ಕಾಬುಲ್:ಎರಡು ದಶಕಗಳ ಸುದೀರ್ಘ ಸೇನಾ ಸಂಘರ್ಷ ಕೊನೆಗೊಳಿಸಿದ ಅಮೆರಿಕ, ಅಫ್ಘನ್ ನೆಲವನ್ನು ಮಂಗಳವಾರ ಸಂಪೂರ್ಣವಾಗಿ ತಾಲಿಬಾನ್ ವಶಕ್ಕೊಪ್ಪಿಸಿದೆ. ಅಮೆರಿಕ ಸೇನೆ ಕಾಬುಲ್ ವಿಮಾನ ನಿಲ್ದಾಣ ತೆರವುಗೊಳಿಸುತ್ತಿದ್ದಂತೆ, ಅದನ್ನು ತಾಲಿಬಾನಿಗಳು ಸಂಪೂರ್ಣ ವಶಕ್ಕೆ ತೆಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿ ವಿಜಯೋತ್ಸವ ಆಚರಿಸಿದರು. ಅಫ್ಘನ್ ಅತಿಕ್ರಮಿಸುವವರಿಗೆಲ್ಲ ಇದೊಂದು ಪಾಠ ಎಂದು ವಿಜಯಘೋಷವನ್ನೂ ಮೊಳಗಿಸಿದರು.
ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸುದ್ದಿಗಾರರ ಜತೆಗೆ ಮಾತನಾಡಿ, ಅಫ್ಘಾನಿಸ್ತಾನಕ್ಕೆ ಅಭಿನಂದನೆಗಳು. ಈ ವಿಜಯವು ನಮಗೆಲ್ಲರಿಗೂ ಸೇರಿದ್ದು. ದೇಶವನ್ನು ಅತಿಕ್ರಮಿಸುವ ಎಲ್ಲ ಅತಿಕ್ರಮಣಕಾರರಿಗೆ ತಾಲಿಬಾನ್​ನ ಈ ವಿಜಯವು ಒಂದು ಪಾಠವಾಗಿರುತ್ತದೆ. ಅಮರಿಕ ಮಾತ್ರವಲ್ಲದೆ ಇಡೀ ಜಗತ್ತಿನೊಂದಿಗೆ ಉತ್ತಮ ಬಾಂಧವ್ಯ ಸಂಪಾದಿಸಲು ಅಫ್ಘನ್ ಕಾತರವಾಗಿದೆ. ಎಲ್ಲರೊಂದಿಗೂ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದುವ ವಿಶ್ವಾಸವಿದೆ. ನಮ್ಮ ಸೇನೆಯೂ ಸಭ್ಯ ರೀತಿಯಲ್ಲಿ ನಡೆದುಕೊಳ್ಳುವುದನ್ನು ಕಲಿಯಬೇಕಾಗಿದೆ.
ಇನ್ನೊಂದೆಡೆ, ತಾಲಿಬಾನ್ ವಶವಾದ ಅಫ್ಘನ್​ನಿಂದ ಅಮೆರಿಕ ಮತ್ತು ನ್ಯಾಟೋ ಯೋಧರು ಮತ್ತು ಜನರ ಸ್ಥಳಾಂತರಕ್ಕೆ ನಿಗದಿಯಾಗಿದ್ದ ಅವಧಿ ಕೇವಲ 15 ದಿನ ಮಾತ್ರವಾಗಿತ್ತು. ಈ ಸ್ಥಳಾಂತರ ಕಾರ್ಯಾಚರಣೆ ಅವಧಿಯಲ್ಲಿ ಉಗ್ರರು ಕಾಬುಲ್ ವಿಮಾನ ನಿಲ್ದಾಣದ ಸಮೀಪ ನಡೆಸಿದ ಅವಳಿ ಬಾಂಬ್ ದಾಳಿಗೆ ಅಮೆರಿಕದ 13 ಯೋಧರು ಮತ್ತು 169 ಅಫ್ಘನ್ನರು ಬಲಿಯಾದರು. ಅಫ್ಘನ್​ನಲ್ಲಿ ಬಾಕಿ ಉಳಿದಿರುವ ಅಮೆರಿಕನ್ನರ ಸಂಖ್ಯೆ 100-200ರ ಆಸುಪಾಸಿನಲ್ಲಿದೆ. ಅಫ್ಘನ್ ನೆಲ ಬಿಡುವ ಮುನ್ನ 27 ಹಮ್ವೀಸ್ ಮತ್ತು 73 ವಿಮಾನಗಳನ್ನು ಅನ್ಯರು ಉಪಯೋಗಿಸಲು ಸಾಧ್ಯವಾಗದಂತೆ ಮಾಡಲಾಗಿದೆ. ಇದೇ ರೀತಿ ಕೌಂಟರ್ ರಾಕೆಟ್, ಆರ್ಟಿಲರಿ ಮತ್ತು ಮೋರ್ಟಾರ್ ಸಿಸ್ಟಮ್ ಅನ್ನು ಕೂಡ ಸ್ಥಗಿತಗೊಳಿಸಲಾಗಿದೆ ಎಂದು ಅಮೆರಿಕ ಸೇನಾ ಮೂಲಗಳು ತಿಳಿಸಿವೆ.
