ಅಫ್ಘಾನಿಸ್ತಾನ ಜನರ ಬವಣೆಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಅಮೆರಿಕ ತನ್ನ ಸೇನೆ ಹಿಂಪಡೆದ ಬೆನ್ನಲ್ಲೇ ಅಫ್ಘನ್ ಅನ್ನು ತಾಲಿಬಾನ್ ಮತ್ತೆ ಕೈವಶವಾಗಿಸಿಕೊಂಡಿದ್ದು ಗೊತ್ತಿರುವಂಥದ್ದೇ. ಭಯೋತ್ಪಾದಕರೇ ತುಂಬಿರುವ ಈ ತಾಲಿಬಾನ್ ಆಡಳಿತಕ್ಕೆ ಬೆರೆಳೆಣಿಕೆ ದೇಶಗಳು ಹೊರತುಪಡಿಸಿ ಜಗತ್ತಿನ ಬಹುತೇಕ ದೇಶಗಳು ಮಾನ್ಯತೆ ನೀಡಿಲ್ಲ. ಹಾಗಾಗಿ, ಅಫ್ಘನ್ ತೀವ್ರ ಆರ್ಥಿಕ ಸಂಕಷ್ಟದ ಹೊಸ್ತಿಲಲ್ಲಿ ಬಂದು ನಿಂತಿದೆ. ಆ ದೇಶದ ಬಜೆಟ್​ನ ಶೇಕಡ 80ರಷ್ಟು ಅಂತಾರಾಷ್ಟ್ರೀಯ ನೆರವಿನ ಮೂಲಕವೇ ಪ್ರಾಪ್ತವಾಗುತ್ತಿತ್ತು. ಆದರೆ, ಈ ನೆರವನ್ನು ಬಹುತೇಕ ದೇಶಗಳು ನಿಲ್ಲಿಸಿವೆ. ಅಮೆರಿಕ ಕೂಡ ಅಫ್ಘಾನಿಸ್ತಾನ ಸೆಂಟ್ರಲ್ ಬ್ಯಾಂಕಿನ 9.5 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ತಾಲಿಬಾನ್ ಆಡಳಿತದ ಕೈಸೇರದಂತೆ ತಡೆದಿದೆ.
ಪಾಕಿಸ್ತಾನ, ಚೀನಾ, ರಷ್ಯಾ ದೇಶಗಳು ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡಿದ್ದು, ರಾಜತಾಂತ್ರಿಕ ವ್ಯವಹಾರ ಮುಂದುವರಿಸಿವೆ. ಚೀನಾ ಅಂತೂ ತಾಲಿಬಾನ್ ಸರ್ಕಾರದ ಸಚಿವರೊಂದಿಗೆ ಕಳೆದ ಸೆಪ್ಟೆಂಬರ್​ನಲ್ಲಿ ನೇರ ಮಾತುಕತೆ ನಡೆಸಿದೆ. ‘ವಿಶ್ವಸಂಸ್ಥೆ ಪ್ರಸಕ್ತ ಸರ್ಕಾರಕ್ಕೆ ಮಾನ್ಯತೆ ನೀಡುವ ಮೂಲಕ ಅಫ್ಘಾನಿಸ್ತಾನವನ್ನು ಬಲಗೊಳಿಸಲು ನೆರವಾಗಬೇಕು’ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬಹಿರಂಗವಾಗಿಯೇ ಹೇಳಿದ್ದಾರೆ. ಯುಎಇ ಇತ್ತೀಚೆಗೆ ತನ್ನ ರಾಯಭಾರ ಕಚೇರಿಯನ್ನು ಅಫ್ಘನ್​ನಲ್ಲಿ ತೆರೆದಿದೆ. ಮುಂದಿನ ದಿನಗಳಲ್ಲಿ ಇತರ ರಾಷ್ಟ್ರಗಳು ಕೂಡ ರಾಜತಾಂತ್ರಿಕ ಸಂಬಂಧ ಮರುಸ್ಥಾಪಿಸಲಿವೆ ಎಂದು ತಾಲಿಬಾನ್ ನಾಯಕರು ಹೇಳಿಕೊಂಡಿದ್ದಾರಾದರೂ, ಬಹುತೇಕ ದೇಶಗಳು ಆ ನಿಟ್ಟಿನಲ್ಲಿ ಉತ್ಸುಕತೆ ತೋರಿಲ್ಲ. ‘ತಾಲಿಬಾನ್ ಹಿಂಸೆ ತೊರೆಯುವವರೆಗೆ ರಾಜತಾಂತ್ರಿಕ ಮಾತುಕತೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಕೆಲ ರಾಷ್ಟ್ರಗಳು ಕಡ್ಡಿ ತುಂಡು ಮಾಡಿದಂತೆ ಸ್ಪಷ್ಟವಾಗಿ ಹೇಳಿವೆ.
ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮದ ಅಧ್ಯಯನ ವರದಿಯಂತೆ, ಜಗತ್ತಿನ ಭೀಕರ ಮಾನವೀಯ ಸಂಕಷ್ಟಕ್ಕೆ, ಹಸಿವಿಗೆ ಅಫ್ಘಾನಿಸ್ತಾನ ಸಾಕ್ಷಿಯಾಗಲಿದೆ. ಇಲ್ಲಿನ 40 ದಶಲಕ್ಷ ಜನಸಂಖ್ಯೆಯ ಪೈಕಿ 23 ದಶಲಕ್ಷ ಜನರು ಆಹಾರದ ತೀವ್ರ ಕೊರತೆ ಎದುರಿಸುತ್ತಿದ್ದಾರೆ. ಆದಾಗ್ಯು, ಭಾರತ, ಅಮೆರಿಕ, ಯುರೋಪಿಯನ್ ರಾಷ್ಟ್ರಗಳು ಮಾನವೀಯ ದೃಷ್ಟಿಯಿಂದ ಜೀವನಾವಶ್ಯಕ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿವೆ. ವಾಣಿಜ್ಯ ಉದ್ದೇಶದ ವಿಮಾನಗಳ ಸಂಚಾರ ಕಾಬೂಲಿನಿಂದ ಆರಂಭವಾಗದಿರುವುದರಿಂದ ರಸ್ತೆಮಾರ್ಗದ ಮೂಲಕ ಈ ನೆರವನ್ನು ಕಳುಹಿಸಲಾಗಿದೆ.
ಸೇನೆಯಲ್ಲಿ ಆತ್ಮಹತ್ಯಾ ಬಾಂಬರ್​ಗಳು!:ತಾಲಿಬಾನ್ ಆಡಳಿತ ಹೊಸ ಸೇನೆಯನ್ನು ರಚಿಸಲು ತಯಾರಿ ಮಾಡಿಕೊಳ್ಳುತ್ತಿದ್ದು, ಅದು ಆತ್ಮಹತ್ಯಾ ಬಾಂಬರ್​ಗಳನ್ನೂ ಒಳಗೊಳ್ಳಲಿದೆ. ಈ ತಂಡ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ! ತಜಕಿಸ್ತಾನದೊಂದಿಗೆ ಹೊಂದಿಕೊಂಡಿರುವ ಗಡಿಭಾಗದಲ್ಲಿ ಈ ಆತ್ಮಹತ್ಯಾ ಬಾಂಬರ್​ಗಳು ನಿಯೋಜನೆಗೊಳ್ಳಲಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕನ್ನೇ ನಿರಾಕರಿಸಿರುವ ತಾಲಿಬಾನ್ ಆಡಳಿತ ಅವಶ್ಯವೆನಿಸಿದರೆ ಸೇನೆಯಲ್ಲಿ ಮಹಿಳೆಯರಿಗೆ ಸ್ಥಾನ ಕಲ್ಪಿಸುವುದಾಗಿ ಹೇಳಿದೆ. ಸೇನೆಯ ಕೆಲವು ನಿವೃತ್ತ ಪರಿಣಿತರಿಗೂ ಮತ್ತೆ ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆಯ ಸಹಸಚಿವನೂ ಆಗಿರುವ ತಾಲಿಬಾನ್ ವಕ್ತಾರ ಜಬಿಉಲ್ಲಾಹ್ ಮುಜಾಹಿದ್ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಹೊಸ ಸೇನೆಯು 1 ಲಕ್ಷ ಸೈನಿಕರನ್ನು ಹೊಂದಲಿದ್ದು, (ಹಳೆಯ ಸೇನೆಯಲ್ಲಿ 90 ಸಾವಿರ ಸೈನಿಕರಿದ್ದರು) ಶೇಕಡ 80ರಷ್ಟು ಭರ್ತಿ ಕಾರ್ಯ ಮುಗಿದಿದೆ. ಹೊಸ ಸೇನೆಯ ಸ್ವರೂಪ ಸದ್ಯದಲ್ಲೇ ದೇಶಕ್ಕೆ ಗೊತ್ತಾಗಲಿದೆ ಎಂದಿದ್ದಾನೆ ಜಬಿಉಲ್ಲಾಹ್. ಈ ನಡುವೆ, ಪಾಕಿಸ್ತಾನದೊಂದಿಗಿನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿದೆ. ಕಳೆದ ತಿಂಗಳಷ್ಟೇ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ಏರ್ಪಟ್ಟಿತ್ತು.
