| ಸುರೇಶ್ ಮರಕಾಲ ಸಾಯ್ಬರಕಟ್ಟೆ
ಮೀನುಗಳ ಪ್ರಪಂಚವೆ ಅದ್ಭುತ, ಅನೂಹ್ಯ!ಅಲ್ಲಿ ಬರಾಕುಡಾದಂತಹ ಹೊಟ್ಟೆಬಾಕ ಮೀನುಗಳಿವೆ, ಹೆಣ್ಣನ್ನು ಆಕರ್ಷಿಸಲು ಮರಳಿನ ಗುಡ್ಡೆಯನ್ನು ನಿರ್ಮಾಣ ಮಾಡುವ ರೀಫ್ ಫಿಶ್‌ಗಳಿವೆ, ದಿನವೊಂದಕ್ಕೆ ಸರಾಸರಿ ಎರಡರಿಂದ ಮೂರು ಸಾವಿರ ಕೆ.ಜಿ. ಆಹಾರವನ್ನು ಸೇವಿಸುವ ನೀಲಿ ತಿಮಿಂಗಲಗಳಿವೆ, ಗಾಳಿಯಲ್ಲಿ ಹಕ್ಕಿಯಂತೆ ಹಾರಬಲ್ಲ ಮೀನುಗಳಿವೆ, ಮೈ ಸವರಿ ಏನಾಯ್ತೆಂದು ತಿಳಿಯುವ ಮೂರ್ನಾಲ್ಕು ಸೆಕೆಂಡ್‌ಗಳ ಒಳಗೆ ಸಾವನ್ನು ತರಬಲ್ಲ ಘೋರ ವಿಷ ಹೊಂದಿರುವ ಜೆಲ್ಲಿಫಿಶ್‌ಗಳಿವೆ, ಮತ್ಸ್ಯ ಸಂಕುಲದಲ್ಲೇ ಅತ್ಯಂತ ಬುದ್ಧಿವಂತ ಮೀನೆಂಬ ಖ್ಯಾತಿ ಪಡೆದಿರುವ ಡಾಲ್ಫಿನ್‌ಗಳಿವೆ, ದೈತ್ಯಾಕಾರದ ಮೊಸಳೆಯನ್ನೂ ಒಂದೇ ಒಂದು ಕರೆಂಟ್ ಶಾಕ್‌‌ನ ಮೂಲಕ ಹೊಗೆ ಹಾಕಿಸಬಲ್ಲ ಇಲೆಕಟ್ರಿಕಲ್ ಈಲ್‌ಗಳಿವೆ, ಅಕಸ್ಮಾತ್ತಾಗಿ ಗಂಡು ಸತ್ತರೆ ಕೂಡಲೆ ಗುಂಪಿನಲ್ಲಿರುವ ಹಿರಿಯ ಹೆಣ್ಣುಮೀನು ತಾನೇ ಗಂಡಾಗಿ ಲಿಂಗ ಪರಿವರ್ತನೆ ಹೊಂದಿ ಗುಂಪಿನ ಯಜಮಾನನಾಗುವ ಮೀನುಗಳಿವೆ, ಯಾರೂ ನಂಬಲಾಗದ್ದು; ಕೊತಕೊತನೆ ಕುದಿಯುವ ಸಾಗರ ತಳದ ಜ್ವಾಲಾಮುಖಿಯ ನೀರಿನಲ್ಲೂ ಹಾಯಾಗಿ ಜೀವಿಸುವ ಮೀನು ಹಾಗೂ ಏಡಿಗಳಿವೆ! ಏನಿದೆ! ಏನಿಲ್ಲ?!
