ಪ್ರಾಣಪ್ರತಿಷ್ಠೆ ಬಳಿಕ ಮುಖ್ಯವೇದಿಕೆಯಲ್ಲಿ 8000 ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಶ್ರೀರಾಮ ಮಂದಿರ ನಿರ್ಮಾಣ ಎಷ್ಟು ಮಹತ್ವದ್ದು ಎಂಬುದನ್ನು ವಿವರಿಸುತ್ತ, ಅದರ ಹಲವು ಆಯಾಮಗಳ ಬಗ್ಗೆ ಸೊಗಸಾದ ವಿವರಣೆ ನೀಡಿದರು. ಶ್ರೀರಾಮನು ನಡೆದಾಡಿದ ಹಾದಿಯಲ್ಲಿ ತಾವು ಸಂಚರಿಸಿದಾಗ ಆದ ಅನುಭವ ಕೂಡ ಅಲೌಕಿಕವಾಗಿತ್ತು ಎಂದರು. ಒಟ್ಟಾರೆ ಪ್ರಧಾನಿ ಹೇಳಿದ್ದೇನು, ಅದರ ವಿವರ ಇಲ್ಲಿದೆ.
ಜನವರಿ 22 2024ನ್ನು ಕ್ಯಾಲೆಂಡರ್​ನ ಸಾಮಾನ್ಯ ದಿನಾಂಕ ಎಂದು ಭಾವಿಸಬೇಡಿ. ಈ ದಿನದಿಂದ ಹೊಸ ಕಾಲಚಕ್ರದ ಉಗಮವಾಗಿದೆ. ಶ್ರೀರಾಮ ಆಗಮನದಿಂದ ರಾಷ್ಟ್ರವು ಹೊಸ ದಿಕ್ಕಿನಲ್ಲಿ ಸಾಗಲಿದೆ ಮತ್ತು ಭೂತಕಾಲಕ್ಕಿಂತ ಭಾರತದ ಭವಿಷ್ಯ ಸುಂದರ ಮತ್ತು ಸದೃಢವಾಗಿ ಇರುತ್ತದೆ. ಹೊಸ ಕಾಲಚಕ್ರದ ಉಗಮ ದೇಶದ ಅಭ್ಯುದಯಕ್ಕೆ ನಾಂದಿ ಹಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ತ್ರೇತಾಯುಗದಲ್ಲಿನ ಜನರು 14 ವರ್ಷ ಮಾತ್ರ ರಾಮನಿಂದ ದೂರವಿದ್ದರು. ಆದರೆ, ಕಲಿಯುಗದಲ್ಲಿ ಶ್ರೀರಾಮನ ಆಗಮನಕ್ಕೆ 500 ವರ್ಷ ಕಾಯಬೇಕಾಯಿತು. ಇದಕ್ಕಾಗಿ ನಾನು ಶ್ರೀರಾಮನಲ್ಲಿ ಕ್ಷಮೆ ಕೇಳಿದ್ದೇನೆ. ನಮ್ಮ ತಪಸ್ಸು, ಪ್ರಯತ್ನದಲ್ಲಿ ಏನೋ ಕೊರತೆಯಾಗಿದ್ದರಿಂದ ವಿಳಂಬವಾಗಿರಬಹುದು. ಆದರೆ, ಈಗ ರಾಮ ಬಂದಾಗಿದೆ. ಬದಲಾವಣೆಗೆ ಕಾಲ ಪಕ್ವವಾಗಿದೆ ಎಂದರು. ರಾಮಮಂದಿರ ಮತ್ತು ರಾಷ್ಟ್ರದ ಅಭ್ಯುದಯವನ್ನು ಜೋಡಿಸುವ ಹೊಸಮಂತ್ರ ಪಠಿಸಿರುವ ಪ್ರಧಾನಿ, ‘ದೇವ್ ಸೇ ದೇಶ್; ರಾಮ್ ಸೇ ರಾಷ್ಟ್ರ’ (ದೇವರಿಂದ ದೇಶ, ರಾಮನಿಂದ ರಾಷ್ಟ್ರ) ಎಂದರು. ಶ್ರೀರಾಮನ ಪ್ರಾಣಪ್ರತಿಷ್ಠೆ ಕೇವಲ ವಿಜಯ ಮಾತ್ರವಲ್ಲ, ಅದು ವಿನಯದ ಸಂಕೇತವೂ ಹೌದು ಎಂದು ಅಭಿಪ್ರಾಯಪಟ್ಟರು. ಗುಲಾಮಗಿರಿ ಮನಸ್ಥಿತಿಯನ್ನು ತೊಡೆದು ಉದಯಿಸುವ ರಾಷ್ಟ್ರ, ಹಿಂದಿನ ಪ್ರತಿ ಸಂಕಟದಿಂದ ಧೈರ್ಯ, ಆತ್ಮವಿಶ್ವಾಸ ಪಡೆದುಕೊಂಡು ಈ ರೀತಿಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುತ್ತದೆ. ಸಾವಿರ ವರ್ಷಗಳ ಬಳಿಕವೂ ಜನರು 2024 ಜನವರಿ 22ರ ದಿನಾಂಕ ಮತ್ತು ಈ ಕ್ಷಣದ ಬಗ್ಗೆ ಮಾತನಾಡುತ್ತಾರೆ. ಇಂಥದ್ದೊಂದು ಕ್ಷಣದಲ್ಲಿ ನಾವು ಬದುಕುತ್ತಿರುವುದು ರಾಮನ ಕೃಪೆ ಎಷ್ಟು ದೊಡ್ಡದು ಎಂಬುದಕ್ಕೆ ಸಾಕ್ಷಿ ಎಂದರು.
ವಾಸ್ತವ ಅರಿಯಿರಿ:ಶ್ರೀರಾಮಮಂದಿರ ಕಟ್ಟಿದರೆ ಅಶಾಂತಿ ಸೃಷ್ಟಿಯಾಗುತ್ತದೆ ಎಂದು ಕೆಲವರು ಹೇಳುತ್ತಿದ್ದ ಕಾಲವೊಂದಿತ್ತು. ಅಂಥವರು ಭಾರತದ ಸಾಮಾಜಿಕ ಭಾವನೆಯ ಶುದ್ಧತೆಯನ್ನು ಅರ್ಥಮಾಡಿಕೊಳ್ಳಲು ವಿಫಲರಾದರು. ಬಾಲರಾಮನ ದೇವಾಲಯ ಸಮಾಜದಲ್ಲಿ ಶಾಂತಿ, ತಾಳ್ಮೆ, ಸಾಮರಸ್ಯ ಮತ್ತು ಸಮನ್ವಯದ ಸಂಕೇತವಾಗಿದೆ. ಮಂದಿರ ನಿರ್ಮಾಣ ಬೆಂಕಿ ಹೊತ್ತಿಸುತ್ತಿಲ್ಲ. ಬದಲಿಗೆ ಅದು ಹೊಸದೊಂದು ಶಕ್ತಿಗೆ ಜನ್ಮ ನೀಡುತ್ತಿರುವು ದನ್ನು ನಾವು ನೋಡುತ್ತಿದ್ದೇವೆ. ಮಂದಿರ ಸಮಾಜದ ಪ್ರತಿಯೊಂದು ವರ್ಗಕ್ಕೂ ಉಜ್ವಲ ಭವಿಷ್ಯದತ್ತ ಸಾಗಲು ಸ್ಪೂರ್ತಿ ತುಂಬಲಿದೆ. ಮಂದಿರ ಆಂದೋಲನ ವಿರೋಧಿಸಿದವರೂ ಮಂದಿರಕ್ಕೆ ಬಂದು ದೃಷ್ಟಿಕೋನವನ್ನು ಪುನರ್ವಿಮಶಿಸಿಕೊಳ್ಳಲಿ.
