|ರಾಘವ ಶರ್ಮ ನಿಡ್ಲೆನವದೆಹಲಿ
ಕಳೆದೈದು ವರ್ಷಗಳಲ್ಲಿ ಭಾರತ-ಬಾಂಗ್ಲಾ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್​ಎಫ್) 4,76,035 ಗೋವುಗಳನ್ನು ರಕ್ಷಿಸಿ ವಶಕ್ಕೆ ಪಡೆದಿದೆ. ಈಚಿನ ವರ್ಷಗಳಲ್ಲಿ ಗೋವು ಕಳ್ಳಸಾಗಣೆ ಸ್ವಲ್ಪ ಕಡಿಮೆಯಾಗಿದೆ. ಇಲ್ಲಿ ಬಿಎಸ್​ಎಫ್ ನಿಯೋಜನೆ ಹೆಚ್ಚಿರುವುದೂ ಇದಕ್ಕೆ ಕಾರಣ. ಅಲ್ಲದೆ ಹಲವು ದಂಧೆಕೋರರನ್ನು ಬಂಧಿಸಿ, ಹೆಡೆಮುರಿಕಟ್ಟಲು ಬಿಎಸ್​ಎಫ್, ಸಿಬಿಐ, ಇಡಿ ಯಶಸ್ವಿಯಾಗಿವೆ. ‘ಹಾಗಿದ್ದರೂ, ಬಂಗಾಳದ ಮಾಲ್ಡಾ, ಮುಶಿದಾಬಾದ್ ಜಿಲ್ಲೆಗಳಲ್ಲಿ ಮುಖ್ಯವಾಗಿ ಬಾರ್ಡರ್ ಫೆನ್ಸಿಂಗ್ ಇಲ್ಲದ ಪ್ರದೇಶಗಳಲ್ಲಿ ಸ್ಥಳೀಯರ ನೆರವಿನಿಂದ ಗೋವು ಕಳ್ಳಸಾಗಣೆ ನಡೆಯುತ್ತಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ನಡೆಯುತ್ತಿರುವುದರಿಂದ ಕಳ್ಳಸಾಗಣೆದಾರರಲ್ಲಿ ಭಯ ಹೆಚ್ಚಿದೆ’ ಎನ್ನುತ್ತಾರೆ ಭಾರತ-ಬಾಂಗ್ಲಾದ ತುಂಗಿ ಬಾರ್ಡರ್​ನಲ್ಲಿ ಸಿಕ್ಕ ಬಿಎಸ್​ಎಫ್ ಸುಬೇದಾರ್ ಮೇಜರ್. ಬಂಗಾಳದ ನದಿಯಾ ಜಿಲ್ಲೆಯ ಕೃಷ್ಣಗಂಜ್ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮಜ್ದಿಯಾ ಎಂಬ ಗಡಿ ಪಟ್ಟಣಕ್ಕೆ ತಾಗಿಕೊಂಡಿದೆ ತುಂಗಿ ಬಾರ್ಡರ್.
