ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಜನಮಾನಸಕ್ಕೆ ಹತ್ತಿರವಾಗಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮಕ್ಕಳ ಪಾಲಿಗಂತೂ ಭಾರಿ ಅಚ್ಚುಮೆಚ್ಚು. ಕಲಾಂರ ಚಿಂತನೆಗಳ ಬಲದೊಂದಿಗೇ ಸಮಾಜಮುಖಿ ಕೆಲಸದಲ್ಲಿ ತೊಡಗಿರುವವರು ಅಸಂಖ್ಯ ಜನ. ಈ ಪೈಕಿ ಪ್ರಮುಖರಾದವರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರಾದ ತೇಜಸ್ವಿನಿ ಅನಂತಕುಮಾರ್. ವಿಜ್ಞಾನಿಯಾಗಿ, ಆ ಬಳಿಕ ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕಲಾಂರನ್ನು, ಅವರ ವ್ಯಕ್ತಿತ್ವವನ್ನು ನಿಕಟದಿಂದ ಕಂಡ ಅನುಭವಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.
| ತೇಜಸ್ವಿನಿ ಅನಂತಕುಮಾರ್
ನಿಜಕ್ಕೂ ಮಗುವಿನಂಥ ಮನಸ್ಸು ಅವರದ್ದು!
ಅಷ್ಟು ಎತ್ತರದ ಸ್ಥಾನಕ್ಕೇರಿದ ಬಳಿಕವೂ ಆ ಬಗೆಯ ಸೌಜನ್ಯ, ಸರಳತೆ, ಸಹಜತೆ ಹೊಂದುವುದಿದೆಯಲ್ಲ ಅದು ಕಲಾಂರಿಂದ ಮಾತ್ರ ಸಾಧ್ಯ. ಇಡೀ ದಿನ ಬಿಜಿಯಾಗಿ ಇರುತ್ತಿದ್ದ ಅವರಿಗೆ ಪ್ರತಿಕ್ಷಣವೂ ಅಮೂಲ್ಯ. ಯಾವುದೇ ಕಾರ್ಯಕ್ರಮ ಇರಲಿ ತಡವಾಗಿ ಬರುತ್ತಿರಲಿಲ್ಲ; ಅಷ್ಟೇ ಅಲ್ಲ ಮುಂದಿನ ಕಾರ್ಯಕ್ರಮಕ್ಕೆ ಹೋಗಬೇಕಾದ ಸಮಯ ಬಂದರೆ ಸಂಘಟಕರಿಗೆ ತಿಳಿಸಿ, ಸೀದಾ ನಡೆದು ಬಿಡುತ್ತಿದ್ದರು. ಎಲ್ಲರಲ್ಲೂ ಉತ್ಸಾಹ ತುಂಬುತ್ತ, ಹೊಸ ಸಂಗತಿಗಳನ್ನು ತಿಳಿಸುವ ಅವರ ಪರಿಯೇ ವಿಶಿಷ್ಟ.
ಏರೋನಾಟಿಕಲ್ ಡೆವ್​ಲಪ್​ವೆುಂಟ್ ಏಜೆನ್ಸಿಯಲ್ಲಿ ನಾನು 1993-94ರಲ್ಲಿ ವಿಜ್ಞಾನಿಯಾಗಿದ್ದ ಸಂದರ್ಭ. ಕಲಾಂ ಈ ಸಂಸ್ಥೆಗೆ ಡೈರೆಕ್ಟರ್ ಜನರಲ್ ಆಗಿದ್ದರು. ಆದರೆ, ಅದೇ ಸಂದರ್ಭದಲ್ಲಿ ಅವರು ಪ್ರಧಾನಿಯ ವೈಜ್ಞಾನಿಕ ಸಲಹೆಗಾರರಾಗಿ ನೇಮಕವಾಗಿದ್ದರಿಂದ ದೆಹಲಿಯಲ್ಲೇ ಹೆಚ್ಚಾಗಿ ಇರುತ್ತಿದ್ದರು. ನನ್ನ ಹಿರಿಯ ಸಹೋದ್ಯೋಗಿಗಳು ಹೇಳುವ ಪ್ರಕಾರ ಬೆಂಗಳೂರಿಗೆ ಬಂದಾಗ ಅವರ ಕಾರ್ಯಕ್ರಮಗಳನ್ನು ಮುಗಿಸಿಕೊಂಡು, ರಾತ್ರಿ 2 ಗಂಟೆಗೆ ಕಚೇರಿಗೆ ಭೇಟಿ ನೀಡುತ್ತಿದ್ದರಂತೆ. ನಾವು ಕೆಲಸ ಮಾಡುವ ಸಂಸ್ಥೆಗೆ ಕಲಾಂ ಮುಖ್ಯಸ್ಥರು ಎಂಬ ಹೆಮ್ಮೆಯೇ ನಮಗೆ ಖುಷಿ ಕೊಡುತ್ತಿತ್ತು. ದಿನದ ಯಾವುದೇ ಸಮಯದಲ್ಲೂ ಕಲಾಂ ಕೆಲಸ ಮಾಡುತ್ತಿದ್ದರು ಮತ್ತು ಉಳಿದ ಸಿಬ್ಬಂದಿಯೂ ಅದೇ ರೀತಿ ಕಾರ್ಯನಿರ್ವಹಿಸುವಂತೆ ಪ್ರೇರಣೆ ತುಂಬುತ್ತಿದ್ದರು.