ಇವುಗಳ ಪಾಲಿಗೆ ಇನ್ನೊಂದು ಸೇರ್ಪಡೆ, ತಮಾಷೆಯಾಗಿ, ಆಶ್ಚರ್ಯವಾಗಿ ಕಾಣುವ ಬಿಲ್ಲುಗಾರ ಮೀನು. Toxotidae ಕುಟುಂಬಕ್ಕೆ ಸೇರಿದ ಈ ಮೀನನ್ನು ‘ಸ್ಪಿನ್ನರ್ ಮೀನು’ ಎಂದೂ ಕರೆಯುತ್ತಾರೆ. ಎಲ್ಲಾ ಮೀನುಗಳು ನೀರಿನೊಳಗೆ ಹುಡುಕಿದರೆ, ಬಿಲ್ಲುಗಾರ ಮೀನಿಗೆ ನೀರಿನಲ್ಲಿರುವ ಆಹಾರ ಹಿಡಿಸುವುದಿಲ್ಲ!! ಅದಕ್ಕಾಗಿಯೇ ಈ ಮೀನು ಬಿಲ್ಲುಗಾರರಂತೆ ‘ಬಾಣ’ ಹೊಡೆದು ತನ್ನ ಆಹಾರವನ್ನು ಸಂಪಾದಿಸುತ್ತದೆ! ನೀರಿರುವಲ್ಲಿ ನೀರಿನ ಕಡೆಗೆ ಬಾಗಿಕೊಂಡಿರುವ ಗಿಡ, ಹುಲ್ಲು, ಕಡ್ಡಿಗಳ ಮೇಲೆ ಕುಳಿತ ಪ್ರಾಣಿಗಳೇ ಇವುಗಳ ಪ್ರಮುಖ ಆಹಾರ. ಆಶ್ಚರ್ಯದ ಪರಮಾವಧಿಯೆನಿಸಿದರೂ ಅಕ್ಷರಶಃ ಸತ್ಯ; ನೀರಿನಿಂದ ಸುಮಾರು ಐದು ಅಡಿ ಎತ್ತರದ ಗಿಡಗಳ ಮೇಲೆ ಕುಳಿತಿರುವ ಹುಳುಗಳು, ಮಿಡತೆ, ಜೇಡ, ಚಿಟ್ಟೆ, ಗಳಿಗೆ ಗುರಿಯಿಟ್ಟು ಬಾಯಲ್ಲಿ ತುಂಬಿಕೊಂಡ ನೀರನ್ನು ಬಾಣಗಳ ರೀತಿ ಉಗಿಯುತ್ತದೆ. ಆ ನೀರಿನ ಬಾಣದ ಹೊಡೆತ ಅಂತಿಂತದ್ದಲ್ಲ! ಪ್ರಾಣಿಯು ಅದೆಷ್ಟೇ ಗಟ್ಟಿಯಾಗಿ ಕುಳಿತಿದ್ದರೂ, ಮೀನು ಕೊಡುವ ನೀರಿನ ಬಾಣಗಳ ಏಟಿಗೆ ತತ್ತರಿಸಿ ಕಾಲು ಜಾರಿ ಆಯತಪ್ಪಿ ನೀರಿಗೆ ಬೀಳಲೇಬೇಕು. ಎಲ್ಲಿಯವರೆಗೆಂದರೆ, ಗಿಡಗಳ ಮೇಲಷ್ಟೇ ಅಲ್ಲ, ಬಿಲ್ಲುಗಾರ ಮೀನುಗಳು ಒಮ್ಮೊಮ್ಮೆ ಗಾಳಿಯಲ್ಲಿ ಹಾರಾಡುತ್ತಿರುವ ಹುಳುಗಳನ್ನು ಕೂಡಾ ತನ್ನ ನೀರಿನ ಏಟುಗಳಿಂದ ಕೆಳಗುರುಳಿಸುತ್ತವೆ!

