| ರಾಘವ ಶರ್ಮ ನಿಡ್ಲೆ, ನವದೆಹಲಿ
1990ರಿಂದ 2005ರ ತನಕದ ಲಾಲು ಯಾದವ್ ಏಕಚಕ್ರಾಧಿಪತ್ಯ-ಜಂಗಲ್​ರಾಜ್ ಆಡಳಿತದ ಬಳಿಕ ಕಳೆದ 15 ವರ್ಷಗಳಿಂದ ಮುಖ್ಯಮಂತ್ರಿ ಗದ್ದುಗೆಯಲ್ಲಿರುವ ಜೆಡಿಯು ನಾಯಕ ನಿತೀಶ್ ಕುಮಾರ್, ಈಗ 4ನೇ ಬಾರಿಗೆ ಅಧಿಕಾರಕ್ಕೆ ಏರುವ ಕನಸು ಕಾಣುತ್ತಿದ್ದಾರೆ. ಆದರೆ, ಕಳೆದ ಮೂರು ಅವಧಿಗಳಲ್ಲಿದ್ದ ‘ಅನುಕೂಲಕರ’ ರಾಜಕೀಯ ವಾತಾವರಣ ಈಗ ಅವರ ಮುಂದಿಲ್ಲ! ಬಿಹಾರದ ಮಟ್ಟಿಗೆ ಎನ್​ಡಿಎಯ ಬಲಿಷ್ಠ ಪಕ್ಷವಾಗಿದ್ದ ಜೆಡಿಯು, ಮೊದಲ ಬಾರಿಗೆ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮುಂದೆ ಮಂಡಿಯೂರಿದೆ. ಎರಡೂ ಪಕ್ಷಗಳು ಸಮಾನ ಟಿಕೆಟ್ ಹಂಚಿಕೆ ಮಾಡಿಕೊಂಡಿದ್ದರೂ, ವೋಟು ಗಳಿಸಲು ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸನ್ನೂ ಬಳಸಿಕೊಳ್ಳಬೇಕಾಗಿರುವುದು ನಿತೀಶ್​ಗೆ ಈಗ ಅನಿವಾರ್ಯತೆ. 5 ವರ್ಷಗಳ ಹಿಂದೆ, ನಿಮ್ಮ ಆಯ್ಕೆ ‘ಬಿಹಾರಿ’ ಆಗಬೇಕೆ ವಿನಾ ‘ಬಾಹರಿ’ (ಮೋದಿ-ಹೊರಗಿನವರು) ಅಲ್ಲ ಎಂದು ಕರೆಕೊಟ್ಟಿದ್ದ ನಿತೀಶ್, ಈ ಸಲ ‘ಬಿಹಾರಿ-ಬಾಹರಿ’ ಕಾಂಬಿನೇಷನ್​ನೊಂದಿಗೆ ಅಖಾಡದಲ್ಲಿದ್ದಾರೆ!
ಒಮ್ಮೆ ಬಿಜೆಪಿ, ಮತ್ತೆ ಆರ್​ಜೆಡಿ, ಕಾಂಗ್ರೆಸ್, ಈಗ ಬಿಜೆಪಿ… ಹೀಗೆ ಅಧಿಕಾರದ ಏಣಿ ಏರಲು ‘ಸಾಥಿ’ಗಳನ್ನು ಕಾಲಕಾಲಕ್ಕೆ, ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಂಡಿದ್ದರಿಂದಲೇ ವಿರೋಧಿಗಳು ಅವರನ್ನು ‘ಪಲ್ಟು ರಾಮ್, ‘ಪಲ್ಟು ಕುಮಾರ್’, ‘ದಲ್ ಬದ್ಲು’. ‘ಕುರ್ಸಿ ಕುಮಾರ್’ (ಅನುಕೂಲಕ್ಕೆ ತಕ್ಕಂತೆ ನಿಲುವು, ಮಿತ್ರರನ್ನು ಬದಲಿಸುವುದು) ಎಂದು ಲೇವಡಿ ಮಾಡುವುದುಂಟು. ಹಾಗಂತ, ಆಡಳಿತದ ವಿಷಯದಲ್ಲಿ ನಿತೀಶ್ ಜನ-ಮನ ಗೆದ್ದ ನಾಯಕ. ‘ಜಂಗಲ್​ರಾಜ್’ನಿಂದಾಗಿ ಮನೆಯಿಂದ ಹೊರ ಕಾಲಿಡಲೂ ಹೆದರುತ್ತಿದ್ದ ಮಂದಿ, ಈಗ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ನಿತೀಶರ ಆಡಳಿತವೈಖರಿಯೇ ಮುಖ್ಯ ಕಾರಣ.
