|ಎನ್. ಗುರುನಾಗನಂದನಬೆಂಗಳೂರು
ಮನೆ, ಜಮೀನು, ಚಿನ್ನ ಮುಂತಾದ ಭೌತಿಕ ಆಸ್ತಿಗಳಿಗೆ ಜಗಳ ನಡೆಯುವುದು ಸರ್ವೆಸಾಮಾನ್ಯ. ಆದರೆ ಬೌದ್ಧಿಕ ಆಸ್ತಿಗಾಗಿ ಸಾಮಾನ್ಯ ಮನುಷ್ಯನ ಜೀವನದಲ್ಲಿ ಜಗಳವಾಗುವುದು ವಿರಳ. ಮನುಷ್ಯ ಬುದ್ಧಿಯ ಅಪೂರ್ವ ಸೃಷ್ಟಿಯನ್ನು ಬೌದ್ಧಿಕ ಆಸ್ತಿ ಎಂದು ಕರೆಯುತ್ತಾರೆ. ಭೌತಿಕ ಆಸ್ತಿ ಥರ ಬೌದ್ಧಿಕ ಆಸ್ತಿ ನಶಿಸಿ ಹೋಗುವುದಿಲ್ಲ. ಒಮ್ಮೆ ಸೃಷ್ಟಿಯಾದರೆ ಮುಗಿಯಿತು. ಸೃಷ್ಟಿಸಿದವನು ಸತ್ತರೂ ಸೃಷ್ಟಿಗೆ ಸಾವಿಲ್ಲ. ಸಮಯಕ್ಕೆ ತಕ್ಕಂತೆ ನವೀಕರಿಸಬಹುದು. ಭೌತಿಕ ಆಸ್ತಿಗಿಂತ ಬೌದ್ಧಿಕ ಆಸ್ತಿಯನ್ನು ಕದಿಯುವುದು ಬಹಳ ಸುಲಭ. ಉದಾಹರಣೆಗೆ ನಾವು ಮಾಡಿದ ಒಂದು ವಿಶೇಷ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತೇವೆ. ಅದನ್ನು ಮತ್ತೊಬ್ಬರು ಡೌನ್​ಲೋಡ್ ಮಾಡಿ ಶೇರ್ ಮಾಡುತ್ತಾರೆ, ಆ ವಿಡಿಯೋ ವೈರಲ್ ಆಗುತ್ತದೆ. ಆಗ ನಿಜವಾಗಿಯೂ ವಿಡಿಯೋ ತಯಾರಿಸಿದವನಿಗೆ ಅದರ ಕ್ರೆಡಿಟ್ ಸಿಗುವುದಿಲ್ಲ. ’ಇದು ನನ್ನ ಸ್ವಂತ ಐಡಿಯಾ’ ಎಂದು ಸಾಬೀತು ಪಡಿಸುವುದು ಬಹಳ ಕಷ್ಟ. ಅದಕ್ಕಾಗಿಯೇ ಬೌದ್ಧಿಕ ಆಸ್ತಿ ಕಾಯ್ದೆಗಳು ಹುಟ್ಟಿಕೊಂಡವು. ಸ್ವಂತ ಬುದ್ಧಿಶಕ್ತಿಯ ಮೂಲಕ ತಯಾರಾದ ವಸ್ತು, ವಿನ್ಯಾಸ, ಸಾಹಿತ್ಯ, ಕಲೆ ಮುಂತಾದವುಗಳನ್ನು ಕಾಪಾಡಿಕೊಳ್ಳಲು ಈ ಕಾಯ್ದೆ ಸಹಾಯ ಮಾಡುತ್ತದೆ. ಬೌದ್ಧಿಕ ಆಸ್ತಿಯಲ್ಲಿ ಹಲವಾರು ವಿಧಗಳಿವೆ. ಆ ಪೈಕಿ ಕಾಪಿರೈಟ್, ಟ್ರೇಡ್​ವಾರ್ಕ್, ಪೇಟೆಂಟ್ ಬಹುಮುಖ್ಯವಾದಂಥವು.