ಭಾರತದ ಆತ್ಮ ಶ್ರೀರಾಮ:ಶ್ರೀರಾಮನ ವ್ಯಕ್ತಿತ್ವವನ್ನು ನಿರರ್ಗಳವಾಗಿ ವಿವರಿಸಿದ ಪ್ರಧಾನಿ, ರಾಮನೆಂದರೆ ಭಾರತದ ಶ್ರದ್ಧೆ, ಆಧಾರ, ಚಿಂತನೆ, ಭಾರತದ ಚೇತನ, ದೇಶದ ಪ್ರತಿಷ್ಠೆ, ಸಾಹಸವಾಗಿದ್ದು, ಭಾರತದ ಆತ್ಮವೇ ಶ್ರೀರಾಮ. ರಾಮನೆಂದರೆ ನಿತ್ಯವೂ ಹೌದು, ನಿರಂತರವೂ ಹೌದು. ರಾಮ ವ್ಯಾಪಕ, ವಿಶ್ವ ಮತ್ತು ವಿಶ್ವಾತ್ಮನಾಗಿದ್ದಾನೆ. ಹಾಗಾಗಿ, ಶ್ರೀರಾಮನ ಪ್ರಾಣಪ್ರತಿ ಷ್ಠಾಪನೆಯಾಗಿದೆ ಎಂದರೆ ಅದರ ಪರಿಣಾಮ ಕೆಲ ಶತಮಾನಗಳಿಗೆ ಸೀಮಿತ ಎಂದು ಭಾವಿಸದಿರಿ. ಸಾವಿರಾರು ವರ್ಷಗಳವರೆಗೂ ಶ್ರೀರಾಮ ಭಾರತವನ್ನು ಕಾಪಾಡಲಿದ್ದಾನೆ.
ಬೆಂಕಿಯಲ್ಲ ಶಕ್ತಿ:ಶ್ರೀರಾಮ ಬೆಂಕಿಯಲ್ಲ, ಶಕ್ತಿ. ರಾಮ ವಿವಾದವಲ್ಲ, ಪರಿಹಾರ. ರಾಮ ಕೇವಲ ನಮಗೆ ಸೀಮಿತವಲ್ಲ, ರಾಮ ಎಲ್ಲರಿಗೂ ಸೇರಿದವರು. ರಾಮ ಕೇವಲ ವರ್ತಮಾನವಲ್ಲ, ಅವರು ಅನಂತ ಕಾಲ. ಹಾಗಾಗಿ, ಇದು ಕೇವಲ ದೇವರ ದೇಗುಲವಲ್ಲ. ಇದು ಭಾರತದ ದೃಷ್ಟಿ ಮತ್ತು ದರ್ಶನದ ಮಂದಿರವಾಗಿದೆ.
ಕೃಷ್ಣ ಜನ್ಮಭೂಮಿಯಲ್ಲೂ ಸಂಭ್ರಮ:ಶ್ರೀಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಸಂಭ್ರಮ ಶ್ರೀರಾಮಜನ್ಮಭೂಮಿಯಲ್ಲಷ್ಟೇ ಅಲ್ಲದೆ, ಉತ್ತರಪ್ರದೇಶದ ಮಥುರಾದ ಶ್ರೀಕೃಷ್ಣಜನ್ಮಭೂಮಿಯಲ್ಲೂ ಆಚರಣೆ ಆಗಿದೆ. ದೇವಸ್ಥಾನ ಸಂಕೀರ್ಣದಲ್ಲಿನ ಶ್ರೀರಾಧಾ-ಕೃಷ್ಣರಿಗೆ ಸೀತೆ-ರಾಮನ ಅಲಂಕಾರ ಮಾಡಲಾಗಿತ್ತು. ಬಂಕೆ ಬಿಹಾರಿ ದೇವಸ್ಥಾನದಲ್ಲಿನ ಶ್ರೀಕೃಷ್ಣನ ಕೈಯಲ್ಲಿನ ಕೊಳಲಿನ ಬದಲು ಬಿಲ್ಲು-ಬಾಣ ಇರಿಸಿ ಪೂಜೆ ಮಾಡಲಾಯಿತು. ಠಾಕೂರ್ ದ್ವಾರಕಾಧೀಶ ದೇವಸ್ಥಾನದಲ್ಲಿ ಹಣತೆಗಳನ್ನು ಬೆಳಗಲಾಯಿತು. ದೇವ್ರಹ ಬಾಬಾ ಘಾಟ್​ನಲ್ಲಿ ಸಂಜೆ ದೀಪೋತ್ಸವ ನಡೆಯಿತು. ಜುಗಲ್​ಘಾಟ್​ನಲ್ಲಿ 500 ಕೆ.ಜಿ. ಹೂವುಗಳಿಂದ ರಂಗೋಲಿ ರಚಿಸಲಾಗಿತ್ತು. ಮಥುರಾ ಜಿಲ್ಲೆಯ ಸುಮಾರು 700 ದೇವಸ್ಥಾನಗಳಲ್ಲಿ ಅಯೋಧ್ಯೆ ಪ್ರಾಣಪ್ರತಿಷ್ಠಾಪನೆಯ ಸಂಭ್ರಮಾಚರಣೆ ನಡೆಯಿತು.
ಸಂವಿಧಾನದಲ್ಲಿ ರಾಮ:ಭಾರತ ಸಂವಿಧಾನದ ಮೊದಲ ಪ್ರತಿಯಲ್ಲಿ ರಾಮನ ಉಲ್ಲೇಖವಿದೆ. ಸಂವಿಧಾನ ಬಂದ ನಂತರವೂ ಶ್ರೀರಾಮನ ಅಸ್ತಿತ್ವದ ಬಗ್ಗೆ ಕಾನೂನು ಹೋರಾಟ ದಶಕಗಳ ಕಾಲ ಮುಂದು ವರಿಯಿತು. ನ್ಯಾಯದ ಘನತೆ ಎತ್ತಿ ಹಿಡಿದ ಭಾರತದ ನ್ಯಾಯಾಂಗ ವ್ಯವಸ್ಥೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನ್ಯಾಯಕ್ಕೆ ಸಮಾನಾರ್ಥಕವಾದ ಭಗವಾನ್ ರಾಮನ ದೇವಾಲಯವನ್ನು ಸಹ ನ್ಯಾಯಾಂಗದ ರೀತಿಯಲ್ಲೇ ನಿರ್ವಿುಸಲಾಗಿದೆ ಎಂದು ಮೋದಿ ತಿಳಿಸಿದರು.
ಅತಿಥಿಗಳಿಗೆ ಉಡುಗೊರೆ:ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳಿಗೆ ಅಯೋಧ್ಯೆಯ ಪುಸ್ತಕ, ಲೋಹದ ದೀಪ, ತುಳಸಿ ಜಪಮಾಲೆ ಮತ್ತು ಭಗವಾನ್ ರಾಮನ ಹೆಸರಿನ ಸ್ಕಾರ್ಫ್ ಅನ್ನು ಒಳಗೊಂಡಿರುವ ವಿಶೇಷ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಎಲ್ಲ ಉಡುಗೊರೆಗಳನ್ನು ಬ್ಯಾಗ್​ನಲ್ಲಿ ನೀಡಲಾಗಿದ್ದು, ಅದರ ಮೇಲೆ ಹೊಸ ರಾಮಮಂದಿರ ಮತ್ತು ಭಗವಾನ್ ರಾಮನ ಆಕರ್ಷಕ ಗ್ರಾಫಿಕ್ ಫೋಟೋವನ್ನು ಮುದ್ರಿಸಲಾಗಿದೆ. ಪುಸ್ತಕದ ಶೀರ್ಷಿಕೆ ‘ಅಯೋಧ್ಯಾಧಾಮ-ಭಗವಂತನ ನಿವಾಸ’ ಎಂದಿದ್ದು, ಪುಸ್ತಕದ ಮುಖಪುಟದಲ್ಲಿ ಬಾಲರಾಮನ ಹಳೆಯ ವಿಗ್ರಹದ ಚಿತ್ರವೂ ಇದೆ.
