ಭಾರತದಲ್ಲಿ ಆಮದು ಅವಲಂಬಿತವಾಗಿರುವ ಎರಡು ಪ್ರಮುಖ ಕೃಷಿ ಸರಕುಗಳಿವೆ. ಅವು ಖಾದ್ಯ ತೈಲ ಮತ್ತು ಬೇಳೆ ಕಾಳುಗಳು (ದ್ವಿದಳ ಧಾನ್ಯಗಳು). 2013-14 ಮತ್ತು 2022-23ರ ನಡುವೆ ಭಾರತದ ಖಾದ್ಯತೈಲದ ಆಮದುಗಳ ಮೌಲ್ಯವು (ವಾರ್ಷಿಕ ಆಮದು ಖರೀದಿ ವೆಚ್ಚವು) 44,038  ಕೋಟಿ ರೂಪಾಯಿಯಿಂದ 1,67,270 ಕೋಟಿ ರೂಪಾಯಿಗೆ ಏರಿದೆ. ದೇಶವು ವಾರ್ಷಿಕವಾಗಿ ಸೇವಿಸುವ 2.4-2.5 ಕೋಟಿ ಟನ್ ಅಡುಗೆ ಎಣ್ಣೆಯಲ್ಲಿ ಕೇವಲ 90 ಲಕ್ಷದಿಂದ 1 ಕೋಟಿ ಟನ್​ನಷ್ಟು ಮಾತ್ರ ದೇಶೀಯವಾಗಿ ಉತ್ಪಾದಿಸಲಾಗುತ್ತದೆ. ಉಳಿದ 1.4-1.5 ಕೋಟಿ ಟನ್​ನಷ್ಟು ಅಡುಗೆ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಖಾದ್ಯ ತೈಲಕ್ಕೆ ಹೋಲಿಸಿದರೆ ದ್ವಿದಳ ಧಾನ್ಯಗಳ ಪರಿಸ್ಥಿತಿ ಆಶಾದಾಯಕವಾಗಿದ್ದು ಆತ್ಮನಿರ್ಭರತೆ (ಸ್ವಾವಲಂಬನೆ) ಸಾಧಿಸುವತ್ತ ಭಾರತ ಹೆಜ್ಜೆ ಹಾಕುತ್ತಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಒಂಬತ್ತು ವರ್ಷಗಳ ಅವಧಿಯಲ್ಲಿ ದ್ವಿದಳ ಧಾನ್ಯಗಳ ಆಮದುಗಳ ಮೌಲ್ಯವು ಅತ್ಯಲ್ಪ ಏರಿಕೆಯಾಗಿದೆ. 11,036 ಕೋಟಿಯಿಂದ 15,780 ಕೋಟಿ ರೂಪಾಯಿ ಮಾತ್ರ ಹೆಚ್ಚಿದೆ. ಆಮದುಗಳು 2016-17ರಲ್ಲಿ ಗರಿಷ್ಠ ಪ್ರಮಾಣದಲ್ಲಿದ್ದು, 28,523 ಕೋಟಿ ರೂಪಾಯಿಗಳನ್ನು ಆಗ ವ್ಯಯಿಸಲಾಗಿತ್ತು. ನಂತರ ಆಮದು ಪ್ರಮಾಣದ ಗಣನೀಯವಾಗಿ ಕಡಿಮೆಯಾಗುತ್ತ ಬಂದಿದೆ. ಇನ್ನು ಅಳತೆ ಮಾನದಂಡದಲ್ಲಿ ಹೇಳುವುದಾದರೆ, ಭಾರತದ ಬೇಳೆ ಕಾಳುಗಳ ಆಮದು 2013-14 ರಲ್ಲಿ 31.8 ಲಕ್ಷ ಟನ್​ಗಳಿಂದ 2016-17ರಲ್ಲಿ 66.1 ಲಕ್ಷ ಟನ್​ಗಳಿಗೆ ದ್ವಿಗುಣಗೊಂಡಿತು. ತದನಂತರ ಇದು 2021-22ರಲ್ಲಿ 27 ಲಕ್ಷ ಟನ್​ಗೆ ಮತ್ತು 2022-23 ರಲ್ಲಿ 25.2 ಲಕ್ಷ ಟನ್​ಗೆ ಇಳಿಕೆಯಾಯಿತು. ಹೀಗಾಗಿ, ಮೋದಿ ಸರ್ಕಾರದ ಒಂಬತ್ತು ವರ್ಷಗಳ ಅವಧಿಯಲ್ಲಿ ವಾಸ್ತವವಾಗಿ ಬೇಳೆ ಕಾಳು ಆಮದು ಕುಸಿತ ಕಂಡಿರುವುದನ್ನು ಇದು ಸೂಚಿಸುತ್ತದೆ. ಖಾದ್ಯ ತೈಲದ ಆಮದು ಇದಕ್ಕೆ ತದ್ವಿರುದ್ಧವಾಗಿ ಏರಿಕೆಯಾಗಿದೆ. 2013-14 ಮತ್ತು 2022-23 ರ ನಡುವೆ 79.4 ಲಕ್ಷ ಟನ್​ಗಳಿಂದ 1.567 ಕೋಟಿ ಟನ್​ಗಳಿಗೆ ಖಾದ್ಯ ತೈಲ ಆಮದು ಹೆಚ್ಚಿದೆ. ದೇಶೀಯ ಉತ್ಪಾದನೆ ಹೆಚ್ಚಳವಾಗಿರುವುದೇ ಬೇಳೆ ಕಾಳುಗಳ ಆಮದು ಕಡಿತ ಆಗಿರುವುದಕ್ಕೆ ಮೂಲ ಕಾರಣವಾಗಿದೆ.
