ನವದೆಹಲಿ:ಚುನಾವಣೆಗೆ ಮುನ್ನ ರಾಜಕಾರಣಿಗಳು ಜನರಿಗೆ ಉಚಿತ ಕೊಡುಗೆಗಳ ಭರವಸೆ ನೀಡುವ ಪ್ರವೃತ್ತಿ ಹೆಚ್ಚಿರುವುದು ಗಂಭೀರ ವಿಷಯ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ಈ ಸಂಬಂಧ 4 ವಾರಗಳ ಒಳಗಾಗಿ ಉತ್ತರ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಸಾರ್ವಜನಿಕ ಹಣ ಬಳಸಿಕೊಂಡು ಜನರಿಗೆ ಉಚಿತ ಕೊಡುಗೆಗಳ ಭರವಸೆ ನೀಡಲಾಗುತ್ತಿದ್ದು, ಸರ್ಕಾರದ ಬೊಕ್ಕಸ ಬರಿದು ಮಾಡುತ್ತಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ಸಾರ್ವಜನಿಕ ಹಣದ ದುರುಪಯೋಗ ಮಾಡುತ್ತಿವೆ ಎಂದು ಆರೋಪಿಸಿ ಬಿಜೆಪಿ ನಾಯಕ, ಸುಪ್ರೀಂಕೋರ್ಟ್ ವಕೀಲ ಅಶ್ವಿನಿ ಉಪಾಧ್ಯಾಯ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಪ್ರಸ್ತಾಪವಾಗಿರುವ ಅಂಶಗಳು ‘ಗಂಭೀರ’ ಎಂದ ಸುಪ್ರೀಂಕೋರ್ಟ್, ಈ ವಿಷಯದ ಕುರಿತಾಗಿ ಮಾರ್ಗಸೂಚಿಗಳನ್ನು ರಚಿಸಿ ಎಂದು ನಾವು ಚುನಾವಣಾ ಆಯೋಗಕ್ಕೆ ಹಿಂದೆ ತಿಳಿಸಿದ್ದೆವು. ಆಯೋಗ ರಾಜಕೀಯ ಪಕ್ಷಗಳಿಂದ ಅಭಿಪ್ರಾಯ ಸಂಗ್ರಹಿಸಿದೆ. ನಂತರದಲ್ಲಿ ಏನಾಗಿದೆ ಮಾಹಿತಿಯಿಲ್ಲ. ಉಚಿತ ಕೊಡುಗೆಗಳ ಬಜೆಟ್ ಸಾಮಾನ್ಯ ಬಜೆಟ್​ನ್ನೂ ಮೀರಿಸುವಂತಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಿಕಾಸ್ ಸಿಂಗ್, ಪ್ರತಿ ವ್ಯಕ್ತಿ ತಲೆಮೇಲೆ ರೂ. 3 ಲಕ್ಷ ಸಾಲ ಇರುವ ರಾಜ್ಯಗಳಲ್ಲೂ ಪುಕ್ಕಟೆ ಕೊಡುಗೆಗಳನ್ನು ನೀಡುತ್ತಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳೂ ಇದನ್ನು ಮಾಡುತ್ತಿವೆ. ಚುನಾವಣಾ ಆಯೋಗದ ನಿಯಮ ಹಲ್ಲಿಲ್ಲದ ಹಾವಿನಂತಿದೆ ಎಂದು ಅತೃಪ್ತಿ ಹೊರಹಾಕಿದರು.
