ನವದೆಹಲಿ: ಶಾಸಕರ ಅನರ್ಹತೆ ಹಾಗೂ ವಿಶ್ವಾಸಮತಕ್ಕೆ ಸಂಬಂಧಿಸಿದಂತೆ ಈಚೆಗಷ್ಟೇ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಮುಂದೆ ಮಧ್ಯಪ್ರದೇಶ ರಾಜಕೀಯ ಪ್ರಹಸನವೂ ಅಂಥದ್ದೇ ಪರಿಸ್ಥಿತಿ ನಿರ್ಮಾಣ ಮಾಡಿದೆ.
ರಾಜ್ಯದ 22 ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ಅಲ್ಪಮತಕ್ಕೆ ಕುಸಿದಿರುವ ಕಮಲ್ ನಾಥ್ ಸರ್ಕಾರ ಕಾನೂನು ಹೋರಾಟದ ಮೂಲಕ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪ್ರಕ್ರಿಯೆ ವಿಳಂಬಗೊಳಿಸಲು ಯತ್ನಿಸುತ್ತಿದೆ. ವಿಶ್ವಾಸಮತ ಕುರಿತು ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡುವ ಸಾಧ್ಯತೆಯಿದ್ದು, ಬಂಡಾಯ ಶಾಸಕರ ಮನವೊಲಿಸಲು ಕಾಂಗ್ರೆಸ್ ಅಂತಿಮ ಕಸರತ್ತು ನಡೆಸುತ್ತಿದೆ. ರಾಜೀನಾಮೆ ನೀಡಿರುವ 22 ಶಾಸಕರಲ್ಲಿ 6 ಮಂದಿಯ ರಾಜೀನಾಮೆ ಒಪ್ಪಿದ್ದೇವೆ ಎಂದು ಸ್ಪೀಕರ್ ಕಚೇರಿ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದೆ.
ಏತನ್ಮಧ್ಯೆ, ವಿಶ್ವಾಸಮತ ಸಾಬೀತುಪಡಿಸಲು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಬಿಜೆಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾ.ಡಿ.ವೈ. ಚಂದ್ರಚೂಡ್ ಮತ್ತು ನ್ಯಾ.ಹೇಮಂತ್ ಗುಪ್ತಾ ವಿಭಾಗೀಯ ಪೀಠ, ಕಾಂಗ್ರೆಸ್​ನ 16 ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ತಕ್ಷಣವೇ ತೀರ್ಮಾನ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ. ಕರ್ನಾಟಕ ಶಾಸಕರ ಅನರ್ಹತೆ ಪ್ರಕರಣದಲ್ಲೂ ಇದೇ ರೀತಿಯ ಆದೇಶ ನೀಡಲಾಗಿದ್ದನ್ನು ನೆನಪಿಸಿದ ನ್ಯಾಯಪೀಠ, ನಿಮ್ಮ ನಿರ್ಧಾರವೇನೆಂಬುದನ್ನು ನಮಗೆ ತಿಳಿಸಿ ಎಂದಿದೆ. ಇದಕ್ಕೆ ಗುರುವಾರದ ವಿಚಾರಣೆ ವೇಳೆ ನಾವು ಉತ್ತರಿಸುತ್ತೇವೆ ಎಂದಿರುವ ಸ್ಪೀಕರ್ ಪರ ವಕೀಲ ಅಭಿಷೇಕ್ ಮನುಸಿಂಘಿ, ಸ್ಪೀಕರ್ ಪರಮಾಧಿಕಾರ ಪ್ರಶ್ನಾತೀತ. ಸ್ಪೀಕರ್ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವುದನ್ನು ರಾಜ್ಯಪಾಲರು ಹೇಳಬೇಕಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಇದಕ್ಕೂ ಮುನ್ನ ಕಾಂಗ್ರೆಸ್ ಪರ ವಾದಿಸಿದ ಹಿರಿಯ ವಕೀಲ ದುಷ್ಯಂತ ದವೆ, ರಾಜೀನಾಮೆ ಸಲ್ಲಿಸಿದ ಶಾಸಕರು ಮೊದಲು ಮರು ಚುನಾವಣೆ ಎದುರಿಸಬೇಕು. ನಂತರ ವಿಶ್ವಾಸಮತ ಪ್ರಕ್ರಿಯೆ ಆಗಲಿ.ಸುಭದ್ರ ಸರ್ಕಾರ ಅಭದ್ರಗೊಳಿಸಲು ಬಿಜೆಪಿ ಪಿತೂರಿ ಮಾಡಿರುವುದರಿಂದ ಶಾಸಕರು ಚುನಾವಣೆಗೆ ಹೋಗಲಿ. ವಿನಾಕಾರಣ ರಾಜೀನಾಮೆ ನೀಡುವುದನ್ನು ಒಪ್ಪಲಾಗದು ಎಂದರು.
