ಲತಾ ಮುಂಚಿನ ಹೆಸರು ಹೇಮಾ. ತಂದೆ ದೀನಾನಾಥ ಮಂಗೇ ಶ್ಕರ್. ತಾಯಿ ಸುಧಾಮತಿ (ಸೇವಂತಿ). ಈಗಿನ ಮಧ್ಯಪ್ರದೇಶದ ಇಂದೋರ್ ಆಗ ಸ್ವತಂತ್ರ ರಾಜ್ಯ. ಅಲ್ಲಿನ ಸಿಖ್ ಮೊಹಲ್ಲಾದಲ್ಲಿ ಈ ಗಾನಮೂರುತಿಯ ಉದ್ಭವ. ಗೋವಾದ ಗೋಮಾಂತಕ ಮರಾಠ ಸಮಾಜಕ್ಕೆ ಸೇರಿದ ಕುಲ. ತಂದೆ ಸ್ವತಃ ಹಾಡುಗಾರ ಮತ್ತು ರಂಗನಟ. ಲತಾ ಮೊದಲನೆಯ ಮಗಳು. ನಂತರ ಮೀನಾ, ಆಶಾ, ಉಷಾ ಮತ್ತು ಹೃದಯನಾಥ್. ತನ್ನ ಐದನೇ ವಯಸ್ಸಿನಲ್ಲೇ ಲತಾ ತಂದೆಯ ನಾಟಕದಲ್ಲಿ ಅಭಿನಯಿಸುತ್ತಿದ್ದರು. ಅಂಥದ್ದೊಂದು ನಾಟಕ ‘ಭಾವಬಂಧನ್’ದಲ್ಲಿ ಲತಿಕಾ ಎಂಬ ಪಾತ್ರ ಮಾಡಿದ ಹೇಮಾ ಹೆಸರು ಲತಾ ಎಂದು ಬದಲಾಯಿತು. ಲತಾ ಶಾಲೆಗೆ ಸೇರಿದ ಮೊದಲ ದಿನದಿಂದಲೇ ಅಲ್ಲಿನ ಇತರ ಮಕ್ಕಳಿಗೆ ಪಾಠ ಹೇಳಿಕೊಡಲಾರಂಭಿಸಿದ್ದರು. ಶಿಕ್ಷಕಿ ಇದಕ್ಕೆ ಅವಕಾಶ ನೀಡದಿದ್ದಾಗ ಕೋಪಗೊಂಡ ಲತಾ ಮತ್ತೆ ಶಾಲೆಯ ಕಡೆಗೆ ತಲೆಹಾಕಲಿಲ್ಲ. 1940ರಲ್ಲಿ ಲತಾಗೆ 11 ವರ್ಷಗಳಾಗಿದ್ದಾಗ ತಂದೆ ಹೃದಯಾಘಾತದಿಂದ ನಿಧನರಾದರು. ನಂತರ ಮಂಗೇಶ್ಕರ್ ಕುಟುಂಬಕ್ಕೆ ಆತ್ಮೀಯರಾದ ‘ನವಯುಗ್ ಚಿತ್ರಪಟ್’ ಕಂಪನಿಯ ಮಾಲೀಕ ವಿನಾಯಕ ದಾಮೋದರ್ ಕರ್ನಾಟಕಿ ಈ ಕುಟುಂಬಕ್ಕೆ ಆಶ್ರಯ ಕಲ್ಪಿಸಿದರು. 1942ರಲ್ಲಿ ‘ಪಹಲಿ ಮಂಗಾಲಾ ಗಾವುರ್’ ಎಂಬ ಮರಾಠಿ ಸಿನಿಮಾದಲ್ಲೂ ಲತಾ ಅಭಿನಯಿಸಿದರು. 43ರಲ್ಲಿ ಮುದ್ರಿತಗೊಂಡ ‘ಮಾತಾ ಏಕ್ ಸಪೂತ್ ಕಿ ದುನಿಯಾ ಬದಲ್ ದೇತು …’ ಎಂಬುದು ಅವರು ಹಾಡಿದ ಮೊಟ್ಟಮೊದಲ ಹಿಂದಿ ಚಲನಚಿತ್ರ ಗೀತೆ.