ವರ್ಣಚಿತ್ರ, ಛಾಯಾಚಿತ್ರ, ಸಂಗೀತ ಸಂಯೋಜನೆ, ಧ್ವನಿ, ಕಂಪ್ಯೂಟರ್ ಪೋ›ಗ್ರಾಮ್ ಸಾಹಿತ್ಯ, ಚಲನಚಿತ್ರ, ನಾಟಕ, ವಾಸ್ತುಶಿಲ್ಪಗಳೇ ಮೊದಲಾದವುಗಳು ಬೌಧಿ್ಧ ಆಸ್ತಿಯ ವಿಧವಾದ ಕಾಪಿರೈಟ್ ಕೆಳಗೆ ಬರುತ್ತವೆ. ಕಾಪಿರೈಟ್ ಬೌದ್ಧಿಕ ಆಸ್ತಿಯ ಮಾಲೀಕನಿಗೆ ಒಂದು ಸುರಕ್ಷಾ ಕವಚವಿದ್ದಂತೆ. ಸೃಷ್ಟಿಸಿದ ವಸ್ತುವನ್ನು ಕೃತಿಸ್ವಾಮ್ಯ ಕಾಯ್ದೆ ಅಡಿಯಲ್ಲಿ ನೋಂದಾಯಿಸಬೇಕು. ಒಮ್ಮೆ ಸ್ವಂತ ಪದ್ಯ ಅಥವಾ ಲೇಖನವನ್ನು ಬರೆದರೆ ಅದಕ್ಕೆ ಅದನ್ನು ಬರೆದವರೇ ಮಾಲೀಕರಾಗುತ್ತಾರೆ. ಕೇವಲ ಸಂಸ್ಥೆಗಳು ಮಾತ್ರ ಮಾಲೀಕರಾಗಬೇಕೆಂದಿಲ್ಲ. ಒಬ್ಬ ವ್ಯಕ್ತಿಯಾಗಿ ಕೂಡ ಅದಕ್ಕೆ ಮಾಲೀಕ ಆಗಬಹುದು. ಸೃಜನಶೀಲತೆ ಇರುವ ಪ್ರತಿಯೊಬ್ಬರೂ ಕಾಪಿರೈಟ್ ಮಾಲೀಕರೇ. ಆದರೆ ತಯಾರಾದ ಬೌದ್ಧಿಕ ಆಸ್ತಿ ಬೇರೆಲ್ಲದ್ದಕ್ಕಿಂತ ಭಿನ್ನವಾಗಿರಬೇಕು ಮತ್ತು ಅನುಕರಣೆ ಮಾಡಿರಬಾರದು. ಸೃಜನಾತ್ಮಕವಾಗಿ, ವಿಶಿಷ್ಟವಾಗಿ ತಯಾರಾದ ಕೃತಿಗೆ ತಯಾರಿಸಿದವನೇ ಮಾಲೀಕನಾಗುತ್ತಾನೆ. ಕಾಪಿರೈಟ್ ಬೇರೆಯವರಿಗೆ ವರ್ಗಾಯಿಸುವವರೆಗೆ ಆ ಹಕ್ಕು ಅವನದೇ ಆಗಿರುತ್ತದೆ. ಹೇಗೆ ಮನೆ ಅಥವಾ ಜಮೀನನ್ನು ಬೇಕಾದವರಿಗೆ ವರ್ಗಾವಣೆ / ಮಾರಾಟ ಮಾಡುತ್ತಾರೆಯೋ ಅದರಂತೆ ಕಾಪಿರೈಟ್ ಕೂಡ ಮಾರಬಹುದು.
