ಮುಂಬೈ:ಮಾಹಿತಿ ತಂತ್ರಜ್ಞಾನ (ಐಟಿ) ವಲಯ, ಲೋಹಗಳು ಮತ್ತು ಹಣಕಾಸು ಷೇರುಗಳ ಖರೀದಿ ಭರಾಟೆ ಮತ್ತು ಅಮೆರಿಕದ ಹಣದುಬ್ಬರ ತಗ್ಗಿದ ಕಾರಣ ಭಾರತದ ಷೇರುಪೇಟೆಯಲ್ಲಿ ಶುಕ್ರವಾರ ಭಾರಿ ಚೇತರಿಕೆ ದಾಖಲಾಯಿತು. ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿ ಶೇಕಡ ಎರಡರಷ್ಟು ಏರಿಕೆ ಕಂಡು ಬಂದಿದೆ. ಡಾಲರ್ ಎದುರು ರೂಪಾಯಿ ಚೇತರಿಕೆಯೂ ಷೇರುಪೇಟೆಯಲ್ಲಿ ಸುಧಾರಣೆಗೆ ಅವಕಾಶ ಮಾಡಿಕೊಟ್ಟಿತು.
ಸೆನ್ಸೆಕ್ಸ್ ಸಂವೇದಿಯಲ್ಲಿ 1,181.34 ಪಾಯಿಂಟ್ (1.95%) ಏರಿಕೆ ಕಂಡು 61,795.04ರಲ್ಲಿ ದಿನದ ವ್ಯವಹಾರ ಮುಗಿಸಿತು. ನಿಫ್ಟಿಯಲ್ಲಿ 321.50 ಅಂಶ (1.78%) ಏರಿಕೆಯಾಗಿ 18,349.70 ಮುಟ್ಟಿತು. ಎಚ್​ಡಿಎಫ್​ಸಿ, ಎಚ್​ಡಿಎಫ್​ಸಿ ಬ್ಯಾಂಕ್, ಇನ್ಪೋಸಿಸ್, ಟೆಕ್ ಮಹೀಂದ್ರ್ರ ಎಚ್​ಸಿಎಲ್ ಟೆಕ್, ಟಿಸಿಎಸ್ ವಿಪ್ರೊ, ಟಾಟಾ ಸ್ಟೀಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಹೆಚ್ಚು ಗಳಿಕೆ ಮಾಡಿದ ಉದ್ಯಮಗಳಾಗಿವೆ.
ಬಲಗೊಂಡ ರೂಪಾಯಿ: ಡಾಲರ್ ಎದುರು ರೂಪಾಯಿ ಮೌಲ್ಯ 62 ಪೈಸೆ ಸುಧಾರಿಸಿಕೊಂಡಿದ್ದು ವಿನಿಮಯ ಮೌಲ್ಯ 80.78 ರೂಪಾಯಿ ಆಗಿದೆ.. ಧನಾತ್ಮಕ ದೇಶೀಯ ಈಕ್ವಿಟಿಗಳು ಮತ್ತು ವಿದೇಶಿ ಬಂಡವಾಳ ಹರಿದು ಬರುವ ಪ್ರಮಾಣದಲ್ಲಿ ಸ್ಥಿರತೆ, ಸ್ಥಳೀಯ ಕರೆನ್ಸಿ ಬಲಗೊಳ್ಳಲು ಕಾರಣವಾಗಿದೆ.
ಚಿನ್ನ-ಬೆಳ್ಳಿ ದುಬಾರಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಳದ ಬೆನ್ನಿಗೆ ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ದರ 294 ರೂ. ಏರಿಕೆಯಾಗಿದ್ದು, 10 ಗ್ರಾಂ ಅಪರಂಜಿ ಚಿನ್ನದ ಬೆಲೆ 52,663 ರೂ.ಗೆ ಮುಟ್ಟಿದೆ. ಬೆಳ್ಳಿ 638 ರೂ. ಏರಿಕೆಯಾಗಿ ಕೆ.ಜಿ.ಧಾರಣೆ 62,858 ರೂ.ಗೆ ಮುಟ್ಟಿದೆ. ಜಾಗತಿಕ ಪೇಟೆಯಲ್ಲಿ ಒಂದು ಔನ್ಸ್ ಬಂಗಾರಕ್ಕೆ 1,761 ಡಾಲರ್ ಇದ್ದು, ಪ್ರತಿ ಔನ್ಸ್ ಬೆಳ್ಳಿಗೆ 21.89 ಡಾಲರ್ ಬೆಲೆ ಇದೆ.