1945ರಲ್ಲಿ ಮಾಸ್ಟರ್ ವಿನಾಯಕ ಕಂಪನಿ ಮುಂಬೈಗೆ ತೆರಳಿದ್ದರಿಂದ ಮಂಗೇಶ್ಕರ್ ಕುಟುಂಬವೂ ಮುಂಬೈ ಸೇರಿತು. ಅಲ್ಲಿ ಸುಪ್ರಸಿದ್ಧರಾಗಿದ್ದ ಉಸ್ತಾದ್ ಅಮಾನತ್ ಅಲಿ ಖಾನ್ ಎಂಬ ಹಿಂದುಸ್ತಾನಿ ಗಾಯಕರಲ್ಲಿ ಶಾಸ್ತ್ರೀಯ ಸಂಗೀತ ಕಲಿಯಲು ಗೊತ್ತುಮಾಡಿದರು. 1945ರಲ್ಲಿ ವಿನಾಯಕ ಅವರ ಮೊಟ್ಟಮೊದಲ ಹಿಂದಿ ಸಿನಿಮಾ ‘ಬಡೀ ಮಾ’ ಹೊರಬಂತು. ಅದರಲ್ಲಿ ಲತಾ ಮತ್ತು ಆಶಾ ಇಬ್ಬರೂ ಸಣ್ಣ ಪಾತ್ರ ವಹಿಸಿದ್ದರು. ಲತಾ ಈ ಸಿನಿಮಾಕ್ಕಾಗಿ ‘ಮಾತಾ ತೇರೆ ಚರಣೋ ಮೆ…’ ಎಂಬ ಭಜನೆಯನ್ನೂ ಹಾಡಿದರು. 1947ರಲ್ಲಿ ಭಾರತ ವಿಭಜನೆ ನಂತರ ಅಮಾನತ್ ಅಲಿ ಖಾನ್ ಪಾಕಿಸ್ತಾನಕ್ಕೆ ವಲಸೆ ಹೋದರು. ಆಗ ಲತಾ, ಉಸ್ತಾದ್ ಶಿಷ್ಯರಾದ ಪಂ.ತುಳಸೀದಾಸ ಶರ್ವ, ಬಡೇ ಗುಲಾಂ ಅಲಿ ಖಾನ್ ಅವರಲ್ಲಿ ಸಂಗೀತಾಭ್ಯಾಸ ಮುಂದುವರಿಸಿದರು.
ಲತಾ ಮದುವೆಯಾಗಿರಲಿಲ್ಲ. ಈ ಬಗ್ಗೆ ಹಲವು ಸಂದರ್ಭಗಳಲ್ಲಿ ಪತ್ರಕರ್ತರು, ಚಿತ್ರ ಜಗತ್ತಿನ ಆಪ್ತರು ಪ್ರಶ್ನಿಸಿದ್ದರು. ಅವರು ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಗಾಳಿಸುದ್ದಿಗಳೂ ಒಂದು ಕಾಲದಲ್ಲಿ ಚಾಲ್ತಿಯಲ್ಲಿದ್ದವು. ಈ ಬಗ್ಗೆ ಅವರು ಒಮ್ಮೆ ಸ್ಪಷ್ಟನೆ ಕೊಟ್ಟಿದ್ದರು: ‘ಮದುವೆ ನನ್ನ ಹಣೆಬರಹದಲ್ಲಿ ಇರಲಿಲ್ಲ ಅಷ್ಟೆ. ಚಿಕ್ಕವಳಿದ್ದಾಗ ಇಡೀ ಕುಟುಂಬವನ್ನು ಸಾಕಬೇಕಾದ ಬಹುದೊಡ್ಡ ಹೊಣೆಗಾರಿಕೆ ನನ್ನ ಮೇಲಿತ್ತು. ನಂತರ ಹೀಗೇ ಕಾಲ ಸರಿದು ಹೋಯಿತು. ಎಲ್ಲ ವಿಧಿಯಾಟ’.
