ಕಳೆದ ವರ್ಷಮೇ 30ರಂದು ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದ ಸುರೇಶ ಅಂಗಡಿ ಅಲ್ಪಾವಧಿಯಲ್ಲೇ ಕರ್ನಾಟಕದ ರೈಲ್ವೆ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಕಷ್ಟು ಶ್ರಮಿಸಿದ್ದರು. ಹೊಸ ರೈಲುಗಳ ಆರಂಭ, ಹಳೆಯ ಯೋಜನೆಗಳಿಗೆ ಮತ್ತೆ ಚಾಲನೆ ನೀಡುವಲ್ಲಿ ಅವರ ಪಾತ್ರ ಮಹತ್ವದ್ದು. ಕೆಲವು ದಶಕಗಳ ಹಿಂದೆಯೇ ಸ್ಥಗಿತಗೊಂಡಿದ್ದ ಹುಬ್ಬಳ್ಳಿ-ಧಾರವಾಡ-ದಾಂಡೇಲಿ ಪ್ರಯಾಣಿಕರ ರೈಲು ಪುನರಾರಂಭ, ಹುಬ್ಬಳ್ಳಿ ಜಂಕ್ಷನ್​ನಲ್ಲಿ ಹಲವು ಸುಧಾರಣೆ ಕಾಮಗಾರಿಗಳು, ರೈಲ್ವೆ ವಸ್ತು ಸಂಗ್ರಹಾಲಯ ಸ್ಥಾಪನೆ, ವಿದ್ಯುದೀಕರಣ ಕಾಮಗಾರಿ ಚುರುಕುಗೊಳಿಸುವುದು, ಸಿ ಮತ್ತು ಡಿ ದರ್ಜೆ ಹುದ್ದೆಗೆ ಸ್ಥಳೀಯ ಭಾಷೆಯಲ್ಲೇ ಪರೀಕ್ಷೆ ಬರೆಯಬಹುದು ಎಂಬ ಆದೇಶ ತರಿಸಿಕೊಟ್ಟಿರುವುದು… ಹೀಗೆ ಕಡಿಮೆ ಅವಧಿಯಲ್ಲೇ ಒಂದರ ನಂತರ ಒಂದರಂತೆ ಕಣ್ಣಿಗೆ ಕಾಣುವಂಥ ಕೆಲಸಗಳನ್ನು ಮಾಡಿರುವುದು ಅವರ ಕ್ರಿಯಾಶೀಲತೆಗೆ ನಿದರ್ಶನ. ಧಾರವಾಡ-ಕಿತ್ತೂರು-ಬೆಳಗಾವಿ ರೈಲು ಮಾರ್ಗ 3 ದಶಕದ ಬೇಡಿಕೆಯಾಗಿತ್ತು. ಇತ್ತೀಚೆಗಷ್ಟೇ ಈ ಯೋಜನೆಗೆ 950 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದರು. ಇದು ಅವರ ಬದ್ಧತೆಗೆ ಸಾಕ್ಷಿ. ಈ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡುವ ಕನಸು ಅವರದಾಗಿತ್ತು. ರಾಜ್ಯದ ರೈಲ್ವೆ ಯೋಜನೆಗಳಿಗೆ 17 ಸಾವಿರ ಕೋಟಿ ರೂ. ಕೊಡಿಸಿದ ಅವರು, ಘೊಷಿತ ಎಲ್ಲ ಯೋಜನೆಗಳನ್ನೂ ನಿಗದಿಗಿಂತ ಪೂರ್ವದಲ್ಲೇ ಪೂರ್ಣಗೊಳಿಸುವ ಗುರಿ ಹೊಂದಿದ್ದರು.