ಭಾರತ-ಬಾಂಗ್ಲಾ ನಡುವೆ ಒಟ್ಟು 4096 ಕಿಮೀ ಉದ್ದ ಗಡಿ ಭೂಪ್ರದೇಶವಿದೆ. ಪಶ್ಚಿಮ ಬಂಗಾಳದಲ್ಲಿನ ಗಡಿವ್ಯಾಪ್ತಿ 2217 ಕಿಮೀ ಇದೆ. ಹಿಂದೆ ಬಂಗಾಳದಲ್ಲಿ ಕಮ್ಯುನಿಸ್ಟ್ ಸರ್ಕಾರವಿದ್ದಾಗ ಎರಡೂ ದೇಶಗಳ ಗಡಿ ನಡುವೆ ಫೆನ್ಸಿಂಗ್ ಇರಲಿಲ್ಲ. ನಂತರದ ವರ್ಷಗಳಲ್ಲಿ ಫೆನ್ಸಿಂಗ್ ನಿರ್ಮಾಣ ಕಾರ್ಯ ಆರಂಭಗೊಂಡಿತು. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆಗಿನ ಗೃಹ ಸಚಿವ ಎಲ್.ಕೆ. ಆಡ್ವಾಣಿ ಸೂಚನೆ ಮೇರೆಗೆ ಫೆನ್ಸಿಂಗ್ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿತು. ಗಡಿಯ ಬಹುತೇಕ ಕಡೆ ಫೆನ್ಸಿಂಗ್ ಇದ್ದರೂ, ಗಡಿ ಗುರುತಿಸುವಿಕೆಯ ಕೆಲ ಪ್ರದೇಶಗಳ ಮಧ್ಯೆಯೇ ಹಳ್ಳಿಗಳು, ನದಿ, ಕೆರೆಗಳು ನೆಲೆಗೊಂಡಿರುವುದರಿಂದ ಅಲ್ಲಿ ಫೆನ್ಸಿಂಗ್ ಅಳವಡಿಕೆ ಸಾಧ್ಯವಾಗಿಲ್ಲ. ಇಂಥ ಪ್ರದೇಶಗಳಲ್ಲೇ ಹೆಚ್ಚು ಕಳ್ಳಸಾಗಣೆ ನಡೆಯುತ್ತದೆ ಎನ್ನುತ್ತಾರೆ ಬಿಎಸ್​ಎಫ್ ಸಿಬ್ಬಂದಿ.
ದಂಧೆಯ ಕಿಂಗ್​ಪಿನ್​ಗಳು ಒಂದೋ ಹಳ್ಳಿಗರನ್ನು ಹೆದರಿಸಿ ಕೃತ್ಯಕ್ಕೆ ಸಹಕರಿಸುವಂತೆ ಒತ್ತಾಯಿಸುತ್ತಾರೆ ಅಥವಾ ಅವರಿಗೆ ಒಂದಿಷ್ಟು ಹಣ ನೀಡಿ ವಿಶ್ವಾಸ ಗಳಿಸುತ್ತಾರೆ. ಕಳೆದ ನವೆಂಬರ್​ನಲ್ಲಿ ಸಿಬಿಐ ಈ ಕರಾಳ ದಂಧೆಯ ಬಹುದೊಡ್ಡ ಕಿಂಗ್​ಪಿನ್ ಇನಾಮುಲ್ ಹಕ್ ಎಂಬಾತನನ್ನು ಬಂಧಿಸಿತು. ನಕಲಿ ಕರೆನ್ಸಿ ಹಾಗೂ ಚಿನ್ನದ ಕಳ್ಳಸಾಗಣೆಯಲ್ಲೂ ಕುಖ್ಯಾತಿಯಾಗಿದ್ದ ಈತ ಹಳ್ಳಿಗರ ವಿಶ್ವಾಸ ಗಳಿಸಿಯೇ ದಂಧೆಯಲ್ಲಿ ಕೋಟಿಗಟ್ಟಲೆ ದುಡ್ಡು ಗಳಿಸಿದ್ದಾನೆ. ಬಂಗಾಳದ ಮಾಲ್ಡಾ, ಮುರ್ಷಿದಾಬಾದ್ ಜಿಲ್ಲೆಗಳ ಗಡಿಗಳೇ ಆತನ ದಂಧೆಯ ಕೇಂದ್ರತಾಣ. 90ರ ದಶಕದ ಮಧ್ಯಾವಧಿಯಲ್ಲಿ ದಂಧೆ ಶುರುಮಾಡಿದ್ದ ಹಕ್, ಲಕ್ಷಾಂತರ ಹಸುಗಳನ್ನು ಗಡಿಯಾಚೆಗೆ ಕಳುಹಿಸಿದ್ದಾನೆ. ಗೋ ಕಳ್ಳಸಾಗಣೆಗೆ ಬಂಗಾಳದಲ್ಲಿ ಮಾತ್ರವಲ್ಲ ಬಾಂಗ್ಲಾದೇಶದಲ್ಲೂ ವ್ಯವಸ್ಥಿತ ಜಾಲ ಹೊಂದಿರುವುದೇ ಆತನ ಪ್ಲಸ್ ಪಾಯಿಂಟ್.