ಕೃಷಿ ಸಚಿವಾಲಯದ ಪ್ರಕಾರ, ಭಾರತದ ದ್ವಿದಳ ಧಾನ್ಯಗಳ ಉತ್ಪಾದನೆ ಯು 2013-14 ರಲ್ಲಿ 1.926 ಕೋಟಿ ಟನ್​ಗಳಿಂದ 2022-23 ರಲ್ಲಿ 2.75 ಕೋಟಿ ಟನ್​ಗಳಿಗೆ ಹೆಚ್ಚಾಗಿದೆ. ಖಾಸಗಿ ವ್ಯಾಪಾರಿಗಳ ಅಂದಾಜಿನ ಪ್ರಕಾರ ಈ ಉತ್ಪಾದನೆಯು 2.3- 2.4 ಕೋಟಿ ಟನ್ ಇದೆ. ಈ ಎರಡೂ ಅಂದಾಜು ಅಂಕಿ-ಅಂಶಗಳನ್ನು ಗಣನೆ ತೆಗೆದುಕೊಂಡರೂ ಆತ್ಮನಿರ್ಭರತೆ ಅಥವಾ ಸ್ವಾವಲಂಬನೆ ಅನುಪಾತವು ದ್ವಿದಳ ಧಾನ್ಯಗಳಲ್ಲಿ ಶೇಕಡಾ 90ಕ್ಕಿಂತ ಅಧಿಕವಾಗಿದೆ. ಖಾದ್ಯ ತೈಲಗಳಿಗೆ ಈ ಆತ್ಮನಿರ್ಭರತೆಯು ಶೇಕಡಾ 40ರಷ್ಟು ಮಾತ್ರ ಇದೆ.
ಹಳದಿ/ಬಿಳಿ ಬಟಾಣಿ ಮತ್ತು ಕಡಲೆ ಈ ಎರಡೂ ಧಾನ್ಯಗಳ ಆಮದುಗಳು ಈಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಕುಸಿತ ದಾಖಲಿಸಿವೆ. 30 ಲಕ್ಷ ಟನ್ ಬಟಾಣಿ ಮತ್ತು 10 ಲಕ್ಷ ಟನ್ ಕಡಲೆಯನ್ನು ಈ ಮೊದಲು ವಾರ್ಷಿಕವಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೀಗ ಇವುಗಳ ಆಮದು ನಗಣ್ಯ ಮಟ್ಟಕ್ಕೆ ಕುಸಿದಿದೆ. ಇದಕ್ಕೆ ಕಾರಣ ಸರಳವಾಗಿದೆ. ಹಳದಿ/ಬಿಳಿ ಬಟಾಣಿ ಮುಖ್ಯವಾಗಿ ಕೆನಡಾ, ರಷ್ಯಾ, ಯೂಕ್ರೇನ್ ಮತ್ತು ಲಿಥುವೇನಿಯಾದಿಂದ ಆಮದು ಮಾಡಿಕೊಳ್ಳ ಲಾಗುತ್ತದೆ. ಇದು ಕಡಲೆಗೆ ಪರ್ಯಾಯವಾಗಿದೆ. ಭಾರತದಲ್ಲಿ ಕಡಲೆ ಉತ್ಪಾದನೆಯು 2013-14ರಲ್ಲಿ 95.3 ಲಕ್ಷ ಟನ್​ನಿಂದ ನಂತರ ಎರಡು ವರ್ಷಗಳಲ್ಲಿ 73.3 ಲಕ್ಷ ಟನ್ ಮತ್ತು 70.6 ಲಕ್ಷ ಟನ್​ಗೆ ಕುಸಿದಿದ್ದರಿಂದ ಕಡಲೆ ಬೆಲೆಗಳು ತೀವ್ರ ಏರಿಕೆ ಕಂಡವು. ಇದರಿಂದಾಗಿ ಅನೇಕ ಪಾಕವಿಧಾನಗಳಲ್ಲಿ ಕಡಲೆ (ಚನಾ ದಾಲ್) ಬದಲಾಗಿ ಹಳದಿ ಬಟಾಣಿಯು ಹೆಚ್ಚಾಗಿ ಬಳಕೆಯಾಯಿತು. ಬೇಸನ್ (ಕಡಲೆ ಹಿಟ್ಟು) ತಯಾರಕರು ಕೂಡ ಅಗ್ಗದ ಹಳದಿ/ಬಿಳಿ ಬಟಾಣಿ ಸೇರಿಸುವ ಮೂಲಕ ಕಲಬೆರಕೆ ಮಾಡಿದರು ಎನ್ನಲಾಗಿದೆ. ಈ ಅವಧಿಯಲ್ಲಿ ಆಸ್ಟ್ರೇಲಿಯಾ ಮತ್ತು ರಷ್ಯಾದಿಂದ ಕಡಲೆ ಆಮದು ಕೂಡ ಹೆಚ್ಚಾಯಿತು. ಆದರೆ, 2016-17ರ ನಂತರ ಪರಿಸ್ಥಿತಿ ಬದಲಾಯಿತು, ಕಡಲೆಯ ದೇಶೀಯ ಉತ್ಪಾದನೆಯು 2017-18ರಲ್ಲಿ 1.138 ಕೋಟಿ ಟನ್ ಇತ್ತು. 2021-22 ಮತ್ತು 2022-23ರಲ್ಲಿ ತಲಾ 1.354 ಕೋಟಿ ಟನ್​ಗೆ ಇದು ಜಿಗಿತವನ್ನು ದಾಖಲಿಸಿತು. ಖಾಸಗಿ ವ್ಯಾಪಾರಿಗಳ ಅಂದಾಜಿನ ಪ್ರಕಾರ ಇದು 1.1-1.2 ಕೋಟಿ ಟನ್ ಆಗಿದ್ದರೂ, ಮೋದಿ ಸರ್ಕಾರದ ಆರಂಭಿಕ ವರ್ಷಗಳಲ್ಲಿನ ಉತ್ಪಾದನೆಗಿಂತ ಗಣನೀಯ ಸುಧಾರಣೆ ಇದಾಗಿದೆ.
ಕಡಲೆ ಉತ್ಪಾದನೆಗೆ ಉತ್ತೇಜನವು ಎರಡು ಪ್ರಮುಖ ಸರ್ಕಾರಿ ಕ್ರಮಗಳ ಮೂಲಕ ದೊರೆಯಿತು. ಮೊದಲನೆಯ ಕ್ರಮವೆಂದರೆ ಮಾರ್ಚ್ 2018ರಿಂದ ಕಡಲೆ ಮೇಲೆ ಶೇಕಡಾ 60 ಆಮದು ಸುಂಕವನ್ನು ವಿಧಿಸಲಾಯಿತು. ಹಳದಿ/ಬಿಳಿ ಬಟಾಣಿಯ ಮೇಲೆ ಶೇಕಡಾ 50ರಷ್ಟು ಆಮದು ಸುಂಕವಿದೆ. ಅಲ್ಲದೆ, ಕೆಜಿಗೆ 200 ರೂಪಾಯಿಗಿಂತ ಕಡಿಮೆ ಬೆಲೆ ಇದ್ದರೆ ಆಮದು ಮಾಡಿಕೊಳ್ಳಲು ಅನುಮತಿಸಲಾಗುವುದಿಲ್ಲ ಎಂಬ ಷರತ್ತನ್ನು 2019ರ ಡಿಸೆಂಬರ್​ನಲ್ಲಿ ವಿಧಿಸಲಾಯಿತು. ಇದರಿಂದಾಗಿ ಆಮದು ಪ್ರಮಾಣ ಸಾಕಷ್ಟು ಕುಸಿದು, ಚಳಿಗಾಲದ ಋತುವಿನಲ್ಲಿ ಬೆಳೆಯುವ ದ್ವಿದಳ ಧಾನ್ಯಗಳ ಬೆಳೆ ಪ್ರದೇಶವನ್ನು ವಿಸ್ತರಿಸಲು ಭಾರತೀಯ ರೈತರನ್ನು ಉತ್ತೇಜಿಸುವಂತಾಯಿತು.
