|ರಾಘವ ಶರ್ಮ ನಿಡ್ಲೆನವದೆಹಲಿ
ಈ ವರ್ಷದ ಗಣರಾಜ್ಯೋತ್ಸವ ಪರೇಡ್​ಗೆ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಕೇರಳ ಸರ್ಕಾರದ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎನ್ನುವುದು ಬಿಜೆಪಿ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಆದಿ ಶಂಕರಾಚಾರ್ಯ ಮತ್ತು ನಾರಾಯಣ ಗುರುಗಳ ಹೆಸರಲ್ಲಿ ಪಕ್ಷ, ಸರ್ಕಾರಗಳ ನಡುವೆ ರಾಜಕೀಯ ಸಮರ ಜೋರಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ಕೇರಳ ಸ್ತಬ್ಧಚಿತ್ರಗಳ ನಾಲ್ಕೆ ೖದು ಪ್ರಸ್ತಾವಗಳನ್ನು ಕೇಂದ್ರ ರಕ್ಷಣಾ ಇಲಾಖೆಯ ತಜ್ಞರ ಸಮಿತಿ ಮುಂದಿಟ್ಟಿತ್ತು. ಎಲ್ಲ ರಾಜ್ಯಗಳು ಸೆಪ್ಟೆಂಬರ್ ತಿಂಗಳೊಳಗೆ ತಮ್ಮ ಪ್ರಸ್ತಾವಗಳನ್ನು ಸಲ್ಲಿಸಬೇಕಾಗುತ್ತದೆ. ನಂತರ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಅಗತ್ಯ ತಿದ್ದುಪಡಿಗಳನ್ನು ತಜ್ಞರು ಸರ್ಕಾರಗಳಿಗೆ ತಿಳಿಸುತ್ತಾರೆ. ಇದೇ ರೀತಿ ಕೇರಳದೊಂದಿಗೆ ನಡೆದ ಪ್ರಾರಂಭಿಕ ಸಭೆಗಳಲ್ಲಿ ಕೇರಳದ ಕೊಲ್ಲಂನ ಚಡಯಮಂಗಲಂನಲ್ಲಿರುವ ಜಟಾಯು ಅರ್ತ್ ಸೆಂಟರ್ ನೇಚರ್ ಪಾರ್ಕ್ ಅಥವಾ ಜಟಾಯು ರಾಕ್​ನ್ನು ಪ್ರಮುಖ ಥೀಮ್ ಆಗಿಟ್ಟುಕೊಂಡ ಪ್ರಸ್ತಾವ ತಜ್ಞರ ಸಮಿತಿ ಗಮನಸೆಳೆದಿತ್ತು. ಮಹಿಳಾ ಕಲ್ಯಾಣ, ಪ್ರವಾಸೋದ್ಯಮ ಹಾಗೂ ಸ್ವಾತಂತ್ರ್ಯ ನಂತರದ ಸಾಧನೆಗಳನ್ನು ಬಿಂಬಿಸುವ ಅಂಶಗಳನ್ನಿಟ್ಟುಕೊಂಡ ಸ್ತಬ್ಧಚಿತ್ರ ಇದಾಗಲಿದೆ ಎಂದು ಕೇರಳ ಹೇಳಿತ್ತು. ಸ್ತಬ್ಧಚಿತ್ರದ ವಿನ್ಯಾಸದಲ್ಲಿ ಎದುರು ಭಾಗ ಮತ್ತು ಮಧ್ಯಭಾಗ ಎರಡೂ ಕಡೆ ಜಟಾಯುವನ್ನು ಬಿಂಬಿಸುವ ಬದಲು ಗುರು ಆದಿ ಶಂಕರಾಚಾರ್ಯರು ಕೇರಳ ಮೂಲದವರೇ ಆಗಿರುವುದರಿಂದ ಅವರ ಪ್ರತಿಮೆಯನ್ನು ಎದುರು ಭಾಗದಲ್ಲಿ ಇರಿಸಬಹುದಲ್ಲ ಎಂದು ತಜ್ಞರ ಸಮಿತಿ ಸಲಹೆ ನೀಡಿತು. ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ಕೇರಳ ಸರ್ಕಾರ, ‘ಎದುರುಭಾಗದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ಹೆಚ್ಚು ಪ್ರಸ್ತುತ. ಏಕೆಂದರೆ, ಜಟಾಯು ಪಾರ್ಕ್​ನಿಂದ ಕೇವಲ 20 ಕಿಮೀ ದೂರದ ಶಿವಗಿರಿಯಲ್ಲಿ ನಾರಾಯಣ ಗುರುಗಳ ಆಶ್ರಮವಿದೆ ಮತ್ತು ಸಾಮಾಜಿಕ-ಧಾರ್ವಿುಕ ಚಳವಳಿಗಳ ಮೂಲಕ ಅವರು ಗಾಂಧೀಜಿ ಸೇರಿ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನೂ ಪ್ರಭಾವಿಸಿದ್ದರು. ಹೀಗಾಗಿ, ಗುರುಗಳ ಸ್ತಬ್ಧಚಿತ್ರವನ್ನು ಎದುರು ಭಾಗದಲ್ಲಿ ಸೇರಿಸೋಣ’ ಎಂದು ಅಭಿಪ್ರಾಯಪಟ್ಟಿತು. ಇದಕ್ಕೆ ಪ್ರತಿಕ್ರಿಯಿಸಿದ ತಜ್ಞರು, ‘ಇಬ್ಬರು ವ್ಯಕ್ತಿಗಳೂ ಸಮಾಜದ ಮೇಲೆ ಗಾಢಪ್ರಭಾವ ಬೀರಿದವರು. ಇಬ್ಬರನ್ನೂ ಸೇರಿಸಿದರೆ ಒಳ್ಳೆಯ ಸಂದೇಶ ಕೊಟ್ಟಂತಾಗುವುದಿಲ್ಲದವೇ’ ಎಂದರು. ತನ್ನ ವಾದ ಸಮರ್ಥಿಸಿಕೊಂಡ ಕೇರಳ, ‘ಈ ಥೀಮ್ೆ ಆದಿ ಶಂಕರರ ಸ್ತಬ್ಧಚಿತ್ರ ಅಪ್ರಸ್ತುತ’ ಎಂದು ವಿವರಿಸಿತು.
‘ನಾವು ಶಂಕರರ ವಿರೋಧಿಗಳೂ ಅಲ್ಲ, ಅವರ ಸಿದ್ಧಾಂತಕ್ಕೆ ಆಕ್ಷೇಪವೂ ತೆಗೆದಿಲ್ಲ. ಆದರೆ, ನಮ್ಮ ಥೀಮ್ ಆಶಯ, ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಿದ್ದೆವು. ಸ್ತಬ್ಧಚಿತ್ರಕ್ಕೆ ಸಂಬಂಧಿಸಿದ ಕೊನೆಯ ಸಭೆಯಲ್ಲಿ ಈ ವಿವರಣೆಗೆ ತಜ್ಞರು ಕೂಡ ಸಮ್ಮತಿಸಿ, ವಿನ್ಯಾಸದೊಂದಿಗೆ ಮುಂದುವರಿಯುವಂತೆ ನಿರ್ದೇಶಿಸಿದರು. ಆದರೆ, ಅಂತಿಮವಾಗಿ ಕಾರಣವನ್ನೂ ತಿಳಿಸದೆ ಎಲ್ಲ ಪ್ರಸ್ತಾವಗಳನ್ನೂ ತಿರಸ್ಕರಿಸಲಾಯಿತು’ ಎಂದು ದೆಹಲಿ ಕೇರಳ ಭವನದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡರು. ತೀರ್ಪಗಾರರ ಸಲಹೆಯಂತೆ ಕೇರಳ ತನ್ನ ಸ್ತಬ್ಧಚಿತ್ರ ವಿನ್ಯಾಸದಲ್ಲಿ ಮಾರ್ಪಾಡುಗಳನ್ನು ಮಾಡಲು ಒಪ್ಪಲಿಲ್ಲ. ಹೀಗಾಗಿ, ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಕೆಲ ಸಚಿವರು ಹೇಳುತ್ತಿದ್ದಾರೆ. ಆದರೆ, ತಜ್ಞರ ಸಮಿತಿಯಲ್ಲಿದ್ದ ಯಾರೂ ಈ ಬಗ್ಗೆ ವಿವರಣೆ ನೀಡಿಲ್ಲ. