ಹೊಸ ಕೃಷಿ ಕಾನೂನುಗಳಿಗೆ ಮುಂದುವರಿದ ವಿಪಕ್ಷ ಪ್ರತಿರೋಧ, ರಾಜಧಾನಿಯ ಗಡಿಯಲ್ಲಿ ರೈತ ಪ್ರತಿಭಟನೆಯ ಗದ್ದಲಗಳ ನಡುವೆ ಕುತೂಹಲ ಕೆರಳಿಸಿರುವ ಕೇಂದ್ರ ಬಜೆಟ್ ಅಧಿವೇಶನ ಶುಕ್ರವಾರ ಶುರುವಾಗಿದೆ. ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಮಾತನಾಡುವುದಕ್ಕೂ ಮೊದಲೇ ಈ ಹಿಂದೆಯೇ ಘೋಷಿಸಿದ ಪ್ರಕಾರ, ವಿಪ್ಷಕಗಳ ಸದಸ್ಯರು ಸಭಾತ್ಯಾಗ ಮಾಡಿದರು. ಈ ವಿದ್ಯಮಾನದ ನಡುವೆ, 2020-21ನೇ ಸಾಲಿನ ಆರ್ಥಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದೆ.
ನವದೆಹಲಿ:ಕರೊನಾ ಸಂಕಷ್ಟದ ಕಾರಣ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೈನಸ್ ಶೇಕಡ 7.7ರ ಜಿಡಿಪಿ ದಾಖಲಾದರೂ, 2022ನೇ ಸಾಲಿನ ಆರ್ಥಿಕ ವರ್ಷ ಶೇಕಡ 11 ತಲುಪಲಿದೆ. ಆಕಾರದ ಆರ್ಥಿಕ ಚೇತರಿಕೆಯನ್ನು ದೇಶ ನಿರೀಕ್ಷಿಸುತ್ತಿದೆ ಎಂದು ಶುಕ್ರವಾರ ಪ್ರಕಟವಾಗಿರುವ ಬಜೆಟ್ ಪೂರ್ವದ ಆರ್ಥಿಕ ಸಮೀಕ್ಷಾ ವರದಿ ತಿಳಿಸಿದೆ. ಪ್ರಸಕ್ತ ಆರ್ಥಿಕ ಸಾಲಿನಂತೆಯೇ 1979-80ನೇ ಸಾಲಿನಲ್ಲಿ ಇದೇ ರೀತಿ ಶೇಕಡ 5.2ಕ್ಕೆ ಸಂಕೋಚನಗೊಂಡ ಜಿಡಿಪಿ ದಾಖಲಾಗಿತ್ತು. ಕೋವಿಡ್ 19 ಲಾಕ್​ಡೌನ್ ಬಳಿಕ ದೇಶದ ಕೃಷಿ ಕ್ಷೇತ್ರ ಒಂದೇ ಆಶಾದಾಯಕ ಕ್ಷೇತ್ರವಾಗಿ ಕಾಣಿಸತೊಡಗಿದೆ. ಭಾರತದ ನಿಜವಾದ ಜಿಡಿಪಿ 2021-22ನೇ ಸಾಲಿಗೆ ಶೇಕಡ 11 ಮತ್ತು ನಾಮಿನಲ್ ಜಿಡಿಪಿ ಶೇಕಡ 15.4 ಎಂಬ ಮುನ್ನೋಟ ನೀಡಲಾಗಿದೆ. ಈ ವರ್ಷದ ಆರ್ಥಿಕ ಸಮೀಕ್ಷೆ ಪೇಪರ್​ಲೆಸ್ ಎಂಬುದು ಗಮನಾರ್ಹ.
ಕಲಾಪ ಬಹಿಷ್ಕರಿಸಿದ ವಿಪಕ್ಷ:ರಾಷ್ಟ್ರಪತಿ ಭಾಷಣ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಜೈ ಜವಾನ್ ಜೈ ಕಿಸಾನ್ ಘೋಷಣೆ ಕೂಗಿ ಕೃಷಿ ಕಾನೂನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಸೆಂಟ್ರಲ್ ಹಾಲ್ ಗ್ಯಾಲರಿಯಲ್ಲಿದ್ದ ಇನ್ನೂ ಕೆಲವು ಸದಸ್ಯರು ಘೋಷಣೆ ಕೂಗಿ ಸಭಾ ತ್ಯಾಗ ಮಾಡಿದರು. ವಿಪಕ್ಷ ಸದಸ್ಯರೆಲ್ಲರೂ ಕಲಾಪ ಬಹಿಷ್ಕರಿಸಿ ಹೊರನಡೆದರು.
