ಕಾಬುಲ್:ಅಮೆರಿಕ ಮತ್ತು ಮಿತ್ರಪಡೆಗಳು ಅಫ್ಘನ್ ತೊರೆಯಲು ಇನ್ನೊಂದು ದಿನ (ಮಂಗಳವಾರ) ಬಾಕಿ ಇರುವಾಗಲೇ ಕಾಬುಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಾಲಿಬಾನಿಗಳ ಹಿಡಿತಕ್ಕೆ ಒಳಪಟ್ಟಿದೆ. ಏರ್​ಪೋರ್ಟ್ ನಲ್ಲಿರುವವರಿಗೆ ಮಾತ್ರ ದೇಶದಿಂದ ಹೊರಹೋಗಲು ಅವಕಾಶ ಸಿಗುವ ಸಾಧ್ಯತೆ ಇದೆ. ಹೊಸದಾಗಿ ಏರ್​ಪೋರ್ಟ್​ಗೆ ಬರುವವರನ್ನು ತಾಲಿಬಾನ್​ಗಳು ತಡೆಯುತ್ತಿದ್ದಾರೆ. ಆದರೆ, ವಿದೇಶಿ ನಾಗರಿಕರಿಗೆ ಇಂಥ ನಿರ್ಬಂಧ ಇಲ್ಲ ಎನ್ನಲಾಗಿದೆ. ವಿಮಾನ ನಿಲ್ದಾಣದಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಇದ್ದಾರೆಂದು ಹೇಳಲಾಗುತ್ತಿದೆ. ಈ ಮಧ್ಯೆ, ಅಮೆರಿಕದ ಸರಕು ಸಾಗಣೆ ವಿಮಾನಗಳ ಹಾರಾಟ ಹೆಚ್ಚಳವಾಗಿದೆ. ಕಳೆದೆರಡು ವಾರದಿಂದ 1.14 ಲಕ್ಷಕ್ಕೂ ಹೆಚ್ಚು ಜನರನ್ನು ಅಮೆರಿಕ ಸ್ಥಳಾಂತರ ಮಾಡಿದೆ. ಎರಡು ದಶಕಗಳ ಕಾಲ ಅಫ್ಘನ್​ನಲ್ಲಿದ್ದ ಅಮೆರಿಕ ಮತ್ತು ನ್ಯಾಟೋ ಪಡೆಗಳು ಆಗಸ್ಟ್ ಅಂತ್ಯಕ್ಕೆ ಸಂಪೂರ್ಣವಾಗಿ ವಾಪಸಾಗಲಿವೆ ಎಂದು ಅಮೆರಿಕ ಅಧ್ಯಕ್ಷ ಬೈಡೆನ್ ಘೋಷಿಸಿದ್ದರು.
ಬ್ರಿಟನ್ ಪಡೆಗಳ ವಾಪಸಾತಿ ಪೂರ್ಣ:ಅಫ್ಘನ್​ನಲ್ಲಿ ಎರಡು ದಶಕ ದಿಂದ ನ್ಯಾಟೊ ಪಡೆಯ ಭಾಗವಾಗಿ ಬೀಡು ಬಿಟ್ಟಿದ್ದ ಬ್ರಿಟನ್ ಸೇನೆ ಸಂಪೂರ್ಣವಾಗಿ ಸ್ವದೇಶಕ್ಕೆ ಹಿಂದಿರುಗಿದೆ. ರಾಯಲ್ ಏರ್​ಫೋರ್ಸ್​ನ ವಿಮಾನವು ಕಾಬುಲ್ ವಿಮಾನ ನಿಲ್ದಾಣದಿಂದ ಶನಿವಾರ ರಾತ್ರಿ ಹೊರಟು ಆಕ್ಸಫರ್ಡ್​ಶೈರ್​ನ ಬ್ರೖೆಜ್ ನಾರ್ಟನ್​ಗೆ ಬಂದು ತಲುಪಿದೆ. ಈ ವಿಮಾನದಲ್ಲಿ ಕಾಬುಲ್​ನಲ್ಲಿದ್ದ ಬ್ರಿಟನ್ ರಾಯಭಾರಿ ಸರ್ ಲಾರಿ ಬ್ರಿಸ್ಟಾವ್, ವೈಸ್ ಅಡ್ಮಿರಲ್ ಸರ್ ಬೆನ್ ಕೀ ಕೂಡ ವಾಪಸಾಗಿದ್ದಾರೆ. ಅಫ್ಘನ್​ನಲ್ಲಿ ಏನನ್ನು ಮಾಡಲು ಬಯಸಿದ್ದೆವೋ ಅದನ್ನು ಮಾಡಲು ಆಗಲಿಲ್ಲ ಎಂಬ ವ್ಯಥೆ ಇದೆ ಎಂದು ಬೆನ್ ಕೀ ಹೇಳಿದ್ದಾರೆ.
