ಮೊನ್ನೆಯಷ್ಟೇ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ಘೊಷಿಸಿದ್ದ ಕೇಂದ್ರ ಸರ್ಕಾರ, ಶುಕ್ರವಾರ ಮತ್ತೆ ಮೂವರು ಹಿರಿಯರನ್ನು ಆ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ಚೌಧರಿ ಚರಣ್​ಸಿಂಗ್, ಪಿ.ವಿ. ನರಸಿಂಹರಾವ್, ಎಂ.ಎಸ್. ಸ್ವಾಮಿನಾಥನ್ – ಮೂವರೂ ದೇಶದ ಈ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಅರ್ಹರು. ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಇಂದಿರಾರನ್ನೇ ಅರೆಸ್ಟ್ ಮಾಡಿಸಿದ್ದ ಟಾಸ್ಕ್ ಮಾಸ್ಟರ್:ಚೌಧರಿ ಚರಣ್ ಸಿಂಗ್ ಉತ್ತರ ಪ್ರದೇಶದಲ್ಲಿ ವಿವಿಧ ಖಾತೆಗಳ ಸಚಿವರಾಗಿ, ಸಿಎಂ ಆಗಿ, ನಂತರ ಅಲ್ಪಕಾಲ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರು. ಆಡಳಿತದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅದಕ್ಷತೆಯನ್ನು ಅವರು ಸಹಿಸುತ್ತಿರಲಿಲ್ಲ. ಹಾಗೆಂದೇ ಅವರನ್ನು ಟಾಸ್ಕ್ ಮಾಸ್ಟರ್ ಎಂದು ಕರೆಯಲಾಗುತ್ತಿತ್ತು. ಚರಣ್​ಸಿಂಗ್ ಉತ್ತಮ ಸಂಸದರಾಗಿ, ತಮ್ಮ ವಾಕ್ಚಾತುರ್ಯ ಮತ್ತು ದೃಢ ಅಭಿಪ್ರಾಯಕ್ಕೆ ಹೆಸರುವಾಸಿಯಾಗಿದ್ದರು.
ಚರಣ್ ಸಿಂಗ್ ಉತ್ತರ ಪ್ರದೇಶದ ಭೂ ಸುಧಾರಣೆಗಳ ರೂವಾರಿ. ಸಾಲ ಮನ್ನಾ ಮಸೂದೆಯನ್ನು ರಚಿಸಿ ಜಾರಿಗೊಳಿಸುವಲ್ಲಿ ಚರಣ್​ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಆ ರಾಜ್ಯದ ಗ್ರಾಮಾಂತರ ಪ್ರದೇಶದ ಸಾಲಗಾರ ರೈತರಿಗೆ ಇದು ನಿರಾಳತೆ ತಂದುಕೊಟ್ಟಿತು. ಉತ್ತರ ಪ್ರದೇಶದಲ್ಲಿ ಸಚಿವರು ಪಡೆಯುತ್ತಿದ್ದ ವೇತನ ಮತ್ತು ಅನುಭವಿಸುತ್ತಿದ್ದ ಇತರ ಸೌಲಭ್ಯಗಳನ್ನು ಚರಣ್​ಸಿಂಗ್ ತಮ್ಮ ಅಧಿಕಾರಾವಧಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕಡಿತಗೊಳಿಸಿದರು. 1960ರಲ್ಲಿ ಭೂ ಹಿಡುವಳಿ ಕಾಯ್ದೆ ಜಾರಿಗೆ ತಂದರು. ಇದು ರಾಜ್ಯದೆಲ್ಲೆಡೆ ಭೂ ಹಿಡುವಳಿಯನ್ನು ಎಲ್ಲರಿಗೂ ಸರಿಸಮವಾಗಿಸುವುದಕ್ಕಾಗಿ ಭೂಮಿಯ ಗರಿಷ್ಠ ಮಿತಿಯನ್ನು ಕಡಿತಗೊಳಿಸುವ ಉದ್ದೇಶ ಹೊಂದಿದ್ದ ಕಾಯ್ದೆ. ಚರಣ್​ಸಿಂಗ್ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇದ್ದ ಮುತ್ಸದ್ದಿ. ಲಕ್ಷಾಂತರ ರೈತರ ವಿಶ್ವಾಸವೇ ಅವರಿಗೆ ರಾಜಕೀಯ ಶಕ್ತಿಯಾಗಿತ್ತು.