ಅದೇ ಕ್ರೌರ್ಯದ ಆಡಳಿತ:2021ರ ಆಗಸ್ಟ್​ನಲ್ಲಿ ಅಧಿಕಾರ ವಹಿಸಿಕೊಂಡ ತಾಲಿಬಾನ್ ನಾಯಕರು, ‘ಈ ಬಾರಿಯ ಆಡಳಿತ ಹಿಂದಿನ ಮುಲ್ಲಾ ಒಮರ್ ಅವಧಿಯಂತೆ ಇರುವುದಿಲ್ಲ. ಹಿಂಸೆ ಹರಡುವುದಿಲ್ಲ’ ಎಂದು ಹೇಳಿದ್ದರು. ಆದರೆ, ಇದು ಬರೀ ಬಾಯಿಮಾತಿಗಷ್ಟೇ ಸೀಮಿತ ಎಂಬುದನ್ನು ಅರ್ಥಮಾಡಿಕೊಳ್ಳಲು ತುಂಬ ಸಮಯವೇನೂ ಬೇಕಾಗಲಿಲ್ಲ. ಮಹಿಳೆಯರಿಗೆ ಕಠಿಣ ನಿರ್ಬಂಧ, ಮಹಿಳಾ ಶಿಕ್ಷಣಕ್ಕೆ ತಡೆ, ಪುರುಷರಿಗೂ ವಿಚಿತ್ರ ನಿಯಮಗಳು, ಆಡಳಿತದ ವಿರುದ್ಧ ಮಾತನಾಡಿದರೆ, ಪ್ರತಿಭಟಿಸಿದರೆ ಗುಂಡೇಟಿನ ಶಿಕ್ಷೆ. ಹೀಗೆ ಕ್ರೌರ್ಯದ ವಿಷಯದಲ್ಲಿ ತಾಲಿಬಾನ್ ಒಂದಿಷ್ಟೂ ಬದಲಾಗಿಲ್ಲ. ತಾಲಿಬಾನಿಗಳಲ್ಲೇ ಈಗ ಎರಡು ಗುಂಪುಗಳು ಸಕ್ರಿಯವಾಗಿವೆ. ಈ ಪೈಕಿ ಹಕಾನಿಗಳ ಗುಂಪು ಕುಖ್ಯಾತ ಭಯೋತ್ಪಾದಕ ಸಂಘಟನೆ ಅಲ್-ಕೈದಾ ಮತ್ತು ಪಾಕಿಸ್ತಾನದ ಬೇಹುಗಾರಿಕಾ ಸಂಘಟನೆ ಐಎಸ್​ಐನೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಇನ್ನೊಂದು ಗುಂಪು ಸ್ವಲ್ಪ ‘ಆಧುನಿಕ’ವಾಗಿದ್ದು ತೀವ್ರ ಹಿಂಸೆಯನ್ನು ಬಯಸುತ್ತಿಲ್ಲ. ಕ್ಯಾಬಿನೆಟ್​ನಲ್ಲಿ ಕೇವಲ ಪಷ್ತೂನ್ ಗುಂಪಿಗೆ ಅವಕಾಶ ಕಲ್ಪಿಸಲಾಗಿದ್ದು, ಪಷ್ತೂನಿಗಳು ಹೆಣ್ಣುಮಕ್ಕಳ ಪ್ರಾಥಮಿಕ ಶಿಕ್ಷಣಕ್ಕೂ ತಡೆಯೊಡ್ಡಿದ್ದಾರೆ. ಮೂಲಭೂತವಾದಿಗಳ ಗುಂಪೇ ಆಡಳಿತದಲ್ಲಿ ಮೇಲುಗೈ ಸಾಧಿಸಿರುವುದಕ್ಕೆ ಈ ಎಲ್ಲ ಬೆಳವಣಿಗೆಗಳು ಸಾಕ್ಷಿ. ದ್ವೇಷದ ಹತ್ಯೆಗಳಿಗೂ ಕಡಿವಾಣ ಬಿದ್ದಿಲ್ಲ. ಮಾನವ ಹಕ್ಕುಗಳ ಆಯೋಗದ ವರದಿ ಪ್ರಕಾರ ಆಗಸ್ಟ್​ನಿಂದ ಈವರೆಗೆ ತಾಲಿಬಾನ್ ಆಡಳಿತದಲ್ಲಿ 72 ಜನರ ಹತ್ಯೆಯಾಗಿದೆ. ಶಿಕ್ಷಣದ ಸ್ಥಿತಿಯಂತೂ ದಾರುಣವಾಗಿದ್ದು, 4.2 ದಶಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಪೈಕಿ ಶೇಕಡ 60 ಹೆಣ್ಣುಮಕ್ಕಳೇ.
ಅಫ್ಘನ್​ನಲ್ಲಿ ಮರೀಚಿಕೆಯಾದ ಶಾಂತಿ ಸ್ಥಾಪನೆ:ಅಫ್ಘಾನಿಸ್ತಾನದಲ್ಲಿನ ಯುದ್ಧ ಒಂದು ಹಂತದಲ್ಲಿ ಮುಗಿದಿದೆಯಾದರೂ, ಶಾಂತಿ ಮತ್ತು ಸ್ಥಿರತೆ ಸ್ಥಾಪನೆಯಾಗಿಲ್ಲ. 1990ರ ದಶಕದಂತೆಯೇ, ಈ ಬಾರಿಯೂ ದೇಶದ ಬಹುತೇಕ ವ್ಯವಸ್ಥೆ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿದೆ. ಪಂಜಶೀರ ಪ್ರಾಂತ್ಯ ಮಾತ್ರ ಪೂರ್ಣವಾಗಿ ತಾಲಿಬಾನಿಗಳ ಹಿಡಿತಕ್ಕೆ ಸಿಕ್ಕಿಲ್ಲ.
ಹೀಗಿತ್ತು ಮುಂಚಿನ ದಾರುಣ ಸ್ಥಿತಿ:1996ರಲ್ಲಿ ಅಫ್ಘನ್ ಆಡಳಿತವನ್ನು ತಾಲಿಬಾನಿಗಳು ಕೈಗೆತ್ತಿಕೊಂಡಾಗ 2001ರವರೆಗೆ ಇಡೀ ದೇಶ ದಾರುಣ ಸ್ಥಿತಿ ಅನುಭವಿಸಿತು. ಕಟ್ಟಾ ಇಸ್ಲಾಮಿಕ್ ಕಾನೂನುಗಳನ್ನು ಜಾರಿಗೆ ತಂದ ತಾಲಿಬಾನ್ ಸರ್ಕಾರ ಮಹಿಳೆಯರು, ಅಲ್ಪಸಂಖ್ಯಾತರ ಹಲವು ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿತು. ಆಧುನಿಕ ಶಿಕ್ಷಣಕ್ರಮವನ್ನು ಇಸ್ಲಾಂ-ವಿರೋಧಿ ಎಂದು ತೀರ್ವನಿಸಿ, ಶಾಲೆ-ಕಾಲೇಜುಗಳನ್ನು ಮುಚ್ಚಿತು ಅಥವಾ ಹಾಳುಗೆಡವಿ ವಿದ್ಯಾಭ್ಯಾಸವನ್ನೇ ಸರಿಸುಮಾರು ನಿಲುಗಡೆಗೆ ತಂದಿತು. ಆ ಪರಿಸ್ಥಿತಿಯೇ ಮತ್ತೆ ಈಗ ಮರುಕಳಿಸುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