ಮುಂದೆ, ಏರ್ ಶೋ ಕಾರ್ಯಕ್ರಮದಲ್ಲಿ ಮತ್ತು ‘ತೇಜಸ್’ ಯುದ್ಧವಿಮಾನದ ನಾಮಕರಣ ಸಮಾರಂಭದಲ್ಲಿ ಕಲಾಂ ಅವರ ಸಾಮೀಪ್ಯ ಸಿಕ್ಕಿತು. 1998ರ ಏರ್ ಶೋ ಉದ್ಘಾಟನೆಗೆ ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಬಂದಿದ್ದರು ಮತ್ತು ನಾಗರಿಕ ವಿಮಾನಯಾನ ಸಚಿವರಾಗಿದ್ದ ಅನಂತಕುಮಾರ್ ಜತೆಯಲ್ಲಿದ್ದರು. ಆಗ ಕಲಾಂ ಕುತೂಹಲದಿಂದ ವಿಮಾನಗಳ ಕುರಿತು ವಿವರಣೆ ನೀಡುತ್ತಿದ್ದರು. ‘ಇದರ ವಿಶೇಷತೆ ಏನು ಗೊತ್ತೆ?’ ಎಂದು ಪ್ರಶ್ನಿಸುತ್ತ, ಮಾಹಿತಿ ನೀಡುತ್ತಿದ್ದರು.
ರಾಷ್ಟ್ರಪತಿ ಅವಧಿ ಮುಗಿದ ಎರಡು ತಿಂಗಳ ಬಳಿಕ (2007) ಅದಮ್ಯ ಚೇತನ ಸಂಸ್ಥೆ ಆಯೋಜಿಸಿದ್ದ ಶಾಲಾಮಕ್ಕಳಿಗಾಗಿ ಆರೋಗ್ಯ ವಿಮೆ ಯೋಜನೆಯ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಆಗ ಅದಮ್ಯ ಚೇತನದ ಅನ್ನಪೂರ್ಣ ಅಡುಗೆಮನೆ ಕಂಡು ಭಾರಿ ಸಂತೋಷ ಪಟ್ಟಿದ್ದು ಮಾತ್ರವಲ್ಲದೆ, ಹೀಗೆ ಊಟ ಒದಗಿಸುವ ಕೆಲಸ ಬಹಳ ಸಾರ್ಥಕ ಮತ್ತು ಪುಣ್ಯದಾಯಕ ಎಂದರು. ‘ತಾಯಿ ಹೆಸರಲ್ಲಿ ನಾನೂ ಒಂದು ಟ್ರಸ್ಟ್ ಸ್ಥಾಪಿಸಿ, ಇಂಥ ಕೆಲಸ ಮಾಡಬೇಕು. ಅದಕ್ಕೆ ಏನೆಲ್ಲ ಪ್ರಕ್ರಿಯೆ ಇದೆ, ಮಾಹಿತಿ ಕೊಡಿ’ ಎಂದವರು ಕೇಳಿದಾಗ ಅವರ ವಿನಯತೆಗೆ ಶರಣಾದೆವು. ಅದೇ ಸಂದರ್ಭದಲ್ಲಿ ಮಕ್ಕಳ ಜತೆ ಸಂವಾದ ಸಾಧಿಸಿದರು. ಅದಕ್ಕೂ ಮುನ್ನವೇ, ‘ಪ್ರಶ್ನೆಗಳನ್ನು ಮಕ್ಕಳೇ ತಯಾರಿಸಲಿ, ಶಿಕ್ಷಕರು ಬರೆಯುವುದು ಬೇಡ’ ಎಂದು ತಾಕೀತು ಮಾಡಿದ್ದರು. ಅದಕ್ಕಾಗಿ, ನಮ್ಮ ಸಂಸ್ಥೆಯ ಸ್ವಯಂಸೇವಕರು ಹೈಸ್ಕೂಲ್​ಗಳಿಗೆ ಹೋಗಿ, ‘ನಿಮ್ಮ ಮುಂದೆ ಈಗ ಕಲಾಂ ಬಂದರೆ ಯಾವ ಪ್ರಶ್ನೆ ಕೇಳುತ್ತೀರಿ?’ ಎಂದು ಮಕ್ಕಳಿಂದ ತಿಳಿದುಕೊಂಡರು. ಹಾಗೇ 400-500 ಪ್ರಶ್ನೆಗಳು ಒಟ್ಟಾದಾಗ ಅದರಲ್ಲಿ 70 ಪ್ರಶ್ನೆಗಳನ್ನು ಆಯ್ಕೆ ಮಾಡಿದೆವು. 500 ಮಕ್ಕಳಿದ್ದ ಕಾರ್ಯಕ್ರಮದಲ್ಲಿ, ತೀಕ್ಷ್ಣ ಪ್ರಶ್ನೆಗಳಿಗೆ ಕಲಾಂ ಖುಷಿಖುಷಿಯಿಂದ ಉತ್ತರಿಸಿದರು. ಮಕ್ಕಳೊಂದಿಗೆ ಬೆರೆತು, ಸಂತೋಷ ಪಟ್ಟರು. 43 ನಿಮಿಷಗಳ ಕಾಲ ಆ ಕಾರ್ಯಕ್ರಮದಲ್ಲಿ ಇದ್ದು, ಪ್ರತೀ ನಿಮಿಷವನ್ನೂ ಅವಿಸ್ಮರಣೀಯವಾಗಿಸಿದರು.
