ನವದೆಹಲಿ: ಕರೊನಾ COVID19 ಸೋಂಕು ತಡೆಗಾಗಿ ಸರಿಯಾದ ಹೋರಾಟ ಆರಂಭವಾಗಿ ಅಂದರೆ ಮಾರ್ಚ್​ 24ರ ಲಾಕ್​ಡೌನ್​ ದಿನದಿಂದ ಲೆಕ್ಕ ಹಾಕಿದರೆ ಒಂದು ತಿಂಗಳಾಗುತ್ತ ಬಂತು. ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶ, ಗುಜರಾತ್​, ತಮಿಳುನಾಡು, ರಾಜಸ್ಥಾನ, ಉತ್ತರ ಪ್ರದೇಶ, ಕೇರಳ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದ ಸೋಂಕು ಕಂಡುಬಂದಿದೆ. ಮರಣ ಪ್ರಮಾಣದಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದರೆ, ದೆಹಲಿ, ಮಧ್ಯಪ್ರದೇಶ ನಂತರದ ಸ್ಥಾನಗಳಲ್ಲಿವೆ. ಸೋಂಕು ತಡೆಗೆ ಎಲ್ಲ ರಾಜ್ಯಗಳೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಅದಕ್ಕಾಗಿ ಹಣವನ್ನೂ ವ್ಯಯಿಸುತ್ತಿವೆ. ಇದು ಎಷ್ಟಿರಬಹುದು ಎಂಬ ಕುತೂಹಲ ಸಹಜವೇ.
ಒಂದು ಲೆಕ್ಕಾಚಾರ ಪ್ರಕಾರ, COVID19 ಸೋಂಕಿತನೊಬ್ಬನ ಚಿಕಿತ್ಸೆಗೆ ದಿನಕ್ಕೆ ಕನಿಷ್ಠ 25,000 ರೂಪಾಯಿ ಖರ್ಚು ಇದ್ದು, ವೆಂಟಿಲೇಟರ್ ಸಪೋರ್ಟ್​ ಬೇಕಾದರೆ ಅದು 50,000 ರೂಪಾಯಿ ತನಕ ಆಗಬಹುದು. ಈ ಸಾಂಕ್ರಾಮಿಕ ತಡೆಯಲು ಲಾಕ್​ಡೌನ್ ಘೋಷಿಸಿರುವ ಕಾರಣ ಎಲ್ಲ ರಾಜ್ಯಗಳ ಆದಾಯಕ್ಕೂ ಹೊಡೆತ ಬಿದ್ದಿದ್ದು, ಖರ್ಚು ಮಾತ್ರ ಬೆಟ್ಟದಷ್ಟು ಹೆಚ್ಚಾಗುತ್ತಿದೆ.
ಅಧಿಕಾರಿಗಳು ಹೇಳುವ ಪ್ರಕಾರ, ಕೇಂದ್ರದಿಂದ ಎಲ್ಲ ರಾಜ್ಯಗಳಿಗೂ ನೆರವು ಲಭ್ಯವಾಗಿದೆ. ಆದಾಗ್ಯೂ ಅದು ಸಾಕಾಗುತ್ತಿಲ್ಲ. COVID19 ಮೂಲಸೌಕರ್ಯ ವೃದ್ಧಿಗಾಗಿಯೇ ಕೇಂದ್ರ ಸರ್ಕಾರ 15,000 ಕೋಟಿ ರೂಪಾಯಿ ಮೀಸಲಿಟ್ಟಿದೆ. ಇದಕ್ಕೆ ಪೂರಕವಾಗಿ ಕೇಂದ್ರ ತೆರಿಗೆಯಲ್ಲಿನ ರಾಜ್ಯಗಳ ಪಾಲಿನ ಮೊದಲ ಕಂತನ್ನು ಅಂದರೆ ಏಪ್ರಿಲ್ 20 ರ ತನಕದ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ಕೇಂದ್ರದ ಒಟ್ಟು ತೆರಿಗೆ ಸಂಗ್ರಹದ ಶೇಕಡ 41ರ ಪಾಲು ಇದಾಗಿದೆ.
ಈ ಹಣದಲ್ಲಿ ಬಹುತೇಕ ಪಾಲು ಕೋವಿಡ್ 19 ಆಸ್ಪತ್ರೆ ಸ್ಥಾಪಿಸಲು ವೆಚ್ಚವಾಗಿದೆ. ಇನ್ನು ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್​ಮೆಂಟ್​, ಟೆಸ್ಟಿಂಗ್ ಕಿಟ್​, ಕ್ವಾರಂಟೈನ್​ ಅವಧಿಯ ಖರ್ಚು, ಲಾಕ್​ಡೌನ್​ ನಷ್ಟ ಭರ್ತಿ ಎಲ್ಲವನ್ನೂ ರಾಜ್ಯಗಳು ಕೂಡ ಭರಿಸಬೇಕಾಗಿದೆ. ಈ ಪೈಕಿ ಪಿಪಿಇ ಕಿಟ್​ಗೆ ಒಂದಕ್ಕೇ 1,000 ರೂಪಾಯಿ ಖರ್ಚಾಗುತ್ತದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರೊಟೊಕಾಲ್ ಪ್ರಕಾರ 100 ಬೆಡ್​ನ ಕೋವಿಡ್ ಆಸ್ಪತ್ರೆಗೆ ಕನಿಷ್ಠ 200 ಪಿಪಿಇ ಕಿಟ್ ಬೇಕು. ಪ್ರತಿ ನಾಲ್ಕು ಗಂಟೆಗೊಮ್ಮೆ ಡಾಕ್ಟರ್​ಗಳು ಮತ್ತು ನರ್ಸ್​ಗಳು ಈ ಕಿಟ್​ ಬದಲಾಯಿಸಬೇಕು.
ಆರ್​ಟಿ-ಪಿಸಿಆರ್(ರಿವರ್ಸ್​ ಟ್ರಾನ್ಸ್​ಕ್ರಿಪ್ಶನ್​-ಪಾಲಿಮರೇಸ್​ ಚೇನ್ ರಿಯಾಕ್ಷನ್​) ಟೆಸ್ಟಿಂಗ್ ಕಿಟ್​ ವೆಚ್ಚ 3,000 ರೂಪಾಯಿ. ಖಾಸಗಿ ಲ್ಯಾಬ್​ಗಳು 4,500 ರೂಪಾಯಿ ಈ ಟೆಸ್ಟ್​ಗೆ ಚಾರ್ಜ್ ಮಾಡಬಹುದು ಎಂದು ಸುಪ್ರೀಂ ಕೋರ್ಟ್​ ಕಳೆದ ತಿಂಗಳು ಆದೇಶಿಸಿತ್ತು. ಈ ಎಲ್ಲ ಅಂಶಗಳನ್ನು ಪರಿಗಣಿಸಿರುವ ಅಧಿಕಾರಿಗಳು ಅಂದಾಜಿಸಿರುವ ಪ್ರಕಾರ ರಾಜ್ಯಗಳು ಸರಾಸರಿ 10,000 ಕೋಟಿ ರೂಪಾಯಿಯನ್ನು ವ್ಯಯಿಸಿವೆ.
ಮಹಾರಾಷ್ಟ್ರದಲ್ಲೇ ಗರಿಷ್ಠ ಕೇಸ್​ಗಳಿದ್ದು ಈ ರಾಜ್ಯ ಕೇಂದ್ರ ಸರ್ಕಾರದಿಂದ ಅರ್ಜೆಂಟಾಗಿ 300 ಕೋಟಿ ರೂಪಾಯಿ ನೆರವು ಕೋರಿದೆ. ಈ ರಾಜ್ಯದಲ್ಲಿ ಜಿಲ್ಲಾ ಯೋಜನಾ ನಿಧಿಯಲ್ಲಿ ಶೇಕಡ 25 ಪಾಲನ್ನು ಈ ಸೋಂಕು ತಡೆಗೆ ಬಳಸಲು ಅನುಮತಿ ನೀಡಿದೆ. 36 ಜಿಲ್ಲೆಗಳಲ್ಲಿ ಇದಕ್ಕಾಗಿ 2,450 ಕೋಟಿ ರೂಪಾಯಿ ಲಭ್ಯ ಇರುವಂತೆ ನೋಡಿಕೊಂಡಿದೆ. ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 10 ಲಕ್ಷ ರೂಪಾಯಿ ನಗದೀಕರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ. ಇದೇ ರೀತಿ, ಶಾಸಕರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂಪಾಯಿ ತನಕ ಖರ್ಚು ಮಾಡಲು ಅನುಮತಿ ನೀಡಿದೆ.
