| ಕಿರಣ್ ಮಾದರಹಳ್ಳಿ/ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ (ಮೇಪ್ಪಾಡಿ, ವಯನಾಡು)
ಬದುಕು ಕಟ್ಟಿಕೊಳ್ಳಲು ಕೇರಳಕ್ಕೆ ವಲಸೆ ಹೋದ ವಯನಾಡಿನ ಕನ್ನಡಿಗರಿಗೆ ಈಗ ಅಳುವುದಕ್ಕೂ ಶಕ್ತಿ ಇಲ್ಲ. ಭೂ ಕುಸಿತ ದುರಂತದಲ್ಲಿ ಮನೆ, ಮಠ, ಆಸ್ತಿ ಪಾಸ್ತಿ ಜತೆಗೆ ಸಂಬಂಧಿಕರನ್ನೂ ಕಳೆದುಕೊಂಡಿರುವ ಕುಟುಂಬಗಳ ಕಣ್ಣೀರು ಮಳೆಯ ಪ್ರವಾಹದಲ್ಲಿ ಕೋಡಿಯಾಗಿ ಸೇರುತ್ತಿದೆ.
ಕೇರಳದ ವಯನಾಡಿನಲ್ಲಿ ನೂರಾರು ಕನ್ನಡಿಗರ ಕುಟುಂಬಗಳು ನೆಲೆ ಕಂಡು ಕೊಂಡಿವೆ. ಮುಂಡಕೈನಲ್ಲಿ ಬಹಳ ವರ್ಷಗಳಿಂದ ವಾಸವಿದ್ದ ತಮಿಳುನಾಡಿನ ತಾಳವಾಡಿಯ ಕಾಮಯ್ಯನಪುರ ಗ್ರಾಮದ ಕನ್ನಡಿಗರಾದ ರಂಗಸ್ವಾಮಿ(70), ಪತ್ನಿ ಪುಟ್ಟ ಸಿದ್ದಮ್ಮ(62) ಭೂ ಸಮಾಧಿಯಾಗಿದ್ದರು. ಇದೀಗ ಅವರ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾಗಿರುವ ಸಾಕುಮಗ ಮಹೇಶ್ (22) ಬದುಕಿರುವ ವಿಶ್ವಾಸ ಕಳೆದು ಕೊಂಡಿರುವ ಸಂಬಂಧಿಕರು ಶವಾಗಾರದ ಮುಂದೆ ಕಾದಿದ್ದಾರೆ.
ಅಮ್ಮ ಕಾಯುತ್ತಿದ್ದಾಳೆ: ಭೂ ಕುಸಿತದಲ್ಲಿ ನಾಪತ್ತೆಯಾಗಿರುವ ಮೂವರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳಿಗಾಗಿ ಮಹಿಳೆ ಕಾಯುತ್ತಿದ್ದಾಳೆ. ತಿ.ನರಸೀಪುರದ ಉಕ್ಕಲಗೆರೆಯವರಾದ ಮಹದೇವಿ ನಾಪತ್ತೆಯಾಗಿರುವ ತನ್ನ ಕುಟುಂಬದ 9 ಜನರನ್ನು ಹುಡುಕುತ್ತಿದ್ದಾಳೆ. ಆ ಪೈಕಿ 19 ವರ್ಷದ ಮೊಮ್ಮಗಳು ಶ್ರೇಯಾ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾಳೆ. ಇನ್ನುಳಿದಂತೆ ಮಕ್ಕಳಾದ ಗುರುಮಲ್ಲ(70), ಶಿವಣ್ಣ(45), ಸಿದ್ದರಾಜು(42), ಸೊಸೆಯಂದಿರಾದ ಸಾವಿತ್ರಿ(52), ಸವಿತಾ(44), ದಿವ್ಯಾ(35), ಮೊಮ್ಮಕ್ಕಳಾದ ಅಶ್ವಿನಿ(13), ರಕ್ಷಿತ್ ಕೃಷ್ಣ(10) ಅವರ ಸುಳಿವು ಸಿಕ್ಕಿಲ್ಲ. ಮೆಪ್ಪಾಡಿಯ ಕಾಳಜಿ ಕೇಂದ್ರದಲ್ಲಿ ಮಹದೇವಿ ಆಶ್ರಯ ಪಡೆದಿದ್ದಾರೆ.
ಕೇರಳದಲ್ಲಿ 270ಕ್ಕೇರಿದ ಸಾವಿನ ಸಂಖ್ಯೆ:ವಯನಾಡು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 270ಕ್ಕೆ ಏರಿಕೆ ಆಗಿದೆ. ಮುಂಡಕೈ ಮತ್ತು ಚೂರಲ್​ವುಲಾ ಪ್ರದೇಶದಲ್ಲಿ 300 ಮನೆಗಳು ಸಂಪೂರ್ಣ ನೆಲಸಮಗೊಂಡು ಮಣ್ಣಿನ ರಾಶಿಯಲ್ಲಿ ಸಿಲುಕಿದ್ದು, 180ಕ್ಕೂ ಅಧಿಕ ಮಂದಿ ನಾಪತ್ತೆ ಆಗಿದ್ದಾರೆ. ಹೀಗಾಗಿ ಸಾವು-ನೋವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಕೇರಳದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಕುರಿತು ಕೇಂದ್ರ ಸರ್ಕಾರ ಮೊದಲೇ ಅಲ್ಲಿನ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಿತ್ತೆಂಬ ವಿಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂಸತ್​ನಲ್ಲಿ ಬಹಿರಂಗಪಡಿಸಿದ್ದಾರೆ.