ಚೌಧರಿ ಚರಣ್ ಸಿಂಗ್ ಅತ್ಯಂತ ಸರಳಜೀವನ ನಡೆಸಿದರು. ವಿರಾಮದ ಸಮಯವನ್ನು ಓದು ಮತ್ತು ಬರವಣಿಗೆಯಲ್ಲಿ ಕಳೆಯುತ್ತಿದ್ದರು. ‘ಜಮೀನ್ದಾರಿ ಪದ್ಧತಿಯ ನಿರ್ನಾಮ’, ‘ಸಹಕಾರಿ ಕೃಷಿ ಒಳನೋಟ’, ‘ಭಾರತದ ಬಡತನಕ್ಕೆ ಒಂದು ಪರಿಹಾರ’, ‘ಕೃಷಿಕರಿಗೆ ಮಾಲೀಕತ್ವ ಅಥವಾ ಕಾರ್ವಿುಕರಿಗೆ ಭೂಮಿ’ ಮುಂತಾದ ಹಲವು ಪುಸ್ತಕಗಳನ್ನೂ ಚರಣ್​ಸಿಂಗ್ ಬರೆದಿದ್ದಾರೆ. ಚರಣ್ ಸಿಂಗ್ ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಬ್ರಿಟಿಷ್ ಆಡಳಿತದ ವಿರುದ್ಧ ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಹೋರಾಟದೊಂದಿಗೆ ಗುರುತಿಸಿಕೊಂಡಿದ್ದರು. ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೂ ಒಳಗಾಗಿದ್ದರು. 1987ರ ಮೇ 29ರಂದು ಅವರು ನಿಧನರಾದರು.
ರಾಜಕೀಯಕ್ಕೆ ಸೇರ್ಪಡೆ:ಚರಣ್ ಸಿಂಗ್ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಮಧ್ಯಮ ವರ್ಗದ ರೈತಾಪಿ ಕುಟುಂಬವೊಂದರಲ್ಲಿ 1902ರಲ್ಲಿ ಜನಿಸಿದರು. 1923ರಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದು, 1925ರಲ್ಲಿ ಆಗ್ರಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಕಾನೂನು ಶಿಕ್ಷಣ ಪಡೆದು ಕೆಲ ಕಾಲ ಗಾಜಿಯಾಬಾದ್​ನಲ್ಲಿ ವಕೀಲ ವೃತ್ತಿ ಪ್ರ್ಯಾಕ್ಟೀಸ್ ಮಾಡಿದರು. ಬಳಿಕ 1929ರಲ್ಲಿ ಮೀರತ್​ಗೆ ತೆರಳಿ ಅಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು.
ಸ್ವಾತಂತ್ರ್ಯೂರ್ವದಲ್ಲೇ ಶಾಸಕ:ಉತ್ತರ ಪ್ರದೇಶದ ಛಪ್ರೌಲಿ ಕ್ಷೇತ್ರದಿಂದ 1937ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಸದಸ್ಯರಾಗಿ ಚುನಾಯಿತರಾದರು. ನಂತರ 1946, 1952, 1962 ಮತ್ತು 1967ರಲ್ಲಿ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1946ರಲ್ಲಿ ಪಂಡಿತ್ ಗೋವಿಂದ ವಲ್ಲಭ ಪಂತರ ಸರ್ಕಾರದಲ್ಲಿ ಅವರು ಸಂಸದೀಯ ಕಾರ್ಯದರ್ಶಿಯಾಗಿದ್ದರು. ಕಂದಾಯ, ವೈದ್ಯಕೀಯ, ಸಾರ್ವಜನಿಕ ಆರೋಗ್ಯ, ನ್ಯಾಯ, ವಾರ್ತೆ ಹೀಗೆ ಹಲವಾರು ಖಾತೆಗಳಲ್ಲಿ ಕಾರ್ಯ ನಿರ್ವಹಿಸಿದರು. 1951ರ ಜೂನ್​ನಲ್ಲಿ ಅವರಿಗೆ ರಾಜ್ಯ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡಿ ನ್ಯಾಯ ಮತ್ತು ವಾರ್ತಾ ಖಾತೆ ಹೊಣೆ ವಹಿಸಲಾಯಿತು. 1952ರಲ್ಲಿ ಸಂಪೂರ್ಣಾನಂದರ ಮಂತ್ರಿಮಂಡಲದಲ್ಲಿ ಕಂದಾಯ, ಕೃಷಿ ಸಚಿವರಾಗಿದ್ದರು. 1959ರಲ್ಲಿ ಅವರು ರಾಜೀನಾಮೆ ನೀಡುವಾಗ ಸಾರಿಗೆ ಸಚಿವರಾಗಿದ್ದರು.