ಪಂಜ್​ಶೀರ್​ನಲ್ಲಿ ತಾಲಿಬಾನ್ ದಾಳಿ: ಅಮೆರಿಕ ಸೇನೆ ಅಫ್ಘನ್ ಬಿಟ್ಟ ಬೆನ್ನಲ್ಲೆ ತಾಲಿಬಾನಿಗಳು ಪಂಜ್​ಶೀರ್ ಮೇಲೆ ಸೋಮವಾರ ತಡ ರಾತ್ರಿ ದಾಳಿ ನಡೆಸಿದರು. ಪಂಜ್​ಶೀರ್​ನ ಯೋಧರ ಪ್ರತಿರೋಧ ಮುಂದುವರಿದಿದ್ದು, 7-8 ತಾಲಿಬಾನಿಗಳು ಹತರಾಗಿದ್ದಾರೆ ಎಂದು ಅಹಮದ್ ಮಸೂದ್ ವಕ್ತಾರ ಫಾಹಿಂ ದಷ್ಟಿ ಹೇಳಿದ್ದಾರೆ. ಪಂಜ್​ಶೀರ್ ಭಾಗದಲ್ಲಿ ಇಂಟರ್​ನೆಟ್ ಸೇವೆಗಳನ್ನು ತಾಲಿಬಾನ್ ಸ್ಥಗಿತಗೊಳಿಸಿತ್ತು. ಅಫ್ಘನ್​ನ ಮಾಜಿ ಉಪಾದ್ಯಕ್ಷ ಅಮ್ರುಲ್ಲಾ ಸಾಲ್ಹೇ ತಮ್ಮ ಟ್ವಿಟರ್​ನಲ್ಲಿ ಅಲ್ಲಿನ ದೃಶ್ಯಗಳನ್ನು, ಫೋಟೋಗಳನ್ನು ಶೇರ್ ಮಾಡುವುದನ್ನು ತಡೆಯಲು ತಾಲಿಬ್ ಈ ಕ್ರಮ ಕೈಗೊಂಡಿತ್ತು.
ಕಾಬುಲ್ ವಿಮಾನ ನಿಲ್ದಾಣದಿಂದ ಹೊರಟ ಅಮೆರಿಕದ ಕೊನೆಯ ವಿಮಾನವನ್ನು ಏರಿದ ಕೊನೆಯ ಇಬ್ಬರು ವ್ಯಕ್ತಿಗಳು ಜಗತ್ತಿನ ಗಮನಸೆಳೆದಿದ್ದಾರೆ. ಅಮೆರಿಕದ ಮೇಜರ್ ಜನರಲ್ ಕ್ರಿಸ್ಟೋಫರ್ ಡೊನಾಹ್ಯೂ ಅವರ ಹಸಿರು ಮಿಶ್ರಿತ ಭೂತಾಕಾರದ ಫೋಟೋ ವೈರಲ್ ಆಗಿದೆ. ಇವರು ಅಮೆರಿಕ ಸೇನೆಯ 82ನೇ ಏರ್​ಬೋರ್ನ್ ಡಿವಿಷನ್​ನ ಕಮಾಂಡರ್. ಇವರ ಜತೆಗೆ ಕೊನೆಯದಾಗಿ ವಿಮಾನ ಏರಿದ ಇನ್ನೊಬ್ಬ ವ್ಯಕ್ತಿ ಅಮೆರಿಕದ ಹಂಗಾಮಿ ರಾಯಭಾರಿ ರೋಸ್ ವಿಲ್ಸನ್.
