ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಿನ್ನಮತ ಭುಗಿಲೇಳಲು ಕಾರಣವಾಗಿದ್ದು ದೇಶಾದ್ಯಂತ ಹಿಂಸಾಕೃತ್ಯ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಸಂಭವಿಸಿದೆ. ಇದರಿಂದ ಅನುಮಾನದ ಹುತ್ತ ಎಲ್ಲ ಕಡೆ ಬೆಳೆದಿದೆ. ಮಂಗಳೂರಿನಲ್ಲಿ ಹಿಂಸಾಕೃತ್ಯದಿಂದ ಇಬ್ಬರ ಬಲಿಯಾಗಿದೆ. ಪೊಲೀಸರು ಮತ್ತು ಅಮಾಯಕರಿಗೆ ಗಂಭೀರಗಾಯಗಳಾಗಿವೆ. ದೊಂಬಿ, ಸಾರ್ವಜನಿಕ ಆಸ್ತಿ ಮೇಲೆ ಕಲ್ಲುತೂರಾಟ ಮೊದಲಾದ ಕೃತ್ಯಗಳಿಂದ ಸಾರ್ವಜನಿಕರ ನೆಮ್ಮದಿಗೆ ಭಂಗ ಬಂದಿದೆ. ಇದು ಅತ್ಯಂತ ದುಃಖದ ಸಂಗತಿ. ಪ್ರತಿಭಟಿಸುವವರಿಗೆ ಈ ಕಾಯ್ದೆಯ ಆಳ-ಅಗಲವೇ ಗೊತ್ತಿಲ್ಲ. 1955ರ ಕಾಯ್ದೆಗೆ ಈಗ ತಿದ್ದುಪಡಿ ತಂದಿರುವುದು ಏನು ಎಂಬುದೂ ತಿಳಿದಿಲ್ಲ. ತಿದ್ದುಪಡಿಯಿಂದ ನಮಗೇನು ತೊಂದರೆ ಎಂಬ ವಿವರವೂ ತಿಳಿಯದು. ಹಿಂಸಾಕೃತ್ಯದಿಂದ ಮೂಲ ಉದ್ದೇಶವೇ ಹಿಂದಕ್ಕೆ ಸರಿಯುತ್ತದೆ. ದಬ್ಬಾಳಿಕೆ, ಅಮಾಯಕರ ಮೇಲೆ ಲಾಠಿಪ್ರಹಾರ, ಅಶ್ರುವಾಯು ಪ್ರಯೋಗ, ಗೋಲಿಬಾರ್ ಸೇರಿ ಎಲ್ಲ ಅತಿರೇಕಗಳಿಗೆ ಪೊಲೀಸರು ಹೊಣೆಗಾರರು ಎಂಬ ಆರೋಪ ಕೇಳಿಬರುವುದು ಸಹಜ.
ಬುದ್ಧಿಜೀವಿಗಳು ಈಗ ಆರೋಪ ಮಾಡುತ್ತಿರುವುದು ಈ ಬಾರಿಯ ವಿಶೇಷ. ‘ಪ್ರತಿಭಟನೆ ಶಾಂತಿಯುತವಾಗಿದ್ದರೂ ಪೊಲೀಸರು ನಮ್ಮ ಹಕ್ಕಿಗೆ ಅಡ್ಡಿಯಾಗಿದ್ದಾರೆ’ ಎಂದು ವಿದ್ಯಾವಂತರೇ ದೂರಿದ್ದಾರೆ. ಎಲ್ಲ ಕಡೆ ಭಾವನೆಗಳನ್ನು ಕೆರಳಿಸುವ ವಾತಾವರಣ ಕಂಡು ಬರುತ್ತಿದೆ. ಇದರಿಂದ ಜನಸಾಮಾನ್ಯರು ಬೇರೆಯವರ ಮಾತುಗಳಿಗೆ ಭಾವಪರವಶರಾಗಿ ವರ್ತಿಸುವುದುಂಟು. ಈ ವಾತಾವರಣ ಮೊದಲು ತಿಳಿಗೊಳ್ಳಬೇಕು.