ಶವಗಳಿಗೆ ಹುಡುಕಾಟ:ಚಾಮರಾಜನಗರ ತಾಲೂಕಿನ ಇರಸವಾಡಿಯ ರತ್ನಮ್ಮ ಮತ್ತು ರಾಜೇಂದ್ರ ನಾಪತ್ತೆಯಾಗಿ ದಿನ ಕಳೆದಿದೆ. ಅವರು ಬದುಕಿರಬಹುದೆಂಬ ವಿಶ್ವಾಸವಿಲ್ಲ. ಅವರಿಗಾಗಿ ದುಃಖಿಸುತ್ತಿರುವ ಕುಟುಂಬಸ್ಥರಿಗೆ ಕೊನೆಯದಾಗಿ ಮುಖ ನೋಡಲು ಶವಗಳು ಸಿಗದೆ ಇರಬಹುದೆಂಬ ನೋವಿದೆ.
ಕಾಳಜಿ ಕೇಂದ್ರದಲ್ಲಿ ಮೌನ:ಪ್ರವಾಹ ಸಂಭವಿಸಿರುವ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಮೇಪ್ಪಾಡಿಯ ಕಾಳಜಿ ಕೇಂದ್ರ ಬದುಕು ಕಳೆದುಕೊಂಡ ಅಸಹಾಯಕರ ಕೇಂದ್ರವಾಗಿದೆ. ಚಾಮರಾಜನಗರ ತಹಸೀಲ್ದಾರ್ ಗಿರಿಜಾ ಭೂಕುಸಿತದಲ್ಲಿ ರಕ್ಷಿಸಿದವರ ಪೈಕಿ 40ಕ್ಕೂ ಕನ್ನಡಿಗರಿದ್ದಾರೆ. ಇವರೆಲ್ಲ ಮೂಲತಃ ಕರ್ನಾಟಕದವರು ಎಂದು ತಿಳಿಸಿದ್ದಾರೆ. ಇವರೆಲ್ಲ ಬದುಕು ಅರಸಿ ವಯನಾಡಿನ ಸುತ್ತಮುತ್ತಲ ಗ್ರಾಮಗಳಿಗೆ ಬಂದು ನೆಲೆಸಿದ್ದರು. ಕೂಲಿ ಮಾಡಿ, ಕಾಸು ಕೂಡಿಟ್ಟು, ಮನೆ ಕಟ್ಟಿಕೊಂಡಿದ್ದವರು. ಈಗ ಬೀದಿಗೆ ಬಿದ್ದಿದ್ದಾರೆ. ನಾಪತ್ತೆಯಾಗಿರುವ ತನ್ನವರಿಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಕೇರಳದ ಸ್ವಯಂಸೇವಕರು ಸಂತ್ರಸ್ತರಿಗಾಗಿ ಊಟ, ವಸತಿ ಮತ್ತು ಇನ್ನಿತರ ಸೌಕರ್ಯಗಳನ್ನು ಉತ್ತಮವಾಗಿ ಒದಗಿಸಿಕೊಡುತ್ತಿದ್ದಾರೆ.
ಊರಿಂದ ಬಂದ ಸಂಬಂಧಿಕರು:ವಯನಾಡಿನಲಿದ್ದ ಸಂಬಂಧಿಕರನ್ನು ಹುಡುಕಿಕೊಂಡು ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಇತರ ಜಿಲ್ಲೆಗಳಿಂದ ಕುಟುಂಬಸ್ಥರು ಆಗಮಿಸಿದ್ದಾರೆ. ಕಾಳಜಿ ಕೇಂದ್ರಗಳಿಗೆ ಆಗಮಿಸಿ ಯೋಗಕ್ಷೇಮ ವಿಚಾರಿಸಿದ್ದಾರೆ. ಮೃತಪಟ್ಟವರ ಶವಗಳನ್ನು ಊರಿಗೆ ತೆಗೆದುಕೊಂಡು ಹೋಗುವುದು, ನಾಪತ್ತೆಯಾದವರ ಬಗ್ಗೆ ವಿಚಾರಿಸುವ ಕಾರ್ಯ ನಡೆದಿದೆ.
