ಪಣಜಿ:ಗೋವಾ ಕಾಂಗ್ರೆಸ್​ನ 11 ಶಾಸಕರ ಪೈಕಿ 10 ಶಾಸಕರು ಬಿಜೆಪಿಯೊಂದಿಗೆ ವಿಲೀನವಾಗಲು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ವರಿಷ್ಠರು ಕಾಂಗ್ರೆಸ್​ನ 10 ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ. ಗೋವಾ ವಿಧಾನಸಭೆ ಅಧಿವೇಶನ ಜುಲೈ 11ರಂದು ಆರಂಭಗೊಳ್ಳಲಿದೆ. ರಾಜ್ಯ ರಾಜಕೀಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೋವಾ ಪ್ರಭಾರಿ ದಿನೇಶ ಗುಂಡೂರಾವ್ ಶನಿವಾರ ಗೋವಾಕ್ಕೆ ಆಗಮಿಸಿದ್ದಾರೆ. ಅವರು ಕಾಂಗ್ರೆಸ್ ಶಾಸಕರ ಸಭೆ ನಡೆಸಿ ಎಲ್ಲರನ್ನೂ ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೆ, ಪಕ್ಷದ 11 ಶಾಸಕರ ಪೈಕಿ 10 ಜನರು ಯಾರ ಮಾತಿಗೂ ಸೊಪ್ಪು ಹಾಕಲು ಸಿದ್ಧರಿಲ್ಲ ಎಂದೇ ಹೇಳಲಾಗುತ್ತಿದೆ. ಪ್ರತಿಪಕ್ಷದ ನಾಯಕ ಮೈಕಲ್ ಲೋಬೊ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ಶಾಸಕರೆಲ್ಲ ಒಗ್ಗಟ್ಟಾಗಿದ್ದೇವೆ. ಪಕ್ಷದ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂಬುದು ಕೇವಲ ವದಂತಿ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಜು. 11ರಂದು ಅಧಿವೇಶನ ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಯತಂತ್ರ ರೂಪಿಸಲು ನಾವು ಸಭೆ ಸೇರಿದ್ದೇವೆ’ ಎಂದರು.
ಅಲ್ಲಗಳೆದ ಕಾಂಗ್ರೆಸ್:ಗೋವಾದ 11 ಕಾಂಗ್ರೆಸ್ ಶಾಸಕರ ಪೈಕಿ ಕೆಲವರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಆದರೆ, ಇದು ಕೇವಲ ಊಹಾಪೋಹವೇ ಹೊರತು ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಶನಿವಾರ ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಇತರ ಕಾಂಗ್ರೆಸ್ ಮುಖಂಡರು ಕೂಡ ಪಕ್ಷಾಂತರದ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ಪಕ್ಷದ ಎಲ್ಲ 11 ಶಾಸಕರೊಂದಿಗೆ ಪಣಜಿಯ ಒಂದು ಹೋಟೆಲ್​ನಲ್ಲಿ ಶನಿವಾರ ನಡೆಸಿದ ಸಭೆಗೂ ಪಕ್ಷಾಂತರ ವದಂತಿಗೂ ಯಾವುದೇ ಸಂಬಂಧವಿಲ್ಲ. ಸೋಮವಾರ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿತ್ತು ಎಂದು ಮುಖಂಡರು ವಿವರಿಸಿದ್ದಾರೆ.
ಸುಳಿವು ನೀಡಿದ್ದ ಸಿ.ಟಿ. ರವಿ:20 ಶಾಸಕರನ್ನು ಹೊಂದಿರುವ ಬಿಜೆಪಿ ಇತರ ಐವರೊಂದಿಗೆ ಸೇರಿ ಗೋವಾದಲ್ಲಿ ಸರ್ಕಾರ ರಚಿಸಿದೆ. ವರ್ಷಾಂತ್ಯದೊಳಗೆ ಪಕ್ಷದ ಬಲ 30ಕ್ಕೇರಲಿದೆ ಎಂದು ಬಿಜೆಪಿಯ ಗೋವಾ ಉಸ್ತುವಾರಿ ಸಿ.ಟಿ. ರವಿ ಮೇ ತಿಂಗಳಲ್ಲಿ ಹೇಳಿದ್ದ ಹಿನ್ನೆಲೆಯಲ್ಲಿ ಈ ಊಹಾಪೋಹಕ್ಕೆ ಮಹತ್ವ ಬಂದಿದೆ.