ಕಳ್ಳಸಾಗಣೆಯಲ್ಲಿ ಬಿಎಸ್​ಎಫ್​ನ ಕೆಲವು ಸಿಬ್ಬಂದಿ ಭಾಗಿಯಾಗಿರುವುದು ಗುಟ್ಟಾಗಿ ಉಳಿದಿಲ್ಲ. ಇನಾಮುಲ್ ಹಕ್ ಬಂಧನದ ವೇಳೆ ಸಿಬಿಐ ಅಧಿಕಾರಿಗಳು ಬಿಎಸ್​ಎಫ್ ಕಮಾಂಡಂಟ್ ಸತೀಶ್ ಕುಮಾರ್ ಎಂಬಾತನನ್ನೂ ಬಂಧಿಸಿದ್ದರು. ಒಟ್ಟು 7 ಮಂದಿ ವಿರುದ್ಧ ಪಶ್ಚಿಮ ಮೇದಿನಿಪುರ ಜಿಲ್ಲೆಯ ಅಸನ್ಸೋಲ್​ನ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಹಕ್​ನನ್ನು 2018ರಲ್ಲೂ ಒಮ್ಮೆ ಬಂಧಿಸಲಾಗಿತ್ತು. ಆದರೆ ಜಾಮೀನು ಸಿಕ್ಕಿ ಹೊರಬಂದಿದ್ದ. ಅಂದು ಆತ ಜಿಬು ಟಿ. ಮ್ಯಾಥ್ಯೂ ಎಂಬ ಬಿಎಸ್​ಎಫ್ ಕಮಾಂಡಂಟ್​ಗೆ ಲಂಚ ನೀಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ. ಮ್ಯಾಥ್ಯೂವನ್ನು ಕೇರಳದ ಅಲಪುಳ ರೈಲ್ವೆ ಸ್ಟೇಷನ್​ನಲ್ಲಿ ಬಂಧಿಸಿ, -ಠಿ; 47 ಲಕ್ಷ ವಶಪಡಿಸಿಕೊಳ್ಳಲಾಗಿತ್ತು. ಇದನ್ನು ಇನಾಮುಲ್ ಹಕ್ ಗೋ ಕಳ್ಳ ಸಾಗಣೆಗೆ ನೆರವಾಗಿದ್ದಕ್ಕೆ ನೀಡಿದ್ದ ಎಂದೂ ಮ್ಯಾಥ್ಯೂ ಒಪ್ಪಿಕೊಂಡಿದ್ದ. ಇದನ್ನಾಧರಿಸಿ ಇನಾಮುಲ್ ಹಕ್ ಮತ್ತು ಬಿಎಸ್​ಎಫ್ ಸಿಬ್ಬಂದಿ ಭಾಗಿ ಬಗ್ಗೆ ಹೆಚ್ಚಿನ ತನಿಖೆ ಅಗತ್ಯವಿದೆ ಎಂದೂ ಸಿಬಿಐ ಹೇಳಿತ್ತು. ಇನಾಮುಲ್ ಹಕ್ ಬಂಧನದಿಂದ ದಂಧೆಗೆ ತಕ್ಕಮಟ್ಟಿಗೆ ಕಡಿವಾಣ ಬಿದ್ದಿದೆ.
