ಶಾಲಾ ದಿನಗಳಲ್ಲಿ ಆ ಬಾಲಕ ಬೆಳಗಿನ ಜಾವ ನಾಲ್ಕು ಗಂಟೆಗೆ ಮನೆಯಿಂದ ಹೊರಟು ಗದಗದಿಂದ 60 ಕಿಮೀ ದೂರದ ಹುಬ್ಬಳ್ಳಿಗೆ ರೈಲಿನಲ್ಲಿ ತೆರಳಿ, ಕ್ರಿಕೆಟ್ ಅಭ್ಯಾಸ ನಡೆಸಿ ಮತ್ತೆ ಗದಗಕ್ಕೆ ಮರಳಿ ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದ. ದೊಡ್ಡ ಕನಸುಗಳನ್ನು ಕಂಡರಷ್ಟೇ ಸಾಲದು, ಅವುಗಳನ್ನು ನನಸು ಮಾಡಿಕೊಳ್ಳಲು ಕಷ್ಟ ಪಡಬೇಕು ಎನ್ನುವುದು ಆಗಿನಿಂದಲೇ ಆತನ ನಂಬಿಕೆಯಾಗಿತ್ತು. ಮಗು ಆಸೆ ಪಡುತ್ತಿದೆ, ಖುಷಿ ಪಡಲಿ ಎಂದು ಅಪ್ಪ ಕೊಡಿಸಿದ್ದ ಬ್ಯಾಟು-ಬಾಲಿನಲ್ಲಿ ಮನೆಯಂಗಳದಲ್ಲಿ ಆಡುತ್ತಲೇ ಭಾರತ ಕ್ರಿಕೆಟ್ ತಂಡದಲ್ಲಿ ಆಡುವ ಕನಸು ಕಂಡು, ಗುರಿಯ ದಾರಿಯಲ್ಲಿ ಎದುರಾದ ಎಲ್ಲ ಕಷ್ಟ, ಸವಾಲುಗಳನ್ನು ಸಾಧನೆಗೆ ಮೆಟ್ಟಿಲಾಗಿಸಿಕೊಂಡು ಕ್ರಿಕೆಟ್​ನಲ್ಲಿ ಎತ್ತರದ ಸಾಧನೆ ಮಾಡಿದ ವಿರಳಾತಿವಿರಳರ ಪೈಕಿ ಸುನಿಲ್ ಜೋಶಿ ಕೂಡ ಒಬ್ಬರು.
ಅದರಲ್ಲೂ ಕ್ರಿಕೆಟ್ ಭೂಪಟದಲ್ಲಿ ಉತ್ತರ ಕರ್ನಾಟಕಕ್ಕೂ ವಿಶ್ವ ಮನ್ನಣೆ ತಂದುಕೊಟ್ಟ ಮೊದಲಿಗರು. ಕರ್ನಾಟಕ ಕ್ರಿಕೆಟ್​ನ ಅತ್ಯುತ್ತಮ ಆಲ್ರೌಂಡರ್ ಆಗಿ, ಭಾರತ ಕ್ರಿಕೆಟ್ ಕಂಡ ಅಸಾಧಾರಣ ಸ್ಪಿನ್ನರ್​ಗಳಲ್ಲಿ ಓರ್ವರಾಗಿ, ವಿವಿಧ ಅಂತಾರಾಷ್ಟ್ರೀಯ ಹಾಗೂ ಹಲವು ರಾಜ್ಯ ತಂಡಗಳ ಯಶಸ್ವಿ ಕೋಚ್ ಆಗಿ ಸದ್ಯ ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಎತ್ತರದ ಸಾಧನೆ ಮಾಡಿರುವ ಗರಿಮೆ ಜೋಶಿ ಅವರದು. ಗದಗದಿಂದ ಮುಂಬೈನಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ರಾಷ್ಟ್ರೀಯ ಮುಖ್ಯ ಆಯ್ಕೆಗಾರ ಹುದ್ದೆವರೆಗಿನ ಅವರ ಪಯಣವೇ ರೋಚಕ, ಹೊಸಪೀಳಿಗೆಯ ಕ್ರಿಕೆಟ್ ಕನಸುಗಾರರಿಗೆ ಮಾದರಿ. 