ನವದೆಹಲಿ:ಪಂಜಾಬ್​ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನಂತರ ಹೊಸ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಹಲವು ಸುತ್ತಿನ ಮಾತುಕತೆ, ಚರ್ಚೆ, ಸಮಾಲೋಚನೆಗಳ ಬಳಿಕ ರಾಜ್ಯದ ಜಾತಿ-ಸಾಮಾಜಿಕ ಸಮೀಕರಣಗಳನ್ನು ಮುಂದಿಟ್ಟುಕೊಂಡು ದಲಿತ ಮುಖಂಡ ಚರಣ್​ಜಿತ್ ಚನ್ನಿ (58) ಅವರನ್ನು ರಾಜ್ಯದ ಉನ್ನತ ಹುದ್ದೆಗೆ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಶಾಸಕಾಂಗ ಪಕ್ಷದ ಸಭೆ ನಂತರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್​ರನ್ನು ಭೇಟಿಯಾದ ಚನ್ನಿ, ಸರ್ಕಾರ ರಚಿಸುವ ಪ್ರಸ್ತಾಪ ಮಂಡಿಸಿದರು. ಸೋಮವಾರ ಬೆಳಗ್ಗೆ 11ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸದ್ಯಕ್ಕೆ ಅವರೊಬ್ಬರೇ ಪ್ರಮಾಣ ವಚನ ಪಡೆಯಲಿದ್ದು, ನಂತರ ಸಂಪುಟ ವಿಸ್ತರಣೆ ಆಗಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಚನ್ನಿ ರಾಜ್ಯದ ಮೊದಲ ದಲಿತ ಸಿಎಂ ಕೂಡ ಆಗಿದ್ದು, ಅಮರಿಂದರ್ ಸಂಪುಟದಲ್ಲಿ ತಾಂತ್ರಿಕ ಶಿಕ್ಷಣ, ಕೈಗಾರಿಕಾ ತರಬೇತಿ ಸಚಿವರಾಗಿದ್ದರು.
ಪಕ್ಷದ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಆಪ್ತವರ್ಗದಲ್ಲಿ ಗುರುತಿಸಿಕೊಂಡಿರುವ ಚರಣ್​ಜಿತ್ ಚನ್ನಿ, ಕ್ಯಾಪ್ಟನ್ ವಿರುದ್ಧ ಬಹಿರಂಗ ಸಮರ ಸಾರಿದ ಸಚಿವರಲ್ಲಿ ಪ್ರಮುಖರು. ಇದೇ ಕಾರಣಕ್ಕೆ ಸಿಧು ಕೂಡ ಚನ್ನಿಗೆ ಸಿಎಂ ಸ್ಥಾನ ನೀಡುವುದಕ್ಕೆ ಬೆಂಬಲಸಿದ್ದಾರೆ. ಚನ್ನಿ ಸಿಎಂ ಆಗಿದ್ದರೂ, ಸರ್ಕಾರದ ಮೇಲೆ ಸಿಧು ಹಿಡಿತ ಸಾಧಿಸುವುದು ಬಹುತೇಕ ನಿಶ್ಚಿತವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಸಿಎಂ ಆಗಬೇಕೆಂಬುದು ಸಿಧು ಮಹತ್ವಾಕಾಂಕ್ಷೆ. ಹೀಗಾಗಿ, ದಲಿತ ಮುಖಂಡರನ್ನೂ ಜತೆಗಿಟ್ಟುಕೊಂಡು ಶೇ.32ರಷ್ಟಿರುವ ದಲಿತ ಜನಸಂಖ್ಯೆ ಕಾಂಗ್ರೆಸ್​ನತ್ತ ಸೆಳೆಯುವುದು ಹೈಕಮಾಂಡ್ ಉದ್ದೇಶ ಎಂದು ವಿಶ್ಲೇಷಿಸಲಾಗುತ್ತಿದೆ. ಕ್ಯಾಪ್ಟನ್ ಅವರ ನಾಲ್ಕೂವರೆ ವರ್ಷ ಆಡಳಿತದಲ್ಲಿ ದಲಿತರು ಕಡೆಗಣನೆಗೆ ಒಳಗಾಗಿದ್ದಾರೆ ಎಂಬ ಅಸಮಾಧಾನವೂ ಅನೇಕರಲ್ಲಿದ್ದು, ಚನ್ನಿ ಆಯ್ಕೆ ಮೂಲಕ ಅತೃಪ್ತಿ ತಣಿಸುವ ತಂತ್ರಗಾರಿಕೆಯನ್ನು ಅನುಸರಿಸಲಾಗಿದೆ.