ಕಳೆದ 30 ವರ್ಷಗಳಿಗೆ ಹೋಲಿಸಿದರೆ ಇಂದಿನ ಕಾಪಿರೈಟ್ ಕಾಯ್ದೆ ಬಹಳ ಚೆನ್ನಾಗಿದೆ. ಬೌದ್ಧಿಕ ಆಸ್ತಿಯ ಬಗ್ಗೆ ಬಹಳ ಉದಾಸೀನತೆ ಇತ್ತು. ಆದರೆ ಈಗ ಅರಿವು ಮೂಡುತ್ತಿದೆ. ಕ್ರಮೇಣವಾಗಿ ಆಲೋಚನೆಗಳು ಬದಲಾಗು ತ್ತಿವೆ. ನಮ್ಮ ದೇಶದಲ್ಲಿ ಬೌದ್ಧಿಕ ಆಸ್ತಿ ಕಾಯ್ದೆಯ ತಿದ್ದುಪಡಿ ಆಗಬೇಕು. ಕೃತಿಸ್ವಾಮ್ಯ ಉಲ್ಲಂಘನೆಯ ಪರಿಣಾಮದ ಗಂಭೀರತೆಯನ್ನು ತಿಳಿದಿದ್ದರೂ ತಿಳಿಯದಂತೆ ಇದ್ದಾರೆ. ಅದನ್ನು ಬದಲಾಯಿಸುವಂತೆ ಕಾಯ್ದೆಯ ತಿದ್ದುಪಡಿ ಆಗಬೇಕು. ಬೌದ್ಧಿಕ ಆಸ್ತಿಯ ಮೇಲೆ ಕ್ರಿಯೇಟಿವಿಟಿ, ಸಮಯ, ಕೋಟ್ಯಂತರ ರೂ. ಹೂಡಿಕೆಯಾಗಿರುತ್ತದೆ. ಅದನ್ನು ಮತ್ತೊಬ್ಬರು ಅಡ್ಡದಾರಿಯಲ್ಲಿ ಸುಲಭವಾಗಿ ಬಳಸಿಕೊಳ್ಳಬಹುದು ಎಂಬ ಮನೋಭಾವ ದೂರವಾಗಬೇಕು. ಬೌದ್ಧಿಕ ಆಸ್ತಿಯ ಉಲ್ಲಂಘನೆ ಮಾಡಿದವರಿಗೆ ಶಿಕ್ಷೆಯಾಗದಿದ್ದರೆ ಕಷ್ಟಪಟ್ಟವರ ಶ್ರಮ ವ್ಯರ್ಥವಾಗುತ್ತದೆ. ಬೌದ್ಧಿಕ ಆಸ್ತಿಯನ್ನು ಲಘುವಾಗಿ ತೆಗೆದುಕೊಳ್ಳುವುದು ನಿಲ್ಲಬೇಕು. ಸಂಗೀತ, ಸಾಹಿತ್ಯ, ಸಿನಿಮಾ ಉದ್ಯಮವನ್ನು ನಂಬಿಕೊಂಡು ಸಾವಿರಾರು ಜನರು ಬದುಕುತ್ತಿದ್ದಾರೆ. ಯಾವ ಉದ್ಯಮವಾದರೂ ಅದಕ್ಕೆ ಬೇಕಾದ ಭದ್ರತೆ ಸಿಗಬೇಕಾದದ್ದು ಅಗತ್ಯ. ಬೌದ್ಧಿಕ ಆಸ್ತಿ ಕಾಯ್ದೆಯಲ್ಲಿರುವ ಲೋಪದೋಷಗಳನ್ನು ಗುರುತಿಸಿ ಸರಿಪಡಿಸುವುದು ಬಹಳ ಮುಖ್ಯ ಎನ್ನುತ್ತಾರೆ ಲಹರಿ ಸಂಸ್ಥೆಯ ವೇಲು.