ಬಿಜೆಪಿ ಪರ ವಕೀಲ ಮುಕುಲ್ ರೋಹಟಗಿ, ಈ ವಾದ ತರ್ಕಕ್ಕೆ ನಿಲುಕದ್ದು. ಇಲ್ಲಿ ಶಾಸಕರು ರಾಜೀನಾಮೆ ನೀಡಿದ್ದಾರೆಯೇ ವಿನಾ ಪಕ್ಷಾಂತರದ ಪ್ರಶ್ನೆ ಉದ್ಭವಿಸುವುದಿಲ್ಲ. ಉಪಚುನಾವಣೆ ನಡೆಸುವುದು ಚುನಾವಣೆ ಆಯೋಗಕ್ಕೆ ಬಿಟ್ಟ ವಿಷಯ. ಸುಪ್ರೀಂಕೋರ್ಟ್ ಹಸ್ತಕ್ಷೇಪ ಬೇಕಿಲ್ಲ ಎಂದು ಪ್ರತಿವಾದಿಸಿದರು. 22 ಬಂಡಾಯ ಶಾಸಕರ ಪರ ವಾದಿಸಿದ ವಕೀಲ ಮಣಿಂದರ್ ಸಿಂಗ್, ರಾಜೀನಾಮೆ ಸಲ್ಲಿಸುವ ನಿರ್ಧಾರ ಸ್ವಯಂಪ್ರೇರಿತ. ಇದನ್ನು ಅಫಿಡವಿಟ್ ನಲ್ಲೂ ದಾಖಲಿಸಲಾಗಿದೆ ಎಂದರು.
ವಿಚಾರಣೆಯ ಒಂದು ಹಂತದಲ್ಲಿ, ಪಕ್ಷಾಂತರ ವಿರೋಧಿ ಕಾಯ್ದೆ ಮತ್ತು ಸಂವಿಧಾನದ 10ನೇ ಶೆಡ್ಯೂಲ್​ನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸರ್ಕಾರ ಜಾರಿಗೆ ತಂದಿತ್ತು ಎಂದು ವಿವರಿಸಿದ ವಕೀಲ ಸಿಂಘಿ, ಶಾಸಕರು ರಾಜೀನಾಮೆ ಸಲ್ಲಿಸಿದ ಕೂಡಲೇ ಉಪ ಚುನಾವಣೆ ನಡೆಯಕೂಡದು ಎಂಬುದೇ ಈ ತಿದ್ದುಪಡಿ ಕಾನೂನಿನ ಉದ್ದೇಶವಾಗಿತ್ತು. ಆದರೆ ಉಪ ಚುನಾವಣೆಯನ್ನು ಎದುರಿಸದೆಯೇ ಈ ಶಾಸಕರು ಮಂತ್ರಿಗಳಾಗುತ್ತಾರೆ ಅಥವಾ ನಿಗಮ ಮಂಡಳಿಗಳ ಅಧ್ಯಕ್ಷರಾಗಿಬಿಡುತ್ತಾರೆ. ಇದು ಸಂವಿಧಾನದ ಅಣಕ ಎಂದು ಬೇಸರ ವ್ಯಕ್ತಪಡಿಸಿದರು. ಹೀಗಾಗಿ, ರಾಜ್ಯಪಾಲರು ಹೇಳಿದ್ದಾರೆಂದು ವಿಶ್ವಾಸಮತಕ್ಕೆ ಸುಪ್ರೀಂಕೋರ್ಟ್ ಕೂಡ ಆದೇಶಿಸಿದರೆ ಅದು ಸಾಂವಿಧಾನಿಕವಾಗಿ ಮಾಡುವ ತಪ್ಪನ್ನು ಪೋಷಿಸಿದಂತಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನ್ಯಾ.ಡಿ.ವೈ. ಚಂದ್ರಚೂಡ್, ಶಾಸಕರ ರಾಜೀನಾಮೆಗೆ ನೀವು ಸಮ್ಮತಿಸಿದರೆ ಇದನ್ನು ನೀವು ನಿಯಂತ್ರಿಸಬಹುದಲ್ಲವೇ? ಆಗ ಅವರು ಶಾಸಕತ್ವದಿಂದ ಅನರ್ಹಗೊಂಡಂತೆ ಅಲ್ಲವೇ? ಎಂದು ಪ್ರಶ್ನಿಸಿದರು.
ಯಾರ ವಾದ ಏನು?
ದುಷ್ಯಂತ್ ದವೆ ಕಾಂಗ್ರೆಸ್ ಪರ ವಕೀಲ
ಇದೊಂದು ಸುಭದ್ರ ಸರ್ಕಾರ. 18 ತಿಂಗಳಿಂದ ಯಾವುದೇ ಬಿಕ್ಕಟ್ಟಿಲ್ಲದೆ ಆಡಳಿತ ನಡೆಸಲಾಗಿದೆ. ಆದರೆ ಈಗ ಶಾಸಕರನ್ನು ಅಪಹರಿಸಲಾಗಿದೆ, ರಾಜಕೀಯ ಅಸ್ಥಿರತೆ ನಿರ್ವಿುಸಲಾಗಿದೆ ರೆಸಾರ್ಟ್​ನಲ್ಲಿ ಬಂಧಿಯಾಗಿರುವ ಶಾಸಕರು ಮೊದಲು ಬಿಡುಗಡೆಯಾಗಬೇಕು.
ಹಿಂದೆ ಗುಜರಾತ್ ಶಾಸಕರು ಬೆಂಗಳೂರಿಗೆ ತೆರಳಿದ್ದಾಗ ಬಿಜೆಪಿ ಸಿ.ಆರ್.ಪಿ.ಎಫ್ ಮತ್ತು ಐಟಿ ಇಲಾಖೆಯನ್ನು ದುರುಪಯೋಗಪಡಿಸಿಕೊಂಡಿತ್ತು ಸಂಸದೀಯ ಪ್ರಜಾಪ್ರಭುತ್ವದಲ್ಲಿ ಶಾಸಕರ ಗೈರಿನಲ್ಲಿ ವಿಶ್ವಾಸಮತಕ್ಕೆ ಆದೇಶಿಸಲು ಸಾಧ್ಯವಿದೆಯೇ?
