ನವದೆಹಲಿ:‘ಪಂಚರಾಜ್ಯಗಳ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನ ಅತ್ಯಂತ ನಿರಾಶಾದಾಯಕವಾಗಿದ್ದು, ನಮ್ಮ ಮನೆಯನ್ನು ನಾವು ಕ್ರಮಬದ್ಧವಾಗಿ ಇರಿಸಿಕೊಳ್ಳಬೇಕು’ಎಂದು ಹೇಳಿರುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸೋಲಿನ ಪ್ರತಿ ಮಗ್ಗುಲನ್ನು ಅವಲೋಕಿಸಲು ತಂಡ ರಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಸ್ಸಾಂ, ಕೇರಳ, ತಮಿಳುನಾಡು, ಪುದುಚೆರಿ ಹಾಗೂ ಪಶ್ಚಿಮ ಬಂಗಾಳದ ಮುಖಂಡರು ಪಕ್ಷದ ಸೋಲಿಗೆ ಕಾರಣ ಏನು ಎಂಬುದನ್ನು ಯಾವುದೇ ಮುಚ್ಚುಮರೆ ಇಲ್ಲದೆ ತಿಳಿಸಬೇಕು ಎಂದೂ ಸೂಚಿಸಿದರು. ಚುನಾವಣೆಯಲ್ಲಿ ಪಕ್ಷ ತೀವ್ರ ಮುಖಭಂಗ ಅನುಭವಿಸಿದ ನಂತರ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಈ ಪರಿಯ ಹೀನಾಯ ಪ್ರದರ್ಶನಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳಲು ಬಯಸುತ್ತೇವೆ. ತೀವ್ರ ಅತೃಪ್ತಿದಾಯಕ ಫಲಿತಾಂಶವು ಪಕ್ಷದ ಸಾಮರ್ಥ್ಯಕ್ಕೆ ಪ್ರಶ್ನಾರ್ಥಕವಾಗಿದೆ. ಮೊದಲು ನಾವು ನಮ್ಮ ಮನೆಯನ್ನು ಒಪ್ಪವಾಗಿ ಇರಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪರಾಮರ್ಶನಾ ತಂಡ ಅತಿ ಶೀಘ್ರದಲ್ಲಿ ವರದಿ ಸಲ್ಲಿಸಲಿದೆ ಎಂದು ಹೇಳಿದರು. ಚುನಾವಣೆ ಫಲಿತಾಂಶ ಬಂದ ದಿನ ನೀಡಿದ ಪ್ರತಿಕ್ರಿಯೆಯಲ್ಲೂ ‘ನಿರಾಶಾದಾಯಕ, ಅನಿರೀಕ್ಷಿತ’ ಎಂದು ಸೋನಿಯಾ ಹೇಳಿದ್ದರು. ಪಶ್ಚಿಮ ಬಂಗಾಳದಲ್ಲಿ ಒಂದು ಸ್ಥಾನವನ್ನೂ ಕಾಂಗ್ರೆಸ್ ಗೆದ್ದಿಲ್ಲ, ಅಸ್ಸಾಂನಲ್ಲಿ 29, ಕೇರಳದಲ್ಲಿ 41, ತಮಿಳುನಾಡಿನಲ್ಲಿ 18 ಕ್ಷೇತ್ರದಲ್ಲಿ ಜಯಗಳಿಸಿದೆ. ಪುದುಚೆರಿಯಲ್ಲಿ ಅಧಿಕಾರ ಕಳೆದುಕೊಂಡಿತು.