ಪರರ ಬೌದ್ಧಿಕ ಆಸ್ತಿಯನ್ನು ಅನುಮತಿಯಿ ಲ್ಲದೆ ಬಳಸುವುದು, ನಕಲು ಮಾಡುವುದು ಮತ್ತು ಮಾರಾಟ ಮಾಡುವುದು ಮಹತ್ತರ ಅಪರಾಧ ಎಂದು ಪರಿಗಣಿಸಲಾಗಿದೆ. ಸುಲಭವಾಗಿ ಇಂಟರ್​ನೆಟ್​ನಲ್ಲಿ ಫೋಟೋ ಡೌನ್​ಲೋಡ್ ಮಾಡಿ ಬಳಸಿ ಬಿಡುತ್ತೇವೆ. ಆದರೆ ಅದು ಕೂಡ ಕಾಪಿರೈಟ್ ಉಲ್ಲಂಘನೆ ಮಾಡಿದಂತೆ. ಇದು ಎಲ್ಲದಕ್ಕೂ ಅನ್ವಯಿಸುವುದಿಲ್ಲ. ಉಚಿತವಾಗಿ ಬಳಸಬಹುದಾದ್ದು ಕೂಡ ಸಿಗುತ್ತದೆ. ಕೆಲವೊಮ್ಮೆ ಮಾಲೀಕನ ಹೆಸರು ಉಲ್ಲೇಖಿಸಿ ಬಳಸಬೇಕು ಎಂಬ ನಿಯಮ ಇರುತ್ತದೆ. ಫೇಸ್​ಬುಕ್, ಯೂಟ್ಯೂಬ್​ನಲ್ಲಿ ಈ ನಿಯಮಗಳನ್ನು ಕಾಣಬಹುದು. ಭಾರತದಲ್ಲಿ ಕೃತಿಸ್ವಾಮ್ಯ ಉಲ್ಲಂಘನೆ ಮಾಡಿದರೆ 6 ತಿಂಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 50,000 ರೂ. ದಂಡ ಕಟ್ಟಬೇಕು.
ಬೌದ್ಧಿಕ ಆಸ್ತಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದೇ ವಿಶ್ವ ಬೌದ್ಧಿಕ ಆಸ್ತಿ ದಿನದ ಉದ್ದೇಶ. 2023ರ ವಿಶ್ವ ಬೌದ್ಧಿಕ ಆಸ್ತಿ ದಿನದ ಥೀಮ್ ಏನೆಂದರೆ ಮಹಿಳೆಯರು ಮತ್ತು ಬೌದ್ಧಿಕ ಆಸ್ತಿ: ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುವುದು. ಮಹಿಳಾ ಸೃಷ್ಟಿಕರ್ತರು ಮತ್ತು ಉದ್ಯಮಿಗಳಲ್ಲಿ ಕಾರ್ಯಸಾಧ್ಯ ಎಂಬ ಮನೋಭಾವ ಹುಟ್ಟಿಸುವುದು ಈ ವರ್ಷದ ಗುರಿ. ಅಪೂರ್ವವಾದ ಹೊಸ ಆವಿಷ್ಕಾರವನ್ನು ಸ್ವಾಗತಿಸಲು ಜಗತ್ತು ಕಾಯುತ್ತಿದೆ. ಬೌದ್ಧಿಕ ಆಸ್ತಿಯನ್ನು ಹೆಚ್ಚು ಮಾಡಿಕೊಳ್ಳಬೇಕೆಂದರೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಕ್ರಿಯಾಶೀಲತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಹೊಸ ಸಂಶೋಧನೆಗಳಿಗೆ ಅನುವು ಮಾಡಿಕೊಡಬೇಕು. ಒಬ್ಬರ ಐಡಿಯಾ ಜನರಿಗೆ ತಲುಪಿದ ಕೂಡಲೇ ಇನ್​ಫ್ಲುಯೆನ್ಸ್ ಆಗಿ ಅನುಕರಣೆ ಮಾಡುವುದು ನಿಲ್ಲಬೇಕು. ಪ್ರಭಾವಿತರಾಗುವುದು ತಪ್ಪಲ್ಲ. ಆದರೆ ಸ್ಪೂರ್ತಿ ಪಡೆದು ಸ್ವಂತ ಬುದ್ಧಿ ಉಪಯೋಗಿಸಿ ಸೃಷ್ಟಿಸಬೇಕು. ಇದರೊಂದಿಗೆ ಸೃಷ್ಟಿಸಿದವನಿಗೆ ಸಲ್ಲಬೇಕಾದ ಗೌರವ ಸಿಗಲೇಬೇಕು. ಇಲ್ಲದೆ ಹೋದರೆ ಸೃಷ್ಟಿಸಬೇಕು ಎಂಬ ಉತ್ಸಾಹ ಕಡಿಮೆಯಾಗುತ್ತದೆ.
