ನವದೆಹಲಿ:ಭೌಗೋಳಿಕ, ರಾಜಕೀಯ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ಬೆಳವಣಿಗೆಯ ಹಾದಿಯಲ್ಲಿ ಬಲವಾದ ಹೆಜ್ಜೆಗಳನ್ನು ಇರಿಸಿದೆ. ಅಲ್ಲದೆ, ಭಾರತದ ಆರ್ಥಿಕತೆಗೆ ಉಜ್ವಲ ಭವಿಷ್ಯವಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ ಮಂಡನೆಯ ಮುನ್ನಾದಿನವಾದ ಸೋಮವಾರ ಸಂಸತ್ತಿನಲ್ಲಿ 2023-24ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರ ಎಲ್​ಪಿಜಿ, ಪೆಟ್ರೋಲ್ ಮತ್ತು ಡೀಜಲ್ ಬೆಲೆ ಇಳಿಕೆ ಮಾಡಿದ್ದರಿಂದ ಸಗಟು ಇಂಧನ ಬೆಲೆಯೇರಿಕೆಗೆ ಕಡಿವಾಣ ಬಿದ್ದಿದೆ. 2025ರಲ್ಲಿ ಜಿಡಿಪಿ ಶೇಕಡ 6.5ರಿಂದ 7ರಷ್ಟು ಇರಲಿದೆ ಎಂದು ತಿಳಿಸಿದರು. 2023ರ ಆಗಸ್ಟ್​ನಲ್ಲಿ
ಎಲ್​ಪಿಜಿ ಸಿಲಿಂಡರ್ ದರವನ್ನು 200 ರೂ. ಹಾಗೂ 2024ರ ಮಾರ್ಚ್​ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್​ಗೆ 2 ರೂಪಾಯಿಯಷ್ಟು ಕಡಿಮೆ ಮಾಡಲಾಗಿತ್ತು. ಈ ಕ್ರಮ ಕೈಗೊಂಡ ಪರಿಣಾಮ ಸಗಟು ಇಂಧನ ಬೆಲೆಯೇರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಉದ್ಯೋಗ:ದೇಶದಲ್ಲಿ ಹೆಚ್ಚುತ್ತಿರುವ ವರ್ಕ್​ಫೋರ್ಸ್​ನ ಅಗತ್ಯಗಳನ್ನು ಈಡೇರಿಸಲು 2030ರವರೆಗೆ ವರ್ಷಕ್ಕೆ ಸರಾಸರಿ 78.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ದೇಶದ 65% ಜನಸಂಖ್ಯೆ 35 ವರ್ಷದೊಳಗಿನವರಾಗಿದ್ದು, ಉದ್ಯೋಗಸೃಷ್ಟಿಯ ಪ್ರಯತ್ನಗಳನ್ನು ತೀವ್ರಗೊಳಿಸಬೇಕಿದೆ. ಆದರೆ, ಯುವಕರಲ್ಲಿ ಕೌಶಲದ ಕೊರತೆ ಕಂಡುಬರುತ್ತಿದೆ. 51.25% ಯುವಕರಷ್ಟೇ ಉದ್ಯೋಗಕ್ಕೆ ಬೇಕಾದ ಕೌಶಲ ಹೊಂದಿದ್ದಾರೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.
ಇತಿಹಾಸ:ಭಾರತದ ಮೊದಲ ಆರ್ಥಿಕ ಸಮೀಕ್ಷೆ 1950-51ರ ಕೇಂದ್ರ ಬಜೆಟ್​ನ ಒಂದು ಭಾಗವಾಗಿ ಮಂಡಿಸಲಾಗಿತ್ತು. ಆದರೆ, 1964ರ ನಂತರ ಇದನ್ನು ಬಜೆಟ್​ನಿಂದ ಪ್ರತ್ಯೇಕಿಸಲಾಯಿತು ಮತ್ತು ಬಜೆಟ್​ನ ಮುನ್ನಾ ದಿನ ವಿತ್ತ ಸಚಿವರು ಮಂಡಿಸುವ ಪದ್ಧತಿ ಜಾರಿಗೆ ಬಂತು.