ಸದ್ಯದಲ್ಲೇ ತಾಲಿಬಾನ್ ಸಂಪುಟ:ಅಮೆರಿಕ ಸೇನೆ ಹಿಂದಿರುಗುವ ಕಾಲ ಸನಿಹವಾಗುತ್ತಿರುವಂತೆಯೇ ಅಫ್ಘನ್​ನಲ್ಲಿ ಹೊಸ ಸಂಪುಟ ರಚಿಸುವುದಾಗಿ ತಾಲಿಬಾನ್ ಶನಿವಾರ ಘೋಷಿಸಿದೆ. ದೇಶದ ಆರ್ಥಿಕತೆ ಶೋಚನೀಯವಾಗಿದೆ. ಹೊಸ ಸರ್ಕಾರ ರಚನೆ ಆಗುತ್ತಿದ್ದಂತೆ ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾನೆ. ಆದರೆ, ನೂತನ ಸಂಪುಟ ನಿರ್ದಿಷ್ಟವಾಗಿ ಯಾವಾಗ ರಚನೆಯಾಗಲಿದೆ ಎಂಬ ವಿವರ ನೀಡಿಲ್ಲ. ಒಂದೆರಡು ವಾರ ಆಗಬಹುದು ಎಂದು ತಿಳಿಸಿದ್ದಾನೆ. ತುರ್ತು ಸೇವೆಗಳು ಸ್ಥಗಿತವಾಗಬಾರದು ಎಂಬ ಕಾರಣದಿಂದ ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸೆಂಟ್ರಲ್ ಬ್ಯಾಂಕ್​ಗಳಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದಿದ್ದಾನೆ. ಐಸಿಸ್ ಹೋರಾಟಗಾರರ ಮೇಲೆ ಅಮೆರಿಕ ನಡೆಸಿದ ಡ್ರೋನ್ ದಾಳಿಯನ್ನು ಖಂಡಿಸಿರುವ ಮುಜಾಹಿದ್, ಇದು ಅಫ್ಘನ್ ನೆಲದಲ್ಲಿ ಅಮೆರಿಕ ನಡೆಸುತ್ತಿರುವ ಸ್ಪಷ್ಟ ಹಸ್ತಕ್ಷೇಪ ಎಂದು ಹೇಳಿದ್ದಾನೆ.
ಗಾಯಕಿಯ ಹತ್ಯೆ:ಅಫ್ಘನ್ ಬಾಗ್ಲಾನ್ ಪ್ರಾಂತ್ಯದ ಗುಡ್ಡಗಾಡು ಪ್ರದೇಶದ ಜಾನಪದ ಗಾಯಕಿ ಫವಾದ್ ಅಂದರಾಬಿಯನ್ನು ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಭಾಗದಲ್ಲಿ ತಾಲಿಬಾನ್ ವಿರೋಧಿ ಗುಂಪುಗಳ ಬಲಿಷ್ಠವಾಗಿದೆ. ಅಂದರಾಬಿ ಎಂಬುದು ಹಿಂದುಕುಶ್ ಪರ್ವತ ಶ್ರೇಣಿಯಲ್ಲಿನ ಕಣಿವೆ ಪ್ರದೇಶವಾಗಿದ್ದು, ಇದರ ಹೆಸರನ್ನು ಫವಾದ್ ಸರ್​ನೇಮ್ ಆಗಿ ಇರಿಸಿ ಕೊಂಡಿದ್ದರು. ಈ ಕಣಿವೆ ಪಂಜಶೀರ್ ಪ್ರಾಂತ್ಯಕ್ಕೆ (ತಾಲಿಬಾನ್ ಹಿಡಿತಕ್ಕೆ ಒಳಪಡೆದ ಏಕೈಕ ಪ್ರಾಂತ್ಯ) ಸಮೀಪದಲ್ಲಿ ಇದೆ.