ಕಾಂಗ್ರೆಸ್ ಉತ್ತರಿಸಲಿ:ಸಿಧು ದೇಶವಿರೋಧಿ ಎಂದು ಆರೋಪ ಮಾಡಿರುವ ಮಾಜಿ ಸಿಎಂ ಅಮರಿಂದರ್ ಸಿಂಗ್ ಹೇಳಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಬೇಕು ಎಂದು ಪಂಜಾಬ್ ಬಿಜೆಪಿ ಒತ್ತಾಯಿಸಿದೆ. ಪಾಕ್ ಸೇನಾ ಮುಖ್ಯಸ್ಥ ಖಮರ್ ಬಾಜ್ವಾ, ಪ್ರಧಾನಿ ಇಮ್ರಾನ್ ಖಾನ್ ಜತೆಗೆ ಸಿಧು ಆಪ್ತ ಸಂಬಂಧ ಹೊಂದಿದ್ದಾರೆ. ಇದು ರಾಷ್ಟ್ರದ ಹಿತಾಸಕ್ತಿಗೆ ಒಳ್ಳೆಯದಲ್ಲ ಎಂದು ಕ್ಯಾಪ್ಟನ್ ಹೇಳಿದ್ದರು.
ಗಮನಸೆಳೆದ ಸಿಬಲ್ ಟ್ವೀಟ್:ಉತ್ತರಾಖಂಡ, ಕರ್ನಾಟಕ ಗುಜರಾತ್​ನಲ್ಲಿ ಬಿಜೆಪಿ ಸಿಎಂಗಳು ಮತ್ತು ಪಂಜಾಬ್ ಸಿಎಂ ಬದಲಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ನ ಹಿರಿಯ ಮುಖಂಡ ಕಪಿಲ್ ಸಿಬಲ್ ಟ್ವೀಟ್ ಗಮನಸೆಳೆದಿದೆ. ಸಮಸ್ಯೆ ಸೃಷ್ಟಿಯಾದಾಗ್ಲೇ ಸರಿಪಡಿಸಲು ಕ್ರಮ ಕೈಗೊಳ್ಳುವ ಬದಲು, ಅದು ವಿರಾಟ್ ಸ್ವರೂಪ ಪಡೆದುಕೊಳ್ಳುವ ತನಕ ಕಾಯುವುದು ಸರಿಯಲ್ಲ ಎಂಬರ್ಥದಲ್ಲಿ (A stitch in time saves nine) ಸಿಬಲ್ ಟ್ವೀಟ್ ಮಾಡಿದ್ದು, ಪರೋಕ್ಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನೇ ಗುರಿ ಮಾಡಿದ್ದಾರೆ ಎನ್ನಲಾಗಿದೆ. ಹಠಾತ್ತನೆ ಮುಖ್ಯಮಂತ್ರಿಗಳನ್ನು ಬದಲಾಯಿಸುವುದರಿಂದ ಪಕ್ಷಗಳಿಗೆ ಅನುಕೂಲವಾಗುವುದೇ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ.
