ನವದೆಹಲಿ:ಅಫ್ಘಾನಿಸ್ತಾನ ತಾಲಿಬಾನ್ ತೆಕ್ಕೆಗೆ ಬಂದ ನಂತರ ಪಾಕ್ ಮೂಲದ ಲಷ್ಕರ್-ಎ-ತೊಯ್ಬಾ (ಎಲ್​ಇಟಿ) ಮತ್ತು ಜೈಷ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಗಳಲ್ಲಿ ಉತ್ಸಾಹ ಮೂಡಿದೆ. ಇದರಿಂದ ಜಮ್ಮು-ಕಾಶ್ಮೀರದಲ್ಲಿ ಅಕ್ರಮ ಒಳನುಸುಳುವಿಕೆಯ ಪ್ರಯತ್ನ ಹೆಚ್ಚುವ ಸಾಧ್ಯತೆ ಇದೆ ಎಂದು ಬೇಹುಗಾರಿಕೆ ಮೂಲಗಳು ಎಚ್ಚರಿಕೆ ನೀಡಿವೆ.
2019ರ ಆಗಸ್ಟ್ 5ರಂದು 370ನೇ ವಿಧಿ ರದ್ದತಿಯ ನಂತರ ಜಮ್ಮು-ಕಾಶ್ಮೀರದಲ್ಲಿ ಅಕ್ರಮ ಒಳನುಸುಳುವಿಕೆಗೆ ಕಡಿವಾಣ ಬಿದ್ದಿದೆ. ಜತೆಗೆ ವಿಧ್ವಂಸಕ ಕೃತ್ಯಗಳು ಗಣನೀಯವಾಗಿ ತಗ್ಗಿವೆ. ಆದರೆ, ಅಫ್ಘನ್ ಬೆಳವಣಿಗೆಯು ಪಾಕ್ ಮೂಲದ ಉಗ್ರರಿಗೆ ಹೊಸ ಹುರುಪು ಸಿಕ್ಕಿರುವುದು ಜಮ್ಮು-ಕಾಶ್ಮೀರದಲ್ಲಿ ಸುಧಾರಿಸುತ್ತಿರುವ ಪರಿಸ್ಥಿತಿಗೆ ಮಾರಕವಾಗಿದೆ ಎಂದು ಭದ್ರತಾ ಪಡೆಗಳು ನಡೆಸಿರುವ ಇತ್ತೀಚಿನ ಅಧ್ಯಯನದಲ್ಲಿ ಹೇಳಿವೆ.
ಅಫ್ಘನ್ ಈಗಷ್ಟೆ ತಾಲಿಬಾನ್​ಗಳ ಹಿಡಿತಕ್ಕೆ ಬಂದಿದೆ. ಕೆಲವು ಕಾಲ ಅಲ್ಲಿನ ವ್ಯವಸ್ಥೆ ಸರಿಹೋದ ನಂತರ ಈ ಉಗ್ರರ ಮೊದಲ ಗುರಿ ಕಾಶ್ಮೀರ ಆಗಲಿದೆ. ಅಫ್ಘನ್​ನಲ್ಲಿ ನೂರಾರು ಕೈದಿಗಳ ಬಿಡುಗಡೆ ಆಗಿದೆ. ಇದರಲ್ಲಿ ಬಹುತೇಕರು ಎಲ್​ಇಟಿ ಮತ್ತು ಜೆಇಎಂಗೆ ಸೇರಿದವರಾಗಿದ್ದಾರೆ. ಇವರೆಲ್ಲರ ಸಹಕಾರ ಪಡೆದು ಕಾಶ್ಮೀರಕ್ಕೆ ನುಗ್ಗುವ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಹೆಚ್ಚಬಹುದು ಎಂದು ಅಧ್ಯಯನ ಗಂಭೀರ ಎಚ್ಚರಿಕೆ ನೀಡಿದೆ. ಜಮ್ಮು-ಕಾಶ್ಮೀರದಲ್ಲಿ ಎಲ್​ಇಟಿ ಮತ್ತು ಜೆಇಎಂಗಳಿಗೆ ಪೂರಕವಾಗಿ ಕೆಲಸ ಮಾಡುವ ಗುಂಪುಗಳು ತಾಲಿಬಾನ್​ಗಳಿಗೆ ಬೆಂಬಲ ಸೂಚಿಸಿದ್ದು, ದಾಳಿಗೆ ಮತ್ತು ಉಗ್ರರ ಒಳನುಸುಳುವಿಕೆಗೆ ಅವಕಾಶ ಕಲ್ಪಿಸುವ ತಂತ್ರಗಾರಿಕೆ ರೂಪಿಸುವಲ್ಲಿ ಮಗ್ನವಾಗಿವೆ ಎಂದು ಅಧ್ಯಯನ ವಿಶ್ಲೇಷಿಸಿದೆ.
