| ರಾಘವ ಶರ್ಮ ನಿಡ್ಲೆ, ನವದೆಹಲಿನರೇಂದ್ರ ಮೋದಿ… ಯಾರು ಏನೇ ಹೇಳಲಿ, 2014ರ ನಂತರದಿಂದ ಚುನಾವಣಾ ರಾಜಕೀಯದಲ್ಲಿ ವಿಪಕ್ಷಗಳಿಗೆ ಅತಿ ಆತಂಕ ತಂದಿಟ್ಟ ಹೆಸರಿದು. ಒಂದು ಪಕ್ಷವಾಗಿ ಬಿಜೆಪಿ 9 ವರ್ಷಗಳಲ್ಲಿ ಹಲವು ಚುನಾವಣೆಗಳನ್ನು ಗೆದ್ದಿರಬಹುದು. ಆದರೆ, ಪಕ್ಷದ ಸಂಘಟನೆ ಬಲಗೊಂಡಿರುವುದು, ಜನಪ್ರಿಯತೆ ದುಪ್ಪಟ್ಟಾಗಿರುವುದು, ಕೇಂದ್ರ ಸರ್ಕಾರದ ಮೂಲಕ ಹತ್ತಾರು ಜನೋಪಯೋಗಿ ಯೋಜನೆಯಿಂದ ಮನೆ-ಮನಗಳನ್ನು ತಲುಪಿರುವುದು ಮೋದಿಯವರ ದಿಟ್ಟ ಮತ್ತು ಸಮರ್ಥ ನಾಯಕತ್ವದಿಂದಲೇ. ಅಗತ್ಯ ಸಂದರ್ಭಗಳಲ್ಲಿ ತಮ್ಮ ಮಾತಿನ ಹರಿತತೆ, ವಾಗ್ಬಾಣಗಳ ಮೂಲಕ ವಿಪಕ್ಷಗಳ ನಿದ್ದೆಗೆಡಿಸಿ, ತಾನು ಹಾಗೂ ಪಕ್ಷವನ್ನು ವಿಜಯದ ನಾಗಾಲೋಟಕ್ಕೆ ಕೊಂಡೊಯ್ದಿರುವುದು ಇದೇ ನರೇಂದ್ರ ಮೋದಿ.
ಅಸಾಧಾರಣ ಭಾಷಣ ಕಲೆ, ಚರಿಷ್ಮಾ, ತ್ವರಿತ ನಿರ್ಣಯ ತೆಗೆದುಕೊಳ್ಳುವ ಕ್ಷಮತೆ, ಸ್ಪಷ್ಟ ದೂರದೃಷ್ಟಿ, ಶಿಸ್ತಿನ ಜೀವನಶೈಲಿ ಎಲ್ಲವೂ ಮೋದಿಯವರ ನಾಯಕತ್ವವನ್ನು ಮತ್ತಷ್ಟು ಬಿಗಿಯಾಗಿಸಿವೆ. ಸೆ.17ಕ್ಕೆ 74 ವರ್ಷಕ್ಕೆ ಕಾಲಿಡಲಿರುವ ಮೋದಿ, ಈಗಲೂ ಉತ್ಸಾಹಿ ಯುವಕರಂತೆ ನಿರಂತರ ಪ್ರವಾಸಗಳನ್ನು ಮಾಡುತ್ತಾ, ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದಲ್ಲಿರುವ ಅನೇಕರ ಬಗ್ಗೆ ಜನರಲ್ಲಿ ಅಭಿಪ್ರಾಯ ಬದಲಾಗಿರಬಹುದು. ಆದರೆ, ಮೋದಿಯವರ ಕುರಿತ ಜನಾಭಿಪ್ರಾಯದಲ್ಲಿ ಹೆಚ್ಚೇನೂ ಬದಲಾವಣೆಯಾದಂತಿಲ್ಲ. ಇದನ್ನು ಹಲವು ಸಮೀಕ್ಷೆಗಳು ಕೂಡ ಪುಷ್ಟೀಕರಿಸಿವೆ.
