ನವದೆಹಲಿ:ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯನ್ನು ಮೂಲೆಗುಂಪು ಮಾಡಲು ವಿಪಕ್ಷಗಳಿಗೆ ಸತತ ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮಹತ್ವ ಪಡೆದುಕೊಂಡಿತ್ತು. ಐದು ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಶಕ್ತಿಮೀರಿ ಯತ್ನಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ನಡೆಸಿರುವ ಚುನಾವಣಾ ರ್ಯಾಲಿಗಳೇ ಇದಕ್ಕೆ ಸಾಕ್ಷಿ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವರ್ಚಸ್ಸನ್ನು ಕುಗ್ಗಿಸಿ ಅಧಿಕಾರಕ್ಕೇರಿದಲ್ಲಿ, ರಾಷ್ಟ್ರ ರಾಜಕಾರಣದಲ್ಲಿ ಮೋದಿ ವಿರುದ್ಧ ಹೋರಾಟ ನಡೆಸಬಲ್ಲ ದಿಟ್ಟ ನಾಯಕತ್ವವಿಲ್ಲ ಎಂಬ ಸಂದೇಶವೂ ರವಾನೆಯಾಗುತ್ತದೆ. ಆದರೆ ಬಿಜೆಪಿಯನ್ನು ಏಕಾಂಗಿ ಹೋರಾಟದ ಮೂಲಕ ಎದುರಿಸುವ ಮಮತಾರನ್ನು ಸೋಲಿಸುವುದು ಸುಲಭದ ಮಾತಲ್ಲ. ರಾಜಕೀಯ ಹಿಂಸಾಚಾರ ಮತ್ತು ಟಿಎಂಸಿ ಪ್ರಾಬಲ್ಯದ ಮಧ್ಯೆ ಕೇಸರಿ ಬಾವುಟ ನೆಲೆಗೊಳಿಸುವ ಬಿಜೆಪಿ ಕನಸು ನನಸಾಗದು ಎಂದು ಸಮೀಕ್ಷೆಗಳು ಹೇಳುತ್ತಿದ್ದರೂ, ಬಿಜೆಪಿ ನಾಯಕರು ಮಾತ್ರ ‘ನಾವು ಬಂಗಾಳ ಗೆಲ್ಲುತ್ತೇವೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
‘ಜನ್ ಕಿ ಬಾತ್’ 174 ಸೀಟುಗಳನ್ನು ಬಿಜೆಪಿಗೆ ನೀಡಿದ್ದರೆ, ಸಿಎನ್​ಎಕ್ಸ್ ರಿಪಬ್ಲಿಕ್ ಸಂಸ್ಥೆ 138-148 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಅಂದಾಜಿಸಿದೆ. ಉಳಿದೆಲ್ಲ ಸಮೀಕ್ಷೆಗಳು ಟಿಎಂಸಿ ಮತ್ತೆ ಅಧಿಕಾರಕ್ಕೇರಲಿದೆ ಎಂದೇ ಹೇಳಿವೆ. ಅದೇನೇ ಇರಲಿ, ಗೃಹ ಸಚಿವ ಅಮಿತ್ ಷಾ ಪ್ರತಿ ರ್ಯಾಲಿಯಲ್ಲೂ ಬಿಜೆಪಿ 200ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ ಎಂದೇ ಹೇಳುತ್ತಿದ್ದರು. ಇದಕ್ಕೆ ಮೇ 2ರಂದು ಸ್ಪಷ್ಟ ಉತ್ತರ ಸಿಗಲಿದೆ.