ಆ ದಿನಗಳಲ್ಲಿ ಹಿಂದಿ ಹಾಡು-ಸಂಭಾಷಣೆ ಯಲ್ಲಿ ಉರ್ದು ಶಬ್ದಗಳೇ ಹೆಚ್ಚಾಗಿರುತ್ತಿದ್ದವು. ಲತಾ ಹಾಡುವ ಧಾಟಿಯನ್ನು ಹಿಂದಿ ಭಾಷಿಗರು ಒಪ್ಪುತ್ತಿರಲಿಲ್ಲ. ಇದರಿಂದ ಹೊರಬರಲೆಂದೇ ಶಫಿ ಎಂಬ ಉರ್ದು ಶಿಕ್ಷಕರನ್ನು ಲತಾ ನೇಮಿಸಿಕೊಂಡು ಉರ್ದು ಉಚ್ಚಾರಣೆ ಮತ್ತು ಭಾಷೆಯನ್ನು ಚೆನ್ನಾಗಿ ಕಲಿತರು. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. 50ರ ದಶಕದ ಹೊತ್ತಿಗೆ ಲತಾ ಹಿಂದಿ ಚಿತ್ರರಂಗದ ಬೇಡಿಕೆಯ ಗಾಯಕಿಯಾಗಿದ್ದರು. ಕಿಶೋರ್ ಕುಮಾರ್, ಮೊಹಮ್ಮದ್ ರಫಿ, ಮುಖೇಶ್ ಮುಂತಾದ ಜನಪ್ರಿಯ ಗಾಯಕರ ಜತೆಗೆ ಡ್ಯುಯೆಟ್​ಗಳಲ್ಲದೆ ಅವರ ಹಲವು ಸೋಲೋ ಹಾಡುಗಳು ಜನಪ್ರಿಯತೆಯ ಉತ್ತಂಗಕ್ಕೆ ಏರಿಸಿದ್ದವು. ಅನಿಲ್ ಬಿಸ್ವಾಸ್, ಶಂಕರ್-ಜೈಕಿಶನ್, ನೌಷಾದ್, ಎಸ್.ಡಿ.ಬರ್ಮನ್, ಸಿ.ರಾಮಚಂದ್ರ, ಹೇಮಂತ್​ಕುಮಾರ್, ಸಲೀಲ್ ಚೌಧರಿ, ಮದನ್ ಮೋಹನ್, ಲಕ್ಷ್ಮೀಕಾಂತ್ ಪ್ಯಾರೇಲಾಲ್, ಆರ್.ಡಿ. ಬರ್ಮನ್ ಮುಂತಾದ ಪ್ರಸಿದ್ಧ ಸಂಗೀತ ನಿರ್ದೇಶಕರ ನೂರಾರು ಹಾಡುಗಳಿಗೆ ಲತಾ ಜೀವ ತುಂಬಿದರು.
ಲತಾ ಮಂಗೇಶ್ಕರ್ ಅವರಿಗೆ ಕ್ರಿಕೆಟ್ ಮೇಲೆ ವಿಶೇಷವಾದ ಪ್ರೀತಿ ಇತ್ತು. 70-80ರ ದಶಕದಲ್ಲಿ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ವೀಕ್ಷಿಸಿದ್ದ ಅವರು, ಮುಂಬೈ ಕ್ರಿಕೆಟಿಗರಾದ ಸುನೀಲ್ ಗವಾಸ್ಕರ್, ದಿಲೀಪ್ ವೆಂಗ್​ಸರ್ಕಾರ್, ಸಚಿನ್ ತೆಂಡುಲ್ಕರ್ ಮುಂತಾದವರ ಜತೆಗೆ ಒಡನಾಟ ಹೊಂದಿದ್ದರು. ಸಚಿನ್ ತೆಂಡುಲ್ಕರ್ ಅವರಿಗಂತೂ ಲತಾ ಮಂಗೇಶ್ಕರ್ ಅವರನ್ನು ಕಂಡರೆ ವಿಶೇಷ ಪ್ರೀತಿ. ಲತಾ ಅವರಲ್ಲಿ ‘ಮಾ ಸರಸ್ವತಿ’ಯನ್ನು ಕಂಡಿದ್ದಾಗಿ ಸಚಿನ್ ಹೇಳಿಕೊಂಡಿದ್ದರು.
ಗಿನ್ನೆಸ್ ದಾಖಲೆ ಗೊಂದಲ:1948ರಿಂದ 1974ರವರೆಗೆ 20 ಭಾಷೆಗಳಲ್ಲಿ, 25000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಮೊದಲ ಗಾಯಕಿ ಎಂದು ಲತಾ ಮಂಗೇಶ್ಕರ್ ಅವರ ಹೆಸರನ್ನು ಗಿನ್ನೆಸ್ ದಾಖಲೆ ಪುಸ್ತಕಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ, ಅವರು ಅಷ್ಟೊಂದು ಹಾಡುಗಳನ್ನು ಹಾಡಿರುವುದಕ್ಕೆ ಸಾಧ್ಯವಿಲ್ಲ, ಅದು ಉತ್ಪ್ರೇಕ್ಷೆ ಎಂದು ವಿವಾದ ಎದ್ದಿತ್ತು.