ಶಸ್ತ್ರ ಹಿಂದಿರುಗಿಸಲು ತಾಕೀತು:ನಾಗರಿಕರು ತಮ್ಮ ಬಳಿ ಹೊಂದಿರುವಂತಹ ಶಸ್ತ್ರ, ಮದ್ದುಗುಂಡುಗಳು, ಸರ್ಕಾರಿ ವಾಹನ ಮತ್ತು ಇನ್ನಿತರ ಸರ್ಕಾರಿ ಸ್ವತ್ತುಗಳನ್ನು ಹಿಂದಿರುಗಿಸುವಂತೆ ತಾಲಿಬಾನ್ ಸೂಚಿಸಿದೆ. ಕಾಬುಲ್ ನಗರ ಸೇರಿ ಇತರೆಡೆ ಸರ್ಕಾರಿ ಸ್ವತ್ತು, ಶಸ್ತ್ರ, ಮದ್ದುಗುಂಡುಗಳನ್ನು ಹೊಂದಿರುವವರು ಅದನ್ನು ವಾರದೊಳಗೆ ಸಕ್ಷಮ ಪ್ರಾಧಿಕಾರಗಳಿಗೆ ತಂದೊಪ್ಪಿಸಬೇಕು. ಇಲ್ಲದಿದ್ದರೆ ಅಂಥವರ ವಿರುದ್ಧ ಕ್ರಮಕೈಗೊಳ್ಳುವಂತೆ ಇಸ್ಲಾಮಿಕ್ ಎಮಿರೇಟ್ಸ್​ನ ಭದ್ರತಾ ಇಲಾಖೆ ಹುಕುಂ ಮಾಡಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಟ್ವೀಟ್ ಮಾಡಿದ್ದಾನೆ. ಇದಕ್ಕೂ ಹಿಂದೆ ಇಂಥದ್ದೇ ಆದೇಶವನ್ನು ತಾಲಿಬಾನ್ ನೀಡಿತ್ತು. ಸ್ವರಕ್ಷಣೆಗಾಗಿ ನಾಗರಿಕರು ಹೊಂದಿರುವಂತಹ ಆಯುಧಗಳನ್ನು ಒಪ್ಪಿಸುವಂತೆ ಸೂಚಿಸಿತ್ತು.