30-40 ವರ್ಷಗಳ ಹಿಂದೆ ಗದಗದಂಥ ಸಾಮಾನ್ಯ ಪಟ್ಟಣದಲ್ಲಿ ಕ್ರಿಕೆಟ್ ಆಡುವುದೇ ಅಪರೂಪ. ಅದರಲ್ಲೂ ಲೆದರ್ ಬಾಲ್​ನಲ್ಲಿ ಆಡುವುದೆಂದರೆ ಸುಲಭದ ಮಾತಾಗಿರಲಿಲ್ಲ. 1970ರ ಜೂನ್ 6 ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಜೋಶಿ, ಬಾಲ್ಯದಲ್ಲಿಯೇ ಕ್ರಿಕೆಟ್ ಬಗ್ಗೆ ಅತಿಯಾದ ಪ್ರೀತಿ ಬೆಳೆಸಿಕೊಂಡಿದ್ದರು. ಇಷ್ಟಪಟ್ಟದನ್ನು ಕಷ್ಟಪಟ್ಟಾದರೂ ಒಲಿಸಿಕೊಳ್ಳಬೇಕು ಎಂಬ ಜೋಶಿ ಹಠ ಕಡೆಗೂ ಕೈ ಹಿಡಿಯಿತು. ಎಡಗೈ ಸ್ಪಿನ್ನರ್ ಆಗಿ ರೂಪುಗೊಂಡ ಅವರು ಬ್ಯಾಟಿಂಗ್​ನಲ್ಲೂ ಸೈ ಎನಿಸಿಕೊಂಡರು. ಸುನೀಲ್ ಜೋಶಿ ತಂದೆ ಬಂಡಾಚಾರ್ಯ ಆರ್. ಜೋಶಿ ಕೂಡ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ, ಸುನೀಲ್ ಪ್ರತಿಭೆ ಗುರುತಿಸಿ ಪೋಷಿಸಿದ್ದು ಅವರ ಸಹೋದರ ಅಶೋಕ್ ಜೋಶಿ. ಏಕ ಕಾಲದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ 7 ಕನ್ನಡಿಗರಲ್ಲಿ ಜೋಶಿ ಕೂಡ ಒಬ್ಬರು ಎಂಬುದು ಹೆಮ್ಮೆಯ ವಿಷಯ.
ಸುನಿಲ್ ಜೋಶಿ ತಮ್ಮ ಜೀವಮಾನವನ್ನೇ ಕ್ರಿಕೆಟ್​ಗೆ ಮುಡಿಪಾಗಿಟ್ಟು ಎಷ್ಟೆಲ್ಲ ಉನ್ನತ ಸಾಧನೆ ಮಾಡಿದ್ದರೂ, ಕೇಂದ್ರ ಸರ್ಕಾರ ಕೊಡಮಾಡುವ ಯಾವುದೇ ಕ್ರೀಡಾ ಪ್ರಶಸ್ತಿ ಅವರಿಗೆ ಸಂದಾಯವಾಗಿಲ್ಲ ಎನ್ನುವುದು ವಿಪರ್ಯಾಸ. ಕ್ರಿಕೆಟಿಗನಾಗಿ ಫಾಮರ್್​ನ ಉತ್ತುಂಗದಲ್ಲಿರುವಾಗ ಯೋಗ್ಯವಾಗಿ ಅವರಿಗೆ ಅರ್ಜುನ ಗೌರವ ಸಿಗಬೇಕಿತ್ತಾದರೂ ಅವರ ಹೆಸರು ಕಾರಣಾಂತರಗಳಿಂದ ಶಿಫಾರಸುಗೊಳ್ಳಲೇ ಇಲ್ಲ. ಉತ್ತರ ಕರ್ನಾಟಕ ಭಾಗದಿಂದ ಕ್ರಿಕೆಟ್​ನಲ್ಲಿ ಉತ್ತುಂಗ ಸಾಧನೆ ಮಾಡಿರುವ ಜೋಶಿ ಪದ್ಮ ಗೌರವಗಳಿಗೆ ಅರ್ಹರು. ಸರ್ಕಾರಗಳು ಅವರನ್ನು ಗುರುತಿಸಬೇಕಷ್ಟೇ.