ರಾತ್ರಿಯೆಲ್ಲ ಗಸ್ತು:2014ರಲ್ಲಿ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಈ ಗಡಿಯಲ್ಲಿ ಬಿಎಸ್​ಎಫ್ ಯೋಧರ ನಿಯೋಜನೆ ದುಪ್ಪಟ್ಟಾಗಿದೆ. ಕಳ್ಳಸಾಗಣೆಗೆ ಕಡಿವಾಣ ಹಾಕಲೆಂದೇ ಜಮ್ಮು-ಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದ ಬಿಎಸ್​ಎಫ್ ಸಿಬ್ಬಂದಿಯನ್ನು ಇಂಡೋ-ಬಾಂಗ್ಲಾ ಗಡಿಗೆ ಕರೆತರಲಾಗಿದೆ. ‘ಹಿಂದೆ ಫೆನ್ಸಿಂಗ್ ಪಕ್ಕ ರಾತ್ರಿ ಗಸ್ತು ತಿರುಗುತ್ತಿದ್ದೆವು. ಆದರೆ, ಬಾರ್ಡರ್ ಪಿಲ್ಲರ್ ಮತ್ತು ಫೆನ್ಸಿಂಗ್ ಮಧ್ಯೆ 150 ಮೀಟರ್ ಅಂತರವಿರುವ ಪ್ರದೇಶದಲ್ಲಿ ಒಳಭಾಗಕ್ಕೆ ಗಸ್ತು ತಿರುಗುತ್ತಿದ್ದೇವೆ. ಫೆನ್ಸಿಂಗ್ ಬಳಿ ಬೃಹತ್ ಗಾತ್ರದ ಲೈಟು ಮತ್ತು ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಲಾಗಿದೆ’ ಎನ್ನುತ್ತಾರೆ ತುಂಗಿ ಬಾರ್ಡರ್​ನಲ್ಲಿ ಸಿಕ್ಕ ಕರ್ನಾಟಕ ಮೂಲದ ಬಿಎಸ್​ಎಫ್ ಸಿಬ್ಬಂದಿ.
ಫೆನ್ಸಿಂಗ್ ಮುರಿದು ಕಳ್ಳರು ಗಡಿ ಒಳಗೆ ಪ್ರವೇಶಿಸಿದರೆ ಅದಕ್ಕೆ ಆ ಸ್ಥಳದಲ್ಲಿ ನಿಯೋಜನೆಗೊಂಡ ಯೋಧನೇ ಜವಾಬ್ದಾರಿ. ಬಿಎಸ್​ಎಫ್​ನ ಸಿಬ್ಬಂದಿ ಕಳ್ಳಸಾಗಣೆಗೆ ನೆರವಾದ ಪ್ರಕರಣಗಳು ಕೇಳಿಬಂದ ನಂತರ ಇಂಥದ್ದೊಂದು ನಿಯಮ ಜಾರಿಯಲ್ಲಿದೆ. 2021ರ ಮಾರ್ಚ್ 10ರಂದು ಗೋ ಕಳ್ಳಸಾಗಣಿಕೆ ಕುರಿತು ರಾಜ್ಯ ಸಭೆಗೆ ನೀಡಿದ್ದ ಮಾಹಿತಿಯಲ್ಲಿ, ಬಿಎಸ್​ಎಫ್ ಸಿಬ್ಬಂದಿ ವಿರುದ್ಧ ದೂರುಗಳು ಕೇಳಿ ಬಂದಿದ್ದನ್ನು ಕೇಂದ್ರ ಒಪ್ಪಿರುವುದಲ್ಲದೆ, ಶಿಸ್ತಿನ ಕ್ರಮ ಕೈಗೊಳ್ಳಲಾಗಿದೆ ಎಂದೂ ಹೇಳಿತ್ತು.
