ನವದೆಹಲಿ:ಗ್ರಾಮೀಣ ಕ್ರೀಡೆಗಳಾದ ಗೂಳಿ ಪಳಗಿಸುವ ಜಲ್ಲಿಕಟ್ಟು, ಕೋಣಗಳ ಓಟದ ಕ್ರೀಡೆ ಕಂಬಳ ಮತ್ತು ಎತ್ತಿನಗಾಡಿ ಓಟಕ್ಕೆ ಅನುಮತಿ ನೀಡಿದ ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕದ ತಿದ್ದುಪಡಿ ಕಾಯ್ದೆಗಳ ಸಿಂಧುತ್ವ ಎತ್ತಿಹಿಡಿಯುವ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ಪ್ರಕಟಿಸಿದೆ.
ಜಲ್ಲಿಕಟ್ಟು ಕ್ರೀಡೆಯು ತಮಿಳುನಾಡಿನ ಸಾಂಸ್ಕೃತಿಕ ಪರಂಪರೆ ಎಂದು ಶಾಸಕಾಂಗವೇ ಘೊಷಣೆ ಮಾಡಿರುವಾಗ, ನ್ಯಾಯಾಂಗವು ವಿಭಿನ್ನ ಅಭಿಪ್ರಾಯವನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಹೇಳಿದೆ. 2018ರಲ್ಲಿ ಸುಪ್ರೀಂಕೋರ್ಟ್​ನ ದ್ವಿಸದಸ್ಯ ಪೀಠವು ಉಲ್ಲೇಖಿಸಿದ ಐದು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ಪೀಠವು ಈ ಸರ್ವಾನುಮತದ ತೀರ್ಪು ನೀಡಿದೆ.
ತಮಿಳುನಾಡು ತಿದ್ದುಪಡಿ ಕಾಯ್ದೆ ಕುರಿತು ನಮ್ಮ ನಿರ್ಧಾರವು ಮಹಾರಾಷ್ಟ್ರ ಮತ್ತು ಕರ್ನಾಟಕ ತಿದ್ದುಪಡಿ ಕಾಯ್ದೆಗಳಿಗೆ ಮಾರ್ಗದರ್ಶನ ನೀಡುತ್ತದೆ. ಎಲ್ಲಾ ಮೂರು ತಿದ್ದುಪಡಿ ಕಾಯ್ದೆಗಳು ಮಾನ್ಯವಾದ ಶಾಸನಗಳಾಗಿವೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ. ಜಲ್ಲಿಕಟ್ಟು, ಎತ್ತಿನಗಾಡಿ ಓಟ ಮತ್ತು ಕಂಬಳಕ್ಕೆ ಅವಕಾಶ ನೀಡುವ ತಿದ್ದುಪಡಿ ಕಾನೂನುಗಳನ್ನು ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆ ಆಗಿದ್ದವು.
ತಮಿಳುನಾಡು ತಿದ್ದುಪಡಿ ಕಾಯ್ದೆಯು ವರ್ಣರಂಜಿತ ಶಾಸನವಲ್ಲ. ಇದು ಭಾರತದ ಸಂವಿಧಾನದ ಏಳನೇ ಪರಿಚ್ಛೇದದ ಪಟ್ಟಿ 3ರ ನಮೂದು 17ಗೆ ಸಂಬಂಧಿಸಿದೆ. ಇದು ಸಂಬಂಧಿಸಿದ ಕ್ರೀಡೆಗಳಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಕಡಿಮೆ ಮಾಡುತ್ತದೆ ಎಂದು ಕೋರ್ಟ್ ಹೇಳಿದೆ. ತೀರ್ಪಿನ ಪ್ರಮುಖ ಭಾಗವನ್ನು ಓದಿದ ನ್ಯಾಯಮೂರ್ತಿ ಬೋಸ್, ಈ ಕಾಯ್ದೆಗಳು, ನಿಯಮಗಳು ಮತ್ತು ಅಧಿಸೂಚನೆಗಳಲ್ಲಿ ಒಳಗೊಂಡಿರುವ ಕಾನೂನನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಹೇಳಿದರು. ಕಳೆದ ವರ್ಷ ಡಿಸೆಂಬರ್ 8ರಂದು ಈ ವಿಷಯದಲ್ಲಿ ತೀರ್ಪನ್ನು ಕಾಯ್ದಿರಿಸಿದ್ದ ಸುಪ್ರೀಂಕೋರ್ಟ್ 2018ರಲ್ಲಿ ದ್ವಿಸದಸ್ಯ ಪೀಠವು ಜಲ್ಲಿಕಟ್ಟುಗೆ ಸಂಬಂಧಿಸಿದಂತೆ ಉಲ್ಲೇಖಿಸಿದ ಐದು ಪ್ರಶ್ನೆಗಳನ್ನು ಪರಿಗಣಿಸುತ್ತಿತ್ತು. ಫೆಬ್ರವರಿ 2018ರಲ್ಲಿ ಐವರು ನ್ಯಾಯಮೂರ್ತಿಗಳ ಪೀಠಕ್ಕೆ ಈ ವಿಷಯವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ತಮಿಳುನಾಡು ತಿದ್ದುಪಡಿ) ಕಾಯ್ದೆ, 2017 ಅನ್ನು ಪ್ರಶ್ನಿಸುವ ಅರ್ಜಿಗಳನ್ನು ವಿಸõತ ಪೀಠವು ನಿರ್ಧರಿಸುವ ಅಗತ್ಯವಿದೆ ಎಂದು ಹೇಳಿತ್ತು.
ತಮಿಳುನಾಡು ಸರ್ಕಾರ ಕಾನೂನನ್ನು ತಿದ್ದುಪಡಿ ಮಾಡಿ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 ಜಾರಿಗೊಳಿಸುವ ಮೂಲಕ ಜಲ್ಲಿಕಟ್ಟುಗೆ ಅವಕಾಶ ನೀಡಿತ್ತು. ಸಾಂವಿಧಾನಿಕ ಪೀಠದ ಮುಂದೆ ವಿಚಾರಣೆಯ ಸಂದರ್ಭದಲ್ಲಿ ಕೆಲವು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಜಲ್ಲಿಕಟ್ಟು ಸಾವಿಗೆ ಅಥವಾ ಮಾರಣಾಂತಿಕ ಗಾಯಗಳಿಗೆ ಕಾರಣವಾಗುತ್ತದೆ. ಕ್ರೌರ್ಯವನ್ನು ಒಳಗೊಂಡಿರುವ ಯಾವುದನ್ನಾದರೂ ಅನುಮತಿಸಬಾರದು ಎಂದು ಹೇಳಿದ್ದರು.
ಮಂಗಳೂರು: ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠದ ತೀರ್ಪಿನಿಂದ ತುಳುನಾಡಿನ ಜಾನಪದ, ಸಾಂಸ್ಕೃತಿಕ ಪರಂಪರೆ ಭಾಗವಾಗಿರುವ ಕಂಬಳಕ್ಕೆ ಇದ್ದ ಸಣ್ಣ ಆತಂಕವೂ ದೂರವಾಗಿದೆ.
ಕಂಬಳ ಕರಾವಳಿ ನೆಲದ ಆರಾಧನೆ. ಸಂಪ್ರದಾಯಬದ್ಧವಾಗಿ ನಡೆಯುವ ಕಂಬಳಕ್ಕೂ ಇಲ್ಲಿನ ಕೃಷಿ ಚಟುವಟಿಕೆಗೂ ಅವಿನಾಭಾವ ನಂಟು. ಅಂಥ ಕೋಣಗಳ ಓಟದ ಕಂಬಳಕ್ಕೆ 800 ವರ್ಷಗಳ ಇತಿಹಾಸ ಇದೆ. ತುಳುನಾಡಿನ ಶಾಸನ, ಪಾಡ್ದನಗಳಲ್ಲಿ ಕಂಬಳದ ಉಲ್ಲೇಖವಿದೆ. ಕೆಸರು ಗದ್ದೆ ಎಂಬರ್ಥದಲ್ಲಿ ಕಂಬಳ ಪದ ಪ್ರಯೋಗದಲ್ಲಿದೆ. ಕೃಷಿ ಕಾರ್ಯದಲ್ಲಿ ಉಳುಮೆಗೆ ಬಳಸುವ ಕೋಣಗಳನ್ನು ಮನರಂಜನೆಗಾಗಿ ಓಡಿಸಿದ್ದು, ಬಳಿಕ ಜಾನಪದ ಕ್ರೀಡೆಯಾಗಿ ಮಾರ್ಪಾಡುಗೊಂಡಿದೆ. ಬೇಸಾಯದ ನಂಟು, ತುಳುನಾಡಿನ ಅರಸರ ಆಶ್ರಯ, ದೇವರ, ದೈವಗಳ ಸಂಬಂಧವೂ ಬೆರೆತ ಪರಿಣಾಮ ಕಂಬಳ ಅವಿಚ್ಛಿನ್ನವಾಗಿ ನಡೆದುಕೊಂಡು ಬಂದಿದೆ ಎನ್ನುವುದು ವಿದ್ವಾಂಸರ ಅಭಿಪ್ರಾಯ. ಮಾರ್ಚ್ ತಿಂಗಳ ತನಕ ಕಂಬಳ ನಡೆಯುವುದು ಸಂಪ್ರದಾಯ.