ಬಿಜೆಪಿ ಮುಖಂಡರ ನೆರವಿನಿಂದಲೇ ರಾಜೀನಾಮೆ ಸಲ್ಲಿಸಲಾಗಿದೆ. ಇದನ್ನೇ ಆಧಾರವನ್ನಾಗಿಸಿ ರಾಜ್ಯಪಾಲರು ಆಕ್ಷೇಪಾರ್ಹ ಸೂಚನೆ ನೀಡಿದ್ದಾರೆ
ಶಾಸಕರ ರಾಜೀನಾಮೆ ಸ್ವಯಂಪ್ರೇರಿತವೇ ಎಂಬುದನ್ನು ಮೊದಲು ಸ್ಪೀಕರ್ ಪರಿಶೀಲಿಸಬೇಕಿದೆ. ಇದಕ್ಕೆ ಸಮಯ ಬೇಕು
ತೋಳ್ಬಲ, ಹಣಬಲದಿಂದ ಪ್ರಜಾಪ್ರಭುತ್ವದ ತತ್ವಗಳನ್ನೇ ಕೊಲ್ಲಲಾಗುತ್ತಿದೆ. ಇದನ್ನು ಸುಪ್ರೀಂಕೋರ್ಟ್ ತಡೆಯಲೇಬೇಕು
ನಾಳೆ ಮತ್ತೊಂದು ರಾಜ್ಯದಲ್ಲೂ ಬಿಜೆಪಿ ಇಂಥ ಪರಿಸ್ಥಿತಿ ನಿರ್ಮಾಣ ಮಾಡಬಹುದು. ಆಗಲೂ ಸುಪ್ರೀಂಕೋರ್ಟ್ ವಿಶ್ವಾಸಮತಕ್ಕೆ ಆದೇಶಿಸುವುದೇ? ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು
ಮುಕುಲ್ ರೋಹಟಗಿ ಬಿಜೆಪಿ ಪರ ವಕೀಲ
ಬಹುಮತ ಕಳೆದುಕೊಂಡಿರುವ ಸರ್ಕಾರ ಆಡಳಿತದಲ್ಲಿ ಮುಂದುವರಿಯಲು ಯತ್ನಿಸುತ್ತಿರುವುದು ವಿಪರ್ಯಾಸ. ಇದು ಅಧಿಕಾರ ದಾಹವಲ್ಲದೆ ಮತ್ತೇನು?
ಸಾಂವಿಧಾನಿಕ ನೈತಿಕತೆ, ಪ್ರಜಾಪ್ರಭುತ್ವ, ಡಾ.ಬಿ.ಆರ್.ಅಂಬೇಡ್ಕರ್ ತತ್ವಗಳ ಬಗ್ಗೆ ಮಾತನಾಡುವ ವಕೀಲ ದುಷ್ಯಂತ ದವೆ ಯಾರನ್ನು ಸಮರ್ಥಿಸುತ್ತಿದ್ದಾರೆ? 1975ರಲ್ಲಿ ಪ್ರಜಾಪ್ರಭುತ್ವದ ಭೀಕರ ಹತ್ಯೆ ಮಾಡಿದ ಕಾಂಗ್ರೆಸ್ಸನ್ನು!
ರಾಜೀನಾಮೆ ಕೊಟ್ಟ 22 ಶಾಸಕರು ಕಾಂಗ್ರೆಸ್ ಗೆ ಮರಳುವುದಿಲ್ಲ, ಭೋಪಾಲ್ ಗೆ ಹೋಗಲಾರೆವು ಎಂದಿದ್ದಾರೆ.