ಭಾರತ ವಿವಿಧ ಜಾತಿ, ವರ್ಗ, ಧರ್ಮಗಳ ದೇಶ. ಬಹುತೇಕ ಬಡವರು. ಸ್ವಾತಂತ್ರ್ಯಬಂದು 7 ದಶಕಗಳಾದರೂ ಅನ್ನ, ಮನೆ, ಬಟ್ಟೆ, ಶಿಕ್ಷಣ ಸೇರಿದಂತೆ ಎಲ್ಲ ಮೂಲಭೂತ ಸವಲತ್ತುಗಳಿಂದ ವಂಚಿತರಾದವರೇ ಹೆಚ್ಚು. ಇಂಥ ಸಂದರ್ಭ ದಲ್ಲಿ ನಮ್ಮ ದೇಶದ ಪೌರರಲ್ಲದವರಿಗಾಗಿ, ಅಕ್ರಮವಾಗಿ ವಲಸೆ ಬಂದವರಿಗಾಗಿ ಮಾನವ ಹಕ್ಕುಗಳ ಹೆಸರಿನಲ್ಲಿ ಪ್ರತಿಭಟನೆ ನಡೆಸುವುದು ವಿಪರ್ಯಾಸ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ವಸ್ತುನಿಷ್ಠವಾಗಿ ಹಾಗೂ ಸ್ಥಿತಪ್ರಜ್ಞತೆಯಿಂದ ನೋಡುವ ಅಗತ್ಯವಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಮಾಡಿರುವ ಮೊದಲ ಬದಲಾವಣೆ ಎಂದರೆ ‘ಅಕ್ರಮ ವಲಸಿಗರು’ ಎಂಬುದಕ್ಕೆ ಕೆಲವು ಪದಗಳನ್ನು ಸೇರ್ಪಡೆ ಮಾಡಲಾಗಿದೆ. ಅದೇನೆಂದರೆ ಉಪಖಂಡ (1) ಕಲಂ 2ರಲ್ಲಿ ಯಾವುದೇ ವ್ಯಕ್ತಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರೖೆಸ್ತ ಸಮುದಾಯಕ್ಕೆ ಸೇರಿದವರು ಕಿರುಕುಳಕ್ಕೆ ಒಳಗಾಗಿದ್ದು, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನಗಳಿಂದ ಭಾರತಕ್ಕೆ 2014 ಡಿಸೆಂಬರ್ 31ರೊಳಗೆ ಬಂದಿದ್ದರೆ ಹಾಗೂ ಭಾರತೀಯ ರಹದಾರಿ ಕಾಯ್ದೆ 1970 ಸೇರಿ ಬೇರೆ ಯಾವುದೇ ಕಾಯ್ದೆಯಲ್ಲಿ ‘ಅಕ್ರಮ ವಲಸಿಗರು’ ಎಂದು ನಮೂದಾಗದೇ ಇದ್ದಲ್ಲಿ ಅವರಿಗೆ ಸರ್ಕಾರ
ಪೌರತ್ವ ನೀಡ ಬಹುದು. ಇಲ್ಲಿ ಪ್ರಮುಖವಾಗಿ ಗಮನಿಸ ಬೇಕಾದ ಸಂಗತಿ ಎಂದರೆ ಯಾರ ಹಕ್ಕನ್ನೂ ಕಸಿದುಕೊಳ್ಳುವ ಪ್ರಸ್ತಾವ ಇಲ್ಲ.
ಹೊಸ ತಿದ್ದುಪಡಿ ಕಾಯ್ದೆಯಲ್ಲಿ ಮಾಡಿರುವ ಎರಡನೇ ಬದಲಾವಣೆಯಲ್ಲಿ ‘ಅಕ್ರಮ ವಲಸಿಗರು’ ಎಂದರೆ ಅರ್ಥವೇನು ಎಂಬುದನ್ನು ವಿವರಿಸಲಾಗಿದೆ. ಮತ್ತೊಂದು ಬದಲಾವಣೆ ಎಂದರೆ ‘ನೈಸರ್ಗೀಕರಣ’ (ನ್ಯಾಚ್ಯುರಲೈಸೇಷನ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿವರ ನೀಡಲಾಗಿದೆ. ಭಾರತದಲ್ಲಿ 11 ವರ್ಷ ವಾಸವಿರಬೇಕು ಎಂಬ ನಿಯಮ ಇತ್ತು. ಇದನ್ನು ಈಗ 5 ವರ್ಷಗಳಿಗೆ ಇಳಿಸಲಾಗಿದೆ. ಅಂದರೆ, ಯಾವುದೇ ವ್ಯಕ್ತಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರೖೆಸ್ತ ಸಮುದಾಯಕ್ಕೆ ಸೇರಿದವರು ಕಿರುಕುಳಕ್ಕೆ ಒಳಗಾಗಿದ್ದು, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನಗಳಿಂದ ಭಾರತಕ್ಕೆ ಬಂದಿದ್ದು 5 ವರ್ಷಗಳಾಗಿದ್ದರೆ ಸಾಕು. ಈ ತಿದ್ದುಪಡಿಯನ್ನು ಓದಿದರೆ ಯಾರ ಹಕ್ಕನ್ನೂ ಕಿತ್ತುಕೊಳ್ಳುವ ಪ್ರಸ್ತಾವ ಇಲ್ಲ.