ಬಜೆಟ್ ಬಗ್ಗೆ ಪ್ರಧಾನಿ ಸುಳಿವು:ಕರೊನಾ ಸಂಕಷ್ಟದಿಂದ ಉಂಟಾದ ಹಿನ್ನಡೆಗೆ ಉತ್ತೇಜನ ನೀಡಲು ಕಳೆದ ವರ್ಷ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಲ್ಕು-ಐದು ಮಿನಿ ಬಜೆಟ್ ರೂಪದಲ್ಲಿ ಪ್ಯಾಕೇಜ್​ಗಳನ್ನು ಘೋಷಿಸಿದ್ದರು. ಅದರ ಮುಂದುವರಿದ ಭಾಗ ಈ ಸಲದ ಮುಂಗಡಪತ್ರ ಎಂದು ಪ್ರಧಾನಿ ಮೋದಿ ಬಜೆಟ್ ಹೇಗಿರಲಿದೆ ಎಂಬುದರ ಸುಳಿವು ನೀಡಿದ್ದಾರೆ.
ಚೀನಾಕ್ಕೆ ವಾರ್ನಿಂಗ್:ಭೌಗೋಳಿಕ ಸಾರ್ವಭೌಮತೆ ಕಾಪಾಡುವ ವಿಷಯದಲ್ಲಿ ಭಾರತ ರಾಜಿಮಾಡಿ ಕೊಳ್ಳುವುದಿಲ್ಲ. ಸರ್ಕಾರ ಈ ವಿಚಾರವಾಗಿ ಜಾಗೃತವಾಗಿದ್ದು ದೇಶದ ಹಿತಾಸಕ್ತಿ ಕಾಪಾಡಲು ಕೇಂದ್ರ ಪೂರ್ಣ ಪ್ರಮಾಣದಲ್ಲಿ ಬದ್ಧವಾಗಿದೆ ಎಂದು ಚೀನಾಕ್ಕೆ ಪರೋಕ್ಷ ರಾಷ್ಟ್ರಪತಿ ಎಚ್ಚರಿಕೆ ನೀಡಿದರು.
ಸಂಸತ್ತಿನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ | ಸಂಸತ್​ನಲ್ಲಿ ಚರ್ಚೆ, ಭಿನ್ನ ಅಭಿಪ್ರಾಯ ಇರಬೇಕು
ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ಭಾಷಣದ ವೇಳೆ ಕಲಾಪ ಬಹಿಷ್ಕರಿಸಿದ ವಿಪಕ್ಷ ಸದಸ್ಯರ ಕ್ರಮ ಚರ್ಚೆಗೀಡಾಗಿದೆ. ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಂಸತ್ತಿನೊಳಗೆ ದೇಶದ ಮತ್ತು ದೇಶವಾಸಿಗಳಿಗೆ ಒಳಿತಾಗುವ ವಿಚಾರಗಳ, ವಿಷಯಗಳ ಚರ್ಚೆ, ವಿಭಿನ್ನ ದೃಷ್ಟಿಕೋನಗಳ ಮಂಡನೆ ನಡೆಯಬೇಕು. ಎಲ್ಲ ಸಂಸತ್ ಸದಸ್ಯರೂ ಇದರಲ್ಲಿ ಭಾಗಿಯಾಗಬೇಕು. ಈ ವಿಚಾರದಲ್ಲಿ ನಾಚಿಕೆ, ಸಂಕೋಚ ಬೇಕಾಗಿಲ್ಲ ಎಂದರು.
ಕೇಂದ್ರ ಸರ್ಕಾರ ಏಳು ತಿಂಗಳ ಹಿಂದೆ ಜಾರಿಗೊಳಿಸಿರುವ ಮೂರು ಮಹತ್ವದ ಕೃಷಿ ಕಾನೂನುಗಳ ಪ್ರಯೋಜನ ಈಗಾಗಲೇ 10 ಕೋಟಿಗೂ ಅಧಿಕ ಸಣ್ಣ ರೈತರಿಗೆ ಆಗಿದೆ. ಅನೇಕ ರಾಜಕೀಯ ಪಕ್ಷಗಳು ಈ ಸುಧಾರಣೆಯನ್ನು ಬೆಂಬಲಿಸಿವೆ. ಆದಾಗ್ಯೂ, ಮಹತ್ವದ ಮೂರು ಕೃಷಿ ಕಾನೂನುಗಳನ್ನು ತಡೆ ಹಿಡಿಯುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಕೋರ್ಟ್ ಏನೇ ಆದೇಶ ನೀಡಿದರೂ ಸರ್ಕಾರ ಅದನ್ನು ಗೌರವಿಸುತ್ತದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ ಶುಕ್ರವಾರ ಸಂಸತ್ತಿನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಹೇಳಿದರು. ರಕ್ಷಣಾ ಕ್ಷೇತ್ರವೂ ಸೇರಿ ನಾನಾ ವಿಚಾರಗಳನ್ನು ಉಲ್ಲೇಖಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಒಂದು ಗಂಟೆ ಮಾತನಾಡಿದರು.
