ಸೊರೇನ್ ತಿಳಿಸಿರುವಾಗ ಇ.ಡಿ. ಅಧಿಕಾರಿಗಳು ಸೋಮವಾರ ದೆಹಲಿ ನಿವಾಸಕ್ಕೆ ಬಂದಿದ್ದೇಕೆ? ಇದು ಬಿಜೆಪಿ ನಾಯಕ ಮರಂಡಿ ಮತ್ತು ಇ.ಡಿ.ಯ ಪೂರ್ವಯೋಜಿತ ಕೃತ್ಯವಲ್ಲವೇ? ಸಿಎಂರನ್ನು ಕ್ರಿಮಿನಲ್ ರೀತಿ ಪರಿಗಣಿಸುತ್ತಿದ್ದಾರೆ ಎಂದು ಜೆಎಂಎಂ ವಕ್ತಾರ ಸುಪ್ರಿಯೋ ಭಟ್ಟಾಚಾರ್ಯ ಹೇಳಿದ್ದಾರೆ.
ಪತ್ನಿ ಕಲ್ಪನಾ ಹಾಜರಿ:ಸೊರೇನ್ ರಾಂಚಿಗೆ ಮರಳಿದ ನಂತರ ಅವರ ಅಧ್ಯಕ್ಷತೆಯಲ್ಲಿ ನಡೆದ ಆಳುವ ಕೂಟದ ಶಾಸಕರ ಸಭೆಯಲ್ಲಿ ಸಿಎಂ ಪತ್ನಿ ಕಲ್ಪನಾ ಕೂಡ ಭಾಗವಹಿಸಿದ್ದು ಗಮನಾರ್ಹವಾಗಿತ್ತು. ಸೊರೇನ್ ಬಂಧನವಾದರೆ ಕಲ್ಪನಾ ಸಿಎಂ ಆಗುತ್ತಾರೆ ಎಂದು ಹೇಳಲಾಗುತ್ತಿದೆ.
ಸೊರೇನ್ ನಾಪತ್ತೆ ಜೆಎಂಎಂ-ಬಿಜೆಪಿ ವಾಕ್ಸಮರ:ಸೊರೇನ್ ಮಂಗಳವಾರ ರಾಂಚಿಯ ತಮ್ಮ ನಿವಾಸಕ್ಕೆ ಮರಳಿದ ನಂತರ ಆಳುವ ಜೆಎಂಎಂ ಮತ್ತು ಪ್ರತಿಪಕ್ಷ ಬಿಜೆಪಿ ಶಾಸಕರ ನಡುವೆ ವಾಕ್ಸಮರ ನಡೆಯಿತು. ಸೊರೇನ್ ದೆಹಲಿಗೆ ತೆರಳಿದ ನಂತರ ‘ನಾಪತ್ತೆಯಾಗಿದ್ದರು’ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಆದರೆ, ಕೇಸರಿ ಪಡೆ ವದಂತಿ ಹಬ್ಬಿಸುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಎಂಎಂ ಮುಖಂಡರು ಟೀಕಿಸಿದ್ದಾರೆ. ‘ಬಿಜೆಪಿಯ ಇ.ಡಿ., ದೆಹಲಿ ಪೊಲೀಸ್ ಮತ್ತು ಗುಪ್ತಚರ ದಳ ಒಟ್ಟಾಗಿ ಸೊರೇನ್​ರನ್ನು ಪತ್ತೆ ಮಾಡಲು ಆಗಲಿಲ್ಲ. ಇದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ವೈಫಲ್ಯ. ಅವರು ತಕ್ಷಣವೇ ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್ ಶಾಸಕಿ ದೀಪಿಕಾ ಪಾಂಡೆ ಒತ್ತಾಯಿಸಿದರು. ಜನವರಿ 27ರ ರಾತ್ರಿ ಸೊರೇನ್ ರಾಂಚಿಯಿಂದ ದೆಹಲಿಗೆ ತೆರಳಿದ್ದರು.
ಪರಾರಿಯಾದ ಸಿಎಂ ಬಿಜೆಪಿ ವ್ಯಂಗ್ಯ:‘ಜನವರಿ 28ರ ರಾತ್ರಿ ದೆಹಲಿ ನಿವಾಸದಿಂದ ಓಡಿ ಹೋದ ಸೊರೇನ್ ರಾಂಚಿಯ ನಿವಾಸಕ್ಕೆ ಸುರಕ್ಷಿತವಾಗಿ ಮರಳಿರುವುದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ’ ಎಂದು ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಂಡಿ ಎಕ್ಸ್​ನಲ್ಲಿ ವ್ಯಂಗ್ಯವಾಗಿ ತಿವಿದಿದ್ದಾರೆ.
ರಾಜ್ಯಪಾಲರ ಪರಿಶೀಲನೆ:ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಜಾರ್ಖಂಡ್​ನ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಎಲ್ಲರಂತೆ ತಾವು ಕೂಡ ಸೊರೇನ್​ರ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿರುವುದಾಗಿ ರಾಜ್ಯಪಾಲರು ಹೇಳಿದ್ದಾರೆ.
ಹೃದಯದಲ್ಲಿ ನೆಲೆಸಿದ್ದೇನೆ:ಮಂಗಳವಾರ ರಾಂಚಿಗೆ ಮರಳಿದ ನಂತರ ಬಾಪು ವಾಟಿಕಾದಲ್ಲಿ ಮಹಾತ್ಮಾ ಗಾಂಧಿ ಹುತಾತ್ಮ ದಿನದ ಅಂಗವಾಗಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೊರೇನ್, ‘ನಾನು ನಾಪತ್ತೆಯಾಗಿಲ್ಲ. ಜನರ ಹೃದಯದಲ್ಲಿ ನೆಲೆಸಿದ್ದೇನೆ’ ಎಂದು ಹೇಳಿದರು.
ದೆಹಲಿಯಲ್ಲಿ ಶೋಧ:ದಿಲ್ಲಿಯ ಶಾಂತಿನಿಕೇತನ ಕಟ್ಟಡದಲ್ಲಿರುವ ಸೊರೇನ್​ರ ನಿವಾಸದ ಮೇಲೆ ಸೋಮವಾರ ದಾಳಿ ಮಾಡಿ ಶೋಧಿಸಿದ್ದ ಇ.ಡಿ. ಅಧಿಕಾರಿಗಳು, ಸಿಎಂರನ್ನು ಪ್ರಶ್ನಿಸಲೆಂದು 13 ಗಂಟೆ ಅಲ್ಲೇ ಕಾದು ಕುಳಿತಿದ್ದರು. ಬುಧವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ವಿಚಾರಣೆಗಾಗಿ ಸಂಸ್ಥೆ ಮುಂದೆ ಹಾಜರಾಗುವುದಾಗಿ ಸ್ವತಃ ಸೊರೇನ್ ಇದಕ್ಕೂ ಮುನ್ನ ಹೇಳಿದ್ದರು. ಆದರೂ ದಾಳಿ ನಡೆಸಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಹಲವೆಡೆ ನಿಷೇಧಾಜ್ಞೆ ಜಾರಿ:ರಾಜಕೀಯ ಬೆಳವಣಿಗೆಗಳ ಕಾರಣ ಸಿಎಂ ಸೊರೇನ್​ರ ನಿವಾಸ, ರಾಜಭವನ ಮತ್ತು ದೊರಾಂಡದಲ್ಲಿರುವ ಇ.ಡಿ. ಕಚೇರಿ ಸಹಿತ ರಾಂಚಿಯ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 10 ಗಂಟೆವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
