| ಬಿ.ಕೆ. ಹರಿಪ್ರಸಾದ್
1991ರಲ್ಲಿ ಕಾಂಗ್ರೆಸ್​ಗೆ ಬಹುಮತ ಇರಲಿಲ್ಲ. ಆಗ ಅತಂತ್ರ ಲೋಕಸಭೆ ರಚನೆಯಾಗಿತ್ತು. ಇದರಿಂದ ಸಣ್ಣಪುಟ್ಟ ಪಕ್ಷಗಳನ್ನು ಜತೆ ಮಾಡಿಕೊಂಡು ಸರ್ಕಾರ ರಚಿಸಬೇಕಾಯಿತು. ಹೀಗಾಗಿ ಆಕಸ್ಮಿಕವಾಗಿ ಪ್ರಧಾನಿ ಪಟ್ಟ ನರಸಿಂಹರಾಯರ ಪಾಲಾಯಿತು. ಅಂಥ ಸಂದರ್ಭದಲ್ಲೂ ತಮಗೆ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡು ಯಶಸ್ವಿಯಾಗಿ ಐದು ವರ್ಷಗಳ ಅಧಿಕಾರ ಪೂರ್ಣ ಮಾಡಿದ್ದು ಅವರ ರಾಜಕೀಯ ಚಾಣಾಕ್ಷತನಕ್ಕೆ ಸಾಕ್ಷಿ. ಪೂರ್ಣಾವಧಿ ಪ್ರಧಾನಮಂತ್ರಿಯಾದ ದಕ್ಷಿಣ ಭಾರತದ ಮೊದಲ ನಾಯಕನೆಂಬ ಹೆಗ್ಗಳಿಕೆ ಅವರದು.
ಪ್ರಧಾನಿಯಾಗಿ ಯಶಸ್ವಿ ಆಡಳಿತವನ್ನು ಅವರು ನೀಡಿದರು. ಅವರು ಕೊಟ್ಟ ಕಾರ್ಯಕ್ರಮಗಳು ಹಲವು ವರ್ಷಗಳ ಕಾಲ ಜನಮಾನಸದಲ್ಲಿ ಉಳಿದವು. ಖ್ಯಾತ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ಅರ್ಥ ಮಂತ್ರಿ ಮಾಡಿಕೊಂಡು ದೇಶವು ಉದಾರೀಕರಣ, ಜಾಗತೀಕರಣಕ್ಕೆ ತೆರೆದುಕೊಳ್ಳಲು ಅವಕಾಶ ಮಾಡಿದರು. ಇದರಿಂದ ದೇಶ ಹಲವು ರಂಗಗಳಲ್ಲಿ ಕ್ರಾಂತಿಕಾರಕ ಅಭಿವೃದ್ಧಿಯನ್ನು ಸಾಧಿಸುವಂತಾಯಿತು.
ಕಾಂಗ್ರೆಸ್​ನದ್ದು ಸಮಾಜವಾದಿ ಹಾಗೂ ಪ್ರಜಾಪ್ರಭುತ್ವವಾದಿ ನಿಲುವು. ನರಸಿಂಹರಾವ್ ಅವರ ಉದಾರೀಕರಣ ನೀತಿಯಿಂದ ಖಾಸಗೀಕರಣ ಹೆಚ್ಚಾಗುತ್ತದೆ ಎಂಬ ಆತಂಕವನ್ನು ಹಿರಿಯ ಕಾಂಗ್ರೆಸ್ಸಿಗರಾದ ಪ್ರಣಬ್ ಮುಖರ್ಜಿ ಮುಂತಾದವರು ವ್ಯಕ್ತಪಡಿಸಿದ್ದರು. ಆದರೆ ನರಸಿಂಹ ರಾವ್ ಅತ್ಯಂತ ಎಚ್ಚರಿಕೆಯ ಹೆಜ್ಜೆಯನ್ನಿಟ್ಟರು. ಎಲ್ಲಿಯೂ ಕಾಂಗ್ರೆಸ್ ನಿಲುವಿಗೆ ಧಕ್ಕೆಯಾಗಲು ಬಿಡಲಿಲ್ಲ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದ ದೊಡ್ಡಮಟ್ಟದ ಹಾನಿಯಾಗಲು ಅವಕಾಶ ಮಾಡಿಕೊಡಲಿಲ್ಲ. ಉದಾರೀಕರಣ ಆದ ನಂತರ ವಿಶ್ವ ವ್ಯಾಪಾರ ಒಕ್ಕೂಟ (ಡಬ್ಲು್ಯಟಿಒ)ಕ್ಕೆ ಸಹಿ ಹಾಕಿದ ಪರಿಣಾಮ ಬಂಡವಾಳ ಹೂಡಿಕೆಯಾಗಿ ಉದ್ಯಮಗಳು ಸ್ಥಾಪನೆಯಾದವು. ಇದು ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಅವರ ದೂರದೃಷ್ಟಿಯ ಫಲವೂ ಹೌದು.