2 ಬಾರಿ ಉತ್ತರಪ್ರದೇಶದ ಸಿಎಂ:1960ರಲ್ಲಿ ಸಿ.ಬಿ. ಗುಪ್ತಾ ಮಂತ್ರಿಮಂಡಲದಲ್ಲಿ ಚರಣ್ ಸಿಂಗ್ ಗೃಹ ಮತ್ತು ಕೃಷಿ ಸಚಿವರಾಗಿದ್ದರು. ಸುಚೇತಾ ಕೃಪಲಾನಿ ಮಂತ್ರಿ ಮಂಡಲದಲ್ಲಿ ಚರಣ್​ಸಿಂಗ್ ಕೃಷಿ ಮತ್ತು ಅರಣ್ಯ ಸಚಿವರಾಗಿ 1962ರಿಂದ 1963ರವೆರೆಗೆ ಕಾರ್ಯ ನಿರ್ವಹಿಸಿದರು. 1965ರಲ್ಲಿ ಅವರು ಕೃಷಿ ಖಾತೆ ಬಿಟ್ಟುಕೊಟ್ಟು 1966ರಲ್ಲಿ ಸ್ಥಳೀಯ ಆಡಳಿತ ಖಾತೆ ವಹಿಸಿಕೊಂಡರು. 1967ರಿಂದ 1970ರವರೆಗೆ 2 ಬಾರಿ ಸಿಎಂ ಸ್ಥಾನ ಅಲಂಕರಿಸಿದ್ದರು. 1967ರಲ್ಲೇ ಕಾಂಗ್ರೆಸ್ ತೊರೆದರು. ಕಾಂಗ್ರೆಸ್ ವಿಭಜನೆಗೊಂಡಾಗ, 1970ರ ಫೆಬ್ರವರಿಯಲ್ಲಿ ಚರಣ್​ಸಿಂಗ್ 2ನೇ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಅಕ್ಟೋಬರ್ 2, 1970ರಲ್ಲಿ ರಾಜ್ಯದ ಮೇಲೆ ರಾಷ್ಟ್ರಪತಿ ಆಡಳಿತ ಹೇರಲಾಯಿತು. 1980ರಲ್ಲಿ ಲೋಕದಳ ಪಕ್ಷ ಸ್ಥಾಪಿಸಿದ ಅವರನ್ನು ಭಾರತದ ರೈತರ ಚಾಂಪಿಯನ್ ಎಂದೇ ಕರೆಯಲಾಗುತ್ತದೆ.
ಕೇಂದ್ರ ಗೃಹ ಸಚಿವರಾಗಿ:1977ರಲ್ಲಿ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಚರಣ್​ಸಿಂಗ್ ಗೃಹ ಸಚಿವರಾಗಿದ್ದರು. ಕಾಂಗ್ರೆಸ್ ಆಡಳಿತವಿದ್ದ ಎಲ್ಲ ರಾಜ್ಯಗಳ ವಿಧಾನಸಭೆಗಳೂ ವಿಸರ್ಜನೆ ಆಗುವಂತೆ ಮಾಡಿದ್ದರು. ಅಷ್ಟೇ ಅಲ್ಲ, ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅರೆಸ್ಟ್ ಆಗುವಂತೆ ನೋಡಿಕೊಂಡಿದ್ದರು. ಈ ವಿಷಯದಲ್ಲೇ ಮೊರಾರ್ಜಿ ಜತೆ ಮನಸ್ತಾಪವುಂಟಾಗಿ ಚರಣ್​ಸಿಂಗ್ 1978ರಲ್ಲಿ ರಾಜೀನಾಮೆ ನೀಡಿದರು. ಆದರೆ ಮತ್ತೆ 1979ರಲ್ಲಿ ಉಪಪ್ರಧಾನಿಯಾಗಿ ಸಂಪುಟಕ್ಕೆ ಮರುಸೇರ್ಪಡೆಯಾದರು.
