ನವದೆಹಲಿ:ದೇಶದ ನಗರಗಳ ಸ್ವಚ್ಛತೆ ಕುರಿತು ನಡೆಸುವ ಬೃಹತ್ ಸಮೀಕ್ಷೆ ಆಗಿರುವ ಸ್ವಚ್ಛ ಸರ್ವೆಕ್ಷಣಾದ 8ನೇ ಆವೃತ್ತಿಯ ಫಲಿತಾಂಶ ಪ್ರಕಟವಾಗಿದ್ದು, ಈ ಸಲವೂ ದೇಶದ ಅತ್ಯಂತ ಸ್ವಚ್ಛನಗರಿಯಾಗಿ ಮಧ್ಯಪ್ರದೇಶದ ಇಂದೋರ್ ಹೊರಹೊಮ್ಮಿದೆ. ಮಾತ್ರವಲ್ಲ, ಈ ಮೂಲಕ ಅದು ಸತತ ಏಳನೇ ಸಲ ಈ ಸ್ಥಾನ ತನ್ನದಾಗಿಸಿಕೊಂಡಿದೆ. ವಿಶೇಷವೆಂದರೆ ಇಂದೋರ್ ಜತೆ ಗುಜರಾತ್​ನ ಸೂರತ್ ನಗರವೂ ಮೊದಲನೇ ಸ್ಥಾನವನ್ನು ಹಂಚಿಕೊಂಡಿದ್ದು, ಇದೇ ಮೊದಲ ಸಲ ಪ್ರಥಮ ಸ್ಥಾನ ಗಳಿಸಿದೆ. ಈ ಹಿಂದಿನ ಎರಡೂ ವರ್ಷಗಳಲ್ಲಿ ಸೂರತ್ ಎರಡನೇ ಸ್ಥಾನ ಗಳಿಸಿತ್ತು.
ದೇಶದ ಮೂರನೇ ಅತ್ಯಂತ ಸ್ವಚ್ಛನಗರಿಯಾಗಿ ನವಿ ಮುಂಬೈ ಸ್ಥಾನ ಪಡೆದಿದೆ. ಈ ಮೂರೂ ನಗರಗಳು ಒಂದು ಲಕ್ಷಕ್ಕಿಂತಲೂ ಅಧಿಕ ಜನಸಂಖ್ಯೆಯ ವಿಭಾಗದಲ್ಲಿ ಈ ಸ್ಥಾನ ಗಳಿಸಿವೆ. ನವಿ ಮುಂಬೈ ಕಳೆದ ವರ್ಷವೂ ಮೂರನೇ ಸ್ಥಾನದಲ್ಲಿತ್ತು. ಒಂದು ಲಕ್ಷಕ್ಕಿಂತ ಮೇಲ್ಪಟ್ಟ ವರ್ಗದಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣ (ಜಿವಿಎಂಸಿ), ಮಧ್ಯಪ್ರದೇಶದ ಭೋಪಾಲ್, ಆಂಧ್ರಪ್ರದೇಶದ ವಿಜಯವಾಡ, ದೆಹಲಿಯ ನವದೆಹಲಿ (ಎನ್​ಡಿಎಂಸಿ), ಆಂಧ್ರಪ್ರದೇಶದ ತಿರುಪತಿ, ತೆಲಂಗಾಣದ ಗ್ರೇಟರ್ ಹೈದರಾಬಾದ್, ಮಹಾರಾಷ್ಟ್ರದ ಪುಣೆ ಕ್ರಮವಾಗಿ 4, 5, 6, 7, 8, 9, 10ನೇ ಸ್ಥಾನಗಳನ್ನು ಪಡೆದಿವೆ. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ಮಹಾರಾಷ್ಟ್ರದ ಸಾಸ್ವಾಡ್ ಅತ್ಯಂತ ಸ್ವಚ್ಛನಗರಿಯಾಗಿ ಹೊರಹೊಮ್ಮಿದೆ. ಛತ್ತೀಸ್​ಘಡದ ಪಠಾಣ್ ಹಾಗೂ ಮಹಾರಾಷ್ಟ್ರದ ಲೋನವಾಲಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.