ತಾರೆಯರ ಆಗಮನ:ಅಯೋಧ್ಯೆ ಸಮಾರಂಭದಲ್ಲಿ ಭಾರತ ಚಿತ್ರರಂಗದ ತಾರೆಯರು ಪಾಲ್ಗೊಂಡಿದ್ದರು. ಅಮಿತಾಭ್ ಬಚ್ಚನ್, ರಜನಿಕಾಂತ್, ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ, ರಾಮ್ ಚರಣ್, ಹೇಮಾ ಮಾಲಿನಿ, ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಶ್ರೀರಾಮ್ ಕಂಗನಾ ರಣಾವತ್, ಆಯುಷ್ಮಾನ್ ಖುರಾನಾ, ಅಭಿಷೇಕ್ ಬಚ್ಚನ್, ಅರುಣ್ ಗೋವಿಲ್, ಆಲಿಯಾ ಭಟ್, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಪವನ್ ಕಲ್ಯಾಣ್, ಮಧುರ್ ಭಂಡಾರ್ಕರ್, ಸುಭಾಷ್ ಘಾಯ್, ಶೆಫಾಲಿ ಶಾ, ವಿಪುಲ್ ಶಾ, ರಣದೀಪ್ ಹೂಡಾ, ಲಿನ್ ಲೈಶ್ರಾಮ್ ಆದಿನಾಥ್ ಮಂಗೇಶ್ಕರ್ ಮತ್ತು ಸೋನು ನಿಗಮ್ ಮಲಯಾಳಂ ನಟ-ನಟಿಯರಾದ ಪಾರ್ವತಿ ತಿರುವೋತು, ಆಶಿಕ್, ಕುಸೃತಿ, ರಿಮಾ ಕಳ್ಳಿಂಗಲ್, ನಿರ್ವಪಕ ರೋಹಿತ್ ಶೆಟ್ಟಿ, ರಾಜ್​ಕುಮಾರ್ ಹಿರಾನಿ, ಅಜಯ್ ದೇವಗನ್ ಉಪಸ್ಥಿತಿಯಲ್ಲಿದ್ದರು.
ಅಯೋಧ್ಯೆಗೆ ಬರಲು ಜಗತ್ತು ಕಾತರ:‘ಅಯೋಧ್ಯೆಯಲ್ಲಿ ತ್ರೇತಾಯುಗದ ವೈಭವ ಮರಳಿದಂತೆ ದಿವ್ಯ ಅನುಭವವಾಗುತ್ತಿದೆ. ಪೂರ್ತಿ ಜಗತ್ತು ದಿವ್ಯ ಮತ್ತು ಭವ್ಯ ಅಯೋಧ್ಯೆಯ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಿದೆ. ಪುರಾತನ ಅವಧ್ ನಗರಿಯ ನವವೈಭವ ನೋಡಲು ಜಗತ್ತು ಕಾತರವಾಗಿದೆ’ ಎಂದು ಹೇಳಿದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಅಯೋಧ್ಯೆಯಲ್ಲಿ ಲಾಠಿಚಾರ್ಜ್, ಗೋಲಿಬಾರ್, ಕರ್ಫ್ಯೂವಿನ ಯುಗ ಮುಗಿದುಹೋಯಿತು, ಸರಯೂ ನದಿ ಯಾವುದೇ ಕಾರಣಕ್ಕೂ ರಕ್ತರಂಜಿತವಾಗುವುದಿಲ್ಲ. ಪರಿಕ್ರಮ ಮಾರ್ಗಗಳಲ್ಲಿ ಹಿಂಸಾಚಾರ ನಡೆಯುವುದಿಲ್ಲ. ಇನ್ನೇನಿದ್ದರೂ, ರಾಮೋತ್ಸವ, ದೀಪೋತ್ಸವದಿಂದ ಈ ನಗರಿ ಕಂಗೊಳಿಸಲಿದೆ, ರಾಮ ಸಂಕೀರ್ತನೆ ಅನುರಣಿಸಲಿದೆ ಎಂದರು.