70ರ ದಶಕದ ಹೊತ್ತಿಗೆ ಲತಾ ಮಂಗೇಶ್ಕರ್ ಅಕ್ಷರಶಃ ಗಾನಲೋಕದ ಸಾಮ್ರಾಜ್ಞಿಯಾಗಿದ್ದರು. ಚಿತ್ರಗೀತೆಗಳಷ್ಟೇ ಅಲ್ಲ, ಮೀರಾ ಭಜನೆಗಳು, ಜಾನಪದ ಗೀತೆಗಳು, ಗಣೇಶ ಆರತಿ ಗೀತೆಗಳು, ಸಂತ ತುಕಾರಾಂ ಅಭಂಗಗಳನ್ನು ಗಾಯನ ಜಗತ್ತಿಗೆ ಕಾಣಿಕೆಯಾಗಿ ನೀಡಿದರು. 80 ಮತ್ತು 90ರ ದಶಕದ ಹೊತ್ತಿಗೆ ಬಾಲಿವುಡ್​ನಲ್ಲಿ ಹಲವು ಗಾಯಕಿಯರು ಇದ್ದರು. ಹಾಗಂತ ಲತಾ ಮಂಗೇಶ್ಕರ್ ಅವರಿಗೆ ಬೇಡಿಕೆಯೇನೂ ಕಡಿಮೆಯಾಗಲಿಲ್ಲ. ಬೇರೆ ಗಾಯಕಿಯರಿದ್ದರೂ ಕೆಲವು ಚಿತ್ರಗಳ ಎಲ್ಲ ಹಾಡುಗಳನ್ನೂ ಅವರು ಹಾಡಿದ್ದರು. ‘ಲೇಖಿನ್’, ‘ಹೀನಾ’, ‘ಲಮ್ಹೇ’, ‘ಹಮ್ ಆಪ್ಕೇ ಹೈ ಕೌನ್’, ‘ದಿಲ್ ತೋ ಪಾಗಲ್ ಹೈ’ ಮುಂತಾದ ಚಿತ್ರಗಳ ಎಲ್ಲ ಹಾಡುಗಳನ್ನೂ ಅವರು ಹಾಡಿದ್ದರು. 2000ದ ನಂತರ ವಯಸ್ಸು, ಅನಾರೋಗ್ಯ ಹೀಗೆ ಹಲವು ಕಾರಣಗಳಿಂದ ಲತಾ ಮೊದಲಿನಷ್ಟು ಹಾಡುತ್ತಿರಲಿಲ್ಲ. ‘ಪುಕಾರ್’, ‘ಲಗಾನ್’, ‘ರಂಗ್ ದೇ ಬಸಂತಿ’ ಮೊದಲಾದ ಚಿತ್ರಗಳ ಹಾಡುಗಳು ಕೇಳುಗರ ಹೃದಯ ಸೂರೆಗೊಂಡಿದ್ದವು. ಮಧುರ್ ಭಂಡಾರ್ಕರ್ ನಿರ್ದೇಶನದ ‘ಜೈಲ್’ ಚಿತ್ರಕ್ಕೆ ಅವರು ಹಾಡಿದ ‘ದಾತಾ ಸುನ್ ಲೇ …’ ಅವರು ಹಾಡಿದ ಕೊನೆಯ ಹಾಡಾಯಿತು. ಆ ನಂತರ ಅವರು ಸಿನಿಮಾಗೆ ಹಾಡದಿದ್ದರೂ ಉದ್ಯಮಿ ಮುಕೇಶ್ ಅಂಬಾನಿ ಮಗಳ ಮದುವೆಗೆ ಗಾಯತ್ರಿ ಮಂತ್ರ ಹಾಡಿದ್ದರು. 2019ರಲ್ಲಿ ಭಾರತ ಸೇನೆಗೆ ಹಾಡಿದ ‘ಸೌಗಂಧ್ ಇಸ್ ಮಿಟ್ಟೀ ಕಿ …’ ಅವರ ಕೊನೆಯ ರೆಕಾರ್ಡಿಂಗ್ ಆಯಿತು. ಇತ್ತೀಚಿನ ವರ್ಷಗಳಲ್ಲಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. 2015ರಲ್ಲಿ ಅವರು ಹಲವು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಕ್ರಮೇಣ ಚೇತರಿಸಿಕೊಂಡಿದ್ದರೂ, ಜನವರಿಯಲ್ಲಿ ಕೋವಿಡ್​ಗೆ ತುತ್ತಾಗಿ ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು.
