ಶಿಲ್ಲಾಂಗ್​:ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಆಂತರಿಕ ಪರವಾನಗಿ ವ್ಯವಸ್ಥೆ (ಇನ್ನರ್​ ಲೈನ್​ ಪರ್ಮಿಟ್​) ವಿಚಾರಕ್ಕೆ ಸಂಬಂಧಪಟ್ಟಂತೆ ಮೇಘಾಲಯದಲ್ಲಿ ಭುಗಿಲೆದ್ದಿರುವ ಸಂಘರ್ಷದಲ್ಲಿ ಮೂವರು ಬಲಿಯಾಗಿದ್ದಾರೆ.ಶುಕ್ರವಾರದಿಂದ ಶುರುವಾದ ಹಿಂಸಾಚಾರದಲ್ಲಿ ಇಂದು ಓರ್ವ ಸಾವನ್ನಪ್ಪುವ ಮೂಲಕ ಮೃತರ ಸಂಖ್ಯೆ ಮೂರಕ್ಕೆ ಏರಿದೆ ಎಂದು ಮೇಘಾಲಯ ಪೊಲೀಸರು ತಿಳಿಸಿದ್ದಾರೆ.
ಇಂದು ಮೃತನಾದವನನ್ನು ಉಪಾಸ್​ ಉದ್ದೀನ್​ (37)ಎಂದು ಗುರುತಿಸಲಾಗಿದ್ದು ಈತ ಪೈರ್​ಖಾನ್​ ಗ್ರಾಮದವನು ಎನ್ನಲಾಗಿದೆ.  ತನ್ನ ಮನೆಯಲ್ಲಿದ್ದ ಉಪಾಸ್​ ಮೇಲೆ ಮೂವರು ದುಷ್ಕರ್ಮಿಗಳು ದಾಳಿ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಉಪಾಸ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಆಸ್ಪತ್ರೆಗೆ ಬರುವುದಕ್ಕೂ ಮೊದಲೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
ಸಂಘರ್ಷ ಶನಿವಾರ ಶಿಲ್ಲಾಂಗ್​ಗೆ ಕಾಲಿಟ್ಟಿದೆ. ಇಲ್ಲಿನ ಜನನಿಬಿಡ ಮಾರುಕಟ್ಟೆಯೊಂದಕ್ಕೆ ನುಗ್ಗಿದ ಅಪರಿಚಿತರ ಗುಂಪೊಂದು ಸ್ಥಳೀಯರಲ್ಲದ ಜನರ ಮೇಲೆ ಹಿಗ್ಗಾಮುಗ್ಗಾ ದಾಳಿ ಮಾಡಿದೆ. ಈ ದುಷ್ಕರ್ಮಿಗಳ ದಾಳಿಗೆ ಓರ್ವ ಸಾವನ್ನಪ್ಪಿದ್ದು, ಒಂಭತ್ತು ಮಂದಿ ಗಾಯಗೊಂಡಿದ್ದರು. ಅದಕ್ಕೂ ಮೊದಲು ಶುಕ್ರವಾರ ಸ್ಥಳೀಯ ಟ್ಯಾಕ್ಸಿ ಡ್ರೈವರ್​ ಓರ್ವ ಪೂರ್ವ ಖಾಸಿ ಹಿಲ್ಸ್​ ಜಿಲ್ಲೆಯ ಇಚಮತಿ ಏರಿಯಾದಲ್ಲಿ ನಡೆದ ಹಿಂಸಾಚಾರಕ್ಕೆ ಬಲಿಯಾಗಿದ್ದ.