ಏತನ್ಮಧ್ಯೆ, ಕೇರಳದಲ್ಲಿ ಕಾಂಗ್ರೆಸ್​ಗೆ ಮತ್ತೆ ಹಿನ್ನಡೆಯಾಗಲಿದೆ ಎನ್ನುತ್ತಿವೆ ಸಮೀಕ್ಷೆಗಳು. ಆಡಳಿತಾರೂಢ ಎಲ್​ಡಿಎಫ್ ವಿರುದ್ಧ ಭ್ರಷ್ಟಾಚಾರ, ಕಳ್ಳಸಾಗಣೆ ಸೇರಿ ಅನೇಕ ಆರೋಪಗಳಿದ್ದರೂ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತೆ ವಿಪಕ್ಷ ಸ್ಥಾನಕ್ಕೆ ತೃಪ್ತಿಪಡುವ ಸಾಧ್ಯತೆ ಇದೆ. ವಯನಾಡ್ ಕ್ಷೇತ್ರದಿಂದ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸಂಸದರಾಗಿದ್ದರೂ, ಕೇರಳ ವಿಧಾನಸಭೆ ಚುನಾವಣೆ ಮೇಲೆ ಅದು ಹೆಚ್ಚು ಪರಿಣಾಮ ಬೀರಿದಂತಿಲ್ಲ. ಬಂಗಾಳದಲ್ಲಿ ಎಡಪಕ್ಷವನ್ನು ಜನರು ಸಂಪೂರ್ಣ ವಾಗಿ ತಿರಸ್ಕರಿಸಿರುವ ಜತೆಗೆ ಕಾಂಗ್ರೆಸ್​ನ್ನೂ ಮೂಲೆಗುಂಪು ಮಾಡಿದ್ದಾರೆ. ಆದರೆ, ಎಡಪಕ್ಷಗಳು ಕೇರಳದಲ್ಲೂ ಇನ್ನೂ ಪ್ರಸ್ತುತತೆ ಉಳಿಸಿಕೊಂಡಿವೆ. ಆದರೆ, ಕಾಂಗ್ರೆಸ್ ಎರಡೂ ಕಡೆ ನೆಲೆ ಕಳೆದುಕೊಳ್ಳುತ್ತಿರುವ ವರದಿಗಳು ಪಕ್ಷದ ಮಟ್ಟಿಗೆ ಆತಂಕ ಕಾರಿ ವಿಷಯವೇ. ಮೆಟ್ರೋ ಮ್ಯಾನ್ ಇ. ಶ್ರೀಧರನ್​ರನ್ನು ಸಿಎಂ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಬಿಜೆಪಿ ಹೊಸ ಪ್ರಯೋಗ ಮಾಡಿತ್ತು.
ಅಸ್ಸಾಂನ ಮಾಜಿ ಸಿಎಂ, ಹಿರಿಯ ನಾಯಕ ತರುಣ್ ಗೊಗೊಯ್ ನಿಧನದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಬೇರುಗಳು ದುರ್ಬಲಗೊಂಡಿವೆ. ನಾಯಕತ್ವದ ವಿಷಯದಲ್ಲೇ ಆಂತರಿಕ ಕಚ್ಚಾಟಗಳಿವೆ. ತರುಣ್ ಗೊಗೊಯ್ ಪುತ್ರ ಗೌರವ್ ಗೊಗೊಯ್ ಮೇಲ್ನೋಟಕ್ಕೆ ರಾಜ್ಯದ ನಾಯಕನಂತೆ ಕಂಡರೂ ಹಿರಿಯ ಮುಖಂಡರು ಗೌರವ್​ರನ್ನು ಒಪ್ಪಿಲ್ಲ. ಈ ನಡುವೆ, ಮಿತ್ರಪಕ್ಷ ಎಐಯುಡಿಎಫ್ ಮುಖಂಡ ಬದ್ರುದ್ದಿನ್ ಮಹಾಮೈತ್ರಿಯ ಹಿರಿಯ ರಾಜಕಾರಣಿ. ಕಾಂಗ್ರೆಸ್ ಬದ್ರುದ್ದಿನ್ ಜತೆಗೆ ಮೈತ್ರಿ ಮಾಡಿಕೊಂಡಿರುವುದರ ಒಂದು ಲಾಭ ಏನೆಂದರೆ ಮುಸ್ಲಿಂ ಮತಗಳು ವಿಭಜನೆಯಾಗದೆ ಒಂದೇ ಕಡೆ ಕ್ರೋಢೀಕರಣಗೊಳ್ಳಲಿವೆ. ಹೀಗಾಗಿಯೇ, ಅನೇಕ ರಾಜಕೀಯ ಪಂಡಿತರು ಅಸ್ಸಾಂನಲ್ಲಿ ಮಹಾಮೈತ್ರಿ ಗೆದ್ದರೂ ಆಶ್ವರ್ಯ ಇಲ್ಲ ಎನ್ನುತ್ತಿದ್ದರು. ಆದರೆ, ಸಮೀಕ್ಷೆಗಳು ಮಾತ್ರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುತ್ತಿವೆ. ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಸಜ್ಜನ ಮತ್ತು ಸೌಜನ್ಯದ ವ್ಯಕ್ತಿತ್ವ ಉಳ್ಳವರು. ಕ್ಲೀನ್ ಇಮೇಜ್ ಅವರ ಹೆಗ್ಗಳಿಕೆ. ತೋಳ್ಬಲ ಹಾಗೂ ಜನಪ್ರಿಯತೆಯೇ ಹಿಮಾಂತ ಬಿಸ್ವ ಶರ್ಮರ ಶಕ್ತಿಯಾಗಿದೆ. ಅಸ್ಸಾಂನ್ನು ಬಿಜೆಪಿ ಗೆದ್ದರೆ ಅದಕ್ಕೆ ಈ ಇಬ್ಬರು ನಾಯಕರೇ ಪ್ರಮುಖ ಕಾರಣ. ಅಷ್ಟರಮಟ್ಟಿಗೆ ರಾಜ್ಯದಲ್ಲಿ ಇಬ್ಬರು ಮನೆ ಮಾತಾಗಿದ್ದಾರೆ. ಕಾಂಗ್ರೆಸ್ ನೇತೃತ್ವದ ಮೈತ್ರಿಗೆ ಹೆಚ್ಚು ಸೀಟುಗಳು ಬಂದರೆ, ಅದು ಕಾಂಗ್ರೆಸ್ ಕಾರಣಕ್ಕಾಗೇನೂ ಅಲ್ಲ. ಏಕೆಂದರೆ ಅಲ್ಲಿ ಕಾಂಗ್ರೆಸ್ ತನಗಿಂತ ಹೆಚ್ಚು ಪ್ರಾದೇಶಿಕ ಪಕ್ಷಗಳು ನಂಬಿ ಚುನಾವಣೆ ಎದುರಿಸಿದೆ.
ತಮಿಳುನಾಡಿನಲ್ಲಿ ಬಹುಶಃ ಡಿಎಂಕೆ- ಕಾಂಗ್ರೆಸ್ ಮೈತ್ರಿ ಅಧಿಕಾರಕ್ಕೆ ಬರುವ ಸಾಧ್ಯತೆ ಮನಗಂಡೇ ರಾಹುಲ್ ಗಾಂಧಿ ಈ ಬಾರಿ ಅಲ್ಲಿ ಹೆಚ್ಚಿನ ರ್ಯಾಲಿ, ಸಭೆಗಳನ್ನು ನಡೆಸಿದ್ದಾರೆ. ಕೇರಳಕ್ಕಿಂತ ಹೆಚ್ಚು ತಮಿಳುನಾಡಿನಲ್ಲಿ ರಾಹುಲ್ ಕಾಣಿಸಿಕೊಂಡಿದ್ದರು. 