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸರ್ಕಾರಗಳು ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪತ್ರಗಳನ್ನು ಬರೆದ ಹಿನ್ನೆಲೆಯಲ್ಲಿ ಸೋಮವಾರ ಸ್ಪಷ್ಟೀಕರಣ ನೀಡಿದ ಕೇಂದ್ರ ‘ಚರ್ಚೆ, ಸಮಾಲೋಚನೆಗಳ ನಂತರವೇ ಕೇರಳ ಪ್ರಸ್ತಾವ ತಿರಸ್ಕರಿಸಲಾಗಿದೆ. 2018 ಮತ್ತು 2021 ಇದೇ ಕೇಂದ್ರ ಸರ್ಕಾರ ಕೇರಳದ ಸ್ತಬ್ಧಚಿತ್ರಗಳನ್ನು ಒಪ್ಪಿತ್ತು. ಸಿಎಂಗಳು ವಿನಾಕಾರಣ ವಿವಾದವೆಬ್ಬಿಸಬಾರದು’ ಎಂದು ತಿಳಿಸಿತು.
ಏನಿದು ಜಟಾಯು ಪಾರ್ಕ್?:ಜಟಾಯು ನೇಚರ್ ಪಾರ್ಕ್​ನ ಬಂಡೆಯಲ್ಲಿ ಪ್ರಪಂಚದ ಅತಿ ದೊಡ್ಡ ಪಕ್ಷಿ (ಜಟಾಯು) ಶಿಲ್ಪ ಕೆತ್ತಲಾಗಿದೆ. 70 ಅಡಿ ಉದ್ದ ಈ ಶಿಲ್ಪ 1,400 ಚದರ ಅಡಿ ವಿಸ್ತೀರ್ಣ ಪ್ರದೇಶದಲ್ಲಿದೆ. ರಾಜಧಾನಿ ತಿರುವನಂತಪುರಂ ನಿಂದ 46 ಕಿಮೀ ದೂರದಲ್ಲಿರುವ ಈ ಉದ್ಯಾನವನ್ನು 2018ರಲ್ಲಿ ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗಿತ್ತು.
ಟ್ಯಾಬ್ಲೊ ತಿರಸ್ಕಾರ ನಿರ್ಧಾರ ಅಂತಿಮವೆಂದ ಕೇಂದ್ರ:ಈ ವರ್ಷದ ಗಣರಾಜ್ಯ ದಿನದ ಪರೇಡ್​ನಲ್ಲಿ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಪ್ರದರ್ಶಿಸಲು ಉದ್ದೇಶಿಸಿದ್ದ ಸ್ತಬ್ಧಚಿತ್ರಗಳಿಗೆ ಅವಕಾಶ ನೀಡದಿರುವ ತನ್ನ ನಿರ್ಧಾರ ಅಚಲವಾದುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ. ದೆಹಲಿಯ ಸ್ತಬ್ಧಚಿತ್ರವನ್ನು ಕೂಡ ತಿರಸ್ಕರಿಸುವ ಸಾಧ್ಯತೆಯಿದೆ. ನಿರ್ಧಾರ ಮರುಪರಿಶೀಲಿಸಿ ತಮ್ಮ ಟ್ಯಾಬ್ಲೋಗಳನ್ನು ಸೇರಿಸುವಂತೆ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಮಾಡಿರುವ ಮನವಿಯನ್ನು ಪರಿಶೀಲಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ. ಪರೇಡ್​ನಲ್ಲಿ ಟ್ಯಾಬ್ಲೋಗಳಿಗೆ ಅವಕಾಶ ನೀಡದಿರಲು ಕಾರಣವೇನೆಂಬುದನ್ನು