ಕಾಂಗ್ರೆಸ್ ನಾಯಕ ವಜಾ:ಪಕ್ಷದ ಶಾಸಕರ ಪಕ್ಷಾಂತರದ ಪಿತೂರಿ ಹೆಣೆದಿದ್ದ ಆರೋಪದ ಮೇಲೆ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕನಾಗಿರುವ ಮೈಕೆಲ್ ಲೋಬೊ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ಪಕ್ಷ ವಜಾ ಮಾಡಿದೆ. ಪಕ್ಷವನ್ನು ದುರ್ಬಲಗೊಳಿಸಲು ಬಿಜೆಪಿಯೊಂದಿಗೆ ಸ್ವತಃ ತಮ್ಮ ಪಕ್ಷದವರೇ ಪಿತೂರಿ ಹೂಡಿದ್ದರು ಎಂದು ಕಾಂಗ್ರೆಸ್ ನಾಯಕರು ಹೇಳಿದರು.
ಪಕ್ಷಗಳ ಬಲಾಬಲ:ಕಳೆದ ಮಾರ್ಚ್​ನಲ್ಲಿ ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿ 40 ಕ್ಷೇತ್ರಗಳ ಪೈಕಿ ಬಿಜೆಪಿ 20ರಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಮಿತ್ರಪಕ್ಷಗಳ ಬೆಂಬಲದೊಂದಿದೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಪ್ರಮೋದ್ ಸಾವಂತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಈ ಮೂಲಕ ಗೋವಾದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
40 ಕೋಟಿ ರೂ. ಆಫರ್:ಬಿಜೆಪಿ ಸೇರಲು ಕಾಂಗ್ರೆಸ್​ನ ಪ್ರತಿ ಶಾಸಕರಿಗೆ ತಲಾ 40 ಕೋಟಿ ರೂಪಾಯಿ ಆಮಿಷ ಒಡ್ಡಲಾಗಿದೆ ಎಂದು ಗೋವಾ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ಗಿರೀಶ್ ಚೋದನ್​ಕರ್ ಭಾನುವಾರ ಆರೋಪಿಸಿದ್ದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಆದರೆ, ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ.
ಮಹಾರಾಷ್ಟ್ರ ಪ್ರಕರಣ ಇಂದು ಸುಪ್ರೀಂನಲ್ಲಿ ವಿಚಾರಣೆ:ಮಹಾರಾಷ್ಟ್ರದಲ್ಲಿ ಸಿಎಂ ಏಕನಾಥ ಶಿಂಧೆ ಬಣದ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಸೋಮವಾರ ಸುಪ್ರೀಂಕೋರ್ಟ್​ನಲ್ಲಿ ನಡೆಯಲಿದೆ. ಜೂ. 27ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಡೆಪ್ಯುಟಿ ಸ್ಪೀಕರ್ ಹಾಗೂ ಇತರ ಶಾಸಕರಿಗೆ ಕೋರ್ಟ್ ನೋಟಿಸ್ ನೀಡಿತ್ತು. ಈಗಾಗಲೇ ಅವರು ಕೋರ್ಟ್​ಗೆ ಪ್ರತಿಕ್ರಿಯೆ ಸಲ್ಲಿಸಿದ್ದಾರೆ.
53 ಶಿವಸೇನೆ ಶಾಸಕರಿಗೆ ನೋಟಿಸ್:ಶಿವಸೇನೆಯ 55 ಶಾಸಕರ ಪೈಕಿ 53 ಮಂದಿಗೆ ಮಹಾರಾಷ್ಟ್ರ ಶಾಸಕಾಂಗದ ಕಾರ್ಯದರ್ಶಿ ಪಕ್ಷಾಂತರ ನಿಷೇಧ ಕಾನೂನು ಅನ್ವಯ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಅವರಲ್ಲಿ 39 ಶಾಸಕರು ಶಿಂಧೆ ಬಣ, 14 ಮಂದಿ ಉದ್ಧವ್ ಠಾಕ್ರೆ ಗುಂಪಿನವರಾಗಿದ್ದಾರೆ.
ಫುಡ್​ ಡೆಲಿವರಿ ಬಾಯ್ ಆಗಿ ಮನೆ ಮನೆಗೂ ತೆರಳಿದ ನಾಯಕ ನಟ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