ಕೃಷಿ:ಕೆಟ್ಟ ಹವಾಮಾನ, ಜಲಮೂಲಗಳ ಕೊರತೆ ಮತ್ತು ಬೆಳೆನಷ್ಟದಿಂದ ಕೃಷಿ ಕ್ಷೇತ್ರ ಹಾನಿ ಅನುಭವಿಸಬೇಕಾಯಿತು. ಕೃಷಿ ಉತ್ಪನ್ನ ಮತ್ತು ಆಹಾರದ ಉತ್ಪನ್ನದ ಮೇಲೆ ಇದರ ವ್ಯಕ್ತಿರಿಕ್ತ ಪರಿಣಾಮವಾಯಿತು. ಹೀಗಾಗಿ ಆರ್ಥಿಕ ವರ್ಷ 2024ರಲ್ಲಿ ಆಹಾರ ಬೆಲೆಯೇರಿಕೆ 7.5%ರಷ್ಟಾಯಿತು. 2023ರಲ್ಲಿ ಇದು 6.6%ರಷ್ಟಿತ್ತು.
ಜಿಡಿಪಿ:ಆರ್​ಬಿಐ ಹಾಗೂ ಆರ್ಥಿಕ ತಜ್ಞರ ಅಂದಾಜುಗಳನ್ನು ಮೀರಿ 2023-24ಲ್ಲಿ ಆರ್ಥಿಕ ವೃದ್ಧಿ ದರ ಶೇಕಡ 8.2ರಷ್ಟು ದಾಖಲಾಗಿತ್ತು. ಆದರೆ, 2024-25ರಲ್ಲಿ ಬೆಳವಣಿಗೆ ದರ ಶೇ.6.5ರಿಂದ 7ರಷ್ಟು ಇರಲಿದೆ. ನಿರಂತರವಾಗಿ ಮೂರನೇ ವರ್ಷ ಜಿಡಿಪಿ ಶೇ.7ಕ್ಕಿಂತ ಹೆಚ್ಚು ದಾಖಲಾಗಿದೆ. 2025ರಲ್ಲಿ ಜಿಡಿಪಿ 7.2% ಇರಲಿದೆ ಎಂದು ಆರ್​ಬಿಐ ಕಳೆದ ತಿಂಗಳು ಅಂದಾಜು ವ್ಯಕ್ತಪಡಿಸಿದೆ.
ಸೆನ್ಸೆಕ್ಸ್ ದಾಖಲೆ:ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್​ಇ) ಸೆನ್ಸೆಕ್ಸ್ 2024ರಲ್ಲಿ ಶೇಕಡ 25ರಷ್ಟು ಬೆಳವಣಿಗೆ ಕಂಡಿದೆ. ಇದು 2025ರವರೆಗೂ ಮುಂದುವರಿಯುವ ವಿಶ್ವಾಸವಿದೆ. ಜು.3ರಂದು 30 ಷೇರುಗಳ ಇಂಡೆಕ್ಸ್ ದಿನದ ವಹಿವಾಟಿನಲ್ಲಿ 80 ಸಾವಿರದ ಗಡಿಯನ್ನು ದಾಟಿ, ಇತಿಹಾಸ ನಿರ್ವಿುಸಿದೆ. ದೇಶದ ಷೇರುಪೇಟೆಯ ಅದ್ಭುತ ಬೆಳವಣಿಗೆಯು ಜಾಗತಿಕ ರಾಜಕೀಯ, ಆರ್ಥಿಕ ಆಘಾತಕ್ಕೆ ಭಾರತ ನೀಡುತ್ತಿರುವ ದಿಟ್ಟ ಉತ್ತರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ನಿರ್ಮಲಾ ಸೀತಾರಾಮನ್, ಈ ಬೆಳವಣಿಗೆಯು ದೇಶದ ಸ್ಥಿರ ಆರ್ಥಿಕ ಪರಿಸ್ಥಿತಿಗೆ ಸಾಕ್ಷಿಯಾಗಿದೆ ಎಂದರು.