ಖಂಡನೀಯ ನಡೆ:ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ರೈತರ ಪೈಕಿ ಒಂದು ಬಣ ಗಣರಾಜ್ಯೋತ್ಸವದ ದಿನ ತಿರಂಗಾಕ್ಕೆ ಅವಮಾನ ಮಾಡಿದ್ದು ಅಕ್ಷಮ್ಯ. ಹಿಂಸಾಚಾರಕ್ಕೆ ನಡೆಸಿದ್ದು ಖಂಡನೀಯ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ ಕೃತ್ಯವನ್ನು ಖಂಡಿಸಿದರು.
ಮೂಲ ಸೌಕರ್ಯ:ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯವನ್ನು ಒದಗಿಸುವುದರಿಂದ ಹೆಚ್ಚಿನ ಪ್ರಯೋಜನವಾಗುವುದು ಕೃಷಿ ಕ್ಷೇತ್ರಕ್ಕೇ. ಆದ್ದರಿಂದ ಎನ್​ಆರ್​ಇಜಿಎ ನಿಧಿಯನ್ನು ಕಳೆದ ವರ್ಷದಷ್ಟೇ ಅಥವಾ ಕನಿಷ್ಠ 1 ಲಕ್ಷ ಕೋಟಿ ರೂಪಾಯಿ ಮೀಸಲಿಡಬೇಕು.
ಪ್ರತಿಭಟನಾ ಮೆರವಣಿಗೆ ಮೂಲಕವೇ ವಿಪಕ್ಷ ಸದಸ್ಯರು ಸಂಸತ್​ಗೆ ಬಂದರೆ ತಪ್ಪೇನಿಲ್ಲ. ಪ್ರತಿಭಟನೆ ನಡೆಸುವುದೂ ತಪ್ಪಲ್ಲ. ಆದರೆ, ನಂತರ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು. ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಿ ದೇಶಕ್ಕೆ ಒಳಿತಾಗುವ ಕೆಲಸವನ್ನು ಮಾಡಬೇಕು.
|ಪ್ರಲ್ಹಾದ್ ಜೋಶಿಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮುಂಗಡಪತ್ರವನ್ನು ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕೃಷಿ ಕಾನೂನು ವಿರೋಧಿಸಿ ಕೆಲವು ರೈತ ಸಂಘಟನೆಗಳು ಪ್ರತಿಭಟನೆ ಮುಂದುವರಿದಿದ್ದು, ಹಲವು ಸುತ್ತು ಮಾತುಕತೆಯಾದರೂ ಫಲ ಸಿಕ್ಕಿಲ್ಲ. ಈ ಬೆನ್ನಲ್ಲೇ ಈ ವರ್ಷದ ಬಜೆಟ್​ನಲ್ಲಿ ರೈತ ಸಮುದಾಯದ ಸಾಮಾನ್ಯ ನಿರೀಕ್ಷೆಗಳ ಸಂಕ್ಷಿಪ್ತ ಅವಲೋಕನ ಇಲ್ಲಿದೆ.