ಜಿಡಿಪಿ ಇಳಿಸಿದ ಮೂಡೀಸ್
2022ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಸಾಧ್ಯತೆಯನ್ನು ಮೂಡೀಸ್ ಶುಕ್ರವಾರ ಹಿಂದಿನ ಶೇಕಡ 7.7ರಿಂದ 7ಕ್ಕೆ ಇಳಿಸಿದೆ. ಆರ್ಥಿಕ ಬೆಳವಣಿಗೆ ಅಂದಾಜನ್ನು ಕಡಿತ ಮಾಡಿದ್ದು ಇದು ಎರಡನೇ ಸಲವಾಗಿದೆ. ಮೇ ತಿಂಗಳಲ್ಲಿ ಶೇಕಡ 8.8ರಿಂದ ಸೆಪ್ಟೆಂಬರ್​ನಲ್ಲಿ ಶೇ. 7.7ಕ್ಕೆ ಇಳಿಸಿತ್ತು. ಮಂದಗತಿಯ ಜಾಗತಿಕ ಆರ್ಥಿಕ ಬೆಳವಣಿಗೆ, ಭಾರತೀಯ ಆರ್ಥಿಕತೆಯ ಬಿಗಿ ಹಣಕಾಸು ನೀತಿಗಳು ಮೊದಲಾದವು ಬೆಳವಣಿಗೆ ಕುಸಿತಕ್ಕೆ ಕಾರಣ ಎಂದು ಮೂಡೀಸ್ ವಿಶ್ಲೇಷಿಸಿದೆ.
ಕೈಗಾರಿಕಾ ವಲಯದ ಪ್ರಗತಿ ಏರಿಕೆ
ಸೆಪ್ಟೆಂಬರ್ ಮಾಹೆಯ ಕೈಗಾರಿಕಾ ಉತ್ಪಾದಕತೆ ಸೂಚ್ಯಂಕ (ಐಐಪಿ) ಶೇ. 3.1ಕ್ಕೆ ಏರಿದೆ. ತಯಾರಿಕೆ, ಗಣಿಗಾರಿಕೆ, ವಿದ್ಯುತ್ ವಲಯದಲ್ಲಿ ದಾಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಕಳೆದ ವರ್ಷದ ಸೆಪ್ಟೆಂಬರ್​ಗೆ (ಶೇ. 4.4) ಹೋಲಿಸಿದರೆ ಈಗಿನ ಸಾಧನೆ ಕಡಿಮೆ ಇದೆ. ಕಳೆದ ಆಗಸ್ಟ್​ನಲ್ಲಿ ಶೇ.0.7 ಇಳಿಕೆ ಕಂಡಿದ್ದ ಐಐಪಿ, ಜುಲೈನಲ್ಲಿ ಶೇ. 2.2ರಲ್ಲಿ ಇತ್ತು ಎಂದು ಕೇಂದ್ರ ಸಾಂಖ್ಯಿಕ ಇಲಾಖೆ ಹೇಳಿದೆ.
