ಬೆಂಗಳೂರು:ಕಸ್ತೂರಿ ರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟದಲ್ಲಿ ‘ಪರಿಸರ ಸೂಕ್ಷ್ಮ ವಲಯ’ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆ ವಿರುದ್ಧ ರಾಜ್ಯ ಸರ್ಕಾರ ತೀವ್ರ ಅಸಮಾಧಾನ ಹೊರಹಾಕಿದೆ. ಅಧಿಸೂಚನೆ ಅನುಷ್ಠಾನ ತಡೆಯುವ ನಿಟ್ಟಿನಲ್ಲಿ ವಿಳಂಬ ಮಾಡದೇ ಮೂರು ವಿಧದ ಹೋರಾಟಕ್ಕೆ ಮುಂದಾಗಿದೆ.
ಈ ಅಧಿಸೂಚನೆ ಒಪ್ಪಲಾಗದು ಎಂದು ಜುಲೈ 22ರಂದು ನಡೆಯುವ ಸಂಪುಟ ಸಭೆಯಲ್ಲಿ ನಿರ್ಣಯಿಸುವುದು, ಜುಲೈ 25 ಅಥವಾ 26ರಂದು ಸಿಎಂ ನೇತೃತ್ವದಲ್ಲಿ ದೆಹಲಿಗೆ ತೆರಳಿ ಪರಿಸರ ಸಚಿವರ ಸಮ್ಮುಖದಲ್ಲಿ ರಾಜ್ಯದ ನಿಲುವು ಸ್ಪಷ್ಟಪಡಿಸುವುದು ಹಾಗೂ ಕೇಂದ್ರದ ನೆರವಿಗೆ ಒತ್ತಾಯಿಸುವುದು, ಹಿರಿಯ ನುರಿತ ವಕೀಲರನ್ನು ನೇಮಿಸಿ ಹಸಿರು ಪೀಠದಲ್ಲಿ ಈ ಅಧಿಸೂಚನೆ ವಿರುದ್ಧ ಕಾನೂನು ಹೋರಾಟ ಮಾಡುವುದು.. ಹೀಗೆ ಮೂರು ನಿರ್ಧಾರಗಳನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ವಿಕಾಸ ಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಪಸ್ಥಿತಿಯಲ್ಲಿ ಸೇರಿದ್ದ ಐದು ಜಿಲ್ಲೆಗಳ 15ಕ್ಕೂ ಹೆಚ್ಚು ಶಾಸಕರ ಸಮ್ಮುಖ ಈ ನಿರ್ಣಯ ಕೈಗೊಳ್ಳಲಾಯಿತು. ಕೇಂದ್ರ ಪರಿಸರ ಸಚಿವಾಲಯ, ಪಶ್ಚಿಮ ಘಟ್ಟ ಸೂಕ್ಷ್ಮ ವಲಯದ ಬಗ್ಗೆ ಹೊರಡಿಸಿರುವ ಅಧಿಸೂಚನೆ ವಿರುದ್ಧ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ‘ಸಭೆಯಲ್ಲಿ ಪಕ್ಷಭೇದ ಮರೆತು ಒಕ್ಕೊರಲಿನ ವಿರೋಧ ವ್ಯಕ್ತವಾಗಿದೆ.
ಅಧಿಸೂಚನೆ ವಿರುದ್ಧ ಕಾನೂನು ಹೋರಾಟ ಹಾಗೂ ಜನಾಭಿಪ್ರಾಯ ಸಂಗ್ರಹಕ್ಕೆ ನಿರ್ಧರಿಸಲಾಗಿದೆ’ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. ವರದಿಯ ಬಗ್ಗೆ ಈ ಹಿಂದೆ ವ್ಯಕ್ತವಾಗಿದ್ದ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಿಲ್ಲ ಎಂದ ಸಚಿವರು, ಸರಿಯಾದ ಹಾಗೂ ವೈಜ್ಞಾನಿಕ ಸರ್ವೆ ನಡೆದಿಲ್ಲ. ಹಾಗಾಗಿ ಪರಿಸರ ಸಚಿವರ ಬಳಿಗೆ ಮುಖ್ಯಮಂತ್ರಿಯವರ ನೇತೃತ್ವದಲ್ಲಿ, ಲೊಕಸಭಾ ಸದಸ್ಯರು ಹಾಗೂ ಶಾಸಕರನ್ನು ಒಳಗೊಂಡ ನಿಯೋಗದೊಂದಿಗೆ ತೆರಳಲಾಗುವುದು ಎಂದರು. ನೂತನ ಅಧಿಸೂಚನೆ ಅನುಷ್ಠಾನಗೊಂಡರೆ ಗ್ರಾಮೀಣ ಭಾಗದ ಜನರ ಬದುಕು ಅಸಹನೀಯವಾಗುತ್ತದೆ. ಹೀಗಾಗಿ ಶತಾಯ ಗತಾಯ ವಿರೋಧಿಸಲಾಗುತ್ತದೆ ಎಂದರು.