ಅಯೋಧ್ಯೆಯ ಬಾಬರಿ ಮಸೀದಿ ವಿಷಯವನ್ನು ಸರಿಯಾಗಿ ನಿಭಾಯಿಸದ್ದರಿಂದ ಪಕ್ಷಕ್ಕೆ ತೊಂದರೆಯಾಯಿತು; ಬಲ ಕುಗ್ಗಿತು. ಅದೊಂದು ಘಟನೆಯಿಂದ ಇವತ್ತಿಗೂ ಒಂದು ವರ್ಗ ಕಾಂಗ್ರೆಸ್ ಪಕ್ಷವನ್ನು ಅನುಮಾನದ ಕಣ್ಣುಗಳಲ್ಲಿಯೇ ನೋಡುವಂತಾಗಿದೆ. ನರಸಿಂಹರಾವ್ ಈ ವಿಷಯವನ್ನು ಸೂಕ್ತವಾಗಿ ನಿಭಾಯಿಸಿದ್ದರೆ ಪಕ್ಷಕ್ಕೆ ಇಷ್ಟೊಂದು ಹಾನಿಯಾಗುತ್ತಿರಲಿಲ್ಲ.
ಆಡಳಿತದ ವಿಚಾರದಲ್ಲಿ ನರಸಿಂಹರಾವ್ ಅಪಾರ ಅನುಭವಿಯಾಗಿದ್ದರು. ಆಂಧ್ರಪ್ರದೇಶದ ಮುಖ್ಯಮಂತ್ರಿ, ಕೇಂದ್ರದಲ್ಲಿ ವಿದೇಶಾಂಗ, ಮಾನವ ಸಂಪನ್ಮೂಲ ಅಭಿವೃದ್ಧಿ ಹೀಗೆ ಅನೇಕ ಖಾತೆಗಳಲ್ಲಿ ಕೆಲಸ ಮಾಡಿದ ಅನುಭವ ಪ್ರಧಾನಿಯಾದಾಗ ಅವರ ನೆರವಿಗೆ ಬಂತು. ಯಾವತ್ತೂ ಅವರು ಸುಳ್ಳು ಹೇಳಲಿಲ್ಲ, ಸಂವಿಧಾನದ ಚೌಕಟ್ಟು ಬಿಟ್ಟು ಕೆಲಸ ಮಾಡಲಿಲ್ಲ, ಆಡಳಿತವನ್ನು ತಪ್ಪುದಾರಿಗೆ ತೆಗೆದುಕೊಂಡು ಹೋಗಲಿಲ್ಲ. ಆಡಳಿತಕ್ಕೆ ಚುರುಕು ಮೂಡಿಸಿ ಹೊಸತನ ತಂದರು. ಅವರಿಗಿಂತ ಮುನ್ನ ವಿ.ಪಿ. ಸಿಂಗ್, ಚರಣ್ ಸಿಂಗ್, ಚಂದ್ರಶೇಖರ್ ಆಡಳಿತದಲ್ಲಿ ಸಾಕಷ್ಟು ಏರುಪೇರುಗಳಾಗಿದ್ದವು. ದೇಶದ ಚಿನ್ನವನ್ನು ಅಡವಿಡಲಾಗಿತ್ತು. ಹೀಗೆ ಅಡವಿಟ್ಟ ಚಿನ್ನವನ್ನು ಬಿಡಿಸಿಕೊಂಡು ಬಂದಿದ್ದು ಸಹ ನರಸಿಂಹರಾವ್ ಸರ್ಕಾರದ ಸಾಧನೆಯಲ್ಲಿ ಒಂದು.
ಆವರು ಸದಾ ಬಡವರ, ಶೋಷಿತರ ಪರವಾಗಿ ಆಲೋಚಿಸುತ್ತಿದ್ದರು. ಅವರ ಆಡಳಿತದಲ್ಲಿ ಗುರುತಿಸಬಹುದಾದ ಎರಡು ಪ್ರಮುಖ ಸಂಗತಿಗಳೆಂದರೆ- ತಮಿಳುನಾಡಿನ ಸರ್ಕಾರ ಮೀಸಲಾತಿಯ ಪ್ರಮಾಣವನ್ನು ಶೇ.60ಕ್ಕೆ ಹೆಚ್ಚಿಸಿಕೊಂಡಿತ್ತು. ಅದನ್ನ ಸಂವಿಧಾನದ 9 ನೇ ಶೆಡ್ಯೂಲ್​ಗೆ ಸೇರಿಸಿ ಸಂಸತ್ತಿನ ಅನುಮೋದನೆ ಸಿಗುವಂತೆ ಮಾಡಿದರು. 1993ರಲ್ಲಿ ಮಂಡಲ್ ಆಯೋಗದ ವರದಿ ಅನುಷ್ಠಾನಕ್ಕೆ ಅವಕಾಶ ಮಾಡಿಕೊಟ್ಟರು. ಆ ಮೂಲಕ ಅವರು ಮೀಸಲಾತಿಯ ಪರವಾಗಿ ನಿಲುವು ಕೈಗೊಂಡರು.
ಲೈಸೆನ್ಸ್ ರಾಜ್ ಮೇಲೆ ಪ್ರಹಾರ
ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಲು ಹಲವು ಅಡೆತಡೆಗಳಿದ್ದವು. ಅಲ್ಲದೆ, ದಿಟ್ಟ ನಿರ್ಧಾರಗಳನ್ನು ತಳೆಯಬೇಕಿದ್ದರೆ ಹಲವು ಕಸರತ್ತು ಮಾಡಬೇಕಿತ್ತು. ಹಳೆಯ ನೀತಿಗಳು ಕೂಡ ಅಡ್ಡಿಯಾಗಿದ್ದವು. ಆದರೆ ಪಿವಿಎನ್ ಹಿಂದಡಿ ಇಡಲಿಲ್ಲ. ಲೈಸೆನ್ಸ್ ರಾಜ್ ಮೇಲೆ ಪ್ರಹಾರ ಮಾಡಿಯೇ, ಉದಾರೀಕರಣದ ನೀತಿಯನ್ನು ಜಾರಿಗೆ ತಂದರು. ಮೊದಲಿಗೆ, ಈ ಕ್ರಮಗಳನ್ನು ಆರ್ಥಿಕ ತಜ್ಞರು ಕೂಡ ಅನುಮಾನದಿಂದಲೇ ನೋಡಿದ್ದರು. ಆದರೆ, ಬಳಿಕ ಒಂದೊಂದೇ ಸುಧಾರಣೆಗಳು ಫಲ ನೀಡತೊಡಗಿದಾಗ, ಪಿವಿಎನ್ ಚಾಣಾಕ್ಷತೆ ಮನದಟ್ಟಾಗಿತ್ತು.
ಕಾಂಗ್ರೆಸ್ ಪಕ್ಷಕ್ಕೆ ಮೊದಲು ಸಾಂಸ್ಥಿಕ ಚುನಾವಣೆ ನಡೆದಿರಲಿಲ್ಲ. 1992ರಲ್ಲಿ ಮೊದಲ ಬಾರಿಗೆ ಎಐಸಿಸಿ ಚುನಾವಣೆಯನ್ನು ತಿರುಪತಿಯಲ್ಲಿ ನಡೆಸಲು ನರಸಿಂಹರಾವ್ ಪ್ರಮುಖ ಕಾರಣಕರ್ತರು. ಸಂಘಟನೆಯಲ್ಲಿ ಆಂತರಿಕ ಪ್ರಜಾಪ್ರಭುತ್ವದ ಬದಲಾವಣೆಯನ್ನು ತಂದರು. ಅವರು ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಗೌರವ ನೀಡುತ್ತಿದ್ದರು. ನಾಯಕರ ಜತೆ ಚರ್ಚೆ ಮಾಡುತ್ತಿದ್ದರು.
ನರಸಿಂಹರಾವ್ ಉತ್ತಮ ಆಡಳಿತ ನೀಡಲು ಅವರಿಗೆ ಸಿಕ್ಕ ಸಂಪುಟ ಸಹೋದ್ಯೋಗಿಗಳು ಸಹ ಕಾರಣಕರ್ತರು. ಪ್ರಣಬ್ ಮುಖರ್ಜಿ, ವಿ.ಸಿ. ಶುಕ್ಲಾ, ವಸಂತ ಸಾಠೆ, ಸಾಳ್ವೆ, ಚಿದಂಬರಂ ಸೇರಿದಂತೆ ಅನೇಕ ಘಟಾನುಘಟಿ ನಾಯಕರಿದ್ದರು. ಸಂಪುಟ ಸಹೋದ್ಯೋಗಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಆಳವಾದ ಚರ್ಚೆಗಳ ನಂತರವೇ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಸಹೋದ್ಯೋಗಿಗಳ ಮಾತಿಗೆ ಅಷ್ಟೇ ಗೌರವ ನೀಡುತ್ತಿದ್ದರು.
ಅವರೊಬ್ಬ ವಿದ್ವಾಂಸ ಸಹ. ಹನ್ನೆರಡಕ್ಕೂ ಅಧಿಕ ಭಾಷೆಗಳು ತಿಳಿದಿದ್ದವು. ಆಳವಾದ ಅಧ್ಯಯನವಿತ್ತು. ರಾಜ್ಯ ಹಾಗೂ ರಾಷ್ಟ್ರದ ಬಗ್ಗೆ ಅಪಾರ ಅರಿವು ಇದ್ದುದರಿಂದ ಒಳ್ಳೆಯ ಆಡಳಿತ ನೀಡಲು ಸಾಧ್ಯವಾಯಿತು.

(ಲೇಖಕರು ಕಾಂಗ್ರೆಸ್​ನ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ)
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:20 − 13 =
Remember me