ಈ ಬಾರಿಯೂ, ನಿತೀಶ್​ರನ್ನು ವಿರೋಧಿಸಲು ಪ್ರಬಲ ಕಾರಣಗಳೇನಿಲ್ಲ. ಆದರೆ, ಕರೊನಾ ಮಹಾಮಾರಿ, ಲಾಕ್​ಡೌನ್, ವಲಸೆ ಕಾರ್ವಿುಕರ ಬಿಕ್ಕಟ್ಟು, ನಿರುದ್ಯೋಗ ಹೆಚ್ಚಿರುವುದು ಯುವಕರ ನೆಮ್ಮದಿ ಕೆಡಿಸಿದೆ. ಉನ್ನತ ಶಿಕ್ಷಣ ಪೂರ್ಣಗೊಳಿಸಿದವರಿಗೆ ಉದ್ಯೋಗ ಸಿಗುತ್ತಿಲ್ಲ. ಕರೊನಾ ನಂತರ ಸೃಷ್ಟಿಯಾಗಿರುವ ಬಿಕ್ಕಟ್ಟುಗಳನ್ನೇ ಚುನಾವಣಾ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಂಡಿರುವ ಆರ್​ಜೆಡಿ- ಕಾಂಗ್ರೆಸ್ ಮಹಾಮೈತ್ರಿಗೆ, ಎಲ್​ಜೆಪಿ ಯುವ ನಾಯಕ ಚಿರಾಗ್ ಪಾಸ್ವಾನ್ ‘ನಿತೀಶ್ ವಿರೋಧಿ’ ತಂತ್ರಗಾರಿಕೆಗಳೂ ನೆರವಿಗೆ ಬರುವ ಸಾಧ್ಯತೆಗಳಿವೆ. ವಿರೋಧಿಗಳ ‘ಪಿತೂರಿ’ಗೆ ಕಿವಿಗೊಡಬೇಡಿ ಎನ್ನುತ್ತಿರುವ ನಿತೀಶ್, ‘ಲಾಲು ಆಡಳಿತದ 15 ವರ್ಷ ಮತ್ತು ನನ್ನ 15 ವರ್ಷಗಳ ಆಡಳಿತಾವಧಿಯನ್ನು ನೋಡಿದ್ದೀರಿ. ಯಾರು ಉತ್ತಮರು ಎಂಬುದನ್ನು ನೀವೇ ನಿರ್ಧರಿಸಿ’ ಎಂದಿದ್ದಾರೆ.