ಭಾರತ, ಆಗ್ನೇಯ ಏಷ್ಯಾ, ಉತ್ತರ ಆಸ್ಟ್ರೇಲಿಯಾ, ಫಿಲಿಫೈನ್ಸ್, ಪಾಲಿನೇಷ್ಯಾಗಳಲ್ಲಿ ಕಂಡುಬರುವ ವಿಶೇಷವಾದ ಈ ಬಿಲ್ಲುಗಾರ ಮೀನು ಬಹುತೇಕ ಸ್ವಾಭಾವಿಕವಾಗಿ ಉಪ್ಪು ನೀರಿನಲ್ಲಿ ವಾಸ ಮಾಡುತ್ತದೆ. ಆದರೆ ಆಗಾಗ ಸಿಹಿ ನೀರಿನಲ್ಲೂ ಇವುಗಳು ಕಾಣಿಸುವುದುಂಟು. ಹೆಚು ಕಡಿಮೆ ಒಂದೇ ರೀತಿ ಕಾಣುವ ಬಿಲ್ಲುಗಾರ ಮೀನುಗಳ ಏಳು ಪ್ರಬೇಧಗಳನ್ನು ಇದುವರೆಗೆ ಗರುತಿಸಲಾಗಿದೆ. ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆಯ ಪ್ರಕಾರ ನೀರಿನಲ್ಲಿದ್ದುಕೊಂಡೇ ನೆಲದ ಮೇಲಿನ ಪ್ರಾಣಿಗಳಿಗೆ ‘ಗುರಿ’ ಹಾಕಿ ಹೊಡೆಯುವ ಪ್ರಾವಿಣ್ಯತೆ ಕೇವಲ ಸಸ್ತನಿಗಳಿಗೆ ಮಾತ್ರ ಇತ್ತು. ಸ್ವಲ್ಪ ಮಟ್ಟಿಗೆ ಆನಕೊಂಡಾ ಹಾವು ಮತ್ತು ಮೊಸಳೆಗಳಿಗೆ ಈ ಕಲೆ ಸಿದ್ಧಿಸಿದೆ. ಆದರೆ ಮೀನುಗಳ ಜಾತಿಯಲ್ಲಿ ನೀರಿನಲ್ಲಿದ್ದುಕೊಂಡು ನೆಲದ ಮೇಲಿರುವ ಜೀವಿಗೆ ಗುರಿಯಿಡುವ ಅದ್ಭುತ ಸಾಮರ್ಥ್ಯ ಬಿಲ್ಲುಗಾರ ಮೀನುಗಳಲ್ಲದ ಬೇರೆ ಯಾವ ಮೀನುಗಳಿಗೂ ಇಲ! ಈ ಮೀನುಗಳ ದೃಷ್ಟಿ ಅಷ್ಟೊಂದು ಚುರುಕು!
ನೀರಿನೊಳಗೆ ಮುಳುಗಿಕೊಂಡು ಬಾಗಿದ ಕೊಂಬೆಯ ಮೇಲೆ ಕುಳಿತಿರುವ ಪ್ರಾಣಿಗೆ ಗುರಿ ಇಡುವುದೆದಂದರೆ ಅದೇನು ಹುಡುಗಾಟಿಕೆಯ ಮಾತಲ್ಲ. ಇದಕ್ಕೆ ನೀರಿನ ವಕ್ರೀಭವನವನ್ನು ಸರಿಯಾಗಿ ಲೆಕ್ಕ ಹಾಕಿ, ಇಂತಹ ಸ್ಥಳದಲ್ಲಿಯೇ ಬೇಟೆ ಇದೆಯೆಂದು ನಿಖರವಾಗಿ ನಿರ್ಧರಿಸುವ ಚಾಕಚಕ್ಯತೆ ಬೇಕು! ವಿಶೇಷವೆಂದರೆ, ಬಿಲ್ಲುಗಾರ ಮೀನು ನೀರಿನ ವಕ್ರೀಭವನವನ್ನು ಅದೆಷ್ಟು ನಿಖರವಾಗಿ ಲೆಕ್ಕಾಚಾರ ಹಾಕುತ್ತದೆ ಎಂದರೆ, ಎಂತಹ ಸನ್ನಿವೇಶದಲ್ಲೂ ಮೀನು ತನ್ನ ಗುರಿ ತಪ್ಪುವುದಿಲ್ಲ! ಈ ನಿಖರವಾದ ಲೆಕ್ಕಾಚರದಿಂದಲೇ ಮೀನು ನೀರಿನೊಳಗಿದ್ದುಕೊಂಡು 45 ರಿಂದ 110 ಡಿಗ್ರಿ ಕೋನದವರೆಗೆ ಯಾವುದೇ ಬೇಟೆಯನ್ನೂ ನಿರಾಯಾಸವಾಗಿ ಹೊಡೆದುರುಳಿಸುತ್ತದಾದರೂ, ಸಾಮಾನ್ಯವಾಗಿ ೭೫ ಡಿಗ್ರಿಯಲ್ಲಿ ನೀರನ್ನು ಉಗುಳುತ್ತದೆ. ಇನ್ನೂ ವಿಶೇಷವೆಂದರೆ, ಬೇರೆ ಬೇರೆ ಗಾತ್ರದ ಬೇಟೆಗಳಿಗೆ ಅವುಗಳಿಗೆ ಸರಿತೂಗುವ ಬೇರೆ ಬೇರೆ ಗಾತ್ರದ ನೀರನ್ನು; ಬೇರೆ ಬೇರೆ ದೂರಕ್ಕೆ ಬೇರೆ ಬೇರೆಯದೇ ಆದ ವೇಗದ ನೀರನ್ನು ಚಿಮುಕಿಸುತ್ತದೆ! ಕೆಲವೊಮ್ಮೆ ಬೇಟೆ ನೇರ ಬಾಯಿಗೇ ಸಿಗುವಷ್ಟು ಸಮೀಪಲ್ಲಿದ್ದರೆ, ಒಂದೇ ನೆಗೆತಕ್ಕೆ- ಬೇಟೆಗೆ ಏನಾಗುತ್ತಿದೆ ಎಂದು ತಿಳಿಯುವುದರೊಳಗೆ- ಬಾಚಿ ನುಂಗುವುದೂ ಉಂಟು!