10 ವರ್ಷಗಳ ಆಡಳಿತ ವಿರೋಧಿ ಅಲೆ, ಜಯಲಲಿತಾರಂತಹ ನಾಯಕಿಯ ಕೊರತೆ, ಆಂತರಿಕ ಕಿತ್ತಾಟಗಳು ಎಐಎಡಿಎಂಕೆಯನ್ನು ಬಹುವಾಗಿ ಕಾಡಿದೆ. ಎಐಎಡಿಎಂಕೆ ಜತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ತನ್ನ ಮತಹಂಚಿಕೆ ಪ್ರಮಾಣ ಹೆಚ್ಚಿಸುವ ಜತೆಗೆ ಐದಾರು ಸೀಟುಗಳನ್ನು ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿತ್ತು. ರಾಜ್ಯ ಬಿಜೆಪಿ ಮುಖಂಡ ಸಿ.ಟಿ. ರವಿ ರಾಜ್ಯ ಚುನಾವಣಾ ಉಸ್ತುವಾರಿಯಾಗಿದ್ದರೆ, ಮಾಜಿ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ತ.ನಾಡಿನ ಯುವಕರ ಮಧ್ಯೆ ತಕ್ಕಮಟ್ಟಿಗೆ ಸಂಚಲನ ಸೃಷ್ಟಿಸಿದ್ದರು. ಅಣ್ಣಾಮಲೈ ತಾವು ಸ್ಪರ್ಧಿಸಿರುವ ಕ್ಷೇತ್ರದಿಂದ ಗೆದ್ದರೆ ಅದು ಬಿಜೆಪಿಯ ಹೆಗ್ಗಳಿಕೆಯೇ ಸರಿ. ಒಟ್ಟಿನಲ್ಲಿ, ಎಲ್ಲ ಸಮೀಕ್ಷೆಗಳು ಡಿಎಂಕೆ-ಕಾಂಗ್ರೆಸ್ ಮೈತ್ರಿ ಕ್ಲೀನ್​ಸ್ವೀಪ್ ಸಾಧನೆ ಪಕ್ಕಾ ಎನ್ನುತ್ತಿವೆ. ಸಮೀಕ್ಷೆಗಳ ಪ್ರಕಾರ ಪುದುಚೆರಿಯಲ್ಲೂ ಕಾಂಗ್ರೆಸ್ ನೆಲೆ ಕಳೆದುಕೊಳ್ಳಲಿದೆ. ನಾರಾಯಣ ಸ್ವಾಮಿ ನಾಯಕತ್ವ ಪಕ್ಷಕ್ಕೆ ಹಾನಿ ಮಾಡಿದೆ. ಇದೇ ಕಾರಣಕ್ಕೆ ಚುನಾವಣೆಯಲ್ಲೂ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಬಿಂಬಿಸಿರಲಿಲ್ಲ. ನಾರಾಯಣ ಸ್ವಾಮಿಯವರನ್ನು ಮುಖ್ಯಮಂತ್ರಿ ಎಂದು ಘೊಷಿಸಿದಲ್ಲಿ ಮೈತ್ರಿಯಿಂದ ಹೊರನಡೆಯುವುದಾಗಿ ಡಿಎಂಕೆ ಮುಖಂಡರು ಬೆದರಿಕೆ ಹಾಕಿದ್ದರು. ಏತನ್ಮಧ್ಯೆ, ಪ್ರಾದೇಶಿಕ ಪಕ್ಷವಾದ ಎನ್.ಆರ್. ಕಾಂಗ್ರೆಸ್ ನಾಯಕ ರಂಗಸ್ವಾಮಿ ಅವರೊಂದಿಗೆ ಮೈತ್ರಿ ಮಾಡಿಕೊಂಡ ಬಿಜೆಪಿ, ಎಐಎಡಿಎಂಕೆ ಅವರನ್ನೇ ಸಿಎಂ ಅಭ್ಯರ್ಥಿಯನ್ನಾಗಿ ಘೊಷಿಸಿತ್ತು. ಮತದಾನ ಮುನ್ನವೇ ಎನ್​ಡಿಎ ಗೆಲ್ಲುವ ಬಗ್ಗೆ ಮಾತುಗಳಿದ್ದವು. ಮತದಾನೋತ್ತರ ಸಮೀಕ್ಷೆಗಳೂ ಅದನ್ನೇ ಸಾರುತ್ತಿವೆ.