ಸರ್ಕಾರ ಸರಿಯಾಗಿ ನಡೆಯುತ್ತಿಲ್ಲ ಎಂದಾಗ ರಾಜ್ಯಪಾಲರು ರಾಷ್ಟ್ರಪತಿಗೆ ವಾಸ್ತವ ಸ್ಥಿತಿ ಬಗ್ಗೆ ವರದಿ ನೀಡುವುದು ಸಹಜ
ಇದು ರಾಷ್ಟ್ರಪತಿ ಆಳ್ವಿಕೆ ಹೇರುವ ಮುನ್ನ ನಡೆಸುವ ಪ್ರಕ್ರಿಯೆ
ಸರ್ಕಾರಕ್ಕೆ ಬಹುಮತವಿಲ್ಲ ಎಂದಾಗ ವಿಶ್ವಾಸಮತ ಆಗಬೇಕು ಎಂದು ರಾಜ್ಯಪಾಲರು ಸಲಹೆ ನೀಡುತ್ತಾರೆ
ಶಾಸಕರು ಸ್ವಯಂಪ್ರೇರಿತರಾಗಿ ಬೆಂಗಳೂರಿಗೆ ಹೋಗಿದ್ದಾರೆ. ಆದರೆ ಅವರನ್ನು ಅಪಹರಣ ಮಾಡಲಾಗಿದೆ ಎಂದು ಸುಳ್ಳು ಹೇಳಲಾಗುತ್ತಿದೆ
ವಿಶ್ವಾಸಮತ ಸಾಬೀತುಪಡಿಸಲು ಮುಖ್ಯಮಂತ್ರಿ ಹಿಂದೇಟು ಹಾಕುವುದು ಅವರ ನೇತೃತ್ವದ ಸರ್ಕಾರಕ್ಕೆ ಬಹುಮತವಿಲ್ಲ ಎಂಬುದು ಮೇಲ್ನೋಟಕ್ಕೆ ದೃಢವಾಗುತ್ತದೆ. ಹೀಗೆಂದು 1994ರಲ್ಲಿ ಸುಪ್ರೀಂಕೋರ್ಟ್ ಬೊಮ್ಮಾಯಿ ಪ್ರಕರಣ ತೀರ್ಪಿನಲ್ಲೂ ಕೂಡ ಹೇಳಿದೆ.
ಕರ್ನಾಟಕ, ಮಹಾರಾಷ್ಟ್ರ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಮಧ್ಯರಾತ್ರಿ, ಭಾನುವಾರದ ರಜಾದಿನದಂದು ವಿಚಾರಣೆ ನಡೆಸಿತ್ತು. ಆ ರಾಜ್ಯಗಳಲ್ಲಿ ತಕ್ಷಣವೇ ವಿಶ್ವಾಸಮತಕ್ಕೆ ಆದೇಶವಾಗಬೇಕು ಎಂದು ಇದೇ ಕಾಂಗ್ರೆಸ್ ಪಕ್ಷ ವಾದಿಸಿತ್ತಲ್ಲವೇ?
ತುಷಾರ್ ಮೆಹ್ತಾ
ಕೇಂದ್ರದ ಸಾಲಿಸಿಟರ್ ಜನರಲ್, ಗವರ್ನರ್ ಪರ ವಾದ
6 ಮಂದಿ ಶಾಸಕರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ರಾಜ್ಯಪಾಲರು ಒಪ್ಪಿದ್ದಾರೆ. ನಂತರ ಶಾಸಕತ್ವಕ್ಕೆ ಕೊಟ್ಟ ರಾಜೀನಾಮೆಗೆ ಸ್ಪೀಕರ್ ಸಮ್ಮತಿಸಿದ್ದಾರೆ
ಶಾಸಕರು ಎಲ್ಲಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ, ಸ್ವಯಂಪ್ರೇರಿತವಾಗಿ ನಿರ್ದಿಷ್ಟ ಸ್ಥಳಕ್ಕೆ ಬಂದಿದ್ದೇವೆಂದು ಶಾಸಕರು ಮಾತನಾಡಿಕೊಳ್ಳುತ್ತಿರುವ ವಿಡಿಯೋಗಳು ಮಾಧ್ಯಮದಲ್ಲಿ ಹರಿದಾಡುತ್ತಿವೆ
ಮಣಿಂದರ್ ಸಿಂಗ್ 22 ಬಂಡಾಯ ಶಾಸಕರ ಪರ ವಕೀಲ
ರಾಜೀನಾಮೆ ನೀಡುವುದು ನಮ್ಮ ಸಾಂವಿಧಾನಿಕ ಹಕ್ಕು. ಇದನ್ನು ಸ್ಪೀಕರಿಸಲು ಸ್ಪೀಕರ್ ಗೇನು ಸಮಸ್ಯೆ? ಅವರ ಮೇಲೆ ರಾಜಕೀಯ ಒತ್ತಡವಿದೆಯೇ?