ಬಂಡವಾಳ ಮಾರುಕಟ್ಟೆ ಪಾತ್ರ ಮಹತ್ವದ್ದು:ಭಾರತದ ಬೆಳವಣಿಗೆಯ ಹಾದಿಯಲ್ಲಿ ಬಂಡವಾಳ ಮಾರುಕಟ್ಟೆಯ ಪಾತ್ರ ಮಹತ್ವದ್ದಾಗಿದ್ದು, ತಂತ್ರಜ್ಞಾನ, ನಾವೀನ್ಯ ಮತ್ತು ಡಿಜಿಟಲೀಕರಣದ ಮೂಲಕ ಇದು ಇನ್ನಷ್ಟು ವಿಸ್ತಾರವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡನೆಯ ವೇಳೆ ಹೇಳಿದರು. ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಾಗೂ ರಾಜಕೀಯ ಸಮಸ್ಯೆಗಳಿದ್ದರೂ ಭಾರತದ ಮಾರುಕಟ್ಟೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಜಾಗತೀಯ ರಾಜಕೀಯ ಸಂಘರ್ಷಗಳಿಂದ ಉಂಟಾದ ಅಪಾಯ, ಹೆಚ್ಚುತ್ತಿರುವ ಬಡ್ಡಿದರ ಮತ್ತು ಸರಕುಗಳ ಬೆಲೆ ಏರಿಕೆ ನಡುವೆಯೂ ಭಾರತದ ಬಂಡವಾಳ ಮಾರುಕಟ್ಟೆಯು ಜಗತ್ತಿನಲ್ಲಿ ವೃದ್ಧಿ ಕಾಣುತ್ತಿರುವ ಅತ್ಯುತ್ತಮ ಮಾರುಕಟ್ಟೆ ಎನಿಸಿಕೊಂಡಿದೆ ಎಂದು ವಿವರಿಸಿದರು.
.ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಮುಂದುವರಿದಿರುವುದು ರಾಜಕೀಯ ಸ್ಥಿರತೆ ಹಾಗೂ ನೀತಿ ನಿರಂತರತೆಯನ್ನು ತೋರಿಸುತ್ತದೆ ಎಂದು ಸಮೀಕ್ಷಾ ವರದಿ ಹೇಳಿದೆ. ಭೌಗೋಳಿಕ, ರಾಜಕೀಯ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ಬಲವಾದ ಹೆಜ್ಜೆಗಳನ್ನು ಇರಿಸುತ್ತಿದೆ.
.ಅನಿಶ್ಚಿತ ಜಾಗತಿಕ ಆರ್ಥಿಕ ಕಾರ್ಯಕ್ಷಮತೆಯ ಹೊರತಾಗಿಯೂ ಹಣಕಾಸು ವರ್ಷ 2023- 24ರಲ್ಲಿ ದೇಶೀಯ ಬೆಳವಣಿಗೆಯ ವಾಹಕಗಳು ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಿವೆ.
.ಭಾರತದ ಹಣಕಾಸು ಕ್ಷೇತ್ರದ ಭವಿಷ್ಯ ಉಜ್ವಲವಾಗಿದೆ ಎಂದು ಸಮೀಕ್ಷೆ ಹೇಳಿದೆ.
.ಸಾಮಾನ್ಯ ಮುಂಗಾರು ನಿರೀಕ್ಷಿಸಲಾಗಿದೆ. ಆಮದು ಪ್ರಮಾಣ ತಗ್ಗುವ ಸಾಧ್ಯತೆ ಇದೆ.
.ಖಾಸಗಿ ವಲಯ ಮತ್ತು ಬ್ಯಾಂಕ್​ಗಳ ಸ್ಥಿತಿ ಆರೋಗ್ಯಕರವಾಗಿದೆ. ಹೀಗಾಗಿ, ಇದು ಇನ್ನಷ್ಟು ಹೂಡಿಕೆಯನ್ನು ಆಕರ್ಷಿಸಲಿದೆ.