ಜೆಡಿಯು-ಎಲ್​ಜೆಪಿ ಕಿತ್ತಾಟದ ವಿಷಯದಲ್ಲಿ ಬಿಜೆಪಿಯ ನಡೆ ಸಂಶಯಕ್ಕೀಡು ಮಾಡಿದರೂ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಎನ್​ಡಿಎಗೆ ನಿತೀಶರೇ ಸಿಎಂ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರೂ, ನಿತೀಶ್ ಭವಿಷ್ಯದ ಬಗ್ಗೆ ಪ್ರಶ್ನೆಗಳಿರುವುದು ಸುಳ್ಳಲ್ಲ. ಏಕೆಂದರೆ, ಕೇಂದ್ರದಲ್ಲಿ ಎನ್​ಡಿಎ ಮಿತ್ರಪಕ್ಷವಾಗಿದ್ದರೂ, ಎಲ್​ಜೆಪಿಯ ನಿತೀಶ್ ವಿರುದ್ಧದ ‘ಕಾರ್ಯತಂತ್ರ’ದ ಬಗ್ಗೆ ಬಿಜೆಪಿ ಮೌನವಹಿಸಿದೆ. ಜನರ ಮುಂದೆ, ‘ನಿತೀಶರೇ ನಮ್ಮ ನಾಯಕರು’ ಎನ್ನುತ್ತಿರುವ ಬಿಜೆಪಿ ದಿಲ್ಲಿ ದೊರೆಗಳು, ಅಂತರಂಗದಲ್ಲಿ ‘ಸಿಎಂ ಕುರ್ಚಿ ನಮ್ಮವರಿಗೇ ಸಿಗಲಿ’ ಎಂದು ಬಯಸುತ್ತಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ-ಜೆಡಿಯು ‘ಭಾಯಿ-ಭಾಯಿ’ ಎಂದು ಕಂಡರೂ, ಬಿಜೆಪಿಯ ಒಳತಂತ್ರಗಳಿಂದಾಗಿ ನಿತೀಶ್​ಗೆ ಬಿಜೆಪಿ ಸೇರಿ ಎಲ್ಲರೂ ವಿರೋಧಿಗಳೇ. ಈ ಚುನಾವಣೆ ಮಟ್ಟಿಗೆ ಅವರದ್ದು ಎಲ್ಲರ ವಿರುದ್ಧದ ಏಕಾಂಗಿ ಹೋರಾಟ.
ಯುವಕರ ಒಲವು ಯಾರತ್ತ?:ಲಾಕ್​ಡೌನ್​ನಿಂದಾಗಿ ರಾಜ್ಯಕ್ಕೆ ಮರಳಿದ ವಲಸೆ ಕಾರ್ವಿುಕರನ್ನು ಕಡೆಗಣಿಸಿದರು ಎಂಬ ಆಕ್ರೋಶ ನಿತೀಶ್ ವಿರೋಧಿ ಮತಗಳಾಗಿ ಪರಿವರ್ತನೆಯಾಗಬಹುದು. ‘ಯಾರ್ಯಾರು ಯಾವ ರಾಜ್ಯಗಳಲ್ಲಿದ್ದೀರೋ ಅಲ್ಲೇ ಉಳಿದುಕೊಳ್ಳಿ’ ಎಂದು ಪ್ರಧಾನಿ ಮೋದಿ ಕೊಟ್ಟ ಕರೆಯನ್ನು ನಿತೀಶ್ ಕೂಡ ಪುನರುಚ್ಚರಿಸಿದ್ದರು ಮತ್ತು ಬಿಹಾರದ ವಲಸೆ ಕಾರ್ವಿುಕರನ್ನು ಸದ್ಯಕ್ಕೆ ವಾಪಸಾಗುವ ಸಾಹಸ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ರಾಜ್ಯಕ್ಕೆ ವಾಪಸಾದ ವಲಸೆ ಕಾರ್ವಿುಕರಿಗೆ ಸೂಕ್ತ ಸಮಯಕ್ಕೆ ರೈಲುವ್ಯವಸ್ಥೆ, ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ರಾಜ್ಯ ಸರ್ಕಾರ ನೆರವಿಗೆ ಬರಲಿಲ್ಲ ಎಂಬ ಅಭಿಪ್ರಾಯ ಗಟ್ಟಿಗೊಳಿಸಿದ ವಿಪಕ್ಷಗಳು, ಕಾರ್ವಿುಕರ ಬವಣೆ ನಿತೀಶ್​ಗೆ ಬೇಕಿಲ್ಲ ಎಂದೇ ಪ್ರಚಾರ ಮಾಡಿದವು. ಈಗ ರಾಜ್ಯಕ್ಕೆ ವಾಪಸಾದ ಕಾರ್ವಿುಕರರಲ್ಲಿ ಬಹುತೇಕ ಮಂದಿ ಉದ್ಯೋಗವಿಲ್ಲದೆ ದಿನದೂಡುತ್ತಿದ್ದಾರೆ. ವಲಸೆ ಕಾರ್ವಿುಕರಿಗೆ -ಠಿ; 2000 ನೆರವು ನೀಡಿದ ಸರ್ಕಾರ ಜತೆಗೆ ನರೇಗಾ ಯೋಜನೆಯಡಿಯಲ್ಲಿ ಕೆಲವರಿಗೆ ನೌಕರಿ ಸಿಗುವಂತೆ ಮಾಡಿದೆ.
