ನವದೆಹಲಿ:ರಾಜಕೀಯವಾಗಿ ಮಹತ್ವದ ರಾಜ್ಯವಾಗಿ ರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಲೋಕಸಭಾ ಚುನಾವಣೆ ಹಿನ್ನಡೆ ಅನುಭವಿಸಿದ ನಂತರ ಸಾಂಸ್ಥಿಕ ಪುನಶ್ಚೇತನಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಚೌಧರಿ ಅವರು ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಪಕ್ಷದ ಕಳಪೆ ಪ್ರದರ್ಶನದ ಜವಾಬ್ದಾರಿಯನ್ನು ಹೊತ್ತು ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಭೇಟಿಯ ವೇಳೆ ಸಂಘಟನೆಯ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ರ್ಚಚಿಸಿದ್ದಾರೆ. ಚುನಾವಣಾ ಹಿನ್ನಡೆಯಿಂದ ಪುಟಿದೇಳಲು ಮತ್ತು 2027ರ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಾದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪ್ರಧಾನಿ ನಿವಾಸಕ್ಕೆ ತೆರಳಿ ಮುಂದಿನ ನಡೆ ಕುರಿತು ಮಹತ್ವದ ಚರ್ಚೆ ರ್ಚಚಿಸಿದ್ದಾರೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಮಹತ್ವದ ಬದಲಾವಣೆ ಸಂಭವಿಸುವ ಸುಳಿವು ಸಿಕ್ಕಿದೆ.
ಕಳೆದ ಕೆಲ ದಿನಗಳಿಂದ ಉತ್ತರ ಪ್ರದೇಶದ ಬಿಜೆಪಿಯ ಪ್ರಮುಖ ನಾಯಕರು ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಪಕ್ಷದ ವರಿಷ್ಠರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ. ಇದಕ್ಕೂ ಮುನ್ನ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ, ರಾಜ್ಯದ ರಾಜಕೀಯ ಸ್ಥಿತಿ ಮತ್ತು ಪಕ್ಷದಲ್ಲಿನ ಆಂತರಿಕ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಆಂತರಿಕ ಕಚ್ಚಾಟ? :ಯೋಗಿ ಆದಿತ್ಯನಾಥ ಸರ್ಕಾರದಲ್ಲಿ ಆಂತರಿಕ ಕಚ್ಚಾಟ ಹೆಚ್ಚುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಭಾನುವಾರ ನಡೆದ ಪಕ್ಷದ ಸಭೆಯಲ್ಲಿ ಉಪಮುಖ್ಯಮಂತ್ರಿ ಮೌರ್ಯ ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. ‘ಸಂಘಟನೆಯು ಸರ್ಕಾರಕ್ಕಿಂತ ದೊಡ್ಡದು. ಸಂಘಟನೆಗಿಂತ ಯಾರೂ ದೊಡ್ಡವರಲ್ಲ’ ಎಂದು ಅವರು ಹೇಳಿದ್ದರು. ಮುಖ್ಯಮಂತ್ರಿ ಆದಿತ್ಯನಾಥ ವಿರುದ್ಧ ಅವರು ಪರೋಕ್ಷವಾಗಿ ಈ ಹೇಳಿಕೆ ನೀಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವದಂತಿ ಹರಡಿದೆ. ‘ರಾಜ್ಯ ಸರ್ಕಾರದೊಳಗಿನ ಆಂತರಿಕ ಕಚ್ಚಾಟದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರಿಗೆ ಭ್ರಷ್ಟಾಚಾರದ ಬಗ್ಗೆ ಗೊತ್ತಿದ್ದು, ಅಧಿಕಾರದ ಆಟದಿಂದ ಬೇಸತ್ತಿದ್ದಾರೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟೀಕಾ ಪ್ರಹಾರ ನಡೆಸಿರುವುದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ, ಬಿಜೆಪಿ ಆಂತರಿಕ ಕಚ್ಚಾಟ ಆರೋಪವನ್ನು ತಳ್ಳಿಹಾಕಿದೆ. ‘ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಮತ್ತು ಸಂಘಟನೆಗಳು ಬಲಿಷ್ಠವಾಗಿವೆ. ಉತ್ತರ ಪ್ರದೇಶ ಎಸ್​ಪಿಯ ಗೂಂಡಾಗಳ ಆಳ್ವಿಕೆಗೆ ಮರಳುವುದು ಅಸಾಧ್ಯ. 2027ರ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಪುನರಾವರ್ತಿಸಲಿದೆ’ ಎಂದು ಸ್ವತಃ ಮೌರ್ಯ ಸ್ಪಷ್ಟನೆ ನೀಡಿದ್ದಾರೆ.

ಒಬಿಸಿ ನಾಯಕನಿಗೆ ಮಣೆ? :ಬಿಜೆಪಿಯು ಒಬಿಸಿ ನಾಯಕರೊಬ್ಬರನ್ನು ರಾಜ್ಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಉತ್ಸುಕವಾಗಿದೆ. ಪ್ರಸ್ತುತ ರಾಜ್ಯಾಧ್ಯಕ್ಷ ಚೌಧರಿ ಜಾಟ್ ನಾಯಕರಾಗಿದ್ದಾರೆ. ಜಾಟ್ ಸಮುದಾಯದವರು ಪಕ್ಷದ ವಿರುದ್ಧ ಹೊಂದಿದ್ದ ಅಸಮಾಧಾನವನ್ನು ತಣಿಸಲು 2022ರಲ್ಲಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈಗ ಒಬಿಸಿ ನಾಯಕರತ್ತ ಪಕ್ಷ ಚಿತ್ತ ಹರಿಸಿದೆ. ಉತ್ತರ ಪ್ರದೇಶದ ಒಬಿಸಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಚುನಾವಣೆಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಮುಂಬರುವ ಉಪ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲು ಪಕ್ಷದ ವರಿಷ್ಠರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಉಪಚುನಾವಣೆಗೆ ಸಜ್ಜಾಗಿ:ಸಿಎಂ ಯೋಗಿ ಆದಿತ್ಯನಾಥ ಅವರು ಬುಧವಾರ ತಮ್ಮ ನಿವಾಸದಲ್ಲಿ ಸಚಿವರ ಸಭೆ ನಡೆಸಿದ್ದಾರೆ. ಮುಂಬರುವ 10 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ ಶಾಸಕರು ರಾಜೀನಾಮೆ ನೀಡಿದ ಕಾರಣಕ್ಕೆ 10 ಸ್ಥಾನಗಳು ತೆರವಾಗಿವೆ. ಎಲ್ಲ 10 ವಿಧಾನಸಭಾ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂದು ಸಭೆಯ ನಂತರ ಹಣಕಾಸು ಸಚಿವ ಸುರೇಶ್ ಖನ್ನಾ ಹೇಳಿದರು. ದೇಶದ ಹಲವೆಡೆ ಇತ್ತೀಚೆಗೆ ನಡೆದ ಉಪ ಚುನಾಚಣೆಯಲ್ಲಿ ಇಂಡಿಯಾ ಒಕ್ಕೂಟ ಭಾರಿ ಗೆಲುವು ಸಾಧಿಸಿರುವುದು ಎನ್​ಡಿಎಗೆ ತಲೆನೋವು ತಂದಿದೆ. ರಾಜಕೀಯವಾಗಿ ಮಹತ್ವದ ರಾಜ್ಯವಾಗಿರುವ ಉತ್ತರ ಪ್ರದೇಶದ ಉಪ ಚುನಾವಣೆ ಗೆಲ್ಲುವುದು ಪಕ್ಷಕ್ಕೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಈಗಿಂದಲೇ ಸಿದ್ಧತೆ ನಡೆಸುತ್ತಿದೆ.
ಚುನಾವಣೆಯಲ್ಲಿ ಹಿನ್ನಡೆ:ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಉತ್ತರ ಪ್ರದೇಶದಲ್ಲಿ ಭಾರಿ ಹಿನ್ನಡೆ ಕಂಡಿದೆ. 2019 ರಲ್ಲಿ 62 ಲೋಕಸಭಾ ಕ್ಷೇತ್ರ ಗೆದ್ದಿದ್ದ ಬಿಜೆಪಿ ಈ ಚುನಾವಣೆಯಲ್ಲಿ 33 ಸ್ಥಾನಕ್ಕೆ ಇಳಿದಿದೆ. ಪ್ರಮುಖ ವಿರೋಧ ಪಕ್ಷ ಸಮಾಜವಾದಿ ಪಕ್ಷವು ಹೆಚ್ಚಿನ ಸಂಖ್ಯೆಯಲ್ಲಿ ಸೀಟು ಗೆದ್ದಿದೆ. ಉತ್ತರ ಪ್ರದೇಶದಲ್ಲಿ ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಹ್ಯಾಟ್ರಿಕ್ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದ ಕಮಲ ಪಾಳಯಕ್ಕೆ ಲೋಕಸಭಾ ಚುನಾವಣೆ ಫಲಿತಾಂಶ ಆಘಾತ ನೀಡಿದೆ. ಹೀಗಾಗಿ ಪಕ್ಷ ಸಂಘಟನೆಯಲ್ಲಿ ವ್ಯಾಪಕ ಹಾಗೂ ದೊಡ್ಡ ಮಟ್ಟದ ಬದಲಾವಣೆ ಮಾಡಲು ನಿರ್ಧಾರ ಮಾಡಿದೆ.
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ವಿಧೇಯಕಕ್ಕೆ ತಡೆ ಸೂಕ್ತ ತೀರ್ಮಾನ: ಸಚಿವ ಎಂ ಬಿ ಪಾಟೀಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