ರಾಜ್ಯಗಳಿಗೆ ವಿವರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವೈಮಾನಿಕ ಸಾಧನ ಹಾರಾಟಕ್ಕೆ ಅನುಮತಿ ಇಲ್ಲ:ಗಣತಂತ್ರ ದಿನದ ಕಾರ್ಯಕ್ರಮವನ್ನು ಗುರಿಯಾಗಿಟ್ಟು ಕೊಂಡು ಉಗ್ರರು ದಾಳಿ ನಡೆಸುವ ಬೆದರಿಕೆ ಇರುವ ದೆಹಲಿಯಲ್ಲಿ ಜ.20ರಿಂದಲೇ ವೈಮಾನಿಕ ಸಾಧನಗಳ ಹಾರಾಟವನ್ನು ನಿಷೇಧಿಸಲಾಗಿದೆ. ಪರೇಡ್ ನಡೆಯುವ ರಾಜಪಥ್ ಸೇರಿ ವಿವಿಧೆಡೆ ಬಿಗಿಭದ್ರತೆ ಏರ್ಪಡಿಸಲಾಗಿದೆ. 5ರಿಂದ 8 ಸಾವಿರ ಜನರಿಗೆ ಪರೇಡ್ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಈ ವರ್ಷ ಕೂಡ ಮುಖ್ಯ ಅತಿಥಿಗೆ (ವಿದೇಶಿ ಗಣ್ಯರು) ಆಮಂತ್ರಣ ನೀಡಿಲ್ಲ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಗಣರಾಜ್ಯೋತ್ಸವ ಪರೇಡ್​ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದರ ಹಿಂದೆ ರಾಜಕೀಯ ಕಾರಣವಲ್ಲದೇ ಬೇರೆ ಇನ್ನೇನು ಇದೆ? ಮೂರು ವರ್ಷಕ್ಕೊಮ್ಮೆ ರಾಜ್ಯಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ ನಮ್ಮ ರಾಜ್ಯ ಸತತ ಹದಿಮೂರು ವರ್ಷದಿಂದ ಭಾಗವಹಿಸುತ್ತಿದೆ. ಇದರಿಂದ ಬಿಜೆಪಿ ಮುಖಂಡರು, ಮಂತ್ರಿಗಳು ಹೇಳುತ್ತಿರುವುದು ಸುಳ್ಳು ಎಂಬುದು ಸಾಬೀತಾಗುತ್ತದೆ. ಸ್ತಬ್ಧಚಿತ್ರದ ಆಯ್ಕೆಗೆ ಸುದೀರ್ಘ ಪ್ರಕ್ರಿಯೆ ಇರುತ್ತದೆ. ಆಯ್ಕೆ ಸಮಿತಿ ರಾಜ್ಯಗಳ ಜತೆ ಚರ್ಚೆ ನಡೆಸಿರುತ್ತದೆ. ಅಂತಿಮ ಹಂತದಲ್ಲಿ ಬದಲಾವಣೆಗಳಿಗೆ ಸೂಚನೆ ನೀಡುವುದಿಲ್ಲ. ಆದರೆ ಕೊನೇ ಹಂತದಲ್ಲಿ ತಿರಸ್ಕರಿಸಿ ನಾರಾಯಣ ಗುರುಗಳ ಬದಲು ಶಂಕರಾಚಾರ್ಯರ ಚಿತ್ರ ಹಾಕಲು ಹೇಳಿರುವುದು ಗಮನಿಸಿದರೆ ಬಿಜೆಪಿಯ ಸಣ್ಣತನ ಕಂಡುಬರುತ್ತದೆ. ಚುನಾವಣೆ ಸೋತ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಸ್ತಬ್ಧಚಿತ್ರಗಳನ್ನು ಸಹ ತಿರಸ್ಕರಿಸಿರುವುದು ಬಿಜೆಪಿಯ ಸಣ್ಣತನಕ್ಕೆ ಮತ್ತಷ್ಟು ಸಾಕ್ಷಿ ಒದಗಿಸುತ್ತದೆ.
|ಸಿದ್ದರಾಮಯ್ಯಪ್ರತಿಪಕ್ಷ ನಾಯಕ
ನಾರಾಯಣ ಗುರುಗಳ ಚಿತ್ರವುಳ್ಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿದ್ದನ್ನು ಪ್ರಶ್ನೆ ಮಾಡಿದ್ದನ್ನೇ ಬಿಜೆಪಿ ವಿವಾದ ಎಂದು ಬಿಂಬಿಸುತ್ತಿದೆ. ಸೂಕ್ಷ್ಮ ವಿಚಾರಗಳಿಗೆ ವಿವಾದದ ಸ್ಪರ್ಶ ನೀಡುವುದು ಬಿಜೆಪಿ ನಾಯಕರಿಗೆ ಕರತಲಾಮಲಕ. ಕೇರಳ ಸರ್ಕಾರ ಸ್ತಬ್ಧಚಿತ್ರದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಲ್ಲ ಎಂದಾದರೆ ಆ ಮಾರ್ಗದರ್ಶಿ ಸೂತ್ರಗಳನ್ನು ಸಾರ್ವಜನಿಕವಾಗಿ ದೇಶದ ಮುಂದಿಡಿ. ತಮಿಳುನಾಡು, ಪ.ಬಂಗಾಳ ರಾಜ್ಯಗಳ ಸ್ತಬ್ಧಚಿತ್ರಗಳನ್ನು ಕೂಡ ನಿರಾಕರಿಸಲಾಗಿದೆ. ಪ್ರಾದೇಶಿಕ ಪಕ್ಷಗಳ ಆಡಳಿತ ಇರುವ ರಾಜ್ಯಗಳ ಬಗ್ಗೆ ಏಕೆ ತಾರತಮ್ಯ ನೀತಿ? ಪ್ರಾದೇಶಿಕ ಆಸ್ಮಿತೆಯ ಕತ್ತು ಹಿಸುಕುವ ಪ್ರಯತ್ನವೇ ಇದು ಎಂಬ ಅನುಮಾನ ಬರುತ್ತಿದೆ. ಆಯ್ಕೆ ಸಮಿತಿಯಲ್ಲಿ ಇರುವವರು ಯಾರು? ಅವರ ಆಯ್ಕೆಯ ಮಾನದಂಡ ಏನು? ಇದು ಕೂಡ ದೇಶಕ್ಕೆ ಗೊತ್ತಾಗಬೇಕಿದೆ.
|ಎಚ್.ಡಿ. ಕುಮಾರಸ್ವಾಮಿಮಾಜಿ ಮುಖ್ಯಮಂತ್ರಿ
ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿ, ಶಂಕರಾಚಾರ್ಯರ ಸ್ತಬ್ಧಚಿತ್ರವನ್ನು ಕಳುಹಿಸುವಂತೆ ಕೇಂದ್ರ ಸರ್ಕಾರ ಹೇಳಿದೆ ಎಂಬುದೆಲ್ಲ ಶುದ್ಧಸುಳ್ಳು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಈ ವಿಷಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕೇರಳದ ಕಮ್ಯುನಿಸ್ಟ್ ಪಕ್ಷ ನಾರಾಯಣ ಗುರುಗಳ ಮೂರ್ತಿಯನ್ನು ಭಗ್ನಗೊಳಿಸುವ ಕೆಲಸಕ್ಕೆ ಕೈಹಾಕಿತ್ತು. ಈಗ ಅವರೇ ನಾರಾಯಣ ಗುರುಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಾರಾಯಣ ಗುರುಗಳ ಭಕ್ತರು, ಅಭಿಮಾನಿಗಳಿಗೆ ತಪ್ಪುಸಂದೇಶ ರವಾನಿಸಲಾಗುತ್ತಿದೆ. ಇದಕ್ಕೆಲ್ಲ ಯಾರೂ ಕಿವಿಗೊಡಬಾರದು. ಕೇರಳ ಸರ್ಕಾರ 2018 ಮತ್ತು 2021ರಲ್ಲಿ ಕಳುಹಿಸಿದ್ದ ಸ್ತಬ್ಧಚಿತ್ರವನ್ನು ಕೇಂದ್ರ ಪರಿಗಣಿಸಿದೆ.
|ಪ್ರಲ್ಹಾದ ಜೋಶಿಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + fifteen =
Remember me
