ನವದೆಹಲಿ:ಹಿಂದುತ್ವ ಪ್ರತಿಪಾದನೆಯ ಹಿರಿಯ ನಾಯಕ, ಹಿಂದುಳಿದ ಸಮುದಾಯದ ದನಿ, ಅಯೋಧ್ಯೆ ರಾಮಮಂದಿರ ನಿರ್ಮಾಣ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ ಕಲ್ಯಾಣ್ ಸಿಂಗ್ ಇನ್ನು ನೆನಪು ಮಾತ್ರ. ಹಲವು ದಶಕಗಳ ರಾಜಕೀಯ ಬದುಕಿನ ಬಳಿಕ, ರಾಜ್ಯಪಾಲ ಹುದ್ದೆ ಅಲಂಕರಿಸಿ ನಿವೃತ್ತರಾಗಿದ್ದ ಅವರು ಬಿಜೆಪಿಯ ಹಲವು ತಲೆಮಾರಿನ ನಾಯಕರನ್ನು, ಕಾರ್ಯಕರ್ತರನ್ನು ಬೆಳೆಸಿದ ಅನುಭವಿ ನಾಯಕ.
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಸ್ಥಳದಲ್ಲಿ ಮಂದಿರ ನಿರ್ವಿುಸಲು ಬಿಜೆಪಿ ಮತ್ತು ಸಂಘಪರಿವಾರ ನಡೆಸಿದ ಹೋರಾಟದ ಮುಂಚೂಣಿಯಲ್ಲಿ ಕಲ್ಯಾಣ್ ಸಿಂಗ್ ಇದ್ದರು. ಹಲವು ಕರಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ಮಾತ್ರವಲ್ಲ, ಉತ್ತರಪ್ರದೇಶದುದ್ದಕ್ಕೂ ಬಹಿರಂಗ ರ್ಯಾಲಿಗಳನ್ನು ನಡೆಸುತ್ತ ಮಂದಿರ ಆಂದೋಲನಕ್ಕೆ ಬಲ ತುಂಬಿದರು. ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಕಲ್ಯಾಣ್ ಕೂಡ ಒಬ್ಬರಾಗಿದ್ದರು. ಬಳಿಕ ಅವರು ಈ ಪ್ರಕರಣದಿಂದ ಖುಲಾಸೆಗೊಂಡರು.
ದಿಟ್ಟ ನಿರ್ಧಾರಗಳಿಗೆ ಹೆಸರುವಾಸಿ:ಹೇಳಬೇಕಾದ್ದನ್ನು ನೇರವಾಗಿ ಹೇಳುವ ಛಾತಿ, ಪ್ರಖರ ಮಾತು, ದಿಟ್ಟ ನಿರ್ಧಾರಗಳಿಗೆ ಹೆಸರುವಾಸಿಯಾಗಿದ್ದ ಕಲ್ಯಾಣ್ ಸಿಂಗ್ ರಾಜಕೀಯ ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಿದರೂ ಎದೆಗುಂದಲಿಲ್ಲ. ಜನಸಂಘದೊಂದಿಗೆ ರಾಜಕೀಯ ಪ್ರವಾಸ ಆರಂಭಿಸಿದ ಇವರು 1962ರಲ್ಲಿ ಅಲಿಗಢದ ಅತ್ರೌಲಿ ವಿಧಾನಸಭಾ ಕ್ಷೇತ್ರದಿಂದ ಮೊದಲಬಾರಿ ಚುನಾವಣೆ ಎದುರಿಸಿದರಾದರೂ, ಪರಾಭವಗೊಂಡರು. ಎರಡನೇ ಬಾರಿಗೆ ಇದೇ ಕ್ಷೇತ್ರದಿಂದ 4 ಸಾವಿರ ಮತಗಳ ಅಂತರದಿಂದ ಗೆದ್ದುಬಂದರು. ಮಾತ್ರವಲ್ಲ, ಅತ್ರೌಲಿ ಕ್ಷೇತ್ರದಿಂದಲೇ ನಿರಂತರವಾಗಿ 8 ಬಾರಿ ಶಾಸಕರಾಗಿ ಗೆದ್ದುಬಂದರು. ಹಿಂದುಳಿದ ಸಮುದಾಯದ ನಾಯಕನಾಗಿ ಮತ್ತು ಹಿಂದುತ್ವದ ಮುಖವಾಗಿ ಕಲ್ಯಾಣ್ ಸಿಂಗ್ ಮುನ್ನೆಲೆಗೆ ಬಂದು ಸಿಎಂ ಹುದ್ದೆ ಅಲಂಕರಿಸಿದರು. 1991ರ ಜೂನ್​ನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಇವರು ಆಡಳಿತದಲ್ಲಿ ಛಾಪು ಮೂಡಿಸುವ ಮುನ್ನವೇ 1992 ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿನ ವಿವಾದಿತ ಬಾಬ್ರಿ ಕಟ್ಟಡ ಧ್ವಂಸಗೊಂಡಿತು. ನೈತಿಕ ಹೊಣೆ ಹೊತ್ತು ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಪಿ.ವಿ.ನರಸಿಂಹ ರಾವ್ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ವಜಾಗೊಳಿಸಿತು. 1997ರ ಸೆಪ್ಟೆಂಬರ್​ನಲ್ಲಿ ಎರಡನೇ ಬಾರಿ ಉ.ಪ್ರ.ದ ಮುಖ್ಯಮಂತ್ರಿಯಾದ ಕಲ್ಯಾಣ್ ಸಿಂಗ್ 1999 ನವೆಂಬರ್​ವರೆಗೆ ಈ ಹುದ್ದೆಯಲ್ಲಿ ಮುಂದುವರಿದರು.