ರಾಜ್ಯ ಸರ್ಕಾರ ಅಲ್ಪಮತಕ್ಕೆ ಕುಸಿದಿರುವುದು ನಿಜ. ತಕ್ಷಣವೇ ವಿಶ್ವಾಸಮತಕ್ಕೆ ಆದೇಶವಾಗಬೇಕು ಎಂಬ ಬಿಜೆಪಿ ಅರ್ಜಿಗೆ ಶಾಸಕರ ಬೆಂಬಲವಿದೆ
ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವ ಉದ್ದೇಶವಿಲ್ಲ. ರಾಜೀನಾಮೆ ನಂತರದ ಪರಿಣಾಮಗಳನ್ನು ಎದುರಿಸಲು ಶಾಸಕರು ಸಿದ್ಧರಿದ್ದಾರೆ
ಅಭಿಷೇಕ್ ಮನುಸಿಂಘಿ ಸ್ಪೀಕರ್ ಪರ ವಕೀಲ
ಸರ್ಕಾರ ಸಂವಿಧಾನಬದ್ಧವಾಗಿ ನಡೆಯುತ್ತಿಲ್ಲ ಎಂದು ರಾಜ್ಯಪಾಲರು ಹೇಳಬಹುದು. ಆದರೆ ಇದನ್ನು ತೀರ್ವನಿಸುವ ಅಂತಿಮ ಅಧಿಕಾರ ಇರುವುದು ಸ್ಪೀಕರ್​ಗೆ.
ವಿಧಾನಸಭೆ ಒಳಗೆ ನಡೆಯುವ ಚಟುವಟಿಕೆಗಳು ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಂವಿಧಾನದ ಆರ್ಟಿಕಲ್ 212 ಹೇಳುತ್ತದೆ
ರಾಜೀನಾಮೆ ಬಗ್ಗೆ ಸ್ಪೀಕರ್ ನಿರ್ಣಯ ತೆಗೆದುಕೊಳ್ಳುತ್ತಾರೆ.
ರಾಜೀನಾಮೆ ನೀಡಿರುವ 16 ಶಾಸಕರು ಸ್ವಯಂಪ್ರೇರಿತರಾಗಿ ಬೆಂಗಳೂರಿನಲ್ಲಿದ್ದಾರೆ ಎಂದು ನಮಗೆ ಖಾತರಿಯಾಗುವುದು ಹೇಗೆ? ಮಾಧ್ಯಮದಲ್ಲಿ ಹರಿದಾಡುವ ವಿಡಿಯೋಗಳನ್ನು ನಾವು ಆಧಾರವನ್ನಾಗಿಟ್ಟುಕೊಳ್ಳಬೇಕೆ? ಶಾಸಕರ ಕುದುರೆ ವ್ಯಾಪಾರ ನಡೆಯಬಾರದು ಎನ್ನುವುದು ಸುಪ್ರೀಂಕೋರ್ಟ್ ಕಾಳಜಿ. ಹಿಂದಿನ ಅನೇಕ ತೀರ್ಪಗಳಲ್ಲೂ ಇದನ್ನೇ ಹೇಳಲಾಗಿದೆ.
| ನ್ಯಾ.ಡಿ.ವೈ. ಚಂದ್ರಚೂಡ್ ಸುಪ್ರೀಂಕೋರ್ಟ್ ನ್ಯಾಯಮೂರ್ತಿ
ರಾಘವ ಶರ್ಮ ನಿಡ್ಲೆ
VIDEO: ಮಧ್ಯಪ್ರದೇಶ ಶಾಸಕರನ್ನು ಭೇಟಿ ಮಾಡಲೆತ್ನಿಸಿದ ದಿಗ್ವಿಜಯ ಸಿಂಗ್ ಬಂಧನ​


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − three =
Remember me