ರಾಜ್ಯಸಭಾ ಸದಸ್ಯೆ:1999ರಲ್ಲಿ ರಾಜ್ಯಸಭಾ ಸದಸ್ಯೆಯಾಗಿ ಲತಾ ನೇಮಕಗೊಂಡರೂ ಕಲಾಪಗಳಲ್ಲಿ ಸರಿಯಾಗಿ ಭಾಗವಹಿಸುತ್ತಿರಲಿಲ್ಲ. ಈ ಕಾರಣದಿಂದ ಅವರು ಟೀಕೆ-ಟಿಪ್ಪಣಿಯನ್ನೂ ಎದುರಿಸಬೇಕಾಯಿತು. ಲತಾ ಸಭಾಧ್ಯಕ್ಷರಿಗೆ ಪತ್ರ ಬರೆದು ಅನಾರೋಗ್ಯದ ನಿಮಿತ್ತ ತಾವು ಗೈರು ಹಾಜರಾಗಿದ್ದಾಗಿಯೂ, ಸರ್ಕಾರದ ಸಂಬಳ, ಭತ್ಯೆ, ಮನೆ, ಇತರ ಯಾವ ಸೌಲಭ್ಯವನ್ನೂ ಪಡೆಯುತ್ತಿಲ್ಲವೆಂದೂ ಸ್ಪಷ್ಟಪಡಿಸಿದ್ದರು. 1984ರಲ್ಲಿ ಮಧ್ಯಪ್ರದೇಶ ಸರ್ಕಾರ ಲತಾ ಮಂಗೇಶ್ಕರ್ ಪ್ರಶಸ್ತಿ ಸ್ಥಾಪಿಸಿತು. 1992ರಲ್ಲಿ ಮಹಾರಾಷ್ಟ್ರ ಸರ್ಕಾರವೂ ಲತಾ ಮಂಗೇಶ್ಕರ್ ಹೆಸರಿನಲ್ಲಿ ಪ್ರಶಸ್ತಿ ಕೊಡಲು ಆರಂಭಿಸಿತು.
ಕನ್ನಡದಲ್ಲಿ ಎರಡು ಹಾಡು:ಕನ್ನಡದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ (ಹಳೆಯ) ಚಿತ್ರದಲ್ಲಿ ‘ಬೆಳ್ಳನೆ ಬೆಳಗಾಯಿತು’ ಮತ್ತು ‘ಎಲ್ಲಾರೆ ಇರುತೀರೋ ಎಂದಾರೆ ಬರುತೀರೋ’ ಎಂಬ ಎರಡು ಗೀತೆಗಳನ್ನು ಲತಾ ಮಂಗೇಶ್ಕರ್ ಹಾಡಿದ್ದಾರೆ. 60ರ ದಶಕದಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು.
1989ರಲ್ಲಿ ಅವರು ಲತಾ ಮಂಗೇಶ್ಕರ್ ಮೆಡಿಕಲ್ ಫೌಂಡೇಶನ್ ಸ್ಥಾಪಿಸಿದ್ದರು. ತಂದೆ ಪಂಡಿತ್ ದೀನಾನಾಥರು ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ, ಆರ್ಥಿಕ ಸಮಸ್ಯೆಗಳ ಕಾರಣದಿಂದ ನಿಧನರಾಗಿದ್ದರು. ಇದರಿಂದಾಗಿ ನೊಂದಿದ್ದ ಲತಾ ಅವರು ಕುಟುಂಬ ಜ್ಞಾನ ಪ್ರಬೋಧಿನಿ ಮೆಡಿಕಲ್ ಟ್ರಸ್ಟ್ ಜತೆ ಸೇರಿ ಪುಣೆಯಲ್ಲಿ ಮಾಸ್ಟರ್ ದೀನಾನಾಥ ಮಂಗೇಶ್ಕರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಿದರು.