ಸದ್ಯ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು ಎಂಬ ಏಕೈಕ ಉದ್ದೇಶದಿಂದ ಬಹುಪಾಲು ವಿಪಕ್ಷಗಳು ಒಂದಾಗಿ ಇಂಡಿಯಾ ಎಂಬ ಮೈತ್ರಿಕೂಟವನ್ನು ರಚಿಸಿಕೊಂಡಿವೆ. ಮತದಾರನ ಮಧ್ಯೆ ಈಗಲೂ ಪ್ರಭಾವಿಯಾಗಿರುವ ಮೋದಿ ನಾಯಕತ್ವಕ್ಕೆ ಕಡಿವಾಣ ಹಾಕಬೇಕೆಂದರೆ, ನಾವು ಒಗ್ಗಟ್ಟಿನ ಮಂತ್ರ ಜಪಿಸಲೇಬೇಕು ಎಂಬುದು ವಿಪಕ್ಷಗಳ ಅರಿವಿಗೆ ಬಂದಿದೆ. ತಮ್ಮ ರಾಜ್ಯಗಳಲ್ಲಿ ಬದ್ಧ ವೈರಿಗಳಾಗಿದ್ದರೂ, ರಾಷ್ಟ್ರಮಟ್ಟದಲ್ಲಿ ಒಂದಾಗುವ ಮೂಲಕ ಮೋದಿ ವಿರುದ್ಧ ತಂತ್ರ ರೂಪಿಸುವುದರಲ್ಲಿ ಇಂಡಿಯಾ ಮೈತ್ರಿಕೂಟ ತೊಡಗಿದೆ. 2014ರಲ್ಲಿ ದೇಶದ ಪ್ರಧಾನಮಂತ್ರಿಯಾದ ದಿನದಿಂದಲೂ ಒಂದು ದಿನದ ಬಿಡುವೂ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಪಿಎಂ ಮೋದಿ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಬಳಿಕ ದೇಶ ಕಂಡ ಅತ್ಯಂತ ಜನಪ್ರಿಯ ನಾಯಕ. ಒಂದು ವೇಳೆ ಮೋದಿ ನಾಯಕತ್ವದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಅದೊಂದು ಐತಿಹಾಸಿಕ ಘಟನೆಯಾಗಲಿದೆ. ಅಲ್ಲಿಗೆ ಪ್ರಧಾನಿ ಹುದ್ದೆಗೇರುವ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗಲಿದೆ.
ಸಣ್ಣ-ಸಣ್ಣ ವಿಷಯಗಳಿಗೂ ಮಹತ್ವ ನೀಡಿ, ಅದನ್ನು ಗುರುತಿಸುವ ಮೋದಿಯವರ ಗುಣ ಅನೇಕರಿಗೆ ಇಷ್ಟವಾಗುತ್ತದೆ. ಉದಾಹರಣೆಗೆ, ಜಿ-20 ಶೃಂಗಸಭೆಯ ಯಶಸ್ಸಿಗೆ ದೆಹಲಿಯಾದ್ಯಂತ ಪೊಲೀಸ್ ಸರ್ಪಗಾವಲಿನ ಮೂಲಕ ಭದ್ರತೆ ಒದಗಿಸುವ ಕೆಲಸ ಮಾಡಿದ ದಿಲ್ಲಿ ಪೊಲೀಸರೊಂದಿಗೆ ಮೋದಿ ಔತಣಕೂಟ ಏರ್ಪಡಿಸಿದ್ದಾರೆ. ಬಹುಶಃ ದಿಲ್ಲಿ ಪೊಲೀಸರೊಂದಿಗೆ ಪ್ರಧಾನಮಂತ್ರಿ ಊಟ ಮಾಡುತ್ತಿರುವುದು ಇದೇ ಮೊದಲು. ಅದೇ ರೀತಿ, ಹೊಸ ಸಂಸತ್ ಕಟ್ಟಡ ನಿರ್ವಣಕ್ಕೆ ಶ್ರಮಿಸಿದ ಸಾಮಾನ್ಯ ಕಾರ್ವಿುಕರನ್ನು ಮೋದಿ ಗುರುತಿಸಿದರು, ಅವರೊಂದಿಗೆ ಕಾಲ ಕಳೆದರು. ಕರೊನಾ ಕಾಲದಲ್ಲೂ ಜೀವ ಲೆಕ್ಕಿಸದೆ ಸಂಸತ್ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡ ಈ ಶ್ರೀಸಾಮಾನ್ಯ ಮೋದಿ ಜತೆಗಿನ ಕ್ಷಣವನ್ನು ಮರೆತಾನೇ? 2019ರಲ್ಲಿ ಪ್ರಯಾಗ್​ರಾಜ್​ನಲ್ಲಿ ನಡೆದಿದ್ದ ಬೃಹತ್ ಕುಂಭಮೇಳದ ವೇಳೆ ನೈರ್ಮಲ್ಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಐವರು ಆಯ್ದ ಕಾರ್ವಿುಕರ ಪಾದಗಳನ್ನು ತೊಳೆದಿದ್ದ ಪ್ರಧಾನಿ ಮೋದಿ, ಬಡವರ್ಗದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಂಥಾ ಹಲವು ನಡೆಗಳು ಗ್ರಾಮೀಣ ಭಾರತೀಯರ ಹೃದಯ ತಟ್ಟಿರುವುದು ಸುಳ್ಳಲ್ಲ.