.ಬಂಡವಾಳ ಮಾರುಕಟ್ಟೆಯು ಭಾರತದ ಆರ್ಥಿಕ ಬೆಳವಣಿಗೆಯ ಹಾದಿಯಲ್ಲಿ ಪ್ರಮುಖ ಪಾತ್ರ.
.ಆರ್​ಬಿಐನಿಂದ ಹಣದುಬ್ಬರಕ್ಕೆ ಪೂರಕವಲ್ಲದ ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತಿದೆ.
.ಕೋವಿಡ್ ನಂತರದ ಆರ್ಥಿಕ ಚೇತರಿಕೆಯಲ್ಲಿ, ದೇಶೀಯ ಮಾರುಕಟ್ಟೆಯಲ್ಲಿನ ಭಾರಿ ಬೆಳವಣಿಗೆ ಪೂರಕವಾಗಿ ಪರಿಣಮಿಸಿದೆ.
.ಜಾಗತಿಕ ಅನಿಶ್ಚಿತತೆ ಹೊರತಾಗಿಯೂ ಭಾರತದ ನೀತಿಗಳು ಬೆಲೆಸ್ಥಿರತೆಯನ್ನು ಖಾತ್ರಿಪಡಿಸಲು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ.
.ತೆರಿಗೆ ಅನುಸರಣೆಯ ಲಾಭಗಳು ಮತ್ತು ಡಿಜಿಟಲೀಕರಣವು ಭಾರತ ಸರ್ಕಾರದ ಹಣಕಾಸಿನ ನಿರ್ವಹಣೆಯಲ್ಲಿ ಉತ್ತಮ ಸಮತೋಲನ ಸಾಧಿಸಲು ಸಹಾಯ ಮಾಡಿದೆ.
.ವ್ಯಾಪಾರ, ಹೂಡಿಕೆ ಮತ್ತು ಹವಾಮಾನ ವಿಷಯದಲ್ಲಿ ಪ್ರಮುಖ ಜಾಗತಿಕ ಸಮಸ್ಯೆಗಳಲ್ಲಿನ ಒಪ್ಪಂದಗಳು ಬಹಳಷ್ಟು ಸಮಸ್ಯೆ ಸೃಷ್ಟಿಸಿವೆ.
.ಅಲ್ಪಕಾಲಿಕ ಹಣದುಬ್ಬರವು ಆರಂಭವಾಗಿದೆ. ಭಾರತದಲ್ಲಿ ಬೇಳೆಕಾಳುಗಳ ಇಳುವರಿ ಕುಸಿದ ಪರಿಣಾಮ ಬೆಲೆಯೇರಿಕೆಯ ಬಿಸಿ ತಟ್ಟಿದೆ. ಬಡವರು ಮತ್ತು ಕಡಿಮೆ ಆದಾಯ ಹೊಂದಿರುವ ಗ್ರಾಹಕರು ಬೆಲೆಯೇರಿಕೆಯ ಬಿಸಿ ಅನುಭವಿಸುತ್ತಿದ್ದಾರೆ. ನೇರ ಲಾಭ ವರ್ಗಾವಣೆ ಮೂಲಕ ಈ ಸಮಸ್ಯೆಯನ್ನು ನಿರ್ವಹಿಸಬಹುದಾಗಿದೆ.
.ಭೌಗೋಳಿಕ ರಾಜಕೀಯ ಘರ್ಷಣೆಗಳ ಉಲ್ಬಣ ಮತ್ತು ಅವುಗಳ ಪರಿಣಾಮ ರಿಸರ್ವ್ ಬ್ಯಾಂಕ್ ಇಂಡಿಯಾದ (ಆರ್​ಬಿಐ) ಹಣಕಾಸು ನೀತಿ ನಿಲುವಿನ ಮೇಲೆ ಪ್ರಭಾವ ಬೀರಬಹುದು.