ತಾಲಿಬಾನಿಗಳಿಗೆ ತರಬೇತಿ ನೀಡಲೆಂದೇ ಜೆಇಎಂ ಹಿರಿಯ ಕಮಾಂಡರ್​ಗಳನ್ನು ಕಳುಹಿಸಿದೆ. ಹಕ್ಕಾನಿ ಮತ್ತು ತಾಲಿಬಾನ್​ಗಳಿಗೆ ಸಶಸ್ತ್ರ ಬಂಡುಕೋರರನ್ನು ಪೂರೈಕೆ ಮಾಡುವ ಮುಖ್ಯ ಮೂಲ ಕೂಡ ಜೆಇಎಂ ಆಗಿದೆ. ಕಾಬುಲ್ ವಶಪಡಿಸಿಕೊಂಡ ತಾಲಿಬಾನ್​ಗಳನ್ನು ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಅಭಿನಂದಿಸಿದ್ದಾನೆ. ‘ಗುರಿಯತ್ತ ಪಯಣ’ (ಮಂಜಿಲ್ ಕಿ ತರಫ್) ಎಂದು ಉಲ್ಲೇಖಿಸಿದ್ದಾನೆ. ಈಗಲೂ ಅಫ್ಘನ್​ನ ಕುನಾರ್, ನಂಗರ್​ಹಾರ್, ನುರಿಸ್ತಾನ್, ಘಜನಿ, ಕಂದಹಾರ್, ಹೆಲ್ಮಾಂಡ್ ಪ್ರಾಂತ್ಯದಲ್ಲಿ ಎಲ್​ಇಟಿ ಅಸ್ತಿತ್ವದಲ್ಲಿ ಇದೆ ಎಂದು ಅಧ್ಯಯನ ಹೇಳಿದೆ. ಜಮ್ಮು ಮತ್ತು ರಾಜೌರಿ ಸೆಕ್ಟೆರ್​ಗಳ ಗಡಿಯಲ್ಲಿ ಈಗಾಗಲೇ ಅಕ್ರಮ ಒಳನುಸುಳುವಿಕೆಯ ಪ್ರಯತ್ನಗಳು ಕಂಡುಬಂದಿವೆ. ದಕ್ಷಿಣ ಕಾಶ್ಮೀರದಲ್ಲಿ ಶನಿವಾರ ನಡೆದ ಎನ್​ಕೌಂಟರ್​ನಲ್ಲಿ ಜೆಇಎಂನ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಜುಲೈ 31ರಂದು ಅವಂತಿಪುರದಲ್ಲಿ ಹತರಾದ ಇಬ್ಬರು ಪಾಕ್ ಮೂಲದ ಉಗ್ರರ ಜತೆ ಈ ಮೂವರಿಗೆ ನಂಟಿತ್ತು. ಕಳೆದ ಜನವರಿಯಿಂದೀಚೆಗೆ 95 ಉಗ್ರರುನ್ನು ಹೊಡೆದುರುಳಿಸಲಾಗಿದ್ದು, ಈ ಪೈಕಿ 18 ಮಂದಿ ಪಾಕ್ ಮೂಲದವರು ಎಂದು ಭದ್ರತಾ ಪಡೆಗಳು ತಿಳಿಸಿವೆ.