ಪಾಕಿಸ್ಥಾನದಲ್ಲಿ ಅಮೆರಿಕ ಸೇನೆ ತಾತ್ಕಾಲಿಕವಾಗಿ ಮೊಕ್ಕಾಂ ಹೂಡಿದೆ. ಅದರ ಯೋಧರಿಗೆ, ಅಧಿಕಾರಿಗಳಿಗೆ 21ರಿಂದ 30 ದಿನಗಳ ಅವಧಿಯ ವೀಸಾವನ್ನಷ್ಟೇ ನೀಡಲಾಗಿದೆ. ಅವರು ಅದಕ್ಕಿಂತ ಹೆಚ್ಚು ಕಾಲ ಇಲ್ಲಿ ಇರಲಾರರು ಎಂದು ಪಾಕಿಸ್ತಾನದ ಗೃಹ ಸಚಿವ ಶೇಖ್ ರಷೀದ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ. ಕಾಬುಲ್​ನಲ್ಲಿ ಉಗ್ರ ನಿಗ್ರಹಕ್ಕಾಗಿ ಪಾಕ್ ನೆಲದಿಂದಲೇ ಅಮೆರಿಕ ಸೇನೆ ಡ್ರೋನ್ ದಾಳಿ ನಡೆಸಿತ್ತು ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ಬಂದಿದೆ.
ಅಫ್ಘನ್ ನೆಲದಿಂದ ಅಮೆರಿಕ ಸೋಮವಾರ ಮಧ್ಯರಾತ್ರಿ ಹಿಂದಿರುಗಿದ ಬೆನ್ನಲ್ಲೆ, ಅಮೆರಿಕದ ಸೇನಾ ಹೆಲಿಕಾಪ್ಟರ್ ಹಾರಾಟ ನಡೆಸಿತ್ತು. ಅದನ್ನು ತಾಲಿಬಾನಿಗಳು ಚಲಾಯಿಸಿದ್ದು, ಅದರಲ್ಲಿ ಮನುಷ್ಯ ಶರೀರ ಒಂದು ನೇತಾಡುತ್ತಿತ್ತು. ಇದರ ವಿಡಿಯೋವನ್ನು ತಾಲಿಬಾನಿಗಳು ತಮ್ಮ ಟ್ವಿಟರ್ ಹ್ಯಾಂಡಲ್​ನಲ್ಲಿ ಪ್ರಕಟಿಸಿದ್ದಾರೆ. ಇದು ನಮ್ಮ ವಾಯುಪಡೆ. ಕಂದಹಾರ್ ನಗರದಲ್ಲಿ ವಾಯುಪಡೆ ಕಾಪ್ಟರ್​ನ ಗಸ್ತು ಹಾರಾಟ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಮನುಷ್ಯನನ್ನೇ ನೇತು ಹಾಕಿದ್ದರಾ ಅಥವಾ ಶವವನ್ನು ನೇತುಹಾಕಿ ಹಾರಾಟ ನಡೆಸಿದ್ದರಾ ಎಂಬುದು ಸ್ಪಷ್ಟವಾಗಿಲ್ಲ.