ಬಿಲ್ಲುಗಾರ ಮೀನಿಗೆ ಪ್ರಾಣಿಯೊಂದು ಕಾಣಿಸಿದ ತಕ್ಷಣ, ಬೇಟೆಯ ಚಿತ್ರ ಕಣ್ಣಿನ ರೆಟಿನಾದ ಮೇಲೆ ಸರಿಯಾಗಿ ಬೀಳುವಂತೆ ಕಣ್ಣನ್ನು ಕ್ಷಣಮಾತ್ರದಲ್ಲಿ ಬೇಟೆಯ ಕಡೆಗೆ ಹೊಂದಿಸಿಕೊಳ್ಳುತ್ತದೆ. ಆ ವೇಳೆಗಾಗಲೇ ಮೀನು ಕಿವಿರುಗಳ ಮೂಲಕ ನೀರನ್ನು ಎಳೆದು ಬಾಯಿಯಲ್ಲಿ ತುಂಬಿಕೊಂಡು ಬೇಟೆಯ ಮೇಲೆ ನೀರಿನ ‘ಬಾಣ’ ಬಿಡಲು ಸಿದ್ಧವಾಗಿರುತ್ತದೆ. ಯಾವಾಗ ನೆಲದ ಮೇಲೆ ಇರುವ ಬೇಟೆಯ ಸ್ಥಾನವನ್ನು ನೀರಿನ ವಕ್ರೀಭವನದೊಂದಿಗೆ ತಾಳೆ ಹಾಕಿ ಲೆಕ್ಕಾಚಾರ ಸಿದ್ಧವಾಯ್ತೋ, ಮೀನು ತನ್ನ ಬಾಯಿಯನ್ನು ಪಿಚಕಾರಿಯ ಮೂತಿಯ ಅಥವಾ ಇಂಜಕ್ಷನ್ ಸಿರಿಂಜ್‌ನಂತೆ ಚೂಪಾಗಿ, ಜೊತೆಗೆ ಬಂದೂಕಿನ ನಳಿಗೆಯಂತೆ ತಿರುಗಣೆ (grooves) ಮಾಡಿಕೊಂಡು, ನೀರನ್ನು ನಾಲಗೆಯಿಂದ ಒತ್ತಿ, ಥೇಟ್ ಜೆಟ್ ಇಂಜಿನ್ನ ರೀತಿ ಬೇಟೆಯ ಮೇಲೆ ನೀರಿನ ಪ್ರಹಾರವನ್ನು ಆರಂಭಿಸುತ್ತದೆ. ಇಷ್ಟೆಲ್ಲ ಕೆಲಸಗಳು- ಗಿಡದ ಮೇಲೆ ಹಾಯಾಗಿ ಕುಳಿತುಕೊಂಡಿರುವ ಪ್ರಾಣಿಗೆ- ಏನು ಎತ್ತ ಎಂಬುದು ಅರಿವಾಗುವುದರೊಳಗೆ ಕ್ಷಣಮಾತ್ರದಲ್ಲಿ ಕಣ್ಮುಚ್ಚಿ ತೆರೆಯುವದರೊಳಗೆ ನಡೆದುಹೋಗಿರುತ್ತದೆ. ಬಿಲ್ಲುಗಾರ ಮೀನಿನ ಮರಿಗಳು ಕೇವಲ ಎರಡೂವರೆ ಸೆಂಟಿ ಮೀಟರ್ ಇರುವಾಗಲೇ ‘ಬಾಣ’ ಹೊಡೆಯಲು ಆರಂಭಿಸುತ್ತವೆ. ಆದರೆ ಆರಂಭದಲ್ಲಿ ತಾಯಿ ಮೀನಿಗಿರುವ ನಿಖರ ಗುರಿ ಮರಿಗಳಿಗೆ ಇರುವುದಿಲ್ಲ. ಹಾಗಂತ ತಾಯಿ ಮೀನು ತಾನು ಉಗುಳಿದ ಬೇಟೆಯನ್ನು ಮರಿಗಳಿಗೆ ಕೊಡುವುದೂ ಇಲ್ಲ! ಮರಿ ತನ್ನ ನಿರಂತರ ಪ್ರಯತ್ನದಿಂದ ನೀರನ್ನು ಗುರಿಯಿಟ್ಟು ಉಗುಳಿ ಆಹಾರ ಸಂಪಾದಿಸುವುದನ್ನು ತಾನೇ ಕಲಿಯಬೇಕು. ತಾನು ಬದುಕುವ ಪರಿಸರದಲ್ಲಿ ತನ್ನ ಕಾಲ ಮೇಲೆ ತಾನೆ ನಿಲ್ಲಬೇಕು. ಅದು ಪ್ರಕೃತಿಯ ನಿಯಮ. ಪ್ರಸವಿಸಿದ ಗಂಟೆಯೊಳಗೆ ವೈಲ್ಡ್ ಬೀಸ್ಟ್, ಜಿರಾಫೆ, ಬಾರಾಸಿಂಗಾಗಳಂತಹ ಪ್ರಾಣಿಗಳ ಮರಿಗಳು ಎದ್ದೋಡತೊಡಗುತ್ತವೆ, ವರ್ಷದೊಳಗೆ ತಮ್ಮ ಆಹಾರವನ್ನು ತಾವೇ ಸಂಪಾದಿಸಿಕೊಳಲು ಆರಂಭಿಸ್ಳುತ್ತವೆ. ತನ್ನ ತಂದೆ-ತಾಯಿಗೆ ಅತ್ಯಂತ ದೀರ್ಘಾವಧಿಯವರೆಗೆ ಅವಲಂಬನೆ ಮಾಡುವ ಪ್ರಾಣಿ ಎಂದರೆ ಮನುಷ್ಯನೇ! ಅದರಲ್ಲೂ ಈಗೀಗಿನ ವಿದ್ಯಾವಂತರು ಎನಿಸಿಕೊಳ್ಳುವ ತೀರಾ ಸಭ್ಯ ನಾಗರೀಕರಂತೂ ತಮ್ಮ ಮಕ್ಕಳನ್ನು- ತಾನೇ ನಡೆಯುತ್ತೇನೆ ಎಂದರೂ ಬಿಡದ ದೃತರಾಷ್ಟçನ ಕುರುಡಿನಲ್ಲಿ- ತಮ್ಮ ಯೋಚನೆಯ ಪರಿಧಿಯಾಚೆಗೆ ಒಂದಡಿಯೂ ಇಡದಂತೆ ಜೋಪಾನವಾಗಿ ಬೆಳೆಸುತ್ತಾರೆ! ಮುಂದೆ ಸಣ್ಣ ಆಘಾತವನ್ನೂ ಎದುರಿಸಲಾಗದ ತಲೆಮಾರಾಗಿ ಅವರು ಬೆಳೆಯುತ್ತಾರೆ! ವರ್ಷದಿಂದ ವರ್ಷಕ್ಕೆ ಈ ಹುಚ್ಚು ಏರುತ್ತಿರುವುದು ಶೋಚನೀಯ. ಟ್ಯೂಸನ್ನು, ಟೆಸ್ಟು, ಎಕ್ಸಾಮು, ರಿಸಲ್ಟು, ಸೀಟು, ಜಾಬು, ಕಾಂಪಿಟೇಸನ್ನು, ಪ್ರಮೋಸನ್ನು- ಬದುಕು ಇದರಾಚೆಗೂ ಇದೆಯಲ್ಲ?!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − one =
Remember me