ಶಾಲಾ ಹಂತದಲ್ಲೇ ಪ್ರತಿಭಾನ್ವಿತ ಆಟಗಾರನಾಗಿ ಗುರುತಿಸಿಕೊಂಡ ಜೋಶಿ, 15 ವಯೋಮಿತಿ ರಾಜ್ಯ ತಂಡಕ್ಕೆ ಆಯ್ಕೆಯಾದರು. ಜೋಶಿ ಆಯ್ಕೆಯನ್ನು ಇಡೀ ಗದಗ ನಗರವೇ ಸಂಭ್ರಮಿಸಿತ್ತು. ರಾಜ್ಯ ಕ್ರಿಕೆಟ್ ದಿಗ್ಗಜರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ವೆಂಕಟೇಶ್ ಪ್ರಸಾದ್ ಹಾಗೂ ಡೇವಿಡ್ ಜಾನ್ಸನ್, ದೊಡ್ಡ ಗಣೇಶ್, ವಿಜಯ್ ಭಾರದ್ವಾಜ್​ರಂಥ ಘಟಾನುಘಟಿಗಳ ಜೊತೆ ರಾಜ್ಯ ತಂಡಕ್ಕೆ ಪ್ರವೇಶ ಪಡೆದರು. 1992-93ರ ಅವಧಿಯಲ್ಲೇ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರೂ ಉತ್ತಮ ಬ್ರೇಕ್ ಸಿಗಲು 4 ವರ್ಷ ಕಾಯಬೇಕಾಯಿತು. 1995-96ರ ರಣಜಿ ಋತುವಿನಲ್ಲಿ 52 ವಿಕೆಟ್ ಜತೆಗೆ ಸರಾಸರಿ 66ರಂತೆ 529 ರನ್ ಪೇರಿಸಿದರು. ಅದೇ ವರ್ಷ ಕರ್ನಾಟಕ ಕೂಡ 13 ವರ್ಷಗಳ ಬಳಿಕ ರಣಜಿ ಟ್ರೋಫಿ ಗೆದ್ದುಕೊಂಡಿತು. 1996ರ ಇಂಗ್ಲೆಂಡ್ ಪ್ರವಾಸ ಕೈಗೊಂಡ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು. ಕರ್ನಾಟಕದ ಪರ 5000ಕ್ಕೂ ಹೆಚ್ಚು ರನ್ ಹಾಗೂ 500ಕ್ಕೂ ಅಧಿಕ ವಿಕೆಟ್ ಗಳಿಸಿದ ವಿರಳ ಸಾಧಕ ಅವರು.
ಆಟಗಾರನಾಗಿ, ನಾಯಕನಾಗಿ, ಕೋಚ್ ಆಗಿ ದಕ್ಷ ನಿರ್ವಹಣೆ ಜೊತೆಗೆ ಪ್ರತಿಭಾನ್ವೇಷಣೆ ಹಾಗೂ ಉದಯೋನ್ಮುಖ ಆಟಗಾರರ ಉತ್ತೇಜನದಲ್ಲೂ ಗುರುತಿಸಿಕೊಂಡಿದ್ದ ಸುನೀಲ್ ಜೋಶಿ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಸಹಜವಾಗಿಯೇ ಅರ್ಹವಾಗಿದ್ದರು. ಅರ್ಜಿ ಸಲ್ಲಿಸಿದವರ ಪೈಕಿ ಅತಿಹೆಚ್ಚು ಯೋಗ್ಯ ವ್ಯಕ್ತಿ ಎಂದು ಪರಿಗಣಿಸಿ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಜೋಶಿ ಹೆಸರನ್ನು ಶಿಫಾರಸು ಮಾಡಿತ್ತು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಷಾ ಅವರುಗಳು ಜೋಶಿ ಹೆಸರನ್ನು ಈ ಸ್ಥಾನಕ್ಕೆ ಅಂತಿಮಗೊಳಿಸಿದರು.