ಬಾಲಕ ಮತ್ತು ಬಾಲಕಿಯರು (ಸಹ-ಶಿಕ್ಷಣ) ಒಟ್ಟಿಗೆ ಕಲಿಯುವುದರ ವಿರುದ್ಧ ತಾಲಿಬಾನ್ ನಾಯಕರು ಪತ್ವಾ ಹೊರಡಿಸಿದ್ದಾರೆ. ಬಾಲಕರೊಂದಿಗೆ ಒಂದೇ ತರಗತಿಯಲ್ಲಿ ಬಾಲಕಿಯರು ಕಲಿಯುವಂತಿಲ್ಲ ಎಂದು ಹೆರಾತ್ ಪ್ರಾಂತ್ಯದ ತಾಲಿಬಾನ್ ಕಚೇರಿ ಆದೇಶ ಹೊರಡಿಸಿದೆ. ವಿಶ್ವವಿದ್ಯಾಲಯದ ಉಪನ್ಯಾಸಕರು, ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರ ಜತೆ ತಾಲಿಬಾನ್ ನಾಯಕರು ಮೂರು ತಾಸು ಚರ್ಚೆಯ ಬಳಿಕ ಈ ಪತ್ವಾ ಹೊರಬಿದ್ದಿದೆ. ಇದು ತಾಲಿಬಾನ್ ಹೊರಡಿಸಿರುವ ಮೊಲದ ಫತ್ವಾ ಕೂಡ ಆಗಿದೆ. ಸಮಾಜದಲ್ಲಿ ಎಲ್ಲ ಅನಿಷ್ಟಗಳಿಗೆ ಮೂಲವಾದ ಸಹಶಿಕ್ಷಣ ಕೊನೆಯಾಗಬೇಕು ಎಂದು ಈ ಸಭೆಯಲ್ಲಿ ಭಾಗವಹಿಸಿದ್ದ ಅಫ್ಘನ್ ಇಸ್ಲಾಮಿಕ್ ಎಮಿರೇಟ್ಸ್ ನ ಉನ್ನತ ಶಿಕ್ಷಣದ ಮುಖ್ಯಸ್ಥನೆಂದು ಹೇಳಿಕೊಳ್ಳುವ ಮುಲ್ಲಾ ಫರೀದ್ ಸೂಚಿಸಿದ್ದಾನೆ. ಹೆಣ್ಮಕ್ಕಳ ತರಗತಿಯನ್ನು ಮಹಿಳಾ ಉಪನ್ಯಾಸಕರು ಅಥವಾ ಹಿರಿಯ ವಯಸ್ಸಿನ ಪುರುಷರು ತೆಗೆದುಕೊಳ್ಳಬಹುದು. ಇದನ್ನು ಬಿಟ್ಟರೆ ಬೇರೆ ಪರ್ಯಾಯ ಇಲ್ಲ ಎಂದು ಹೇಳಿದ್ದಾನೆ. ಸರ್ಕಾರಿ ಸಂಸ್ಥೆಗಳು ವಿವಿಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ತರಗತಿಯನ್ನು ಕಲ್ಪಿಸಬಹುದು. ಆದರೆ, ಖಾಸಗಿ ಸಂಸ್ಥೆಗಳಲ್ಲಿ ಬಾಲಕಿಯರ ಸಂಖ್ಯೆ ಕಡಿಮೆ ಇದೆ. ಇವರಿಗೆ ಪ್ರತ್ಯೇಕವಾಗಿ ಬೋಧನೆ ಮಾಡಬೇಕು ಎಂದರೆ ಕಷ್ಟ ಸಾಧ್ಯ. ಈ ನಿಯಮ ಕಡ್ಡಾಯ ಮಾಡಿದರೆ ದೇಶದಲ್ಲಿ ಸಾವಿರಾರು ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ ಎಂದು ಹೆರಾತ್​ನ ಉಪನ್ಯಾಸಕರು ಕಳವಳ ವ್ಯಕ್ತಪಡಿಸಿದ್ದಾರೆ.
ಸಂಘರ್ಷ ಪೀಡಿತ ಅಫ್ಘನ್​ನಲ್ಲಿ ಹಸಿವಿನಿಂದ ನರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಾಲ್ಕು ಕೋಟಿ ಜನರ ಪೈಕಿ 1.40 ಕೋಟಿ ಜನರಿಗೆ ಹಸಿವು ಕಾಡಲಾರಂಭಿಸಿದೆ. ಇದನ್ನು ಹೋಗಲಾಡಿಸಲು ಒಂದು ಪ್ರಾಂತ್ಯದ ರಾಜಧಾನಿಗೆ ಅಗತ್ಯ ನೆರವು ಒದಗಿಸುವ ಬಗ್ಗೆ ತಾಲಿಬಾನ್​ಗಳ ಜತೆ ಮಾತುಕತೆ ನಡೆಸಲಾಗುತ್ತಿದೆ. ಆದರೆ, ಇನ್ನಿತರ ಮೂರು ಪ್ರಾಂತ್ಯಗಳ ರಾಜಧಾನಿಗೆ ಆಹಾರ ಪೂರೈಕೆ ಅಸಾಧ್ಯವಾಗಿದೆ.
|ವಿಶ್ವ ಆಹಾರ ಕಾರ್ಯಕ್ರಮ
ದೇಶದಲ್ಲಿ ಮಹಿಳೆಯರನ್ನು ಹಿಂಸಿಸಿ ಕೊಲ್ಲಲಾಗುತ್ತಿದೆ. ತಾಲಿಬಾನ್​ಗಳಿಗೆ ನೀಡಿದ ಆಹಾರ ರುಚಿಯಾಗಿರಲಿಲ್ಲ ಎಂಬ ಕಾರಣಕ್ಕೆ ಅಡುಗೆ ತಯಾರಿಸಿದ ಮಹಿಳೆ ಬೆಂಕಿ ಹಚ್ಚುವಂತೆ ಉತ್ತರ ಅಫ್ಘನ್​ನಲ್ಲಿ ಆದೇಶಿಸಲಾಗಿತ್ತು. ತಾಲಿಬಾನ್​ಗಳಿಗೆ ಅಡುಗೆ ಮಾಡಿಕೊಡುವಂತೆ ಬಲವಂತ ಮಾಡಲಾಗುತ್ತಿದೆ. ಬೇರೆ ರಾಷ್ಟ್ರಗಳಲ್ಲಿ ಲೈಂಗಿಕ ದಾಸಿಯನ್ನಾಗಿಸಿ ಶವ ಪೆಟ್ಟಿಗೆಯಲ್ಲಿ ಅಫ್ಘನ್ ಯುವತಿಯರನ್ನು ಸಾಗಣೆ ಮಾಡಲಾಗುತ್ತಿದೆ.
|ನಜ್ಲಾ ಅಯೌಬಿಅಮೆರಿಕದಲ್ಲಿ ನೆಲೆಸಿರುವ ಅಫ್ಘನ್​ನ ಮಾಜಿ ಜಡ್ಜ್
ತಾಲಿಬಾನಿಗಳು ಪ್ರತೀಕಾರ ಇಲ್ಲವೆ ದೌರ್ಜನ್ಯ ನಡೆಸಿದ್ದರೆ ಈ ಬಗ್ಗೆ ತನಿಖೆ ನಡೆಸಲಾಗುವುದು. ನಮಗೂ ಉತ್ತರದಾಯಿತ್ವ ಇದೆ ಎಂದು ತಾಲಿಬಾನ್ ಮುಖಂಡರು ಹೇಳಿದ್ದಾರೆ. ‘ನಾಗರಿಕರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂಬ ವಿಷಯ ಕೇಳಿಬಂದಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ತಾಲಿಬಾನಿಗಳು ಸಮಸ್ಯೆ ಮಾಡುತ್ತಿದ್ದರೆ ಅವರ ವಿರುದ್ಧವೂ ಕ್ರಮ ನಿಶ್ಚಿತ. ಜನರ ಬೇಗುದಿ, ಅನುಭವಿಸುತ್ತಿರುವ ಒತ್ತಡ ಅರ್ಥವಾಗುತ್ತದೆ. ತಾಲಿಬಾನಿಗಳಿಗೆ ಯಾರ ಅಂಕೆಶಂಕೆ ಇಲ್ಲ ಎಂಬ ಅಭಿಪ್ರಾಯ ಜನರಲ್ಲಿ ಮೂಡಿದೆ. ಆದರೆ, ನಮಗೂ ಹೊಣೆಗಾರಿಕೆ ಇದೆ’ ಎಂದು ಹೆಸರು ಹೇಳಲು ಇಚ್ಛಿಸದ ತಾಲಿಬಾನ್ ಮುಖಂಡರು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕೆಲವು ವಾರದಲ್ಲೇ ಸರ್ಕಾರ ರಚನೆ ಆಗಲಿದ್ದು, ಈ ನಿಟ್ಟಿನಲ್ಲಿ ಯೋಜನೆ ಸಿದ್ಧವಾಗುತ್ತಿದೆ. ಒಂದೇ ಒಂದು ಗುಂಡು ಹಾರಿಸದೆ ವಾರದ ಹಿಂದೆಯಷ್ಟೆ ರಾಜಧಾನಿ ಕಾಬುಲ್ ಪ್ರವೇಶಿಸಿದ್ದೇವೆ. ಆಡಳಿತವನ್ನು ವ್ಯವಸ್ಥಿತಗೊಳಸಿಲು ಕೊಂಚ ಕಾಲ ಬೇಕು ಎಂದು ಎಂದಿದ್ದಾರೆ.