ಲತಾ ಮಂಗೇಶ್ಕರ್ ಭಾರತದ 20 ಭಾಷೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಗೀತೆ ಗಳನ್ನು ಹಾಡಿದ್ದಾರೆ. ಈ ಪೈಕಿ ನೂರಾರು ಹಾಡುಗಳು ಎಂದಿಗೂ ಮರೆಯದ ಗೀತೆ ಗಳ ಸಾಲಿನಲ್ಲಿವೆ. ಅಂಥ ಕೆಲವು ಇಲ್ಲಿವೆ.
1963ರ ಜನವರಿ 27. ಆಗ ಜವಾಹರಲಾಲ್ ನೆಹರೂ ಪ್ರಧಾನಿ. ಆಗಷ್ಟೇ ಇಂಡೋ-ಚೀನಾ ಯುದ್ಧ ಮುಗಿದು ಎರಡ್ಮೂರು ತಿಂಗಳಾಗಿತ್ತು. ಯುದ್ಧದಲ್ಲಿ ನಮ್ಮ ಸೈನಿಕರು ವೀರಾವೇಶದಿಂದ ಹೋರಾಡಿದರು. ಅನೇಕರ ಬಲಿದಾನವಾಯಿತು. ನಂತರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಗೀತರಚನೆಕಾರ ಪ್ರದೀಪ್ ಆ ದಿನಕ್ಕೆಂದೇ ವಿಶೇಷ ಹಾಡನ್ನು ರಚಿಸಿದ್ದರು. ಸಿ.ರಾಮಚಂದ್ರ ರಾಗ ಸಂಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಹಾಡು ಆರಂಭವಾಯಿತು. ‘ಏ ಮೇರೆ ವತನ್ ಕೇ ಲೋಗೋ…’ ಲತಾ ಮಂಗೇಶ್ಕರ್ ಅವರ ಸುಶ್ರಾವ್ಯ ಕಂಠದಲ್ಲಿ ಅಲೆಅಲೆಯಾಗಿ ಮೂಡಿಬಂದ ಭಾವಪೂರ್ಣ ಹಾಡನ್ನು ಕೇಳಿ ನೆಹರೂ ಅವರಿಗೆ ದುಃಖ ಸಹಿಸಲಾಗಲಿಲ್ಲ. ಕಣ್ಣಲ್ಲಿ ನೀರಿಳಿಯತೊಡಗಿತು. ‘ಎಂಥ ನಿರಭಿಮಾನಿಯ ಹೃದಯದಲ್ಲೂ ದೇಶಪ್ರೇಮ ಬಡಿದೆಬ್ಬಿಸುವ ಗೀತೆ. ನೀವದನ್ನು ತುಂಬಾ ಸುಂದರವಾಗಿ ಹಾಡಿದಿರಿ’ ಎಂದರು. ತನ್ನ ಬದುಕಿನ ಅತ್ಯಂತ ಶ್ರೇಷ್ಠ ಘಳಿಗೆ ಇದಾಗಿತ್ತು ಎಂದು ಲತಾಜಿ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು. ‘ಏ ಮೇರೆ ವತನ್ ಕೆ ಲೋಗೋ …’ ಹಾಡು ಲತಾಗೆ ‘ಭಾರತದ ಕೋಗಿಲೆ’ ಎಂಬ ಖ್ಯಾತಿ ತಂದುಕೊಟ್ಟರೆ, ಪ್ರದೀಪ್ ಅವರಿಗೆ ರಾಷ್ಟ್ರಕವಿ ಗೌರವ ತಂದುಕೊಟ್ಟಿತು.

ಪ್ರೀತಿ ತುಂಬಿದ, ದಯಾಪೂರ್ಣರಾದ ಲತಾ ದೀದಿ ನಮ್ಮೊಂದಿಗೆ ಇಲ್ಲ ಎನ್ನುವುದು ಅತ್ಯಂತ ದುಃಖದ ವಿಷಯ. ಅವರ ನಿಧನವು ತುಂಬಲಾರದ ನಿರ್ವಾತವನ್ನು ಸೃಷ್ಟಿಸಿದೆ. ಮಂತ್ರಮುಗ್ಧಗೊಳಿಸುವ ಕಂಠಸಿರಿಯ, ಭಾರತದ ಸಾಂಸ್ಕೃತಿಕ ಮೇರು ಶಿಖರವಾದ ಅವರನ್ನು ಮುಂದಿನ ತಲೆಮಾರುಗಳು ಸದಾ ಸ್ಮರಿಸುತ್ತವೆ.