ಆಡಳಿತ ಮಾದರಿ ಪರಿಶೀಲನೆ:ಅಫ್ಘನ್​ನಲ್ಲಿ ಯಾವ ಆಡಳಿತ ಮಾದರಿ ಅಳವಡಿಸಿಕೊಳ್ಳಬೇಕು ಎಂಬುದರ ಪರಿಶೀಲನೆ ನಡೆಯತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಎಲ್ಲ ಪಾಲುದಾರರೊಂದಿಗೆ ಮಾತುಕತೆ, ಚರ್ಚೆ ಮಾಡಲಾಗುತ್ತಿದೆ. ಎಲ್ಲರಿಗೂ ಒಪ್ಪಿಗೆಯಾಗುವ ಆಡಳಿತ ಮಾದರಿಯನ್ನು ತಾಲಿಬಾನ್ ಅಳವಡಿಸಿಕೊಳ್ಳಲಿದೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಮಂಗಳವಾರ ತಿಳಿಸಿದ್ದಾರೆ.
ಐಎಸ್​ಐ, ತಾಲಿಬಾನಿಗಳ ಬಲೆಗೆ ಅಫ್ಘನ್ ಯೋಧರು:ಭಾರತದಿಂದ ಅಫ್ಘನ್ ಸೇನೆಗೆ ಶಸ್ತ್ರಾಸ್ತ್ರಗಳು ಲಭ್ಯವಾಗುತ್ತಿದ್ದ ರೀತಿಯನ್ನು, ಅದರ ಕೊಂಡಿಯನ್ನು ಪತ್ತೆ ಹಚ್ಚಲು ಐಎಸ್​ಐ ಮತ್ತು ತಾಲಿಬಾನಿಗಳು ಮುಂದಾಗಿದ್ದಾರೆ. ಹೀಗಾಗಿ ಎನ್​ಡಿಎಸ್​ಗೆ ಸಂಬಂಧಿಸಿದ ಎಲ್ಲ ಅಫ್ಘನ್ ಯೋಧರನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಐಎಸ್​ಐ ಮತ್ತು ತಾಲಿಬಾನ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿವೆ. ತಾಲಿಬಾನಿಗಳ ಹೇಳಿಕೆಗೂ ವರ್ತನೆಗೂ ಸಂಬಂಧವಿಲ್ಲ. ಈಗಾಗಲೇ ಎನ್​ಡಿಎಸ್​ನ ಕೆಲವು ಹಿರಿಯ ಅಧಿಕಾರಿಗಳನ್ನು ಹತ್ಯೆ ಮಾಡಿದ್ದಾರೆ. ಐಎಸ್​ಐ ಕೂಡ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ನ್ಯಾಷನಲ್ ಡೈರೆಕ್ಟರೇಟ್ ಆಫ್ ಸೆಕ್ಯೂರಿಟಿ (ಎನ್​ಡಿಎಸ್) ಮೂಲಗಳು ತಿಳಿಸಿವೆ.
ವಿಶ್ವನೋಟ ಅಫ್ಘನ್ ಕಡೆಗೆ ಪಾಕ್ ಚಿತ್ತ ಕಾಶ್ಮೀರದೆಡೆಗೆ:ಜಗತ್ತಿನ ಗಮನಪೂರ್ತಿ ಅಫ್ಘನ್ ವಿದ್ಯಮಾನ ಗಳತ್ತ ನೆಟ್ಟಿದೆ. ಈ ಸಂದರ್ಭವನ್ನು ಉಪಯೋಗಿಸಿ ಕೊಂಡು ಪಾಕ್ ತನ್ನ ಚಿತ್ತವನ್ನು ಕಾಶ್ಮೀರದ ಕಡೆಗೆ ನೆಟ್ಟಿದೆ. ಪಾಕ್ ಮೂಲದ ಉಗ್ರ ಸಂಘಟನೆಗಳಾದ ಜೈಷ್ ಏ ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೊಯ್ಬಾ (ಎಲ್​ಇಟಿ)ಗಳು ಉಗ್ರರನ್ನು ಕಾಶ್ಮೀರದೊಳಕ್ಕೆ ತಳ್ಳುವ ಪ್ರಯತ್ನ ನಡೆಸಿವೆ. ಭಾರತದ ಗಡಿ ಭಾಗದಲ್ಲಿ ಟೆರರ್ ಲಾಂಚ್ ಪ್ಯಾಡ್​ಗಳು ಸಕ್ರಿಯವಾಗಿವೆ. ಈ ವರ್ಷ ಫೆಬ್ರವರಿಯಲ್ಲಿ ಏರ್ಪಟ್ಟ ಕದನವಿರಾಮ ಒಪ್ಪಂದದ ಉಲ್ಲಂಘನೆ ಇತ್ತೀಚಿನ ಒಂದು ತಿಂಗಳ ಅವಧಿಯಲ್ಲಿ ಹೆಚ್ಚಾಗಿದೆ. ಗುಪ್ತಚರ ಮಾಹಿತಿ ಪ್ರಕಾರ, ಸದ್ಯ ಎಲ್​ಒಸಿ ಬಳಿ ಭಾರತಕ್ಕೆ ನುಸುಳಲು 21 ಉಗ್ರರು ಸಿದ್ಧವಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಡುರಂಡ್ ಲೈನ್​ನಲ್ಲಿ ಪಾಕ್ ಬೇಲಿಗೆ ಆಕ್ಷೇಪ:ಅಫ್ಘನ್ ಮತ್ತು ಪಾಕ್ ನಡುವೆ 2,640 ಕಿ.ಮೀ. ಉದ್ದದ ಗಡಿ ಭಾಗವಿದೆ. ಈ ಗಡಿ ರೇಖೆಯನ್ನು ಡುರಂಡ್ ಲೈನ್ ಎಂದು ಗುರುತಿಸಲಾಗಿದ್ದು, ಅಲ್ಲಿ ಪಾಕ್ ಬೇಲಿ ಅಳವಡಿಸಿರುವ ಬಗ್ಗೆ ಅಫ್ಘನ್​ನ ಹಿಂದಿನ ಆಡಳಿತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ತಾಲಿಬಾನ್ ಅನ್ನು ಈ ವಿಚಾರವಾಗಿ ಮನವೊಲಿಸುವುದಕ್ಕೆ ಪಾಕಿಸ್ತಾನ ತೀವ್ರವಾಗಿ ಪ್ರಯತ್ನ ನಡೆಸಿದೆ. ತಾಲಿಬಾನ್ ನಾಯಕತ್ವಕ್ಕೂ ಈ ವಿಚಾರದಲ್ಲಿ ಸಹಮತ ಇಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಅಭಾ ಏರ್​ಪೋರ್ಟ್ ಮೇಲೆ ಡ್ರೋನ್ ದಾಳಿ:ಸೌದಿ ಅರೇಬಿಯಾದ ಅಭಾ ವಿಮಾನ ನಿಲ್ದಾಣದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಎರಡು ಡ್ರೋನ್ ದಾಳಿ ನಡೆದಿದೆ. ಈ ದಾಳಿಯಲ್ಲಿ ಕನಿಷ್ಠ 8 ಜನ ಗಾಯಗೊಂಡಿದ್ದಾರೆ. ಅಲ್ಲದೆ, ಒಂದು ನಾಗರಿಕ ವಿಮಾನ ಹಾನಿಗೀಡಾಗಿದೆ. ಯೆಮೆನ್ ಜತೆಗಿನ ಸಂಘರ್ಷದ ಪರಿಣಾಮ ಇದು ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೂ ಮೊದಲ ಡ್ರೋನ್ ದಾಳಿ ಯೆಮನ್​ನಲ್ಲಿರುವ ಇರಾನ್ ಬೆಂಬಲಿತ ಶಿಟ್ಟೆ ಹೌತಿ ಬಂಡಕೋರರ ಕೃತ್ಯ ಎಂದು ಆರೋಪಿಸಲಾಗಿತ್ತು. ಆ ದಾಳಿಯಿಂದ ಯಾವುದೇ ಹಾನಿ ಉಂಟಾಗಿರಲಿಲ್ಲ. ಕೆಲವು ದಿನಗಳ ಹಿಂದೆ ಸೌದಿ ಅರೇಬಿಯಾ ಕ್ಷಿಪಣಿ, ಡ್ರೋನ್ ದಾಳಿ ನಡೆಸಿ ಯೆಮೆನ್ ಬಂಡುಕೋರರ ಪೈಕಿ 30 ಜನರನ್ನು ಹತ್ಯೆ ಮಾಡಿತ್ತು.