ಅಫ್ಘನ್​ನಲ್ಲಿ ಸರ್ಕಾರ ರಚಿಸುವ ಕುರಿತಂತೆ ಮಾತುಕತೆ ನಡೆಸಲು ತಾಲಿಬಾನ್ ಸಂಘಟನೆಯ ಸಹಸಂಸ್ಥಾಪಕ ಮುಲ್ಲಾ ಅಬ್ದುಲ್ಲಾ ಘನಿ ಬರದಾರ್ ಶನಿವಾರ ಕಾಬುಲ್​ಗೆ ಬಂದಿದ್ದಾನೆ. ಜಿಹಾದಿ ಮುಖಂಡರು ಮತ್ತು ರಾಜಕೀಯ ನಾಯಕರನ್ನು ಒಳಗೊಂಡ ಸರ್ಕಾರ ರಚಿಸುವುದು ಬರದಾರ್ ಉದ್ದೇಶವಾಗಿದೆ. ಕತಾರ್​ನಲ್ಲಿದ್ದ ಬರದಾರ್ ಕಳೆದ ಮಂಗಳವಾರವೇ ಕಂದಹಾರ್​ಗೆ ಬಂದಿದ್ದ ಎಂದು ಮೂಲಗಳು ಹೇಳಿವೆ. 1990ರ ದಶಕದಲ್ಲಿ ಅಫ್ಘನ್ ಅಂತರ್ಯುದ್ಧದ ವೇಳೆ ಬದ್ಧ ವೈರಿಗಳಾಗಿದ್ದ ಖಲೀಲ್ ಹಕ್ಕಾನಿ ಮತ್ತು ಗುಲ್ಬುದ್ದೀನ್ ಹೆಕ್ಮತ್ಯಾರ್ ಈಗಾಗಲೇ ಚರ್ಚೆ ನಡೆಸಿರುವುದರಿಂದ ಅಫ್ಘನ್​ನಲ್ಲಿ ಹೊಸ ಸರ್ಕಾರ ರಚನೆಗೆ ಎಲ್ಲ ಗುಂಪುಗಳು ಉತ್ಸುಕವಾಗಿವೆ ಎಂಬುದು ವ್ಯಕ್ತವಾಗುತ್ತದೆ. ಹೊಸ ಸರ್ಕಾರದಲ್ಲಿ ಕಾನೂನುಗಳು ಉದಾರವಾಗಿ ಇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹಕ್ಕಾನಿ ಜಾಲದ ಪ್ರಮುಖ ಮುಖಂಡರಾದ ಅನಸ್ ಹಕ್ಕಾನಿ, ಈಗಾಗಲೇ ಮಾಜಿ ಅಧ್ಯಕ್ಷ ಹಮೀದ್ ಕರ್ಜೆ ಮತ್ತು ಹಿರಿಯ ಮುಖಂಡ ಅಬ್ದುಲ್ಲಾ ಅಬ್ದುಲ್ಲಾರನ್ನು ಭೇಟಿಯಾಗಿದ್ದಾರೆ. ಈ ಮಧ್ಯೆ, ಅಫ್ಘನ್​ನಿಂದ ಪಲಾಯನಗೈದಿರುವ ಅಧ್ಯಕ್ಷ ಅಶ್ರಫ್ ಘನಿಯ ಸೋದರ ಮತ್ತು ಗ್ರಾ್ಯಂಡ್ ಕೌನ್ಸಿಲ್ ಆಫ್ ಕೂಚಿಸ್​ನ ಮುಖ್ಯಸ್ಥ ಹಶ್ಮತ್ ಘನಿ ಅಹ್ಮದ್ಜೆೈ ತಾಲಿಬಾನ್​ಗಳನ್ನು ಬೆಂಬಲಿಸುವುದಾಗಿ ಹೇಳಿದ್ದಾರೆಂದು ಮಾಧ್ಯಮದಲ್ಲಿ ವರದಿಯಾಗಿದೆ.