|ನರೇಂದ್ರ ಮೋದಿಪ್ರಧಾನಿ
ಮುಂಬೈ:‘ಭಾರತದ ನೈಟಿಂಗೇಲ್’ ಎಂದೇ ಖ್ಯಾತರಾದ ಗಾಯಕಿ ಲತಾ ಮಂಗೇಶ್ಕರ್ (92) ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ 8.12ರ ವೇಳೆಗೆ ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆ ಶಿವಾಜಿ ಪಾರ್ಕ್​ನಲ್ಲಿ ಭಾನುವಾರ ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು. ಬಹುಅಂಗಾಂಗ ವೈಫಲ್ಯದ ಕಾರಣ ಲತಾ ನಿಧನರಾಗಿದ್ದಾರೆ ಎಂದು ಡಾ. ಪ್ರತೀತ್ ಸಮ್ದಾನಿ ತಿಳಿಸಿದ್ದಾರೆ. ಕೋವಿಡ್ ಸೋಂಕಿನ ಲಘು ಲಕ್ಷಣವಿದ್ದ ಅವರನ್ನು ಜನವರಿ 8ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರಿಗೆ ನ್ಯುಮೋನಿಯಾ ಕೂಡ ತಗುಲಿತ್ತು. ಅಂದಿನಿಂದ ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತಿತ್ತು.
ಲತಾ ಗೌರವಾರ್ಥ ಕೇಂದ್ರ ಸರ್ಕಾರ ಎರಡು ದಿನ ಶೋಕಾಚರಣೆ ಘೋಷಿಸಿದ್ದು, ಭಾನುವಾರ ಮತ್ತು ಸೋಮವಾರ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು. ಸರ್ಕಾರಿ ಕಾರ್ಯಕ್ರಮಗಳನ್ನು ಈ ಎರಡೂ ದಿನ ರದ್ದು ಮಾಡಲಾಗಿದೆ.
ಆಸ್ಪತ್ರೆಯಿಂದ ಲತಾ ಅವರ ಪಾರ್ಥಿವ ಶರೀರವನ್ನು ಪೆಡರ್ ರಸ್ತೆಯಲ್ಲಿರುವ ಅವರ ‘ಪ್ರಭು ಕುಂಜ’ ನಿವಾಸಕ್ಕೆ ಮೊದಲು ತೆಗೆದುಕೊಂಡು ಹೋಗಲಾಯಿತು. ಅಲ್ಲಿಂದ ಶಿವಾಜಿ ಪಾರ್ಕ್​ನಲ್ಲಿ ಸಂಜೆವರೆಗೆ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಸಿನಿಮಾ, ಸಂಗೀತ, ರಾಜಕೀಯ, ಉದ್ಯಮ ಮುಂತಾಗಿ ವಿವಿಧ ವಲಯಗಳ ಗಣ್ಯರು ಅಂತಿಮ ದರ್ಶನ ಪಡೆದರು.
ರಾಜ್ಯದಲ್ಲಿ ರಾಷ್ಟ್ರಧ್ವಜ ಅರ್ಧಕ್ಕೆ, ಮನರಂಜನಾ ಕಾರ್ಯಕ್ರಮಗಳಿಲ್ಲ…
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎರಡು ದಿನ ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಿದೆ. ಸೋಮವಾರ ಯಾವುದೇ ಅಧಿಕೃತ ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳಿರುವುದಿಲ್ಲ ಹಾಗೂ ಸರ್ಕಾರದ ಎಲ್ಲ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುತ್ತದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಸೂಚನೆ ಹೊರಡಿಸಿದೆ.
ದೇಶದ ಸಾರಸ್ವತಲೋಕದ ಮಿನುಗುತಾರೆ ಲತಾ ಮಂಗೇಶ್ಕರ್. ಕಾಲಾತೀತವಾಗಿ ಗಾನಸ್ವರವನ್ನು ಶ್ರೀಮಂತಗೊಳಿಸಿದವರು. ‘ಏ ಮೇರೆ ವತನ್ ಕೆ ಲೋಗೋ’ ಹಾಡು ಕೇಳಿದಾಗಲೆಲ್ಲ ಕಣ್ಣಲ್ಲಿ ನೀರು ಬರುತ್ತದೆ. ಎಲ್ಲರ ಮನೆಮನಗಳಲ್ಲೂ ಸದಾ ನೆಲೆಸಿರುತ್ತಾರೆ.