ಕೇರಳದಲ್ಲಿ ಇಡಿ ದೇಶದಲ್ಲೇ ಮೊಟ್ಟ ಮೊದಲ ಕೋವಿಡ್ 19 ಪ್ಯಾಕೇಜ್ ಘೋಷಣೆ ಆಗಿರುವಂಥದ್ದು. ಇದು 20,000 ಕೋಟಿ ರೂಪಾಯಿಗಳ ಪ್ಯಾಕೇಜ್ ಆಗಿದ್ದು, ಇದರಲ್ಲಿ ಸಾಲ, ಸಾಮಾಜಿಕ ಸುರಕ್ಷತೆ, ಕೋವಿಡ್ 19 ಮೂಲಸೌಕರ್ಯ ಇತ್ಯಾದಿಗಳೆಲ್ಲ ಸೇರಿಕೊಂಡಿದೆ. ರಾಜಸ್ಥಾನದ ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿ ಸಿದ್ಧಾರ್ಥ್ ಮಹಾಜನ್ ಹೇಳುವ ಪ್ರಕಾರ, ಇಲಾಖೆಗೆ ಕೋವಿಡ್​ 19ರ ಖರ್ಚಿಗಾಗಿ 1,000 ಕೋಟಿ ರೂಪಾಯಿ ಹಂಚಿಕೆ ಆಗಿದೆ. ಇನ್ನಷ್ಟು ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ತೆಲಂಗಾಣದಲ್ಲಿ ಈ ಸೋಂಕು ತಡೆಗಾಘಿ 232 ಕೋಟಿ ರೂಪಾಯಿ ಹಂಚಿಕೆ ಆಗಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಹೇಳಿರುವ ಪ್ರಕಾರ, 18,000 ಐಸೋಲೇಷನ್ ಬೆಡ್​ ಸಿದ್ಧವಿದೆ. ಅಲ್ಲದೆ, 3.34 ಲಕ್ಷ ಪಿಪಿಇ ಕಿಟ್​ಗಳನ್ನು ಸಂಗ್ರಹಿಸಿಡಲಾಗಿದೆ.  ಆಂಧ್ರಪ್ರದೇಶದಲ್ಲಿ ಈ ಸೋಂಕು ತಡೆಗಾಗಿ 852 ಕೋಟಿ ರೂಪಾಯಿಯನ್ನು ಈ ತಿಂಗಳು ಹಂಚಿಕೆ ಮಾಡಲಾಗಿದೆ. ಗೋವಾದಲ್ಲಿ 172 ಕೋಟಿ ರೂಪಾಯಿ, ಪಶ್ಚಿಮ ಬಂಗಾಳದಲ್ಲಿ 200 ಕೋಟಿ ರೂಪಾಯಿಯನ್ನು ಇದಕ್ಕಾಗಿ ಹಂಚಿಕೆ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಪ್ರಕರಣ ಹೆಚ್ಚಾಗುತ್ತಿರುವ ಕಾರಣ 1,000 ಕೋಟಿ ರೂಪಾಯಿಗೂ ಅಧಿಕ ಹಣಬೇಕಾಗಬಹುದು ಎಂದು ಅಂದಾಜಿಸಿದೆ ಅಲ್ಲಿನ ಸರ್ಕಾರ. ಉತ್ತರ ಪ್ರದೇಶದಲ್ಲಿ 1,139 ಕೋಟಿ ರೂಪಾಯಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಉತ್ತರಾಖಂಡದಲ್ಲಿ 100 ಕೋಟಿ ರೂಪಾಯಿ ಇದಕ್ಕಾಗಿ ಖರ್ಚಾಗಿದೆ. (ಏಜೆನ್ಸೀಸ್)
ಧೂಮಪಾನಿಗಳ ಆಸೆ ಈಡೇರಿಸಲು ಆನ್​ಲೈನ್ ವಹಿವಾಟು ಆರಂಭಿಸಿದವರೀಗ ಅಂದರ್​..

ಲಾಕ್​ಡೌನ್ ಅವಧಿಯಲ್ಲಿ ನಿಗೂಢತೆ ಸೃಷ್ಟಿಸಿದ ದಂಪತಿ: ಇದು ಅವರ ಬೆಡ್​ ರೂಮ್​ ರಹಸ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 11 =
Remember me