3ನೇ ಬಾರಿಗೆ ಶಾಸಕ:ದಲಿತ ರಾಮ್ಾಸಿಯಾ ಸಿಖ್ ಸಮುದಾಯಕ್ಕೆ ಸೇರಿದ ಚರಣ್​ಜಿತ್ ಚನ್ನಿ, ಚಮ್ೌರ್ ಸಾಹಿಬ್ ಕ್ಷೇತ್ರದ ಶಾಸಕರಾಗಿದ್ದು, 2015ರಿಂದ 2016ರ ತನಕ ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. 2017ರಲ್ಲಿ ಕ್ಯಾಪ್ಟನ್ ಸಿಂಗ್ ತಮ್ಮ ಸರ್ಕಾರದಲ್ಲಿ ಚರಣ್​ಜಿತ್ ಸಿಂಗ್​ರನ್ನು ಸಚಿವರನ್ನಾಗಿ ಸೇರಿಸಿಕೊಂಡಿದ್ದರು. ಮೂರು ಬಾರಿ ಪಾಲಿಕೆ ಸದಸ್ಯ, ಕರಾರ್ ನಗರ ಪಾಲಿಕೆಯಲ್ಲಿ 2 ಅವಧಿಗೆ ಅಧ್ಯಕ್ಷರಾಗಿದ್ದ ಚನ್ನಿ, ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದ್ದು 2007ರಲ್ಲಿ. 1972ರಲ್ಲಿ ಮಕ್ರೋನಾ ಕಲಾನ್ ಹಳ್ಳಿಯಲ್ಲಿ ಜನಿಸಿದ್ದ ಚನ್ನಿ, ತೀವ್ರ ಆರ್ಥಿಕ ಸಂಕಷ್ಟದಿಂದ ಬೆಳೆದು ಬಂದವರು. ಬಡತನದಿಂದಾಗಿ ಅವರ ತಂದೆ ಎಸ್. ಹರ್ಸಾ ಸಿಂಗ್ ನೌಕರಿಗಾಗಿ ಮಲೇಷ್ಯಾಕ್ಕೆ ವಲಸೆ ಹೋಗಿದ್ದರು. ನಂತರ, ತಮ್ಮ ಕರಾರ್ ಪಟ್ಟಣದಲ್ಲೇ ಟೆಂಟ್ ಹೌಸ್ ಮಾಡಿ, ಅದೇ ಉದ್ಯಮದಲ್ಲಿ ಮುಂದುವರಿದರು. ಆ ದಿನಗಳಲ್ಲಿ ಚನ್ನಿ ಸ್ಥಳೀಯರ ಮಧ್ಯೆ ‘ಟೆಂಟ್ ಬಾಯ್’ ಎಂದೇ ಗುರುತಿಸಿಕೊಂಡಿದ್ದರು.
ಮೀ ಟೂ ಆರೋಪ:ನೂತನ ಸಿಎಂ ಆಗಿ ಚರಣ್​ಜಿತ್ ಸಿಂಗ್ ಚನ್ನಿ ಹೆಸರು ಪ್ರಕಟವಾಗುತ್ತಿದ್ದಂತೆ ಅವರ ವಿರುದ್ಧ ದಾಖಲಾಗಿದ್ದ ಲೈಂಗಿಕ ಕಿರುಕುಳ (ಮೀ ಟೂ) ಪ್ರಕರಣ ಚರ್ಚೆಯಾಗುತ್ತಿದೆ. ಈ ಬಗ್ಗೆ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ. 2018ರಲ್ಲಿ ಐಎಎಸ್ ಮಹಿಳಾ ಅಧಿಕಾರಿಯೊಬ್ಬರಿಗೆ ಅವರು ಆಕ್ಷೇಪಾರ್ಹ ಮೆಸೇಜ್ ಕಳಿಸಿದ್ದರು. ಬಳಿಕ ಈ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು. ಈ ಬಗ್ಗೆ ಮಹಿಳಾ ಆಯೋಗ ಕೂಡ ನೋಟಿಸ್ ನೀಡಿತ್ತು ಎಂದು ಅವರು ಹೇಳಿದ್ದಾರೆ. ಚನ್ನಿ ಕ್ಷಮೆ ಯಾಚಿಸುವ ಮೂಲಕ ಈ ಪ್ರಕರಣ ಅಂತ್ಯವಾಗಿದೆ ಎಂದು ಮಾಜಿ ಸಿಎಂ ಅಮರಿಂದರ್ ಸಿಂಗ್ ಹೇಳಿದ್ದರು. ಯಾರಿಗೋ ಕಳಿಸುವ ಮೆಸೇಜ್ ತಪ್ಪಾಗಿ ಮಹಿಳಾ ಅಧಿಕಾರಿಗೆ ರವಾನೆ ಆಗಿತ್ತು ಎಂದು ಚನ್ನಿ ಈ ಹಿಂದೆ ಸ್ಪಷ್ಟನೆ ಕೂಡ ನೀಡಿದ್ದರು.