ರಾಜ್ಯಪಾಲರ ಹುದ್ದೆ ನಿರ್ವಹಣೆ:2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸಿಂಗ್​ರಿಗೆ ರಾಜ್ಯಪಾಲ ಹುದ್ದೆ ಒಲಿದು ಬಂತು. 2014 ಸೆಪ್ಟೆಂಬರ್ 4ರಿಂದ 2019 ಸೆಪ್ಟೆಂಬರ್ 8ರವರೆಗೆ ರಾಜಸ್ಥಾನದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದರು.
ಎರಡು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಬಿಜೆಪಿ ಜತೆ ಸ್ನೇಹ, ಮುನಿಸು ಎರಡೂ ಹೊಂದಿದ್ದರು. ಈ ಧೋರಣೆ ಕಲ್ಯಾಣರ ರಾಜಕೀಯ ಬೆಳವಣಿಗೆಗೆ ಹಿನ್ನಡೆಯಾಗಿಯೂ ಪರಿಣಮಿಸಿತು. ಲಾಲಕೃಷ್ಣ ಆಡ್ವಾಣಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಸಿಂಗ್ ಕೆಲ ಬಾರಿ ಅಟಲ್ ಬಿಹಾರಿ ವಾಜಪೇಯಿ ಅವರೊಡನೆ ಖಾರವಾಗಿ ಮಾತನಾಡಿದ್ದುಂಟು. ಪಕ್ಷವಿರೋಧಿ ಹೇಳಿಕೆಗಳ ಪರಿಣಾಮ ಅವರನ್ನು 1999ರ ಕೊನೆಯಲ್ಲಿ ಬಿಜೆಪಿಯಿಂದ ಉಚ್ಚಾಟಿಸಲಾಯಿತು. ಆ ಬಳಿಕ ಸಿಂಗ್ ರಾಷ್ಟ್ರೀಯ ಕ್ರಾಂತಿ ಪಾರ್ಟಿ (ಆರ್​ಕೆಪಿ)ಯನ್ನು ಸ್ಥಾಪಿಸಿದರು. ನಂತರದ ದಿನಗಳಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ದಿ.ಪ್ರಮೋದ್ ಮಹಾಜನ್ ಅವರ ನಿರಂತರ ಪ್ರಯತ್ನ ಮತ್ತು ವಾಜಪೇಯಿ ಮನಸ್ಸು ಬದಲಾದ ಪರಿಣಾಮ 2004ರ ಲೋಕಸಭಾ ಚುನಾವಣೆ ಮುನ್ನ ಕಲ್ಯಾಣ್ ಸಿಂಗ್ ಬಿಜೆಪಿಗೆ ಮರಳಿದರು. ಆದರೆ ಬಿಜೆಪಿ ತಮ್ಮನ್ನು ಕಡೆಗಣಿಸಿ, ಮೂಲೆಗುಂಪು ಮಾಡುತ್ತಿದೆ ಎಂದು ಆರೋಪಿಸಿ 2009ರ ಲೋಕಸಭೆ ಚುನಾವಣೆಯ ಮುನ್ನ (ಜ.20, 2009) ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. 2010ರಲ್ಲಿ ಅವರ 78ನೇ ಹುಟ್ಟುಹಬ್ಬದಂದು ಹೊಸದೊಂದು ರಾಜಕೀಯ ವೇದಿಕೆ ‘ಜನ ಕ್ರಾಂತಿ’ಯನ್ನು ಸ್ಥಾಪಿಸಿದರು. 2013ರಲ್ಲಿ ಮತ್ತೆ ಬಿಜೆಪಿಗೆ ಮರಳಿದರು.
‘ನೀವು ಯುವತಿ ಜತೆ ನಗ್ನವಾಗಿರುವ ವಿಡಿಯೋ ನನ್ನ ಬಳಿ ಇದೆ’ ಎಂದು ಬಿಜೆಪಿ ಮುಖಂಡನಿಗೆ ಬ್ಲ್ಯಾಕ್​ಮೇಲ್​ ಮಾಡಿದ ಅಪರಿಚಿತ

ಪೂಜೆ ವೇಳೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದ ಪೂಜಾರಿ ಸಾವು; ನೋಡನೋಡುತ್ತಿದ್ದಂತೆ ನೂರಾರು ಅಡಿ ಆಳಕ್ಕೆ ಉರುಳಿದ ದೇಹ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