ಕಾರ್ಯಕ್ರಮದ ವಿಶೇಷತೆಗಳು…:ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಕಲಾವಿದ ಸುದರ್ಶನ್ ಪಟ್ನಾಯಕ್ ಮತ್ತು ತಂಡವು ಸ್ವಚ್ಛ ಭಾರತದ ಪ್ರಯಾಣ, ಮೈಲಿಗಲ್ಲುಗಳು ಮತ್ತು ಸ್ಪೂರ್ತಿಯ ಬಗ್ಗೆ ಮರಳು ಕಲಾಕೃತಿಗಳನ್ನು ರಚಿಸಿ ಗಮನ ಸೆಳೆಯಿತು. ಸ್ವಸಹಾಯ ಗುಂಪಿನ ಸದಸ್ಯರು ಹಾಕಿದ ವರ್ಣರಂಜಿತ ಮಳಿಗೆಗಳು, ಕರಕುಶಲ, ಕಲಾಕೃತಿಗಳು ಮತ್ತು ತ್ಯಾಜ್ಯದಿಂದ ತಯಾರಿಸಿದ ಇತರ ಉತ್ಪನ್ನಗಳು ಆಕರ್ಷಣೆಯ ಕೇಂದ್ರವಾಗಿದ್ದವು. ಈ ಮಳಿಗೆಗಳಲ್ಲಿ ನವೀಕರಿಸಿದ ಬಟ್ಟೆ ಚೀಲಗಳಿಂದ ಹಿಡಿದು ಬಾಳೆ ಎಲೆಗಳ ಪ್ರದರ್ಶನಗಳವರೆಗೆ, ಬಿದಿರಿನ ಉತ್ಪನ್ನಗಳಿಂದ ಹಿಡಿದು ತ್ಯಾಜ್ಯದಿಂದ ತಯಾರಿಸಿದ ಆಭರಣಗಳವರೆಗೆ ಅನೇಕ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ ಇತ್ತೀಚಿನ ತಂತ್ರಜ್ಞಾನಗಳು ಮತ್ತು ಸಲಕರಣೆಗಳನ್ನು ಪ್ರದರ್ಶಿಸಲಾಯಿತು. ಕಸ ಗುಡಿಸುವ ಯಂತ್ರದಿಂದ ಹಿಡಿದು ಒಳಚರಂಡಿ ಸ್ವಚ್ಛಗೊಳಿಸುವ ರೊಬಾಟ್​ಗಳವರೆಗೆ, ತ್ಯಾಜ್ಯ ಸಂಗ್ರಹಣೆ ಮತ್ತು ಸಾರಿಗೆ ವಾಹನಗಳಿಂದ ಅತ್ಯಾಧುನಿಕ ರೋಬೋಟ್​ಗಳವರೆಗೆ ವಿವಿಧ ಸಾಧ್ಯತೆಗಳನ್ನು ಅನ್ವೇಷಿಸಲು ಈ ಕಾರ್ಯಕ್ರಮ ಸಹಾಯ ಮಾಡಿತು.
ಒಟ್ಟು 110 ಪ್ರಶಸ್ತಿಗಳ ಪ್ರದಾನ:ಸ್ವಚ್ಛ ಸರ್ವೆಕ್ಷಣಾ ಫಲಿತಾಂಶವನ್ನು ರಾಷ್ಟ್ರಪತಿ ದ್ರೌಪದಿ ಮುಮು ಅವರು ಗುರುವಾರ ದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ. 2016ರಲ್ಲಿ 73 ಪ್ರಮುಖ ನಗರಗಳನ್ನು ಒಳಗೊಂಡಂತೆ ಈ ಸಮೀಕ್ಷೆ ಆರಂಭಗೊಂಡಿದ್ದು, 2023ರಲ್ಲಿ 4,477 ನಗರಗಳನ್ನು ಒಳಗೊಂಡಂತೆ ಈ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ 3 ಸಾವಿರ ಮೌಲ್ಯಮಾಪಕರು ಭಾಗಿಯಾಗಿದ್ದರು. ಈ ಸಲ 24 ರಾಷ್ಟ್ರೀಯ, 20 ವಲಯ ಮತ್ತು 54 ರಾಜ್ಯಮಟ್ಟದ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಒಟ್ಟು 110 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕಸ ಹಾಕುವ ಸ್ಥಳ, ಕಸದ ನಿರ್ವಹಣೆ, ಕಸ ತಗ್ಗಿಸುವ, ಕಸ ಮರುಬಳಕೆ, ಮರುಸಂಸ್ಕರಣೆ ಮತ್ತು ಪೌರಕಾರ್ವಿುಕರ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳನ್ನು ಮಾನದಂಡವಾಗಿಸಿ ಈ ಸಮೀಕ್ಷೆ ನಡೆಸಲಾಗುತ್ತಿದೆ.