ಕೊಬ್ಬಿದ ಗೋವಿಗೆ 1 ಲಕ್ಷ ರೂ.!:ಬಾಂಗ್ಲಾಕ್ಕೆ ಸಾಗಣೆಯಾಗುವ 1 ಗಡುಸಾದ ಹಸುವಿಗೆ 90 ಸಾವಿರದಿಂದ 1 ಲಕ್ಷ ರೂ. ನೀಡುತ್ತಾರೆ. ಸಣ್ಣ ಗಾತ್ರದ ಗೋವು 40-50 ಸಾವಿರ ರೂ. ಬೆಲೆ ಬಾಳುತ್ತದೆ. ಅಷ್ಟರಮಟ್ಟಿಗೆ ಭಾರತೀಯ ತಳಿಗೆ ಬಾಂಗ್ಲಾದಲ್ಲಿ ಬೇಡಿಕೆಯಿದೆ. ವಿದೇಶಗಳಲ್ಲೂ ಬೇಡಿಕೆ ದುಪ್ಪಟ್ಟಿದ್ದು, ಗೋಮಾಂಸದ ಉದ್ಯಮಿಗಳು ಈ ಮಾಂಸಗಳನ್ನು ಪ್ಯಾಕ್ ಮಾಡಿ ಅಲ್ಲಿಗೆ ರಫ್ತು ಮಾಡುತ್ತಾರೆ. ಉಭಯ ದೇಶಗಳ ಗಡಿಯಲ್ಲಿ ಹರಿಯುವ ನದಿ ಮೂಲಕವೂ ಗೋವುಗಳನ್ನು ಸಾಗಿಸಲಾಗುತ್ತದೆ. ಮೊದಲಿಗೆ, ಅವುಗಳನ್ನು ಕೊಂದು ಬಾಳೆದಿಂಡಿ ಕಟ್ಟುತ್ತಾರೆ. ನಂತರ ನೀರಿನಲ್ಲಿ ತೇಲಿಬಿಡುತ್ತಾರೆ. ಸತ್ತ ಹಸುವಿನ ಗಾತ್ರ ದೊಡ್ಡದಿದ್ದರೆ, ಅದರ ಹೊಟ್ಟೆ ಬಗೆದು, ಒಳಗೆ ಕರು ತುಂಬಿಸಿ, ಹೊಲಿಗೆ ಹಾಕಿ ಕಳುಹಿಸುತ್ತಾರೆ. ಅಷ್ಟರಮಟ್ಟಿಗೆ ಕ್ರೂರತೆ ಮೆರೆಯುತ್ತಾರೆ ಈ ಪಾಪಿಗಳು! ಗಡಿಯಲ್ಲಿ ಚಿನ್ನದ ಉಂಡೆ, ಗಾಂಜಾ ಹಾಗೂ ನಶೆ ಏರಿಸುವ ಔಷಧಗಳನ್ನೂ ಸಣ್ಣಸಣ್ಣ ಚೀಲಗಳಲ್ಲಿ ಬಾಂಗ್ಲಾ ಗಡಿಗೆ ಎಸೆಯಲಾಗುತ್ತದೆ.
ಕೃಷಿಭೂಮಿ:ಫೆನ್ಸಿಂಗ್ ಮತ್ತು ಬಾರ್ಡರ್ ಪಿಲ್ಲರ್ ನಡುವಿನ ಭೂಪ್ರದೇಶದಲ್ಲಿ ಭಾರತೀಯ ರೈತರ ಕೃಷಿಭೂಮಿಗಳಿವೆ. ಅವರು ತಮ್ಮ ಜಮೀನಿಗೆ ಕಾಲಿಡಲು ಬಿಎಸ್​ಎಫ್ ಅನುಮತಿ ಕಡ್ಡಾಯ. ಈ ಕೃಷಿಕರು ಬಾಂಗ್ಲಾ ಗಡಿಯಲ್ಲಿರುವ ವ್ಯಕ್ತಿ ಗಳೊಂದಿಗೆ ಸಂಪರ್ಕ ಸಾಧಿಸುವ ಸಾಧ್ಯತೆಯಿದೆ ಎಂದೇ ಅವರ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ. ಕೆಲಸ ಮುಗಿಸಿ ಬಂದ ಬಳಿಕ ಪ್ರತಿಬಾರಿಯೂ ರೈತರನ್ನು ಚೆಕಿಂಗ್​ಗೆ ಒಳಪಡಿಸಲಾಗುತ್ತದೆ. ‘ಎತ್ತಿನಗಾಡಿಗಳಲ್ಲಿ ಹೋಗುವ ಕೃಷಿಕರು ಎಷ್ಟೋ ಬಾರಿ ವಾಪಸ್ ಬರುವ ವೇಳೆ ದುರ್ಬಲ ಎತ್ತುಗಳೊಂದಿಗೆ ವಾಪಸು ಬಂದಿದ್ದುಂಟು. ಅಂದರೆ, ಗಟ್ಟಿ ಎತ್ತುಗಳನ್ನು ಕಳ್ಳರಿಗೆ ನೀಡಿ, ದುರ್ಬಲ ಹಸುವಿನೊಂದಿಗೆ ಬರುತ್ತಾರೆ. ಈಗ ಚೆಕಿಂಗ್ ಬಿಗಿಯಾಗಿದ್ದು, ಇದಕ್ಕೆ ಕಡಿವಾಣ ಬಿದ್ದಿದೆ’ ಎನ್ನುತ್ತಾರೆ ಬಿಎಸ್​ಎಫ್ ಅಧಿಕಾರಿ.