ರಾಜತಾಂತ್ರಿಕ ಸಾಧನೆ:ಮೋದಿ ನಾಯಕತ್ವದಲ್ಲಿ ಹತ್ತು ಹಲವು ಮೈಲಿಗಲ್ಲುಗಳಿಗೆ ದೇಶ ಸಾಕ್ಷಿಯಾಗಿರುವ ನಡುವೆ ಇತ್ತೀಚೆಗೆ ಭಾರತದಲ್ಲಿ ನಡೆದ ಜಿ-20 ಶೃಂಗಸಭೆ ಅಭೂತಪೂರ್ವ ಯಶಸ್ಸನ್ನು ಕಾಣುವ ಮೂಲಕ ಭಾರತ ವಿಶ್ವ ಭೂಪಟದಲ್ಲಿ ತನ್ನದೇ ಆದ ಛಾಪೊತ್ತಿರುವುದು ಸ್ಪಷ್ಟವಾಗುತ್ತಿದೆ. ಅಮೆರಿಕ, ರಷ್ಯಾ, ಬ್ರಿಟನ್​ನಂತಹ ದೊಡ್ಡ ಆರ್ಥಿಕ ರಾಷ್ಟ್ರಗಳೂ ಕೂಡ ಪ್ರಧಾನಿ ಮೋದಿ ವರ್ಚಸ್ಸು ಹಾಗೂ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತದ ಇಮೇಜ್ ಅನ್ನು ಇದು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದೆ. ರಾಜಕೀಯ ಕಾರಣಗಳಿಗಾಗಿ ವಿಪಕ್ಷಗಳು ಇದನ್ನು ಒಪ್ಪದಿರಬಹುದು. ಆದರೆ, ವಾಸ್ತವ ತಳ್ಳಿಹಾಕಲಾಗದು. ಕಾಂಗ್ರೆಸ್ ಸಂಸದ, ಮಾಜಿ ಕೇಂದ್ರ ಸಚಿವ ಶಶಿ ಥರೂರ್ ಕೂಡ ಜಿ-20 ಅಧ್ಯಕ್ಷ ರಾಷ್ಟ್ರವಾಗಿ ಭಾರತದ ಸಾಧನೆಯನ್ನು ಕೊಂಡಾಡಿದ್ದಾರೆ. ಅದು ಥರೂರ್ ಅವರ ಪ್ರಾಮಾಣಿಕ ನುಡಿ. ಅಗತ್ಯ ಸಂದರ್ಭಗಳಲ್ಲಿ ಪಾಕಿಸ್ತಾನದ ವಿರುದ್ಧ ದಾಳಿ ಮಾಡಿ, ಶತ್ರುರಾಷ್ಟ್ರಕ್ಕೂ ಬಿಸಿಮುಟ್ಟಿಸಿದ ಮೋದಿ ನಾಯಕತ್ವ, ಪಾಕಿಸ್ತಾನಕ್ಕೆ ತನ್ನ ಸ್ಥಾನವೇನು ಎಂಬುದನ್ನೂ ಮನನ ಮಾಡಿದೆ. ಚೀನಾ ಜತೆಗಿನ ಸಂಘರ್ಷ ಮುಂದುವರಿದಿದ್ದರೂ, ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳನ್ನು ತನ್ನೊಂದಿಗೆ ಸೇರಿಸಿಕೊಂಡು, ಆರ್ಥಿಕವಾಗಿ ಬಿಸಿಮುಟ್ಟಿಸುವ ಕೆಲಸವೂ ಭಾರತದಿಂದ ನಡೆದಿದೆ. ಯುದ್ಧ ಪರಿಹಾರವಲ್ಲ, ಸಂವಾದದ ಮೂಲಕ ಬಿಕ್ಕಟ್ಟು ಬಗೆಹರಿಸಬೇಕು ಎಂಬ ಸಂದೇಶವನ್ನು ಮೋದಿ ಪದೇ ಪದೇ ರವಾನಿಸುತ್ತಿರುವುದರಿಂದ ಶಾಂತಿ ಬಯಸುವ ರಾಷ್ಟ್ರಗಳು ಭಾರತವನ್ನು ವಿಶ್ವಾಸದಿಂದ ಕಾಣುತ್ತಿದ್ದಾರೆ.