ಸಭೆಯಲ್ಲಿದ್ದವರು:ಸಂಪುಟ ಸದಸ್ಯರಾದ ಆನಂದ್ ಸಿಂಗ್, ಶಿವರಾಮ್ ಹೆಬ್ಬಾರ್, ಎಸ್. ಅಂಗಾರ, ಮಾಜಿ ಶಾಸಕ ಜೀವರಾಜ್, ಶಾಸಕರಾದ ಅಂಜಲಿ ನಿಂಬಾಳ್ಕರ್, ರಾಜೇಗೌಡ, ರೂಪಾಲಿ ಸಂತೋಷ್ ನಾಯಕ್, ಎಂ.ಪಿ. ಕುಮಾರಸ್ವಾಮಿ, ಸುನೀಲ್ ನಾಯಕ್.
ರಾಜ್ಯದ ವಾದವೇನು?:ಕಸ್ತೂರಿ ರಂಗನ್ ವರದಿ ಒಪ್ಪಿದರೆ ಈ ಭಾಗದ ನಿವಾಸಿಗಳಿಗೆ ಕಿರುಕುಳ ಆಗುತ್ತದೆ ಎಂಬುದು ಸಭೆಯಲ್ಲಿ ಚರ್ಚೆ ಆಗಿದೆ. ಈಗಾಗಲೇ ಅರಣ್ಯ ರಕ್ಷಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾಡಿನ ಪ್ರಮಾಣ ಜಾಸ್ತಿ ಆಗಿದೆ. ಪರಿಸರ ರಕ್ಷಣೆಗೆ ಸೂಕ್ತ ಕಾನೂನುಗಳಿವೆ. ಹೀಗಿದ್ದರೂ ವರದಿ ಅನುಷ್ಠಾನ ಮಾಡಲಾಗುತ್ತಿದೆ. ಆದರೆ, ಹೊಸ ಅಧಿಸೂಚನೆ ಅವೈಜ್ಞಾನಿಕವಾಗಿದೆ.
ಎಷ್ಟು ಪ್ರದೇಶಕ್ಕೆ ಹಾನಿ?:ಹೊಸ ಅಧಿಸೂಚನೆ ರಾಜ್ಯದ 20,668 ಚದರ ಕಿಲೋಮೀಟರ್​ಗೆ ಅನ್ವಯವಾಗಲಿದೆ. ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ಹಾಸನ, ಉಡುಪಿ, ಚಿಕ್ಕಮಗಳೂರು, ಬೆಳಗಾವಿ ಮತ್ತು ಮೈಸೂರು ಜಿಲ್ಲೆಯಲ್ಲಿ ಪರಿಣಾಮ ಬೀರುತ್ತದೆ. ಅಂದಾಜು 1,753 ಹಳ್ಳಿಗಳಿಗೆ ತೊಂದರೆಯಾಗುತ್ತದೆ.
ಕೇಂದ್ರ ಪರಿಸರ ಇಲಾಖೆ ಅಧಿಸೂಚನೆ ಹೊರಡಿಸುವ ಮುನ್ನ ನಮ್ಮ ತಕರಾರು ಪರಿಗಣಿಸಿಲ್ಲ. ಜನರಿಗೆ ತೊಂದರೆಯಾಗದಂತೆ ನಾವು ಎಲ್ಲ ಪ್ರಯತ್ನ ಮಾಡುತ್ತೇವೆ.
|ಆರಗ ಜ್ಞಾನೇಂದ್ರಗೃಹ ಸಚಿವ
ಯಾವುದೇ ಕಾರಣಕ್ಕೂ ಈ ಅಧಿಸೂಚನೆ ಒಪ್ಪಲು ಸಾಧ್ಯವಿಲ್ಲ. ಒಪ್ಪಿದರೆ ಗ್ರಾಮೀಣ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಇದಕ್ಕೆ ಅವಕಾಶ ಕೊಡುವುದಿಲ್ಲ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಅಧಿಸೂಚನೆ ವಿರುದ್ಧ ನ್ಯಾಯಾಲಯದಿಂದ ತಕ್ಷಣವೇ ತಡೆಯಾಜ್ಞೆ ತರಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಲಿ.