ಡ್ರೋನ್ ಮೂಲಕ ಉಗ್ರರ ಬೇಟೆ:ನಂಗರ್ಹಾರ್ ಪ್ರಾಂತ್ಯದ ಕಾಲಾ-ಎ-ನಘ್ರಕ್ ಜಿಲ್ಲೆಯಲ್ಲಿ ಪಾಕ್ ಗಡಿಗೆ ಸಮೀಪ ಇರುವ ಜಲಾಲಾಬಾದ್ ಪಟ್ಟಣದಲ್ಲಿ ಐಸಿಸ್- ಖುರಾಸಾನ್ (ಐಸಿಸ್-ಕೆ) ಇಬ್ಬರು ಉಗ್ರರನ್ನು ಸ್ಯಾಟಲೈಟ್ ಆಧರಿತ ಮಾಹಿತಿ ಅನುಸರಿಸಿ ಅಮೆರಿಕದ ಡ್ರೋನ್ ಹೊಡೆದುರುಳಿಸಿದ ವಿವರ ಈಗ ಬಯಲಾಗಿದೆ. ಐಸಿಸ್-ಕೆಯ ಮೂವರು ಪ್ರಮುಖ ಉಗ್ರರು ಟುಕ್-ಟುಕ್ (ಆಟೋ ರಿಕ್ಷಾ)ದಲ್ಲಿ ಸಂಚರಿಸುತ್ತಿದ್ದಾರೆ ಎಂಬ ಖಚಿತ ವರ್ತಮಾನವನ್ನು ಆಧರಿಸಿ, ಆ ಟುಕ್-ಟುಕ್ ಮೇಲೆ ಸ್ಯಾಟ್​ಲೈಟ್ ಮೂಲಕ ನಿಗಾ ಇರಿಸಿ ‘ಎಂಕ್ಯೂ-9 ರೀಪರ್’ ಡ್ರೋನ್​ನಿಂದ ಶನಿವಾರ ಕ್ಷಿಪಣಿ ಕಾರ್ಯಾಚರಣೆ ನಡೆಸಲಾಯಿತು. ಇದರಿಂದ ಇಬ್ಬರು ಉಗ್ರ ನಾಯಕರು ಸಾವನ್ನಪ್ಪಿದ್ದು, ಇನ್ನೊಬ್ಬ ಗಾಯಗೊಂಡು ಪರಾರಿಯಾಗಿದ್ದಾನೆ. ಕ್ಷಿಪಣಿಯ ಹೊಡೆತೆ ಟುಕ್-ಟುಕ್ ನಾಲ್ಕು ಅಡಿ ಕುಳಿಯಲ್ಲಿ ಕುಸಿದಿದೆ. ನಾಗರಿಕರಿಗೆ ಯಾವುದೇ ಅಪಾಯ ಆಗಿಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಹೇಳಿದೆ. ಆದರೆ, ಉಗ್ರರ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ಅವಳಿ ಬಾಂಬ್ ಸ್ಪೋಟಕ್ಕೆ ಪ್ರತೀಕಾರವಾಗಿ ಅಮೆರಿಕ ಶನಿವಾರ ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಿತ್ತು. ಬಾಂಬ್ ಸ್ಪೋಟದಿಂದ ಅಮೆರಿಕ ಸೇನೆಯ 13 ಮಂದಿ ಸೇರಿ 180 ಮಂದಿ ಮೃತಪಟ್ಟಿದ್ದರು.
ತಾಲಿಬಾನ್ ಉಲ್ಲೇಖ ಕೈಬಿಟ್ಟ ಯುಎನ್​ಎಸ್​ಸಿ:ಮೂರು ದಿನಗಳ ಹಿಂದೆ ಕಾಬುಲ್ ಏರ್​ಪೋರ್ಟ್ ಬಳಿ ನಡೆದ ಅವಳಿ ಬಾಂಬ್ ಸ್ಪೋಟದ ನಂತರ ತಾಲಿಬಾನ್ ಪದದ ಉಲ್ಲೇಖವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್​ಎಸ್​ಸಿ) ತನ್ನ ಹೇಳಿಕೆಯಿಂದ ಕೈಬಿಟ್ಟಿದೆ. ‘ಯಾವುದೇ ದೇಶದಲ್ಲಿ ನಡೆಯುವ ಭಯೋತ್ಪಾದನಾ ಕೃತ್ಯಗಳನ್ನು ಅಫ್ಘನ್ ಗುಂಪುಗಳು ಬೆಂಬಲಿಸಬಾರದು’ ಎಂಬುದು ಪರಿಷ್ಕೃತ ಹೇಳಿಕೆ ಆಗಿದೆ. ತಾಲಿಬಾನ್​ಗಳು ಆಗಸ್ಟ್ 15ರಂದು ಕಾಬುಲ್ ವಶಪಡಿಸಿಕೊಂಡ ನಂತರ ಯುಎನ್​ಎಸ್​ಸಿ ನೀಡಿದ್ದ ಹೇಳಿಕೆಯಲ್ಲಿ ‘ತಾಲಿಬಾನ್ ಅಥವಾ ಅಫ್ಘನ್ ಯಾವುದೇ ಗುಂಪು ಅಥವಾ ವ್ಯಕ್ತಿಗಳು ಅನ್ಯ ದೇಶದಲ್ಲಿ ನಡೆಯುವ ಭಯೋತ್ಪಾದನೆಯನ್ನು ಬೆಂಬಲಿಸಬಾರದು’ ಎಂದು ನಮೂದಿಸಿತ್ತು. ಈ ತಿಂಗಳ ಯುಎನ್​ಎಸ್​ಸಿ ಅಧ್ಯಕ್ಷತೆಯನ್ನು ಭಾರತ ವಹಿಸಿದ್ದು, ಪರಿಷ್ಕೃತ ಹೇಳಿಕೆಗೆ ಅಧ್ಯಕ್ಷೀಯ ಅಂಕಿತವನ್ನು ಭಾರತ ಹಾಕಿದೆ. ರಾಜತಾಂತ್ರಿಕದಲ್ಲಿ 15 ದಿನ ಎಂಬುದು ದೀರ್ಘಕಾಲ ಆದ್ದರಿಂದ ಯುಎನ್​ಎಸ್​ಸಿ ಹೇಳಿಕೆಯಲ್ಲಿ ‘ಟಿ’ ಪದವನ್ನು ಕೈಬಿಡಲಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿದ್ದ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ಪಂಜಶೀರ್​ನಲ್ಲಿ ಇಂಟರ್​ನೆಟ್ ಬಂದ್:ನಾರ್ತನ್ ಮೈತ್ರಿಕೂಟದ ಹಿಡಿತದಲ್ಲಿರುವ ಅಫ್ಘನ್ ಏಕೈಕ ಪ್ರಾಂತ್ಯ ಪಂಜಶೀರ್​ನಲ್ಲಿ ತಾಲಿಬಾನ್​ಗಳು ಇಂಟರ್​ನೆಟ್ ಸೌಕರ್ಯವನ್ನು ಸ್ಥಗಿತಗೊಳಿಸಿ ದ್ದಾರೆ. ಅಫ್ಘನ್ ಉಳಿದೆಲ್ಲ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿರುವ ತಾಲಿಬಾನ್​ಗೆ ಪಂಜಶೀರ್​ನಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗಿದೆ. ಇದಕ್ಕೆ ಕಾರಣ ಅಲ್ಲಿನ ಹೋರಾಟಗಾರ ಅಹ್ಮದ್ ಮಸೂದ್ ಮತ್ತು ಅಫ್ಘನ್ ಹಂಗಾಮಿ ಅಧ್ಯಕ್ಷರೆಂದು ಘೋಷಿಸಿಕೊಂಡಿರುವ ಅಮ್ರುಲ್ಲಾ ಸಾಲೇಹ್. ಇವರಿಬ್ಬರ ಟ್ವೀಟ್​ಗಳು ಅಲ್ಲಿನ ಜನರಿಗೆ ತಲುಪಬಾರದು ಎಂದು ತಾಲಿಬಾನ್​ಗಳು ಇಂಟರ್​ನೆಟ್ ಬಂದ್ ಮಾಡಿದ್ದಾರೆ. ತಾಲಿಬಾನ್ ವಿರೋಧಿಗಳು ಈಗ ಪಂಜಶೀರ್​ನಲ್ಲಿ ಸೇರಿದ್ದಾರೆ. ತಾಲಿಬಾನ್ ಸಾಂಪ್ರದಾಯಿಕ ವಿರೋಧಿಯಾಗಿದ್ದ ಅಹ್ಮದ್ ಶಾ ಮಸೂದ್ ಪುತ್ರ ಅಹ್ಮದ್ ಮಸೂದ್ ಬೆನ್ನಿಗೆ ನಿಂತಿದ್ದಾರೆ. ಕಾಬುಲ್ ತಾಲಿಬಾನ್ ವಶವಾಗುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪರಾರಿಯಾದ ನಂತರ ಉಪಾಧ್ಯಕ್ಷ ಅಮ್ರುಲ್ಲಾ ತಮ್ಮನ್ನು ಹಂಗಾಮಿ ಅಧ್ಯಕ್ಷನೆಂದು ಘೋಷಿಸಿ ಕೊಂಡಿದ್ದಾರೆ. ಅವರು ಸಹ ನಾರ್ತನ್ ಮೈತ್ರಿಕೂಟಕ್ಕೆ ಬೆಂಬಲ ನೀಡಿದ್ದಾರೆ.