ಡಬಲ್ ಫೆನ್ಸಿಂಗ್:ಫೆನ್ಸಿಂಗ್ ಇಲ್ಲದ ಕಾಲದಲ್ಲಿ ಗಡಿ ದಾಟಿ ಬರುತ್ತಿದ್ದ ಬಾಂಗ್ಲಾ ಪ್ರಜೆಗಳು, ಗಡಿಭಾಗದ ಕ್ಷೇತ್ರಗಳ ಚುನಾವಣೆಗಳಲ್ಲಿ ಮತದಾನ ಮಾಡಿ ಹೋಗುತ್ತಿದ್ದರಂತೆ. ಇದನ್ನೆಲ್ಲ ತಪ್ಪಿಸಲು ಮೊದಲು ಸಿಂಗಲ್ ಫೆನ್ಸಿಂಗ್ ಅಳವಡಿಸಲಾಯಿತು. ಆದರೆ, ಬಹುತೇಕ ಕಡೆ ಫೆನ್ಸಿಂಗ್ ಮುರಿದ ಪ್ರಕರಣಗಳು ಕಂಡುಬಂದದ್ದರಿಂದ ಈಗ ಬಿಗಿಯಾದ ಡಬಲ್ ಫೆನ್ಸಿಂಗ್ ಅಳವಡಿಸಲಾಗಿದೆ ಎನ್ನುತ್ತಾರೆ ಬಿಎಸ್​ಎಫ್ ಸಿಬ್ಬಂದಿ.
ಕಿಂಗ್​ಪಿನ್ ಇನಾಮುಲ್ ಹಕ್ ಮತ್ತು ಆತನ ಸಹಚರರ ಬಂಧನಕ್ಕೆ ಗೃಹ ಸಚಿವ ಅಮಿತ್ ಷಾ ಒತ್ತಡ ಹಾಕಿದ್ದರಿಂದಲೇ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸಕ್ರಿಯಗೊಂಡಿತು ಎನ್ನಲಾಗಿದೆ. ಹಕ್ ಆಪ್ತರಾಗಿದ್ದ ಮಹಮ್ಮದ್ ಗೋಲಂ ಮುಸ್ತಾಫಾ ಮತ್ತು ಅನರುಲ್ ಎಸ್.ಕೆ. ಎಂಬ ಇಬ್ಬರನ್ನೂ ಬಂಧಿಸಲಾಗಿದೆ. ಬಂಗಾಳ ಗಡಿಗೆ ಗೋ ಸಾಗಣೆ ಹೆಚ್ಚಿಸುವ ಸಲುವಾಗಿಯೇ ಆಗಾಗ್ಗೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಬಿಹಾರಕ್ಕೆ ಭೇಟಿ ನೀಡುತ್ತಿದ್ದ ಬಗ್ಗೆಯೂ ಈ ಇಬ್ಬರು ಸಿಬಿಐಗೆ ಹೇಳಿಕೆ ನೀಡಿದ್ದಾರೆ. ಈ ರಾಜ್ಯಗಳಿಂದ ದಿನಕ್ಕೆ ಅಂದಾಜು 5000ದಂತೆ ಗೋವುಗಳನ್ನು ಬಂಗಾಳದ ಗಡಿಗೆ ಸಾಗಿಸಲಾಗುತ್ತಿತ್ತು ಎನ್ನುತ್ತವೆ ಮೂಲಗಳು. ದಂಧೆಗೆ ನೆರವಾಗಿದ್ದಾರೆ ಎನ್ನಲಾದ ಟಿಎಂಸಿಯ ಹಲವು ಮುಖಂಡರ ಮೇಲೂ ಸಿಬಿಐ ಕೆಂಗಣ್ಣು ಬಿದ್ದಿರುವುದು ಚುನಾವಣೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