|ಯಡಿಯೂರಪ್ಪಮಾಜಿ ಮುಖ್ಯಮಂತ್ರಿ
ಕೇಂದ್ರದ ಮೊಂಡುತನ:2010ರಲ್ಲಿ ಗಾಡ್ಗೀಳ್ ವರದಿ ಬಂದಿತ್ತು. ಬಳಿಕ ಕಸ್ತೂರಿ ರಂಗನ್ ವರದಿ ಬಂದಿತು. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ರಾಜ್ಯ ಅನೇಕ ಬಾರಿ ತಿಳಿಸಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎರಡು ಬಾರಿ ಪತ್ರವನ್ನೂ ಬರೆಯಲಾಗಿದೆ. ಒಮ್ಮೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಿಯೋಗ ತೆರಳಿ ತಿಳಿಸಲಾಗಿದೆ. ಆದರೂ ಅಧಿಸೂಚನೆ ಪ್ರಕಟವಾಗಿದೆ. ಇದು ರಾಜ್ಯದ ಜನ ಪ್ರತಿನಿಧಿಗಳನ್ನು ಕೆರಳಿಸಿದೆ. ಅದರಲ್ಲೂ ಅಧಿಕಾರಿಗಳ ಕ್ರಮದ ವಿರುದ್ಧ ಸಿಡಿದೆದ್ದಿದ್ದಾರೆ.
ಚಿಕ್ಕಮಗಳೂರು:ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ಕಾಫಿ ಬೆಳೆಯುವ ಮೂರು ಜಿಲ್ಲೆಗಳಲ್ಲಿ ಮೂರು ದಿನ ಪ್ರತ್ಯೇಕ ಬಂದ್ ಆಚರಿಸಲು ಸೋಮವಾರ ನಡೆದ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ವಿವಿಧ ಪಕ್ಷ, ಸಂಘಟನೆಗಳ ಪ್ರಮುಖರ ಸಭೆಯಲ್ಲಿ ನಿರ್ಣಯಿಸಲಾಯಿತು.
ಕಸ್ತೂರಿ ರಂಗನ್ ವರದಿಗೆ ವ್ಯಾಪಕ ವಿರೋಧ ಇರುವುದನ್ನು ಸರ್ಕಾರದ ಗಮನಕ್ಕೆ ತರಲು ನಾಲ್ಕು ಹಂತದ ಚಳವಳಿ ಮಾಡಬೇಕು. ಗ್ರಾಪಂ ಮಟ್ಟದಲ್ಲಿ ಚುನಾಯಿತ ಪ್ರತಿನಿಧಿಗಳು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಈ ಭಾಗದ ಶಾಸಕರು, ಸಂಸದರನ್ನು ಸೇರಿಸಿ ಸಭೆ ಮಾಡಿ ಅವರ ಮೂಲಕ ಕೇಂದ್ರ ಪರಿಸರ ಇಲಾಖೆ ಸಚಿವರನ್ನು ಭೇಟಿ ಮಾಡಿ ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಆಗುವ ಸಮಸ್ಯೆಗಳನ್ನು ಸಚಿವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಭೆ ನಿರ್ಣಯಿಸಿತು.
ಕೇಂದ್ರ ಪರಿಸರ ಇಲಾಖೆ ಜು.4ರಂದು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು 60 ದಿನ ಕಾಲಾವಕಾಶ ನೀಡಿದೆ. ಕಸ್ತೂರಿ ರಂಗನ್ ವರದಿ ಆಧರಿಸಿ ಹೊರಟಿರುವ ಅಧಿಸೂಚನೆ ಅನುಷ್ಠಾನಗೊಂಡರೆ, ರಾಜ್ಯದ ಕರಾವಳಿ, ಮಲೆನಾಡು ಭಾಗದ ಜನಜೀವನವೇ ಅಸ್ತವ್ಯಸ್ತವಾಗಲಿದೆ.
ಮಗಳನ್ನು ಅಮೆರಿಕಕ್ಕೆ ಕಳಿಸಿ ಮರಳುತ್ತಿದ್ದ ದಂಪತಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವು!

ಸ್ವಾತಂತ್ರ್ಯಾನಂತರ ಇಲ್ಲಿಗೆ ಮೊದಲ ಬಾರಿಗೆ ಬಸ್ ಆಗಮನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − five =
Remember me