‘ವಲಸೆ ಕಾರ್ವಿುಕರ ನಿರೀಕ್ಷೆಗಳು ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಮತ್ತೊಂದೆಡೆ, ತೇಜಸ್ವಿ ಯಾದವ್ ‘ಸರ್ಕಾರಿ ನೌಕರಿ’ಯ ಕನಸು ಬಿತ್ತಿರುವುದು ಯುವಕರನ್ನು ಸೆಳೆದಿದೆ. ಬಿಹಾರದಲ್ಲಿ ಮೊದಲಿನಿಂದಲೂ ‘ಸರ್ಕಾರಿ ನೌಕರಿ’ ಬಗ್ಗೆ ಜನರಲ್ಲಿ ವಿಪರೀತ ಆಸಕ್ತಿ. ನಿರುದ್ಯೋಗ ಪೀಡಿತ ಕುಟುಂಬಗಳಿಗೆ ತೇಜಸ್ವಿ ಮಾತುಗಳು ಭರವಸೆಯಂತೆ ಕಾಣುತ್ತಿವೆ. ರಾಜ್ಯದ ಶೇಕಡ 50ರಷ್ಟು ಮತದಾರರು 40 ವರ್ಷಕ್ಕಿಂತ ಕೆಳಗಿನವರು. ಅವರಲ್ಲಿ 30ರ ಆಸುಪಾಸಿನವರು ‘ಜಂಗಲ್​ರಾಜ್’ನ ಅನುಭವ ಹೊಂದಿಲ್ಲ. ಹೀಗಾಗಿ, ಲಾಲು ಪುತ್ರ ತೇಜಸ್ವಿ ಕಡೆ ಆಕರ್ಷಿತರಾಗುತ್ತಿದ್ದಾರೆ’ ಎನ್ನುತ್ತಾರೆ ಬೋಧಗಯಾದ ವ್ಯಾಪಾರಿ ರಾಕೇಶ್ ಪಾಂಡೆ.
ಮತ್ತೆ ಅಭಿವೃದ್ಧಿಯ ಮಂತ್ರ:ತಮ್ಮ ಸರ್ಕಾರದ 7 ಪ್ರಮುಖ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿರುವ ನಿತೀಶ್​ಗೆ ಈ ಬಾರಿಯೂ ಅಭಿವೃದ್ಧಿಯೇ ಚುನಾವಣಾ ಎಜೆಂಡಾ. ಪ್ರತಿ ಮನೆಗೆ ನಲ್ಲಿ ನೀರು ಪೂರೈಕೆ, ಶೌಚಗೃಹ ನಿರ್ವಣ, ವಿದ್ಯುತ್ ಸಂಪರ್ಕ, ರಸ್ತೆ ಅಭಿವೃದ್ಧಿ, ಯುವಕರ ಆರ್ಥಿಕ ಅಭಿವೃದ್ಧಿ, ಮಹಿಳೆಯರಿಗೆ ಸರ್ಕಾರಿ ನೌಕರಿಯಲ್ಲಿ ಶೇ.35 ಮೀಸಲಾತಿ, ಎಲ್ಲ ಜಿಲ್ಲೆಗಳಲ್ಲಿ ಗುಣಮಟ್ಟದ ಶಿಕ್ಷಣ ವ್ಯವಸ್ಥೆ, ಕೈಗಾರಿಕೆ ಮತ್ತು ನರ್ಸಿಂಗ್ ತರಬೇತಿ ಸಂಸ್ಥೆಗಳ ನಿರ್ಮಾಣ ಎಂಬ 7 ಯೋಜನೆಗಳ ಪಟ್ಟಿಯನ್ನೇ ಜನರ ಮುಂದಿಡಲಾಗುತ್ತಿದೆ.