ಅಲ್ಪ ಕಾಲದ ಪ್ರಧಾನಮಂತ್ರಿ…:1979ರ ವೇಳೆಗೆ ಕೇಂದ್ರದಲ್ಲಿ ರಾಜಕೀಯ ಸಮೀಕರಣ ಬದಲಾಯಿತು. ಪರಿಣಾಮ, ಮೊರಾರ್ಜಿ ಪದತ್ಯಾಗ ಮಾಡಿದರು. ಇಂದಿರಾ ಕಾಂಗ್ರೆಸ್​ನ ಬಾಹ್ಯ ಬೆಂಬಲದೊಂದಿಗೆ ಜುಲೈನಲ್ಲಿ ಚರಣ್​ಸಿಂಗ್ ಪ್ರಧಾನಿಯಾದರು! ಬಹುಮತ ಸಾಬೀತು ಮಾಡುವ ಸಮಯ ಬಂದಾಗ, ತಮ್ಮ ಮತ್ತು ಮಗ ಸಂಜಯ್ ಗಾಂಧಿ ಮೇಲಿದ್ದ ಕೇಸ್​ಗಳನ್ನೆಲ್ಲ ಕೈಬಿಡುವಂತೆ ಇಂದಿರಾ ತಾಕೀತು ಮಾಡಿದರು. ಇದಕ್ಕೆ ಚರಣ್​ಸಿಂಗ್ ಒಪ್ಪಲಿಲ್ಲ. ಪರಿಣಾಮವಾಗಿ ಆಗಸ್ಟ್​ನಲ್ಲಿ ಪ್ರಧಾನಿ ಹುದ್ದೆ ಕಳೆದುಕೊಂಡರು.
ದೇಶಕ್ಕೆ ಆಹಾರ ಭದ್ರತೆ ತಂದುಕೊಟ್ಟ ಹಸಿರು ಕ್ರಾಂತಿಯ ಹರಿಕಾರ ಸ್ವಾಮಿನಾಥನ್:‘ಭಾರತ ರತ್ನ’ ಗೌರವಕ್ಕೆ ಪಾತ್ರರಾಗಿರುವ ಎಂ.ಎಸ್. ಸ್ವಾಮಿನಾಥನ್ ನಮ್ಮ ದೇಶದ ಸುಸ್ಥಿರ ಕೃಷಿಯ ಪ್ರಬಲ ಪ್ರತಿಪಾದಕರಾಗಿದ್ದರು. ಜಾಗತಿಕ ಆಹಾರ ವ್ಯವಸ್ಥೆಗಳ ಸುಸ್ಥಿರತೆಯ ಜತೆಜತೆಗೆ ಎಲ್ಲರಿಗೂ ಆಹಾರ ಸಿಗುವುದನ್ನು ಖಚಿತಪಡಿಸಲು ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಾತರಿಪಡಿಸಿಕೊಳ್ಳಲು ಹಸಿರು ಕ್ರಾಂತಿಯ ಪರವಾಗಿ ನಿಂತಿದ್ದರು.
ತಮಿಳುನಾಡಿನ ಕುಂಭಕೋಣಂನಲ್ಲಿ ಡಾ. ಎಂ.ಕೆ. ಸಾಂಬಶಿವನ್ ಮತ್ತು ಪಾರ್ವತಿ ತಂಗಮ್ಮ ದಂಪತಿಯ ಮಗನಾಗಿ 1925ರ ಆ. 7ರಂದು ಸ್ವಾಮಿನಾಥನ್ ಜನಿಸಿದರು. 1949ರಲ್ಲಿ ನೆದರ್ಲೆಂಡ್ಸ್​ನ ವಾಹೆನಿಂಗನ್ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಸಂಶೋಧಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಬಳಿಕ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮುಂದುವರಿಸಿದರು. 1952ರಲ್ಲಿ ಅವರಿಗೆ ಅದೇ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿತು. ನಮ್ಮ ದೇಶದ ರೈತರು ಹಳೆಯ ಕಾಲದ ಕೃಷಿ ತಂತ್ರಗಳನ್ನು ಅವಲಂಬಿಸಿದ್ದ ಕಾಲದಲ್ಲಿ ಅವರು ಹೊಸ ತಂತ್ರಜ್ಞಾನವನ್ನು ಪರಿಚಯಿಸಿ ದೇಶದ ಕೃಷಿ ಕ್ಷೇತ್ರದ ಪಥವನ್ನೇ ಬದಲಾಯಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