ಇನ್ನು ರಾಷ್ಟ್ರೀಯ ಪೌರತ್ವ ನೋಂದಣಿ. ಇದು ಹೊಸದೇನೂ ಅಲ್ಲ. ದೇಶಾದ್ಯಂತ ನೋಂದಣಿ ಮಾಡುವ ಪರಿಪಾಠ ಇರಲಿಲ್ಲ. ಅಸ್ಸಾಂ ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ ಇರಲಿಲ್ಲ. ಈಗ ಎಲ್ಲ ರಾಜ್ಯಗಳಲ್ಲಿ ಇದನ್ನು ವಿಸ್ತರಿಸಬೇಕು ಎಂದರೆ ಆಯಾ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಬೇಕು. ಇದು ಕಾನೂನಿನಲ್ಲಿ ಬದಲಾವಣೆಯಲ್ಲ. ವಿಸ್ತರಣೆ ಅಷ್ಟೆ. ಈಗಿರುವ ಪ್ರಶ್ನೆ ಎಂದರೆ ಒಂದು ವೇಳೆ ಯಾರೇ ಹೆಸರು ನೋಂದಣಿಯಲ್ಲಿ ಇಲ್ಲ ಎಂದರೆ ಅವರನ್ನು ‘ಅಕ್ರಮ ವಲಸಿಗರು’ ಎಂದು ಪರಿಗಣಿಸಬೇಕಾಗುತ್ತದೆ ಎಂಬುದು ಹಲವರ ಅನಿಸಿಕೆ. ಹಾಗೇನಾದರೂ ಆದರೆ ಅಕ್ರಮ ವಲಸಿಗರಿಗೆ ಇರುವ ನಿಯಮ ಪಾಲಿಸಬೇಕು. ಈಗಲೂ ಈ ನಿಯಮ ಇದ್ದೇ ಇದೆ. ಅನ್ಯಾಯವೇನೂ ಆಗುವುದಿಲ್ಲ.
ಬಹುಶಃ ಈ ಎಲ್ಲ ಸಂದೇಹಗಳನ್ನು ಸಂಸತ್ತಿನಲ್ಲೇ ನಿವಾರಿಸಲು ಅವಕಾಶವಿತ್ತು. ಸಂಸದರು ತಾಳ್ಮೆಯಿಂದ ಎಲ್ಲವನ್ನೂ ರ್ಚಚಿಸಿ ಸಾಧಕ-ಬಾಧಕಗಳನ್ನು ವಿವರಿಸಿದ್ದರೆ ಅದರಿಂದ ಜನಸಾಮಾನ್ಯರ ಎಲ್ಲ ಸಂದೇಹಗಳು ನಿವಾರಣೆಯಾಗುತ್ತಿದ್ದವು. ರಾಜಕೀಯ ಪಕ್ಷಗಳು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಿದ್ದರೆ ಇಂದಿನ ಕಷ್ಟ ಬಾರದಂತೆ ನೋಡಿಕೊಳ್ಳಬಹುದಿತ್ತು. ಯಾವುದೇ ವಿಧೇಯಕ ಬಹುಮತದ ಮೇಲೆ ಸಂಸತ್ತಿನಲ್ಲಿ ಅಂಗೀಕಾರ ಪಡೆಯುತ್ತದೆ. ಅದಕ್ಕೆ ಮುನ್ನ ಅರ್ಥಪೂರ್ಣ ಚರ್ಚೆ ನಡೆಯಬೇಕು. ಅದರಲ್ಲಿ ಎಲ್ಲ ರಾಜಕೀಯ ಪಕ್ಷಗಳ ಸದಸ್ಯರು ಭಾಗವಹಿಸಿ ಜನಸಾಮಾನ್ಯರ ಎಲ್ಲ ಸಂದೇಹಗಳನ್ನೂ ಸದನದ ಮುಂದಿಟ್ಟು ಅವುಗಳಿಗೆ ಸರ್ಕಾರದಿಂದ ಪರಿಹಾರ ಸಿಗುವಂತೆ ಮಾಡಬೇಕು. ಆಗ ಇಂದಿನ ಗೊಂದಲಕ್ಕೆ ಅವಕಾಶ ಇರುತ್ತಿರಲಿಲ್ಲ.