ಒಂದು ರಾಷ್ಟ್ರ, ಒಂದು ಚುನಾವಣೆ:ಭಾರತದಂತಹ ವೈವಿಧ್ಯಮಯ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ಪ್ರಮಾಣ ಈಗಲೂ ಕಡಿಮೆ ಇರುವುದು ಕಳವಳಕಾರಿ. ಮುಖ್ಯವಾಗಿ, ಅಭಿವೃದ್ಧಿಶೀಲ ಚಿಂತನೆಯ ನಗರಗಳ ಮತದಾರರ ಉದಾಸೀನ ಪ್ರವೃತ್ತಿ ಬದಲಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಿದ ಆನ್​ಲೈನ್ ಸಂವಾದದ ಬೇಳೆ ಈ ಅನಿಸಿಕೆ ಹೊರಹಾಕಿದ ಮೋದಿ, ಒಂದು ರಾಷ್ಟ್ರ-ಒಂದು ಚುನಾವಣೆ, ಒಂದು ರಾಷ್ಟ್ರ-ಒಂದು ಮತಚೀಟಿ ವಿಷಯಗಳ ಬಗ್ಗೆ ಹೆಚ್ಚೆಚ್ಚು ಚರ್ಚೆಯಾಗಬೇಕಿದೆ. ಚುನಾವಣೆಗಳು ನಿರಂತರವಾಗಿ ನಡೆಯುವುದರಿಂದ ಅಭಿವೃದ್ಧಿ ಚಟುವಟಿಕೆಗಳು ಕುಂಟುತ್ತಾ ಸಾಗುತ್ತವೆ ಎಂದರು. ದೇಶದ ಪ್ರಥಮ ಲೋಕಸಭೆ ಚುನಾವಣೆಯಲ್ಲಿ (1952) ಶೇ.45ರಷ್ಟು ಮತದಾನ ನಡೆದಿದ್ದರೆ, 2019ರಲ್ಲಿ ಈ ಪ್ರಮಾಣ ಶೇ.57ಕ್ಕೇರಿದೆ. ಮಹಿಳಾ ಮತದಾರ ಪ್ರಮಾಣ ಏರಿಕೆಯಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಪ್ರತಿ ರಾಜಕೀಯ ಪಕ್ಷದವರೂ ಕಡಿಮೆ ಮತದಾನ ಪ್ರಮಾಣದ ಬಗ್ಗೆ ಯೋಚಿಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಆರ್​ಪಿಎನ್ ಸಿಂಗ್ ಬಿಜೆಪಿಗೆ:ಉ.ಪ್ರದೇಶ ಚುನಾವಣೆಗೆ ಕಾಂಗ್ರೆಸ್​ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಮಾಜಿ ಕೇಂದ್ರ ಸಚಿವ ಆರ್​ಪಿಎನ್ ಸಿಂಗ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಆರ್​ಪಿಎನ್ ಸಿಂಗ್, ಈ ಹಿಂದೆ ಉ.ಪ್ರ.ದ ಪದ್ರೌನಾ ಕ್ಷೇತ್ರದ ಶಾಸಕರಾಗಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಖುಷಿನಗರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಅಂದು ಬಿಎಸ್​ಪಿಯಲ್ಲಿದ್ದ ಸ್ವಾಮಿ ಪ್ರಸಾದ್ ಮೌರ್ಯರನ್ನು ಸೋಲಿಸಿದ್ದರು. ಸಿಂಗ್ ಪತ್ನಿ ಸೋನಿಯಾ ಸಿಂಗ್ ರಾಷ್ಟ್ರೀಯ ಸುದ್ದಿವಾಹಿನಿಯೊಂದರಲ್ಲಿ ಹಿರಿಯ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪದ್ರೌನಾ ಕ್ಷೇತ್ರದಿಂದ ಸ್ಪರ್ಧಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಜ್ಯೋತಿರಾದಿತ್ಯ ಸಿಂದಿಯಾ, ಜಿತಿನ್ ಪ್ರಸಾದರಂತೆ ರಾಹುಲ್ ಗಾಂಧಿ ಆಪ್ತವರ್ಗದಲ್ಲಿದ್ದ ಆರ್​ಪಿಎನ್ ಸಿಂಗ್ ಕಾಂಗ್ರೆಸ್​ನಲ್ಲಿ ರಾಜಕೀಯ ಭವಿಷ್ಯವಿಲ್ಲ ಎಂದೇ ಬಿಜೆಪಿಯತ್ತ ಮುಖ ಮಾಡಿದ್ದಾರೆ.
ಜೈಲಿನಿಂದಲೇ ಆಜಂಖಾನ್ ಸ್ಪರ್ಧೆ:ಸಮಾಜವಾದಿ ಪಕ್ಷದ ಮುಖಂಡ, ಸಂಸದ ಆಜಂಖಾನ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಮ್ುರ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ. ಆಜಂಖಾನ್ ಪುತ್ರ ಅಬ್ದುಲ್ಲಾ ಆಜಂ ರಾಮ್ುರ ಸುವಾರ್ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ. ಪಿತಾ-ಪುತ್ರ ಇಬ್ಬರೂ ವಂಚನೆ ಕೇಸ್​ನಲ್ಲಿ ಜೈಲು ಸೇರಿದ್ದಾರೆ. ಚುನಾವಣೆಯಲ್ಲಿ ಪ್ರಚಾರ ನಡೆಸುವ ಸಲುವಾಗಿ ತಮಗೆ ಜಾಮೀನು ನೀಡಬೇಕು ಎಂದು ಕೆಲ ದಿನಗಳ ಹಿಂದೆ ಆಜಂಖಾನ್ ಸುಪ್ರೀಂಕೋರ್ಟ್​ಗೂ ಅರ್ಜಿ ಸಲ್ಲಿಸಿದ್ದರು. ಆಜಂಖಾನ್ ವಿರುದ್ಧ ಕಾನೂನು ಹೋರಾಟಕ್ಕಿಳಿದು ಜೈಲು ಸೇರುವಂತೆ ಮಾಡಿದ ಉದ್ಯಮಿ ಆಕಾಶ್ ಸಕ್ಸೇನಾಗೆ ಬಿಜೆಪಿ ಈ ಕ್ಷೇತ್ರದಿಂದ ಕಣಕ್ಕಿಳಿಸಿದೆ.