ಹಲವು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಜನರ ಬೇಡಿಕೆಯಾಗಿದ್ದ ವಿವಿಧ ಯೋಜನೆಗಳು ಅವರ ಅವಧಿಯಲ್ಲಿ ಸಾಕಾರವಾಗಿದ್ದವು. ಕೆಲವು ವರ್ಷಗಳಿಂದ ಘೋಷಣೆಗಷ್ಟೇ ಸೀಮಿತವಾಗಿದ್ದ ಬೆಂಗಳೂರಿನ ಉಪನಗರ ರೈಲು ಯೋಜನೆ ಈ ಸಲದ ಕೇಂದ್ರ ಬಜೆಟ್​ನಲ್ಲಿ ಪ್ರಸ್ತಾಪವಾಗಿತ್ತಲ್ಲದೆ, ಅನುದಾನವೂ ಸಿಕ್ಕಿತ್ತು. ಹಾಗೆಯೇ, ರಾಜ್ಯದ ನಾನಾ ಯೋಜನೆಗಳಿಗೆ ತೊಡಕಾಗಿದ್ದ ರೈಲ್ವೆ ಭೂಮಿ ಹಸ್ತಾಂತರದ ಕೆಲಸವನ್ನು ಅವರು ಸುಗಮ ಮಾಡಿಕೊಟ್ಟಿದ್ದರು.
ನೇರ ರೈಲಿನ ಕೊಡುಗೆ
ಬೆಳಗಾವಿ- ಬೆಂಗಳೂರು ನೇರ ರೈಲು ಸುರೇಶ ಅಂಗಡಿಯವರ ಇನ್ನೊಂದು ಜನಪ್ರಿಯ ಕೊಡುಗೆ. ಸಚಿವರಾದ 3 ತಿಂಗಳೊಳಗೆ ಅವರು ಈ ರೈಲು ಸೇವೆ ಆರಂಭಿಸಿದ್ದರು. ಇತ್ತೀಚೆಗಷ್ಟೇ ಈ ರೈಲು ಸೇವೆ ವರ್ಷ ಪೂರೈಸಿದೆ.
ನಿಲ್ದಾಣಗಳ ಅಭಿವೃದ್ಧಿ
ಸುರೇಶ ಅಂಗಡಿ ಸಚಿವರಾದ ನಂತರ, ಬೈಯಪ್ಪನಹಳ್ಳಿ-ಹೊಸೂರು ಮತ್ತು ಯಶವಂತಪುರ – ಚನ್ನಸಂದ್ರ ಮಾರ್ಗದಲ್ಲಿ ಜೋಡಿ ಹಳಿ ಕಾರ್ಯಕ್ಕೆ ಮತ್ತೆ ಚಾಲನೆ ಸಿಕ್ಕಿತು. ಬೈಯಪನಹಳ್ಳಿ ರೈಲು ನಿಲ್ದಾಣ ಮೇಲ್ದರ್ಜೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮೂರನೇ ದ್ವಾರ ನಿರ್ವಣ, ರೈಲುಗಳ ಸ್ವಚ್ಛತೆಗೆ ಆಟೋಮ್ಯಾಟಿಕ್ ಸ್ವಚ್ಛತಾ ಯಂತ್ರ ಅಳವಡಿಕೆ ಹೀಗೆ ಹಲವು ಕೆಲಸಗಳಿಗೆ ವೇಗ ದೊರೆಯಿತು. ಉತ್ತರ ಕರ್ನಾಟಕಕ್ಕೆ ಬೆಂಗಳೂರು ಇನ್ನಿತರ ಕಡೆಗಳಿಂದ ಹೊಸ ರೈಲುಗಳ ಸಂಚಾರಕ್ಕೆ ಅನುವು ಮಾಡಲಾಯಿತು. 10 ವರ್ಷಕ್ಕೂ ಹಳೆಯ ಬೇಡಿಕೆಯಾದ ವಿಮಾನನಿಲ್ದಾಣಕ್ಕೆ ತೆರಳುವವರಿಗಾಗಿ ರೈಲು ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದರು.