|ಬಸವರಾಜ ಬೊಮ್ಮಾಯಿಸಿಎಂ
ಲತಾ ಮಂಗೇಶ್ಕರ್ ಅವರು ಕಂಠಸಿರಿಯ ಮೂಲಕ ಇಡೀ ದೇಶದ ಗಮನ ಸೆಳೆದವರು. ಅವರು ನಿಧನರಾದರೂ ಹಾಡುಗಳ ಮೂಲಕ ಸದಾ ಜೀವಂತವಾಗಿರುತ್ತಾರೆ.
|ಎಚ್.ಡಿ. ದೇವೇಗೌಡಮಾಜಿ ಪ್ರಧಾನಿ
ಮಧುರ ಕಂಠದ ಮೂಲಕ ದಶಕಗಳಿಂದ ಜನಮನವನ್ನು ರಂಜಿಸಿದ್ದ ಲತಾ ಅವರ ನಿಧನದಿಂದ ನನ್ನಂತಹ ಕೋಟ್ಯಂತರ ಅಭಿಮಾನಿಗಳ ಮನಸ್ಸಿಗೆ ಆಘಾತವಾಗಿದೆ. ಅವರು ಅಗಲಿದರೂ ಕಂಠಸಿರಿಯ ಮೂಲಕ ನಮ್ಮೊಳಗೆ ಲತಾ ದೀದಿ ಅಜರಾಮರ.
|ಸಿದ್ದರಾಮಯ್ಯಪ್ರತಿಪಕ್ಷದ ನಾಯಕ
ಲತಾ ಮಂಗೇಶ್ಕರ್ ನಿಧನ ಅತೀವ ನೋವನ್ನು ಉಂಟುಮಾಡಿದೆ. ಗಾನಕೋಗಿಲೆಯ ನಿಧನ ನಿಜಾರ್ಥದಲ್ಲಿ ಭಾರತೀಯ ಸಂಗೀತ ಲೋಕದ ಪಾಲಿಗೆ ಯುಗಾಂತ್ಯ
|ಬಿ.ಎಸ್. ಯಡಿಯೂರಪ್ಪಮಾಜಿ ಮುಖ್ಯಮಂತ್ರಿ
ಲತಾ ಮಂಗೇಶ್ಕರ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರದ ಸಚಿವರು, ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ, ಎನ್​ಸಿಪಿ ನಾಯಕ ಶರದ್ ಪವಾರ್ ಸೇರಿದಂತೆ ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಸಚಿನ್ ತೆಂಡುಲ್ಕರ್ ಸೇರಿ ಅನೇಕ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ. ಲತಾ ದೀದಿ ಮೃತಪಟ್ಟಿದ್ದಾರೆಂಬ ವಿಷಯ ತಿಳಿದ ಕೂಡಲೇ ಸಾವಿರಾರು ಜನರು ಬ್ರಿಚ್ ಕ್ಯಾಂಡಿ ಆಸ್ಪತ್ರೆಯ ಸುತ್ತ ಜಮಾಯಿಸಿದರು. ಸಂಜೆ ಮುಂಬೈಗೆ ಆಗಮಿಸಿದ ಪ್ರಧಾನಿ ಮೋದಿ, ಲತಾ ಅವರ ಅಂತಿಮ ದರ್ಶನ ಪಡೆದರು.
‘ಲತಾ ಜೀ ನಿಧನ ಆಘಾತ ತಂದಿದೆ. ವಿವಿಧ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಅವರು ಭಾರತದ ಸುಗಂಧವನ್ನು ಸ್ಪುರಿಸಿದ ಮೇರು ಚೇತನ. ತಲೆಮಾರುಗಳಿಗೆ ದಾರಿದೀಪವಾಗಿ, ಭಾವಸ್ಪೂರ್ತಿಯ ಕಿರಣವಾಗಿದ್ದಾರೆ. ಅವರ ಸಾಧನೆಗಳು ಹೋಲಿಕೆಗೆ ನಿಲುಕದು’ ಎಂದು ರಾಷ್ಟ್ರಪತಿ ಕೋವಿಂದ ಹೇಳಿದ್ದಾರೆ. ಬಾಲಿವುಡ್ ಪ್ರಮುಖರಲ್ಲಿ ಅಮಿತಾಭ್ ಬಚ್ಚನ್, ವಹೀದಾ ರೆಹಮಾನ್, ನಾನಾ ಪಾಟೇಕರ್ ಇತರರು ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six + fourteen =
Remember me