ದ್ವಿದಳ ಧಾನ್ಯ/ಖಾದ್ಯ ತೈಲ ಸ್ವಾವಲಂಬನೆ:ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿ ದೇಶದಲ್ಲಿ ದ್ವಿದಳ ಧಾನ್ಯ ಸ್ವಾವಲಂಬನೆಗೆ ಉತ್ತೇಜನ ಸಿಕ್ಕಿದೆ. ಇತ್ತೀಚಿನ ವರ್ಷಗಳಲ್ಲಿ ದ್ವಿದಳ ಧಾನ್ಯ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿದೆ. ಇನ್ನೊಂದೆಡೆ, ಖಾದ್ಯ ತೈಲ ಉತ್ಪಾದನೆ ಕಡಿಮೆಯಾದ ಕಾರಣ ಆಮದು ಪ್ರಮಾಣವೂ ಹೆಚ್ಚಳವಾಗಿದೆ. 2019ರ ಲಭ್ಯ ಡೇಟಾ ಪ್ರಕಾರ, ಖಾದ್ಯ ತೈಲ ಆಮದು ಪ್ರಮಾಣ -ಠಿ; 73,000 ಕೋಟಿ ತಲುಪಿದೆ. 1990ರ ದಶಕದಲ್ಲಿ ಭಾರತ ಖಾದ್ಯ ತೈಲದ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಿತ್ತು. ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಕೃಷಿ ಕ್ಷೇತ್ರ ಈ ಜನವರಿಯಲ್ಲಿ ಅನುಕ್ರಮವಾಗಿ 3.3 ಲಕ್ಷ ಮತ್ತು 5.2 ಲಕ್ಷ ಹೆಕ್ಟೇರ್ ಆಗಿದೆ. ಆದ್ದರಿಂದ ಈಗ ಮತ್ತದೇ ಸ್ವಾವಲಂಬನೆ ಸಾಧಿಸುವುದಕ್ಕೆ ಸಕಾಲ.
ಸಾವಯವ ಮತ್ತು ಸಹಜ ಕೃಷಿ:ಕರೊನಾ ಸೋಂಕಿನ ನಂತರದ ಬೆಳವಣಿಗೆಯಲ್ಲಿ ಸುರಕ್ಷಿತ ಮತ್ತು ಪೌಷ್ಟಿಕಾಂಶಯುತ ಆಹಾರ ವಸ್ತುಗಳ ಬೇಡಿಕೆ ಹೆಚ್ಚಿದೆ. ಇಂಥ ಸನ್ನಿವೇಶದಲ್ಲಿ ಎಲ್ಲ ರಾಜ್ಯಗಳಲ್ಲೂ ಸಹಜ, ಪರಿಸರ ಕೃಷಿ ಮಾದರಿಯ ಚಟುವಟಿಕೆಗಳು ಹೆಚ್ಚಾಗಬೇಕು. ಸಹಜ, ಸಾವಯವ ಕೃಷಿಗೆ ಉತ್ತೇಜನ, ನೆರವು ದೊರೆಯಬೇಕು. ಸುಸ್ಥಿರ ಕೃಷಿ, ತೋಟಗಾರಿಕೆಗೆ ಇನ್ನಷ್ಟು ಒತ್ತು ನೀಡಬೇಕು. ಈ ವರ್ಷವೇ ವಿಶ್ವಸಂಸ್ಥೆಯ ಫುಡ್ ಸಿಸ್ಟಮ್ ಶೃಂಗ ನಡೆಯಲಿರುವ ಕಾರಣ ಭಾರತಕ್ಕೆ ತನ್ನ ನಾಯಕತ್ವವನ್ನು ಪ್ರಸ್ತುತಪಡಿಸುವುದಕ್ಕೆ ಒಂದು ವೇದಿಕೆ ಸೃಷ್ಟಿಯಾಗಲಿದೆ.
ಕೃಷಿ ಮೂಲಸೌಕರ್ಯ ನಿಧಿಯನ್ನು ಬಳಸಿಕೊಂಡು ಕೃಷಿಕರಿಗೆ, ಸಂಬಂಧಿತ ಖಾಸಗಿ ವಲಯಕ್ಕೆ ಪ್ರೋತ್ಸಾಹ ಧನ ಕೊಡಬಹುದು. ಇದನ್ನು ಬಳಸಿಕೊಂಡು ಕೃಷಿ ಉತ್ಪನ್ನ ದಾಸ್ತಾನು ಕೇಂದ್ರ, ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳನ್ನು ಆರಂಭಿಸಬಹುದು. ರಫ್ತು ಮಾಡುವುದಕ್ಕೂ ಅನುಕೂಲ ಒದಗಿಸಬೇಕು. ಕೃಷಿ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ಘೋಷಿಸಬೇಕು. ಕೃಷಿ ಉತ್ಪನ್ನ ಸಾಗಣೆ ಮೇಲಿ ತೆರಿಗೆ ಹೊರೆ ಕಡಿಮೆಯಾಗಬೇಕು. ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತಂದು ಇದಕ್ಕೆ ವೇಗ ಕೊಟ್ಟರೆ ಕೃಷಿಕರಿಗೆ ಅನುಕೂಲವಾಗಲಿದ್ದು, ಆದಾಯವೂ ವೃದ್ಧಿಯಾಗಲಿದೆ.