ಕರಾವಳಿಯ ಕಂಬಳ, ತಮಿಳುನಾಡಿದ ಜಲ್ಲಿಕಟ್ಟು ಮತ್ತು ಮಹಾರಾಷ್ಟ್ರದ ಎತ್ತಿನ ಗಾಡಿ ಸ್ಪರ್ಧೆ ಕುರಿತು ಪೆಟಾ ಪ್ರಾಣಿ ದಯಾ ಸಂಘ ಆರಂಭದಿಂದಲೂ ಕಿರಿಕ್ ಮಾಡುತ್ತಲೇ ಬಂದಿದೆ. ಕಂಬಳ ಕ್ರೀಡೆಯು ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಆಶಯಗಳಿಗೆ ಮತ್ತು ಇತರ ಹಲವು ಕಲಂಗಳಿಗೆ ವಿರುದ್ಧವಾಗಿದೆ ಎನ್ನುವುದು ಪೆಟಾ ವಾದ. 2014ರಲ್ಲಿ ಮೊದಲ ಬಾರಿ ಕಂಬಳ ನಿಷೇಧಗೊಂಡಿತು. ಬಳಿಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಂಬಳಕ್ಕೆ ಪೂರಕವಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದವು. 2017ರಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ 6 ತಿಂಗಳ ಕಾಲ ಕಂಬಳಕ್ಕೆ ಅವಕಾಶ ಕಲ್ಪಿಸಿದ ಬೆನ್ನಿಗೆ, ತಿದ್ದುಪಡಿ ಮಸೂದೆ ಮಂಡಿಸಿ ಸದನದ ಅಂಗೀಕಾರ ಪಡೆದು ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತವೂ ಬಿದ್ದಿತ್ತು. ಇದರೊಂದಿಗೆ ಕಂಬಳ ಪುನರಾರಂಭಗೊಂಡು, 2017ರಿಂದ ನಿರಂತರವಾಗಿ ನಡೆಯುತ್ತಿದೆ. ಈಗ ಸಾಂವಿಧಾನಿಕ ಮಾನ್ಯತೆಯೂ ಕಾಯ್ದೆಗೆ ದೊರೆಯುವುದರೊಂದಿಗೆ ಕಂಬಳಕ್ಕಿದ್ದ ಆತಂಕ ಶಾಶ್ವತವಾಗಿ ದೂರವಾದಂತಾಗಿದೆ. ಸುಪ್ರೀಂ ಕೋರ್ಟು ತೀರ್ಪು ಲಕ್ಷಾಂತರ ಕಂಬಳಾಭಿಮಾನಿಗಳಲ್ಲಿ ಪುಳಕ ಉಂಟು ಮಾಡಿದೆ.