ಹೊಸ ಅಧ್ಯಕ್ಷರ ಆಯ್ಕೆ ಮತ್ತೆ ಮುಂದಕ್ಕೆ:ಕಾರ್ಯಕಾರಿ ಸಮಿತಿಯಲ್ಲಿ ಪಕ್ಷದ ಸಾಂಸ್ಥಿಕ ಚುನಾವಣೆ ಮತ್ತು ನೂತನ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆ ನಡೆಯಿತು. ನೂತನ ಅಧ್ಯಕ್ಷರ ಆಯ್ಕೆಗೆ ಜೂನ್ 23ರಂದು ಚುನಾವಣೆ ನಡೆಸುವ ಪ್ರಸ್ತಾವನೆ ಬಗ್ಗೆ ಕೆಲವು ಹಿರಿಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಕರೊನಾ ಸಾಂಕ್ರಾಮಿಕ ಇರುವ ಕಾರಣ ಅಧ್ಯಕ್ಷರ ಆಯ್ಕೆ ಇನ್ನಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಹಿರಿಯ ನಾಯಕರಲ್ಲಿ ಅಭಿಪ್ರಾಯಭೇದ ತರಬಲ್ಲ ಮತ್ತು ಅತ್ಯಂತ ಸೂಕ್ಷ್ಮ ವಿಚಾರವಾದ ಅಧ್ಯಕ್ಷರ ಆಯ್ಕೆ ವಿಷಯವು ಪಕ್ಷದಲ್ಲಿ ಒಡಕು ಉಂಟುಮಾಡುವ ಸಾಧ್ಯತೆ ಇರುವುದರಿಂದ ಇದನ್ನು ಸಾಧ್ಯವಾದಷ್ಟು ಮುಂದಕ್ಕೆ ಹಾಕುವ ಮನೋಭಾವ ಸಭೆಯಲ್ಲಿ ಕಾಣಿಸಿತು. 2020ರ ಆಗಸ್ಟ್​ನಲ್ಲಿ 20ಕ್ಕೂ ಹೆಚ್ಚು ಹಿರಿಯ ನಾಯಕರು ಪಕ್ಷದ ನಾಯಕತ್ವ ಬದಲಾವಣೆಗೆ ಬಯಸಿ ಪತ್ರ ಬರೆದ ನಂತರ ಸೋನಿಯಾ ಗಾಂಧಿ ಹೊಸಬರ ಆಯ್ಕೆಗೆ ಒಲವು ವ್ಯಕ್ತಪಡಿಸಿದ್ದರು. ಮುಂಚೂಣಿ ಘಟಕಗಳಲ್ಲಿ ಕೆಲವು ಬದಲಾವಣೆ ಮಾಡಿದರು. ಸಾಂಸ್ಥಿಕ ಚುನಾವಣೆ ಕುರಿತು ತಂಡ ರಚಿಸಿದ್ದರು. ಕಳೆದ ಅಕ್ಟೋಬರ್-ನವೆಂಬರ್​ನಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ಬಳಿಕ ಡಿಸೆಂಬರ್ ಅಂತ್ಯಕ್ಕೆ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎನ್ನಲಾಗಿತ್ತು. ಆದರೆ, ಪಂಚರಾಜ್ಯಗಳ ಚುನಾವಣೆಯ ಬಳಿಕ ಈ ಹೊಸ ಅಧ್ಯಕ್ಷರ ಆಯ್ಕೆ ಮಾಡಲು ಪಕ್ಷ ನಿರ್ಧರಿಸಿತು.
ಪಂಚರಾಜ್ಯಗಳ ಚುನಾವಣೆಯ ವೈಫಲ್ಯದ ಬಗ್ಗೆ ಪರಾಮಶಿಸಲು ಪಕ್ಷದ ಅಧ್ಯಕ್ಷೆ ಪ್ರಸ್ತಾಪಿಸಿರುವ ತಂಡವು 48 ತಾಸಿನಲ್ಲಿ ರಚನೆ ಆಗಲಿದೆ ಮತ್ತು ಶೀಘ್ರದಲ್ಲೇ ವರದಿ ನೀಡಲಿದೆ.
|ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೆವಾಲಾಕಾಂಗ್ರೆಸ್ ಹಿರಿಯ ಮುಖಂಡರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