ಕರೋನಾ ನಿರ್ವಹಣೆ:ಕರೊನಾದಂತಹ ಮಹಾಮಾರಿ ಇಡೀ ವಿಶ್ವವೇ ತತ್ತರಿಸಿತ್ತು. ಅನೇಕ ಭಾರತೀಯರೂ ಪ್ರಾಣ ಕಳೆದುಕೊಂಡಿದ್ದಾರೆ. ಅತಿಹೆಚ್ಚು ಜನಸಂಖ್ಯೆ ಇರುವಂತಹ ಭಾರತದಲ್ಲಿ ಇಂಥಾ ಮಹಾಮಾರಿ ನಿಭಾಯಿಸುವುದು ದೈತ್ಯ ಸವಾಲೇ. ಈ ಆರೋಗ್ಯ ಬಿಕ್ಕಟ್ಟನ್ನು ಭಾರತ ಸರ್ಕಾರ ನಿಭಾಯಿಸಿದ ಪರಿ ವಿಶ್ವದ ಗಮನಸೆಳೆಯಿತು. ಮೋದಿಯವರೇ ಮುಂಚೂಣಿಯಲ್ಲಿ ನಿಂತು, ಆರೋಗ್ಯ, ಚಿಕಿತ್ಸೆಗಳ ಬಗ್ಗೆ ಎಲ್ಲಾ ಸರ್ಕಾರಗಳೊಂದಿಗೆ ಕಾಲಕಾಲಕ್ಕೆ ಸಂವಾದಗಳನ್ನು ನಡೆಸಿದರು. ಲಸಿಕೆ ತಯಾರಿಸಿದ್ದಲ್ಲದೆ, ಬಡ ರಾಷ್ಟ್ರಗಳಿಗೂ ಕರೊನಾ ಲಸಿಕೆ ಪೂರೈಸಿ, ಕರೊನಾ ಕಾಲದ ಸಂಜೀವಿನಿಯಾಗಿ ಭಾರತದ ವಿಶ್ವದ ಮುಂದೆ ತನ್ನ ಮಾನವೀಯ ಮುಖವನ್ನು ಅನಾವರಣಗೊಳಿಸಿತು. ಕರೊನಾ ಉಚಿತ ಲಸಿಕೆ ಮೂಲಕ ಜನಸಾಮಾನ್ಯರ ನೆರವಿಗೆ ನಿಲ್ಲಲಾಯಿತು.