ವಾರಾಣಸಿ – ಪ್ರಯಾಗ್​ರಾಜ್​ಗೆ ಸ್ಥಾನ:ಸ್ವಚ್ಛತೆಯಲ್ಲಿ ದೇಶದಲ್ಲಿ ಟಾಪ್-3 ರಾಜ್ಯಗಳ ಪೈಕಿ ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್​ಗಢಗಳು ಸ್ಥಾನ ಪಡೆದಿವೆ. ರಾಜ್ಯದೊಳಗಿನ ಅತ್ಯಧಿಕ ಸ್ವಚ್ಛನಗರಿಗಳ ಪೈಕಿ ಕರ್ನಾಟಕದಿಂದ ಒಂದು ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯ ವಿಭಾಗದಲ್ಲಿ ಮೈಸೂರು ಹಾಗೂ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ವಿಭಾಗದಲ್ಲಿ ಹೊಸದುರ್ಗ ಸ್ಥಾನ ಪಡೆದಿದೆ. ಗಂಗಾಪಟ್ಟಣ ವಿಭಾಗದಲ್ಲಿ ವಾರಾಣಸಿ ಮೊದಲ ಮತ್ತು ಪ್ರಯಾಗ್​ರಾಜ್ ಎರಡನೇ ಸ್ಥಾನ ಪಡೆದಿವೆ.
ಕ್ಷಿಪ್ರಗತಿಯ ಸ್ವಚ್ಛನಗರ:ವೇಗವಾಗಿ ಬೆಳೆಯುತ್ತಿರುವ ಒಂದು ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯ ನಗರಗಳ ಪೈಕಿ ಗೋವಾದ ಪಣಜಿ ಹಾಗೂ ಆಂಧ್ರಪ್ರದೇಶದ ಗುಂಟೂರು ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಗಳಿಸಿವೆ. ಇದೇ ವಿಭಾಗದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರಗಳ ಪೈಕಿ ಮಧ್ಯಪ್ರದೇಶದ ನೌರೋಜಾಬಾದ್ ಮತ್ತು ಅಮರಕಂಟಕ್ ಮೊದಲ ಮತ್ತು 2ನೇ ಸ್ಥಾನ ಗಳಿಸಿವೆ.
ಸ್ವಚ್ಛ ಸರ್ವೆಕ್ಷಣೆಯಲ್ಲಿ ಪ್ರತಿಯೊಬ್ಬರ ಕೊಡುಗೆ ಮತ್ತು ಭಾಗಿ ಯಾಗುವಿಕೆ ಮಹತ್ವದ್ದಾಗಿದೆ. ತ್ಯಾಜ್ಯದಿಂದ ಸಂಪತ್ತಿಗೆ ಎಂಬುದು 2023ರ ಧ್ಯೇಯವಾಕ್ಯವಾಗಿದ್ದು, ತ್ಯಾಜ್ಯವನ್ನು ಸಂಪತ್ತಾಗಿಸುವ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಾಗಿದೆ.
| ದ್ರೌಪದಿ ಮುಮು ರಾಷ್ಟ್ರಪತಿ
ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ 2014ರಲ್ಲಿ ಶೇ. 15-16ರಷ್ಟು ಇದ್ದಿದ್ದು, ಅದು ಈಗ ಶೇ. 76ಕ್ಕೆ ತಲುಪಿದೆ. ಇನ್ನು 2-3 ವರ್ಷಗಳಲ್ಲಿ ಶೇ. 100 ವೈಜ್ಞಾನಿಕ ಸಂಸ್ಕರಣೆ ಸಾಧಿಸಲಾಗುವುದು.
| ಹರ್ದೀಪ್ ಸಿಂಗ್ ಪುರಿ ಕೇಂದ್ರ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