1966ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸ್ವಾಮಿನಾಥನ್ ಅವರಿಗೆ ತಮ್ಮ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮುಕ್ತ ಸ್ವಾತಂತ್ರ್ಯ ನೀಡಿದರು. ಗೋಧಿಯ ಮಿಶ್ರ ತಳಿಗಳ ಅಭಿವೃದ್ಧಿಯಲ್ಲಿ ಸ್ವಾಮಿನಾಥನ್ ತಮ್ಮನ್ನು ತೊಡಗಿಸಿಕೊಂಡರು. ಈ ತಳಿಗಳ ಕಾರಣದಿಂದಾಗಿ 15 ವರ್ಷಗಳ ಅವಧಿಯಲ್ಲಿ ಭಾರತಕ್ಕೆ ಗೋಧಿ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಲು ಸಾಧ್ಯವಾಯಿತು. ಹೆಚ್ಚು ಇಳುವರಿ ನೀಡುವ ಭತ್ತ, ಗೋಧಿಯ ತಳಿಗಳನ್ನು ಬೆಳೆಯುವುದಕ್ಕೆ ರೈತರಿಗೆ ತರಬೇತಿ ನೀಡುವ ಕೆಲಸವನ್ನೂ ಅವರು ಮಾಡಿದರು. ಇದರಿಂದಾಗಿ ಆಹಾರದ ಕೊರತೆ ಎದುರಿಸುತ್ತಿದ್ದ ಭಾರತ, ಆಹಾರವನ್ನು ರಫ್ತು ಮಾಡುವಷ್ಟು ಸಶಕ್ತವಾಯಿತು. 1979- 80ರಲ್ಲಿ ಕೇಂದ್ರ ಕೃಷಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ಸೇವೆ ಸಲ್ಲಿಸಿದರು. 1988ರಲ್ಲಿ ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್ ಸ್ಥಾಪಿಸಿದರು. ಅವರ ಮುಂದಾಳತ್ವದಲ್ಲಿ ಆರು ದಶಕಗಳ ಹಿಂದೆ ನಡೆದ ಹಸಿರು ಕ್ರಾಂತಿಯಿಂದಾಗಿ ನಮ್ಮ ದೇಶವು ಆಹಾರ ಕ್ಷಾಮವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಯಿತು. ಗೋಧಿ ಉತ್ಪಾದನೆಯಲ್ಲಿ ದೇಶವು ವಿಶ್ವದ ಮುಂಚೂಣಿ ಸ್ಥಾನಕ್ಕೆ ಬಂದು ನಿಂತಿದ್ದಲ್ಲದೆ, ಅಮೆರಿಕದ ಮೇಲಿನ ಅವಲಂಬನೆ ತಪ್ಪಿತು. 2023ರ ಸೆ. 28ರಂದು 98ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ಅವರು ನಿಧನರಾದರು.
ಉದಾರೀಕರಣದ ರೂವಾರಿ ಪಿವಿಎನ್:ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ದೇಶವು ಆರ್ಥಿಕ ದಿವಾಳಿ ಘೊಷಿಸಬೇಕಾದಂತಹ ಸಂಕಷ್ಟಮಯ ಪರಿಸ್ಥಿತಿಯಲ್ಲಿತ್ತು. ಅವರ ನೇತೃತ್ವದ ಸರ್ಕಾರಕ್ಕೆ ಬಹುಮತವೂ ಇರಲಿಲ್ಲ. ಸ್ವತಃ ಕಾಂಗ್ರೆಸ್​ನೊಳಗೂ ಅವರಿಗೆ ಸಾಕಷ್ಟು ವಿರೋಧಿಗಳಿದ್ದರು. ಆದರೆ ಇದೆಲ್ಲವನ್ನೂ ಮೆಟ್ಟಿನಿಂತು, ಜಾಗತಿಕ ಉದಾರೀಕರಣಕ್ಕೆ ದೇಶದ ಬಾಗಿಲನ್ನು ತೆರೆದರು. ಭಾರತವನ್ನು ಆರ್ಥಿಕವಾಗಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟರು.