ಹೊಸ ಸಂಸತ್ತು:ಈಗಿರುವ ಸಂಸತ್ತಿನ ಬದಲಿಗೆ ಹೊಸ ಸಂಸತ್ತನ್ನು ನಿರ್ಮಾಣ ಮಾಡಬೇಕೆಂಬ ತಜ್ಞರ ಶಿಫಾರಸು ಹಿಂದಿನ ಯುಪಿಎ ಸರ್ಕಾರದ ಮುಂದಿತ್ತು. ಆದರೆ, ಈ ಸವಾಲಿನ ಕೆಲಸ ಕೈಗೆತ್ತಿಕೊಂಡು ಮೂರು ವರ್ಷದಲ್ಲಿ ಬೃಹದಾಕಾರದ ಹೊಸ ಸಂಸತ್ತನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಮೋದಿ ಸರ್ಕಾರದ್ದು. ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ನಿರ್ವಣಗೊಂಡಿರುವ ಸಂಸತ್ತು, ಭಾರತದ ಸಮಗ್ರತೆ, ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಸಂಸತ್ತಿನ ಹಳೆ ಕಟ್ಟಡ ನಿರ್ಮಾಣ ಮಾಡಿದ್ದು ಬ್ರಿಟಿಷರು. ಆದರೆ, ಹೊಸ ಕಟ್ಟಡ ಸ್ವಾವಲಂಬಿ ಭಾರತದ ಸಂಕೇತವೂ ಹೌದು.
ಈ ಎಲ್ಲಾ ಕೆಲಸವನ್ನು ಮೋದಿಯೊಬ್ಬರೇ ಮಾಡಿದರಾ ಎಂದು ಅನೇಕರು ಪ್ರಶ್ನಿಸಬಹುದು. ಆದರೆ, ದೃಢ, ದಿಟ್ಟ, ದೂರದೃಷ್ಟಿಯ ನಾಯಕತ್ವ ಇಲ್ಲದಿದ್ದರೆ ಇದೆಲ್ಲಾ ಸಾಧ್ಯವಾಗುತ್ತಿತ್ತೇ? ಹತ್ತು ಹಲವು ಜನೋಪಯೋಗಿ ಚಿಂತನೆಗಳಿಗೆ ದಾರಿ ತೋರಿಸುವ ನಾಯಕನೇ ಇಲ್ಲದಿದ್ದರೆ ಪರಿಸ್ಥಿತಿ ಏನಾದೀತು? ತಂಡದ ನಾಯಕನೇ ಉತ್ತಮ ನಿರ್ವಹಣೆ ತೋರದಿದ್ದರೆ, ತಂಡದ ಇತರೆ ಸದಸ್ಯರನ್ನು ಪ್ರಶ್ನಿಸುವ ಹಂತದಲ್ಲಿ ಆತ ಇರುವುದಿಲ್ಲ. ಆದರೆ, ಮೋದಿ ಇದಕ್ಕೆಲ್ಲ ವ್ಯತಿರಿಕ್ತ. ತಂಡದ ಕೆಲ ಸದಸ್ಯರ ಲೋಪದೋಷಗಳು ಆಗಾಗ ಅನಾವರಣಗೊಂಡರೂ, ತಮ್ಮ ನಾಯಕತ್ವದ ಸ್ಪಷ್ಟತೆ, ಕಾರ್ಯದಕ್ಷತೆ, ಸಾಮರ್ಥ್ಯದ ಮೂಲಕ ರಾಷ್ಟ್ರಮಟ್ಟದಲ್ಲಿ ಜನಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಲೇ ಇದ್ದಾರೆ. ಅದೇ ಕಾರಣಕ್ಕೆ, ಬಿಜೆಪಿ ಪಕ್ಷ, ನಾಯಕರು, ಕಾರ್ಯಕರ್ತರು ಈಗಲೂ ಮೋದಿ ನಾಯಕತ್ವದ ಮಂತ್ರ ಜಪಿಸುತ್ತಿರುವುದು ಮತ್ತು ವಿಪಕ್ಷಗಳು ನಮ್ಮಲ್ಲಿ ಮೋದಿಯಂತಹ ವರ್ಚಸ್ವೀ ನಾಯಕತ್ವ ಇಲ್ಲ ಎಂದು ಅಳುತ್ತಿರುವುದು!