ಕಡಲೆಯ ದೇಶೀಯ ಉತ್ಪಾದನೆಗೆ ಪ್ರೋತ್ಸಾಹಿಸುವ ಇನ್ನೊಂದು ಕ್ರಮವೆಂದರೆ, ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್​ಪಿ) ಸರ್ಕಾರ ಖರೀದಿಸಲು ತೀರ್ವನಿಸಿದ್ದು. 2020 ರಲ್ಲಿ 21.4 ಲಕ್ಷ ಟನ್, 2021 ರಲ್ಲಿ 6.3 ಲಕ್ಷ ಟನ್, 2022ರಲ್ಲಿ 25.6 ಲಕ್ಷ ಟನ್ ಮತ್ತು ಈ ವರ್ಷ ಮೇ ಅಂತ್ಯದವರೆಗೆ 22.3 ಲಕ್ಷ ಟನ್ ಖರೀದಿಸಲಾಗಿದೆ. 2013-14 ಮತ್ತು 2022-23ರ ನಡುವೆ ಕ್ವಿಂಟಾಲ್​ಗೆ 3,100ರಿಂದ 5,335 ರೂಪಾಯಿ ದರದಲ್ಲಿ ಕಡಲೆಯನ್ನು ಎಂಎಸ್​ಪಿಯಲ್ಲಿ ಖರೀದಿಸಲಾಗಿದೆ.
ದೇಶೀಯವಾಗಿ ಉತ್ಪಾದನೆಯಲ್ಲಿ ಕಡಲೆಯ ಯಶಸ್ಸು ಇತರ ಬೇಳೆಕಾಳುಗಳಲ್ಲಿ ವಿಶೇಷವಾಗಿ ತೊಗರಿಯಲ್ಲಿ ಕಂಡುಬಂದಿಲ್ಲ. ತೊಗರಿಯ ದೇಶೀ ಉತ್ಪಾದನೆಯು ಅನಿಯಮಿತ ಪ್ರವೃತ್ತಿಯನ್ನು ತೋರಿಸಿದೆ. 2013-14 ರಲ್ಲಿ 31.7 ಲಕ್ಷ ಟನ್​ನಿಂದ 2016-17 ರಲ್ಲಿ 48.7 ಲಕ್ಷ ಟನ್​ಗೆ ಏರಿಕೆಯಾಯಿತು. 2021-22ರಲ್ಲಿ 42.2 ಲಕ್ಷ ಟನ್ ಮತ್ತು 2022-23 ರಲ್ಲಿ 34.3 ಲಕ್ಷ ಟನ್​ಗೆ ಕುಸಿಯಿತು. ಮುಂಗಾರು ಬೆಳೆಯಾದ ಉದ್ದು ಕೂಡ ಇದೇ ಪ್ರವೃತ್ತಿ ತೋರಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇದರ ದೇಶೀ ಉತ್ಪಾದನೆಯು ಸರಾಸರಿ 24.2 ಲಕ್ಷ ಟನ್ ಇದೆ. 2017-18ರಲ್ಲಿ 34.9 ಲಕ್ಷ ಟನ್ ಮತ್ತು 2018-19ರ 30.6 ಲಕ್ಷ ಟನ್ ಉದ್ದು ಉತ್ಪಾದನೆಯಾಗಿತ್ತು.
2022-23 ರಲ್ಲಿ ಹೆಸರು ಉತ್ಪಾದನೆಯು ಅಂದಾಜು 37.4 ಲಕ್ಷ ಟನ್ ಆಗಿದ್ದು, ಮೊದಲ ಬಾರಿಗೆ ತೊಗರಿಯನ್ನು (34.3 ಲಕ್ಷ ಟನ್) ಹಿಂದಿಕ್ಕಿದೆ. ಬೇಳೆಕಾಳು ದೇಶೀ ಉತ್ಪಾದನೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಉದ್ದು 4ನೇ ಸ್ಥಾನದಿಂದ (ಉದ್ದು, ತೊಗರಿ ಮತ್ತು ಕಡಲೆ ನಂತರ) ಎರಡನೇ ಸ್ಥಾನಕ್ಕೆ (ಕಡಲೆ ನಂತರ ) ಏರಿದೆ. ಮುಂಗಾರು ಸಮಯದಲ್ಲಿ ಹೆಸರನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ, ಇತ್ತೀಚೆಗೆ ಹೆಚ್ಚಿನ ಉತ್ಪಾದನೆಯು ಚಳಿಗಾಲ ಮತ್ತು ಬೇಸಿಗೆಯಲ್ಲಿ ಕೊಯ್ಲು ಮಾಡಿದ ಬೆಳೆಗಳಿಂದ ಬಂದಿದೆ.
ಭೀಕರ ಅಪಘಾತ: ಕಾರಲ್ಲಿದ್ದ ಸ್ನೇಹಿತರಿಬ್ಬರ ಸಾವು, ಇನ್ನಿಬ್ಬರ ಪರಿಸ್ಥಿತಿ ಗಂಭೀರ..

ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 16 =
Remember me