ಮತದಾನ ಕಡ್ಡಾಯವಾಗಲಿ:ದೇಶದಲ್ಲಿ ಮತದಾನ ಮಾಡುವುದನ್ನು ಕಡ್ಡಾಯಗೊಳಿಸಬೇಕಿದೆ ಎಂದು ಸಮೀಕ್ಷೆ ಯೊಂದರಲ್ಲಿ ಪಾಲ್ಗೊಂಡಿದ್ದ ಶೇ.86 ಮಂದಿ ಹೇಳಿದ್ದಾರೆ. ರಾಷ್ಟ್ರೀಯ ಚುನಾವಣಾ ದಿನದ ಹಿನ್ನೆಲೆಯಲ್ಲಿ ಈ ಸಮೀಕ್ಷೆಯನ್ನು ಸಾಮಾಜಿಕ ಜಾಲತಾಣ ವೇದಿಕೆಯಾಗಿರುವ ಪಬ್ಲಿಕ್ ಆಪ್ ಸಂಸ್ಥೆ ನಡೆಸಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.60 ಮಂದಿ 30 ವರ್ಷಕ್ಕಿಂತ ಕೆಳಗಿನವರಾಗಿದ್ದರು. ಸದ್ಯದ ಮತದಾನ ವ್ಯವಸ್ಥೆಯು ನಂಬಿಕಾರ್ಹ ವಾಗಿದ್ದು, ಪಾರದರ್ಶಕತೆ ಕಾಪಾಡಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
4 ಹಿಂದುಗಳಿಗೆ ಟಿಕೆಟ್:ಸಂಸದ ಅಸಾದುದ್ದಿನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್ ಇತ್ತೆಹದುಲ್ ಮುಸ್ಲಿಮಿನ್ (ಎಐಎಂಐಎಂ) ಪಕ್ಷ ಉತ್ತರ ಪ್ರದೇಶ ಚುನಾವಣೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, 27 ಮಂದಿಯಲ್ಲಿ ನಾಲ್ವರು ಹಿಂದುಗಳಿಗೆ ಟಿಕೆಟ್ ನೀಡಿದೆ. ಧರ್ಮದ ಆಧಾರದ ಮೇಲೆ ನಾವು ಟಿಕೆಟ್ ನೀಡುವುದಿಲ್ಲ. ಆದರೂ ನಮ್ಮನ್ನು ಕೋಮುವಾದಿಗಳು ಎನ್ನುತ್ತಾರೆ. ಕೋಮುವಾದ ಬಿತ್ತುವುದೇ ಬಿಜೆಪಿ ಎಂದು ಎಐಎಂಐಎಂ ರಾಜ್ಯಾಧ್ಯಕ್ಷ ಶೌಕತ್ ಅಲಿ ಹೇಳಿದ್ದಾರೆ. ಸಾಹಿಬಾಬಾದ್, ಬುಧಾನಾ, ಹಸ್ತಿನಾಪುರ ಮತ್ತು ರಾಮನಗರ ಕ್ಷೇತ್ರದಿಂದ ಹಿಂದುಗಳಿಗೆ ಟಿಕೆಟ್ ಸಿಕ್ಕಿದೆ.
ಸತ್ತ 8 ತಿಂಗಳ ಬಳಿಕ ಎರಡನೇ ಡೋಸ್​ ಲಸಿಕೆ!?: ಪಾಲಿಕೆ ಆರೋಗ್ಯ ಸಿಬ್ಬಂದಿ ಎಡವಟ್ಟು…

ವಂಚಕ ಪತಿಯ ಅರಸಿ ಬೆಂಗಳೂರಿಗೆ ಬಂದ್ಲು ಎರಡನೇ ಪತ್ನಿ; ಇವ ಶ್ರೀಮಂತರನ್ನೇ ನೋಡಿ ಮದ್ವೆ ಆಗಿ ಮೋಸ ಮಾಡ್ತಿದ್ದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