ಮುಂದಿನ ದಿನಗಳಲ್ಲಾದರೂ ಸಂಸತ್ತು ಮತ್ತು ಇತರ ಶಾಸನಸಭೆಗಳಲ್ಲಿ ಜನಪ್ರತಿನಿಧಿಗಳು ಚರ್ಚೆಯಲ್ಲಿ ಆಸಕ್ತಿ ತೋರಿಸಬೇಕು. ಯಾವುದೇ ವಿಧೇಯಕ ಚರ್ಚೆ ಇಲ್ಲದೆ ಅಂಗೀಕಾರ ಪಡೆಯಬಾರದು. ಪ್ರಜಾಪ್ರಭುತ್ವದಲ್ಲಿ ಬಹುಮತದ ತೀರ್ವನವೇ ಅಂತಿಮವಾದರೂ ಚರ್ಚೆ ನಡೆಯಲೇಬೇಕು. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇದ್ದೇ ಇರಬೇಕು. ಎಲ್ಲ ಚರ್ಚೆ ಮುಕ್ತಾಯಗೊಂಡು ವಿಧೇಯಕ ಸಂಸತ್ತಿನ ಅನುಮೋದನೆ ಪಡೆಯಿತು ಎಂದರೆ ಅದನ್ನು ಪ್ರಶ್ನಿಸಲು ಬರುವುದಿಲ್ಲ. ಆದರೆ ಅದು ಸಂವಿಧಾನ ವಿರೋಧಿಯಾಗಿದ್ದರೆ ಹೈಕೋರ್ಟ್​ಗಳು ಮತ್ತು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಬಹುದು. ಸಂವಿಧಾನ ವಿರೋಧಿಯಾಗಿದ್ದಲ್ಲಿ ಸುಪ್ರೀಂ ಕೋರ್ಟ್ ಒಪ್ಪುವುದಿಲ್ಲ.
ಇದನ್ನು ಬಿಟ್ಟು ಜನಸಾಮಾನ್ಯರ ಭಾವನೆಗಳನ್ನು ಕೆರಳಿಸಿ ಹಿಂಸಾಕೃತ್ಯಕ್ಕೆ ಪ್ರೇರಣೆ ನೀಡುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ನ್ಯಾಯಾಂಗ ವ್ಯವಸ್ಥೆ ಒಂದು ರೀತಿ ಸ್ಪರ್ಷಮಣಿ ಇದ್ದಂತೆ. ಅದರ ವ್ಯಾಪ್ತಿಗೆ ಬಂದರೆ ಯಾವುದೇ ಕಾಯ್ದೆ ಸಂವಿಧಾನದ ನಿಕಷಕ್ಕೆ ಒಳಪಡುತ್ತದೆ. ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯರ ಹಿತ ಕಾಯಲು ನೂರಾರು ಮಾರ್ಗಗಳಿವೆ. ಬೀದಿಗೆ ಇಳಿಯಬೇಕಾದ ಅಗತ್ಯವಿಲ್ಲ. ಬೀದಿಗೆ ಇಳಿಯುವುದರಿಂದ ಸಾರ್ವಜನಿಕರ ಹಿತ ಮರೆಯಾಗಿ ಅಮಾಯಕರು ಬಲಿಯಾಗುತ್ತಾರೆ.
ಸಂಸತ್ತು ಬಹುಮತದ ಆಧಾರದ ಮೇಲೆ ತಪ್ಪು ಹೆಜ್ಜೆ ಇಟ್ಟಲ್ಲಿ ಅದನ್ನು ಸರಿಪಡಿಸಿ ಸರಿಯಾದ ಮಾರ್ಗವನ್ನು ತೋರಿಸಲು ಸುಪ್ರೀಂ ಕೋರ್ಟ್ ಇದೆ. ಇವುಗಳ ನಡುವೆ ದಾರಿ ಬಲು ದೂರವೇನೂ ಅಲ್ಲ. ನಡುರಸ್ತೆಯಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆಯೇ ಹೊರತು ಹಿಂಸಾಕೃತ್ಯದಿಂದ ನ್ಯಾಯ ಪಡೆಯಲು ಸಾಧ್ಯವಿಲ್ಲ. ನಾಗರಿಕ ಸಮಾಜದಲ್ಲಿ ಸಂವಾದ-ವಿಚಾರ ವಿಮರ್ಶೆಗಳು ನಡೆಯುತ್ತವೆಯೇ ಹೊರತು ತೋಳುಬಲಕ್ಕೆ ಅವಕಾಶ ಇರುವುದಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − twelve =
Remember me