ದೇಶದ ಹಲವೆಡೆ ಈಗಾಗಲೇ ಕೃಷಿ-ತಂತ್ರಜ್ಞಾನ ನವೋದ್ಯಮಗಳು ಹುಟ್ಟಿಕೊಂಡಿವೆ. ನವೋದ್ಯಮ ಹಬ್​ಗಳೂ ಸೃಷ್ಟಿಯಾಗಿವೆ. ಆದರೆ, ಇವುಗಳ ಸಂಖ್ಯೆ ಕಡಿಮೆ. ಇಂತಹ ಇನ್ನಷ್ಟು ಕೇಂದ್ರ, ಘಟಕಗಳ ಸ್ಥಾಪನೆಯಾಗಬೇಕು. ಇದಕ್ಕೆಂದೇ ಉತ್ತೇಜನ ನೀಡಲು ಸರ್ಕಾರ ಪ್ರತ್ಯೇಕ ನಿಧಿ ಸ್ಥಾಪಿಸಬಹುದು. ರಸಗೊಬ್ಬರ- ಕೃಷಿ ಕ್ಷೇತ್ರದಲ್ಲಿ ರಸಗೊಬ್ಬರ ಬಳಕೆಯಲ್ಲಿ ಸುಧಾರಣೆಯಾಗಬೇಕು. ಸಂತುಲಿತ ಪೌಷ್ಟಿಕಾಂಶದ ಬಳಕೆ ಖಾತರಿಗೊಳಿಸಬೇಕು. ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ಅತಿಯಾದ ಯೂರಿಯಾ ಬಳಸುವುದನ್ನು ಕಡಿಮೆ ಮಾಡಬೇಕು. ಬೇವುಲೇಪಿತ ಯೂರಿಯಾ ಬಳಸುವುದರಿಂದ ಆಗುವ ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸಬೇಕು. ನೇರ ಪ್ರಯೋಜನ ವರ್ಗಾವಣೆ(ಡಿಬಿಟಿ)ಯನ್ನು ಸರ್ಕಾರ ಹೆಚ್ಚಿಸಬೇಕು.
ಕೃಷಿ ಸಂಶೋಧನೆ-ನವೋನ್ವೇಷಣೆ:ಕೃಷಿ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ನವೋನ್ವೇಷಣೆ ಮೇಲಿನ ಹೂಡಿಕೆಯನ್ನು ಹೆಚ್ಚು ಮಾಡಬೇಕು. 2018-19ರ ಡೇಟಾ ಪ್ರಕಾರ, ಕೃಷಿ ಜಿಡಿಪಿಯ ಶೇಕಡ 0.35 ಮಾತ್ರವೇ ಕೃಷಿ ಸಂಶೋಧನೆ ಮತ್ತು ನವೋನ್ವೇಷಣೆ ಮೇಲೆ ಹೂಡಿಕೆ ಆಗಿದೆ. ಚೀನಾದಲ್ಲಿ ಈ ಪ್ರಮಾಣ ಶೇಕಡ 0.8 ಇದೆ.
ಸಂಕಷ್ಟ ನೀಗಿಸಲು ಕ್ರಮ ಅಗತ್ಯ:ಹಲವು ಸ್ತರದ ಕೃಷಿ, ಜೇನುಸಾಕಣೆ, ಸೌರಪಂಪ್, ಶೂನ್ಯ ಬಂಡವಾಳ ಕೃಷಿ ಮುಂತಾದವುಗಳಿಗೆ ಆದ್ಯತೆ ನೀಡಿ, ಉತ್ತೇಜನ ಕೊಡಬೇಕಾದ ಅವಶ್ಯಕತೆ ಇದೆ. ಇದಲ್ಲದೆ, ಕೃಷಿ ಉತ್ತೇಜನಕ್ಕೆ ಕೃಷಿಕರಿಗೆ ನೀಡುವ ಪಿಎಂ ಕಿಸಾನ್, ಪಿಎಂಫಸಲ್ ಬಿಮಾ ಯೋಜನೆ ಮುಂತಾದವುಗಳಿಗೆ ಮೀಸಲಿಡುವ ಹಣದ ಪ್ರಮಾಣ ಹೆಚ್ಚಾಗಬೇಕು.
ಮಾರುಕಟ್ಟೆ ವ್ಯವಸ್ಥೆ:ದೇಶದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಬೇಕಾಗಿದೆ. ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳು ಇದಕ್ಕೆ ಪೂರಕವಾಗಿವೆ. ಆದರೆ, ಕೆಲವು ಸಂಘಟನೆಗಳು ವಿರೋಧವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿರುವುದು ಕೊಂಚ ಹಿನ್ನಡೆಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