20 ವರ್ಷಗಳ ವೃತ್ತಿಜೀವನದ ಬಳಿಕ ಜೋಶಿ ಕೋಚಿಂಗ್ ಕ್ಷೇತ್ರದತ್ತ ದೃಷ್ಟಿ ಹರಿಸಿದರು. ಹೈದರಾಬಾದ್ ತಂಡದ ಕೋಚ್ ಆಗಿದ್ದ ಜೋಶಿ, ಬಳಿಕ ಜಮ್ಮು ಕಾಶ್ಮೀರ ತಂಡಕ್ಕೆ ತರಬೇತಿ ನೀಡಿದ್ದರು. 2014-15ನೇ ಸಾಲಿನಲ್ಲಿ ಜೋಶಿ ಮಾರ್ಗದರ್ಶನದ ಜಮ್ಮು ಕಾಶ್ಮೀರ ತಂಡ ಬಲಿಷ್ಠ ಮುಂಬೈ ತಂಡಕ್ಕೆ ಸೋಲಿನ ರುಚಿ ತೋರಿಸಿತ್ತು. ಬಳಿಕ 2ನೇ ಹಂತದಲ್ಲಿ ಹೈದರಾಬಾದ್ ತಂಡಕ್ಕೆ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗೆ ತರಬೇತಿ ನೀಡಿದ್ದರು. ಅಲ್ಲದೆ, 2016ರಲ್ಲಿ ಓಮನ್ ತಂಡಕ್ಕೆ ಬೌಲಿಂಗ್ ಕೋಚ್, 2017ರಲ್ಲಿ ಬಾಂಗ್ಲಾದೇಶ ಹಾಗೂ 2019ರಲ್ಲಿ ಯುಎಸ್​ಎ ತಂಡಗಳಿಗೆ ಸ್ಪಿನ್ ಬೌಲಿಂಗ್ ಸಲಹೆಗಾರರಾಗಿದ್ದರು. 2016ರಲ್ಲಿ 2 ವರ್ಷಗಳ ಕಾಲ ಅಸ್ಸಾಂ ರಣಜಿ ತಂಡಕ್ಕೂ ಮುಖ್ಯಕೋಚ್ ಆಗಿದ್ದರು. ಈ ಅವಧಿಯಲ್ಲಿ ಅಸ್ಸಾಂ ತಂಡ ಈಡನ್​ಗಾರ್ಡನ್​ನಲ್ಲೇ ಬಂಗಾಳವನ್ನು ಸೋಲಿಸಿದ್ದು ವಿಶೇಷ. 2017ರಲ್ಲಿ ಜೋಶಿ ಮಾರ್ಗದರ್ಶನದಲ್ಲಿಯೇ ಬಾಂಗ್ಲಾದೇಶ ತಂಡ ತನ್ನ 100ನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಎದುರು ಅದರದ್ದೇ ನೆಲದಲ್ಲಿ ಜಯಿಸಿ ಇತಿಹಾಸ ಸೃಷ್ಟಿಸಿತ್ತು. 2019-20ರ ಅವಧಿಯಲ್ಲಿ ಉತ್ತರ ಪ್ರದೇಶ ತಂಡಕ್ಕೂ ಜೋಶಿ ಕೋಚ್ ಆಗಿದ್ದರು. ಕಳೆದ ವರ್ಷ ಉತ್ತರ ಪ್ರದೇಶ ತಂಡ ಹುಬ್ಬಳ್ಳಿಯಲ್ಲಿಯೇ ಕರ್ನಾಟಕ ತಂಡವನ್ನು ಎದುರಿಸಿದ್ದು ವಿಶೇಷ.
ಅನಿಲ್ ಕುಂಬ್ಳೆ ಜತೆಗೆ ರಾಷ್ಟ್ರೀಯ ತಂಡದಲ್ಲೂ ಚೆಂಡು ಹಂಚಿಕೊಂಡ ಜೋಶಿ, ಪದಾರ್ಪಣೆ ಏಕದಿನ ಪಂದ್ಯದಲ್ಲೇ ಗಮನಸೆಳೆದರು. ಶ್ರೀಲಂಕಾದಲ್ಲಿ ನಡೆದ ಚತುಷ್ಕೋನ ಸರಣಿಯಲ್ಲಿ ಜಿಂಬಾಬ್ವೆ ಎದುರು 2 ವಿಕೆಟ್ ಕಬಳಿಸಿದರು. ಬಳಿಕ ಅದೇ ಸರಣಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಒಂದು ಹಂತದಲ್ಲಿ 89 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಸೌರವ್ ಗಂಗೂಲಿ ಜತೆಗೂಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಜೋಶಿ ಪ್ರಮುಖ ಪಾತ್ರವಹಿಸಿದ್ದರು. 1999ರಲ್ಲಿ ಕೀನ್ಯಾದ ನೈರೋಬಿಯಲ್ಲಿ ನಡೆದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 10 ಓವರ್ ಕೋಟಾದಲ್ಲಿ 6 ಮೇಡನ್ ಸಹಿತ ಕೇವಲ 6 ರನ್ ನೀಡಿ 5 ವಿಕೆಟ್ ಕಬಳಿಸಿದ್ದು ಅಪೂರ್ವ ಸಾಧನೆ. ಏಕದಿನ ಕ್ರಿಕೆಟ್​ನ ಒಂದೇ ಇನಿಂಗ್ಸ್​ನಲ್ಲಿ 8, 7 ವಿಕೆಟ್ ಕಬಳಿಸಿದ ಶ್ರೇಷ್ಠರಿದ್ದಾರೆ. ಆದರೆ, 10 ಓವರ್ ಬೌಲಿಂಗ್ ಮಾಡಿ 6 ಮೇಡನ್ ಓವರ್ ಹಾಕಿ ಕೇವಲ 6 ರನ್​ಗೆ 5 ವಿಕೆಟ್ ಕಬಳಿಸಿದ್ದು ಅಪೂರ್ವ ಸಾಧನೆ. ನ್ಯೂಜಿಲೆಂಡ್​ನ ಡೇನಿಯಲ್ ವೆಟ್ಟೋರಿ 7 ರನ್​ಗೆ 5 ವಿಕೆಟ್ ಪಡೆದಿರುವರಾದರೂ, ಅವರು ಬೌಲಿಂಗ್ ಮಾಡಿದ್ದು 6 ಓವರ್ ಮಾತ್ರ.
