ಚಂಡೀಗಢ:ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಕೃಷಿ ಸಾಲ ಮನ್ನಾ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರೈತರು ಹಮ್ಮಿಕೊಂಡಿರುವ ‘ದೆಹಲಿ ಚಲೋ’ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪಂಜಾಬ್​ನ ಶಂಭು ಮತ್ತು ಖಾನೌರಿ ಗಡಿಯಲ್ಲಿ ಬ್ಯಾರಿಕೇಡ್​ಗಳನ್ನು ತೆರವು ಮಾಡಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಹರಿಯಾಣ ಪೊಲೀಸರು ಬುಧವಾರ ಅಶ್ರುವಾಯು ಶೆಲ್​ಗಳನ್ನು ಹಾರಿಸಿದ್ದಾರೆ. ಮತ್ತೊಂದೆಡೆ ಶಂಭು ಗಡಿಯಲ್ಲಿ ರೈತನೊಬ್ಬ ಮೃತಪಟ್ಟಿದ್ದಾನೆ. ಈ ನಡುವೆ 2 ದಿನ ಪ್ರತಿಭಟನೆ ಸ್ಥಗಿತ ಮಾಡುವುದಾಗಿ ರೈತರು ಹೇಳಿದ್ದಾರೆ.
ರೈತರು ಟ್ರ್ಯಾಕ್ಟರ್​ ಟ್ರಾಲಿಗಳು, ಮಿನಿ ವ್ಯಾನ್​ಗಳು, ಪಿಕಪ್ ಟ್ರಕ್​ಗಳೊಂದಿಗೆ ಗಡಿಯತ್ತ ಜಮಾಯಿಸುತ್ತಿದ್ದಾರೆ. ಪ್ರತಿಭಟನಾ ಸ್ಥಳಗಳಲ್ಲಿ ಅಗೆಯುವ ಯಂತ್ರ ಗಳು, ಮಾರ್ಪಡಿಸಿದ ಟ್ರಾ್ಯಕ್ಟರ್​ಗಳು ಸೇರಿ ಭಾರಿ ಗಾತ್ರದ ಉಪಕರಣಗಳು ಕಂಡುಬರುತ್ತಿವೆ. ಬ್ಯಾರಿಕೇಡ್​ಗಳನ್ನು ಮುರಿಯಲು, ಭದ್ರತಾ ಸಿಬ್ಬಂದಿಗೆ ಹಾನಿ ಉಂಟುಮಾಡಲು ಹೋರಾಟಗಾರರು ಇವುಗಳನ್ನು ಬಳಸಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಶಾಂತಿ ಕಾಪಾಡಲು ಮತ್ತು ಚರ್ಚೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಲು ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ. ಎಲ್ಲ ವಿಷಯಗಳ ಬಗ್ಗೆ ಐದನೇ ಸುತ್ತಿನ ಮಾತುಕತೆಗೆ ಅವರು ರೈತ ನಾಯಕರನ್ನು ಆಹ್ವಾನಿಸಿದ್ದಾರೆ.
ಹರಿಯಾಣದ ಅಂಬಾಲಾ ಬಳಿಯ ಶಂಭು ಗಡಿ ಗಡಿಯಲ್ಲಿ ಬ್ಯಾರಿಕೇಡ್ ಪದರವನ್ನು ಉಲ್ಲಂಘಿಸಲು ಯತ್ನಿಸಿದ ಕಾರಣ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್​ಗಳನ್ನು ಹಾರಿಸಿದರು. ಮಧ್ಯಾಹ್ನದ ಹೊತ್ತಿಗೆ ಕನಿಷ್ಠ ಮೂರು ಸುತ್ತಿನ ಅಶ್ರುವಾಯು ಶೆಲ್​ಗಳನ್ನು ಪ್ರಯೋಗಿಸಲಾಯಿತು. ಡ್ರೋನ್​ಗಳನ್ನು ಸಹ ಇಲ್ಲಿ ನಿಯೋಜಿಸಲಾಗಿದೆ. ಖಾನೌರಿಯಲ್ಲೂ ರೈತರು ಬ್ಯಾರಿಕೇಡ್​ಗಳತ್ತ ಸಾಗುತ್ತಿದ್ದಂತೆ ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್​ಗಳನ್ನು ಹಾರಿಸಿದರು. ಅನೇಕ ಪ್ರತಿಭಟನಾಕಾರರು ಗ್ಯಾಸ್ ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮಾಸ್ಕ್, ಕನ್ನಡಕಗಳನ್ನು ಧರಿಸಿರುವುದು ಕಂಡುಬಂತು. ಶಾಂತಿ ಮತ್ತು ಶಾಂತಿ ಕಾಪಾಡುವಂತೆ ರೈತ ಮುಖಂಡರು ಪ್ರತಿಭಟನಾಕಾರರನ್ನು ಕೋರಿದ್ದಾರೆ. ಶಂಭುವಿನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್, ಶಾಂತಿ ಕಾಪಾಡಿಕೊಳ್ಳುವಂತೆ ಕೇಳಿಕೊಂಡರು.