ಜಮ್ಮು-ಕಾಶ್ಮೀರಕ್ಕೆ ಹೊಸರೂಪ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಐತಿಹಾಸಿಕ ನಿರ್ಣಯ ಕೈಗೊಳ್ಳುವ ಮೂಲಕ ಮೋದಿ ಸರ್ಕಾರ ಊಹಿಸಲೂ ಸಾಧ್ಯವಾಗದ ದಿಟ್ಟತನ ಪ್ರದರ್ಶಿಸಿತು. ಸದ್ಯ ಲೆಫ್ಟಿನಂಟ್ ಗವರ್ನರ್ ಅವರ ಆಡಳಿತದಲ್ಲಿರುವ ಜಮ್ಮು-ಕಾಶ್ಮೀರದಲ್ಲಿ ಹಿಂದಿನ ಹಲವು ವರ್ಷಗಳಿಗೆ ಹೋಲಿಸಿದರೆ, ಉಗ್ರವಾದಿ ಚಟುವಟಿಕೆ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಇದನ್ನು ಅಂಕಿ-ಅಂಶಗಳೇ ದೃಢಪಡಿಸುತ್ತವೆ. ಮೋದಿ ಸರ್ಕಾರದ ತೀರ್ಮಾನ ಅಲ್ಲಿನ ಸ್ಥಳೀಯ ರಾಜಕೀಯ ಪಕ್ಷಗಳಿಗೆ ಪಥ್ಯವೆನಿಸದಿರಬಹುದು. ಆದರೆ, ದೇಶದ ಸಮಗ್ರತೆ ಹಾಗೂ ಭದ್ರತೆ ದೃಷ್ಟಿಯಿಂದ ಇಂಥದ್ದೊಂದು ಕ್ರಮದ ಅನಿವಾರ್ಯತೆಯಿತ್ತು.
ಧಾರ್ವಿುಕ ಕೇಂದ್ರಗಳ ಅಭಿವೃದ್ಧಿ:ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣದ ಕನಸನ್ನು ನನಸುಗೊಳಿಸಿರುವುದು ಮೋದಿ ನೇತೃತ್ವದ ಕೇಂದ್ರ ಸರ್ಕಾರ. 2019ರಲ್ಲಿ ಸುಪ್ರೀಂಕೋರ್ಟ್ ಮುಂದೆ ಕಾನೂನು ಹೋರಾಟದಲ್ಲಿ ಗೆಲ್ಲುವ ಮೂಲಕ ಕೋಟ್ಯಂತರ ಹಿಂದು ಶ್ರದ್ಧಾಳುಗಳು ವೈಭವಯುವ ರಾಮ ಮಂದಿರವನ್ನು ಕಣ್ತುಂಬಿಕೊಳ್ಳುವ ಕ್ಷಣ ಹತ್ತಿರವಾಗುತ್ತಿದೆ. ಹಲವು ಅಡೆತಡೆಗಳ ಮಧ್ಯೆಯೂ, ಮಂದಿರ ನಿರ್ಮಾಣ ಸಾಕಾರಗೊಂಡಿರುವುದು ಅಭೂತಪೂರ್ವ ಸಾಧನೆಯೆನ್ನಲೇಬೇಕು. ಅದೇ ರೀತಿ, ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಮಾಡುವ ಮೂಲಕ ಭಾರತದ ಅತ್ಯಂತ ಹಳೆದ ಧಾರ್ವಿುಕ ನಗರಿಗೆ ಹೊಸರೂಪ ಬಂದಿದೆ. ಮಂದಿರದ ಸುತ್ತಮುತ್ತಲಿನ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದ್ದಲ್ಲದೆ, ಅಸ್ವಚ್ಛ, ಗಲೀಜಾದ ಪರಿಸರವನ್ನು ಸ್ವಚ್ಛಗೊಳಿಸುವ ಕಾಯಕ ಸುಲಭದ್ದಾಗಿರಲಿಲ್ಲ. ಇದರಲ್ಲೂ, ಸರ್ಕಾರ ಯಶಸ್ಸು ಸಾಧಿಸಿದೆ. ಕೇದಾರನಾಥ, ಬದರೀನಾಥ ಸೇರಿ ದೇಶದ ಹಲವು ಧಾರ್ವಿುಕ ಕೇಂದ್ರಗಳೀಗ ನವಸ್ಪರ್ಶದೊಂದಿಗೆ ನಳನಳಿಸುತ್ತಿವೆ.
ಕುಂದಾಪುರದಲ್ಲಿ ನಾಯಿಗೆ ಹೆದರಿ ಓಡಿ ಹೋಗಿ ಬಾವಿಗೆ ಬಿದ್ದ ಚಿರತೆ!

ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 13 =
Remember me