ಸೋನಿಯಾಗೆ ಬರೆದ ಪತ್ರದಲ್ಲಿ ಬೇಸರ:ಸಿಎಂ ಹುದ್ದೆಗೆ ರಾಜೀನಾಮೆ ನೀಡುವ ಮುನ್ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಕ್ಷದ ನಾಯಕಿ ಸೋನಿಯಾ ಗಾಂಧಿಗೆ ಪತ್ರ ಬರೆದು ತೀವ್ರ ಅಸಮಾಧಾನ ಹೊರಹಾಕಿದ್ದರು. ರಾಜ್ಯದಲ್ಲಿ ಪರಿಶ್ರಮದಿಂದ ನಿರ್ಮಾಣ ಮಾಡಿರುವ ಶಾಂತಿ, ಅಭಿವೃದ್ಧಿಗೆ ಯಾವುದೇ ಹಾನಿ ಉಂಟಾಗದು ಎಂದು ನಾನು ಭಾವಿಸುತ್ತೇನೆ. ಪಂಜಾಬ್ ಅನೇಕ ಭೌಗೋಳಿಕ-ರಾಜಕೀಯ ಮತ್ತು ಇತರ ಆಂತರಿಕ ಭದ್ರತಾ ಕಾಳಜಿಗಳನ್ನು ಹೊಂದಿರುವ ರಾಜ್ಯ. ನಾನು ಯಾವುದೇ ರಾಜಿ ಮಾಡಿಕೊಳ್ಳದೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಿದ್ದೇನೆ. ರಾಜ್ಯದ ಜನರು ಕಾಂಗ್ರೆಸ್​ನ್ನು ಅದರ ಪ್ರಬುದ್ಧ ಮತ್ತು ಪರಿಣಾಮಕಾರಿ ಸಾರ್ವಜನಿಕ ನೀತಿಗಳಿಗಾಗಿ ಎದುರು ನೋಡುತ್ತಿದ್ದಾರೆ ಎಂದು ಅಮರಿಂದರ್ ಸಿಂಗ್ ಪತ್ರದಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪರಿಣಾಮಕಾರಿ ಜಾರಿ ಮಾಡಿದ್ದಲ್ಲದೆ, ಪಾರದರ್ಶಕ ಆಡಳಿತ ಖಾತ್ರಿಪಡಿಸಿದ್ದೇನೆ. ರಾಜಕೀಯ ವ್ಯವಹಾರಗಳ ನಿರ್ವಹಣೆಯಲ್ಲಿ ನೈತಿಕ ನಡವಳಿಕೆ ಕಾಯ್ದುಕೊಂಡಿದ್ದೇನೆ, 2019ರಲ್ಲಿ ಸಂಸತ್ ಚುನಾವಣೆಯಲ್ಲಿ 13ರಲ್ಲಿ 8 ಸ್ಥಾನಗಳನ್ನು ಮತ್ತು ಸ್ಥಳೀಯ ಚುನಾವಣೆಗಳನ್ನೂ ಗೆದ್ದುಕೊಂಡೆವು. ಆದರೆ, ಕಳೆದೈದು ತಿಂಗಳಿಂದ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅತೀವ ಬೇಸರ ತಂದಿದೆ ಎಂದು ಕ್ಯಾಪ್ಟನ್ ವಿವರಿಸಿದ್ದಾರೆ.
ಒಲ್ಲೆ ಎಂದ ಸೋನಿ:ರಾಜ್ಯದ ಪಿಸಿಸಿ ಹುದ್ದೆಯನ್ನು ಸಿಖ್ ಸಮುದಾಯಕ್ಕೆ (ನವಜೋತ್ ಸಿಂಗ್ ಸಿಧು) ನೀಡಿರುವುದರಿಂದ ಸಿಎಂ ಸ್ಥಾನಕ್ಕೆ ಹಿಂದು ಧರ್ಮದ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂಬ ವಾದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಸದ, ಹಿರಿಯ ಮುಖಂಡ ಸುನೀಲ್ ಝಾಖರ್ ಹೆಸರನ್ನು ಬಹುತೇಕ ಅಂತಿಮಗೊಳಿ ಸಲಾಗಿತ್ತು. ಆದರೆ ರಾಜ್ಯ ಕಾಂಗ್ರೆಸ್ ಸಂಸದರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅವರ ಹೆಸರನ್ನು ಕೈಬಿಡಲಾಯ್ತು. ಈ ಮಧ್ಯೆ, ಸಖ್ವಿಂದರ್ ರಾಂಧವಾ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆಂದು ಮತ್ತು ಉಪಮುಖ್ಯಮಂತ್ರಿ ಸ್ಥಾನಕ್ಕೆ ಅರುಣಾ ಚೌಧರಿ ಮತ್ತು ಭರತ್ ಭೂಷಣ್​ರ ಹೆಸರು ಕೇಳಿಬಂದಿತ್ತು. ಅದಕ್ಕೂ ಮೊದಲು, ಸೋನಿಯಾ ಗಾಂಧಿ ಆಪ್ತೆ ಅಂಬಿಕಾ ಸೋನಿಯವರಿಗೆ ಸಿಎಂ ಸ್ಥಾನ ಅಲಂಕರಿಸುವಂತೆ ಕೇಳಿಕೊಳ್ಳಲಾಯಿತಾದರೂ ಅವರು ಒಪ್ಪಲಿಲ್ಲ. ಒಂದು ಚುನಾವಣೆಯನ್ನೂ ಗೆಲ್ಲದ ಅಂಬಿಕಾ ಸೋನಿಗೆ ಸಿಎಂ ಸ್ಥಾನ ನೀಡುವ ಬಗ್ಗೆ ಸ್ಥಳೀಯ ಮುಖಂಡರಿಗೂ ಸಮ್ಮತಿ ಇರಲಿಲ್ಲ ಎನ್ನಲಾಗಿದೆ.