ಸದಾ ಚುರುಕು
ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯ ಕೇಂದ್ರದ ಅಧಿಕಾರಿಗಳನ್ನು ಬೆಳಗ್ಗೆ 6 ಗಂಟೆಗೆಲ್ಲ ಕೆಲಸಕ್ಕೆ ತೊಡಗಿಸುತ್ತಿದ್ದರು. ಕರೊನಾದಿಂದಾಗಿ ಸಭೆಗಳು ಪ್ರಶಸ್ತವಲ್ಲ ಎಂಬ ಸೂಚನೆ ಇದ್ದಾಗ ವೆಬಿನಾರ್, ಆನ್​ಲೈನ್ ಮೂಲಕ ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ಸಚಿವರಾದ ಶುರುವಿನಿಂದಲೇ ಅವರು ರೈಲಿನಲ್ಲಿ ಸಂಚಾರ, ಪ್ರಯಾಣದ ವೇಳೆಯಲ್ಲೇ ಸಭೆ, ಕಾಮಗಾರಿ ಸ್ಥಳಗಳಿಗೆ ಭೇಟಿ… ಹೀಗೆ ಸದಾ ಚುರುಕಾಗಿರುತ್ತಿದ್ದರು.
ಕರೊನಾ ನಡುವೆಯೂ ಕಾರ್ಯ
ಕರೊನಾ ಸೋಂಕಿನ ಸಂದರ್ಭದಲ್ಲೂ ಕರ್ನಾಟಕದಿಂದ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ 260ಕ್ಕೂ ಹೆಚ್ಚಿನ ಶ್ರಮಿಕ ರೈಲುಗಳು ಸಂಚರಿಸುವಂತೆ ಮಾಡಿದ್ದರು. ಲಾಕ್​ಡೌನ್ ಜಾರಿಯಲ್ಲಿದ್ದಾಗ ರೈಲ್ವೆಯಿಂದ ನಿರಂತರವಾಗಿ ಆಹಾರ ಕಿಟ್ ವಿತರಣೆ, ಮಾಸ್ಕ್-ಸ್ಯಾನಿಟೈಸರ್ ಇತ್ಯಾದಿಗಳ ತಯಾರಿಕೆ, ವಿತರಣೆ ಮಾಡಿಸುವ ಮೂಲಕ ಇಲಾಖೆಯು ಜನರಿಗೆ ಹೆಚ್ಚು ಸಮೀಪವಾಗುವಂತೆ ಮಾಡಿದರು. ರೈಲ್ವೆ ಬೋಗಿಗಳನ್ನು ಕೋವಿಡ್ ವಾರ್ಡ್​ಗಳನ್ನಾಗಿ ಪರಿವರ್ತಿಸುವಲ್ಲಿಯೂ ಅವರ ಕಾಳಜಿ ಇತ್ತು. ರಾಜ್ಯದ ಕೃಷಿ ಉತ್ಪನ್ನಗಳಿಗೆ ದೇಶದಲ್ಲಿ ಮಾರುಕಟ್ಟೆ ಸಿಗುವಂತೆ ಮಾಡಲು ಕಿಸಾನ್ ರೈಲು, ಸರಕು ಸಾಗಣೆ ಸೇವೆಯನ್ನು ಪರಿಣಾಮಕಾರಿಯಾಗಿ ಮಾಡಲು ರೋರೋ ರೈಲು ಸೇವೆ ಮತ್ತು ಇತರ ಹೊಸ ಬಗೆಯ ಸೇವೆಗಳಿಗೆ ನಾಂದಿ ಹಾಡಿದ್ದರು. ಈ ಮೂಲಕ ಉದ್ಯೋಗ-ಉದ್ಯಮ ಆಸಕ್ತ ಸ್ಥಳೀಯರಲ್ಲಿ ಹೊಸ ಭರವಸೆ ಮೂಡಿಸಿದ್ದರು. ರೈಲ್ವೆ ಇಲಾಖೆಯನ್ನು ಮತ್ತು ಅಧಿಕಾರಿಗಳನ್ನು ಜನರ ಬಳಿ ತಂದ ಶ್ರೇಯಸ್ಸು ಅವರದು.
ಸಂಸದ ಅಂಗಡಿ ನಿಧನಕ್ಕೆ ಪ್ರಧಾನಿ, ಸಿಎಂ ಬಿಎಸ್​ವೈ ಸೇರಿ ಹಲವಾರು ಗಣ್ಯರ ಸಂತಾಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 7 =
Remember me