ಐದೂ ರಾಜ್ಯಗಳ ಮತದಾನೋತ್ತರ ಸಮೀಕ್ಷೆಗಳಲ್ಲಿ ತಮಿಳುನಾಡು ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳು ಕಾಂಗ್ರೆಸ್​ಗೆ ಭರವಸೆದಾಯಕ ವಾಗಿಲ್ಲ. ಬಿಜೆಪಿ ಬಂಗಾಳ ಮತ್ತು ಅಸ್ಸಾಂನಲ್ಲಿ ಮುನ್ನುಗ್ಗುವ ಚಿತ್ರಣವಿದೆ. ಎಡಪಕ್ಷಗಳು ಬಂಗಾಳದಲ್ಲಿ ನಾಮಾವಶೇಷಗೊಂಡು ದಕ್ಷಿಣದ ಕೇರಳದಲ್ಲಿ ಮಾತ್ರ ಅಸ್ತಿತ್ವ ಉಳಿಸಿಕೊಳ್ಳಲಿವೆ.
ಕೋಲ್ಕತ:ಪಶ್ಚಿಮ ಬಂಗಾಳದಲ್ಲಿ 8ನೇ ಮತ್ತು ಕೊನೆಯ ಹಂತದ ಚುನಾವಣೆ ಗುರುವಾರ ಮುಗಿದಿದೆ. ಮುರ್ಷಿದಾಬಾದ್, ಬೀರಭೂಮ್ ಮಾಲ್ಡಾ ಮತ್ತು ಕೋಲ್ಕತ ಜಿಲ್ಲೆಗಳ 35 ಕ್ಷೇತ್ರಗಳ 11,860 ಮತಗಟ್ಟೆಗಳಲ್ಲಿ ಶೇಕಡ 76ಕ್ಕೂ ಮತದಾನ ಆಗಿದೆ. ಕಣದಲ್ಲಿದ್ದ 283 ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಮತದಾನದ ವೇಳೆ ಹಲವೆಡೆ ಹಿಂಸಾಚಾರ ನಡೆದ ವರದಿ ಆಗಿದೆ.
ಉತ್ತರ ಕೋಲ್ಕತದ ಮಹಾಜತಿ ಸದನ್​ದಲ್ಲಿ ಸ್ಫೋಟ ಸಂಭವಿಸಿದ್ದು, ಬಾಂಬ್ ಎಸೆತ ಕಾರಣ ಎನ್ನಲಾಗಿತ್ತು. ಆದರೆ, ಇದು ಪಟಾಕಿ ಸಿಡಿತದಿಂದ ಉಂಟಾದ ಭಾರಿ ಸದ್ದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಾರ್ಚ್ 27ಕ್ಕೆ ಆರಂಭವಾದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಗುರುವಾರ ಸಂಪನ್ನವಾಗಿದೆ. ಅಸ್ಸಾಂನಲ್ಲಿ ಮಾರ್ಚ್ 27, ಏಪ್ರಿಲ್ 1 ಮತ್ತು 6ರಂದು, ಪಶ್ಚಿಮ ಬಂಗಾಳದಲ್ಲಿ ಎಲ್ಲ 8 ಹಂತ ಮತ್ತು ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಏಪ್ರಿಲ್ 6ರಂದು ಏಕಹಂತದಲ್ಲಿ ಮತದಾನ ನಡೆದಿತ್ತು.
ಕೇರಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾವು:ಕೇರಳದ ನೀಲಂಬೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ವಿ. ಪ್ರಕಾಶ್ (56) ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ. ಅವರು ಮಲ್ಲಪುರಂ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಆಗಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