ಪಾಮುಲಪರ್ತಿ ವೆಂಕಟ ನರಸಿಂಹರಾವ್ 1921ರ ಜೂನ್ 28ರಂದು ಈಗಿನ ತೆಲಂಗಾಣದ ಕರೀಂ ನಗರ ಜಿಲ್ಲೆಯ ಕಡು ಬಡ ಕುಟುಂಬದಲ್ಲಿ ಜನಿಸಿದರು. ತಂದೆ ಸೀತಾರಾಮರಾವ್ ಮತ್ತು ತಾಯಿ ರುಕ್ಮಾಬಾಯಿ ಕೃಷಿಕರು. ಹೈದರಾಬಾದ್​ನ ಉಸ್ಮಾನಿಯಾ ವಿವಿ, ಬಾಂಬೆ ವಿವಿ ಮತ್ತು ನಾಗಪುರ ವಿವಿಗಳಲ್ಲಿ ವ್ಯಾಸಂಗ ಮಾಡಿ, ಕಾನೂನು ಪದವಿ ಪಡೆದರು. 1930ರ ದಶಕದಲ್ಲಿ ಅವರು ವಂದೇಮಾತರಂ ಚಳವಳಿಯಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. 40ರ ದಶಕದಲ್ಲಿ ಕಾಕತೀಯ ಎಂಬ ತೆಲುಗು ಮಾಸಪತ್ರಿಕೆಯ ಸಂಪಾದಕರಾಗಿದ್ದರು.
ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಸೇರಿ, ಪೂರ್ಣ ಪ್ರಮಾಣದಲ್ಲಿ ರಾಜಕಾರಣಿಯಾದರು. 1957ರಲ್ಲಿ ಶಾಸಕರಾದರು. 62ರಿಂದ 73ರವರೆಗೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದರು. 1971ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯೂ ಆದರು. ಭೂಸುಧಾರಣೆ ಜಾರಿಗೊಳಿಸಿದ್ದಲ್ಲದೇ, ತುಳಿತಕ್ಕೆ ಒಳಗಾದ ಜಾತಿಗಳಿಗೆ ರಾಜಕೀಯದಲ್ಲಿ ಮೀಸಲಾತಿ ಕಲ್ಪಿಸಿದರು. 1969ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ಇಂದಿರಾ ಗಾಂಧಿ ಜತೆ ನಿಂತರು. ಬಳಿಕ ಲೋಕಸಭೆ ಸದಸ್ಯರಾಗಿ, ಇಂದಿರಾ ಮತ್ತು ರಾಜೀವ್ ಗಾಂಧಿ ಸಂಪುಟದಲ್ಲಿ ಹಲವು ಮಹತ್ವದ ಖಾತೆಗಳನ್ನು ನಿಭಾಯಿಸಿದರು.
ಪ್ರಧಾನಿ ಹುದ್ದೆ ಅನಿರೀಕ್ಷಿತ:1991ರಲ್ಲಿ ನರಸಿಂಹರಾವ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಮಧ್ಯೆ, ಅನಿರೀಕ್ಷಿತ ಘಟನೆಯೊಂದು ನಡೆಯಿತು. 1991ರಲ್ಲಿ ಇಡೀ ದೇಶದ ಚುನಾವಣೆ ಮೂಡ್​ನಲ್ಲಿದ್ದಾಗ ತಮಿಳುನಾಡಿನಲ್ಲಿ ರಾಜೀವ್ ಗಾಂಧಿ ಅವರ ಹತ್ಯೆ ನಡೆಯಿತು. ಆದರೆ ಎಲೆಕ್ಷನ್​ನಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತು. ಪಕ್ಷದ ನಾಯಕರೆಲ್ಲ ಸೇರಿ ನರಸಿಂಹರಾವ್ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಿದರು. ಆರ್ಥಿಕ ಸಂಕಷ್ಟದಿಂದ ದೇಶವನ್ನು ಪಾರು ಮಾಡಲು ಏನಾದರೂ ಮಾಡಲೇಬೇಕಾದ ಒತ್ತಡವಿತ್ತು. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಸಾಲ ಕೇಳಿದರು. ಐಎಂಎಫ್, ಚಿನ್ನ ಅಡವಿಡಲು ತಿಳಿಸಿತು. 2ನೇ ಬಾರಿಗೆ ಸಾಲ ಕೇಳಿದಾಗ ಐಎಂಎಫ್ ‘ಆರ್ಥಿಕ ಸುಧಾರಣೆಯ ಕ್ರಮ ಕೈಗೊಳ್ಳದಿದ್ದರೆ ಹೊಸ ಸಾಲ ಕೊಡುವುದಿಲ್ಲ’ ಎಂದಿತು. ಆದರೆ ಉದಾರೀಕರಣಕ್ಕೆ ದೇಶದಲ್ಲಿ ತೀವ್ರ ವಿರೋಧ ಇತ್ತು. ಅದನ್ನೆಲ್ಲ ಎದುರಿಸಿ, ದೇಶವನ್ನು ಉದಾರೀಕರಣಕ್ಕೆ ತೆರೆದಿಟ್ಟರು ನರಸಿಂಹರಾವ್. ಅವರ ಆ ನಿರ್ಧಾರದಿಂದಾಗಿ ದೇಶ ಸಬಲವಾಗುವತ್ತ ಹೆಜ್ಜೆ ಇಟ್ಟಿತು ಎಂಬ ಅಭಿಪ್ರಾಯ ವ್ಯಾಪಕವಾಗಿದೆ.
ಹದಿನೈದು ಭಾಷೆಗಳಲ್ಲಿ ಪಾರಂಗತ!:ಅವರ ಗ್ರಾಮದಲ್ಲಿ ಜನರು ಬಹುಭಾಷೆಗಳನ್ನು ಬಲ್ಲವರಾಗಿದ್ದರು. ಬಹುತೇಕರು ತೆಲುಗು, ಉರ್ದು, ಹಿಂದಿ, ಮರಾಠಿ, ಕನ್ನಡ, ಒರಿಯಾ ಮುಂತಾಗಿ ಅನೇಕ ಭಾಷೆಗಳಲ್ಲಿ ವ್ಯವಹರಿಸುತ್ತಿದ್ದರು. ಇದರ ಪ್ರಭಾವವೋ ಅಥವಾ ಉನ್ನತ ಶಿಕ್ಷಣದ ಪರಿಣಾಮವೋ ಒಟ್ಟಿನಲ್ಲಿ ನರಸಿಂಹರಾವ್ ಕೂಡ 15 ಭಾಷೆಗಳನ್ನು ಬಲ್ಲವರಾಗಿದ್ದರು.
ನಿರ್ಲಕ್ಷಿಸಿದ್ದ ಕಾಂಗ್ರೆಸ್:ನರಸಿಂಹರಾವ್ ಅವರನ್ನು ಕಾಂಗ್ರೆಸ್ ಕೊನೆಗಾಲದಲ್ಲಿ ನಡೆಸಿಕೊಂಡ ರೀತಿ ಸ್ವತಃ ಕಾಂಗ್ರೆಸ್ಸಿಗರಿಗೇ ಸರಿಬರಲಿಲ್ಲ. 2004ರ ಡಿ. 23ರಂದು ರಾವ್ ನಿಧನರಾದಾಗ, ಅಂತ್ಯಕ್ರಿಯೆಯನ್ನು ದೆಹಲಿಯಲ್ಲಿ ನೆರವೇರಿಸಿ ಸೂಕ್ತ ಸ್ಮಾರಕ ನಿರ್ವಿುಸುವ ಇಚ್ಛೆ ಅವರ ಕುಟುಂಬಕ್ಕೆ ಇತ್ತು. ಇದಕ್ಕೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನಾಯಕರೇ ಅವಕಾಶ ಕೊಡಲಿಲ್ಲ. 2004ರಿಂದ 2014ರತನಕ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಪಿವಿಎನ್ ಸ್ಮರಣಾರ್ಥ ಒಂದು ಸಣ್ಣ ಸ್ಮಾರಕವನ್ನೂ ನಿರ್ವಿುಸಲಿಲ್ಲ.
ವಿಜಯೇಂದ್ರ, ಪ್ರಲ್ಹಾದ ಜೋಶಿ ಸ್ವಾಗತ:ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್, ಚೌಧರಿ ಚರಣಸಿಂಗ್ ಹಾಗೂ ಖ್ಯಾತ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರಿಗೆ ‘ಭಾರತ ರತ್ನ’ ಘೋಷಿಸಿದ್ದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ವಾಗತಿಸಿದ್ದಾರೆ. ಈ ಮೂವರು ಮಹನೀಯರು ದೇಶಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಅದಕ್ಕಾಗಿ ಅವರನ್ನು ದೇಶದ ಅತ್ಯುನ್ನತ ಪುರಸ್ಕಾರಕ್ಕೆ ಆಯ್ಕೆ ಮಾಡಿರುವ ಕ್ರಮವನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 15 =
Remember me