ಸಮಯಕ್ಕೆ ಎಷ್ಟು ಮಹತ್ವ ನೀಡುತ್ತಿದ್ದರು ಎಂದರೆ ನಾವು ಒಂದು ಟ್ರೇನಲ್ಲಿ ಅವರಿಗಾಗಿ ಕಾಫಿ, ಚಹಾ, ಮಜ್ಜಿಗೆ ಇರಿಸಿದಾಗ ಅವರು ಮಜ್ಜಿಗೆಯನ್ನು ಎತ್ತಿಕೊಂಡು ಗಟಗಟನೇ ಕುಡಿದರು. ವೇದಿಕೆಗೆ ಬಂದ ಮೇಲೆ ನಗುಮೊಗದಿಂದ, ‘ಮಜ್ಜಿಗೆ ಏಕೆ ತೆಗೆದುಕೊಂಡೆ ಗೊತ್ತಾ, ಅದನ್ನು ತಕ್ಷಣ ಕುಡಿಯಬಹುದು. ಕಾಫಿ ಕುಡಿಯಲು ಸಮಯ ಬೇಕು. ಇಲ್ಲದಿದ್ದರೆ ನನಗೆ ಕಾಫಿಯೇ ಇಷ್ಟ…’ ಎಂದರು. ಯಾವುದೇ ಕಾರ್ಯಕ್ರಮವಿರಲಿ ಅದು ಒನ್ ವೇ ಆಗುತ್ತಿರಲಿಲ್ಲ. ಕಲಾಂ ನೆರೆದ ವಿದ್ಯಾರ್ಥಿಗಳನ್ನು, ಸಭಿಕರನ್ನು ಪ್ರಶ್ನಿಸುತ್ತ-ಸಂವಾದ ಮಾಡುತ್ತ ಅದಕ್ಕೆ ಜೀವಕಳೆ ತುಂಬುತ್ತಿದ್ದರು. ಪ್ರತಿಜ್ಞೆ ಬೋಧಿಸುವುದು, ಒಳ್ಳೆಯ ಸಂಗತಿಗಳನ್ನು ಮನದಟ್ಟು ಮಾಡಿಕೊಡುವುದು… ಇದನ್ನೆಲ್ಲ ನೋಡುತ್ತಿದ್ದಾಗ ಅವರ ನಿಷ್ಕಲ್ಮಶ ಭಾವ ಅರಿವಿಗೆ ಬರುತ್ತಿತ್ತು. ಅವರು ಯಾವುದೇ ಸಂಗತಿ ಹೇಳಿದರೂ ಸುಮ್ಮನೆ ಹೇಳುತ್ತಿರಲಿಲ್ಲ, ಅದು ಮನಸ್ಸಿನ ಆಳದಿಂದ ಬರುತ್ತಿತ್ತು.
ಚಾಮರಾಜಪೇಟೆಯ ಮರಿಯಪ್ಪ ಹಾಸ್ಟೇಲಿನ ಶತಮಾನೋತ್ಸವ ಸಮಾರಂಭಕ್ಕೆ ಬಂದಾಗ ಅವರನ್ನು ಮತ್ತೊಮ್ಮೆ ಕಾಣುವ ಅವಕಾಶ ಲಭಿಸಿತು. ಒಟ್ಟಾರೆ, ಅವರೊಬ್ಬ ಶ್ರೇಷ್ಠ ವಿಜ್ಞಾನಿ, ಮಾನವತಾವಾದಿಯಾಗಿದ್ದರೂ ಎಲ್ಲರನ್ನೂ ಎಟಕುವ ಸರಳ, ಅದ್ಭುತ ಮನುಷ್ಯರಾಗಿದ್ದರು.

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:11 + one =
Remember me