ನಿಗಾ ಇಟ್ಟಿರುವ ಭಾರತೀಯ ಸೇನೆ:ಅಫ್ಘನ್ ಸಂಘರ್ಷ ಪರಿಸ್ಥಿತಿಯಿಂದ ಭಾರತ ಉಪಖಂಡದಲ್ಲಿ ಉಂಟಾಗಿರುವ ತಳಮಳದ ಬಗ್ಗೆ ಭಾರತೀಯ ಸೇನೆ ಗಂಭೀರ ಅಧ್ಯಯನ ಮತ್ತು ಪರಿಶೀಲನೆ ನಡೆಸುತ್ತಿದೆ. ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ ಬಂದ ನಂತರ ಪಾಕ್ ಮೂಲದ ಉಗ್ರ ಸಂಘಟನೆಗಳಾದ ತೆಹ್ರೀಕ್-ಎ-ತಾಲಿಬಾನ್, ಜೈಷ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ, ಹಕ್ಕಾನಿ ಜಾಲಗಳ ಹುರುಪು ಹೆಚ್ಚಿದೆ. ಇದರಿಂದ ಭಾರತ ಮತ್ತು ಉಪಖಂಡದ ಮೇಲೆ ಉಂಟಾಗುವ ಪರಿಣಾಮವನ್ನು ಭಾರತೀಯ ಸೇನೆಯ ಮೂರೂ ಪಡೆಗಳ ಪ್ರಧಾನ ದಂಡನಾಯಕರಾದ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಸ್ವಯಂ ಅಧ್ಯಯನ ನಡೆಸುತ್ತಿದ್ದಾರೆ. ಅಫ್ಘನ್ ತೊರೆಯುತ್ತಿರುವ ಅಮೆರಿಕ ಬಿಲಿಯನ್ ಡಾಲರ್ ಮೌಲ್ಯದ ಮಿಲಿಟರಿ ಸಾಮಗ್ರಿಗಳನ್ನು ಬಿಟ್ಟು ಹೋಗುತ್ತಿದೆ. ಇದರಲ್ಲಿ ಅತ್ಯಾಧುನಿಕವಾದ ಎಂ-4, ಎಂ-16 ರೈಫಲ್ಸ್ ಕೂಡ ಇವೆ. ಇವು ಜಿಹಾದಿ ಗುಂಪುಗಳ ವಶಕ್ಕೆ ಬಂದರೆ ಭಾರತಕ್ಕೆ ಆಪತ್ತು ಕಾದಿದೆ. ಇದರ ಜತೆಗೆ ರಾತ್ರಿ ಹೊತ್ತು ಸ್ಪಷ್ಟ ಗೋಚರವನ್ನು ನೀಡುವ ಸಾಧನ, ಡ್ರೋನ್, ಮದ್ದುಗುಂಡು, ದುರ್ಗಮ ಪ್ರದೇಶದಲ್ಲೂ ಹಾರಾಟ ನಡೆಸುವಂತಹ ಬ್ಲಾಕ್​ಹಾಕ್ ಹೆಲಿಕಾಪ್ಟರ್​ಗಳನ್ನು ತಾಲಿಬಾನ್ ಈಗಾಗಲೇ ವಶಕ್ಕೆ ತೆಗೆದುಕೊಂಡಿದೆ. ಅಮೆರಿಕದ ಈ ಯುದ್ಧ ಪರಿಕರಗಳು ಪಾಕ್ ಮೂಲದ ಉಗ್ರರ ಸಂಘಟನೆಗಳ ಕೈಸೇರಿದರೆ ಸಹಜ ಸ್ಥಿತಿಯತ್ತ ಮರಳುತ್ತಿರುವ ಜಮ್ಮು-ಕಾಶ್ಮೀರದಲ್ಲಿ ಮತ್ತೆ ತಳಮಳ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಇದು ಬಿಪಿನ್ ರಾವತ್ ಅವರ ತಲೆಬಿಸಿ ಹೆಚ್ಚಿಸಿದೆ. ತಾಲಿಬಾನ್​ಗೂ ಪಾಕ್ ಮೂಲದ ಉಗ್ರರ ಗುಂಪಿಗೂ ನಿಕಟ ಬಾಂಧವ್ಯ ಇದೆ. ಜತೆಗೆ ತಾಲಿಬಾನ್ ಆಡಳಿತವನ್ನು ಮಾನ್ಯ ಮಾಡುವ ಇರಾದೆಯನ್ನು ಚೀನಾ ವ್ಯಕ್ತಪಡಿಸಿದೆ. ಇದರಿಂದ ತಾಲಿಬಾನ್​ಗೆ ಚೀನಾ ಲಿಬರೇಷನ್ ಆರ್ವಿುಯ ಬೆಂಬಲ ದೊರೆಯಬಹುದು ಇಂತಹ ದುಷ್ಟಕೂಟಗಳು ಗಟ್ಟಿಯಾದಷ್ಟೂ ಭಾರತಕ್ಕೆ ಆತಂಕ ಕಟ್ಟಿಟ್ಟ ಬುತ್ತಿ. ಇವುಗಳಿಂದ ಎದುರಾಗುವ ಸಂಭಾವ್ಯ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಬಗೆ ಹೇಗೆ ಎಂಬುದರ ಬಗ್ಗೆಯೂ ರಾವತ್ ಗಂಭೀರ ಪರಿಶೀಲನೆ ನಡೆಸುತ್ತಿದ್ದಾರೆ.
ಚೆನ್ನೈ:ಅಫ್ಘನ್​ನ ಬೆಳವಣಿಗೆಯು ಭಾರತಕ್ಕೆ ಸವಾಲಿನ ಪರಿಸ್ಥಿತಿ ತಂದೊಡ್ಡಿದೆ. ರಕ್ಷಣಾ ಕಾರ್ಯತಂತ್ರದ ಬಗ್ಗೆ ಮರುಚಿಂತನೆ ಮಾಡುವ ಸಮಯ ಇದಾಗಿದೆ. ಕ್ವಾಡ್ ರಾಷ್ಟ್ರಗಳು ಸಂಯೋಜಿತ ಮೈತ್ರಿಪಡೆ ರಚಿಸುವ ಅಗತ್ಯವಿದೆ. ಯುದ್ಧ ಅಥವಾ ಸಂಘರ್ಷ ಸಮಯದಲ್ಲಿ ತ್ವರಿತ ನಿರ್ಧಾರವನ್ನು ಕೈಗೊಳ್ಳುವುದು ಭದ್ರತಾ ಗುಂಪು ರಚನೆಯಿಂದ ಸಾಧ್ಯವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು. ತಮಿಳುನಾಡಿನ ವೆಲ್ಲಿಂಗ್ಟನ್​ನ ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜಿನ (ಡಿಎಸ್​ಎಸ್​ಸಿ) ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಅಗತ್ಯ ಬಿದ್ದರೆ ಅನ್ಯ ದೇಶದ ನೆಲದಲ್ಲೂ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ನಾವು ಹಿಂಜರಿಯುವುದಿಲ್ಲ. ಇದಕ್ಕೆ ಉರಿ ದಾಳಿಯ ನಂತರ ಮತ್ತು ಪುಲ್ವಾಮಾ ವಿಧ್ವಂಸಕ ಕೃತ್ಯದ ಬಳಿಕ ನಡೆದ ಪ್ರತಿದಾಳಿಗಳು ಸಾಕ್ಷಿ ಎಂದರು.
ನಮ್ಮ ಪ್ರಧಾನಿ ಸರಿಯಾದ ಸಮಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + twelve =
Remember me