ಕಾಪಿರೈಟ್​ನಂತೆ ಟ್ರೇಡ್​ವಾರ್ಕ್ ಕೂಡ ಬೌದ್ಧಿಕ ಆಸ್ತಿಯ ಒಂದು ವಿಧ. ಚಿಹ್ನೆ, ವಿನ್ಯಾಸ, ಟ್ಯಾಗ್​ಲೈನ್ ಇತ್ಯಾದಿ ಟ್ರೇಡ್​ವಾರ್ಕ್ ಅಧೀನದಲ್ಲಿ ಬರುತ್ತವೆ. ಈಗ ಆಪಲ್ ಸಂಸ್ಥೆಯ ಸೇಬು ಹಣ್ಣಿನ ಚಿಹ್ನೆಯನ್ನು ಬೇರೆ ಸಂಸ್ಥೆಯವರು ಬಳಸುವಂತಿಲ್ಲ. ಏಕೆಂದರೆ ಅದು ಆಪಲ್ ಸಂಸ್ಥೆಯ ಟ್ರೇಡ್​ವಾರ್ಕ್. ಪೆಪ್ಸಿಯ ‘ಯೇ ದಿಲ್ ಮಾಂಗೇ ಮೋರ್’ ಎಂಬ ಟ್ಯಾಗ್​ಲೈನ್ ಕೂಡ ಅದರ ಟ್ರೇಡ್​ವಾರ್ಕ್. ಟ್ರೇಡ್​ವಾರ್ಕ್ ಲೈಸೆನ್ಸ್ ಪಡೆಯಲು ವಿಶಿಷ್ಟವಾದ ಸೃಷ್ಟಿಯನ್ನು ಮಾಡಿರಬೇಕು. ಬೇರೆಯ ಬ್ರಾ್ಯಂಡ್​ನ ಅನುಕರಣೆ ಮಾಡಿರಬಾರದು. ಸ್ವಂತವಾದ ಸೃಷ್ಟಿ ಎಂದು ಖಚಿತವಾಗಿದ್ದು, ಪರವಾನಗಿ ನೀತಿಯ ಒಳಗಿದ್ದರೆ ಮಾತ್ರ ಟ್ರೇಡ್​ವಾರ್ಕ್​ನಲ್ಲಿ ನೋಂದಾಯಿಸಬಹುದು. ಆದರೆ ಟ್ರೇಡ್​ವಾರ್ಕ್ ಮತ್ತು ಕಾಪಿರೈಟ್ ಎರಡೂ ಬೌದ್ಧಿಕ ಆಸ್ತಿಯ ವಿಧಗಳಾಗಿದ್ದರೂ ವ್ಯತ್ಯಾಸವಿದೆ. ಇವು ಬೇರೆ ಬೇರೆ ರೀತಿಯ ಬೌದ್ಧಿಕ ಆಸ್ತಿಗಳಿಗೆ ಸುರಕ್ಷತೆ ನೀಡುತ್ತವೆ ಮತ್ತು ನೋಂದಾಯಿಸಿಕೊಳ್ಳಲು ಬೇಕಾದ ಅವಶ್ಯಕತೆಗಳು ಭಿನ್ನವಾಗಿರುತ್ತವೆ. ಒಬ್ಬ ವ್ಯಕ್ತಿ ರಚಿಸಿದ ಸಾಹಿತ್ಯ, ನಾಟಕ, ಸಂಗೀತ, ಕಲೆ, ಕಂಪ್ಯೂಟರ್ ಪೋ›ಗ್ರಾಮ್ ಮೊದಲಾದ ಮೂಲಸೃಷ್ಟಿಯನ್ನು ಕಾಪಾಡಲು ಸಹಾಯ ಮಾಡುತ್ತದೆ. ಅದನ್ನು ನಕಲು ಆಗದಂತೆ ನಿಗವಹಿಸಲು ಸಹಾಯ ಮಾಡುತ್ತದೆ. ಟ್ರೇಡ್​ವಾರ್ಕ್ ಒಂದು ಸಂಸ್ಥೆಯ ಗುರುತು, ಬ್ರಾ್ಯಂಡ್, ಚಿಹ್ನೆ, ಘೊಷಣೆಯನ್ನು ಬೇರೆ ಸಂಸ್ಥೆಯಿಂದ ವಿಭಿನ್ನ ಎಂದು