ಭಾರತ ಎಚ್ಚರದಿಂದಿರಬೇಕು:ಅಫ್ಘನ್​ನಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಲು ಭಾರತ ಪ್ರಯತ್ನಿಸುತ್ತಿತ್ತು. ಭಾರತಕ್ಕೆ ಅಥವಾ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಬೆದರಿಕೆ ಗ್ಯಾರೆಂಟಿ. ಐಎಂಎಯಲ್ಲಿ ತರಬೇತಿ ಪಡೆದವರನ್ನು ಸಂದೇಹದಿಂದಲೇ ನೋಡುತ್ತಿದ್ದಾರೆ. ಈಗ ಎನ್​ಡಿಎಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮನೆ ಮನೆ ತಲಾಶ್ ಶುರುಮಾಡಿರುವ ತಾಲಿಬಾನಿಗಳು, ಶತ್ರುದಮನದ ಕಾರ್ಯಕ್ಕೆ ಮುಂದಾಗಿವೆ. ತಾಲಿಬಾನ್ ಮತ್ತು ಐಎಸ್​ಐಗಳು ಒಟ್ಟಾಗಿ ಆಟ ಪ್ರಾರಂಭಿಸಿರುವ ಕಾರಣ ಭಾರತ ಎಚ್ಚರಿಕೆಯ ಹೆಜ್ಜೆ ಇರಿಸಬೇಕು ಎಂದು ಎನ್​ಡಿಎಸ್ ಮೂಲಗಳು ಎಚ್ಚರಿಸಿವೆ.
ಜೈಶಂಕರ್ ನೇತೃತ್ವದಲ್ಲಿ ಉನ್ನತ ಸಮಿತಿ ರಚನೆ:ಅಫ್ಘನ್ ಬಿಕ್ಕಟ್ಟಿನ ಸಂಬಂಧ, ಅಲ್ಲಿನ ವಿದ್ಯಮಾನಗಳ ಮೇಲೆ ನಿಗಾ ಇರಿಸುವುದಕ್ಕಾಗಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಸಮಿತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಚಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಸೇನೆಯ ನಾಯಿಗಳನ್ನು ಬಿಟ್ಟು ತೆರಳಿದ ಅಮೆರಿಕ!
ಅಫ್ಘನ್​ನಲ್ಲಿ 20 ವರ್ಷ ಕಾರ್ಯಾಚರಣೆ ನಡೆಸಿದ ಅಮೆರಿಕ ಸೇನೆ ಅಲ್ಲಿಂದ ಹಿಂದಿರುಗುವ ವೇಳೆ, ತನ್ನ ಸೇವಾ ನಾಯಿಗಳನ್ನು ತ್ಯಜಿಸಿ ಹೋಗಿದೆ. ಅಮೆರಿಕ ಸೇನೆಯ 12 ಕ್ಕೂ ಹೆಚ್ಚು ನಾಯಿಗಳು ಅಫ್ಘನ್​ನಲ್ಲಿ ಅನಾಥವಾಗಿವೆ. ಅಮೆರಿಕ ಸೇನೆಯ ಈ ನಡೆಯ ಬಗ್ಗೆ ಪ್ರಾಣಿ ದಯಾ ಸಂಘಟನೆಗಳು ಟೀಕೆ ವ್ಯಕ್ತಪಡಿಸಿವೆ. ಈ ನಾಯಿಗಳನ್ನು ಸಾಗಿಸುವುದಕ್ಕೆ ಅಮೆರಿಕದ ‘ವೆಟರನ್ ಶೀಪ್​ಡಾಗ್ಸ್ ಆಫ್ ಅಮೆರಿಕ’ ಎಂಬ ಸಂಘಟನೆ ಈಗ ಕಾರ್ಯಪ್ರವೃತ್ತವಾಗಿದೆ.