ಅಂತಾರಾಷ್ಟ್ರೀಯ ಕ್ರಿಕೆಟ್
ದೇಶೀಯ ಕ್ರಿಕೆಟ್
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರದಾಳಿಗೆ 44 ಯೋಧರು ಹುತಾತ್ಮರಾದ ಸಂದರ್ಭದಲ್ಲಿ ಸುನಿಲ್ ಜೋಶಿ ಪ್ರತಿಭಾನ್ವೇಷಣೆ ನಿಮಿತ್ತ ಪುಲ್ವಾಮಾದಲ್ಲೇ ಇದ್ದರು. ಆ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡದ ಕೋಚ್ ಆಗಿದ್ದ ಜೋಶಿ, ಉಗ್ರದಾಳಿಯ ಘಟನಾಸ್ಥಳದಿಂದ ಕೇವಲ 2 ಕಿ.ಮೀ. ದೂರದ ಮೈದಾನದಲ್ಲಿ ಆಟಗಾರರೊಂದಿಗೆ ಶಿಬಿರದಲ್ಲಿದ್ದರು. ಬಾಂಗ್ಲಾದೇಶ ಕ್ರಿಕೆಟ್ ತಂಡದ ಕೋಚ್ ಆಗಿ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲೂ ಕ್ರೖೆಸ್ಟ್​ಚರ್ಚ್​ನ ಮಸೀದಿಯ ಮೇಲೆ ಭಯಾನಕ ಉಗ್ರದಾಳಿ ನಡೆದಿತ್ತು. ಆ ಸಂದರ್ಭದಲ್ಲಿ ಜೋಶಿ ಬಾಂಗ್ಲಾ ಆಟಗಾರರೊಂದಿಗೆ ತಂಡದ ಹೋಟೆಲ್​ನಲ್ಲಿದ್ದರು. ಜೋಶಿ, ಓರ್ವ ತರಬೇತುದಾರನಾಗಿ ಅಪಾಯ ಲೆಕ್ಕಿಸದೆ ಭಯದಿಂದ ಜಯದ ಕಡೆ ಸಾಗುವುದನ್ನು ಕಲಿಸಿದವರು.
ಸುನೀಲ್ ಜೋಶಿ ಗದಗದಂಥ ಸಣ್ಣ ನಗರದಲ್ಲಿ ಹುಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಪ್ರತಿಭೆ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಮೇಲೆ ಬಂದಿದ್ದಾರೆ. ಅವರು ಇಂದು ರಾಷ್ಟ್ರೀಯ ಆಯ್ಕೆ ಸಮಿತಿಗೆ ಮುಖ್ಯಸ್ಥರಾಗಿರುವುದು ಕರ್ನಾಟಕಕ್ಕೆ, ವಿಶೇಷವಾಗಿ ಅಖಂಡ ಧಾರವಾಡ ಜಿಲ್ಲೆಗೆ ಹೆಮ್ಮೆಯ ಸಂಗತಿ.
| ಪ್ರಲ್ಹಾದ ಜೋಶಿ,ಕೇಂದ್ರ ಕಲ್ಲಿದ್ದಲು, ಗಣಿ ಸಂಸದೀಯ ವ್ಯವಹಾರಗಳ ಸಚಿವರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − six =
Remember me