ದಿವಾಳಿ ಹೊಸ್ತಿಲಲ್ಲಿ ಎಫ್​ಟಿಎಕ್ಸ್
ಕ್ರಿಪ್ಟೊಕರೆನ್ಸಿಯ ಮೌಲ್ಯ ಸುಮಾರು ಒಂದು ಲಕ್ಷ ಕೋಟಿ ಡಾಲರ್ ಇಳಿಕೆಯಾದ ಬೆನ್ನಿಗೆ ಈ ವ್ಯವಹಾರದ ಪ್ರಮುಖ ಕಂಪನಿ ಎಫ್​ಟಿಎಕ್ಸ್ ದಿವಾಳಿಯ ಹೊಸ್ತಿಲಿಗೆ ಬಂದು ನಿಂತಿದೆ. ಮಂಗಳವಾರವಷ್ಟೇ ತನ್ನ ದೊಡ್ಡ ಪ್ರತಿಸ್ಪರ್ಧಿಯಾದ ಬಿನಾನ್ಸ್​ನೊಂದಿಗೆ ಬೇಲ್​ಔಟ್ ಒಪ್ಪಂದವನ್ನು ಎಫ್​ಟಿಎಕ್ಸ್ ಮಾಡಿಕೊಂಡಿತ್ತು. ಎಫ್​ಟಿಎಕ್ಸ್​ನ ಹಣಕಾಸು ಸ್ಥಿತಿಗತಿ ಬಗ್ಗೆ ಕಳವಳ ಉಂಟಾದ್ದರಿಂದ ಕೇವಲ ಮೂರು ದಿನಗಳಲ್ಲಿ 600 ಕೋಟಿ ಡಾಲರ್ ಹೂಡಿಕೆಗಳನ್ನು ವಾಪಸ್ ಪಡೆಯಲಾಗಿದೆ.
ಬಿನಾನ್ಸ್ -22.82 ಕೋಟಿ ರೂ ವಶ
ಬಿನಾನ್ಸ್ ಕ್ರಿಪ್ಟೊಕರೆನ್ಸಿ ವಿನಿಮಯ ಕೇಂದ್ರದ ವ್ಯಾಲೆಟ್ ಒಂದರ ಮೇಲೆ ಶುಕ್ರವಾರ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು 22.82 ಕೋಟಿ ರೂಪಾಯಿ ಮೌಲ್ಯಕ್ಕೆ ಸಮನಾದ 150.22 ಬಿಟ್​ಕಾಯಿನ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಹಣಕಾಸು ದುರ್ಬಳಕೆ ತಡೆ ಕಾನೂನು ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಗೇಮಿಂಗ್ ಆಪ್ ‘ಇ-ನಗ್ಗೆಟ್ಸ್’ಗೆ ಸಂಬಂಧಿತ ಪ್ರಕರಣವೊಂದರಲ್ಲಿ ವಿಚಾರಣೆ ನಡೆಯುತ್ತಿದ್ದು ಅದರ ಭಾಗವಾಗಿ ದಾಳಿ ನಡೆಸಲಾಯಿತು ಎಂದು ಇ.ಡಿ. ಟ್ವೀಟ್ ಮಾಡಿದೆ. ಹಣಕಾಸು ದುರ್ಬಳಕೆಗಾಗಿ ಇ-ನಗ್ಗೆಟ್ಸ್ ಆಪ್ ಕ್ರಿಪ್ಟೋವಿನಿಮಯ ಕೇಂದ್ರಗಳನ್ನು ಬಳಸುತ್ತಿತ್ತು ಎಂದು ಆರೋಪಿಸಲಾಗಿದೆ. ಬಿನಾನ್ಸ್​ನ
ಭಾರತದ ಪಾಲುದಾರ, ಕ್ರಿಪ್ಟೊ ವ್ಯವಹಾರ ವೇದಿಕೆ ವಾಝಿರ್​ಎಕ್ಸ್​ನ ಬ್ಯಾಂಕ್ ಖಾತೆಯನ್ನು ಇ.ಡಿ. ಸ್ಥಗಿತಗೊಳಿಸಿತ್ತು. ಕ್ರಿಪ್ಟೊ ಆಸ್ತಿಗಳ ಮೂಲಕ ಹಣಕಾಸು ದುರ್ಬಳಕೆ ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಾಝಿರ್​ಎಕ್ಸ್ ವಿರುದ್ಧ ಕೇಂದ್ರೀಯ ಸಂಸ್ಥೆ ತನಿಖೆ ನಡೆಸುತ್ತಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 19 =
Remember me