ಪಂಜಾಬ್ ಸರ್ಕಾರ ವಿರುದ್ಧ ಕೇಂದ್ರ ಅಸಮಾಧಾನ: ಪಂಜಾಬ್-ಹರಿಯಾಣ ಗಡಿಯಲ್ಲಿ 1,200 ಟ್ರಾಕ್ಟರ್-ಟ್ರಾಲಿಗಳು, 300 ಕಾರುಗಳು, 10 ಮಿನಿ ಬಸ್​ಗಳು ಮತ್ತು ನೂರಾರು ಸಣ್ಣ ವಾಹನಗಳೊಂದಿಗೆ ಸುಮಾರು 14,000 ಜನರು ಜಮಾಯಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರನ್ನು ತಡೆಯುವಲ್ಲಿ ಪಂಜಾಬ್ ಸರ್ಕಾರಕ್ಕೆ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಂಜಾಬ್ ಸರ್ಕಾರಕ್ಕೆ ಸೂಚನೆ ನೀಡಿದೆ. ರೈತರ ಸೋಗಿನಲ್ಲಿ ಅನೇಕ ಕಿಡಿಗೇಡಿಗಳು ಭಾರಿ ಯಂತ್ರೋಪಕರಣಗಳನ್ನು ಸಜ್ಜುಗೊಳಿಸಿ, ಕಲ್ಲು ತೂರಾಟದಲ್ಲಿ ತೊಡಗಿದ್ದಾರೆ ಎಂದು ಗೃಹ ಸಚಿವಾಲಯ ಹೇಳಿದೆ.
ಘರ್ಷಣೆಗೆ ಮೊದಲ ಬಲಿ:ಖಾನೌರಿ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾ ನಿರತ ರೈತರ ನಡುವೆ ನಡೆದ ಘರ್ಷಣೆಯಲ್ಲಿ 21 ವರ್ಷದ ರೈತ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ. ಫೆ. 13ರಂದು ‘ದೆಹಲಿ ಚಲೋ’ ಮೆರವಣಿಗೆ ಪ್ರಾರಂಭವಾದ ನಂತರ ಘರ್ಷಣೆಯಲ್ಲಿ ಸಂಭವಿಸಿದ ಮೊದಲ ಸಾವು ಇದಾಗಿದೆ. ಪಂಜಾಬ್​ನ ಬಟಿಂಡಾ ಜಿಲ್ಲೆಯ ಬಲೋಕೆ ಗ್ರಾಮದ ನಿವಾಸಿ ಶುಭಕರನ್ ಸಿಂಗ್ (21) ಮೃತಪಟ್ಟಿದ್ದಾರೆ. ಮೂವರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರಲಾಯಿತು. ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಶುಭಕರನ್ ತಲೆಗೆ ತೀವ್ರ ಗಾಯವಾಗಿತ್ತು. ಇನ್ನಿಬ್ಬರ ಸ್ಥಿತಿ ಸ್ಥಿರವಾಗಿದೆ ಎಂದು ರೈತ ನಾಯಕರು ಹೇಳಿದ್ದಾರೆ.
ಪೊಲೀಸರ ಎಚ್ಚರಿಕೆ:ಪೋಕ್ಲೇನ್​ಗಳು, ಜೆಸಿಬಿಗಳ ಮಾಲೀಕರು ಮತ್ತು ನಿರ್ವಾಹಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನಾಕಾರರಿಗೆ ನಿಮ್ಮ ಸಲಕರಣೆಗಳನ್ನು ಒದಗಿಸಬೇಡಿ. ಈಗಾಗಲೇ ನೀಡಿದ್ದರೆ ಅದನ್ನು ಪ್ರತಿಭಟನಾ ಸ್ಥಳದಿಂದ ಹಿಂತೆಗೆದುಕೊಳ್ಳಿ. ಭದ್ರತಾ ಪಡೆಗಳಿಗೆ ಹಾನಿ ಉಂಟುಮಾಡಲು ಇವುಗಳನ್ನು ಬಳಸುವ ಸಾಧ್ಯತೆ ಇದೆ. ಇದು ಜಾಮೀನು ರಹಿತ ಅಪರಾಧ. ಮಾಲೀಕರನ್ನೂ ಕ್ರಿಮಿನಲ್ ಪ್ರಕರಣದಲ್ಲಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಭಾರಿ ಟ್ರಾಫಿಕ್ ಜಾಮ್ ಜನರ ಪರದಾಟ:ದೆಹಲಿ ಮತ್ತು ಗುರುಗ್ರಾಮ್ ನಡುವಿನ ಹೆದ್ದಾರಿಯಲ್ಲಿ ಬುಧವಾರ ಭಾರಿ ಟ್ರಾಫಿಕ್ ಜಾಮ್ ಕಂಡುಬಂತು. ವಿವಿಧ ಗಡಿಗಳಲ್ಲಿ ರಸ್ತೆಗಳಿಗೆ ತಡೆ ಹಾಕಲಾಗಿತ್ತು. ಹೀಗಾಗಿ ಹೆದ್ದಾರಿಗಳಲ್ಲಿ ಬೆಳಗ್ಗೆ 7 ರಿಂದ 11ರವರೆಗೆ ಭಾರಿ ಸಂಚಾರ ದಟ್ಟಣೆ ಕಂಡುಬಂತು. ನಿತ್ಯದ ಕೆಲಸಕ್ಕಾಗಿ ತೆರಳಿದ ಸಾವಿರಾರು ಜನರು ಪರದಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