ಪ್ರಾಣಪ್ರತಿಷ್ಠಾಪನೆ ಸಮಾರಂಭದ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಮ ಅಯೋಧ್ಯೆಯಲ್ಲಿ ವಿರಾಜಮಾನನಾಗುವ ಮೂಲಕ,. ಭಾರತದಲ್ಲಿ ರಾಮರಾಜ್ಯಕ್ಕೆ ಮುನ್ನಡಿ ಬರೆಯಲಾಗಿದೆ. ಐದು ಶತಮಾನಗಳ ದೀರ್ಘ ಕಾಯುವಿಕೆ ಅಂತ್ಯಗೊಂಡಿದ್ದು, ಪ್ರತಿ ರಾಮಭಕ್ತನ ಹೃದಯದಲ್ಲಿ ಸಂತೋಷ ಮನೆಮಾಡಿದೆ. ಈ ಭಾವಸಂಭ್ರಮದಲ್ಲಿ ಎಲ್ಲರ ಕಣ್ಣಂಚು ಒದ್ದೆಯಾಗಿದೆ. ಯಾವುದೇ ದೇಶದಲ್ಲಿ ಬಹುಸಂಖ್ಯಾತರು ತಮ್ಮ ಶ್ರದ್ಧಾಕೇಂದ್ರಕ್ಕಾಗಿ ಇಷ್ಟೊಂದು ಹೋರಾಟ ನಡೆಸಿದ ನಿದರ್ಶನವಿಲ್ಲ. ಶ್ರೀರಾಮ ಜನ್ಮಭೂಮಿ ಆಂದೋಲನ ಕೇವಲ ಮಂದಿರದ ಆಂದೋಲನವಾಗಿರಲಿಲ್ಲ; ಅದು ರಾಷ್ಟ್ರೀಯ ಸಾಂಸ್ಕೃತಿಕ ಹೆಗ್ಗುರುತನ್ನು ಮರುಸ್ಥಾಪಿಸುವ, ಸನಾತನಿಗಳನ್ನು ಏಕಸೂತ್ರದಲ್ಲಿ ಬೆಸೆಯುವ ಆಂದೋಲನವಾಗಿತ್ತು ಎಂದರು. ಈಗ ರಾಮ ಮಂದಿರವಾಗಿದೆ, ರಾಮರಾಜ್ಯದ ಸಾಕಾರ ಮುಂದಿನ ದಿನಗಳಲ್ಲಿ ಆಗಲಿದ್ದು, ಉತ್ತರಪ್ರದೇಶ ಸೇರಿದಂತೆ ಇಡೀ ದೇಶದ ಚಿತ್ರಣ ಬದಲಾಗಲಿದೆ ಎಂದು ಯೋಗಿ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಈ ಸಂಕಲ್ಪ ಸಿದ್ಧಿಯಾಗಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.
50 ವಾದ್ಯಗಳ ಮಂಗಳ ಧ್ವನಿ:ವಿವಿಧ ರಾಜ್ಯಗಳ 50ಕ್ಕೂ ಹೆಚ್ಚು ಮನಮೋಹಕ ಸಂಗೀತ ವಾದ್ಯಗಳು ಭಾಗಿಯಾಗಿದ್ದವು. ವಾದ್ಯಗಳಲ್ಲಿ ಪಖಾವಾಜ್, ಕೊಳಲು ಮತ್ತು ಧೋಲಕ್, ವೀಣೆ, ಅಲ್ಗೋಜಾ, ಸುಂದರಿ, ಮರ್ದಲಾ, ಸಂತೂರ್, ಪಂಗ್, ನಾಗಡಾ, ಕಾಳಿ, ತಂಬೂರ, ಶೆಹನಾಯ್, ರಾವಣಹತ, ಶ್ರೀಖೋಲ್ ಮತ್ತು ಸರೋದ್, ಘಟಂ, ಸಿತಾರಾ, ಸಾಂತರ್, ಪಖಾವಾಜ್, ಹುಡ್ಕ, ನಾಗಸ್ವರಂ, ತವಿಲ್ ಮತ್ತು ಮೃದಂಗಮ್ ಇತ್ತು. ಸೋನುನಿಗಮ್ ಅನುರಾಧಾ ಪೌಡ್ವಾಲ್ ಮತ್ತು ಶಂಕರ್ ಮಹಾದೇವನ್ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆದವು. ಅವರು ಭಗವಾನ್ ರಾಮನಿಗೆ ಅರ್ಪಿಸಿದ ಹಾಡುಗಳನ್ನು ಹಾಡಿದರು.