ಗ್ರಾಮೀಣ ಕ್ರೀಡೆಯಾದ ಎತ್ತಿನ ಗಾಡಿ ಓಟದ ಸ್ಪರ್ಧೆಯು ದೇಶದ ವಿವಿಧ ರಾಜ್ಯಗಳಲ್ಲಿ ಜರುಗುತ್ತವೆಯಾದರೂ ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ವೈಭವದಿಂದ ಆಯೋಜಿಸಲಾಗುತ್ತದೆ. ಓಟದ ಸ್ಪರ್ಧೆಗೆ ಎಂದೇ ರೂಪಿಸಲಾದ ವಿಶೇಷ ಬಂಡಿಗಳಿಗೆ ಎತ್ತುಗಳನ್ನು ಕಟ್ಟಿ ಸ್ಪರ್ಧೆ ನಡೆಸಲಾಗುತ್ತದೆ. ನಿಗದಿತ ದೂರವನ್ನು ಕಡಿಮೆ ಸಮಯದಲ್ಲಿ ತಲುಪುವ ಎತ್ತು ಹಾಗೂ ಅದರ ಮಾಲೀಕನನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ದೊಡ್ಡ ಪ್ರಮಾಣದ ನಗದು, ಚಿನ್ನ, ಬೆಳ್ಳಿ, ವಾಹನ ಸೇರಿದಂತೆ ವಿವಿಧ ರೀತಿಯ ಬಹುಮಾನಗಳನ್ನು ವಿಜೇತರಿಗೆ ನೀಡಲಾಗುತ್ತದೆ.
ಜಲ್ಲಿಕಟ್ಟು ಎಂದರೆ ಚೆನ್ನಾಗಿ ಕೊಬ್ಬಿದ ಹೋರಿಯನ್ನು ಕಣದಲ್ಲಿ ಪಳಗಿಸುವುದು. ಗೂಳಿಯನ್ನು ಹಗ್ಗ ಬಿಚ್ಚಿಬಿಟ್ಟ ತಕ್ಷಣ ನೆರೆದ ಉತ್ಸಾಹಿ ತರುಣರು ಅದರ ಭುಜ ಹಿಡಿದುಕೊಂಡು ನಿಲ್ಲಿಸಬೇಕು. ಹಾಗೆ ನಿಲ್ಲಿಸುವಲ್ಲಿ ಸಫಲರಾಗುವವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ. ಇದು ವಿಜೇತರಿಗೆ ಗೌರವ, ಪ್ರತಿಷ್ಠೆಯ ವಿಷಯ. ತಮಿಳುನಾಡಿನಲ್ಲಿ ಪೊಂಗಲ್ (ಸಂಕ್ರಾಂತಿ) ಸಂದರ್ಭದಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ಆಯೋಜಿಸಲಾಗುತ್ತದೆ. ‘ಇದು ಪ್ರಾಣಿ ಹಿಂಸೆಯ ಕ್ರೀಡೆಯಾಗಿದೆ. ಹಿಂಸಾಚಾರ, ಗೂಳಿ ತಿವಿತಗಳಿಂದ ಜನರು ಬಲಿಯಾದ ಉದಾಹರಣೆಗಳಿವೆ. ಪ್ರಾಣಿಗಳು ಕೂಡ ಮೃತಪಟ್ಟಿವೆ’ ಎಂದು ಪ್ರಾಣಿದಯಾ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿಕೊಂಡು ಬಂದಿವೆ.
ಜಲ್ಲಿಕಟ್ಟು ಕ್ರೀಡೆ ತಮಿಳು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆಯೇ ಅಥವಾ ಇಲ್ಲವೇ ಎಂಬುದಕ್ಕೆ ವಿವರವಾದ ಧಾರ್ವಿುಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಶ್ಲೇಷಣೆಯ ಅಗತ್ಯವಿದೆ. ಸದ್ಯ ನಿಯಮ, ಅಧಿಸೂಚನೆಗಳ ಜತೆಗೆ ತಿದ್ದುಪಡಿ ಕಾನೂನಿನ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು ಜಿಲ್ಲಾಧಿಕಾರಿ, ಸಕ್ಷಮ ಅಧಿಕಾರಿಗಳ ಜವಾಬ್ದಾರಿ.| ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ
ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಂತೋಷವಾಗಿದೆ. ಇದರಿಂದ ಕಂಬಳವನ್ನು ಸುಸೂತ್ರವಾಗಿ ನಡೆಸಲು ಹೆಚ್ಚಿನ ಶಕ್ತಿ ಬಂದಂತಾಗಿದೆ.| ರೋಹಿತ್ ಹೆಗ್ಡೆ ಎರ್ವಳ್ಅಧ್ಯಕ್ಷರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + sixteen =
Remember me