ಬಿಹಾರದ ನಲಂದಾ ಜಿಲ್ಲೆಯ ಕಲ್ಯಾಣ್ ಬಿಘಾ ಎಂಬ ಗ್ರಾಮದಲ್ಲಿ ಜನಿಸಿದ ನಿತೀಶ್ ಕುಮಾರ್, ಲಾಲು ಯಾದವ್​ಗೆ ಹೋಲಿಸಿದರೆ ರಾಜ್ಯ ರಾಜಕೀಯ ಮತ್ತು ಅಭಿವೃದ್ಧಿ ವಿಷಯದಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಮತದಾರ ಅವರನ್ನು ರಾಜಧಾನಿ ಪಟನಾದಲ್ಲೇ ಉಳಿಸಿಕೊಳ್ಳುತ್ತಾರಾ ಅಥವಾ ಕಲ್ಯಾಣ್ ಬಿಘಾಕ್ಕೆ ವಾಪಸ್ ಕಳಿಸುತ್ತಾರಾ ಎಂಬುದಕ್ಕೆ ನ.10ಕ್ಕೆ ಉತ್ತರ ಸಿಗಲಿದೆ.
ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿದ್ದರಿಂದಾಗಿ ಗ್ರಾಮಾಂತರ ಭಾಗದ ಮಹಿಳೆಯರು ನಿತೀಶ್​ರನ್ನು ನಿತ್ಯವೂ ನೆನಪಿಸಿಕೊಳ್ಳುತ್ತಾರೆ. ಕುಡಿತದ ಚಟದಿಂದ ಬೀದಿಗೆ ಬಿದ್ದಿದ್ದ ಎಷ್ಟೋ ಕುಟುಂಬಗಳು ಈಗ ಹೊಸ ಬದುಕನ್ನು ಕಂಡುಕೊಂಡಿವೆ. ಆದರೆ, ಈಚಿನ ದಿನಗಳಲ್ಲಿ ಅಕ್ರಮ ಮದ್ಯ ಮಾರಾಟ ಮತ್ತೆ ಹಳ್ಳಿಗಳ ಮಹಿಳೆಯರನ್ನು ಬಾಧಿಸತೊಡಗಿದೆ. ಮದ್ಯವರ್ತಿಗಳು ನೇರವಾಗಿ ಮನೆ-ಮನೆಗಳಿಗೆ ಮದ್ಯ ಪೂರೈಸುತ್ತಿದ್ದಾರೆ. ದಲ್ಲಾಳಿಗಳನ್ನು ಸರ್ಕಾರ ನಿಯಂತ್ರಣ ಮಾಡುತ್ತಿಲ್ಲವೆಂದು ಮಹಿಳೆಯರು ಸಿಟ್ಟಾಗಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡಿದವರು ಜಾಮೀನು ಪಡೆದುಕೊಂಡು ಮತ್ತದೇ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹಾಗಂತ ನಿತೀಶ್ ಮೇಲಿನ ಮಹಿಳೆಯರ ನಂಬಿಕೆ ಪೂರ್ತಿ ಬತ್ತಿಲ್ಲ. ಆರ್​ಜೆಡಿಗೆ ಮತ ಹಾಕಿದಲ್ಲಿ ಜಂಗಲ್​ರಾಜ್ ದಿನಗಳು ಮರುಕಳಿಸಬಹುದು ಎಂಬ ಆತಂಕ ಕಾಡುತ್ತಿದೆ. ‘10 ಲಕ್ಷ ಉದ್ಯೋಗ ಕೊಡಿಸುತ್ತೇವೆಂದು ಸುಳ್ಳು ಹೇಳುತ್ತಿದ್ದಾರೆ. ಅದಕ್ಕೆ ಆದಾಯ ಎಲ್ಲಿಂದ ಬರುತ್ತೆ? ಅವರಿಗೆ ಅಭಿವೃದ್ಧಿಯ ಕಲ್ಪನೆಯೇ ಇಲ್ಲ. ಬಿಹಾರದಲ್ಲಿ ಮದ್ಯ ಮಾರಾಟ ಅಧಿಕೃತಗೊಳಿಸಿದರೆ ವಾರ್ಷಿಕವಾಗಿ -ಠಿ; 7000-8000 ಕೋಟಿ ಆದಾಯ ಬರಲಿದೆ. ಆದರೆ ನಿತೀಶರು, ಆದಾಯಕ್ಕಿಂತ ಕುಟುಂಬಗಳ ಕಲ್ಯಾಣ, ಭದ್ರತೆ ಮುಖ್ಯ ಎಂದು ಭಾವಿಸಿದರು. ಆರ್​ಜೆಡಿ ಅಧಿಕಾರಕ್ಕೆ ಬಂದರೆ ಮದ್ಯ ಮಾರಾಟ ನಿಷೇಧ ತೆರವುಗೊಳಿಸುವುದು ಖಂಡಿತ’ ಎನ್ನುತ್ತಾರೆ ಉಪನ್ಯಾಸಕಿ, ಜೆಡಿಯು ನಾಯಕಿ ಡಾ.ಸುಹೇಲಿ ಮೆಹ್ತಾ.
ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಬುಧವಾರ) ನಡೆಯಲಿದೆ. 71 ವಿಧಾನಸಭಾ ಕ್ಷೇತ್ರಗಳ 1,066 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಅಭ್ಯರ್ಥಿಗಳಲ್ಲಿ 952 ಪುರುಷರು ಮತ್ತು 114 ಮಹಿಳೆಯರಿದ್ದಾರೆ. ಮೊದಲ ಹಂತದ 71 ಕ್ಷೇತ್ರಗಳಲ್ಲಿ ನಿತೀಶ್ ಕುಮಾರ್ ಅವರ ಜೆಡಿಯುನ 35 ಹಾಗೂ ಬಿಜೆಪಿಯ 29 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಪ್ರತಿಪಕ್ಷ ಆರ್​ಜೆಡಿಯ 42 ಹಾಗೂ ಕಾಂಗ್ರೆಸ್​ನ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಿರಾಗ್ ಪಾಸ್ವಾನ್ ಅವರ ಎಲ್​ಜೆಪಿಯ 41 ಅಭ್ಯರ್ಥಿಗಳು ಕಣದಲ್ಲಿದ್ದು, ಇದರಲ್ಲಿ ಜೆಡಿಯು ಸ್ಪರ್ಧಿಸಿರುವ ಎಲ್ಲ 35 ಕ್ಷೇತ್ರಗಳೂ ಸೇರಿವೆ. ಕರೊನಾ ಬಿಕ್ಕಟ್ಟಿನ ನಡುವೆಯೂ ಚುನಾವಣೆ ಸುಗಮವಾಗಿ ನಡೆಸಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದ್ದು, ಅಗತ್ಯ ಮಾರ್ಗಸೂಚಿ ಹೊರಡಿಸಿದೆ. ಮತದಾನ ಕೇಂದ್ರದಲ್ಲಿ ಮತದಾರರ ಗರಿಷ್ಠ ಸಂಖ್ಯೆ 1,600 ರಿಂದ 1,000ಕ್ಕೆ ಇಳಿಕೆ, 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತದಾನಕ್ಕೆ ಅವಕಾಶ ಸೇರಿ ಅನೇಕ ಕ್ರಮಗಳನ್ನು ಆಯೋಗ ಕೈಗೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 7 =
Remember me