ಭಾರತದ ಅಸ್ಮಿತೆಯೇ ಶ್ರೀರಾಮ:ಭಾರತಕ್ಕೆ ಈವರೆಗೆ ಪ್ರೇರಣೆ ನೀಡುವಂತಹ, ಸ್ಪೂರ್ತಿ ತುಂಬುವ ವಿಚಾರ ಇರಲಿಲ್ಲ. ಆದರೆ, ಅಯೋಧ್ಯೆಗೆ ರಾಮನ ಆಗಮನವಾಗುವ ಮೂಲಕ ಈ ಕೊರತೆ ನೀಗಿದೆ. ಪ್ರೇರಣಾ ಶಕ್ತಿಯೇ ಇಲ್ಲದಿದ್ದಾಗ ಏನು ಮಾಡುವುದೆಂದೇ ಜನರಿಗೆ ತೋಚುತ್ತಿರಲಿಲ್ಲ. ಆದರೆ, ಇನ್ನು ಆ ಬೇಸರವಿಲ್ಲ. ರಾಮನ ಪ್ರಾಣಪ್ರತಿಷ್ಠೆಯಾಗಿದೆ. ಇದು ಐತಿಹಾಸಿಕ ಕ್ಷಣ. ಅದಕ್ಕೆ ಸಾಕ್ಷಿಯಾಗಿ, ನಾನು ಆನಂದಭರಿತನಾಗಿದ್ದೇನೆ. ರಾಮ ನಮ್ಮೆಲ್ಲರ ಅಸ್ಮಿತೆ ಎಂದು ಆರ್​ಎಸ್​ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ. ಅಯೋಧ್ಯೆಯಲ್ಲಿ ವಿಜಯವಾಣಿ ಜತೆ ಮಾತನಾಡಿದ ಅವರು, ರಾಮನ ಬಗ್ಗೆ ಹುಸಿ ಸೆಕ್ಯುಲರ್​ವಾದಿಗಳು ಟೀಕೆ ಮಾಡುವುದನ್ನು ಇನ್ನಾದರೂ ನಿಲ್ಲಿಸಬೇಕು ಎಂದರು.
ಪ್ರಾಣಪ್ರತಿಷ್ಠಾಪನೆಗೆ ಅಗತ್ಯ ಇರುವುದಕ್ಕಿಂತಲೂ ಕಠಿಣ ಅನುಷ್ಠಾನ ಕೈಗೊಂಡಿರುವ ಪ್ರಧಾನಿ ಮೋದಿ ತಪಸ್ವಿ. ಮಾತ್ರವಲ್ಲ ರಾಮಾಯಣಕ್ಕೆ ಸಂಬಂಧಿತ ವಿವಿಧ ರಾಜ್ಯಗಳಲ್ಲಿನ ದೇವಾಲಯಗಳಿಗೂ ಭೇಟಿ ನೀಡಿದ್ದರು. ನಾವೆಲ್ಲರೂ ಜೊತೆಯಾಗಿ ಮಾಡುವ ತಪವನ್ನು ಅವರೊಬ್ಬರೇ ಮಾಡಿದ್ದಾರೆ. ರಾಮರಾಜ್ಯ ಬರಲಿದ್ದು, ಚಿಕ್ಕಪುಟ್ಟ ಜಗಳವನ್ನೂ ತೊರೆಯೋಣ.
| ಮೋಹನ್ ಭಾಗವತ್ ಸರಸಂಘಚಾಲಕ, ಆರ್​ಎಸ್​ಎಸ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + seven =
Remember me