ಅಮೆರಿಕ ಹೆಸರಿಗಷ್ಟೆ ಸೂಪರ್ ಪವರ್:ವಿಶ್ವದ ದೊಡ್ಡಣ, ಸೂಪರ್ ಪವರ್ ಎಂಬಿತ್ಯಾದಿ ವಿಶೇಷಣಗಳಿಂದ ಗುರುತಿಸಿಕೊಳ್ಳುವ ಅಮೆರಿಕ ಹೆಸರಿಗಷ್ಟೆ ಸೂಪರ್ ಪವರ್. ಅದು ಈಗ ಮಿನಿ ಪವರ್ ಆಗಲು ನಿರ್ಧರಿಸಿದೆ. ಎರಡು ದಶಕದ ಹೋರಾಟಕ್ಕೆ ರ್ತಾಕ ಅಂತ್ಯ ಒದಗಿಸದೇ ಹಿಂದಿರುಗಿದೆ ಎಂದು ಅಫ್ಘನ್ ಮಾಜಿ ಅಧ್ಯಕ್ಷ ಅಮ್ರುಲ್ಲಾ ಸಾಲ್ಹೇ ಟೀಕಿಸಿದ್ದಾರೆ.
ಭಾರತ ಮತ್ತು ತಾಲಿಬಾನ್ ಆಡಳಿತದ ಅಫ್ಘನ್ ನಡುವೆ ಮಂಗಳವಾರ ದೋಹಾದಲ್ಲಿ ಇದೇ ಮೊದಲ ಬಾರಿ ಉನ್ನತಮಟ್ಟದ ಸಭೆ ನಡೆಯಿತು ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಕತಾರ್​ನಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ದೋಹಾದಲ್ಲಿ ತಾಲಿಬಾನ್ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್​ರೆೈ ಜತೆಗೆ ಮಾತುಕತೆ ನಡೆಸಿದರು. ತಾಲಿಬಾನ್ ನಾಯಕರ ಮನವಿ ಮೇರೆಗೆ ನಡೆದ ಮಾತುಕತೆ ಇದಾಗಿತ್ತು. ಅಫ್ಘನ್ ನೆಲದಿಂದ ಅಮೆರಿಕ ಮತ್ತು ನ್ಯಾಟೊ ಪಡೆಗಳು ಸಂಪೂರ್ಣವಾಗಿ ಹಿಂತೆಗೆದ ಬಳಿಕ ನಡೆದ ಮಹತ್ವದ ಮಾತುಕತೆ ಇದಾಗಿದೆ.
ಅಫ್ಘನ್ ನೆಲವನ್ನು ಯಾವುದೇ ರೀತಿಯಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಮತ್ತು ಉಗ್ರ ಚಟುವಟಿಕೆಗಳಿಗೆ ಒದಗಿಸದಂತೆ ತಾಲಿಬಾನ್ ನಾಯಕರ ಜತೆಗಿನ ಮಾತುಕತೆಯಲ್ಲಿ ಕಳಕಳಿ ವ್ಯಕ್ತಪಡಿಸಲಾಗಿದೆ. ಅಲ್ಲದೆ, ಅಫ್ಘನ್​ನಲ್ಲಿರುವ ಭಾರತೀಯರ ಶೀಘ್ರ ಮತ್ತು ಸುರಕ್ಷಿತ ವಾಪಸಾತಿ, ಭೌಗೋಳಿಕ ಸುರಕ್ಷತೆ ಮತ್ತು ಭದ್ರತಾ ವಿಚಾರಗಳು ಚರ್ಚೆಗೆ ಬಂದಿದ್ದವು. ಅಫ್ಘನ್​ನಿಂದ ಭಾರತಕ್ಕೆ ಬರಲು ಇಚ್ಛಿಸುವ ಅಫ್ಘನ್ನರನ್ನೂ ಬಿಡುವಂತೆ ಮಿತ್ತಲ್ ಆಗ್ರಹಿಸಿರುವುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + twenty =
Remember me