ಶುಕ್ರವಾರ ಖಾಸಿ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಮತ್ತು ಬುಡಕಟ್ಟು ಜನಾಂಗಕ್ಕೆ ಸೇರಿಲ್ಲದವರ ಮಧ್ಯೆ ಸಂಘರ್ಷ ಪ್ರಾರಂಭವಾಗಿದೆ. ಪೂರ್ವ ಖಾಸಿ ಜಿಲ್ಲೆಯಲ್ಲಿ ವಿದ್ಯಾರ್ಥಿ ಒಕ್ಕೂಟದ ಸದಸ್ಯರು, ಪೌರತ್ವ ತಿದ್ದುಪಡಿ ಮತ್ತು ಆಂತರಿಕ ಪರವಾನಗಿ ವಿಚಾರದ (ಐಎಲ್​ಪಿ) ಬಗ್ಗೆ ಚರ್ಚಿಸಲು ಸಭೆ ಕರೆದಿದ್ದರು. ಇದೇ ವೇಳೆ ಬುಡಕಟ್ಟು ಜನಾಂಗಕ್ಕೆ ಸೇರಿಲ್ಲದವರ ಮತ್ತು ವಿದ್ಯಾರ್ಥಿ ಸಂಘಟನೆ ಮಧ್ಯೆ ಸಂಘರ್ಷ ಶುರುವಾಗಿದ್ದು, ಮೂರುದಿನಗಳಿಂದಲೂ ಮುಂದುವರಿದುಕೊಂಡು ಬಂದಿದೆ. ಕೆಲವು ಕಡೆಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಮೇಘಾಲಯವು ಆರನೇ ಪರಿಚ್ಛೇದದ ವ್ಯಾಪ್ತಿಯಲ್ಲಿ ಬರುವ ರಾಜ್ಯವಾಗಿದ್ದರಿಂದ ಅಲ್ಲಿನ ಹಲವು ಪ್ರದೇಶಗಳನ್ನು ಸಿಎಎ ವ್ಯಾಪ್ತಿಗೆ ಸೇರಿಸಲಾಗಿಲ್ಲ. ಇನ್ನು ಸ್ಥಳೀಯರಲ್ಲದ, ಬೇರೆ ಪ್ರದೇಶಗಳಿಂದ ಬರುವವರ ಪ್ರವೇಶವನ್ನು ನಿಯಂತ್ರಿಸುವ ಆಂತರಿಕ ಪರವಾನಗಿ ವ್ಯವಸ್ಥೆ ಅಲ್ಲಿನ ಅನೇಕ ಬುಡಕಟ್ಟು ಜನಾಂಗದವರ ಬಹುಕಾಲದ ಬೇಡಿಕೆಯಾಗಿದೆ.ಡಿಸೆಂಬರ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ ಮೇಲೆ ಐಎಲ್​ಪಿಯನ್ನೂ ಜಾರಿಗೊಳಿಸುವ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲು ಮೇಘಾಲಯ ವಿಧಾನಸಭೆ ಅಧಿವೇಶನದಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್​ ಹಾಗೂ ಮಿಜೋರಾಂಗಳು ಈ ಆಂತರಿಕ ಪರವಾನಗಿ ವ್ಯವಸ್ಥೆಯನ್ನು ಹೊಂದಿವೆ.
ಆಂತರಿಕ ಪರವಾನಗಿ ವ್ಯವಸ್ಥೆ (ಇನ್ನರ್​ ಲೈನ್​ ಪರ್ಮಿಟ್​)ಗೆ ಒಳಪಡುವ ರಾಜ್ಯಗಳು, ಪ್ರದೇಶಗಳಿಗೆ ಹೊರಗಿನವರು ಪ್ರವೇಶ ಮಾಡಲು ಕೆಲವು ನಿರ್ಬಂಧನೆಗಳು ಇರುತ್ತವೆ. ಇದೂ ಒಂದು ವಿಧದ ವೀಸಾ. ಕೆಲವು ಪ್ರದೇಶಗಳಲ್ಲಿರುವ ಅಮೂಲ್ಯ ಸಂಪನ್ಮೂಲಗಳನ್ನು ರಕ್ಷಣೆ ಮಾಡುವುದಕ್ಕೋಸ್ಕರ ಈ ವ್ಯವಸ್ಥೆ ಇಡಲಾಗಿದೆ. ಹಾಗೆ ಸಂರಕ್ಷಣೆ ಮಾಡಲ್ಪಟ್ಟ ರಾಜ್ಯಗಳಿಗೆ ಅಥವಾ ಸ್ಥಳಗಳಿಗೆ ಹೊರಗಿನವರು ಹೋಗಬೇಕೆಂದರೆ ಕೇಂದ್ರ ಸರ್ಕಾರದಿಂದ ಅನುಮತಿ ಬೇಕು. ಸರ್ಕಾರ ನಿರ್ದಿಷ್ಟ ಕಾಲಮಿತಿ ನೀಡಿ ದಾಖಲೆಯನ್ನು ನೀಡುತ್ತದೆ. ಅಂತಹ ಇನ್ನರ್​ ಲೈನ್​ ಪರ್ಮಿಟ್​ಗೆ ಮೇಘಾಲಯವನ್ನೂ ಒಳಪಡಿಸಬೇಕು ಎಂಬುದು ಅಲ್ಲಿನ ಬುಡಕಟ್ಟು ಜನಾಂಗದ ಬಹುಕಾಲದ ಒತ್ತಾಯ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