ಹೊಸ ಜವಾಬ್ದಾರಿ ವಹಿಸಿಕೊಂಡಿರುವ ಚರಣ್​ಜಿತ್ ಚನ್ನಿ ಅವರಿಗೆ ಅಭಿನಂದನೆಗಳು. ಪಂಜಾಬ್ ಜನರಿಗೆ ನೀಡಲಾದ ಆಶ್ವಾಸನೆಗಳನ್ನು ಈಡೇರಿಸುವ ನಮ್ಮ ಕೆಲಸ ಮುಂದುವರಿಸಬೇಕು. ಅವರ ನಂಬಿಕೆ ಉಳಿಸಿಕೊಳ್ಳುವುದು ಅತಿಮುಖ್ಯ
|ರಾಹುಲ್ ಗಾಂಧಿಕಾಂಗ್ರೆಸ್ ಮುಖಂಡ
ಅಮರಿಂದರ್ ಸಿಂಗ್ ಪಂಜಾಬ್​ನ ಜನಪ್ರಿಯ ನಾಯಕ. ನಾಯಕತ್ವಕ್ಕೆ ಸಂಬಂಧಿಸಿ ಅವರು ರಾಹುಲ್ ಮತ್ತು ಸೋನಿಯಾಗಿಂತಲೂ ಹೆಚ್ಚು ಜನಪ್ರಿಯಗೊಳ್ಳು ತ್ತಿದ್ದುದರಿಂದಲೇ ಅವ ರನ್ನು ಸಿಎಂ ಸ್ಥಾನದಿಂದ ಇಳಿಸಲಾಗಿದೆ. ರಾಜಕೀಯ ಬಿಕ್ಕಟ್ಟುಗಳಿಂದ ನರಳಾಡುತ್ತಿರುವವರ ಬಗ್ಗೆ ಪ್ರತಿಕ್ರಿಯೆ ನೀಡುವುದೂ ವ್ಯರ್ಥ.
|ಪ್ರಲ್ಹಾದ್ ಜೋಶಿಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ
ಕ್ಯಾಪ್ಟನ್ ಕಾಂಗ್ರೆಸ್​ನಲ್ಲೇ ಉಳಿದುಕೊಳ್ತಾರಾ?:ತೀವ್ರ ಬೇಸರಗೊಂಡಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್, ಸಿಎಂ ಸ್ಥಾನಕ್ಕೆ ಚನ್ನಿ ಆಯ್ಕೆ ಮಾಡಿದ್ದನ್ನು ಸ್ವಾಗತಿಸಿದ್ದಾರೆ. ಆದರೆ ಪಕ್ಷದ ಮೇಲೆ ಸಿಧು ನಿಯಂತ್ರಣ ಹೊಂದಿರುವುದರಿಂದ ಕ್ಯಾಪ್ಟನ್ ಕಾಂಗ್ರೆಸ್​ನಲ್ಲಿ ಮುಂದುವರಿಯುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಪಕ್ಷಕ್ಕೆ ಹಾನಿ ಮಾಡುವ ನಿರ್ಧಾರವನ್ನು ಕ್ಯಾಪ್ಟನ್ ಕೈಗೊಳ್ಳುವುದಿಲ್ಲ ಎಂಬ ನಂಬಿಕೆ ನನ್ನದು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಭೂಕಂಪನದ ಅನುಭವ: ಎರಡು ಸಲ ಕಂಪಿಸಿದ ಭೂಮಿ, ಬೆಚ್ಚಿ ಬಿದ್ದ ಜನ..!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