ತಾಲಿಬಾನ್ ವೆಬ್​ಸೈಟ್ ಆಫ್​ಲೈನ್:ತಾಲಿಬಾನ್​ಗಳ ಅಧಿಕೃತ ವೆಬ್​ಸೈಟ್ ಶುಕ್ರವಾರದಿಂದ ಆಫ್​ಲೈನ್ ಆಗಿದೆ. ಇದಕ್ಕೆ ಏನು ಕಾರಣ ಎಂಬುದು ತಿಳಿದುಬಂದಿಲ್ಲ. ತಾಲಿಬಾನ್ ವೆಬ್​ಸೈಟ್ ಪಾಶ್ತೊ, ಉರ್ದು, ಅರೇಬಿಕ್, ದರಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಇದೆ.
ಮಂಗಳೂರು ಪಾದ್ರಿಗಳು ಇಂದು ವಾಪಸ್:ಅಫ್ಘಾನಿಸ್ತಾನದಲ್ಲಿದ್ದ ಮಂಗಳೂರು ಮೂಲದ ಇಬ್ಬರು ಪಾದ್ರಿಗಳು ಭಾನುವಾರ ಭಾರತಕ್ಕೆ ಬರಲಿದ್ದಾರೆ. ಕನ್ನಡಿಗರ ಸಹಾಯಕ್ಕಾಗಿ ರಾಜ್ಯ ಸರ್ಕಾರ ಸ್ಥಾಪಿಸಿದ್ದ ಸಹಾಯವಾಣಿಗೆ ಇಬ್ಬರು ಪಾದ್ರಿಗಳು ಕರೆ ಮಾಡಿದ್ದರು. ಅವರನ್ನು ಕರೆಸಿಕೊಳ್ಳುವ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ರಾಜ್ಯದ ಉನ್ನತಾಧಿಕಾರಿಗಳು ವಿದೇಶಾಂಗ ಮಂತ್ರಾಲಯದ ಜತೆ ನಿರಂತರ ಸಂಪರ್ಕದಲ್ಲಿದ್ದರು.
ಅಸ್ಸಾಂನಲ್ಲಿ 14 ಮಂದಿ ಬಂಧನ:ತಾಲಿಬಾನ್ ಬೆಂಬಲಿಸಿದ 14 ಮಂದಿಯನ್ನು ಅಸ್ಸಾಂನಲ್ಲಿ ಶನಿವಾರ ಬಂಧಿಸಲಾಗಿದೆ. ಇವರಲ್ಲಿ ತೇಜ್​ಪುರದ ಕಾಲೇಜಿನಲ್ಲಿ ಎಂಬಿಬಿಎಸ್ ಕಲಿಯುತ್ತಿರುವ ವಿದ್ಯಾರ್ಥಿಗಳೂ ಇದ್ದಾರೆ. ಅಫ್ಘನ್ ಬೆಳವಣಿಗೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ಗಳನ್ನು ಹಾಕಿದ ಇವರು, ತಾಲಿಬಾನ್ ನಡೆಸುತ್ತಿರುವುದು ಸರಿಯಾಗಿ ಇದೆ ಎಂದು ಬೆಂಬಲಿಸಿದ್ದರು. ಬಂಧಿತರಲ್ಲಿ ಕೆಲವರು ತಾಲಿಬಾನ್​ಗಳನ್ನು ನೇರವಾಗಿ ಬೆಂಬಲಿಸಿದ್ದರೆ, ಮತ್ತೆ ಕೆಲವರು ತಾಲಿನಾನ್​ಗಳನ್ನು ಬೆಂಬಲಿಸಿದ ಮಾಧ್ಯಮ ಗಳನ್ನು ಟೀಕಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ತಾಲಿಬಾನ್​ಗಳನ್ನು ಬೆಂಬಲಿಸಿದ್ದ ಬಗ್ಗೆ 17ರಿಂದ 20 ಪೋಸ್ಟ್​ಗಳು ಪತ್ತೆಯಾಗಿದ್ದವು. ಇದರಲ್ಲಿ ಮೂರು ಪೋಸ್ಟ್​ಗಳನ್ನು ಅಸ್ಸಾಂ ಮೂಲದವರಾದ ದುಬೈ ಮತ್ತು ಸೌದಿ ಅರೇಬಿಯಾದಲ್ಲಿ ನೆಲೆಸಿರುವವರು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅಫ್ಘನ್​ನಲ್ಲಿ ಸಿಲುಕಿದ ಸಂಡೂರಿನ ಮಹಿಳೆ:ಅಫ್ಘನ್​ನಲ್ಲಿ ಸಂಡೂರಿನ ಮಹಿಳೆ ತನ್ವೀನ್ (28) ಸಿಲುಕಿದ್ದು, ಕುಟುಂಬ ಸದಸ್ಯರು ಆತಂಕದಲ್ಲಿದ್ದಾರೆ. ಕಾಬೂಲ್​ನ ಯುವಕ ಸೈಯದ್ ಜಲಾಲ್​ನನ್ನು ತನ್ವೀನ್ ಮದುವೆಯಾಗಿದ್ದಾರೆ. ಇವರಿಬ್ಬರೂ ಇಂಜಿನಿಯರ್​ಗಳು. ಉಗ್ರರ ಉಪಟಳ ಹೆಚ್ಚುತ್ತಿದ್ದಂತೆ ತನ್ವೀನ್ ದಂಪತಿ, ಭಾರತೀಯ ರಾಯಭಾರಿ ಕಚೇರಿ ಸಂಪರ್ಕ ಸಾಧಿಸಿದ್ದಾರೆ.
ಬೆಂಗಳೂರು:ತಾಲಿಬಾನಿಗಳ ಹಿಡಿತಕ್ಕೆ ಸಿಲುಕಿರುವ ಆಫ್ಘಾನಿಸ್ತಾನ ಹಾಗೂ ಭಾರತದ ನಡುವೆ ಆಮದು, ರಫ್ತು ಸ್ಥಗಿತಗೊಂಡಿರುವ ಪರಿಣಾಮ ಡ್ರೖೆ ಫ್ರೂಟ್ಸ್ ಗಳ ದರ ಏರಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ 100-200 ರೂ. ದರ ಹೆಚ್ಚಳವಾಗಿದೆ. ಭಾರತಕ್ಕೆ ವಿವಿಧ ದೇಶಗಳಿಂದ ಆಮದಾಗುತ್ತಿದ್ದ ಡ್ರೖೆ ಫ್ರೂಟ್ಸ್​ಗಳಲ್ಲಿ ಬಹುಪಾಲು ಅಫ್ಘಾನಿಸ್ತಾನದಿಂದಲೇ ಬರುತ್ತಿದ್ದು, ಈಗ ಅಲ್ಲಿಂದ ಆಹಾರ ಪದಾರ್ಥ ಸೇರಿದಂತೆ ಯಾವುದೇ ವಸ್ತುಗಳ ಆಮದಾಗದ ಕಾರಣ ಅಲ್ಲಿನ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದ ಡ್ರೖೆ ಫ್ರೂಟ್ಸ್​ಗಳು ದುಬಾರಿಯಾಗಿವೆ.