.ಹಣಕಾಸಿನ ವಲಯ ನಿರ್ಣಾಯಕ ಹಂತದಲ್ಲಿದೆ. ಜಾಗತಿಕವಾಗಿ ಅಥವಾ ಸ್ಥಳೀಯವಾಗಿ ಸೃಷ್ಟಿಯಾಗುವ ದುರ್ಬಲತೆಗಳಿಗೆ ಸಿದ್ಧರಾಗುವಂತೆ ಸಮೀಕ್ಷೆ ಸಲಹೆ ನೀಡಿದೆ.
.ಕೃತಕ ಬುದ್ಧಿಮತ್ತೆಯು ಎಲ್ಲ ಕೌಶಲ ಉದ್ಯಮ ಕ್ಷೇತ್ರಗಳಲ್ಲಿ ಕಾರ್ವಿುಕರ ಮೇಲೆ ಪ್ರಭಾವ ಬೀರಿದೆ.
.ಅನಾರೋಗ್ಯಕರ ಆಹಾರದಿಂದಾಗಿ ಶೇಕಡ 54ರಷ್ಟು ಕಾಯಿಲೆಗಳು ದೇಶಕ್ಕೆ ಹೊರೆಯಾಗಿವೆ. ಹೀಗಾಗಿ ಸಮತೋಲನ ಆಹಾರದತ್ತ ಹೊರಳುವ ಅಗತ್ಯವಿದೆ.
ಈ ಬಜೆಟ್ ಅಮೃತ ಕಾಲಕ್ಕೆ ಮಹತ್ವದ ಬಜೆಟ್ ಆಗಿದೆ. ಮುಂದಿನ 5 ವರ್ಷಗಳ ಮಾರ್ಗ ಸೂಚಿಯನ್ನು ಪ್ರಸಕ್ತ ಬಜೆಟ್ ರೂಪಿಸಲಿದೆ. ದೇಶದ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತೇವೆ. ಇದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಇಂದಿನ ಬಜೆಟ್ ನಮ್ಮ ವಿಕಸಿತ ಭಾರತದ ಕನಸಿಗೆ ಬುನಾದಿಯಾಗಿದೆ.
| ನರೇಂದ್ರ ಮೋದಿ ಪ್ರಧಾನಿ
ನಾವು ನಿರಾಶವಾದಿ ಅಲ್ಲ. ವಿಕಾಸದ ಬಗ್ಗೆ ಆಶಾ ವಾದಿಯಾಗಿದ್ದೇವೆ. ಹಾಗೆಯೇ ಸವಾಲುಗಳ ಕುರಿತಂತೆಯೂ ಎಚ್ಚರಿಕೆ ವಹಿಸಿದ್ದೇವೆ. ಪ್ರಸಕ್ತ ಜಾಗತಿಕ ಪರಿಸ್ಥಿತಿಯಲ್ಲಿ ಶೇಕಡ 7ರಷ್ಟು ಜಿಡಿಪಿ ದಾಖಲಿಸಲು ಜಾಗ್ರತೆಯಿಂದ ಆರ್ಥಿಕ ಹೆಜ್ಜೆಗಳನ್ನು ಇರಿಸಬೇಕಿದೆ. ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹೊಸ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸಹಕಾರಿಯಾಗಿ ಪರಿಣಮಿಸಲಿದೆ. ಹಾಗೆಯೇ ಉದ್ಯೋಗ ರಂಗದ ಮೇಲೆ ಎಐ ಸೃಷ್ಟಿಸಬಹುದಾದ ಸವಾಲುಗಳ ಕುರಿತಂತೆ ಸೂಕ್ತ ನಿಗಾ ವಹಿಸುವುದು ಅಷ್ಟೇ ಅಗತ್ಯವಾಗಿದೆ.
| ಅನಂತ್ ನಾಗೇಶ್ವರನ್ ಮುಖ್ಯ ಆರ್ಥಿಕ ಸಲಹೆಗಾರ
ವಾಲ್ಮೀಕಿ ನಿಗಮದ ಹಗರಣ: ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣಕ್ಕೆ ಸಂಸದ ಬೊಮ್ಮಾಯಿ ಆಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + twelve =
Remember me