ಗುರುತಿಸಲು ಅನುವು ಮಾಡಿಕೊಡುತ್ತದೆ. ಅದರೊಂದಿಗೆ ಟ್ರೇಡ್​ವಾರ್ಕ್ ಲೈಸೆನ್ಸ್ ಸರ್ಕಾರದ ಮೂಲಕ ಪಡೆಯಬೇಕು. ಆದರೆ ಒಂದು ಕವಿತೆ, ಫೋಟೋ ಸೃಷ್ಟಿ ಆದ ಕೂಡಲೇ ಸ್ವಯಂಚಾಲಿತವಾಗಿ ಕಾಪಿರೈಟ್ ದೊರೆಯುತ್ತದೆ ಮತ್ತು ಕಾಲಾಂತರದಲ್ಲಿ ಕೃತಿಸ್ವಾಮ್ಯದ ಅವಧಿ ಮುಗಿದು ಹೋಗುತ್ತದೆ. ಆದರೆ ಟ್ರೇಡ್​ವಾರ್ಕ್​ನಲ್ಲಿ ಹಾಗಿಲ್ಲ. ಅವಧಿಯ ಪ್ರಶ್ನೆ ಇಲ್ಲಿಲ್ಲ. ಇದರೊಂದಿಗೆ ಮತ್ತೊಂದು ಬೌದ್ಧಿಕ ಆಸ್ತಿ ಪೇಟೆಂಟ್. ಇದು ತಾಂತ್ರಿಕ ಆವಿಷ್ಕಾರಗಳಿಗೆ ವಿಶೇಷ ಹಕ್ಕನ್ನು ನೀಡುತ್ತದೆ. ಆವಿಷ್ಕಾರವನ್ನು 20 ವರ್ಷಗಳ ಕಾಲ ಬೇರೆಯವರು ವ್ಯಾಪಾರ ವಹಿವಾಟುಗಳಿಗೆ ಬಳಸದಂತೆ ತಡೆಯುತ್ತದೆ. ಆವಿಷ್ಕಾರ ಮಾಡಿದವನು ಮಾತ್ರ ಅದನ್ನು ಯಾರು ಮತ್ತು ಹೇಗೆ ಬಳಸಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಪೇಟೆಂಟ್ ಪಡೆಯಲು ಆವಿಷ್ಕಾರ ಹೊಸದಾಗಿರಬೇಕು ಮತ್ತು ಅದು ಬಳಕೆಗೆ ಯೋಗ್ಯವಾಗಿರಬೇಕು. ವಿಶೇಷವಾಗಿ ವೈದ್ಯಕೀಯ, ಫಾರ್ವಸ್ಯುಟಿಕಲ್ ಕ್ಷೇತ್ರಗಳು ಪೇಟೆಂಟ್ ಪ್ರಯೋಜನ ಪಡೆಯುತ್ತಿವೆ. ಬೌದ್ಧಿಕ ಆಸ್ತಿಯ ವಿಧಗಳು ಅದರ ಕ್ಷೇತ್ರದಲ್ಲಿನ ಕಾಯ್ದೆಗಳ ಉಲ್ಲಂಘನೆಯನ್ನು ತಡೆಯುವುದಕ್ಕೆ ಸಹಾಯ ಮಾಡಲು ಸ್ಥಾಪಿತವಾದದ್ದು. ಅದನ್ನು ಸರಿಯಾಗಿ ಬಳಸಿದಾಗ ಮಾತ್ರ ಬುದ್ಧಿ ಶಕ್ತಿಯಿಂದ ಸೃಷ್ಟಿಯಾದ ಆಸ್ತಿಯನ್ನು ಸುರಕ್ಷಿತ ಪಡಿಸಬಹುದು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 7 =
Remember me