ಅಧಿಕಾರಿಗಳು ಠಿಕಾಣಿ: ಮೇಪ್ಪಾಡಿಯಲ್ಲಿ ಕನ್ನಡಿಗರ ಯೋಗಕ್ಷೇಮ ವಿಚಾರಿಸಲು ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್​ಬಾಬು, ಚಾಮರಾಜನಗರ ತಹಸೀಲ್ದಾರ್ ಗಿರಿಜಾ ಮತ್ತು ಸಿಬ್ಬಂದಿ ಕಾಳಜಿ ಕೇಂದ್ರದಲ್ಲಿದ್ದುಕೊಂಡು ಕನ್ನಡಿಗರನ್ನು ನೋಡಿಕೊಳ್ಳುತ್ತಿದ್ದಾರೆ. ಸರ್ಕಾರದಿಂದ ಐಎಎಸ್ ಅಧಿಕಾರಿಗಳಾದ ದಿಲೀಪ್, ಜಾಫರ್ ಅವರನ್ನು ನಿಯೋಜನೆ ಮಾಡಲಾಗಿದೆ.
ಕನ್ನಡಿಗರ ಪತ್ತೆಯೇ ಸವಾಲು:ಭೂ ಕುಸಿತದಲ್ಲಿ ಮೃತಪಟ್ಟವರು, ಸಂತ್ರಸ್ತರಲ್ಲಿ ಕನ್ನಡಿಗರನ್ನು ಗುರುತಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಬಹಳ ವರ್ಷಗಳ ಹಿಂದೆಯೇ ಇಲ್ಲಿಗೆ ಬಂದು ನೆಲೆಸಿರುವ ಕನ್ನಡಿಗರ ವಿಳಾಸ ಇಲ್ಲಿಯದ್ದೇ ಆಗಿದೆ. ಆದರೆ ಇವರ ಮೂಲ ಕರ್ನಾಟಕವಾಗಿದ್ದು, ಕನ್ನಡ ಮಾತನಾಡಿದಾಗ, ಕರ್ನಾಟಕದಿಂದ ಸಂಬಂಧಿಕರು ಬಂದು ವಿಚಾರಿಸುವಾಗ ಕನ್ನಡದವರೆಂದು ಖಚಿತವಾಗುತ್ತಿದೆ.
ಮೇಪ್ಪಾಡಿ(ವಯನಾಡು):ಭೂಕುಸಿತದಲ್ಲಿ ತನ್ನ ಕುಟುಂಬ 9 ಜನರನ್ನು ಕಳೆದುಕೊಂಡಿರುವ ಸಂತ್ರಸ್ತೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್​ನಲ್ಲಿ ಮಾತನಾಡಿದರು. ಮೇಪ್ಪಾಡಿ ಕಾಳಜಿ ಕೇಂದ್ರದಲ್ಲಿರುವ ಮಹದೇವಿ ಅವರನ್ನು ಫೋನ್​ನಲ್ಲಿ ಸಂಪರ್ಕ ಮಾಡಿದ ಸಿಎಂ ಯೋಗಕ್ಷೇಮ ವಿಚಾರಿಸಿದರು. ‘ನಮ್ಮೂರು ತಿ.ನರಸೀಪುರ. ಆಗಿನ ಕಾಲದಲ್ಲಿ ಮಳೆ, ಬೆಳೆ ಇಲ್ಲದೆ ಇಲ್ಲಿಗೆ ಬಂದು ಬಿಟ್ಟೆವು. ಭೂ ಕುಸಿತದಲ್ಲಿ ನಮ್ಮ ಕುಟುಂಬದ 9 ಜನರನ್ನು ಕಳೆದುಕೊಂಡಿದ್ದೇವೆ’ ಎಂದು ಗದ್ಗದಿತರಾದರು. ಸಾಂತ್ವನ ಹೇಳಿದ ಸಿಎಂ ಸಿದ್ದರಾಮಯ್ಯ ಸಹಾಯ ಮಾಡುವುದಾಗಿ ಭರವಸೆ ಕೊಟ್ಟರು.
ಮಕ್ಕಳು, ಸೊಸೆ, ಮೊಮ್ಮಕ್ಕಳು ಚೂರಲ್​ವ್ಮುಲಾದಲ್ಲಿ ವಾಸವಿದ್ದರು. ಪ್ರವಾಹ ಸಂಭವಿಸಿದಾಗ ಮನೆ ಮೇಲೆ ಹತ್ತಿ ನಿಂತಿದ್ದರಂತೆ. ಆಮೇಲೆ ಅವರ ಸಂಪರ್ಕ ಸಿಗಲೇ ಇಲ್ಲ. ಬದುಕಿದ್ದಾರೋ, ಸತ್ತಿದ್ದಾರೋ ಗೊತ್ತಿಲ್ಲ. ಅವರಿಗಾಗಿ ನಾನು ಕಾಯುತ್ತಿದ್ದೇನೆ.
| ಮಹದೇವಿ ಕನ್ನಡತಿ
ರಾಜ್ಯಸಭಾ ಸದಸ್ಯತ್ವಕ್ಕೆ ಬಿಜೆಡಿ ನಾಯಕಿ ಮಮತಾ ಮೊಹಾಂತಾ ರಾಜೀನಾಮೆ! ಬಿಜೆಪಿ ಸೇರ್ಪಡೆ ಸಾಧ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 3 =
Remember me