ಅಫ್ಘಾನಿಸ್ತಾನದಿಂದ ಪ್ರಮುಖವಾಗಿ ಒಣದ್ರಾಕ್ಷಿ, ಅಂಜೂರ, ಬಾದಾಮಿ, ಕೇಸರಿ, ಖರ್ಜೂರ ಆಮದಾಗುತ್ತಿತ್ತು. ಈ ಬಗೆಯ ಡ್ರೖೆ ಫ್ರೂಟ್ಸ್​ಗಳು ಬೇರೆ ದೇಶಗಳಿಂದಲೂ ದೊರೆಯುತ್ತಾದರೂ, ಅಫ್ಘಾನ್​ನ ಗುಣಮಟ್ಟ ಇರುವುದಿಲ್ಲ. ಹೀಗಾಗಿ ಕಳೆದೊಂದು ವಾರದಲ್ಲಿ ಡ್ರೖೆ ಫ್ರೂಟ್ಸ್​ಗಳ ದರ ಹೆಚ್ಚಾಗಿದೆ. ಭಾರತದಲ್ಲಿ ಕಾಶ್ಮೀರದಿಂದ ವಾಲ್​ನಟ್, ಬಿಜಾಪುರದಿಂದ ಒಣದ್ರಾಕ್ಷಿ, ಇರಾನ್​ನಿಂದ ಪಿಸ್ತಾ, ಅಮೆರಿಕಾದ ಕ್ಯಾಲಿಫೋರ್ನಿಯಾದಿಂದ ಖರ್ಜೂರ, ದುಬೈನಿಂದ ಖರ್ಚೂರ ಆಮದಾಗುತ್ತವೆ. ಆದರೆ ಬಾದಾಮಿ, ಅಂಜೂರ, ಕೇಸರಿ, ನಾಲ್ಕು ಬಗೆಯ ಒಣದ್ರಾಕ್ಷಿ ಗುಣಮಟ್ಟ ಹಾಗೂ ಪೂರೈಕೆಯಲ್ಲಿ ಅಫ್ಘಾನಿಸ್ತಾನದ್ದು ಉತ್ತಮ ಎನ್ನುತ್ತಾರೆ ಡ್ರೖೆ ಫ್ರೂರ್ಟ್ಸ್​ನ ವ್ಯಾಪಾರಿಗಳು.
ದೀಪಾವಳಿಗೆ ಬೇಡಿಕೆ ಹೆಚ್ಚು:ಡ್ರೖೆ ಫ್ರೂಟ್ಸ್​ಗೆ ರಾಜ್ಯದಲ್ಲಿ ನಿತ್ಯವೂ ಬೇಡಿಕೆ ಇದ್ದೇ ಇದೆ. ಆದರೆ ದೀಪಾವಳಿ ಸಂದರ್ಭದಲ್ಲಿ ಈ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ. ಹಬ್ಬದ ಪ್ರಯುಕ್ತ ಬಹುತೇಕರು ಸಂಬಂಧಿಕರು ಹಾಗೂ ಸ್ನೇಹಿತರಿಗೆ ಉಡುಗೊರೆ ರೂಪದಲ್ಲಿ ಡ್ರೖೆ ಫ್ರೂಟ್ಸ್ ನೀಡುವುದು ಇತ್ತೀಚಿನ ದಿನಗಳಲ್ಲಿ ಸಂಪ್ರದಾಯವಾಗಿದೆ. ಹೀಗಾಗಿ ದೀಪಾವಳಿಯಲ್ಲಿ ಸಹಜವಾಗಿಯೇ ಬೇಡಿಕೆ ಹೆಚ್ಚಲಿದೆ ಎನ್ನುತ್ತಾರೆ ಜಯನಗರದ ಮಾನಕ್ ಮೇವಾ ಡ್ರೖೆ ಪ್ರೂಟ್ಸ್ ಮಳಿಗೆಯ ಮಾಲೀಕ ಸುಮಿತ್. ಆಫ್ಘನ್ ನಿಂದ ಡ್ರೖೆ ಫ್ರೂಟ್ಸ್ ಗಳ ಆಮದು ಸ್ಥಗಿತಗೊಂಡಿರುವುದರಿಂದ ದರ ಹೆಚ್ಚಳವಾಗಿದೆ. ಆದರೆ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಪೂರೈಕೆಯಲ್ಲಿ ಸಮಸ್ಯೆಯಾಗಬಹುದು. ಆಗ ಬೇಡಿಕೆ ಹೆಚ್ಚಿದಷ್ಟು ದರ ಮತ್ತಷ್ಟು ಹೆಚ್ಚಳವಾಗಬಹುದು. ದೀಪಾವಳಿ ಹಾಗೂ ರಂಜಾನ್ ಹಬ್ಬದ ಸಂದರ್ಭದಲ್ಲಿ ಡ್ರೖೆ ಫ್ರೂಟ್ಸ್ ಗಳಿಗೆ ಬಾರಿ ಬೇಡಿಗೆ ಇದೆ. ಅಷ್ಟರ ವೇಳೆಗೆ ಪರಿಸ್ಥಿತಿ ಸರಿಹೋಗಬಹುದು ಎನ್ನುತ್ತಾರೆ ವ್ಯಾಪಾರಿಗಳು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
